ಪ್ರಬುದ್ಧ ಓದುಗರೊಂದಿಗೆ ಶಿವರಾತ್ರಿಯ ಸುಮಧುರ ಸಲ್ಲಾಪ
My Column “Bisilu Beladingalu: A 17-Year Journey

ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಸೂರ್ಯ-ಚಂದ್ರರು ಇದ್ದೇ ಇರುತ್ತಾರೆ. ಒಂದು ದೇಶವನ್ನು ಬಿಟ್ಟು ಮತ್ತೊಂದು ದೇಶಕ್ಕೆ ಹೋದ ಮಾತ್ರಕ್ಕೆ ಸೂರ್ಯ-ಚಂದ್ರರು ಕಣ್ಮರೆಯಾಗುವುದಿಲ್ಲ. ಹಾಗೆಯೇ ಪ್ರಪಂಚದ ಯಾವುದೇ ಸ್ಥಳಕ್ಕೆ ಪ್ರಯಾಣಿಸಿದರೂ ಅಲ್ಲಿಂದಲೇ ಸೂರ್ಯನ ಪ್ರಖರವಾದ ಬಿಸಿಲು ಮತ್ತು ಚಂದ್ರನ ತಂಪನೆಯ ಬೆಳದಿಂಗಳನ್ನು ಆಧರಿಸಿ ನಮ್ಮ ಲೋಕಾನುಭವವನ್ನು ಓದುಗರೊಂದಿಗೆ ಹಂಚಿಕೊಳ್ಳಲು ತಪ್ಪದೆ 2008 ಫೆಬ್ರವರಿ 27 ರಿಂದ ನಿರಂತರವಾಗಿ ಬರೆಯುತ್ತಾ ಬಂದಿರುವ ನಮ್ಮ ಈ “ಬಿಸಿಲು ಬೆಳದಿಂಗಳು” ಅಂಕಣ ಬರಹಕ್ಕೆ ಇಂದಿಗೆ ಸರಿಯಾಗಿ 17 ವರ್ಷಗಳು ಸಂದಿವೆ.
ಸೂರ್ಯ-ಚಂದ್ರರು ನೆತ್ತಿಯ ಮೇಲೆಯೇ ಇದ್ದರೂ ನಿತ್ಯ ಜೀವನದ ಜಂಜಾಟದಲ್ಲಿ ನೋಡದೇ ಇರಬಹುದು. ಆದರೆ ಪ್ರಬುದ್ಧ ಓದುಗರು ನಮ್ಮ ಈ ಅಂಕಣ ಬರಹವನ್ನು ತಪ್ಪದೇ ಓದುತ್ತಾ ಬಂದಿದ್ದಾರೆಂಬುದಕ್ಕೆ ನಾವು ಪ್ರಯಾಣಿಸುವಾಗ ಆಕಸ್ಮಿಕವಾಗಿ ವಿಮಾನ ನಿಲ್ದಾಣದಲ್ಲೋ, ಯಾವುದೋ ಸಮಾರಂಭದಲ್ಲೋ ನಮ್ಮನ್ನು ಗುರುತಿಸಿ ಹತ್ತಿರ ಬಂದು ಭಕ್ತಿಭಾವಗಳಿಂದ ನಮಸ್ಕರಿಸಿ ತಮ್ಮ ಪರಿಚಯ ಮಾಡಿಕೊಳ್ಳುವ ಅನೇಕ ಅಜ್ಞಾತ ಓದುಗರೇ ಸಾಕ್ಷಿ.
