1965 ಚಿತ್ರದುರ್ಗದಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ನೆನಪು

  •  
  •  
  •  
  •  
  •    Views  

ಚಿತ್ರದುರ್ಗದಲ್ಲಿ ನಡೆದ ಹುಣ್ಣಿಮೆ ಮಹೋತ್ಸವವು “ನ ಭೂತೋ  ನ ಭವಿಷ್ಯತಿ” ಎಂಬಂತಾಯಿತು. ಇದಕ್ಕೆ ಹಲವೆಂಟು ಕಾರಣಗಳುಂಟು. ಮೊಟ್ಟ ಮೊದಲು ಜಿಲ್ಲಾ ಮುಖ್ಯ ಕೇಂದ್ರವೆಂಬುದು, ಎರಡನೆಯದು ಮುರುಘರಾಜೇಂದ್ರ ಮಠವಿರುವ ಮುಖ್ಯಸ್ಥಳವೆಂಬುದು, ಮೂರನೆಯದು ಶ್ರೀ ಮನ್ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಆಗಮಿಸುತ್ತಾರೆಂಬದು ಮತ್ತೊಂದು ಕುತೂಹಲಕಾರಿ ಅಂಶವೆಂದರೆ ಮಠದೊಳಗೆ ಸೌಹಾರ್ದವಿಲ್ಲದಿದ್ದ ಮುಖ್ಯಮಂತ್ರಿ ನಿಜಲಿಂಗಪ್ಪನವರು ಬರಲಿರುವುದು. ಈ ಕಾರಣಗಳಿಂದ ಈ ಜಿಲ್ಲೆಯ ಜನರು ಮನೆಗಳಿಗೆ ಬೀಗ ಹಾಕಿಕೊಂಡು ಬಂದಿದ್ದರೇನೋ ಅನ್ನುವಷ್ಟು ಜನ ಸೇರಿತ್ತು. 

