ತರಳರ ಬಾಳಿನ ಬೆಳಕು: ತರಳಬಾಳು ಹುಣ್ಣಿಮೆ

12ನೆಯ ಶತಮಾನದಲ್ಲಿ ಬೆಳಗಿದ ಕ್ರಾಂತಿ ಯೋಗಿ ಮರುಳಸಿದ್ಧರದು ಜನಮುಖಿ ನಡೆ. ಅವರು ಸರ್ವೋದಯದ ಹೊಂಗಿರಣ; ವೈಚಾರಿಕತೆಯ ಮುಂಗೋಳಿ. ಚಿನ್ಮೂಲಾದ್ರಿಯ ಗಿರಿಶ್ರೇಣಿಯಲಿ ತಪಗೈದ ಗುರು ರೇವಣಸಿದ್ಧರಿಂದ ದೀಕ್ಷಿತರಾದ ಅವರದು ಪ್ರಖರ ಸೂರ್ಯನ ಕಳೆ. ಕತ್ತಲೆ ಇರುವೆಡೆ ಬೆಳಕಿನ ಬೀಜ ಬಿತ್ತಬೇಕೆಂಬ ಸಂಕಲ್ಪ. ಮೌಢ್ಯ ತುಂಬಿರುವಲ್ಲಿ ಅರಿವಿನ ಜ್ಯೋತಿ ಬೆಳಗಿಸುವ ದೃಢತೆ. ಅದಕ್ಕೆ ಬತ್ತಿಯಾಗಿ ಉರಿದು ಬೆಳಗುವ ಹಣತೆಯೇ ಸದ್ಧರ್ಮ ಪೀಠ. ಈ ಪೀಠದಲ್ಲಿ ಆಸೀನರಾದ ಗುರು ಪರಂಪರೆಯ ದೃಷ್ಟಿ ಲೋಕ ಕಲ್ಯಾಣ. ''ಇವನಾರವ ಇವನಾರವ ಎಂದೆನ್ನದೆ, ಇವ ನಮ್ಮವ ಇವ ನಮ್ಮವ" ಎನ್ನುವ ಸಮತಾಭಾವ. ಸಕಲ ಜೀವಾತ್ಮಗಳಿಗೂ ಲೇಸ ಬಯಸುವ ವಿಶ್ವ ವಿಶಾಲ ಮನೋಭೂಮಿಕೆ. ಇಂತಹ ಉದಾತ್ತ ಚಿಂತನೆಗಳ ಪ್ರಕೋಷ್ಟವೆ “ತರಳಬಾಳು ಹುಣ್ಣಿಮೆ ಮಹೋತ್ಸವ”.
ಮಾಘ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ಆ ಬೆಳದಿಂಗಳು ಇತರೆ ಹುಣ್ಣಿಮೆಗಳಂತಲ್ಲ. ಶತಶತಮಾನಗಳಿಂದ ಹತಭಾಗ್ಯರಾದ ಸಮುದಾಯಕ್ಕೆ ಸ್ವಂತಿಕೆ, ಸ್ವಾಭಿಮಾನದವ ಓಕುಳಿ ಎರಚಿದ ಹುಣ್ಣಿಮೆ. ದಯೆ, ಸಮತೆ, ನಿಜಧರ್ಮ, ಕಾಯಕ ಪ್ರಜ್ಞೆ ಮೂಡಿಸಿದ ಪೂರ್ಣಿಮೆ. “ಲೋಕದ ತರಳರೆಲ್ಲರ ಬಾಳು ಬೆಳಗಲಿ” ಎಂಬ ಶುದ್ಧಾಂತಃಕರಣದ ಹಾರೈಕೆಯೇ “ತರಳಬಾಳು” ಪಂಚಾಕ್ಷರಿ. ಇದು ರೂಢಮೂಲ ಸಮಾಜಕ್ಕೆ ನವೋದಯದ ಕಿರಣಲೀಲೆಗಳನ್ನು ಮೂಡಿಸಿದ ಮಂತ್ರ. ಈ ಮಂತ್ರ ದ್ರಷ್ಟಾರ “ವಿಶ್ವಬಂಧು ಮರುಳಸಿದ್ಧ”ರ ಬಳುವಿಡಿದ ತರಳಬಾಳು ಗುರು ಪರಂಪರೆಯ ಸತ್ಸಂಕಲ್ಪವೇ ''ಹಸಿದವನಿಗೆ ಮೀನ ನೀಡುವ ಬದಲು, ಮೀನು ಹಿಡಿಯುವ ಕೌಶಲ್ಯ''ಕ್ಕೆ ಆದ್ಯತೆ. ಹಾಗಾಗಿ ಗ್ರಾಮಭಾರತದ ಉದ್ಧಾರದ ಮನೋಭಿತ್ತಿ. ಅದಕ್ಕಾಗಿ ಶಿಕ್ಷಣ, ಉದ್ಯೋಗ, ಕೃಷಿ ಮುಂತಾದ ಕ್ಷೇತ್ರಗಳಲ್ಲಿ ಸ್ಮರಣೀಯ ಹೆಜ್ಜೆ ಗುರುತುಗಳು. ಯೋಧ ಮತ್ತು ರೈತ ದೇಶದ ಎರಡು ಕಣ್ಣುಗಳು. ಅವರನ್ನು ಸಬಲಗೊಳಿಸುವಲ್ಲಿ ದಿಟ್ಟ ಹೆಜ್ಜೆ. ನೆರೆ, ಬರಗಳಂತಹ ನೈಸರ್ಗಿಕ ವಿಕೋಪಕ್ಕೆ ಮಾನವೀಯ ಮಿಡಿತ. ಕಲೆ-ವಿಜ್ಞಾನಗಳ ಒಡಗೂಡಿದ ಸಮಾಗಮ. ಪರಂಪರೆಯೊಂದಿಗೆ ಆಧುನಿಕತೆಯ ಸ್ಪರ್ಶ. ಇದುವೇ ಬಿಸಿಲಿನಲ್ಲೂ ಬೆಳದಿಂಗಳ ತಂಪೆರಚುವ ಈ ''ತರಳಬಾಳು ಹುಣ್ಣಿಮೆ ಮಹೋತ್ಸವದ ಪರಿ"
ತರಳಬಾಳು ಹುಣ್ಣಿಮೆ ಮಹೋತ್ಸವ-2025
ಭರಮಸಾಗರ : ಕೆರೆ ಅಂಗಳದಾಗ ನೀರು ಇದ್ರೆ ಮನಿ ಗಂಗಳದಾಗ ಮುದ್ದಿ ಇದ್ದಂಗ; ಕೆರೆಯಲ್ಲಿ ನೀರಿದ್ದರೆ ಊರಿಗೆಲ್ಲ ಕನಸು; ಕೆರೆ ಬೇರು; ಊರು ಫಲ-ಮುಂತಾದ ಗಾದೆ ಮಾತುಗಳು ಕೆರೆಯ ಮಹತ್ವವನ್ನು ಸೂಚಿಸುತ್ತವೆ. ಕೆರೆಗಳು ತುಂಬಿದ್ದರೆ ಊರು ಉಸಿರಾಡುತ್ತವೆ, ಊರು ಕಟ್ಟುವ ಮೊದಲು ಕೆರೆಕಟ್ಟು ಎಂಬ ಮಾತುಗಳು ಕೆರೆಗಳು ಗ್ರಾಮೀಣರ ಬದುಕಿನಲ್ಲಿ ಅವಿಭಾಜ್ಯ ಅಂವಾಗಿದ್ದವು ಎಂಬುದನ್ನು ತಿಳಿಸುತ್ತವೆ. ಹಿಂದೆ ರಾಜಮಹಾರಾಜರು, ಪಾಳೆಯಗಾರರು, ನಾಡಗೌಡ, ಊರಗೌಡ ಮುಂತಾದವರು ಕೆರೆಗಳನ್ನು ಕಟ್ಟಿಸುವುದರ ಮೂಲಕ ಜನೋಪಕಾರಿಗಳಾಗಿದ್ದರು.
ಕೆರೆಗಳ ಸುತ್ತ ಕಥೆ, ಕವಿತೆ, ಚರಿತೆ, ಹಾಡುಗಳಿವೆ. ತ್ಯಾಗ,ಬಲಿದಾನಗಳನ್ನು ಕುರಿತ ಐತಿಹ್ಯಗಳು, ನಂಬಿಕೆಗಳು, ಜಾನಪದ ಆಚರಣೆಗಳಿವೆ. ರೈತರ ಬದುಕು, ಪಶುಪಕ್ಷಿಗಳ ಜೀವನ, ಗಿಡಮರಗಳ ನಂಟು, ವಾಣಿಜ್ಯ ವ್ಯವಹಾರಗಳ ಸಂಬಂಧಗಳು ಈ ಕೆರೆಗಳನ್ನು ಅವಲಂಬಿಸಿವೆ.
ಆಧುನಿಕತೆ, ಸ್ವಾರ್ಥ, ದುರಾಸೆಗಳು ಎಲ್ಲಾ ರಂಗಗಳಲ್ಲೂ ಆವರಿಸಿದಂತೆ ನಮ್ಮ ಕೆರೆ ಸಂಸ್ಕೃತಿಯ ಮೇಲೂ ಆವರಿಸಿ, ಕೆರೆಗಳ ಕಣ್ಮರೆಗೆ ಕಾರಣವಾಗಿದೆ. ಕೆರೆಗಳ ನಾಶ ಗ್ರಾಮೀಣ ಬದುಕು, ಸಂಸ್ಕೃತಿ, ಪರಂಪರೆ, ನಂಬಿಕೆ, ಆಚರಣೆಗಳ ನಾಶಕ್ಕೂ ನಾಂದಿಯಾಗುತ್ತಿದೆ. ಇದನ್ನು ಮನಗಂಡ ಪರಮಪೂಜ್ಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕೆರೆಗಳ ಪುನರುಜ್ಜೀವನಕ್ಕೆ ಮುಂದಾದರು.
