ಮರುಳಸಿದ್ಧರ ಮಾಯಾ ಕಿನ್ನರಿ – ದ.ರಾ ಬೇಂದ್ರೆ

ಮಾಯಾಕಿನ್ನರಿ ಎಂಬ ದ.ರಾ. ಬೇಂದ್ರೆಯವರ ಕವಿತೆಗೆ ಒಂದು ಐತಿಹಾಸಿಕ ಘಟನೆಯ ಹಿನ್ನೆಲೆ ಇದೆ. ತರಳಬಾಳು ಮಠದ ಮೂಲಪುರುಷರಾದ ವಿಶ್ವಬಂಧು ಮರುಳಸಿದ್ಧರು ಕೊಲ್ಲಾಪುರದ ಮಾಯಾದೇವಿಯ ಗರ್ವಭಂಗ ಮಾಡಿದ್ದು ದೇವಕವಿಯ ಮರುಳಸಿದ್ಧ ಚರಿತೆಯಲ್ಲಿ ಉಲ್ಲೇಖವಿದೆ. ವಿಶ್ವಬಂಧು ಮರುಳಸಿದ್ದರು ಕೊಲ್ಲಾಪುರದ ಮಾಯಾದೇವಿಯು ಸಾವಿರಾರು ಯೋಗಿಗಳನ್ನು ಸೋಲಿಸಿ ತನ್ನ ಅರಮನೆಯಲ್ಲಿ ಊಳಿಗದಾಳುಗಳನ್ನಾಗಿ ಕೆಲಸಕ್ಕೆ ಹೂಡಿದುದನ್ನು ಮನಗಂಡರು. ಮಾಯೆಯೊಡನೆ ಇವರ ವಾಗ್ವಾದವು ಅನೇಕ ದಿನ ನಡೆದು ಮಾಯೆಯು ಎಲ್ಲ ವಿಷಯದಲ್ಲಿ ಮರುಳಸಿದ್ದರಿಗೆ ಸೋತಳು. ಅದರಿಂದ ಅವಳು ಕುಪಿತಳಾಗಿ ಮಂತ್ರ-ತಂತ್ರದಿಂದಾದರೂ ಅವರನ್ನು ಗೆಲ್ಲಲು ಹವಣಿಸಿದಳು. ಸಿದ್ಧರು ಮಾಯೆಯನ್ನೆ ಮಂತ್ರಬಲದಿಂದ ಕಿನ್ನರಿಯನ್ನಾಗಿ ಮಾಡಿ ಹೊತ್ತುಕೊಂಡು ಹೊರಟರು. ಮೊದಲಸಲ ಆ ಕಿನ್ನರಿಯನ್ನು ಬಾರಿಸಬೇಕೆಂದಾಗ ಪ್ರಣಯ-ಕುಪಿತ ಮಾನಿನಿಯಂತೆ ಅದು ಸಿಡಿಮಿಡಿಗೊಂಡಿತು, ಶ್ರುತಿಗೊಡಲಿಲ್ಲ; ಆಗ ಸಿದ್ಧರು ಮಾನಿನಿಯನ್ನು ಒಲಿಸಿಕೊಳ್ಳುವಂತೆ ಮಾಯೆಯನ್ನು ಒಲಿಸಿಕೊಳ್ಳಲು, ಗೆಜ್ಜೆ ಪೈಜಣ ಕಟ್ಟಿ ಮಾಯೆಯೆ ಕಿನ್ನರಿಯ ಮೈಯಲ್ಲಿ ನಿಂತು ಜಗವು ಬೆರಗಾಗುವಂತೆ ದಿವ್ಯ ಸಂಗೀತವನ್ನು ಹೊರಸೂಸಿದಳು.
