ಫೆಬ್ರವರಿ 12 ರ ಕೊನೆಯ ದಿನದಂದು ತರಳಬಾಳು ಹುಣ್ಣಿಮೆಯಲ್ಲಿ ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ

ಹುತಾತ್ಮ ಯೋಧರ ಸ್ಮರಣೆ
12-2-2025 ರಂದು 8-00 ಗಂಟೆಗೆ
ಪ್ರಾಣದ ಹಂಗು ತೊರೆದು, ಶತ್ರುಗಳೊಂದಿಗೆ ಹೋರಾಡಿ, ದೇಶವನ್ನು ರಕ್ಷಿಸಿ ಹುತಾತ್ಮರಾದ ವೀರ ಯೋಧರಿಗೆ ಗೌರವ ಸಲ್ಲಿಸುವುದರೊಂದಿಗೆ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಿಂದ ಹುತಾತ್ಮ ಯೋಧರ ಕುಟುಂಬವರ್ಗದವರಿಗೆ ತಲಾ ಒಂದು ಲಕ್ಷ ರೂಪಾಯಿಗಳ ಆರ್ಥಿಕ ನೆರವಿನ ಸಾಂತ್ವನ.
- ಅಂಕುಶ್ ಶರ್ಮ, ಜಮ್ಮು-ಕಾಶ್ಮೀರ
- ಗಾಡಗೆ ಶುಭಂ ಸಮಧಾನ್, ಸತಾರ್, ಮಹಾರಾಷ್ಟ್ರ
- ರಾಮಕೃಷ್ಣ, ಉತ್ತರ ಪ್ರದೇಶ
- ಮಹೇಶ್ ನಾಗಪ್ಪ ಮರಿಗೊಂಡಮಹಾಲಿಂಗಪುರ, ಬಾಗಲಕೋಟೆ
- ಸುಬೇದಾರ ದಯಾನಂದ ತಿರುಕಣ್ಣವರ, ಸಾಂಬ್ರ, ಬೆಳಗಾವಿ
- ಧರ್ಮರಾಜ ಖೋತಕುಪ್ಪನವಾಡಿ, ಚಿಕ್ಕೋಡಿ, ಬೆಳಗಾವಿ
- ಸುಂದರೇಶ್ ಎಲ್.ಬಿ, ಹಾಸನ
- ಮಹೇಶ್ ನಿಂ ವಾಲಿ, ಈರನಟ್ಟಿ, ಗೋಕಾಕ್, ಬೆಳಗಾವಿ
- ರವಿಕುಮಾರ್ ಕೆಳಗಿನಮನೆ, ರಟ್ಟಿಹಳ್ಳಿ, ಶಿವಮೊಗ್ಗ
ಹಳೇಬೀಡು ತರಳಬಾಳು ಹುಣ್ಣಿಮೆ ಕೊನೆಯ ದಿನ ಸಂಜೆಯ ಸಮಾರಂಭದಲ್ಲಿ ಮನಮಿಡಿಯುವ ಪ್ರಸಂಗ ವೊಂದಕ್ಕೆ ಜನರು ಸಾಕ್ಷಿಯಾದರು. ಅದು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮ ಯೋಧರ ಕುಟುಂಬದವರಿಗೆ ಆರ್ಥಿಕ ನೆರವನ್ನು ನೀಡಿ ಗೌರವ ಸಲ್ಲಿಸಿದ ಸಂದರ್ಭ. ಕರ್ನಾಟಕದಲ್ಲಿನ ಅಂತಹ ಹತ್ತಾರು ವೀರಯೋಧರ ಕುಟುಂಬದವರನ್ನು ಗುರುತಿಸಿ ಕರೆಸಿ ವೇದಿಕೆಯಲ್ಲಿ ಗೌರವಿಸಿ ತಲಾ 50,000 ರೂ.ಗಳ ನಿಧಿಯನ್ನು ಅರ್ಪಿಸಿದಾಗ ನಮ್ಮ ಕಣ್ಣಾಲಿಗಳು ತೇವಗೊಂಡಿದ್ದವು. ಅವರ ತ್ಯಾಗ ದೊಡ್ಡದು. ಯುವ ವಯಸ್ಸಿನಲ್ಲಿಯೇ ವಿಧವೆಯರಾದ ಆ ವೀರವನಿತೆಯರು ಕೈಯಲ್ಲಿ ಹಸುಗೂಸುಗಳನ್ನು ಹಿಡಿದುಕೊಂಡು ವೇದಿಕೆಯ ಮೇಲೆ ಕಾಣಿಸಿಕೊಂಡಾಗ ಸಭಿಕರ ಮುಖದಲ್ಲಿ ಕಣ್ಣೀರು ಜಿನುಗುತ್ತಿತ್ತು. ಕ್ಷಣಕಾಲ ಸಭೆ ಸ್ತಂಭೀಭೂತವಾಯಿತು. ಸಭಾಮಂಟಪದ ಒಳ ಹೊರಗೆ ಸೇರಿದ್ದ ಜನ ಸಾಗರ ಭಾವಪರವಶರಾಗಿ ಅವರ ಗೌರವಾರ್ಥ ತಮ್ಮ ಕೈಯಲ್ಲಿದ್ದ ಮೊಬೈಲುಗಳನ್ನು ಮೇಲೆ ಎತ್ತಿ ಹಿಡಿದು ಬೆಳಗಿಸಿದಾಗ ಹುತಾತ್ಮ ಯೋಧರ ಆತ್ಮಗಳ ಲಕ್ಷದೀಪೋತ್ಸವದಲ್ಲಿ ನೀರಾಜನಗಳು ಬೆಳಗಿದಂತೆ ಗೋಚರಿಸುತ್ತಿತ್ತು! ದೇಶವನ್ನು ಸೈನಿಕರು ಪ್ರಾಣದ ಹಂಗು ತೊರೆದು ಕಾಯುತ್ತಿರುವುದರಿಂದಲೇ ನಾಡಿನಲ್ಲಿ ನಾವು ನೆಮ್ಮದಿಯಿಂದ ಬದುಕುವುದು ಸಾಧ್ಯವಾಗಿದೆ ಎಂಬ ಕೃತಜ್ಞತೆಯ ಭಾವ ಸಭೆಯಲ್ಲಿ ಮಡುಗಟ್ಟಿತ್ತು! ವೇದಿಕೆಯ ಮೇಲಿದ್ದ ಯಡಿಯೂರಪ್ಪನವರೂ ಮನಕರಗಿ ಆ ದುಃಖತಪ್ತ ಕುಟುಂಬ ದವರನ್ನು ಹತ್ತಿರ ಕರೆದು ವಿಚಾರಿಸಿ ಸರಕಾರದಿಂದ ಸಾಧ್ಯವಾದ ಎಲ್ಲ ನೆರವನ್ನು ನೀಡಲು ಅಧಿಕಾರಿಗಳಿಗೆ ಆದೇಶಿಸಿದರು!
