ಕೃಷಿ ಸಂತ, ಕಾಯಕಯೋಗಿ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರು : ಬಿ. ವಾಮದೇವಪ್ಪ

  •  
  •  
  •  
  •  
  •    Views  

ಸಿರಿಗೆರೆ: ಕೃಷಿ ಸಂತರಾಗಿ, ಕೃಷಿ ತಜ್ಞರಾಗಿ ಕೃಷಿ ಜ್ಞಾನವನ್ನು ಧಾರೆಯರೆದು ಅವರ ಸತ್ಯ ಶುದ್ಧ ಕಾಯಕದಿಂದ ಶ್ರೀಮಠದ ಅಭಿವೃದ್ಧಿಗೆ ಕೈ ಜೋಡಿಸಿ ಕೃಷಿ ಕಾಯಕದಲ್ಲಿ ತೊಡಗಿರುವ ವಿರಳ ಸ್ವಾಮಿಗಳಲ್ಲಿ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಮೊದಲಿಗರು ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ವಾಮದೇವಪ್ಪ ಅಭಿಪ್ರಾಯಪಟ್ಟರು

ಇಲ್ಲಿನ ಅಣ್ಣನ ಬಳಗದವರು ಶ್ರೀ ಮಠದ ಐಕ್ಯಮಂಟಪದ ಆವರಣದಲ್ಲಿ ಏರ್ಪಡಿಸಿದ್ದ ಕಾಯಕಯೋಗಿ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ 17 ನೆಯ ಶ್ರದ್ಧಾಂಜಲಿಯ ಮುಖ್ಯ ಅತಿಥಿಗಳಾಗಿ ಉಪನ್ಯಾಸ ನೀಡಿದರು.

“ಬೆಳೆಯುವ ಸಸಿ ಮೊಳಕೆಯಲ್ಲಿ ನೋಡು” ಎಂಬಂತೆ ಬಾಲ್ಯದಲ್ಲಿಯೇ ಚುರುಕಾದ ಜಾಣ್ಮೆಯ ಲಕ್ಷಣಗಳನ್ನು ಹೊಂದಿದ್ದರು. ಪೂಜ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರಿಂದ ವಟುವಾಗಿ ಆಯ್ಕೆಯಾದರು. ಶ್ರೀ ಮಲ್ಲಿಕಾರ್ಜುನ ಎಂಬ ಅಭಿದಾನ ಪಡೆದು ಬೀರೂರು, ಕಾಶಿಗಳಲ್ಲಿ ಚೆನ್ನಬಸವರಾಧ್ಯರು, ಮಹಾದೇವ ಶಾಸ್ತ್ರಿಗಳು ಮತ್ತು ಗೌರೀನಾಥ ಪಾಠಕ್ರವರಿಂದ ಸಂಸ್ಕೃತ, ವೇದ, ಮತ್ತು ಜೋತಿಷ್ಯ ಶಾಸ್ತ್ರಗಳನ್ನು ಕರತಲಾಮಲಕ ಮಾಡಿಕೊಂಡು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಾದದಿಂದ ಸಿರಿಗೆರೆಯ ಬೃಹನ್ಮಠಕ್ಕೆ 23-6-1945 ರಂದು “ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳೆಂಬ” ಹೆಸರಿನಿಂದ ಚರಪಟ್ಟಾಧ್ಯಕ್ಷರಾದರು. ಸಮಾಜದ ಸಮಷ್ಟಿಯ ಹಿತಕ್ಕಾಗಿ ದುಡಿದು ಜನ ಮಾನಸದಲ್ಲಿ ಶಾಶ್ವತವಾಗಿ ಉಳಿದು ಅಮರರೆನಿಸಿದ ಮೆದು ಮಾತಿನ, ಮೃದು ಹೃದಯದ ಶ್ರೀಗಳವರು.

