My Column “Bisilu Beladingalu: A 17-Year Journey

  •  
  •  
  •  
  •  
  •    Views  

ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಸೂರ್ಯ-ಚಂದ್ರರು ಇದ್ದೇ ಇರುತ್ತಾರೆ. ಒಂದು ದೇಶವನ್ನು ಬಿಟ್ಟು ಮತ್ತೊಂದು ದೇಶಕ್ಕೆ ಹೋದ ಮಾತ್ರಕ್ಕೆ ಸೂರ್ಯ-ಚಂದ್ರರು ಕಣ್ಮರೆಯಾಗುವುದಿಲ್ಲ. ಹಾಗೆಯೇ ಪ್ರಪಂಚದ ಯಾವುದೇ ಸ್ಥಳಕ್ಕೆ ಪ್ರಯಾಣಿಸಿದರೂ ಅಲ್ಲಿಂದಲೇ ಸೂರ್ಯನ ಪ್ರಖರವಾದ ಬಿಸಿಲು ಮತ್ತು ಚಂದ್ರನ ತಂಪನೆಯ ಬೆಳದಿಂಗಳನ್ನು ಆಧರಿಸಿ ನಮ್ಮ ಲೋಕಾನುಭವವನ್ನು ಓದುಗರೊಂದಿಗೆ ಹಂಚಿಕೊಳ್ಳಲು ತಪ್ಪದೆ 2008 ಫೆಬ್ರವರಿ 27 ರಿಂದ ನಿರಂತರವಾಗಿ ಬರೆಯುತ್ತಾ ಬಂದಿರುವ ನಮ್ಮ ಈ “ಬಿಸಿಲು ಬೆಳದಿಂಗಳು” ಅಂಕಣ ಬರಹಕ್ಕೆ ಇಂದಿಗೆ ಸರಿಯಾಗಿ 17 ವರ್ಷಗಳು ಸಂದಿವೆ. 

ಸೂರ್ಯ-ಚಂದ್ರರು ನೆತ್ತಿಯ ಮೇಲೆಯೇ ಇದ್ದರೂ ನಿತ್ಯ ಜೀವನದ ಜಂಜಾಟದಲ್ಲಿ ನೋಡದೇ ಇರಬಹುದು. ಆದರೆ ಪ್ರಬುದ್ಧ ಓದುಗರು ನಮ್ಮ ಈ ಅಂಕಣ ಬರಹವನ್ನು ತಪ್ಪದೇ ಓದುತ್ತಾ ಬಂದಿದ್ದಾರೆಂಬುದಕ್ಕೆ ನಾವು ಪ್ರಯಾಣಿಸುವಾಗ ಆಕಸ್ಮಿಕವಾಗಿ ವಿಮಾನ ನಿಲ್ದಾಣದಲ್ಲೋ, ಯಾವುದೋ ಸಮಾರಂಭದಲ್ಲೋ ನಮ್ಮನ್ನು ಗುರುತಿಸಿ ಹತ್ತಿರ ಬಂದು ಭಕ್ತಿಭಾವಗಳಿಂದ ನಮಸ್ಕರಿಸಿ ತಮ್ಮ ಪರಿಚಯ ಮಾಡಿಕೊಳ್ಳುವ ಅನೇಕ ಅಜ್ಞಾತ ಓದುಗರೇ ಸಾಕ್ಷಿ.

