•  
  •  
  •  
  •  
  •    Views  

ಬಿಚ್ಚುಗತ್ತಿ ಭರಮಣ್ಣ ನಾಯಕನಿಂದ 300 ವರ್ಷಗಳ ಹಿಂದೆ ನಿರ್ಮಾಣಗೊಂಡ ಒಂದು ಸಾವಿರ ಎಕರೆ ವಿಸ್ತೀರ್ಣದ ಭರಮಸಾಗರ ಕೆರೆ ಬರಿದಾಗಿ ಎಷ್ಟೋ ದಶಕಗಳಾಗಿದ್ದವು. ಖಾಯಂ ಬರಗಾಲ ಪ್ರದೇಶವಾಗಿದ್ದ ಈ ಭಾಗದಲ್ಲಿ ಭರಮಸಾಗರ ಮತ್ತು ಜಗಳೂರು ವ್ಯಾಪ್ತಿಯಲ್ಲಿ ಬರುವ ನೂರಾರು ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ಹರಿಯುವಂತೆ ನಾವು ಪ್ರಯತ್ನಿಸಿ ಸರ್ಕಾರದಿಂದ 1200 ಕೋಟಿ ರೂ. ಗಳನ್ನು ಮಂಜೂರು ಮಾಡಿಸಿದ್ದು ಮತ್ತು ಏತ ನೀರಾವರಿ ಯೋಜನೆಯನ್ನು ಎರಡೇ ವರ್ಷಗಳಲ್ಲಿ ಪೂರ್ಣಗೊಳ್ಳುವಂತೆ ಮಾಡಿ 56ಕಿ.ಮೀ. ದೂರದಲ್ಲಿರುವ ತುಂಗಭದ್ರೆಯು ಭರಮಸಾಗರ ಕೆರೆಗೆ ಧುಮ್ಮಿಕ್ಕುವಂತೆ ಮಾಡಿದ್ದು ಈ ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಕಳೆದ 9 ದಿನಗಳಿಂದ (ಫೆ.4-12) ಭರಮಸಾಗರದಲ್ಲಿ ನಡೆಯುತ್ತಿದ್ದ ನಮ್ಮ ಮಠದ ವಾರ್ಷಿಕ ಸಮಾರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವದ ಕಾರ್ಯಕ್ರಮಕ್ಕೆ ಪ್ರತಿದಿನ ಸಂಜೆ ಬರುತ್ತಿದ್ದ ಗಣ್ಯಮಾನ್ಯ ವ್ಯಕ್ತಿಗಳನ್ನು ಮತ್ತು ನಮ್ಮನ್ನು ನೂರಾರು ಜನ ಗ್ರಾಮೀಣ ಮಹಿಳೆಯರು ತಮ್ಮ ತಲೆಯ ಮೇಲೆ ಪೂರ್ಣಕುಂಭಗಳನ್ನು ಹೊತ್ತು, ಶಾಲಾ ಮಕ್ಕಳು ಮಿಲಿಟರಿ ಸಮವಸ್ತ್ರ ಧರಿಸಿ ಅತ್ಯಂತ ಶಿಸ್ತು, ಶ್ರದ್ಧಾ ಭಕ್ತಿಯಿಂದ ಬರಮಾಡಿಕೊಳ್ಳುತ್ತಿದ್ದರು. ಒಂದು ದಿನ ಕಾರ್ಯಕ್ರಮಕ್ಕೆ ಪೂರ್ಣಕುಂಭ ಸ್ವಾಗತದೊಂದಿಗೆ ಬರುತ್ತಿದ್ದಂತೆಯೇ ವೇದಿಕೆಯ ಮೇಲಿಂದ ನಮ್ಮ ಮಠದ ಶಾಲಾ ಮಕ್ಕಳು ಸುಶ್ರಾವ್ಯವಾಗಿ ಹಾಡುತ್ತಿದ್ದ “ಗುರುವೇ, ನಾನು ಒಂದು ಸೊನ್ನೆ! ಸೊನ್ನೆಗೇನು ಬೆಲೆ ಇದೆ?” ಎಂಬ ಹಾಡು ನಮ್ಮನ್ನೇ ಕುರಿತು ಪ್ರಶ್ನೆ ಮಾಡುತ್ತಿದ್ದಂತೆ ತೋರಿತು. 

