ಜಗತ್ತಿನಲ್ಲಿ ಅತ್ಯಂತ ಕ್ರೂರ ಪ್ರಾಣಿ: ಮನುಷ್ಯ!

ಅನೇಕ ಧಾರ್ಮಿಕ ಸಮಾರಂಭಗಳಲ್ಲಿ ಪ್ರವಚನಕಾರರಿಂದ ಕೇಳಿ ಬರುವ ಒಂದು ಕಾಲ್ಪನಿಕ ಕಥಾನಕ: ಒಬ್ಬ ಸಂನ್ಯಾಸಿ ಸ್ನಾನ ಮಾಡಲು ನದಿಯ ತೀರಕ್ಕೆ ಹೋಗಿದ್ದ. ಸ್ವಲ್ಪ ಹೊತ್ತಿನಲ್ಲಿಯೇ ತನ್ನ ಎದುರಿಗೆ ಒಂದು ಚೇಳು ನದಿಯ ನೀರಿನಲ್ಲಿ ಮುಳುಗುತ್ತಿರುವುದು ಕಣ್ಣಿಗೆ ಬಿತ್ತು. ಅದನ್ನು ನೋಡಿ ಮನ ಕರಗಿ ಮುಳುಗುತ್ತಿದ್ದ ಚೇಳನ್ನು ಕೈಯಲ್ಲಿ ಹಿಡಿದು ದಡಕ್ಕೆ ಸೇರಿಸಿದ. ಚೇಳು ಸಂನ್ಯಾಸಿಯ ಕೈಯನ್ನು ಕುಟುಕಿ ಮತ್ತೆ ನೀರಿನತ್ತ ಹೋಯಿತು. ಸಂನ್ಯಾಸಿಯು ಪುನಃ ರಕ್ಷಣೆ ಮಾಡಲು ಮತ್ತೊಮ್ಮೆ ಅದನ್ನು ಕೈಯಲ್ಲಿ ಹಿಡಿದು ದಡಕ್ಕೆ ಸೇರಿಸಿದ. ಪುನಃ ಆ ಚೇಳು ಸಂನ್ಯಾಸಿಯ ಕೈಯನ್ನು ಕುಟುಕಿ ನೀರಿನತ್ತ ಹೋಯಿತು. ಹೀಗೆ ಸಂನ್ಯಾಸಿಯು ಚೇಳನ್ನು ರಕ್ಷಣೆ ಮಾಡುವುದು, ಚೇಳು ಸಂನ್ಯಾಸಿಯ ಕೈಯನ್ನು ಕುಟುಕಿ ನೀರಿಗೆ ಹೋಗುವುದು ನಿರಂತರವಾಗಿ ನಡೆದಿತ್ತು. ಪ್ರತಿ ಸಲ ಸಂನ್ಯಾಸಿ ಚೇಳನ್ನು ರಕ್ಷಣೆ ಮಾಡಲು ಯತ್ನಿಸಿದಾಗಲೆಲ್ಲಾ ಚೇಳು ಕುಟುಕಿ ಕುಟುಕಿ ಸಂನ್ಯಾಸಿಯ ಕೈಯಿಂದ ರಕ್ತ ಸುರಿಯತೊಡಗಿತು. ರಕ್ತಸಿಕ್ತವಾದ ಸಂನ್ಯಾಸಿಯ ಕೈಯನ್ನು ನೋಡಿದ ನದೀ ತೀರದಲ್ಲಿದ್ದ ಒಬ್ಬ ವ್ಯಕ್ತಿ ಮರುಕಗೊಂಡ. “ಸ್ವಾಮಿ, ಪ್ರತಿ ಸಾರಿ ಚೇಳು ಕುಟುಕಿದರೂ, ನಿಮ್ಮ ಕೈಯಿಂದ ರಕ್ತ ಸುರಿಯುತ್ತಿದ್ದರೂ ನೀವೇಕೆ ಆ ಕ್ಷುದ್ರ ಜೀವಿ ಚೇಳನ್ನು ರಕ್ಷಣೆ ಮಾಡಲು ವೃಥಾ ಯತ್ನಿಸುತ್ತಿದ್ದೀರಿ?” ಎಂದು ಅವರನ್ನು ಕೇಳಿದ. ಅದಕ್ಕೆ ಆ ಸಂನ್ಯಾಸಿ ಕೊಟ್ಟ ಉತ್ತರ: “ರಕ್ಷಣೆ ಮಾಡುವುದು ನನ್ನ ಸ್ವಭಾವ, ಕುಟುಕುವುದು ಅದರ ಸ್ವಭಾವ!”