ಅಂತಹ ಒಂದು ಪ್ರಸಂಗ ಇತ್ತೀಚೆಗೆ ಘಟಿಸಿತು. ಕಳೆದ ಡಿಸೆಂಬರ್ ತಿಂಗಳ ಕೊನೆಯಲ್ಲಿ ಮುಂಬೈಗೆ ಪ್ರಯಾಣಿಸಲು ಬೆಂಗಳೂರಿನ ವಿಮಾನ ನಿಲ್ದಾಣದ departure lounge ನಲ್ಲಿ ವಿಮಾನವನ್ನೇರುವಾಗ ಸರತಿಯಲ್ಲಿ ನಮ್ಮ ಮುಂದೆ ನಿಂತಿದ್ದ ಅಜ್ಞಾತ ಪ್ರಯಾಣಿಕರೊಬ್ಬರು ನಮ್ಮತ್ತ ತಿರುಗಿ ನೋಡಿ ಧಾವಿಸಿ ಬಂದು ಅಭಿವಂದಿಸಿದರು. ಅವರೊಬ್ಬರು Union Bank of India ದ ಉನ್ನತ ಅಧಿಕಾರಿಗಳು. ತುಂಬಾ ಭಾವುಕರಾಗಿ “ನನ್ನ ಹೆಸರು ಟಿ.ಎನ್. ನರಸಿಂಹಮೂರ್ತಿ. ತಮ್ಮ ಅಂಕಣವನ್ನು ನಾನು ಅನೇಕ ವರ್ಷಗಳಿಂದ ತಪ್ಪದೆ ಓದುತ್ತಿದ್ದೇನೆ. ನನ್ನ ಹೆಂಡತಿ ಮತ್ತು ಮಕ್ಕಳಿಗೆ ಕನ್ನಡ ಓದಲು ಬರುವುದಿಲ್ಲ. ಆದರೆ ಅರ್ಥವಾಗುತ್ತದೆ. ಗುರುವಾರ ಪತ್ರಿಕೆಯಲ್ಲಿ ತಮ್ಮ ಅಂಕಣ ಪ್ರಕಟವಾದ ದಿನವೇ ಬೆಳಗಿನ ಉಪಾಹಾರದ ಸಂದರ್ಭದಲ್ಲಿ ಅವರನ್ನು ಡೈನಿಂಗ್ ಟೇಬಲ್ ಸುತ್ತ ಕೂರಿಸಿಕೊಂಡು ಓದಿ ಹೇಳಿ ಸಂಭ್ರಮಿಸುತ್ತೇನೆ. ಅವರೂ ಕೇಳಿ ಖುಷಿಪಡುತ್ತಾರೆ” ಎಂದು ಹೇಳಿದರು. ಇಂತಹ ಅಜ್ಞಾತ ಓದುಗರೇ ನಮ್ಮ ಈ ಅಂಕಣ ಬರಹಕ್ಕೆ ಸ್ಫೂರ್ತಿಯ ಸೆಲೆ ಮತ್ತು ಪ್ರೇರಣೆ! ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು “ಎದೆ ತುಂಬಿ ಹಾಡಿದೆನು ಅಂದು ನಾನು” ಎಂಬ ತಮ್ಮ ಕವಿತೆಯಲ್ಲಿ “ಮನವಿಟ್ಟು ಕೇಳಿದಿರಿ ಅಲ್ಲಿ ನೀವು” ಎಂದು ಕವಿತಾ ರಚನೆಗೆ ಪ್ರೋತ್ಸಾಹಿಸಿದ ತಮ್ಮ ಗುರುಗಳಾದ ತ.ಸು.ಶಾಮರಾಯರನ್ನು ಸ್ಮರಿಸುತ್ತಾರೆ. ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಆರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ” ಎಂದು ಒಂದೆಡೆ ಮೂಗುಮುರಿದರೂ ಮುಂದುವರಿದು “ಕೇಳುವವರಿಹರೆಂದು ನಾ ಬಲ್ಲೆ, ಅದರಿಂದ ಹಾಡುವೆನು ಮೈದುಂಬಿ ಎಂದಿನಂತೆ” ಎಂದು ಅವರೇ ಹೇಳುತ್ತಾರೆ. ಹಾಗೆಯೇ ನಮಗೆ ಮಠದ ಮತ್ತು ನೂರಾರು ಶಾಲಾಕಾಲೇಜುಗಳ ಕಾರ್ಯನಿರ್ವಹಣೆಯ ಒತ್ತಡ ಇದ್ದರೂ, ನಮ್ಮ ಅಂಕಣ ಬರಹಕ್ಕೆ ಇಂತಹ ಪ್ರಬುದ್ಧ ಓದುಗರು ಇದ್ದಾರೆ, ಓದಿ ಸಂಭ್ರಮಿಸುತ್ತಾರೆ, ಖುಷಿಪಡುತ್ತಾರೆ” ಎಂದೇ ನಿದ್ದೆಗೆಟ್ಟಾದರೂ ಬರೆಯುತ್ತಾ ಬಂದಿದ್ದೇವೆ. ನಮ್ಮ ಚಿಂತನೆಗೆ ಜಿಡ್ಡುಗಟ್ಟದಂತೆ ಬರೆಸುತ್ತಿರುವ ಇಂತಹ ಅಜ್ಞಾತ ಓದುಗರಿಗೆ ಮತ್ತು ಪ್ರಕಟಿಸುತ್ತಿರುವ “ವಿಜಯಕರ್ನಾಟಕ” ಪತ್ರಿಕೆಗೆ ಕೃತಜ್ಞತೆಗಳು.

ಈ ಅಂಕಣ ಬರಹದ ಆರಂಭಿಕ ವರ್ಷವಾದ 2008 ರ ಎರಡನೆಯ ಅಂಕಣ ಬರಹದ ಶೀರ್ಷಿಕೆಯೇ “ಶಿವರಾತ್ರಿಯು ಸಿನಿಮಾ ರಾತ್ರಿ ಆಗದಿರಲಿ!”. ನಿನ್ನೆ ಶಿವರಾತ್ರಿ. ಇಂದು ನಿದ್ರೆಗಣ್ಣಿನ ಹಗಲು. ಜಾಗರಣೆ ಮಾಡಿದವರಿಗೆ ಮಾತ್ರ! ಆದರೆ ಜಾಗರಣೆ ಮಾಡಿದ್ದು ಹೇಗೆ? ಎಂದು ಆತ್ಮನಿರೀಕ್ಷಣೆ ಮಾಡಿಕೊಳ್ಳುವುದು ಒಳ್ಳೆಯದು. “ಶಿವರಾತ್ರಿ”ಯಂದು ಮಾಡುವ ಜಾಗರಣೆ ಮತ್ತು ಉಪವಾಸದ ಹಿಂದಿನ ಮೂಲ ಆಶಯ ಮನುಷ್ಯ ವರ್ಷಕ್ಕೊಮ್ಮೆಯಾದರೂ ಸಾಂಸಾರಿಕ ಜೀವನದ ಜಂಜಾಟವನ್ನು ಮರೆತು ಶಿವನನ್ನು ಆರಾಧಿಸಿ ಶರೀರದ ಹಸಿವು-ತೃಷೆಗಳನ್ನು ಮೆಟ್ಟಿ ನಿಂತು ತನ್ನೊಳಗೆ ಅಡಗಿರುವ ಆತ್ಮದ ಅರಿವನ್ನು ಪಡೆಯಲಿ; ಆಧ್ಯಾತ್ಮಿಕ ಹಸಿವು-ತೃಷೆಗಳ ಕಡೆ ಗಮನ ಹರಿಸಲಿ ಎಂಬುದಾಗಿದೆ. ಎಲ್ಲ ಧರ್ಮಗಳಲ್ಲಿಯೂ ಈ ತೆರನಾದ ಉಪವಾಸ, ಜಾಗರಣೆಗಳು ವಿಭಿನ್ನ ರೀತಿಯಲ್ಲಿ ಇವೆ. “ಶಿವರಾತ್ರಿ” ವರ್ಷಕ್ಕೊಮ್ಮೆ ಆಚರಿಸುವ ಒಂದು ದಿನದ ಧಾರ್ಮಿಕ ಆಚರಣೆಯಾಗಬಾರದು. “ನಿಚ್ಚ ನಿಚ್ಚ ಶಿವರಾತ್ರಿಯ ಮಾಡುವುದು” ಎನ್ನುತ್ತಾರೆ ಬಸವಣ್ಣನವರು. ಅಂದರೆ ನಿತ್ಯವೂ ರಾತ್ರಿ ಜಾಗರಣೆ ಮಾಡಬೇಕೆಂದರ್ಥವಲ್ಲ. ತನ್ನ ನಡೆ-ನುಡಿಗಳಲ್ಲಿ ಮನುಷ್ಯ ಸದಾ ಜಾಗರೂಕನಾಗಿರಬೇಕು ಎಂದರ್ಥ.

ಶರಣ ನಿದ್ರೆಗೈದಡೆ ಜಪ ಕಾಣಿರೊ, 
ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ, 
ಶರಣ ನಡೆದುದೆ ಪಾವನ ಕಾಣಿರೊ, 
ಶರಣ ನುಡಿದುದೆ ಶಿವತತ್ತ್ವ ಕಾಣಿರೊ!,
ಕೂಡಲಸಂಗನ ಶರಣನ
ಕಾಯವೇ ಕೈಲಾಸ ಕಾಣಿರೊ!

ತನ್ನ ನಡೆ-ನುಡಿಯಲ್ಲಿ ಪರಿಶುದ್ಧನಾದ ವ್ಯಕ್ತಿ ರಾತ್ರಿ ಹೊತ್ತು ಸಾಂಪ್ರದಾಯಿಕವಾಗಿ ಜಾಗರಣೆ ಮಾಡದೆ ನಿದ್ರೆ ಮಾಡಿದರೂ ಅದು ಒಂದು ರೀತಿಯಲ್ಲಿ ಶಿವನ ಧ್ಯಾನವೇ ಆಗಿರುತ್ತದೆ. ಹಗಲು ಹೊತ್ತು ಎದ್ದು ಕುಳಿತು ತನ್ನ ದೈನಂದಿನ ಕೆಲಸದಲ್ಲಿ ತೊಡಗಿದ್ದರೂ ಅದು ಪವಿತ್ರವಾದ “ಶಿವರಾತ್ರಿ”ಯ ಜಾಗರಣೆಯಾಗಿರುತ್ತದೆ. ಅಂತರಂಗ-ಬಹಿರಂಗ ಶುದ್ಧಿಯುಳ್ಳ ಅಂತಹ ವ್ಯಕ್ತಿಯ ಶರೀರವೇ ಶಿವನ ಆವಾಸ ಸ್ಥಾನವಾದ ಕೈಲಾಸವಾಗಿರುತ್ತದೆ! “ಕಾಯಕವೇ ಕೈಲಾಸ” ಬಹಿರಂಗ ಕ್ರಿಯೆಯಲ್ಲಿ ಕಂಡುಬರುವ ಪರಿಶುದ್ಧಿಯಾದರೆ “ಕಾಯವೇ ಕೈಲಾಸ” ಅಂತರಂಗದಲ್ಲಿ ಕಂಡುಬರುವ ಪರಿಶುದ್ಧಿ. ಯಾಂತ್ರಿಕವಾಗಿ ಆಚರಿಸುವ “ಶಿವರಾತ್ರಿ” ನಿದ್ದೆಗೇಡು. ನಿದ್ದೆಗಣ್ಣಿನಲ್ಲಿ ಆಕಳಿಸುತ್ತಾ ಮಾಡುವ ಮಾರನೆಯ ದಿನದ ಕೆಲಸವೂ ಹಾಳು! ರಾತ್ರಿಯೆಲ್ಲಾ ತೂಕಡಿಸದೆ ಜಾಗರಣೆ ಮಾಡಬೇಕೆಂದು ಟಿ.ವಿ. ಮುಂದೆ ಕುಳಿತು ಒಂದರ ಮೇಲೊಂದು ಸಿನಿಮಾ ನೋಡಿದರೆ ಅದು ಸಿನಿಮಾ ರಾತ್ರಿಯಾಗಬಲ್ಲುದೇ ಹೊರತು “ಶಿವರಾತ್ರಿ”ಯಾಗಲು ಖಂಡಿತಾ ಸಾಧ್ಯವಿಲ್ಲ.

ಧರ್ಮನಿರಪೇಕ್ಷ ರಾಷ್ಟ್ರವೆನಿಸಿದ ಈ ದೇಶದಲ್ಲಿ ಸರಕಾರಗಳು ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಇತ್ಯಾದಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಬೇಕೇ ಹೊರತು ಧಾರ್ಮಿಕ ಹಬ್ಬಗಳನ್ನಾಗಲೀ, ಜಯಂತಿಗಳನ್ನಾಗಲೀ ಸ್ವತಃ ಆಚರಿಸುವುದು secular ಅಲ್ಲ. ಆದರೆ ಆಯಾಯ ಧರ್ಮೀಯರಿಗೆ ಆಚರಿಸಲು ಮುಕ್ತ ಅವಕಾಶ ಕಲ್ಪಿಸಿಕೊಡಬೇಕು. ನಮ್ಮ ದೃಷ್ಟಿಯಲ್ಲಿ ಎಲ್ಲ ಧಾರ್ಮಿಕ ಹಬ್ಬಗಳ ಸಾರ್ವತ್ರಿಕ ರಜೆಗಳನ್ನು ಸರಕಾರ ರದ್ದುಗೊಳಿಸಬೇಕು. ಈ ದೇಶದ ಜನರು ಆಚರಿಸುವ ಎಲ್ಲ ಹಬ್ಬ-ಹರಿದಿನಗಳಿಗೆ ರಜಾ ಘೋಷಣೆ ಮಾಡುತ್ತಾ ಹೋದರೆ ವರ್ಷದ 365 ದಿನಗಳು ಸಾಕಾಗುವುದಿಲ್ಲ. ಎಲ್ಲರಿಗೂ ವರ್ಷದಲ್ಲಿ ಇಂತಿಷ್ಟು ರಜೆಗಳೆಂದು ನಿಗದಿಪಡಿಸಿ ಅವುಗಳನ್ನು ಆಯಾಯ ಧರ್ಮೀಯರು ತಮಗೆ ಬೇಕಾದ ದಿನಗಳಂದು ರಜೆ ಪಡೆಯಲು ಮುಕ್ತ ಅವಕಾಶ ಕಲ್ಪಿಸಿಕೊಡುವುದು ಒಳ್ಳೆಯದು. ಶಿವರಾತ್ರಿ ಹೇಳಿ ಕೇಳಿ ಜಾಗರಣೆಯ ಹಬ್ಬ ಆ ದಿನ ರಜಾ ಕೊಟ್ಟರೂ ಏನು ಪ್ರಯೋಜನ? ಮಾರನೆಯ ದಿನ ಕೊಟ್ಟರೆ ರಾತ್ರಿಯಿಡೀ ಜಾಗರಣೆ ಮಾಡಿದ ಶ್ರದ್ಧಾಳುಗಳು ಆಫೀಸಿನಲ್ಲಿ ತೂಕಡಿಸುವುದು ತಪ್ಪುತ್ತದೆ. ಇಡೀ ಪ್ರಪಂಚದಲ್ಲಿ ನಮ್ಮ ದೇಶದಲ್ಲಿರುವಷ್ಟು ರಜೆಗಳು ಬೇರಾವ ದೇಶಗಳಲ್ಲೂ ಇಲ್ಲ. ಇಂಗ್ಲೆಂಡಿನಲ್ಲಿ ಸಾರ್ವತ್ರಿಕ ರಜೆಗಳು ಕೇವಲ ಎಂಟೇ ಎಂಟು. ಆದರೆ ಅಲ್ಲಿಯ ಸರಕಾರೀ ನೌಕರರಿಗೆ ಅವರವರು ಕಾರ್ಯನಿರ್ವಹಿಸುವ ಹುದ್ದೆಗಳಿಗೆ ಅನುಗುಣವಾಗಿ 20 ರಿಂದ 30 ದಿನಗಳ ಒಳಗೆ ನಿರ್ದಿಷ್ಟ ಸಂಖ್ಯೆಯ ರಜಾದಿನಗಳು ಇದ್ದು ಅವುಗಳನ್ನು ಬಳಸಿಕೊಳ್ಳುವ ಸ್ವಾತಂತ್ರ್ಯ ಇದೆ.

ಪ್ರತಿಷ್ಠಿತ ವ್ಯಕ್ತಿಗಳು ಮೃತಪಟ್ಟಾಗ ಅವರ ಗೌರವಾರ್ಥ ರಜಾಕೊಡುವ ಪರಿಪಾಠ ನಿಲ್ಲಬೇಕು. ಶಾಲಾ ಕಾಲೇಜುಗಳಿಗಂತೂ ರಜೆ ನೀಡಲೇಬಾರದು. ಅದರ ಬದಲು ಅಂದು ಶಾಲೆಯಲ್ಲಿ ಒಂದು ಗಂಟೆ ದಿವಂಗತರ ಸಾಧನೆಗಳನ್ನು ಪರಿಚಯಿಸುವ ಭಾಷಣ, ಚಿತ್ರ, ವೀಡಿಯೋ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಿ ನಂತರ ಯಥಾರೀತಿ ಶಾಲೆಯ ಪಾಠಪ್ರವಚನಗಳನ್ನು ಮಾಡುವುದು ಒಳ್ಳೆಯದು. ಆಗ ಮಕ್ಕಳಿಗೆ ಮೃತರಾದ ಗಣ್ಯವ್ಯಕ್ತಿಗಳ ಪರಿಚಯವಾಗುತ್ತದೆ. ತಾವೂ ಅವರಂತೆ ಆಗಬೇಕೆಂದು ಎಳವೆಯಲ್ಲಿ ಸ್ಫೂರ್ತಿ ಉಂಟಾಗುತ್ತದೆ. ಇಲ್ಲದಿದ್ದರೆ “ಯಾರೋ ಸತ್ತಿದ್ದಾರಂತೆ, ಅದಕ್ಕೇ ರಜಾ!” ಎಂದು ಮಕ್ಕಳು ಬೇಗನೆ ಮನೆಗೆ ಹೋದಾಗ ಹೇಳಿದರೆ ಗಣ್ಯಮಾನ್ಯರನ್ನು ನಗಣ್ಯಗೊಳಿಸಿ ಅವಹೇಳನ ಮಾಡಿದಂತಾಗುತ್ತದೆ. ಈ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರು ಹೇಳಿದ ಮಾತು ಇಲ್ಲಿ ಸ್ಮರಣೀಯ: “Do not declare holiday on my death, instead work harder. That will be my best farewell !” (ನಾನು ಸತ್ತಾಗ ರಜೆ ಕೊಡಬೇಡಿ, ಆ ದಿನ ಹೆಚ್ಚು ಕೆಲಸ ಮಾಡಿ. ಅದೇ ನೀವು ನನಗೆ ನೀಡುವ ಅತ್ಯುತ್ತಮ ಬೀಳ್ಕೊಡುಗೆ).

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.27-2-2025.


Sunshine and Moonlight: A 17-Year Journey

No matter which corner of the world we travel to, the sun and moon are always there. Moving from one country to another does not make them disappear. Likewise, wherever I go, I continue to share my worldly experiences with our readers, drawing inspiration from the sun’s scorching heat and the moon’s cool radiance. It has been precisely 17 years today since I began writing this column, Bisilu Beladingalu, continuously since February 27, 2008.

Though the sun and moon are always above us, we may fail to notice them in the busyness of daily life. But our discerning readers have always followed my column without fail. This is evident from the many unknown readers who, upon recognizing me by chance at airports or events, approach me with devotion, introduce themselves, and express their appreciation.

A similar incident occurred recently. At the end of December, while waiting to board a flight to Mumbai at the departure lounge of Bengaluru airport, an unknown copassener standing ahead of me turned around, rushed toward me, and bowed down with great respect. He was a senior official at Union Bank of India. Overwhelmed with emotion, he introduced himself: “My name is T.N. Narasimhamurthy. I have been regularly reading your column without fail for many years. My wife and children cannot read Kannada fluently, but they understand it. Every Thursday, when your column is published, I make it a point to read it aloud to them at the breakfast table, and we all rejoice in it.”

Such unknown readers are the source of inspiration and motivation for me to write this column for the last so many years. National poet G.S. Shivarudrappa, in his poem Ede Tumbi Haadidenu Andu Nanu, fondly remembers his Guru, T. S. Shamaraya, who encouraged him to write poetry, saying:

“I do not sing so that everyone listens,
I do not worry if any anyone turns his deaf ears.
But I know there are those who will listen—
And that is why I sing, with all my heart!”

Similarly, despite the heavy work pressure of managing our monastery and numerous schools and colleges, I continue to write this column because of such discerning readers who eagerly wait, read, rejoice, and appreciate it. I am indebted to these devoted readers who are the source of inspiration to me for writing these articles. I am also indebted to the newspaper Vijay Karnataka for publishing my column.

Reflections on Shivaratri: Beyond a Ritual

The title of the second column I wrote in 2008 was “May Shivaratri Not Become a Cinema Night!” Yesterday was Shivaratri, and today is a drowsy day for those who kept vigil overnight. But it is important to reflect on how that vigil was observed.

The essence of keeping vigil and fasting on Shivaratri is for a person to momentarily detach from worldly concerns, devote themselves to Shiva, and transcend bodily hunger and thirst to attain self-awareness and spiritual hunger. Similar fasting and vigils exist in all religions in various forms. Shivaratri should not remain just a once-a-year religious observance. Basavanna says, “Nitcha Nitcha Shivaratriya Maaduvudu”, meaning Shivaratri should be a continuous daily practice—not in the sense of staying awake every night, but by always being mindful in one’s actions and words.

“When a Sharana stays awake, that itself is a chant.
When a Sharana rises, that itself is Shivaratri.
When a Sharana walks, that itself is purification.
When a Sharana speaks, that itself is Shiva’s essence!
For the devotee of Kudala Sangama,
His very body is Kailasa, the Abode of Shiva!”

A person who is pure in thoughts and actions, even if he sleeps at night, is in a way meditating upon Shiva. When he rises in the morning and engage in his daily work with dedication, that itself is the true vigil of Shivaratri. Such an individual’s body itself becomes Kailasa, the abode of Shiva. “Kayakave Kailasa” (Work is Kailasa) refers to external purity in action, while “Kayaave Kailasa” (The body is Kailasa) refers to inner purity.

Observing Shivaratri mechanically is a mere disruption of sleep. The following day’s work also suffers due to drowsiness. If one spends the whole night watching movie after movie on TV, it turns into a Cinema Night, not Shivaratri.

Rethinking Public Holidays

In a secular country like India, the government should celebrate national festivals such as Independence Day and Republic Day, but it should not officially observe religious festivals or birth anniversaries. However, it should provide individuals the freedom to celebrate their respective religious events.

In my opinion, the government should cancel all the declared holidays for religious festivals. If holidays continue to be declared for every festival celebrated by different communities, even 365 days in a year would not suffice! Instead, a fixed number of leave days should be allotted to individuals, allowing them to take leave for their personal religious observances as per their choice.

What is the use of a holiday on Shivaratri, a festival meant for keeping vigil? Instead, granting a holiday the next day would help devotees who stayed awake all night avoid drowsiness at work. India has more public holidays than any other country. In contrast, England has only eight national holidays. However, government employees there are given a set number of leave days based on their roles, which they can use as needed.

The practice of declaring holidays upon the demise of prominent individuals should also be discontinued, especially for schools and colleges. Instead, on such occasions, schools should conduct a one-hour program introducing the achievements of the deceased through speeches, pictures, or videos, and then resume regular classes. This would educate children about great personalities and inspire them. Otherwise, if children coming home early and tell their parents, “Someone has died, so we have a holiday!”, it trivializes the contributions of great individuals.

At this moment, the words of former President A.P.J. Abdul Kalam are worth remembering:

“Do not declare a holiday on my death. Instead, work harder that day. That will be my best farewell!”

— Sri Taralabalu Jagadguru
Dr. Shivamurthy Shivacharya Mahaswamiji, Sirigere

Vijay Karnataka – Bisilu Beladingalu
February 27, 2025