ದೇವರು ಇದ್ದಾನೆಯೇ, ಇಲ್ಲವೇ? Does God exist or not?
Does God exist or not?!

ದೇವರಲ್ಲಿ ನಂಬಿಕೆ ಇರದ ನಾಸ್ತಿಕನೊಬ್ಬ ತನ್ನ ಅಧ್ಯಯನದ ಕೊಠಡಿಯ ಗೋಡೆಯ ಮೇಲೆ “God is nowhere" (ದೇವರೂ ಎಲ್ಲಿಯೂ ಇಲ್ಲ) ಎಂದು ಬರೆಸಿದ್ದನಂತೆ. ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿದ್ದ ಆತನ ಪುಟಾಣಿ ಮೊಮ್ಮೊಗಳು ಒಂದು ದಿನ ಶಾಲೆಯಿಂದ ಬಂದವಳೇ ಖುಷಿಯಿಂದ ಅಜ್ಜನನ್ನು ಅಪ್ಪಿಕೊಂಡು ಆ ಗೋಡೆಯ ಮೇಲಿದ್ದ ಬರಹವನ್ನು ನೋಡಿ ಲಯಬದ್ದವಾಗಿ ಚಪ್ಪಾಳೆ ತಟ್ಟುತ್ತಾ “God is now here, God is now here!” (ದೇವರು ಈಗ ಇಲ್ಲಿಯೇ ಇದ್ದಾನೆ, ಇಲ್ಲಿಯೇ ಇದ್ದಾನೆ) ಎಂದು ಓದಿದಳಂತೆ!
ಭಾರತದ ಸಂವಿಧಾನ ರಚನೆಯ ಸಂದರ್ಭದಲ್ಲಿ 1949 ರ ಅಕ್ಟೋಬರ್ 17 ರಂದು ನಡೆದ ಸಭೆಯೊಂದರಲ್ಲಿ ದೇವರು ಮತ್ತು ಧರ್ಮವನ್ನು ಕುರಿತು ಬಿಸಿ ಬಿಸಿಯಾದ ಚರ್ಚೆ ನಡೆಯಿತು. ಅಲ್ಲಿಂದ ಮುಂದಕ್ಕೆ 1950 ಜನವರಿ 24 ರ ಅಂತಿಮ ಅಧಿವೇಶನದವರೆಗೆ 350 ಕ್ಕೂ ಹೆಚ್ಚು ಬಾರಿ ದೇವರ ಹೆಸರು ಪ್ರಸ್ತಾಪವಾಗಿದೆಯೆಂದು ಸಂವಿಧಾನದ ಇತಿಹಾಸಜ್ಞರು ಹೇಳುತ್ತಾರೆ. ಸಂವಿಧಾನದ ಪ್ರಸ್ತಾವನೆಯ ಆರಂಭದಲ್ಲಿ ಬರುವ "We, the People of India, having solemnly resolved to constitute India into a Sovereign Democratic Republic.....” ಎಂಬ ಘೋಷಣಾ ವಾಕ್ಯದ ಹಿಂದೆ “In the name of God” ಎಂದು ಸೇರಿಸಬೇಕೆಂಬ ವಿಚಾರದಲ್ಲಿ ದೀರ್ಘ ಕಾಲದ ಚರ್ಚೆ ನಡೆದು ಕೊನೆಗೂ ಒಮ್ಮತ ಉಂಟಾಗಲೇ ಇಲ್ಲ. ಪರಿಶಿಷ್ಟ 3 ರಲ್ಲಿ ಉಲ್ಲೇಖಿಸಿರುವ ಪ್ರಕಾರ ದೇವರ ಹೆಸರಿನಲ್ಲಿ ಪ್ರಮಾಣ ಅಥವಾ ಪ್ರತಿಜ್ಞೆ ಮಾಡಲು ಐಚ್ಛಿಕ ಅವಕಾಶ ಇದೆ. ಆದಕಾರಣ ದೇವರ ಬಗ್ಗೆ ನಂಬಿಕೆ ಇರುವವರಿಗೂ, ಇಲ್ಲದವರಿಗೂ ಸಮಾನ ಸ್ವಾತಂತ್ರ್ಯ ಕೊಟ್ಟಿರುವುದರಿಂದ ತಿದ್ದುಪಡಿಯನ್ನು ತರುವುದು ಬೇಡ ಎಂದು ಸಭಾಪತಿಗಳು ತಡೆಹಿಡಿಯಲು ಪ್ರಯತ್ನಿಸಿದರು. ಆಗ ಒಬ್ಬ ಮಹಿಳಾ ಸದಸ್ಯೆ "ದೇವರ ವಿಷಯವನ್ನು ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತರ ಮಧ್ಯೆ ಚರ್ಚೆಯ ವಿಷಯವನ್ನಾಗಿ ಮಾಡಬೇಡಿರಿ. ನಂಬುವವರಿಗೂ, ನಂಬದವರಿಗೂ ದೇವರನ್ನು ನಿಶ್ಚಿತವಾಗಿ ಒಪ್ಪಿಕೊಳ್ಳುವುದು ಅಥವಾ ತಿರಸ್ಕರಿಸುವುದು ಸುಲಭವಲ್ಲ. ಆತನ ಹೆಸರನ್ನು ವ್ಯರ್ಥವಾಗಿ ಉಲ್ಲೇಖಿಸುವುದರಿಂದ ಪ್ರಯೋಜನವಿಲ್ಲ” ಎಂದು ವಾದಿಸಿದರು. ಇದಕ್ಕೆ ಇನ್ನೊಬ್ಬ ಮಹಿಳಾ ಸದಸ್ಯೆ “ದೇವರ ಹೆಸರಿನಲ್ಲಿ” ಎಂಬ ಪದವನ್ನು ಸೇರಿಸುವುದಾದರೆ ದೇವಿಯ ಹೆಸರಿನಲ್ಲಿ ಎಂಬ ಪದವನ್ನೂ ಸಹ ಸೇರಿಸಬೇಕು (In the name of God/Godess) ಎಂಬ ತಿದ್ದುಪಡಿಯನ್ನು ಮಂಡಿಸುತ್ತಿದ್ದಂತೆಯೇ ಸಂವಿಧಾನ ರಚನಾ ಸಭೆ ಭಾರೀ ನಗುವಿನಲ್ಲಿ ಮುಳುಗಿತಂತೆ! ಮಹಿಳಾ ಸದಸ್ಯೆಯ ಈ ಮಾತು ಹಾಸ್ಯಕ್ಕಾಗಿ ಹೇಳಿದ ಮಾತಲ್ಲ. ಭಾರತೀಯ ಸಮಾಜದ ಧಾರ್ಮಿಕ-ಸಾಂಸ್ಕೃತಿಕ ಮೌಲ್ಯಗಳನ್ನು ಆಧರಿಸಿ ಹೇಳಿದ ಮಾತು. ಧರ್ಮ ನಿರಪೇಕ್ಷವಾದ ನಮ್ಮ ದೇಶದ ಸಂವಿಧಾನವನ್ನು ರೂಪಿಸುವ ಹೊಣೆ ಹೊತ್ತ ಆಗಿನ ಸಂವಿಧಾನ ಶಿಲ್ಪಿಗಳು ಕೊನೆಗೂ ದೇವರು ಮತ್ತು ಧರ್ಮ ಏನೆಂದು ಅರ್ಥೈಸುವ ವಿಚಾರದಲ್ಲಿ ಸ್ಪಷ್ಟವಾಗಿ ನಿರ್ಧರಿಸಲು ವಿಫಲರಾದರು ಎಂದು ಇತಿಹಾಸಜ್ಞರು ಹೇಳುತ್ತಾರೆ.