ಮರುಳು ಮಾಡಾಕ ಹೋಗಿ ಮರುಳಸಿದ್ಧನ ನಾರಿ
ಮರುಳಾಗ್ಯಾಳ ಜಂಗಮಯ್ಯಗೆ
ಕಿನ್ನರಿ ಆಗ್ಯಾಳ ಕೈಯ್ಯಾಗ
ನುಡಿದಾಳ ಬಂದ್ಹಾಂಗ ಮೈಯ್ಯಾಗ || ಪಲ್ಲ || - ೧
ಹಾಡಿಲೆ ಕಿವಿಗಲ್ಲ ಕಡಿದ್ಯೇನ
ಹಾದಿ ತಪ್ಪಿಸಿಕೊಂಡ ಗುಂಗಿಯ ಹುಳಧಾಂಗ
ಗುಣುಗುಣು ಗೊಣಗುಟ್ಟಿ ನುಡಿದ್ಯೇನ. - ೨ ತನ್ನೊಡೆಯನ ಕೂಡ ಚಿನ್ನಾಟ ನಡೆಸೀದ
ಕುನ್ನಿ ಕುಞ್ ಗುಡುವಾಟ ಹಿಡಿದ್ಯೇನ
ಮುಟ್ಟಿದರ ಮುರುಕುವ ವಯ್ಯಾರ ಕಲಿತೆಲ್ಲಿ
ಸುಳ್ಳನ ಸಿಡಿಮಿಡಿ ಸಿಡಿದ್ಯೇನ. - ೩
ಎದಿಗೊತ್ತಿ ಹಿಡಿದರು ಮುತ್ತಿಟ್ಟು ಮತ್ತಿಷ್ಟು
ಮುಳುಮುಳು ಸುಮ್ಮನೆ ಅತ್ತೇನ
ಕೈಯಾಡಿಸಿದಂತೆ ಮೈಕದ್ದು ನಡುಗುವಿ
ಇದು ಹೊಸ ಗಮಕದ ಗತ್ತೇನ. - ೪
ಮೊದಲ ಭೆಟ್ಟಿಗೆ ಬಂದ ಮಳ್ಹೆಣ್ಣು ಮಾಡಿಧಾಂಗ
ತುಟಿಕಚ್ಚಿ ತಡವರಿಸಿ ತಡೆದೇನ
ತಂತ್ಯಲ್ಲ; ಜೀವದ ತಂತು ನೀ, ಅಂತನ
ಶ್ರುತಿ ಹಿಡಿದು ಜತಿ ಹಿಡಿದು ನಡದೇನ. - ೫
ಕಂಕಣ ಕಾಲುಂಗರಕ ಮೆಲ್ಲುಲಿರ -ಛಂದಕ
ಕುಣಿತಾನ ನಡೆಧಾಂಗ ಕಾಲಾಗ
ಕರಗಿ ಬಾ, ಅರಗಿ ಬಾ, ಎರಗಿ ಬಾ, ಸಣ್ಣಾಗಿ
ಸಕ್ಕರೆ ಬೆರೆಧಾಂಗ ಹಾಲಾಗ. - ೬
ನಂಬಿಸಿ ರಂಬಿಸಿ ಚುಂಬಿಸಿ ಎದೆಗೊಂಬಿ
ಬಿಸಿಬಿಸಿ ಎದೆಯೊಳಗ ಅಂಧಾಂಗ
ಝಣಣ ಮಿಡಿದಾವ ತಂತಿ ; ಗೆಜ್ಜೆ ಪೈಜಣ ಕಟ್ಟಿ
ಮಾಯೆಯೆ ಮೈಯೊಳಗೆ ಬಂಧಾಂಗ. - ೭
ಅಗಲಿದ ಇನಯನ ಫಕ್ಕನೆ ನೋಡುತ
ಬಸಿರ ಹೂ ಕುಲುಕುಲು ನಕ್ಕ್ಹಾಂಗ
ನಲ್ಲ ಮುಟ್ಟಿದ ಗಲ್ಲ, ನಲ್ಲೆಯ ಮೈಯೆಲ್ಲ