ಪ್ರತಿವರ್ಷ ಮಳೆಗಾಲದಲ್ಲಿ ನದಿಗಳ ಲಕ್ಷಾಂತರ ಕ್ಯೂಸೆಕ್ಸ್ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತದೆ. ಆ ನೀರನ್ನು ಸರಕಾರದ ನೆರವಿನಿಂದ ಏತ ನೀರಾವರಿ ಯೋಜನೆಯ ಮೂಲಕ ಬಯಲು ಸೀಮೆಯ ಕೆರೆಗಳಿಗೆ ತುಂಬಿಸುವ ಸಾಹಸದ ಕೆಲಸ ಪೂಜ್ಯರದು. ಈ. ಸಾಹಸದ ಕಾರ್ಯದಲ್ಲಿ ಉಬ್ರಾಣಿ, ಅಮೃತಾಪುರ, ರಾಜನಹಳ್ಳಿ, ರಣಗಟ್ಟ, ಜಗಳೂರು, ಭರಮಸಾಗರ, ಸಾಸ್ವೆಹಳ್ಳಿ, ಆಣೂರು ಮುಂತಾದ ಏತ ನೀರಾವರಿ ಯೋಜನೆಗಳು ಈಗಾಗಲೇ ಜಾರಿಯಲ್ಲಿವೆ. ಈ ಎಲ್ಲಾ ಕಡೆ ಸಮೀಪದ ನದಿಗಳಿಂದ ಹಲವು ಮೈಲುಗಳ ದೂರದಲ್ಲಿರುವ ನೂರಾರು ಕೆರೆಗಳಿಗೆ ನೀರು ತುಂಬಿಸುವುದರ ಮೂಲಕ ಪೂಜ್ಯರು “ಬಯಲು ಸೀಮೆಯ ಭಗೀರಥ” ಎಂಬ ಅಭಿಧಾನಕ್ಕೆ ಪಾತ್ರರಾಗಿದ್ದಾರೆ.
ಚಿತ್ರದುರ್ಗದ ಪಾಳೆಯಗಾರ ಭರಮಣ್ಣ ನಾಯಕ 1820ರಲ್ಲಿ ಕಟ್ಟಿಸಿದ ಭರಮಸಾಗರದ ಕೆರೆ ಸಾವಿರಾರು ಎಕರೆಗಳಷ್ಟು ವಿಸ್ತೀರ್ಣವುಳ್ಳ ಬೃಹತ್ ಕೆರೆ. ಆದರೆ ಕಾಲಕಾಲಕ್ಕೆ ಸಮರ್ಪಕ ಮಳೆಯಾಗದೆ ಕೆರೆಗೆ ನೀರು ಬರದೆ ದಶಕಗಳಿಗೊಮ್ಮೆ ತುಂಬಿದ್ದೆ ಹೆಚ್ಚು. ಹಾಗಾಗಿ ಈ ಒಣಭೂಮಿ ಪ್ರದೇಶವೆಲ್ಲಾ ಬರಡಾಗಿತ್ತು. ಪೂಜ್ಯರ ಸಂಕಲ್ಪಶಕ್ತಿಯಿಂದ 560ಕೋಟಿ ರೂಪಾಯಿಗಳ ವೆಚ್ಚದಲ್ಲಿ 55ಕಿ.ಮೀ. ದೂರದ ತುಂಗಭದ್ರಾ ನದಿಯಿಂದ ಈ ಕೆರೆಗೆ ನೀರನ್ನು ಹರಿಸಲಾಗುತ್ತಿದೆ. ಮತ್ತೆ ಈ ಕೆರೆಯಿಂದ ಸುತ್ತಮುತ್ತಲಿನ 43 ಕೆರೆಗಳಿಗೆ ಜಾಕವೆಲ್ ಮೂಲಕ ನೀರು ಹರಿಯುತ್ತಿದೆ. ಇದರಿಂದ ನೂರಾರು ಹಳ್ಳಿಗಳ ಲಕ್ಷಾಂತರ ಎಕ್ಕರೆ ಭೂಮಿ ಹಸಿರಿನಿಂದ ಕಂಗೊಳಿಸಲು ಸಾಧ್ಯವಾಗಿದೆ.
ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಭರಮಸಾಗರದಲ್ಲಿ ಏರ್ಪಾಟಾಗಿರುವ “ತರಳಬಾಳು ಹುಣ್ಣಿಮೆ ಮಹೋತ್ಸವ-2025” ರೈತರ ಬಾಳಿನಲ್ಲಿ ಭರವಸೆಯ ಬೆಳಕನ್ನು ಮೂಡಿಸುತ್ತಿರುವ ಬೆಳದಿಂಗಳೋತ್ಸವ.
- ನಾಗರಾಜ ಸಿರಿಗೆರೆ
ಕನ್ನಡ ಅಧ್ಯಾಪಕ
ಶ್ರೀ ಮರುಳಸಿದ್ದೇಶ್ವರ ಪ್ರೌಢಶಾಲೆ,
ಆನಗೋಡು, ದಾವಣಗೆರೆ