ದೇವರ ವಿಚಾರದಲ್ಲಿ ದೀರ್ಘ ಕಾಲದ ಚರ್ಚೆಯ ನಂತರವೂ ಸಂವಿಧಾನ ರೂವಾರಿಗಳಲ್ಲಿ ಒಮ್ಮತ ಮೂಡಲಿಲ್ಲ. ಸುದೈವದಿಂದ ಆ ದಿನ ದೇವರ ಅದೃಷ್ಟ ಚೆನ್ನಾಗಿತ್ತು. ಬಡಪಾಯಿ ದೇವರು ಬಚಾವಾದ! ಈಗ ದೇವರು ಮತ್ತು ಧರ್ಮದ ಸ್ಥಿತಿ ಸುಧಾರಿಸಿದೆ. ಚುನಾವಣೆಯ ಸಂದರ್ಭದಲ್ಲಿ ನೂರಕ್ಕೆ 90ರಷ್ಟು ಸದಸ್ಯರು ಪಾರ್ಟಿ ಟಿಕೆಟ್ಟಿನಿಂದ ಹಿಡಿದು ನಾಮಿನೇಷನ್ ಫೈಲ್ ಮಾಡುವವರೆಗೂ ತಿರುಪತಿ ತಿಮ್ಮಪ್ಪನಿಂದ ಹಿಡಿದು ಪ್ರಚಲಿತವಿರುವ ಎಲ್ಲ ದೇವರುಗಳ ಗುಡಿಗಳಲ್ಲಿ ಹೋಮ-ಹವನ ಮಾಡಿಸಿ ದಿಂಡುರುಳು ಬಿದ್ದು ಆಶೀರ್ವಾದ ಪಡೆಯುತ್ತಾರೆ. ದೇವರನ್ನು ನಂಬಿದ ಇವರಿಗೆ ದೇವರು ಆಶೀರ್ವದಿಸಿದ ಕಾರಣ ಈಗೇನಾದರೂ ವಿಧಾನಸಭೆಯಲ್ಲೋ, ಸಂಸತ್ತಿನಲ್ಲೋ ದೇವರ ಅಸ್ತಿತ್ವದ ಪ್ರಶ್ನೆ ಬಂದಾಗ ಪ್ರಚಂಡ ಬಹುಮತ ಬರುವುದರಲ್ಲಿ ಅನುಮಾನವಿಲ್ಲ. ಆದರೂ ಇಂತಹ ಪ್ರಚಂಡರನ್ನು ನಂಬಿ ಓಟು ಕೊಟ್ಟು ಗೆಲ್ಲಿಸಿದ ಸಾಮಾನ್ಯ ಜನರಿಗೆ ಮಾತ್ರ ಚುನಾವಣೆಯ ನಂತರ ದೇವರೇ ಗತಿ!
“ದೇವರು ಇದ್ದಾನೆಯೇ ಇಲ್ಲವೇ?” ಎಂಬ ಪ್ರಶ್ನೆ ಅಕ್ಬರ್ ಬಾದಷಾನನ್ನೂ ಕಾಡಿಸಿತ್ತು. ಒಮ್ಮೆ ತನ್ನ ಆಸ್ಥಾನ ಪಂಡಿತರಿಗೆ ಈ ಪ್ರಶ್ನೆ ಹಾಕಿ ದೇವರು ಇದ್ದರೆ ಎಲ್ಲಿದ್ದಾನೆ, ಹೇಗಿದ್ದಾನೆ ತೋರಿಸಿ ಎಂದು ಸವಾಲು ಹಾಕಿದ್ದನಂತೆ.
“ತಿಲಕಾಷ್ಟಮಹಿಷಬಂಧನ”ದ ಅಳಲೆಕಾಯಿ ಪಂಡಿತರು ಸಫಲರಾಗಲಿಲ್ಲ. ಆಗ ಚಾಣಾಕ್ಷಮತಿಯಾದ ಬೀರ್ ಬಲ್ ತಾನು ದೇವರನ್ನು ತೋರಿಸುವುದಾಗಿ ಅಕ್ಬರನ ಸವಾಲನ್ನು ಸ್ವೀಕರಿಸಿದನು. ಅದು ಹೇಗೆ ಸಾಧ್ಯವೆಂದು ಆಸ್ಥಾನ ಪಂಡಿತರು. ಹುಬ್ಬುಗಂಟಿಕ್ಕಿದರು. ಬೀರ್ ಬಲ್ ಒಂದು ಹರಿದ ಗೋಣೀ ಚೀಲ ತಂದು ಅಕ್ಟರ್ ಮುಂದೆ ಹಿಡಿದು “ಹುಜೂರ್, ಆಪ್ ಗೌರ್ ಸೇ ದೇಖಿಯೇ, ಇಸ್ ಮೇಂ ಅಲ್ಲಾಹ್ ಛಿಪಾ ಹುವಾ ಹೈ” ಎಂದು ಹೇಳಿದನಂತೆ (ಹುಜೂರ್, ಇದನ್ನು ದಿಟ್ಟಿಸಿ ನೋಡಿ. ಇದರಲ್ಲಿ ಅಲ್ಲಾ ಅಡಗಿದ್ದಾನೆ). ಅಕ್ಬರ್ ಕುತೂಹಲದಿಂದ ನೋಡಲು ಮು೦ದಾದಾಗ ಬೀರಬಲ್ “ಹುಜೂರ್, ಏಕ್ ಬಾತ್ ಬೋಲನಾ ಮೈಂ ಭೂಲ್ ಗಯಾ, ಜೋ ಸಹಿ ಮೇಂ ಅಪನೇ ಬಾಪ್ ಕಾ ಲಡಕಾ ಹೈ ಉಸೀ ಕೋ ಅಲ್ಲಾಹ್ ಇಸ್ ಮೇಂ ದಿಖಾಯೀ ದೇಗಾ, ಔರ್ ಕೋ ನಹೀಂ” (ಹುಜೂರ್, ಒಂದು ಮಾತು ಹೇಳುವುದನ್ನು ನಾನು ಮರೆತೆ, ಯಾರು ನಿಜವಾಗಿಯೂ ಅವರ ಅಪ್ಪನಿಗೆ ಹುಟ್ಟಿದ ಮಗನೋ ಅವನಿಗೆ ಮಾತ್ರ ದೇವರು ಇದರಲ್ಲಿ ಕಾಣಿಸುತ್ತಾನೆ, ಬೇರೆಯವರಿಗೆ ಕಾಣಿಸುವುದಿಲ್ಲ) ಎಂದಾಗ ಅಕ್ಬರ್ ಮರುಮಾತನಾಡದೆ ತಲೆಯಲ್ಲಾಡಿಸಿ “ಓಹೋ, ಎಷ್ಟು ಚೆನ್ನಾಗಿ ಅಲ್ಲಾ ಇದರಲ್ಲಿ ಕಾಣಿಸುತ್ತಿದ್ದಾನಲ್ಲಾ” ಎಂದು ಆನಂದತುಂದಿಲನಾಗಿ ಕೈಮುಗಿದನಂತೆ! ಚಕ್ರವರ್ತಿಯನ್ನೂ ಬೇಸ್ತು ಬೀಳುವಂತೆ ಮಾಡಬಲ್ಲ ಮೇಧಾಶಕ್ತಿ ಇದ್ದವನು ಬೀರ್ ಬಲ್. ಅಂತಹ ಬೀರ್ ಬಲ್ ಗಿಂತಲೂ ಹೆಚ್ಚಿನ ಮೇಧಾವಿಗಳು, ದೇವರನ್ನೇ ಬೆಚ್ಚಿಬೀಳುವಂತೆ ಮಾಡಬಲ್ಲ ಅಸಾಧಾರಣ ಶಕ್ತಿಯುಳ್ಳವರು, ಸುಳ್ಳನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಹೇಳಬಲ್ಲ ಬಿಯರ್ ಬಲ್ಲರು ರಾಜಕೀಯ ರಂಗದಲ್ಲಿ ಇದ್ದಾರೆ! ಪ್ರಜೆಗಳೇ ಪ್ರಭುಗಳು ಎಂಬ ಮಾತು ನಿಜ. ಆದರೆ ಜನರು ಪ್ರಭುಗಳಾಗಿ ರಾಜಕಾರಣಿಗಳ ಕಣ್ಣಿಗೆ ಕಾಣಿಸುವುದು ಚುನಾವಣೆಗಳಲ್ಲಿ ಮಾತ್ರ. ಹಳ್ಳಿಗಳಲ್ಲಿ ಗುಡಿ ಕಟ್ಟಲು ಅವರಿಂದ ಹಣ ಪಡೆದು, ಅವರು ಕೊಡುವ ಬೀರು ಬಾಟಲಿಗಳಿಗೆ ಮನಸೋತು ಕುಡಿತದ ಅಮಲಿನಲ್ಲಿ ಓಟು ಮಾಡಿದರೆ ಚುನಾವಣೆಗಳ ನಂತರ ಆ ದೇವರೇ ಗತಿ!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು ದಿ.13-3-2025.