ಇಷ್ಟೊಂದು ಜನರಿಗೆ ಊಟದ ವ್ಯವಸ್ಥೆ ಮಾಡುವುದು ತುಂಬಾ ದುಬಾರಿ ವೆಚ್ಚ ಮತ್ತು ಸಮರ್ಪಕವಾಗಿ ಮಾಡಲು ಆಗುವುದೂ ಇಲ್ಲ. ಆದ್ದರಿಂದ ಊಟದ ವ್ಯವಸ್ಥೆಯನ್ನು ನಿಲ್ಲಿಸಬೇಕೆಂಬುದೂ ಒಂದು ವಿಷಯ. ಆದರೆ ಚಿತ್ರದುರ್ಗದ ಸ್ವಾಗತ ಸಮಿತಿಯವರು “ಮುಂದೆ ನೀವು ಏನು ಬೇಕಾದರೂ ಮಾಡಿಕೊಳ್ಳಿ , ಚಿತ್ರದುರ್ಗದಲ್ಲಂತೂ ಊಟದ ವ್ಯವಸ್ಥೆ ಆಗಲೇಬೇಕು” ಎಂಬ ನಿರ್ಣಯಕ್ಕೆ ಬಂದರು. ನೂರಾರು ಚೀಲ ಅಕ್ಕಿ 50-60 ಚೀಲ ಗೋಧಿ ಮಾಡುವವರ ಗತಿ ದುರ್ಗತಿಯಾಗಿ ಹೋಯಿತು, ಇಷ್ಟೆಲ್ಲಾ ಖರ್ಚು ಮಾಡಿದರೂ  ಎಲ್ಲರಿಗೂ ಊಟ ಇಡಲು ಆಗಲಿಲ್ಲ.  ಎಷ್ಟೋ ಜನರು ಆ ನೂಕ ನುಗ್ಗಲಿಗೆ ಬಂದು ಗಂಟೆಗಟ್ಟಲೆ ಕೂತು ಊಟ ಮಾಡಲು ಸಿದ್ದರಿರಲಿಲ್ಲ. ಇಂತಹ ಸಂದರ್ಭದಲ್ಲಿ ಊಟಕ್ಕಾಗಿಯೇ ಬರುವವರ ತಂಡ ವೊಂದಿರುತ್ತದೆ. ಅವರು ಮಾತ್ರ ಯಥೇಚ್ಛವಾಗಿ ಊಟ ಮಾಡಿದರು. ಇಲ್ಲಿಯ ಸ್ವಾಗತ ಸಮಿತಿಗೆ ಎಲ್.ಸಿದ್ದಪ್ಪನವರು ಅಧ್ಯಕ್ಷರಾಗಿದ್ದರು. ಸುಪ್ರಸಿದ್ಧ ವಕೀಲರಾದ ಓ.ವೀರಬಸಪ್ಪನವರು  ಉಪಾಧ್ಯಕ್ಷರಾಗಿದ್ದರು. ಮಂಟಪವು ಅರಸೀಕೆರೆಯದನ್ನು ಮೀರಿಸಿತ್ತು. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಯಾವ ಜಾತಿಯ ಸಮಾರಂಭವೂ ಆ ಜಾತಿಯ ಜನರು ಮಾತ್ರ ಬರುವ ಪದ್ಧತಿ ಇರುತ್ತದೆ. ಆದರೆ ತರಳಬಾಳು ಹುಣ್ಣಿಮೆ ಸಮಾರಂಭವು ಆ ಜಾತಿಯ ಕೋಟೆಯನ್ನೊಡೆದು ನುಚ್ಚುನೂರು ಮಾಡಿತು. ಹರಿಜನರಿಂದ ಹರಜನರವರಿಗೆ,  ಪಂಗಡ ಉಪಪಂಗಡದ ಎಲ್ಲರೂ ಒಂದೇ ನೋಟದಲ್ಲಿ ನೋಡಿ ಅಪ್ಪಿಕೊಂಡರು . ಕಾಲಕ್ಕೆ ಸರಿಯಾಗಿ ಯಾವ ಯಾವ ಕಾರ್ಯಕ್ರಮಗಳು  ಎಷ್ಟೆಷ್ಟು ಹೊತ್ತಿಗೆ ಆಗಬೇಕೋ ಅಷ್ಟಷ್ಟೇ ಹೊತ್ತಿಗೆ ಆಗಿ ಮುಗಿಯುತ್ತಿದ್ದವು. ಇದು ಇದರ ವೈಶಿಷ್ಟ್ಯ.  ಸಂಜೆ 6:30ಕ್ಕೆ ಪ್ರಾರಂಭ, ರಾತ್ರಿ 10ಕ್ಕೆ ಮುಕ್ತಾಯ. ಮೊಟ್ಟಮೊದಲು ಅಕ್ಕನ ಬಳಗದವರಿಂದ ವಚನ ಗೀತೆ 30 ನಿಮಿಷ. ಒಬ್ಬರಿಗೆ ವಚನ ಗೀತೆಗಳು ಆಕರ್ಷಕವಾಗಿ ಕಂಡುಬಂದರೆ ಮತ್ತೊಬ್ಬರಿಗೆ ಸರ್ವ ಮತೀಯರ ಮೂಲಪುರುಷರ ಭಾವಚಿತ್ರಗಳು ಆಕರ್ಷಣೆ. ಇನ್ನೊಬ್ಬರಿಗೆ ತಾವು ಕೈಗೊಂಡ ಕಾಯಕದಲ್ಲಿ ನಿರತರಾಗಿರುವ ಶರಣರ ಸಮಯೋಚಿತ ವಚನಗಳ ಫಲಕಗಳ ಆಕರ್ಷಣೆ. ಮಗುದೊಬ್ಬರಿಗೆ ಎಲ್ಲಾ ಶರಣರ ಸಮಯೋಚಿತ ವಚನಗಳ ಫಲಕಗಳ ಆಕರ್ಷಣೆ. ಪ್ರತಿನಿತ್ಯ ಮಂಟಪದೊಳಗೆ 7-8  ಸಾವಿರ ಜನರು.  ಅಲ್ಲಲ್ಲಿ ರಸ್ತೆಗಳಲ್ಲಿ ನಿಂತಿರುವವರು ಎಷ್ಟೋ ಜನ. ಜಗುಲಿಗಳ ಮೇಲೆ ಕುಂತಿರುವವರು ಎಷ್ಟೋ ಜನ. ಸ್ಪಷ್ಟವಾದ ಧ್ವನಿವರ್ಧಕ ಯಂತ್ರಗಳ ಜೋಡಣೆ. ಅಷ್ಟೊಂದು ಜನರಿದ್ದರೂ ನಿಶಬ್ದ ವಾತಾವರಣ. ಇದು ಎಲ್ಲರಿಗೂ ಪರಮಾಶ್ಚರ್ಯ. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಸಭೆಗಳಿಂದ ಗೊಂದಲವೇ ಹೆಚ್ಚು. ತರಳಬಾಳು ಹುಣ್ಣಿಮೆಯ ಯಾವ ಸಂದರ್ಭದಲ್ಲಿಯೂ ಗೊಂದಲವಾಗಿದ್ದನ್ನು ಈವರೆಗೂ ಯಾರೂ ಕಂಡಿಲ್ಲ. ಹೆಣ್ಣು ಮಕ್ಕಳಿಗೇ ಪ್ರತ್ಯೇಕ, ಗಂಡಸರಿಗೇ  ಪ್ರತ್ಯೇಕ,  ಮುಖ್ಯ ಅತಿಥಿಗಳಿಗೇ  ಪ್ರತ್ಯೇಕ,  ಪತ್ರಕರ್ತರಿಗೆ ಪ್ರತ್ಯೇಕ ಕೂತುಕೊಳ್ಳುವ ವ್ಯವಸ್ಥೆ. ಇದನ್ನು ಸಿರಿಗೆರೆ ಮಠದ ಸಮಾರಂಭವೆಂದು ಯಾರು ಹೇಳಲಿಲ್ಲ.  

ಹುಣ್ಣಿಮೆಗೆ ಎಲ್ಲಾ ಸಿದ್ಧತೆಯು ನಡೆಯುತ್ತಿದ್ದು, ಇನ್ನೂ 2-3 ದಿನಗಳಲ್ಲಿ ಕಾರ್ಯಕ್ರಮ ಪ್ರಾರಂಭವಾಗಬೇಕು. ಸುಂದರವಾಗಿ ರಚನೆಯಾದ ಮಂಟಪದ ಕೆಲಸವೂ ಪೂರ್ತಿಯಾಗಿತ್ತು. ಯಾವ ಪುಣ್ಯಾತ್ಮನಿಗೆ ಕಣ್ಣು ಕುಕ್ಕಿತೋ ಒಂದು ಬೆಳಗಿನ ಜಾಗದಲ್ಲಿ ಮಂಟಪಕ್ಕೆ ಬೆಂಕಿಯಿಟ್ಟೇ ಬಿಟ್ಟರು. ಸಾಮಾನ್ಯವಾಗಿ ಜನರಿಗೆ ಮೂಲ ಗುರಿಯತ್ತ ಗಮನವಿರಲಿಲ್ಲ. ಸಿಟ್ಟು ಸೇಡುಗಳನ್ನು ತೀರಿಸಿಕೊಳ್ಳುವತ್ತ ಗಮನ ಹೆಚ್ಚು. ಯಾರ ಮೇಲಾದರೂ ವಿಚಾರ ವಿಮರ್ಶೆಯಿಲ್ಲದೆ ಗುರಿಯಿಟ್ಟು ಮಾತನಾಡುವ ಪದ್ಧತಿ ಹೆಚ್ಚು. ತಕ್ಷಣ ನಮಗೆ ಫೋನ್ ಬಂದಿತು.  ಪೊಲೀಸ್  ಕಂಪ್ಲೇಂಟ್ ಕೊಟ್ಟು ಅಪರಾಧಿಗಳನ್ನು ಹಿಡಿಸಬೇಕು ಎಂದು. ಕಂಪ್ಲೇಂಟ್ ಏನು ಬೇಡ ಉರಿಯುವ ಬೆಂಕಿಯನ್ನು ಮೊದಲು ಆರಿಸಿ. ಈಗ ಹೊಟ್ಟೆ ಉರಿದರೂ ಕಷ್ಟ, ಬಟ್ಟೆ ಉರಿದರೂ ಕಷ್ಟ, ಮೊಟ್ಟ ಮೊದಲು ನಮ್ಮ ದೃಷ್ಟಿ ನಮ್ಮ ಗುರಿಯತ್ತ ಇರಬೇಕು.  ಯಾವಾಗಲೂ ಕಾರ್ಯಸಾಧಕನು ನನ್ನ ಗುರಿಯತ್ತ ನಡೆಯಲೇಬೇಕೇ ವಿನಃ ನಡೆಯುವ ದಾರಿಯಲ್ಲಿ ಬರುವ ಕಲ್ಲು ಮುಳ್ಳುಗಳಿಗೆ ಬೆದರಿ ನಡೆಯುವುದನ್ನು ಬಿಡಬಾರದು. ಈ ದೇಶದ ಹಣೆಬರಹ ಇಷ್ಟು. ಒಬ್ಬರನ್ನು ಕಂಡರೆ ಒಬ್ಬರು ಕುದಿಯುವುದು ಅದರಲ್ಲೂ ಮರುಗುವುದೇ ಧರ್ಮವಾದ ಲಿಂಗವಂತರು ಈಗಲೀಗ  ಕರಬುವುದನ್ನೇ  ಧರ್ಮವಾಗಿ ಮಾಡಿಕೊಂಡಿದ್ದಾರೆ.

