ಬೆಳ್ಳಿ ಪಲ್ಲಕ್ಕಿ ಉತ್ಸವ ಭಕ್ತರ ಭಕ್ತಿ ಮತ್ತು ಶ್ರದ್ದೆಯ ಪ್ರತೀಕ

ಬೆಳ್ಳಿಯ ಪಲ್ಲಕ್ಕಿ ಉತ್ಸವವು ಆಡಂಬರದ ಸಂಕೇತವಲ್ಲ, ಅದು ಭಕ್ತರ ಭಕ್ತಿಯ ಶ್ರದ್ಧೆಯ ಪ್ರತೀಕವಾಗಿದೆ ಎಂದು ಸಿರಿಗೆರೆ ತರಳಬಾಳು ಮಠದ ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹೇಳಿದರು. ತರಳಬಾಳು ಹುಣ್ಣಿಮೆ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಶ್ರೀಗಳು ಸಿಂಹಾಸನರೋಹಣ ಅಲಂಕರಿಸಿ ಆಶೀರ್ವಚನ ನೀಡಿ, ನಮ್ಮ ಮಠಕ್ಕೆ ಸಮಸ್ಯೆಗಳು, ಸಂಘರ್ಷಗಳು ಹೆಚ್ಚಾದರೆ ಗುರುಗಳ ರಕ್ಷಣೆ ಮಾಡುತ್ತೀರಿ ಎಂಬ ಧೈರ್ಯ ನಮಗೆ ಇದೆ. ಇದು ಭಕ್ತಿಯ ಭಾವದ ಸೆಲೆ. ಯಾವ ನಂಬಿಕೆಯಿಂದ ವ್ಯಕ್ತಿಗೆ ಅಥವಾ ಸಮಾಜಕ್ಕೆ ಹಾನಿ ಉಂಟಾಗುತ್ತದೆಯೋ ಅದನ್ನು ಖಂಡಿಸುವ ಅಧಿಕಾರ ಮನುಷ್ಯನಿಗೆ ಇದೆ. ಭಕ್ತರ ಭಕ್ತಿ, ಶ್ರದ್ದೆ ನಮ್ಮನ್ನು ಕಾಪಾಡುತ್ತಿದೆ. ಎಲ್ಲರೂ ತರಳಬಾಳು ಹುಣ್ಣಿಮೆಯ 9 ದಿನಗಳ ಕಾಲ ಉಪನ್ಯಾಸದಿಂದ ಪಡೆದ ಜ್ಞಾನವನ್ನು ಒಳ್ಳೆಯ ವಿಚಾರಗಳನ್ನು ಮೆಲುಕು ಹಾಕಿ ಎಂದರು. ಕೌಟುಂಬಿಕ ಜೀವನದಲ್ಲಿ ಸಂಬಂಧಗಳು ಬಹು ಮುಖ್ಯ. ಕುಟುಂಬ ಸದಸ್ಯರ ನಡುವೆ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳಿ. ಸಂಸಾರದಲ್ಲಿ ಗಾಢವಾದ ಪ್ರೀತಿ ಇಲ್ಲವಾದರೆ ಸಂಸಾರಿಕ ಜೀವನ ನರಕ ಸದೃಶ್ಯವಾಗುತ್ತದೆ. ನಮ್ಮಿಂದ ಎಷ್ಟೇ ಸಹಾಯ ಪಡೆದುಕೊಂಡರೂ ತಿರುಗಿ ಬಿದ್ದು, ನಿಮ್ಮ ವಿಶ್ವಾಸವನ್ನು ಕಳೆದುಕೊಳ್ಳುವ ಜನರಿದ್ದಾರೆ ಎಂದರು.
ಬೆಳ್ಳಿ ತೊಟ್ಟಿಲು
ಶಿಷ್ಯರ ಮನೆಯ ಪಾದಪೂಜೆಯೇ ಅಭ್ಯಂಜನವಾಯಿತ್ತು
ಬೆಳ್ಳಿ ಪಲ್ಲಕ್ಕಿಯೇ ತೊಟ್ಟಿಲಾಯಿತ್ತು!