 

ಹಾಡಿನ ಮುಂದಿನ ಪಂಕ್ತಿಯಲ್ಲಿ “ಸೊನ್ನೆ ಹಿಂದೆ ಇದ್ದರಂಕಿ ಸೊನ್ನೆಗಾಗ ಬೆಲೆಯಿದೆ” ಎಂದು ತಮ್ಮ ಪ್ರಶ್ನೆಗೆ ತಾವೇ ಉತ್ತರ ಕಂಡುಕೊಂಡಂತಿತ್ತು. ವೇದಿಕೆಯನ್ನೇರಿ ಎಲ್ಲರೂ ಆಸನಗಳಲ್ಲಿ ಕುಳಿತಾಗ “ಗುರುವೇ! ನೀವು ನನ್ನ ಹಿಂದೆ ಅಂಕಿಯಾಗಿ ಬನ್ನಿರಿ, ಸೊನ್ನೆಯಾದ ನನ್ನ ಬಾಳ್ಗೆ ಬೆಳಕ ತಂದು ತುಂಬಿರಿ!” ಎಂದು ಮುಂದುವರಿದ ಹಾಡು ಮುಂದೆ ನಮ್ಮಿಂದ ಅವರ ನಿರೀಕ್ಷೆ ಏನೆಂದು ಅಭಿವ್ಯಕ್ತಗೊಂಡಂತೆ ತೋರಿತು. ಮಕ್ಕಳ ಸಿರಿಕಂಠದಿಂದ ಪ್ರಶೋತ್ತರದಂತೆ ಸಂಗೀತ ನಾದಮಾಧುರ್ಯದಲ್ಲಿ ಕೇಳಿಬರುತ್ತಿದ್ದ ಈ ಹಾಡು ನಮ್ಮನ್ನು ಆಲೋಚನಾಪರರನ್ನಾಗಿ ಮಾಡಿತು.

ಆಗ ಶಾಲಾ ಮಕ್ಕಳಿಗೆ ನೀತಿಪಾಠ ಹೇಳುವ ಒಂದು ಸ್ವಾರಸ್ಯಕರ ವಿನೋದ ಕಥಾನಕ ನೆನಪಾಯಿತು. ಒಮ್ಮೆ 9ನೆಯ ಸಂಖ್ಯೆ 8ನೆಯ ಸಂಖ್ಯೆಯ ಕಪಾಳಕ್ಕೆ ಹೊಡೆಯಿತಂತೆ. ಏನೂ ತಪ್ಪು ಮಾಡದ ನನಗೇಕೆ ಹೊಡೆದೆ?” ಎಂದು 8ನೆಯ ಸಂಖ್ಯೆ ಧೈರ್ಯವಾಗಿ ಕೇಳಿತು. “ನಾನು ನಿನಗಿಂತ ದೊಡ್ಡವನು ಅದಕ್ಕೆ ಹೊಡೆದೆ” ಎಂದು 9ನೆಯ ಸಂಖ್ಯೆ ಜೋರು ಮಾಡಿತು. ಅದನ್ನೇ ಅನುಸರಿಸಿ 8ನೆಯ ಸಂಖ್ಯೆ 7ನೆಯ ಸಂಖ್ಯೆಯ ಕಪಾಳಕ್ಕೆ ಬಾರಿಸಿತು. ನಿರಪರಾಧಿಯಾದ 7ನೆಯ ಸಂಖ್ಯೆ ಕೇಳಿದ ಅದೇ ಪ್ರಶ್ನೆಗೆ 8ನೆಯ ಸಂಖ್ಯೆಯಿಂದ ಬಂದ ಗದರಿಕೆಯ ಉತ್ತರವೂ ಅದೇ ಆಗಿತ್ತು: “ನಾನು ನಿನಗಿಂತ ದೊಡ್ಡವನು ಅದಕ್ಕೆ”. ಹೀಗೆ 7ನೇ ಸಂಖ್ಯೆಯಿಂದ 