ಅಂತಹ ಒಂದು ಪ್ರಸಂಗ ಇತ್ತೀಚೆಗೆ ಘಟಿಸಿತು. ಕಳೆದ ಡಿಸೆಂಬರ್ ತಿಂಗಳ ಕೊನೆಯಲ್ಲಿ ಮುಂಬೈಗೆ ಪ್ರಯಾಣಿಸಲು ಬೆಂಗಳೂರಿನ ವಿಮಾನ ನಿಲ್ದಾಣದ departure lounge ನಲ್ಲಿ ವಿಮಾನವನ್ನೇರುವಾಗ ಸರತಿಯಲ್ಲಿ ನಮ್ಮ ಮುಂದೆ ನಿಂತಿದ್ದ ಅಜ್ಞಾತ ಪ್ರಯಾಣಿಕರೊಬ್ಬರು ನಮ್ಮತ್ತ ತಿರುಗಿ ನೋಡಿ ಧಾವಿಸಿ ಬಂದು ಅಭಿವಂದಿಸಿದರು. ಅವರೊಬ್ಬರು Union Bank of India ದ ಉನ್ನತ ಅಧಿಕಾರಿಗಳು. ತುಂಬಾ ಭಾವುಕರಾಗಿ “ನನ್ನ ಹೆಸರು ಟಿ.ಎನ್. ನರಸಿಂಹಮೂರ್ತಿ. ತಮ್ಮ ಅಂಕಣವನ್ನು ನಾನು ಅನೇಕ ವರ್ಷಗಳಿಂದ ತಪ್ಪದೆ ಓದುತ್ತಿದ್ದೇನೆ. ನನ್ನ ಹೆಂಡತಿ ಮತ್ತು ಮಕ್ಕಳಿಗೆ ಕನ್ನಡ ಓದಲು ಬರುವುದಿಲ್ಲ. ಆದರೆ ಅರ್ಥವಾಗುತ್ತದೆ. ಗುರುವಾರ ಪತ್ರಿಕೆಯಲ್ಲಿ ತಮ್ಮ ಅಂಕಣ ಪ್ರಕಟವಾದ ದಿನವೇ ಬೆಳಗಿನ ಉಪಾಹಾರದ ಸಂದರ್ಭದಲ್ಲಿ ಅವರನ್ನು ಡೈನಿಂಗ್ ಟೇಬಲ್ ಸುತ್ತ ಕೂರಿಸಿಕೊಂಡು ಓದಿ ಹೇಳಿ ಸಂಭ್ರಮಿಸುತ್ತೇನೆ. ಅವರೂ ಕೇಳಿ ಖುಷಿಪಡುತ್ತಾರೆ” ಎಂದು ಹೇಳಿದರು. ಇಂತಹ ಅಜ್ಞಾತ ಓದುಗರೇ ನಮ್ಮ ಈ ಅಂಕಣ ಬರಹಕ್ಕೆ ಸ್ಫೂರ್ತಿಯ ಸೆಲೆ ಮತ್ತು ಪ್ರೇರಣೆ! ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು “ಎದೆ ತುಂಬಿ ಹಾಡಿದೆನು ಅಂದು ನಾನು” ಎಂಬ ತಮ್ಮ ಕವಿತೆಯಲ್ಲಿ “ಮನವಿಟ್ಟು ಕೇಳಿದಿರಿ ಅಲ್ಲಿ ನೀವು” ಎಂದು ಕವಿತಾ ರಚನೆಗೆ ಪ್ರೋತ್ಸಾಹಿಸಿದ ತಮ್ಮ ಗುರುಗಳಾದ ತ.ಸು.ಶಾಮರಾಯರನ್ನು ಸ್ಮರಿಸುತ್ತಾರೆ. ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಆರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ” ಎಂದು ಒಂದೆಡೆ ಮೂಗುಮುರಿದರೂ ಮುಂದುವರಿದು “ಕೇಳುವವರಿಹರೆಂದು ನಾ ಬಲ್ಲೆ, ಅದರಿಂದ ಹಾಡುವೆನು ಮೈದುಂಬಿ ಎಂದಿನಂತೆ” ಎಂದು ಅವರೇ ಹೇಳುತ್ತಾರೆ. ಹಾಗೆಯೇ ನಮಗೆ ಮಠದ ಮತ್ತು ನೂರಾರು ಶಾಲಾಕಾಲೇಜುಗಳ ಕಾರ್ಯನಿರ್ವಹಣೆಯ ಒತ್ತಡ ಇದ್ದರೂ, ನಮ್ಮ ಅಂಕಣ ಬರಹಕ್ಕೆ ಇಂತಹ ಪ್ರಬುದ್ಧ ಓದುಗರು ಇದ್ದಾರೆ, ಓದಿ ಸಂಭ್ರಮಿಸುತ್ತಾರೆ, ಖುಷಿಪಡುತ್ತಾರೆ” ಎಂದೇ ನಿದ್ದೆಗೆಟ್ಟಾದರೂ ಬರೆಯುತ್ತಾ ಬಂದಿದ್ದೇವೆ. ನಮ್ಮ ಚಿಂತನೆಗೆ ಜಿಡ್ಡುಗಟ್ಟದಂತೆ ಬರೆಸುತ್ತಿರುವ ಇಂತಹ ಅಜ್ಞಾತ ಓದುಗರಿಗೆ ಮತ್ತು ಪ್ರಕಟಿಸುತ್ತಿರುವ “ವಿಜಯಕರ್ನಾಟಕ” ಪತ್ರಿಕೆಗೆ ಕೃತಜ್ಞತೆಗಳು.
