ವಿಜ್ಞಾನ, ತಂತ್ರಜ್ಞಾನ ಪ್ರಗತಿಯ ಪ್ರತೀಕ : ಶ್ರೀ ತರಳಬಾಳು ಜಗದ್ಗುರುಗಳವರು

  •  
  •  
  •  
  •  
  •    Views  

ಚಿತ್ರದುರ್ಗ: ಸಂಸ್ಕೃತಿ ಸಂಗಮ, ಸಾಮರಸ್ಯದ ಬೆಸುಗೆ, ಜಾತ್ಯತೀತ ನಿಲುವಿನ ಪ್ರತೀಕವಾಗಿ ತಾಲ್ಲೂಕಿನ ಭರಮಸಾಗರದಲ್ಲಿ “ತರಳಬಾಳು ಹುಣ್ಣಿಮೆ” ಮಹೋತ್ಸವ ಆರಂಭಗೊಂಡಿದೆ . ಸಿರಿಗೆರೆಯ ತರಳಬಾಳು ಬೃಹನ್ಮಠದ ಹಿರಿಯ ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರಿಂದ ಆರಂಭವಾದ ಪರಂಪರೆ ಸಮಕಾಲೀನ  ಸ್ವರೂಪದೊಂದಿಗೆ ಜನರ ಬಾಳ ಬೆಳದಿಂಗಳಾಗಿ ಮುನ್ನಡೆಯುತ್ತಿದೆ. 75ವರ್ಷಗಳಿಂದ ನಡೆದುಕೊಂಡು ಬಂದಿರುವ ಮಹೋತ್ಸವಕ್ಕೆ ಈಗಿನ ಗುರುಗಳಾದ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧ್ಯಕ್ಷರಾದ ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಭಿನ್ನ ನೆಲೆ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಆಧುನಿಕ ಕಾಲಘಟ್ಟಕ್ಕೆ ಅನುಗುಣವಾದ ಬದಲಾವಣೆಗಳೊಂದಿಗೆ ಹೆಜ್ಜೆ ಹಾಕುತ್ತಿರುವ ಶ್ರೀಗಳು ವೈಜ್ಞಾನಿಕ, ತಾಂತ್ರಿಕ ಚಿಂತನೆಗಳ ಬೀಜ ಬಿತ್ತಿದ್ದಾರೆ. ಶ್ರೀಗಳು ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಕಲೆ, ಸಾಹಿತ್ಯ, ಸಂಗೀತ, ಜನಪದ, ವಚನ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ದಾಸೋಹ, ಆರೋಗ್ಯ, ಕೃಷಿ ಎಲ್ಲವನ್ನೂ ಒಂದುಗೂಡಿಸಿ ಒಮ್ಮತದ ಸೂತ್ರ ಹಿಡಿದಿದ್ದಾರೆ. ಇಂತಹ ಹೊತ್ತಿನಲ್ಲಿ ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ “ಪ್ರಜಾವಾಣಿ” ಯೊಂದಿಗೆ ಮಾತನಾಡಿದ್ದಾರೆ . 

ತರಳಬಾಳು ಹುಣ್ಣಿಮೆ ಮಹೋತ್ಸವ ಎಷ್ಟರಮಟ್ಟಿಗೆ ಸಾರ್ವತ್ರಿಕವಾಗಿದೆ? 

ನಮ್ಮ ಹಿರಿಯ ಗುರುಗಳೇ ತರಳಬಾಳು ಹುಣ್ಣಿಮೆಗೆ ಸಾರ್ವತ್ರೀಕರಣದ ಅಡಿಪಾಯ ಹಾಕಿದ್ದಾರೆ. ಜಗಳೂರಿನ ಮೊದಲ ಮಹೋತ್ಸವದ ಸ್ವಾಗತ ಸಮಿತಿಗೆ ಇಮಾಮ್ ಸಾಹೇಬರು ಅಧ್ಯಕ್ಷರಾಗಿದ್ದರು. ಇದು ಸಾರ್ವತ್ರಿಕ, ಸಾಮರಸ್ಯದ ಪ್ರತೀಕ ಎನ್ನಲು ಇದಕ್ಕಿಂತ ಉದಾಹರಣೆ ಬೇಕೇ? ಸರ್ವರ ಸಂಗಮವೇ ತರಳಬಾಳು ಹುಣ್ಣಿಮೆ ಮಹೋತ್ಸವ. ಯುವಜನರು ಸಂಸ್ಕೃತಿ, ಸಂಪ್ರದಾಯ, ಪರಂಪರೆಯಿಂದ ವಿಮುಖರಾಗುತ್ತಿರುವ ಹೊತ್ತಿನಲ್ಲಿ ಇಂತಹ ಉತ್ಸವಗಳ ಮೂಲಕ ಹೊಸ ದಾರಿ ತೋರಿಸಬೇಕಾಗಿದೆ. 