ಇದು ಮಾನವೀಯ ಭಾವನೆಯನ್ನು ಬಿಂಬಿಸುವ ಅಪರೂಪದ ಕಥಾನಕವೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಭಾವನಾಜೀವಿಗಳು ಈ ಕಥಾನಕವನ್ನು ಕೇಳಿ ಸಂನ್ಯಾಸಿಯ ಮಾನವೀಯ ಗುಣವನ್ನು ಪ್ರಶಂಸೆ ಮಾಡುತ್ತಾರೆ. ಆದರೆ ಅನೇಕ ವೇಳೆ ಜನರು ಭಾವಪರವಶರಾಗಿ ಹೆಚ್ಚಿನ ವಿಚಾರ ಮಾಡಲು ಮುಂದಾಗುವುದಿಲ್ಲ. ಭಾವುಕತೆಗೂ ವೈಚಾರಿಕತೆಗೂ ವ್ಯತ್ಯಾಸವಿದೆ. ಚೇಳು ಕುಟುಕುತ್ತದೆ ಎಂದು ಗೊತ್ತಿದ್ದೂ ಸಂನ್ಯಾಸಿಯು ಅದನ್ನು ಕೈಯಲ್ಲಿ ಹಿಡಿದು ದಂಡೆಗೆ ತಲುಪಿಸಲು ಯತ್ನಿಸಿದ್ದು ಸರಿಯೇ? ಅದನ್ನು ಬದುಕಿಸಬೇಕೆಂಬ ಮಾನವೀಯ ಭಾವನೆಯಿಂದ ಅವಸರದಲ್ಲಿ ವಿಚಾರ ಮಾಡದೆ ಮೊದಲನೆಯ ಬಾರಿ ಅದನ್ನು ಕೈಯಲ್ಲಿ ಹಿಡಿದು ದಂಡೆಯನ್ನು ತಲುಪಿಸಲು ಸಂನ್ಯಾಸಿ ಯತ್ನಿಸಿದ್ದರಲ್ಲಿ ಯಾವ ತಪ್ಪೂ ಇಲ್ಲ. ಆದರೆ ಅದು ಕಚ್ಚಿದ ಮೇಲೂ ಎಚ್ಚರಗೊಳ್ಳದೆ ಎರಡನೆಯ ಬಾರಿ ಮತ್ತೆ ಅದನ್ನು ಕೈಯಲ್ಲಿಯೇ ಹಿಡಿದು ದಂಡೆಗೆ ಮುಟ್ಟಿಸುವ ಪ್ರಯತ್ನ ಮಾಡಿದ್ದು ಸಂನ್ಯಾಸಿಯ ದಡ್ಡತನ. ಹೀಗೆಂದ ಮಾತ್ರಕ್ಕೆ ಅದನ್ನು ರಕ್ಷಣೆ ಮಾಡುವ ಪ್ರಯತ್ನವನ್ನೇ ಕೈಬಿಡಬೇಕಾಗಿತ್ತು ಎಂದರ್ಥವಲ್ಲ. ಕಚ್ಚಿಸಿಕೊಂಡ ಮೇಲೆ ಅದರ ಸ್ವಭಾವವನ್ನರಿತು ದಂಡೆಯಲ್ಲಿದ್ದ ಒಂದು ಕಡ್ಡಿಯನ್ನೋ, ಕಟ್ಟಿಗೆಯನ್ನೋ, ಎಲೆಯನ್ನೋ ಕೈಯಲ್ಲಿ ತೆಗೆದುಕೊಂಡು ಬಂದು ಆ ಮೂಲಕ ಅದನ್ನು ದಂಡೆಗೆ ಸಾಗಿಸಿ ರಕ್ಷಣೆ ಮಾಡುವ ಜಾಣ್ಮೆಯನ್ನು ತೋರಬೇಕಾಗಿತ್ತು.