ಈ ಅಂಕಣ ಬರಹದ ಆರಂಭಿಕ ವರ್ಷವಾದ 2008 ರ ಎರಡನೆಯ ಅಂಕಣ ಬರಹದ ಶೀರ್ಷಿಕೆಯೇ “ಶಿವರಾತ್ರಿಯು ಸಿನಿಮಾ ರಾತ್ರಿ ಆಗದಿರಲಿ!”. ನಿನ್ನೆ ಶಿವರಾತ್ರಿ. ಇಂದು ನಿದ್ರೆಗಣ್ಣಿನ ಹಗಲು. ಜಾಗರಣೆ ಮಾಡಿದವರಿಗೆ ಮಾತ್ರ! ಆದರೆ ಜಾಗರಣೆ ಮಾಡಿದ್ದು ಹೇಗೆ? ಎಂದು ಆತ್ಮನಿರೀಕ್ಷಣೆ ಮಾಡಿಕೊಳ್ಳುವುದು ಒಳ್ಳೆಯದು. “ಶಿವರಾತ್ರಿ”ಯಂದು ಮಾಡುವ ಜಾಗರಣೆ ಮತ್ತು ಉಪವಾಸದ ಹಿಂದಿನ ಮೂಲ ಆಶಯ ಮನುಷ್ಯ ವರ್ಷಕ್ಕೊಮ್ಮೆಯಾದರೂ ಸಾಂಸಾರಿಕ ಜೀವನದ ಜಂಜಾಟವನ್ನು ಮರೆತು ಶಿವನನ್ನು ಆರಾಧಿಸಿ ಶರೀರದ ಹಸಿವು-ತೃಷೆಗಳನ್ನು ಮೆಟ್ಟಿ ನಿಂತು ತನ್ನೊಳಗೆ ಅಡಗಿರುವ ಆತ್ಮದ ಅರಿವನ್ನು ಪಡೆಯಲಿ; ಆಧ್ಯಾತ್ಮಿಕ ಹಸಿವು-ತೃಷೆಗಳ ಕಡೆ ಗಮನ ಹರಿಸಲಿ ಎಂಬುದಾಗಿದೆ. ಎಲ್ಲ ಧರ್ಮಗಳಲ್ಲಿಯೂ ಈ ತೆರನಾದ ಉಪವಾಸ, ಜಾಗರಣೆಗಳು ವಿಭಿನ್ನ ರೀತಿಯಲ್ಲಿ ಇವೆ. “ಶಿವರಾತ್ರಿ” ವರ್ಷಕ್ಕೊಮ್ಮೆ ಆಚರಿಸುವ ಒಂದು ದಿನದ ಧಾರ್ಮಿಕ ಆಚರಣೆಯಾಗಬಾರದು. “ನಿಚ್ಚ ನಿಚ್ಚ ಶಿವರಾತ್ರಿಯ ಮಾಡುವುದು” ಎನ್ನುತ್ತಾರೆ ಬಸವಣ್ಣನವರು. ಅಂದರೆ ನಿತ್ಯವೂ ರಾತ್ರಿ ಜಾಗರಣೆ ಮಾಡಬೇಕೆಂದರ್ಥವಲ್ಲ. ತನ್ನ ನಡೆ-ನುಡಿಗಳಲ್ಲಿ ಮನುಷ್ಯ ಸದಾ ಜಾಗರೂಕನಾಗಿರಬೇಕು ಎಂದರ್ಥ.
ಶರಣ ನಿದ್ರೆಗೈದಡೆ ಜಪ ಕಾಣಿರೊ,
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ,
ಶರಣ ನಡೆದುದೆ ಪಾವನ ಕಾಣಿರೊ,
ಶರಣ ನುಡಿದುದೆ ಶಿವತತ್ತ್ವ ಕಾಣಿರೊ!,
ಕೂಡಲಸಂಗನ ಶರಣನ
ಕಾಯವೇ ಕೈಲಾಸ ಕಾಣಿರೊ!