ಪಲ್ಲಕ್ಕಿಯಲ್ಲಿ ಕೂರುವ ಬದಲು ಜನರ ಜೊತೆ ಹೆಜ್ಜೆ ಹಾಕಿದ್ದೀರಿ, ತೆಪ್ಪೋತ್ಸವದ ಬದಲು ದೋಣಿ ವಿಹಾರ ಮಾಡಿದ್ದೀರಿ. ಇದು ಹೇಗೆ ಸಾಧ್ಯವಾಯಿತು? 

ನಮ್ಮ ಹಿರಿಯ ಗುರುಗಳೇ  ಎಂದಿಗೂ ಅಡ್ಡ ಪಲ್ಲಕ್ಕಿ ಏರಿಲ್ಲ. ಬದಲಿಗೆ, ವಾಹನದ ಮೂಲಕ ಪಲ್ಲಕ್ಕಿ ನಡೆಸಿದ್ದಾರೆ. ಅಡ್ಡಪಲ್ಲಕ್ಕಿ, ತೆಪ್ಪೋತ್ಸವ ನಮ್ಮ ಪರಂಪರೆಯಲ್ಲಿ ಇಲ್ಲ. ಹುಣ್ಣಿಮೆ ಅಂಗವಾಗಿ ಭರಮಸಾಗರದ ಭರಮಣ್ಣನಾಯಕನ ಕೆರೆಯಲ್ಲಿ ದೋಣಿ ವಿಹಾರ ನಡೆಸಲಾಗುತ್ತಿದೆ. 9 ದಿನಗಳ ಕಾಲ ಜನರು ದೋಣಿ ವಿಹಾರ ಮಾಡಿ ಆನಂದಿಸಬೇಕು ಎಂಬುದು ನಮ್ಮ ಅಪೇಕ್ಷೆ. ಮುಂದಿನ ದಿನಗಳಲ್ಲಿ ಭರಮಸಾಗರವನ್ನು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಬೇಕು ಎಂಬ ಹಿರಿದಾಸೆ ನಮ್ಮದಾಗಿದೆ.

ರೈತರ ಪರ ನಿಲ್ಲುವ, ಕೆರೆ ತುಂಬಿಸುವ ಯೋಜನೆಗಳಿಗೆ ಸ್ಫೂರ್ತಿ ಏನು?  

ಇದೂ ಹೊಸದಲ್ಲ. ಬರಗಾಲ ಬಂದಾಗ ಊರೂರು ಸುತ್ತಿ ಮೇವು ಸಂಗ್ರಹಿಸಿ ರೈತರಿಗೆ ಕೊಟ್ಟ ಉದಾಹರಣೆಗಳಿವೆ. ಸಂಕಷ್ಟದಲ್ಲಿದ್ದ ಸಾರ್ವಜನಿಕರಿಗೆ ಮಠದಿಂದ ಗಂಜಿ ಕೇಂದ್ರ ತೆರೆದು ಸೇವೆ ಮಾಡಲಾಗಿದೆ. ಅದೇ ಪರಂಪರೆಯಲ್ಲಿ ನಾವೂ ಮುಂದುವರಿಯುತ್ತಿದ್ದೇವೆ. ರೈತರಿಗೆ ನೀರು ಕೊಟ್ಟರೆ ಆತ ಸಮಾಜಕ್ಕೆ ಅನ್ನ ಕೊಡುತ್ತಾನೆ. ಸರ್ಕಾರಗಳ ಬೆನ್ನತ್ತಿ ಕೆರೆ ತುಂಬಿಸಲು ಶ್ರಮಿಸಿದ್ದೇವೆ. ಅಷ್ಟೇ ಅಲ್ಲ, ರೈತರಿಗೆ ಬೆಳೆ ಪರಿಹಾರ ನೀಡಲು “ಭೂ ಪರಿಹಾರ” ಆ್ಯಪ್ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೇವೆ. ಜಮೀನಿನ ಪಹಣಿ, ಪಟ್ಟಾ, ಕಂದಾಯ ರಶೀದಿಗಳನ್ನೊಳಗೊಂಡ ಮಾಹಿತಿ ಈ ಆ್ಯಪ್ ನಲ್ಲಿ ದೊರೆಯಲಿದೆ. ಆ ಮೂಲಕ ರೈತರ ಖಾತೆಗಳಿಗೆ ನೇರವಾಗಿ ಪರಿಹಾರ ಹಣ ಬರಲು ಸಹಾಯಕವಾಗಿದೆ.