ವೀರಯೋಧರು ವೀರಸ್ವರ್ಗ ಪಡೆಯುತ್ತಾರೆಂಬುದು ವಾಡಿಕೆಯ ಮಾತು. ರಣರಂಗದಲ್ಲಿ ಜೀವದ ಹಂಗು ತೊರೆದು ಹೋರಾಡಿ ದೇಶದ ಜನರ ಹೃದಯವೆಂಬ ಸ್ವರ್ಗದಲ್ಲಿ ನೆಲೆಸುವ ನಿರ್ಮೋಹಿಗಳು ಅವರು. ಅಂತಹ ಯೋಧರ ಕುಟುಂಬಗಳು ನರಕಯಾತನೆ ಅನುಭವಿಸದಂತೆ ನೋಡಿಕೊಳ್ಳುವುದು ಸಮಾಜದ ಮತ್ತು ಸರಕಾರದ ಕರ್ತವ್ಯ. ಈ ಸಂದರ್ಭ ನಮಗೆ ನೆನಪಾಗುವುದು ನಮ್ಮ ಮಠದ ಶಿಷ್ಯರಾದ ಹರಿಹರ ತಾಲ್ಲೂಕಿನ ಹೊಳೆಸಿರಿಗೆರೆಯ ದಿ. ಕರ್ನಲ್ ರವೀಂದ್ರನಾಥ್ ಅವರು ನಿರೂಪಿಸಿದ ಒಂದು ಮನ ಮಿಡಿಯುವ ಪ್ರಸಂಗ.
ವೀರಚಕ್ರ ಗೌರವಕ್ಕೆ ಪಾತ್ರರಾಗಿದ್ದ ಕ.ರವೀಂದ್ರನಾಥರು ರಜಪೂತ ರೆಜಿಮೆಂಟೊಂದನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದರು. ಕಾರ್ಗಿಲ್ ಯುದ್ದದಲ್ಲಿ ದುರ್ಗಮ ಬೆಟ್ಟವನ್ನು ತೆವಳುತ್ತಾ ಮೇಲೇರುತ್ತಿದ್ದ ಸಂದರ್ಭ ಪಕ್ಕದಲ್ಲಿಯೇ ಇದ್ದ ಯೋಧನೊಬ್ಬ ಶತ್ರು ಸೈನ್ಯದ ಗುಂಡೇಟಿನಿಂದ ಕೊನೆಯುಸಿರೆಳೆದ. ಅವನನ್ನು ಬದುಕಿಸಲು ನಡೆಸಿದ ಪ್ರಯತ್ನದ ಸಂದರ್ಭದಲ್ಲಿ ಆತನ ಜೇಬಿನಲ್ಲಿ ಜತನವಾಗಿ ಕಾಪಾಡಿ ಇಟ್ಟು ಕೊಂಡಿದ್ದ ಒಂದು ಪತ್ರ ದೊರೆಯಿತು. ಮನೆಯನ್ನು ಬಿಟ್ಟು ಹೊರಡುವಾಗ ಆತನ ಹೆಂಡತಿ ಬರೆದು ಜೇಬಿನಲ್ಲಿಟ್ಟು ಕಳಿಸಿದ ಪತ್ರವದು. ಅದರ ಒಕ್ಕಣಿಕೆ ಹೀಗಿತ್ತು:
"ಅಗರ್ ದುಷ್ ಮನ್ ಕೀ ಗೋಲೀ ಖಾನಾ ಪಡೇತೋ ಛಾತಿ ಪರ್ ಖಾನಾ, ಪೀಠ್ ಪರ್ ಮತ್ ಖಾನಾ!" (ವೈರಿಯ ಗುಂಡು ತಾಗುವುದಾದರೆ ನಿನ್ನ ಎದೆಯನ್ನು ಒಡ್ಡು, ಬೆನ್ನನ್ನು ಒಡ್ಡಬೇಡ!).
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.