ಇದೇ ರೀತಿ ಸಾಮಾಜಿಕ ಮತ್ತು ಕೌಟುಂಬಿಕ ಜೀವನದಲ್ಲಿ ನಿಮಗಾಗದ “ಚೇಳುಕುಟುಕರು” ನಿಮ್ಮನ್ನು ಸದಾ ಕುಟುಕುತ್ತಲೇ ಇರುತ್ತಾರೆ. ಅದರಿಂದ ಘಾಸಿಗೊಂಡು ನಿಮ್ಮ ಕರ್ತವ್ಯಗಳನ್ನು ಮಾಡಲು ಹಿಂಜರಿಯಬಾರದು. ಅಂತಹ ಚೇಳುಕುಟುಕರಿಂದ ಹೇಗೆ ಎಚ್ಚರವಾಗಿರಬೇಕೆಂಬ ಜಾಣ್ಮೆ ನಿಮಗಿರಬೇಕು. ಸಜ್ಜನರ ಸಹವಾಸ ಮಾಡಬೇಕು. ಅಂತರಂಗ ಶುದ್ದವಿಲ್ಲದ ದುರ್ಜನರ ಹತ್ತಿರ ಸುಳಿಯಬಾರದು. ಅವರಿಂದ ದೂರವಿರಬೇಕು. ಅವರು ಕಾಳಕೂಟ ವಿಷವಿದ್ದಂತೆ ಎಂದು ಬಸವಣ್ಣನವರು ಈ ಕೆಳಗಿನ ವಚನದಲ್ಲಿ ಎಚ್ಚರಿಸುತ್ತಾರೆ:
ಸಾರ, ಸಜ್ಜನರ ಸಂಗವ ಮಾಡುವುದು
ದೂರ, ದುರ್ಜನರ ಸಂಗ ಬೇಡವಯ್ಯಾ!
ಆವ ಹಾವಾದರೇನು? ವಿಷವೊಂದೆ;
ಅಂತವರ ಸಂಗ ಬೇಡವಯ್ಯಾ
ಅಂತರಂಗ ಶುದ್ಧವಿಲ್ಲದವರ ಸಂಗ
ಸಿಂಗಿ, ಕಾಳಕೂಟ ವಿಷವೋ
ಕೂಡಲಸಂಗಮ ದೇವಾ!
ಚೇಳಿಗೂ ಚೇಳುಕುಟುರಿಗೂ ಅಂತರವಿದೆ. ಚೇಳುಕುಟುಕರದು ಕೆಟ್ಟ ಸ್ವಭಾವ. ಅವರ ಸ್ವಾರ್ಥಲಾಲಸೆ ಈಡೇರದಿದ್ದಾಗ ದ್ವೇಷಸಾಧನೆಯ ಷಡ್ಯಂತ್ರಗಳನ್ನು ಮಾಡುತ್ತಾರೆ. ಚೇಳು ಕುಟುಕುವುದು ಅದರ ನೈಜ ಸ್ವಭಾವ. ಯಾರ ಮೇಲೂ ಅದಕ್ಕೆ ಯಾವುದೇ ದ್ವೇಷ ಇರುವುದಿಲ್ಲ. ಸಂನ್ಯಾಸಿಯು ತನ್ನನ್ನು ರಕ್ಷಣೆ ಮಾಡಲು ಯತ್ನಿಸುತ್ತಿದ್ದಾನೆ ಎಂಬ ಅರಿವೂ ಅದಕ್ಕೆ ಇರುವುದಿಲ್ಲ. ಅದು ಕುಟುಕುವುದು ತನಗೇನೋ ಅಪಾಯ ಸಂಭವಿಸುತ್ತಿದೆ ಎಂಬ ಆತ್ಮರಕ್ಷಣೆಯ ಸಹಜ ಪ್ರತಿಕ್ರಿಯೆ (self-defence mechanism).