ವಿಜ್ಞಾನ, ತಂತ್ರಜ್ಞಾನ ಬಳಕೆಯಲ್ಲಿ ಮಾದರಿಯಾಗಲು ಹೇಗೆ ಸಾಧ್ಯವಾಯಿತು? ವಿಜ್ಞಾನ, ತಂತ್ರಜ್ಞಾನವನ್ನು ಸದುಪಯೋಗ ಮಾಡಿಕೊಂಡರೆ ಸಾಕಷ್ಟು ಅವಕಾಶ ಸೃಷ್ಟಿಯಾಗಲಿವೆ. ಪ್ರಗತಿಯ ಸಂಕೇತವಾಗಿ ನಾವು ತಂತ್ರಜ್ಞಾನವನ್ನು ಬಳಸಿಕೊಂಡಿದ್ದೇವೆ. ನಾವು ರೂಪಿಸಿದ “ಶಿವಶರಣರ ವಚನ ಸಂಪುಟ” ಆ್ಯಪ್ ಮೂಲಕ ಬಸವಾದಿ ಶರಣರ ವಚನಗಳನ್ನು ದೇಶ, ಭಾಷೆ ಮೀರಿ ಸಾಗುವಂತೆ ಮಾಡಲಾಗಿದೆ. ಅತ್ಯಮೂಲ್ಯವಾದ ತಾಳೆಗರಿ ಸಂಗ್ರಹವನ್ನು ತಂತ್ರಾಂಶಕ್ಕೆ ಅಳವಡಿಸಿ ಸಂರಕ್ಷಣೆ ಮಾಡಲಾಗಿದೆ.

ನಿಮ್ಮ ಜೊತೆ ಸಂಗೀತ ಸಾಂಗತ್ಯ ಬೆಳೆದು ಬಂದಿದ್ದು ಹೇಗೆ?

ಒಬ್ಬ ಭಿಕ್ಷುಕ ತೆಂಗಿನಕಾಯಿ ಕರಟದಿಂದ ಮಾಡಿದ್ದ ಪಿಟೀಲು ನುಡಿಸುವುದನ್ನು ಕೇಳಿ ನಾವು ಸ್ಪೂರ್ತಿಯಾಗಿದ್ದೆವು. ನಮ್ಮ ಪೂರ್ವಾಶ್ರಮದ ತಂದೆ ವಚನ ಗಾಯನ, ಹಾರ್ಮೋನಿಯಂ ನುಡಿಸುತ್ತಿದ್ದ ಕಾರಣ ಸಹಜವಾಗಿ ಸಂಗೀತದ ಮೇಲೆ ಪ್ರೀತಿ ಬಂದಿತ್ತು. ಸಂಗೀತ ಸದಾಕಾಲ ನಮ್ಮ ಚಟುವಟಿಕೆಗಳ ಭಾಗವಾಗಿರಲಿದೆ. ತರಳಬಾಳು ಹುಣ್ಣಿಮೆ ಸಮಾರಂಭದಲ್ಲಿ ನಾನು ಪಿಟೀಲು ನುಡಿಸುತ್ತಿದ್ದೇವೆ. ಇದರಿಂದ ಮಕ್ಕಳಿಗೆ, ಯುವಜನರಿಗೆ ಸ್ಫೂರ್ತಿಯಾಗುತ್ತದೆ ಎಂಬ ವಿಶ್ವಾಸವಿದೆ.

ಭಕ್ತರ ಪ್ರೀತಿಯೇ ನಮ್ಮ ಆಸ್ತಿ 

ನಿಮ್ಮ ವಿರುದ್ಧ ಅಪಪ್ರಚಾರ ನಡೆದಾಗಲೆಲ್ಲಾ ಭಕ್ತರು ನಿಮ್ಮಪರ ನಿಲ್ಲುತ್ತಾರೆ , ಇದು ಗುರು ಭಕ್ತಿಗೆ  ನಿದರ್ಶನವೇ? 

ನಾವು ಆಸ್ತಿಗಾಗಿ ಮಠಕ್ಕೆ ಬಂದವರಲ್ಲ, ಪ್ರೀತಿಗಾಗಿ ಬಂದವರು. ಶಿಷ್ಯ ವಾತ್ಸಲ್ಯವೇ ನಮ್ಮ  ಆಸ್ತಿ. ಹೆಜ್ಜೆಹಜ್ಜೆಗೂ ವಿಶ್ವಾಸರ್ಹತೆ ಕಾಯ್ದುಕೊಂಡು ನಡೆಯುತ್ತಿದ್ದೇವೆ. ಪ್ರತಿ ಕೆಲಸಗಳಿಗೆ, ಚಟುವಟಿಕೆಗಳಿಗೆ ಲೆಕ್ಕಪತ್ರ ಇಟ್ಟಿದ್ದೇವೆ, ಅವುಗಳನ್ನು ಮಠಕ್ಕೆ ಒಪ್ಪಿಸುತ್ತಲೇ ಬಂದಿದ್ದೇವೆ. ಆರೋಪ, ಟೀಕೆಗಳಿಗೆ ತಕ್ಕ ಉತ್ತರ ನೀಡಿದ್ದೇವೆ, ಭಕ್ತರು ಕೂಡ ಪ್ರತ್ಯುತ್ತರ ಕೊಟ್ಟಿದ್ದಾರೆ. ವಿದ್ರೋಹಿಗಳು ಎಲ್ಲಾ ಕಾಲದಲ್ಲೂ ಇದ್ದೇ ಇರುತ್ತಾರೆ, ಈಗಲೂ ಇದ್ದಾರೆ ಅಷ್ಟೇ.  

-ಎಂ.ಎನ್.ಯೋಗೇಶ್