ಗುರುವೇ ಗತಿ ಎನ್ನು ಮನವೇ !

  •  
  •  
  •  
  •  
  •    Views  


ಗುರುವೇ ಗತಿ ಎನ್ನು ಮನವೇ 

ತತ್ವ ಗುರುವಿನ ಪದಕಿಂತ ಪೆರತೊಂದು ಘನವೇ | ಕೇಳ್ ಪೆರತೊಂದು ಘನವೇ 
ಗುರುವೇ ಗತಿ ಎನ್ನು ಮನವೇ || ಪ || 

ಮರವೆಯಿಂ ಮರುಳನಾಗಿರುವೆ | 
ಮೂಳೆ ನರಮಾಂಸ ತನುವ ತಾನೆಂಬೋದು ತರವೇ | 
ಅರಿಯದೆ ಹಿಂದೆ ನೊಂದಿರುವೆ | 
ಮುಂದೆ ಕೊರತೆಯಿಲ್ಲದ ನಿಜಾನಂದದೊಳಿರುವೆ | ಆನಂದದೊಳಿರುವೆ | 
ಗುರುವೇ ಗತಿ ಎನ್ನು ಮನವೇ || 

ಧನಧಾನ್ಯ ಬಂಧು ಭಾಗ್ಯಗಳು | 
ನಿನ್ನ ಘನವ ನೀನರಿಯದ ಮಾಯಾಕಾರ್ಯಗಳು | 
ಕೊನೆಗಾಣದಿರುವೋ ದುಃಖಗಳು | ಅಲ್ಲಿ | ಮನವಿಟ್ಟ ನರನಿಗೆ ಬಿಡದು ಕೋಳಗಳು | 
ಕೇಳ್ ಬಿಡದು ಬಂಧಗಳು | 
ಗುರುವೇ ಗತಿ ಎನ್ನು ಮನವೇ || 

ತನ್ನ ತಾ ತಿಳಿವ ಸಾಹಸವ | 
ಬಿಟ್ಟು  ನೀನೆಂದು ದೃಶ್ಯವಾಗುವ ಬೀದಿ ಕಸವ | 
ಧ್ಯಾನಿಸುತಿರು ಓ ಮಾನಸವ | ಬಿಟ್ಟು  ನೀನೆಯಾದರೆ ಸೇವಿಸುವೆ ಸಿದ್ಧ ರಸವ | 
ಶ್ರೀ ಗುರು ಸಿದ್ಧ ರಸವ | 
ಗುರುವೇ ಗತಿ ಎನ್ನು ಮನವೇ || 

ಕುರುಹಿಲ್ಲವದು ಶೂನ್ಯವಲ್ಲ | 
ನಿತ್ಯ  ನಿರತಿಶಯಾನಂದ ನುಡಿಯೊಳಗಿಲ್ಲ | ಪರವಾದಿ ಇದನೇನ ಬಲ್ಲ | 
ಅಲ್ಲಿ | ಗುರುಶಂಕರರ ಬಿಟ್ಟು ಪೆರತೊಂಬೊದಿಲ್ಲ | 
ಕೇಳ್ ಪೆರತೊಂಬೊದಿಲ್ಲ |
ಗುರುವೇ ಗತಿ ಎನ್ನು ಮನವೇ ||

- ರಚನೆ : ಶಿವರಾಮ ಶಾಸ್ತ್ರಿಗಳು, ಮೈಸೂರು
- ಗಾಯನ : ಶ್ರೀಮತಿ ಸಿಂಚನಾ ಮೂರ್ತಿ