ತನ್ನ ನಡೆ-ನುಡಿಯಲ್ಲಿ ಪರಿಶುದ್ಧನಾದ ವ್ಯಕ್ತಿ ರಾತ್ರಿ ಹೊತ್ತು ಸಾಂಪ್ರದಾಯಿಕವಾಗಿ ಜಾಗರಣೆ ಮಾಡದೆ ನಿದ್ರೆ ಮಾಡಿದರೂ ಅದು ಒಂದು ರೀತಿಯಲ್ಲಿ ಶಿವನ ಧ್ಯಾನವೇ ಆಗಿರುತ್ತದೆ. ಹಗಲು ಹೊತ್ತು ಎದ್ದು ಕುಳಿತು ತನ್ನ ದೈನಂದಿನ ಕೆಲಸದಲ್ಲಿ ತೊಡಗಿದ್ದರೂ ಅದು ಪವಿತ್ರವಾದ “ಶಿವರಾತ್ರಿ”ಯ ಜಾಗರಣೆಯಾಗಿರುತ್ತದೆ. ಅಂತರಂಗ-ಬಹಿರಂಗ ಶುದ್ಧಿಯುಳ್ಳ ಅಂತಹ ವ್ಯಕ್ತಿಯ ಶರೀರವೇ ಶಿವನ ಆವಾಸ ಸ್ಥಾನವಾದ ಕೈಲಾಸವಾಗಿರುತ್ತದೆ! “ಕಾಯಕವೇ ಕೈಲಾಸ” ಬಹಿರಂಗ ಕ್ರಿಯೆಯಲ್ಲಿ ಕಂಡುಬರುವ ಪರಿಶುದ್ಧಿಯಾದರೆ “ಕಾಯವೇ ಕೈಲಾಸ” ಅಂತರಂಗದಲ್ಲಿ ಕಂಡುಬರುವ ಪರಿಶುದ್ಧಿ. ಯಾಂತ್ರಿಕವಾಗಿ ಆಚರಿಸುವ “ಶಿವರಾತ್ರಿ” ನಿದ್ದೆಗೇಡು. ನಿದ್ದೆಗಣ್ಣಿನಲ್ಲಿ ಆಕಳಿಸುತ್ತಾ ಮಾಡುವ ಮಾರನೆಯ ದಿನದ ಕೆಲಸವೂ ಹಾಳು! ರಾತ್ರಿಯೆಲ್ಲಾ ತೂಕಡಿಸದೆ ಜಾಗರಣೆ ಮಾಡಬೇಕೆಂದು ಟಿ.ವಿ. ಮುಂದೆ ಕುಳಿತು ಒಂದರ ಮೇಲೊಂದು ಸಿನಿಮಾ ನೋಡಿದರೆ ಅದು ಸಿನಿಮಾ ರಾತ್ರಿಯಾಗಬಲ್ಲುದೇ ಹೊರತು “ಶಿವರಾತ್ರಿ”ಯಾಗಲು ಖಂಡಿತಾ ಸಾಧ್ಯವಿಲ್ಲ.
ಧರ್ಮನಿರಪೇಕ್ಷ ರಾಷ್ಟ್ರವೆನಿಸಿದ ಈ ದೇಶದಲ್ಲಿ ಸರಕಾರಗಳು ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಇತ್ಯಾದಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಬೇಕೇ ಹೊರತು ಧಾರ್ಮಿಕ ಹಬ್ಬಗಳನ್ನಾಗಲೀ, ಜಯಂತಿಗಳನ್ನಾಗಲೀ ಸ್ವತಃ ಆಚರಿಸುವುದು secular ಅಲ್ಲ. ಆದರೆ ಆಯಾಯ ಧರ್ಮೀಯರಿಗೆ ಆಚರಿಸಲು ಮುಕ್ತ ಅವಕಾಶ ಕಲ್ಪಿಸಿಕೊಡಬೇಕು. ನಮ್ಮ ದೃಷ್ಟಿಯಲ್ಲಿ ಎಲ್ಲ ಧಾರ್ಮಿಕ ಹಬ್ಬಗಳ ಸಾರ್ವತ್ರಿಕ ರಜೆಗಳನ್ನು ಸರಕಾರ ರದ್ದುಗೊಳಿಸಬೇಕು. ಈ ದೇಶದ ಜನರು ಆಚರಿಸುವ ಎಲ್ಲ ಹಬ್ಬ-ಹರಿದಿನಗಳಿಗೆ ರಜಾ ಘೋಷಣೆ ಮಾಡುತ್ತಾ ಹೋದರೆ ವರ್ಷದ 365 ದಿನಗಳು ಸಾಕಾಗುವುದಿಲ್ಲ. ಎಲ್ಲರಿಗೂ ವರ್ಷದಲ್ಲಿ ಇಂತಿಷ್ಟು ರಜೆಗಳೆಂದು ನಿಗದಿಪಡಿಸಿ ಅವುಗಳನ್ನು ಆಯಾಯ ಧರ್ಮೀಯರು ತಮಗೆ ಬೇಕಾದ ದಿನಗಳಂದು ರಜೆ ಪಡೆಯಲು ಮುಕ್ತ ಅವಕಾಶ ಕಲ್ಪಿಸಿಕೊಡುವುದು