ಹಿಗ್ಗಿನ ಮುಳ್ಳಿಗೆ ಸಿಕ್ಕ್ಹಾಂಗ. - ೮
ಜುವ್ ಜುಮು ರುಮುಜುಮು ಗುಂಗುಣು ದುಮುದುಮು
ನಾದದ ನದಿಯೊಂದು ನಡೆಧಾಂಗ
ಗಲ್ಲಗಲ್ಲಕೆ ಹಚ್ಚಿ ನಲ್ಲನಲ್ಲೆಯರಿರುಳು
ಗುಜುಗುಜು ಗುಲುಗುಲು ನುಡಿಧಾಂಗ. - ೯
ಹೆಣ್ಗಂಡು ಜೇನ್ನೊಣ ಮುದ್ದಾಡಿ ಕಚ್ಚಾಡಿ
ಹೂಜೇನ ಹನಿಹನಿ ಕುಡಿಧಾಂಗ
ಮಂಕಾಗಿ ಮೂಕಾಗಿ ಮನದ ಮಿಡುಕಾಟದ
ಮೊಗ್ಗಿಗೆ ಬಾಯಿಲ್ಲಿ ಒಡಿಧಾಂಗ. - ೧೦
ಸಂಜೀಯ ಮುಗಿಲಾಗ ರೊಞ್ ಬಿಲ್ಲ ಪಟವೊಂದು
ಗಾಳಿ -ಸುಳಿಗೆ ಶ್ರುತಿ ಹಿಡಿಧಾಂಗ
ಗಗನ ಸಂಚಾರದ ನಾರದನ ವೀಣೆಯ
ಹಾಡೀನ ತೆರತೆರಿ ಬಡಿಧಾಂಗ. - ೧೧
ಆತನೀತನವಂತ ಯಾತನದ ಯಾತನೆಯ
ಯಾತ ಕಿರುಗುಟ್ಟೋದು ನಿಂಧಾಂಗ
ನಾನೀನ ನುಡಿ ನುಂಗಿ ತಾನೀನ ತಾನೆ ತಾ
ತಾನಾಗಿ ತನನನ ಬಂಧಾಂಗ. - ೧೨
ರಂಗೊಂದು ದಂಗೊಂದು ಗುಂಗೊಂದು ಒಂದಕ್ಕೊಂದು
ಹತ್ತಾಗಿ ಜತ್ತಾಗಿ ಸುಳಿಧಾಂಗ
ದಣಿದ ಜೀವದ ಮ್ಯಾಲೆ ಜೇನಿನ ಸುರಿಮಳಿ
ಜೇಂಗುಟ್ಟಿ ಹನಿಹನಿ ಇಳಿಧಾಂಗ. - ೧೩
ಪ್ರಕೃತಿ ಪುರುಷಗೆ ಸೋತು ಪ್ರಾಣದ್ಹಂಜಿಯೆ ನೂತು
ಅನುಭವದ ಕಿವಿಮಾತು ಆಧಾಂಗ
ಹಾಸಾದ ಹಾಡಿಗೆ ಹೊಕ್ಕಾತು ಕಿನ್ನರಿ
ನೆಯ್ಗಿಯೊಳಗ ನೂಲು ಹೋಧಾಂಗ. -೧೪
ಜೀವದ ರಸ ಹಿಂಡಿ ತುಂತೂರು ಮಳೆಯಾಗಿ
ತಂತಿಯ ತುಂಬೆಲ್ಲ ಸಿಡಿಧಾಂಗ
ಮರುಳ ಸಿದ್ದನ ಕೈಯ್ಯ ಕಿನ್ನರಿಯಾಗಿ ಸಿಕ್ಕ
ಮಾಯೆಯೆ ಮೈಗೆ ಮೈ ನುಡಿಧಾಂಗ -೧೫
- ದ.ರಾ ಬೇಂದ್ರೆ
(ಮಾಯಾಕಿನ್ನರಿ ಕವನ ಸಂಕಲನ)