1ನೇ ಸಂಖ್ಯೆಯವರೆಗೆ ಗದರಿಕೆಗಳ ಸರದಿ ಕಪಾಳಮೋಕ್ಷ ಮುಂದುವರಿದಿತ್ತು. ಆದರೆ 2ನೇ ಸಂಖ್ಯೆಯಿಂದ ಹೊಡೆಸಿಕೊಂಡ 1ನೇ ಸಂಖ್ಯೆ ಮಾತ್ರ ತನ್ನ ಸರದಿ ಬಂದಾಗ ಸೊನ್ನೆಗೆ ಹೊಡೆಯಲಿಲ್ಲ. ಭಯಗ್ರಸ್ತವಾಗಿದ್ದ ಸೊನ್ನೆಯನ್ನು ತನ್ನ ಬಲಭಾಗಕ್ಕೆ ಕೂರಿಸಿಕೊಂಡಿತು. ಇದರಿಂದ ಮೊದಲು ಹೊಡೆಯಲು ಆರಂಭಿಸಿದ್ದ 9ನೇ ಸಂಖ್ಯೆಗಿಂತ 1ನೇ ಸಂಖ್ಯೆಯು 10ನೆಯ ಸಂಖ್ಯೆಯಾಗಿ ದೊಡ್ಡ ಸಂಖ್ಯೆಯಾಗಿ ಬೆಳೆಯಿತು. ಜಗಳ ಮಾಡುವುದನ್ನು ಬಿಟ್ಟು ಪರಸ್ಪರ ಸಹಕಾರ ಸಹಬಾಳ್ವೆಯನ್ನು ಮೂಡಿಸುವ ಈ ನೀತಿಪಾಠದ ವಿನೋದ ಇಲ್ಲಿಗೇ ನಿಲ್ಲುತ್ತದೆ.

ಆದರೆ ಇಲ್ಲಿ ಒಂದು ಪ್ರಶ್ನೆ ಮೂಡುತ್ತದೆ. 1ನೇ ಸಂಖ್ಯೆಯು ಸೊನ್ನೆಯನ್ನು ಪಕ್ಕಕ್ಕೆ ಕೂರಿಸಿಕೊಂಡು ದೊಡ್ಡದಾದ 10ನೇ ಸಂಖ್ಯೆಯಾಗಿ ಬೆಳೆದದ್ದು ಮೊದಲು ಹೊಡೆಯಲು ಆರಂಭಿಸಿದ 9ನೇ ಸಂಖ್ಯೆಯನ್ನು ಹೊಡೆದು ಸೇಡು ತೀರಿಸಿಕೊಳ್ಳಲು ಮಾಡಿದ ಕುತಂತ್ರವೋ ಅಥವಾ ಅದನ್ನೂ ಸೊನ್ನೆಯಂತೆಯೇ ಪಕ್ಕಕ್ಕೆ ಕೂರಿಸಿಕೊಂಡು ಇನ್ನೂ ದೊಡ್ಡ ಸಂಖ್ಯೆಯಾಗಿ ಬೆಳೆಯಬೇಕೆಂಬ ಹಂಬಲವೋ? ಅಥವಾ ಬಲಭಾಗಕ್ಕೆ ಕೂರಿಸಿಕೊಳ್ಳುವ ಬದಲು ಎಡಭಾಗಕ್ಕೆ ಕೂರಿಸಿಕೊಂಡರೆ ಇನ್ನೂ ನೂರ್ಮಡಿಯಾಗಿ ಬೆಳೆಯಬಹುದೆಂಬ ಸ್ವಾರ್ಥದ ಲೆಕ್ಕಾಚಾರವೋ? ಮಕ್ಕಳ ಈ ನೀತಿ ಪಾಠದ ಮುಂದುವರಿದ ಅನುಸಂಧಾನ ಇಂದಿನ ರಾಜಕೀಯ ಸ್ಥಿತ್ಯಂತರಗಳನ್ನು ಪ್ರತಿಬಿಂಬಿಸುತ್ತದೆ. 

ಇಲ್ಲಿ ಇನ್ನೊಂದು ಮುಖ್ಯವಾದ ಪ್ರಶ್ನೆ ಉದ್ಭವಿಸುತ್ತದೆ: ಅದೇನೆಂದರೆ ಸೊನ್ನೆಗೆ ಸ್ವತಂತ್ರವಾಗಿ ಏನೂ ಬೆಲೆ ಇಲ್ಲವೇ? 

ಒಂದನೆಯ ಸಂಖ್ಯೆಯಿಂದ ಸೊನ್ನೆಗೆ ಬೆಲೆ ಬಂತೋ ಅಥವಾ ಸೊನ್ನೆಯಿಂದ ಒಂದನೆಯ ಸಂಖ್ಯೆಗೆ ಬೆಲೆ ಬಂತೋ? ಗಣಕಯಂತ್ರದ ತಂತ್ರಾಂಶದಲ್ಲಿರುವುದು ಸೊನ್ನೆ ಮತ್ತು ಒಂದು (01) ಮಾತ್ರ. ಉಳಿದ ಯಾವ ಅಂಕಿಗಳೂ ಇಲ್ಲ. ಇದಕ್ಕೆ Binary Language ಎಂದು ಕರೆಯುತ್ತಾರೆ. ಇಂಗ್ಲೀಷ್ ವರ್ಣಮಾಲೆಯಲ್ಲಿರುವ ಎಲ್ಲ ಅಕ್ಷರಗಳ Binary Code ಸೊನ್ನೆಯಿಂದಲೇ ಪ್ರಾರಂಭವಾಗುತ್ತವೆ. ಉದಾಹರಣೆಗೆ ಮೊದಲನೆಯ ಕ್ಯಾಪಿಟಲ್ “A” ಅಕ್ಷರದ Binary code = 01000001. ಎರಡನೆಯ ಕ್ಯಾಪಿಟಲ್ “B” ಅಕ್ಷರದ Binary code = 01000010 ಕೊನೆಯ ಕ್ಯಾಪಿಟಲ್ “Z” ಅಕ್ಷರದ Binary code = 01011010.

“ವಿಶ್ವಕ್ಕೆ ಭಾರತದ ಕೊಡುಗೆ ಸೊನ್ನೆ!” ಈ ಒಂದು ವಾಕ್ಯವನ್ನು ಜರ್ಮನಿಯ ಒಂದು ವಿಮಾನ ನಿಲ್ದಾಣದ ಗೋಡೆ ಬರಹದಲ್ಲಿ ನಾವು ಓದಿದ್ದ ನೆನಪು. ಈ ವಾಕ್ಯವು ಪರಸ್ಪರ ವಿರುದ್ಧವಾದ ಎರಡು ಅರ್ಥಗಳನ್ನು ಹೊಂದಿದೆ. ಇದರಲ್ಲಿರುವ ಸೊನ್ನೆ ಶಬ್ಧವನ್ನು ಹೇಗೆ ಉಚ್ಚಾರಣೆ ಮಾಡುತ್ತೀರಿ ಎಂಬುದರ ಮೇಲೆ ಇದರ ಅರ್ಥವ್ಯತ್ಯಾಸ ಉಂಟಾಗುತ್ತದೆ. ಇಲ್ಲಿ ಸೊನ್ನೆ ಎಂದರೆ ವಿಶ್ವಕ್ಕೆ ಭಾರತದ ಕೊಡುಗೆ ಏನೂ ಇಲ್ಲ ಎಂಬ ಅಪಾರ್ಥವಲ್ಲ. ಈ ಪದದ ಅರ್ಥವನ್ನು ಬೌದ್ಧರ “ಶೂನ್ಯವಾದ”ದ (Nihilism) ಅರ್ಥದಲ್ಲಿ ಗ್ರಹಿಸದೆ, ಶಿವಶರಣರ “ಶೂನ್ಯಸಂಪಾದನೆ”ಯ ಅರ್ಥದಲ್ಲಿ ಗ್ರಹಿಸಬೇಕು. “ಸೊನ್ನೆ”ಯ ಪರಿಕಲ್ಪನೆಯೇ ಭಾರತೀಯರು ವಿಶ್ವಕ್ಕೆ ಕೊಟ್ಟ ಅನೇಕ ಅಪರೂಪದ ಕೊಡುಗೆಗಳಲ್ಲಿ ಒಂದು. ಸಂಸ್ಕೃತದ “ಶೂನ್ಯ" ಶಬ್ದದ ತದ್ಭವವೇ “ಸೊನ್ನೆ”. ಸಂಸ್ಕೃತದಲ್ಲಿ ಇದರ ಸಂವಾದಿಯಾದ ಮತ್ತೊಂದು ಪದ “ಪೂರ್ಣ” ಅಥವಾ “ಪರಿಪೂರ್ಣ”. ಅಚ್ಚಗನ್ನಡದಲ್ಲಿ ಇದರ ಸಮಾನಾರ್ಥಕ ಪದ “ಬಯಲು”. ಅದು ನಿತ್ಯ ಮತ್ತು ಶಾಶ್ವತ. ಯಾವುದೇ ವಸ್ತುವಿರಲಿ ಅದಕ್ಕೆ ಆದಿ, ಮಧ್ಯ ಮತ್ತು ಅಂತ್ಯ ಎಂಬ ಮೂರು ಅವಸ್ಥೆಗಳಿರುತ್ತವೆ. ಈ ಸೃಷ್ಟಿಯ ಒಳ-ಹೊರಗೆ ಇರುವ ವಿಶ್ವಾತ್ಮ ಚೈತನ್ಯಕ್ಕೆ ಆದಿ ಮತ್ತು ಅಂತ್ಯ ಎಂಬುದಿಲ್ಲ. ಅದು ಅನಾದಿ, ಅನಂತ ಮತ್ತು ಪರಿಪೂರ್ಣ, ಅಲ್ಪಜ್ಞನಾದ ಮನುಷ್ಯ ಆ ಪರಿಪೂರ್ಣ ತತ್ತ್ವದ ಅರಿವನ್ನು ಪಡೆದು ಅದನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಜೀವನದ ಪರಮಗುರಿ. ಈ ಕೆಳಗಿನ ಶಾಂತಿಮಂತ್ರದಲ್ಲಿ ಈಶಾವಾಸ್ಯೋಪನಿಷತ್ತು ಆ ಪರಿಪೂರ್ಣತೆಯ ಸ್ವರೂಪವನ್ನು ವಿವರಿಸುತ್ತದೆ:

ಓಂ ಪೂರ್ಣಮದಃ ಪೂರ್ಣಮಿದಂ 
ಪೂರ್ಣಾತ್ ಪೂರ್ಣಮುದಚ್ಯತೇ | 
ಪೂರ್ಣಸ್ಯ ಪೂರ್ಣಮಾದಾಯ 
ಪೂರ್ಣಮೇವಾವಶಿಷ್ಯತೇ ||

ಈ ಮಂತ್ರದ ಆಶಯ ಇಂತಿದೆ: “ಅದೂ ಪೂರ್ಣ, ಇದೂ ಸಹ ಪೂರ್ಣ, ಪೂರ್ಣವಾದ ಕಾರಣ ಪೂರ್ಣ ಎನಿಸುತ್ತದೆ. ಪೂರ್ಣದಿಂದ ಪೂರ್ಣವನ್ನು ತೆಗೆದುಹಾಕಿದರೆ ಪೂರ್ಣವೇ ಉಳಿಯುತ್ತದೆ”. ಕಡಿಮೆ ಜಾಸ್ತಿಯಾಗಲು ಅವಕಾಶವಿಲ್ಲ. ಇಲ್ಲದಿದ್ದರೆ ಅದು ಪರಿಪೂರ್ಣ ಎನಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಮೇಲಿನ ಶಾಂತಿಮಂತ್ರದಲ್ಲಿ ಆಧ್ಯಾತ್ಮಿಕ ಸ್ತರದಲ್ಲಿರುವ ಪರಿಪೂರ್ಣತೆಯ ಪರಿಕಲ್ಪನೆ (Concept) ಅಂಕಗಣಿತದಲ್ಲಿ ಒಪ್ಪಿತವಾದ ಸೊನ್ನೆಯ ಪರಿಕಲ್ಪನೆಗೆ ಅನುಗುಣವಾಗಿಯೇ ಇವೆ. ಸೊನ್ನೆಗೆ ಸೊನ್ನೆಯನ್ನು ಸೇರಿಸಿದರೆ ಸೊನ್ನೆಯಾಗುತ್ತದೆ (0+0=0), ಸೊನ್ನೆಯಲ್ಲಿ ಸೊನ್ನೆಯನ್ನು ಕಳೆದರೆ ಸೊನ್ನೆ (0-0=0) ಉಳಿಯುತ್ತದೆ. ಸೊನ್ನೆಯಿಂದ ಸೊನ್ನೆಯನ್ನು ಗುಣಿಸಿದರೆ ಸೊನ್ನೆ (0x0=0) ಬರುತ್ತದೆ. ಸೊನ್ನೆಯಿಂದ ಸೊನ್ನೆಯನ್ನು ಭಾಗಿಸಿದರೆ ಸೊನ್ನೆ (0÷0=0) ದೊರೆಯುತ್ತದೆ. ಸೊನ್ನೆಗೆ ಒಂದು ಸ್ವತಂತ್ರ ಅಂಕಿಯಾಗಿ ವ್ಯವಹಾರದಲ್ಲಿ ಬೆಲೆ ಇಲ್ಲ, ಆದರೆ ಅದು ಆಧ್ಯಾತ್ಮಿಕ ಸ್ತರದಲ್ಲಿ ಮಹೋನ್ನತವಾದ ಸಾಂಕೇತಿಕ ಅರ್ಥವನ್ನು ಒಳಗೊಂಡಿದೆ. ಸೊನ್ನೆಯನ್ನು ಪೂಜಿ, ಪೂಜ್ಯ ಎಂದು ಕರೆಯುವುದೂ ವಾಡಿಕೆಯಲ್ಲಿದೆ. ಅಂತಹ ಪರಿಪೂರ್ಣತೆಯ ಸಿದ್ಧಿಯನ್ನು ಪಡೆದ ವ್ಯಕ್ತಿತ್ವ ಅನುಭಾವಿ ಅಲ್ಲಮನದಾಗಿತ್ತು ಎಂಬುದಕ್ಕೆ ಈ ಕೆಳಗಿನ ವಚನವೇ ಸಾಕ್ಷಿ, ಬದುಕಿನ ಎಲ್ಲ ಬಂಧನಗಳಿಂದ ಕಳಚಿಕೊಂಡು. ನೀನು-ನಾನೆಂಬ ಉಭಯಸಂಗವಳಿದು ತಾನು ತಾನಾದ ಅನುಭಾವವೆಂಬ ತ್ರಿಕೂಟಪರ್ವತದ ತುಟ್ಟತುದಿಯ ಮೆಟ್ಟಿ ನಿಂತ ಪ್ರಭು ಅಲ್ಲಮನ ದೃಷ್ಟಿಯ ಹರವು ಬ್ರಹ್ಮಾಂಡದಾಚೆಯ ಬಟ್ಟ ಬಯಲು, ವ್ಯೋಮಕಾಯ ಅವನದು! ಅದುವೇ ಪರಿಪೂರ್ಣವೆನಿಸಿದ ನಿರ್ವಯಲು. 

ಬಯಲು ಬಯಲನೆ ಬಿತ್ತಿ, ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ
ಬಯಲ ಜೀವನ ಬಯಲ ಭಾವನೆ....
ನಾ ನಿಮ್ಮ ಪೂಜಿಸಿ ಬಯಲಾದೆ ಗುಹೇಶ್ವರಾ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.13-2-2025.