ಒಳ್ಳೆಯದು. ಶಿವರಾತ್ರಿ ಹೇಳಿ ಕೇಳಿ ಜಾಗರಣೆಯ ಹಬ್ಬ ಆ ದಿನ ರಜಾ ಕೊಟ್ಟರೂ ಏನು ಪ್ರಯೋಜನ? ಮಾರನೆಯ ದಿನ ಕೊಟ್ಟರೆ ರಾತ್ರಿಯಿಡೀ ಜಾಗರಣೆ ಮಾಡಿದ ಶ್ರದ್ಧಾಳುಗಳು ಆಫೀಸಿನಲ್ಲಿ ತೂಕಡಿಸುವುದು ತಪ್ಪುತ್ತದೆ. ಇಡೀ ಪ್ರಪಂಚದಲ್ಲಿ ನಮ್ಮ ದೇಶದಲ್ಲಿರುವಷ್ಟು ರಜೆಗಳು ಬೇರಾವ ದೇಶಗಳಲ್ಲೂ ಇಲ್ಲ. ಇಂಗ್ಲೆಂಡಿನಲ್ಲಿ ಸಾರ್ವತ್ರಿಕ ರಜೆಗಳು ಕೇವಲ ಎಂಟೇ ಎಂಟು. ಆದರೆ ಅಲ್ಲಿಯ ಸರಕಾರೀ ನೌಕರರಿಗೆ ಅವರವರು ಕಾರ್ಯನಿರ್ವಹಿಸುವ ಹುದ್ದೆಗಳಿಗೆ ಅನುಗುಣವಾಗಿ 20 ರಿಂದ 30 ದಿನಗಳ ಒಳಗೆ ನಿರ್ದಿಷ್ಟ ಸಂಖ್ಯೆಯ ರಜಾದಿನಗಳು ಇದ್ದು ಅವುಗಳನ್ನು ಬಳಸಿಕೊಳ್ಳುವ ಸ್ವಾತಂತ್ರ್ಯ ಇದೆ.
ಪ್ರತಿಷ್ಠಿತ ವ್ಯಕ್ತಿಗಳು ಮೃತಪಟ್ಟಾಗ ಅವರ ಗೌರವಾರ್ಥ ರಜಾಕೊಡುವ ಪರಿಪಾಠ ನಿಲ್ಲಬೇಕು. ಶಾಲಾ ಕಾಲೇಜುಗಳಿಗಂತೂ ರಜೆ ನೀಡಲೇಬಾರದು. ಅದರ ಬದಲು ಅಂದು ಶಾಲೆಯಲ್ಲಿ ಒಂದು ಗಂಟೆ ದಿವಂಗತರ ಸಾಧನೆಗಳನ್ನು ಪರಿಚಯಿಸುವ ಭಾಷಣ, ಚಿತ್ರ, ವೀಡಿಯೋ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಿ ನಂತರ ಯಥಾರೀತಿ ಶಾಲೆಯ ಪಾಠಪ್ರವಚನಗಳನ್ನು ಮಾಡುವುದು ಒಳ್ಳೆಯದು. ಆಗ ಮಕ್ಕಳಿಗೆ ಮೃತರಾದ ಗಣ್ಯವ್ಯಕ್ತಿಗಳ ಪರಿಚಯವಾಗುತ್ತದೆ. ತಾವೂ ಅವರಂತೆ ಆಗಬೇಕೆಂದು ಎಳವೆಯಲ್ಲಿ ಸ್ಫೂರ್ತಿ ಉಂಟಾಗುತ್ತದೆ. ಇಲ್ಲದಿದ್ದರೆ “ಯಾರೋ ಸತ್ತಿದ್ದಾರಂತೆ, ಅದಕ್ಕೇ ರಜಾ!” ಎಂದು ಮಕ್ಕಳು ಬೇಗನೆ ಮನೆಗೆ ಹೋದಾಗ ಹೇಳಿದರೆ ಗಣ್ಯಮಾನ್ಯರನ್ನು ನಗಣ್ಯಗೊಳಿಸಿ ಅವಹೇಳನ ಮಾಡಿದಂತಾಗುತ್ತದೆ. ಈ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಹೇಳಿದ ಮಾತು ಇಲ್ಲಿ ಸ್ಮರಣೀಯ: “Do not declare holiday on my death, instead work harder. That will be my best farewell !” (ನಾನು ಸತ್ತಾಗ ರಜೆ ಕೊಡಬೇಡಿ, ಆ ದಿನ ಹೆಚ್ಚು ಕೆಲಸ ಮಾಡಿ. ಅದೇ ನೀವು ನನಗೆ ನೀಡುವ ಅತ್ಯುತ್ತಮ ಬೀಳ್ಕೊಡುಗೆ).
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ.27-2-2025.