56ವರ್ಷಗಳ ಕಾಲ ಸುಧೀರ್ಘವಾಗಿ ಪೀಠವನ್ನು ನೆನಪಾಗಿಸಿಕೊಂಡು ಜಂಗಮ ಸ್ವರೂಪಿಗಳಾಗಿ ಶರಣ ತತ್ವಗಳಿಗನುಗುಣವಾಗಿ ಸಕಲರ ಕ್ಷೇಮಕ್ಕೆ ಅಹರ್ನಿಶಿ ಶ್ರಮಿಸಿ ಸಿರಿಗೆರೆಯ ಬೃಹನ್ಮಠದ ಮೂರು ತಲೆಮಾರುಗಳ ಪರಂಪರೆಗೆ ಸಾಕ್ಷೀಭೂತರಾಗಿದ್ದಾರೆ. ತಮ್ಮನ್ನು ಚರಪಟ್ಟಾಧ್ಯಕ್ಷರನ್ನಾಗಿ ಸಮಾಜ ಸೇವೆಗೆ ಅಣಿಗೊಳಿಸಿದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ತಾಯ್ತನದ ಹೃದಯಕ್ಕೆ ಸದಾ ಕೃತಜ್ಞತೆ ಸಲ್ಲಿಸುವ ಪೂಜ್ಯರಾಗಿದ್ದರು ಎಂದರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಣ್ಣನ ಬಳಗದ ಅಧ್ಯಕ್ಷರಾದ ಬಿ. ಎಸ್. ಮರುಳಸಿದ್ದಯ್ಯ ವಿದ್ಯಾರ್ಥಿಗಳಾದ ನೀವು ಮಲ್ಲಿಕಾರ್ಜುನ ಶ್ರೀಗಳ ಕಾಯಕ ತತ್ವವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೃಷಿ ಕೇತ್ರದಲ್ಲಿ ಕೆಲಸ ಮಾಡಲು ಇಂದಿನ ಯುವ ಪೀಳಿಗೆಗೆ ಮಲ್ಲಿಕಾರ್ಜುನ ಶ್ರೀಗಳು ಸ್ಪೂರ್ತಿ ಹಾಗೂ ಮಾದರಿಯಾಗಿದ್ದಾರೆ. ಭವಿಷ್ಯದಲ್ಲಿ ಕೃಷಿ ಕೇತ್ರ ದೇಶಕ್ಕೆ ಬಹುದೊಡ್ಡ ಪ್ರಮಾಣದಲ್ಲಿ ಆದಾಯವನ್ನು ತಂದುಕೊಡುವ ಕ್ಷೇತ್ರವಾಗಲಿದೆ. “ನಿಮ್ಮ ಕಾಯಕ ಅದ್ಯಯನ” ಆದ್ದರಿಂದ ಶ್ರದ್ಧೆಯಿಂದ, ಸತತ ಪರಿಶ್ರಮಪಟ್ಟು ಹೆಚ್ಚು ಅಂಕಗಳನ್ನು ಗಳಿಸಿ ದೇಶಕ್ಕೆ ಸೇವೆ ಸಲ್ಲಿಸುವ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು ಎಂದರು.

ಈ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಜಗದೀಶ್ ಕೂಲಂಬಿ, ಅಣ್ಣನ ಬಳಗದ ಪ್ರಕಾಶ್ ಬಣಕಾರ, ವಿ.ವಿಜಯಾಚಾರಿ, ಯು.ಚಂದ್ರಪ್ಪ, ಎ.ಆರ್.ತಿಪ್ಪೇಸ್ವಾಮಿ, ಬಿ.ಎಸ್. ಅರುಣ ಕುಮಾರ, ವಸತಿ ನಿಲಯದ ಶಿಕ್ಷಕರಾದ ಎಂ.ಎಸ್. ಪ್ರಭು, ಗಿರೀಶ್, ಪವನ್, ಶ್ರೀನಿವಾಸ್, ಹೇಮಂತ್ ನವೀನ್ ಆಶಾ, ನಿರ್ಮಲ, ರೋಹಿಣಿ ಮತ್ತಿತರರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಸದಸ್ಯರಾದ ಬಸಮ್ಮ ಬಣಕಾರ್ ಮತ್ತು ಸಂಗಡಿಗರು ವಚನಗೀತೆ ಕಾರ್ಯಕ್ರಮ ನಡೆಸಿಕೊಟ್ಟರು. ಪಿ.ಎಸ್. ಕಾವ್ಯ ಸ್ವಾಗತಿಸಿದರು. ಎಂ.ಎಸ್. ಸೃಷ್ಠಿ ವಂದಿಸಿದರು. ಎಂ. ನಾಗವೇಣಿ ನಿರೂಪಣೆ ಮಾಡಿದರು.