ಮೊನ್ನೆ ಮಠದ ಶಾಂತಿವನದಲ್ಲಿ ಬೆಳಗಿನ ವಾಯುವಿಹಾರದ ವೇಳೆ ಏನೋ ದೀರ್ಘವಾದ ಆಲೋಚನೆಯಲ್ಲಿ ಮಗ್ನರಾಗಿದ್ದ ನಮಗೆ ದಾರಿಯಲ್ಲಿ ಅಡ್ಡ ಬಂದ ಹಾವು ಕಾಣಿಸಲೇ ಇಲ್ಲ. ನಮ್ಮ ಹಿಂದೆ ಇದ್ದ ಪೂಜಾ ಮರಿ ಗಮನಿಸಿ ಗಾಬರಿಗೊಂಡು “ಹಾವು” ಎಂದು ಕೂಗಿ ಹೇಳುವುದರೊಳಗೆ ಅದನ್ನು ದಾಟಿ ಮುಂದೆ ಸಾಗಿದ್ದೆವು. ಹಾವು ಅದರ ಪಾಡಿಗೆ ಅದು ಸರಿದು ಹೋಯಿತು! ಅದೇನೂ ದುಷ್ಟ ಜನರಂತೆ ಸಂಚು ಮಾಡಿ ನಮ್ಮನ್ನು ಕಚ್ಚಲು ಬಂದಿರಲಿಲ್ಲ. ಆದರೆ ಮನುಷ್ಯರು ಹಾಗಲ್ಲ. "ಅಪದ್ದಿಗೆ ಉದಾಸೀನವೇ ಮದ್ದು" ಎಂಬ ಗಾದೆ ಮಾತಿನಂತೆ ನಿಮ್ಮ ಪಾಡಿಗೆ ನೀವು ಹೋಗುತ್ತಿದ್ದರೂ, ದಾರಿಯಲ್ಲಿ ಕಾಲು ಕೆರೆದು ನ್ಯಾಯ ತೆಗೆಯುವ ಜನರು ಇದ್ದಾರೆ. ಇಂಥವರನ್ನು ಸಂಸ್ಕೃತ ಸೂಕ್ತಿ ಯೊಂದು “ಖಲಭುಜಂಗರು” ಅಂದರೆ ದುಷ್ಟಸರ್ಪಗಳು ಎಂದು ಕರೆಯುತ್ತದೆ. ವಿಷಜಂತುಗಳಿಗೆ ಯಾವುದೇ ದ್ವೇಷ ಭಾವನೆ ಇರುವುದಿಲ್ಲ. ಮನುಷ್ಯರಂತೆ ನಿಮ್ಮನ್ನು ಹುಡುಕಿಕೊಂಡು ಲಾಂಗು ಮಚ್ಚು ಹಿಡಿದು ಬರುವುದಿಲ್ಲ. ಹಾವು ಮತ್ತು ಚೇಳುಗಳ ಬಾಯಿ, ಬಾಲದಲ್ಲಿರುವ ವಿಷ ಆತ್ಮರಕ್ಷಣೆಗಾಗಿ ಇದೆಯೇ ವಿನಾ ದ್ವೇಷದಿಂದ ಇನ್ನೊಬ್ಬರನ್ನು ಸಾಯಿಸುವುದಕ್ಕಾಗಿ ಅಲ್ಲ.