Is zero worth nothing? The Significance of “Zero” in Spirituality and Mathematics The Bharamasagara Lake, which spans 1,000 acres and was built 300 years ago by Bichchugatti Bharamanna Nayaka, had remained dry for several decades. This region, which was a drought-prone area, has now been revitalized through efforts to bring water from the Tungabhadra River to hundreds of lakes in the Bharamasagara and Jagalur regions. The government approved ₹1,200 crore for this project, ensuring the completion of the lift irrigation scheme within two years. Now, water from the Tungabhadra River, 56 km away, is flowing into Bharamasagara Lake, bringing joy to the local farmers. For the past nine days (Feb. 4-12), the annual Taralabalu Hunime Mahotsava of our monastery was held in Bharamasagara. Every evening, distinguished guests attending the event, as well as us, were welcomed by hundreds of rural women carrying ceremonial water pots on their heads and schoolchildren dressed in military uniforms, marching with discipline and devotion. One evening, as we arrived at the event with this grand welcome, our monastery’s schoolchildren sang a melodious song from the stage: “Guru, I am just a zero! What value does a zero have?” It felt as though they were asking us this question directly. The next line of the song answered itself: “If a zero is placed behind a number, it gains value.” As everyone settled in their seats, the song continued: “Guru! Please stand behind me like a number, Bring light into my empty life!” The song, sung in their innocent yet powerful voices, resonated like a profound question-and-answer session, making us reflect deeply. At that moment, I remembered an interesting moral story to share with the children. One day, the number 9 hit the number 8 on the head. “Why did you hit me? I did nothing wrong!” asked 8. “I am bigger than you, that’s why!” replied 9 arrogantly. Following this logic, 8 hit 7, 7 hit 6, and this continued down to 2 hitting 1. However, when it was 1’s turn, instead of hitting zero, it placed zero beside it. As a result, 1 became 10—a number greater than 9. The moral of the story is clear: Instead of fighting, cooperation and mutual support lead to growth. But a deeper question arises: Did 1 place zero beside it to take revenge on 9? Or did it do so with the ambition of becoming an even bigger number? Or was it a selfish calculation that placing zero on the left would multiply its value even more? This reflection on the moral of the story mirrors the political dynamics of our time. Another crucial question emerges: Does zero have no value on its own? Did one gain value because of zero, or did zero gain value because of one? In computing, only zero and one (01) exist—no other digits. This is called Binary Language. Interestingly, in the English alphabet, every letter’s binary code begins with zero. For example: • The binary code for capital “A” is 01000001 • The binary code for capital “B” is 01000010 • The binary code for capital “Z” is 01011010 I once saw a quote at an airport in Germany that read: “India’s contribution to the world is zero!” This sentence carries two opposite meanings. The interpretation depends on how one reads the word “zero.” It does not mean that India contributed nothing to the world. Rather, one must understand “zero” not in the Buddhist sense of Nihilism but in the Shaiva tradition’s sense of Shunya Sampadane (attainment of the void). The very concept of “zero” is one of India’s greatest contributions to the world. The Sanskrit word “Shunya” evolved into the Kannada word “Sonne” (Zero). In Sanskrit, another synonym for Shunya is “Purna” (Complete, Full). In pure Kannada, the equivalent word is “Bayalu” (Void, Infinite Space). It is eternal and timeless. Every object has a beginning, middle, and end. But the universal consciousness that pervades existence has neither beginning nor end—it is infinite, eternal, and complete. For human beings, realizing this absolute completeness is the ultimate goal of life. This is beautifully expressed in the Isha Upanishad’s Shanti Mantra: Oṁ pūrṇam adaḥ pūrṇam idaṁ pūrṇāt pūrṇam udacyate | pūrṇasya pūrṇam ādāya pūrṇam evāvaśiṣyate || Its essence is: “That (the Absolute) is complete. This (the Universe) is also complete. From completeness comes completeness. Even when completeness is taken away, what remains is still complete.” This aligns with the mathematical concept of zero: • 0 + 0 = 0 • 0 - 0 = 0 • 0 × 0 = 0 • 0 ÷ 0 = 0 Though zero has no standalone value in calculations, at the spiritual level, it holds profound symbolic meaning. That is why zero is often called “Poojyam” (Worthy of Worship). The enlightened saint Allama Prabhu embodied this realization. His vachana (spiritual poem) expresses the boundless nature of existence: “Casting the seed of emptiness into the vast void, It grew and spread, merging into the infinite. This is the way of true life and thought… I worship you, O Guheshwara, And I have become one with the void!” — Sri Taralabalu Jagadguru Dr. Shivamurthy Shivacharya Mahaswamiji, Sirigere Published in Vijaya Karnataka “Bisilu Beladingalu” Column, Feb. 13, 2025