ಬೆಂಕಿ ಬಿದ್ದ ಈ ಪ್ರಸಂಗವೂ ಸಹ ನಮಗೆ ಅನುಕೂಲವಾಗಿಯೇ ಪರಿಣಮಿಸಿತು.  ದೇಶಾದ್ಯಂತ ಕುತೂಹಲ ಬೆಳೆಸಿತು.  ಲಕ್ಷೋಪಲಕ್ಷ  ಜನ ಸೇರಿದರು. ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪನವರೂ  ಬಂದರು. ಶ್ರೀ ಮನ್ಮಹಾರಾಜರಾಗಿದ್ದ  ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರೂ ಬಂದರು. 

“ನ ಭೂತೋ  ನ ಭವಿಷ್ಯತಿ” ಎಂಬ ಉದ್ಗಾರ ಎಲ್ಲರ ಬಾಯಿಂದಲೂ ಹೊರಟಿತು. ಈ ಉತ್ಸವ ಮುಗಿದಮೇಲೆ ಎಲ್ಲರೂ ನಮಗೆ ಕೃತಜ್ಞತೆ ಸೂಚಿಸಿದರು. ತಮ್ಮ ಮಾತನ್ನು ಮೀರಿ ಎಲ್ಲಿಯಾದರೂ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದರೆ ಪೊಲೀಸಿನವರೇ ಸೆಕ್ಷನ್ ಜಾರಿ ಮಾಡಿ ಉತ್ಸವ ನಿಲ್ಲಿಸುತ್ತಿದ್ದರು. ಯಾರು ಬೆಂಕಿ ಹಚ್ಚಿದ್ದರೋ ಅವರ ಉದ್ದೇಶ ಕೈಗೂಡುತ್ತಿತ್ತು  ಎಂದು ಅಭಿನಂದಿಸಿದರು.

ದಿನ ಕಳೆದ ಮೇಲೆ ಕೆಲವರು ಪ್ರಮುಖರು ಒಬ್ಬ ಪದವೀಧರ ಉಪಾಧ್ಯಾಯನನ್ನು ಈ ಕೆಲಸಕ್ಕೆ ಮುಂದೆ ಮಾಡಿದ್ದರೆಂದು ಆತನೇ ನಮಗೆ ಹೇಳಿ ಪಶ್ಚಾತ್ತಾಪ ಪಟ್ಟನು. ನಾವು ಆತನಿಗೆ ಸಮಾಧಾನ ಮಾಡಿ ಕಳಿಸಿದೆವು.  ಅದರಲ್ಲಿ ಎಷ್ಟು ಸುಳ್ಳೋ, ಎಷ್ಟು ನಿಜವೋ ಅದನ್ನು ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲ. ಒಟ್ಟಿನಲ್ಲಿ ಚಿತ್ರದುರ್ಗದ ಹುಣ್ಣಿಮೆಯು ನೂರಕ್ಕೆ ನೂರು ಯಶಸ್ವಿಯಾಯಿತು. ಹುಣ್ಣಿಮೆ ನಡೆಸಲು ಚಿತ್ರದುರ್ಗದಲ್ಲಿ ಮೀಟಿಂಗ್ ಕರೆದಾಗ ನಾವು ಸೇರಿ ಮೀಟಿಂಗ್ ನಲ್ಲಿ 22 ಜನರಿದ್ದೆವು. ಎಲ್ಲರಿಗೂ ನಿರಾಶೆಯಾಯಿತು.  ಜಿಲ್ಲಾದ್ಯಾಂತ  ಆಹ್ವಾನ ಕಳುಹಿಸಿದ್ದರೂ  ಹೊರಗಿನಿಂದ  ಯಾರೂ ಬಂದಿರಲಿಲ್ಲ. ಮುಂದೆ ಜನರು ಎಷ್ಟರಮಟ್ಟಿಗೆ ಸಹಕರಿಸುತ್ತಾರೆ? ಎಂಬ ಸಂದೇಹ ಎಲ್ಲರಿಗೂ ಮೂಡಿತ್ತು. ಹುಣ್ಣಿಮೆಯಾದ ನಂತರ ನಮ್ಮ ಜನರ ಔದಾರ್ಯ, ದೊಡ್ಡಗುಣ ಏನೆಂಬುದು ಎಲ್ಲರಿಗೂ ಅರ್ಥವಾಯಿತು. 

ತರಳಬಾಳು ಹುಣ್ಣಿಮೆಯಲ್ಲಿ ಅನ್ನ ದಾಸೋಹ ನಿಷೇದ :

ಚಿತ್ರದುರ್ಗದಲ್ಲಿ ತರಳಬಾಳು ಹುಣ್ಣಿಮೆ ನಡೆದಾಗ ನಡೆದ ಖರ್ಚು, ಆದ ಅವ್ಯವಸ್ಥೆ ಇವೆಲ್ಲವನ್ನೂ ಗಮನಿಸಿ ಮುಂದೆ ಯಾವ ಸಮಾರಂಭದಲ್ಲೂ ಊಟದ ವ್ಯವಸ್ಥೆಗೆ ಮಾಡಬಾರದೆಂಬ ನಿರ್ಣಯಕ್ಕೆ ಬಂದೆವು. ಉಣ್ಣುವವರು ಲಕ್ಷಾಂತರ ಜನ; ಮಾಡುವವರು ನೂರಾರು ಜನ. ಖರ್ಚು ಲಕ್ಷಾಂತರ ರೂ.ಗಳು, ಅವರವರ ಹೊಟ್ಟೆಗೆ ಅವರವರೇ ಅನ್ನವನ್ನು ಹುಡುಕಿಕೊಳ್ಳುತ್ತಾರೆ. ಇಂತಹ ಜಾತ್ರೆಗಳಲ್ಲಿ ಮುಖ್ಯವಾದುದು ಜ್ಞಾನದಾಸೋಹ. ಹೊಟ್ಟೆಯಿದ್ದಲ್ಲಿ ಅನ್ನವಿದೆ. ಆದರೆ ನೆತ್ತಿಯಿದ್ದಲ್ಲಿ ಜ್ಞಾನವಿಲ್ಲ. ಆದ್ದರಿಂದ ಜ್ಞಾನಕ್ಕೇ ಪ್ರಾಶಸ್ತ್ಯ ಕೊಡಬೇಕೆ ವಿನಾ ಅನ್ನಕ್ಕೆ ಕೊಡಬೇಕಾಗಿಲ್ಲವೆಂದು ನಿರ್ಣಯಕ್ಕೆ ಬಂದು ನಂತರ ಅನ್ನ ದಾಸೋಹ ನಿಲ್ಲಿಸಲಾಯಿತು. 

ಬಸವೇಶ್ವರ ವಚನಗಳ ಭಾಷಾಂತರ :