ನಡುನೆತ್ತಿಯ ನೇಸರನ ಉರಿಬಿಸಿಲೇ ನಡುನಡುಗಿ ಬೆಳುದಿಂಗಳಾಯಿತ್ತು
ಹಿಡಿದ ಛತ್ರಿಚಾಮರ ಬಿರುದು ಬಾವಲಿ ಆಟಿಕೆಯಾಯಿತ್ತು
ಬೀಸುವ ಬಿಸಿಗಾಳಿ ಭಕ್ತಿಯ ನಿಃಶ್ವಸನದಲಿ ತಂಗಾಳಿಯಾಯಿತ್ತು
ಕುಣಿದು ಕುಪ್ಪಳಿಸಿದ ಶಿಷ್ಯರ ಕೂಗಾಟ ಆರ್ಭಟಗಳೇ ಝೇಂಕಾರವಾಯಿತ್ತು
“ಜೈ”ಕಾರದ ಜೋಗುಳದಲ್ಲಿ ಜೋಂಪು ಆವರಿಸಿತ್ತು!
ಮೆರವಣಿಗೆಯ ಬೀದಿಗಳಲ್ಲಿ ಭೋರ್ಗರೆದು ಉಕ್ಕಿ ಹರಿದಿತ್ತು ಭಕ್ತಿರಸಗಂಗೆ
“ನಾಡಿಗೆ ಬರ ಬಂದರೂ ಭಕ್ತರ ಭಕುತಿಗೆ ಬರ ಇಲ್ಲ”ವೆಂದು ಸಾರಿ ಸಾರಿ ಹೇಳಿತ್ತು!
ಓಣಿಯೊಂದರ ಕೋರೆದಾಡಿಯ ಶೂರ್ಪನಖಿ ಪೂತನಿ ಬಂದಳು
“ಯಾವ ಜಗತ್ತಿಗೆ ಜಗದ್ಗುರು”ವೆಂದು ಕಿವಿಯ ಹಿಂಡಿದಳು
ಸುಖನಿದ್ರೆಯಲಿದ್ದ ಹಸುಗೂಸು ಕಿಟಾರನೆ ಕಿರುಚಿತು
ಝಾಡಿಸಿ ಒದೆಯಿತು ಪೂತನಿಯ ಮುಖಕೆ ಬಾಸುಂಡೆ ಬರುವಂತೆ!
ಜನಸಾಗರದಲ್ಲಿ ಮಿಂದು ನಲಿದೆದ್ದ ಗಜಗಮನೆ ಗೌರಿ ಬಂದಳು.
ತರಳಬಾಳು ಮಠದ ಪಟ್ಟದಾನೆ ಗೌರಿ ಬಂದಳು
ಬೆಳ್ಳಿತೊಟ್ಟಿಲ ಕೂಸ ಮುತ್ತಿಟ್ಟು “ತರಳಬಾಳೆಂದು” ಕೆನ್ನೆ ಸವರಿದಳು
ಕಿಲಕಿಲನೆ ನಗುತಿದ್ದ ಹಸುಗೂಸನಾ ನಳಿನಾಕ್ಷಿ
ಮೇಲೆತ್ತಿ ಕೈಚೆಲ್ಲಿ ಬೀಳುತಲೆ ಬಿಗಿದಪ್ಪಿ ಮೈದಡವಿದಳು
ಇದ್ದರೂ ಇಲ್ಲದಂತಿದ್ದ ತಾಯಿಯೊಬ್ಬಳು ಇಲ್ಲವಾದರೇನಂತೆ
ಕೋಟಿ ಕೋಟಿ ತಾಯಂದಿರ ಅಕ್ಕರೆಯ ಕಂದಮ್ಮನಾದ ಪರಿಯ
ನೋಡಾ ಸದ್ಧರ್ಮ ಸಿಂಹಾಸನಾಧೀಶ್ವರಾ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು