ವಿದ್ಯಾರ್ಥಿಗಳು ಹರಿದಾಡುವ ಮನಸ್ಸನ್ನು ಕೇಂದ್ರೀಕರಿಸಬೇಕು – ತರಳಬಾಳು ಶ್ರೀ

ಸಿರಿಗೆರೆ-08: ವಿದ್ಯಾರ್ಥಿಗಳು ಹರಿದಾಡುವ ಮನಸ್ಸನ್ನು ಕೇಂದ್ರೀಕರಿಸಬೇಕು ಹಾಗೂ ಅವರಲ್ಲಿ ಜ್ಞಾನವನ್ನು ಸಂಪಾದಿಸುವ ತುಡಿತವಿರಬೇಕು ಎಂದು ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಹೇಳಿದರು.
ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಶನಿವಾರ ಜರುಗಿದ ಪರೀಕ್ಷಾ ಪೇ ಚರ್ಚಾ/ಪರೀಕ್ಷೆ ಒಂದು ಹಬ್ಬ-2025ದ ಪ್ರೇರಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಮನಸ್ಸು ಹೂದುಂಬಿಯಾಗಿರಬೇಕು. ದುಂಬಿಗಳು ಮಕರಂದವನ್ನು ಇರುವ ಹಾಗೆ ವಿದ್ಯಾರ್ಥಿಗಳು ಶಿಕ್ಷಣದ ಜ್ಞಾನವನ್ನು ಆಸ್ವಾದಿಸಿಕೊಳ್ಳಬೇಕು. ಪರೀಕ್ಷೆ ಯಶಸ್ವಿಯಾಗಲು ವಿದ್ಯಾರ್ಥಿಗಳಿಗೆ ಸಿದ್ಧತೆ, ಆಸಕ್ತಿ, ಅಭಿರುಚಿ ಮುಖ್ಯ. ಪಂಚೇಂದ್ರಿಯಗಳು ಜ್ಞಾನದ ಸಾಧನೆಗಳು. ಜ್ಞಾನಾರ್ಜನೆಗೆ ದಿನನಿತ್ಯ ಓದುವ ಅಭಿರುಚಿ, ಏಕಾಗ್ರತೆ ಬಹುಮುಖ್ಯ. ಪರೀಕ್ಷೆಯ ಭಯವನ್ನು ಬಿಟ್ಟು ಏಕಾಗ್ರತೆಯ ಕಡೆ ಸಾಗಿ. ಭಯದಿಂದ ಬುದ್ದಿ ಹಾಗೂ ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ಓದು ಪರೀಕ್ಷೆಗೆ ಮಾತ್ರ ಸೀಮಿತವಾಗದೆ ಬದುಕಿನ ಉದ್ದಕ್ಕೂ ಮುಂದುವರಿಯಬೇಕು. ಪ್ರೇರಣೆಯಿಂದ ಸ್ಪೂರ್ತಿ ಲಭಿಸುತ್ತದೆ. ಶ್ರೀ ಮಠದಿಂದ ರೂಪಿಸಿದ ಗಣಕಾಷ್ಟಧ್ಯಾಯಿಯ ಮತ್ತು ಶಿವಶರಣರ ವಚನ ಸಂಪುಟ ಹಾಗೂ ಶ್ರೀಮಠದಲ್ಲಿ ಸಂಗ್ರಹಿಸಿರುವ ತಾಳೆಗರಿಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು. ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಹಲವಾರು ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಉತ್ತಮ ನೌಕರಿಯಲ್ಲಿರುವುದು ಸಂತಸ ತಂದಿದೆ. ನೀವುಗಳು ಉತ್ತಮ ಶಿಕ್ಷಣ ಪಡೆದು ನಮ್ಮ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿಗಳಾಗಿ ಬೆಳೆಯಿರಿ ಎಂದು ಹೇಳಿದರು.
ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕರಾದ ಬಿ.ಮುರುಳೀಧರ ಮಾತನಾಡಿ ಪರೀಕ್ಷೆ ಬರೆಯುವಾಗ ಉಲ್ಲಾಸ, ಉತ್ಸಾಹ ಇರುತ್ತದೆ. ಯಾರಿಗೆ ಟೆನ್ಶನ್ ಕಡಿಮೆ ಇರುತ್ತದೆಯೋ ಬುದ್ಧಿಶಕ್ತಿ ಹೆಚ್ಚಿರುತ್ತದೆ. ಪರೀಕ್ಷೆಗೆ ಸೂಕ್ತ ತಯಾರಿ, ಆತ್ಮವಿಶ್ವಾಸ ಮುಖ್ಯ. ಕೌಶಲ್ಯ, ಚಿಂತನೆಗಳಿಗೆ ಬೆಲೆ ಕೊಡಿ. ವಿದ್ಯಾರ್ಥಿಗಳು ವ್ಯವಸ್ಥಿತವಾಗಿ ವೇಳಾಪಟ್ಟಿಯ ಜೊತೆಗೆ ಓದಬೇಕಿದೆ. ಪುಸ್ತಕಗಳು, ಸಮಯ, ಗ್ರಂಥಾಲಯ, ವೇಳಾಪಟ್ಟಿ ವಾತಾವರಣ ಇವೆಲ್ಲವೂ ಶೈಕ್ಷಣಿಕ ಸಂಪನ್ಮೂಲಗಳು. ಸಂಶೋಧನೆ ಪ್ರಕಾರ ಮನುಷ್ಯನ ಮೆದುಳಿನ ಶೇ.9 ರಷ್ಟು ಮಾತ್ರ ಬುದ್ಧಿ ಕೆಲಸ ಮಾಡಿದರೆ, ಇನ್ನೂ ಶೇ.91 ಭಾಗವನ್ನು ಮಾತ್ರ ಯಾರು ಸಹ ಬಳಸಿಲ್ಲ. ಎದ್ದು ಓದುವುದು ಬುದ್ಧಿಗೆ, ಬಿದ್ದು ಓದುವುದು ನಿದ್ದೆಗೆ. ಧನಾತ್ಮಕ ಚಿಂತನೆಗಳಿಂದ ವಿದ್ಯಾರ್ಥಿಗಳು ಮನಸ್ಸನ್ನ ಕೇಂದ್ರಿಕೃತಗೊಳಿಸಿಕೊಳ್ಳಬೇಕು ಎಂದರು.
ಶ್ರೀಸಂಸ್ಥೆಯ ವಿಶೇಷಾಧಿಕಾರಿಗಳಾದ ವೀರಣ್ಣ ಎಸ್. ಜತ್ತಿ ಮಾತನಾಡಿ ವಿದ್ಯಾರ್ಥಿಗಳು ಪರೀಕ್ಷೆಯ ಭಯಕ್ಕೆ ಒಳಗಾಗದೆ ಮೊದಲು ಪೂರ್ಣ ಪ್ರಶ್ನೆ ಪತ್ರಿಕೆಯನ್ನು ಸಮಾಧಾನದಿಂದ ಓದಿ ಗುಣಾತ್ಮಕ ಉತ್ತರಗಳನ್ನು ಬರೆಯಿರಿ. ಸೋಲುಗಳೇ ವಿಜಯದ ಮೆಟ್ಟಿಲುಗಳು. ವಿದ್ಯಾರ್ಥಿಗಳು ಬೆಳಿಗ್ಗೆ ಯೋಗ, ವ್ಯಾಯಾಮ ಮಾಡುವುದರ ಜೊತೆಗೆ ಮನಸ್ಸನ್ನು ಶಾಂತಗೊಳಿಸಿ ಏಕಾಗ್ರತೆಯ ಕಡೆಗೆ ಮನಸ್ಸನ್ನು ಕೇಂದ್ರೀಕರಿಸಿಕೊಳ್ಳಬೇಕು. ಸಂಸ್ಕಾರಗಳು ಮನಸ್ಸನ್ನು ಮುದಗೊಳಿಸುವ ಸಂಪರ್ಕ ಸಾಧನಗಳು. ವಿದ್ಯಾರ್ಥಿಗಳು ಸ್ಪೂರ್ತಿಯ ಸೆಲೆಯಾಗಬೇಕು. ಹಬ್ಬದ ಸಡಗರ, ಸಂಭ್ರಮವೇ ಪರೀಕ್ಷೆಯಲ್ಲಿಯೂ ಇರಬೇಕು. ಭಯ, ಆತಂಕವಿಲ್ಲದೆ ಪರೀಕ್ಷೆಯನ್ನು ಎದುರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರುಗಳಾದ ಕೆ.ಈ.ಬಸವರಾಜಪ್ಪ, ಎಂ.ಎಸ್.ಸೋಮಶೇಖರ್, ಎಂ.ಎನ್. ಶಾಂತ, ಅಧ್ಯಾಪಕ ನಾಗರಾಜ ಸಿರಿಗೆರೆ ಹಾಗೂ ಶ್ರೀಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 10ನೇ ತರಗತಿಯ ಸಾವಿರ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಉಪನ್ಯಾಸಕರುಗಳು ಇದ್ದರು.