ಅರಸೀಕೆರೆಯಲ್ಲಿ 1964ರಲ್ಲಿ ನಡೆದ ತರಳಬಾಳು ಹುಣ್ಣಿಮೆಯ ಸುಸಂದರ್ಭದಲ್ಲಿ ಶರಣ ಎಸ್.ಎಂ.ಅಂಗಡಿಯವರು ಅದರ ಕಾರ್ಯಕಲಾಪಗಳಲ್ಲಿ ಭಾಷಣಕಾರರಾಗಿದ್ದರು. ಅವರೇ ಬಸವೇಶ್ವರರ ವಚನಗಳನ್ನು ಇಂಗ್ಲೀಷ್ ಗೆ ಭಾಷಾಂತರ ಮಾಡಿಸಬೇಕೆಂಬ ಪ್ರೇರಣೆಯಿತ್ತವರು. ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ. ಮೆನೇಜಸ್ ರವರ ನೆರವು ಪಡೆದು ಭಾಷಾಂತರಿಸಿದರು. ಒಟ್ಟು 35 ಸಾವಿರ ರೂ, ಖರ್ಚಾಯಿತು. ಈ ಕಾರ್ಯದಲ್ಲಿ ಕೆಲವು ಜನ ತಲಾ 10 ರೂ. ನಂತೆ ನೆರವು ನೀಡಿದರು. ಇದೂ ಸಹ 10ಸಾವಿರ ರೂ. ಸಂಗ್ರಹವಾಗಿರಬಹುದು. ಆದರೆ ಬಾಕಿ 25ಸಾವಿರ ರೂ. ಗಳನ್ನು ಶ್ರೀಮಠವೇ ಹಾಕಿ ಅದನ್ನು ಪೂರ್ಣಗೊಳಿಸಲಾಯಿತು. ಅದಕ್ಕೆ ಪ್ರಸ್ತಾವನೆ ಬರೆಯುವ ಹೊಣೆ ಎಸ್.ಎಂ.ಅಂಗಡಿಯವರಿಗಿತ್ತು. ಅಷ್ಟರಲ್ಲಾಗಲೇ ಅವರ ಮನಸ್ಸು ವಿಕೃತಗೊಂಡಂತೆ ಕಂಡಿತು. ಬರೆಯಲು ಮುಂದಾಗಲಿಲ್ಲ. ಆಗ ನಾವು ಈ ಸಮಸ್ಯೆಯನ್ನು ಶರಣ ಎಚ್.ದೇವೀರಪ್ಪ ಮತ್ತು ಶರಣ ಎಚ್.ತಿಪ್ಪೇರುದ್ರಸ್ವಾಮಿ ಇವರ ಮುಂದಿಟ್ಟೆವು. ಅವರು, “ನಾವಾರೂ ಬರೆಯುವುದು ಸರಿಯಲ್ಲ. ತಾವೇ ಬರೆಯಬೇಕು, ಅದರ ಇಂಗ್ಲೀಷ್ ಭಾಷಾಂತರವನ್ನು ನಾವು ನಮ್ಮ ಸ್ನೇಹಿತರ ಸಹಕಾರದಿಂದ ಮಾಡುತ್ತೇವೆ” ಎಂದು ನಮಗೆ ಹೇಳಿದರು. ಅದರಂತೆ ನಾವು ಕನ್ನಡದಲ್ಲಿ ಬಸವಣ್ಣನವರ ನಿಜ ಸ್ವರೂಪವನ್ನೂ, ಸಿದ್ದಾಂತವನ್ನೂ ಅವರ ವಚನ ಗಳ ಆಧಾರದ ಮೇಲೆ ಬರೆದೆವು. ದೇವೀರಪ್ಪನವರ ನೇತೃತ್ವದಲ್ಲಿ ಅವರ ಅನೇಕ ಸ್ನೇಹಿತರು ಸೇರಿ ಇಂಗ್ಲೀಷ್ ಗೆ ತರ್ಜುಮೆ ಮಾಡಿ ಅಚ್ಚು ಹಾಕಿಸಿದರು. ಅನಂತರ 1963 ರಲ್ಲಿ ಚಿತ್ರದುರ್ಗದಲ್ಲಿ ನಡೆದ ತರಳಬಾಳು ಹುಣ್ಣಿಮೆಯಲ್ಲಿ ಆಗಿನ ಮೈಸೂರು ಶ್ರೀ ಮನ್ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್ ರವರ ಅಮೃತ ಹಸ್ತದಿಂದ ಆ ಗ್ರಂಥದ ಕೆಲವು ಭಾಗ ಬಿಡುಗಡೆಯಾಯಿತು. 

- ಶ್ರೀ ತರಳಬಾಳು ಜಗದ್ಗುರು
ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ

ಆಕರ ಗ್ರಂಥ : ದಿಟ್ಟ ಹೆಜ್ಜೆ ಧೀರ ಕ್ರಮ
ಪುಟ : 236 ರಿಂದ 238, 268