ಈ ಪ್ರಪಂಚದಲ್ಲಿ ಅತ್ಯಂತ ಕ್ರೂರವಾದ ಪ್ರಾಣಿಯೆಂದರೆ “ಮನುಷ್ಯ”. ಅಡವಿಯಲ್ಲಿರುವ ಹುಲಿಯು ನಮ್ಮನ್ನು ಹುಡುಕಿಕೊಂಡು ಬಂದು ಹಲ್ಲೆ ಮಾಡುವುದಿಲ್ಲ. ಪಕ್ಕದಲ್ಲಿರುವ ಮಾನವನು ನಮ್ಮ ಪ್ರಾಣವನ್ನೇ ತಿನ್ನುತ್ತಾನೆ. ಎಂದು ನಮ್ಮ ಪರಮಾರಾಧ್ಯ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಒಂದೆಡೆ ಬರೆದಿದ್ದಾರೆ. ಮೈಸೂರಿನ ಬಂಡೀಪುರದಲ್ಲಿ ಕಾಡುಗಳ್ಳ ವೀರಪ್ಪನ್ ಇದ್ದ ಒಂದು ಅಭಯಾರಣ್ಯವಿದೆ. ವನ್ಯಜೀವಿಗಳನ್ನು ನೋಡಲು ಆ ದಟ್ಟಡವಿಯಲ್ಲಿ ಆನೆಗಳ ಮೇಲೆ ಸಫಾರಿ. ಪ್ರವಾಸಿಗರಿಗೆ ತುಂಬಾ ಆಕರ್ಷಣೆ. ಆ ಕಾಡಿನೊಳಗೊಂದು ಅಪರೂಪದ ವಸ್ತುಸಂಗ್ರಹಾಲಯವಿದೆ. ಪ್ರತಿಯೊಂದು ಕೊಠಡಿಯಲ್ಲೂ ಸತ್ತ ಹುಲಿ, ಸಿಂಹ, ಚಿರತೆ, ಕಾಡುಕೋಣ, ಜಿಂಕೆ ಇತ್ಯಾದಿ ಪ್ರಾಣಿಗಳ ನಿರ್ಜೀವ ಶರೀರಗಳನ್ನು ಜೀವಂತವಿರುವಂತೆ ಸಂರಕ್ಷಿಸಿ ಪ್ರದರ್ಶಿಸಲಾಗಿದೆ. ಅವುಗಳನ್ನು ಪ್ರವಾಸಿಗರು ನಿರ್ಭೀತರಾಗಿ ನೋಡಿ ಆನಂದಿಸುತ್ತಾ ಮುಂದೆ ಸಾಗಿದಾಗ Exit ಗೆ ಮುಂಚೆ ಒಂದು ಆಕರ್ಷಕವಾದ ಸೂಚನಾ ಫಲಕವಿದೆ. ಅದರಲ್ಲಿ ಹೀಗೆ ಬರೆಯಲಾಗಿದೆ: “Do you want to see the most cruel animal in this world? Please lift this curtain!" (ಈ ಪ್ರಪಂಚದಲ್ಲಿರುವ ಅತ್ಯಂತ ಕ್ರೂರವಾದ ಪ್ರಾಣಿಯನ್ನು ನೀವು ನೋಡಲು ಬಯಸುತ್ತೀರಾ? ದಯಮಾಡಿ ಈ ಪರದೆಯನ್ನು ಮೇಲೆತ್ತಿ). ಪ್ರವಾಸಿಗರು ಕುತೂಹಲದಿಂದ ಏನಿರಬಹುದೆಂದು ಪರದೆಯನ್ನು ಮೇಲೆತ್ತಿದರೆ ಅಲ್ಲಿ ಕಾಣಬರುವುದೇನು? ಆ ಪರದೆಯ ಹಿಂದೆ ಒಂದು ದೊಡ್ಡ ಕನ್ನಡಿ, ಅದರೊಳಗೆ ಪರದೆ ಮೇಲೆತ್ತಿದ ಪ್ರವಾಸಿಗನ ಮುಖ! ಕನ್ನಡಿ ಸಿಕ್ಕರೆ ಓರೆನೋಟ ಬೀರದವರಾರು? ಪಾಪ, ಆ ಕನ್ನಡಿ ಏನು ಪಾಪ ಮಾಡಿತ್ತೋ ಏನೋ, ಯಾರೂ ಅದನ್ನು ನೋಡಲು ಇಷ್ಟಪಡುವುದಿಲ್ಲ. ಅದನ್ನು ನೋಡಿದ ಪ್ರತಿಯೊಬ್ಬ ಪ್ರವಾಸಿಗ ಕೂಡಲೇ ಪರದೆಯನ್ನು ಕೆಳಕ್ಕೆ ತಳ್ಳಿ ಕನ್ನಡಿಯನ್ನು ನೋಡಿಯೂ ನೋಡದವನಂತೆ ನಟಿಸಿ ಪಕ್ಕದವರಿಗೆ ತನ್ನ ಮುಖ ಕಾಣಿಸಿಕೊಳ್ಳದಂತೆ ನಾಚಿಕೆಯಿಂದ ಮುಂದೆ ಸಾಗುವ ಆ ನೋಟ ತುಂಬಾ ಆಕರ್ಷಣೀಯ!
ಪ್ರಾಣಿಗಳಲ್ಲಿ ಕಂಡು ಬರುವ ಕ್ರೌರ್ಯ ಹೊಟ್ಟೆ ಹಸಿವಾದಾಗ ಅಥವಾ ಭಯ ಉಂಟಾದ ಸಂದರ್ಭಗಳಲ್ಲಿಯೇ ಹೊರತು ದ್ವೇಷದಿಂದ ಖಂಡಿತಾ ಅಲ್ಲ. ಯಾವ ಕ್ರೂರಪ್ರಾಣಿಯೂ ತನಗೆ ಆಗದವರ ವಿರುದ್ಧ ಸೇಡು ತೀರಿಸಿಕೊಳ್ಳುವ ದ್ವೇಷಭಾವನೆಯ ವಿಷಬೀಜವನ್ನು ತನ್ನ ಸಂತಾನದ ಮನಸ್ಸಿನಲ್ಲಿ ಬಿತ್ತುವುದಿಲ್ಲ. ತನ್ನ ಹಿಂಡನ್ನು ಎತ್ತಿ ಕಟ್ಟುವುದಿಲ್ಲ. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಈ ಕೆಳಗಿನ ಕವಿತೆಯನ್ನು ಗಮನಿಸಿ:
ಈಚೀಚೆಗೆ ನನಗೆ ಒಂದೊಂದು ಸಲ ಅನಿಸುತ್ತದೆ:
ಮನುಷ್ಯರಿಗಿಂತ ಪ್ರಾಣಿಗಳೇ ವಾಸಿ.
ನಾಯಿಗಳು ಮುಂದೆ ತಿಂದು ಹಿಂದೆ ಬೊಗಳುವುದಿಲ್ಲ.
ಹುಲಿಗಳು ಹೊಟ್ಟೆ ತುಂಬಿದ ಹೊತ್ತು
ಮತ್ತೊಂದಕ್ಕೆ ಬಾಯಿ ಹಾಕುವುದಿಲ್ಲ.
ಹಾವುಗಳು ರೇಗಿಸಿದಾಗ ಅಲ್ಲದೆ ಉಳಿದಂತೆ ಕಚ್ಚುವುದಿಲ್ಲ.
ಹಸುಗಳು ಯಾವ ಪ್ರತಿಷ್ಠೆಗೂ ಪರದಾಡುವುದಿಲ್ಲ
ಕತ್ತೆಗಳು ನೆನಪಿಟ್ಟುಕೊಂಡು ಒದೆಯುವುದಿಲ್ಲ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ.30-1-2025.