ಸೃಷ್ಟಿಯ ಆಚೆ ಇರುವ ವಿಶ್ವಚೈತನ್ಯ ! (The Cosmic Consciousness Beyond Creation!)
The Cosmic Consciousness Beyond Creation!

ಈ ಸೃಷ್ಟಿಯ ರಹಸ್ಯವನ್ನು ಭೇದಿಸುವ ಪ್ರಯತ್ನ ಮನುಕುಲದ ಆರಂಭದಿಂದಲೂ ನಿರಂತರವಾಗಿ ನಡೆಯುತ್ತಾ ಬಂದಿದೆ. ಈ ಸುಂದರವಾದ ಜಗತ್ತನ್ನು ನೋಡುವ ಕಣ್ಣುಗಳು ಈ ಭೂಮಿಯ ಮೇಲಲ್ಲದೆ ಸೂರ್ಯಮಂಡಲದ ಬೇರಾವ ಗ್ರಹಗಳಲ್ಲಿಯೂ ಇಲ್ಲವೆಂಬುದು ಖಚಿತ. ಕತ್ತಲಲ್ಲಿರುವ ವಸ್ತುಗಳು ಕಣ್ಣಿಗೆ ಕಾಣಿಸುವುದಿಲ್ಲ. ಯಾವುದೇ ವಸ್ತು ಕಣ್ಣಿಗೆ ಗೋಚರಿಸಬೇಕೆಂದರೆ ಬೆಳಕು ಬೇಕೇ ಬೇಕು. ಬೆಳಕಿನ ವೇಗ ಒಂದು ಸೆಕೆಂಡಿಗೆ 3 ಲಕ್ಷ ಕಿ.ಮೀ. ದೂರ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ವೇಗದಲ್ಲಿ ಬೆಳಕು ಒಂದು ವರ್ಷದಲ್ಲಿ ಕ್ರಮಿಸುವ ದೂರ ಸುಮಾರು ಹತ್ತು ಟ್ರಿಲಿಯನ್ ಕಿ.ಮೀ ಆಗುತ್ತದೆ. ಇದನ್ನು ಒಂದು ಜ್ಯೋತಿರ್ವರ್ಷ (Light Year) ಎಂದು ಕರೆಯುತ್ತಾರೆ. ಇದು ಬಾಹ್ಯಾಕಾಶದಲ್ಲಿರುವ ಗ್ರಹನಕ್ಷತ್ರಗಳ ದೂರವನ್ನು ಅಳೆಯಲು ಖಗೋಳ ವಿಜ್ಞಾನಿಗಳು ಬಳಸುವ ಒಂದು ಮಾನದಂಡ. ಈ ಮಾನದಂಡವನ್ನು ಅನುಸರಿಸಿ ಹೇಳುವುದಾದರೆ ಆಕಾಶದಲ್ಲಿ ಎಲ್ಲರ ಕಣ್ಣಿಗೆ ಜಗಮಗಿಸುವಂತೆ ಕಾಣುವ ಗ್ರಹನಕ್ಷತ್ರಗಳ ಬೆಳಕು ಭೂಮಿಗೆ ಬಂದು ತಲುಪುವ ವೇಳೆಗೆ ಸಹಸ್ರಾರು ಜ್ಯೋತಿರ್ವರ್ಷಗಳೇ ಆಗಿರುತ್ತದೆ. ಆದಕಾರಣ ನೂರು ವರ್ಷಗಳಿಗೂ ಹೆಚ್ಚು ಕಾಲ ಬದುಕಲಾಗದ ಮನುಷ್ಯನ ಕಣ್ಣುಗಳಿಗೆ ಗೋಚರಿಸುವ ಗ್ರಹನಕ್ಷತ್ರಗಳು ಈಗಿನವುಗಳಲ್ಲ. ಎಷ್ಟೋ ಕೋಟ್ಯಂತರ ವರ್ಷಗಳ ಹಿಂದಿನವು. ಅವುಗಳಲ್ಲಿ ಜೀವರಾಶಿ ಇದೆಯೇ? ಈ ಜಗತ್ತನ್ನು ನೋಡುವ ಕಣ್ಣುಗಳು ಇವೆಯೇ? ಎಂದು ಕೇಳುವ ಮೊದಲು ಆ ಗ್ರಹನಕ್ಷತ್ರಗಳು ಈಗ ಇವೆಯೇ, ಇಲ್ಲವೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದಕಾರಣ ವಿಜ್ಞಾನದ ದೃಷ್ಟಿಯಿಂದಲೂ ಇದೊಂದು ರೀತಿಯ ಮಾಯಾಪ್ರಪಂಚ !
ಈ ಜಗತ್ತನ್ನು ವಿಜ್ಞಾನಿಗಳು ನೋಡುವ ದೃಷ್ಟಿಯೇ ಬೇರೆ; ತತ್ವಜ್ಞಾನಿಗಳು ನೋಡುವ ದೃಷ್ಟಿಯೇ ಬೇರೆ ಆದರೂ ವಿಜ್ಞಾನಕ್ಕೂ ತತ್ವಜ್ಞಾನಕ್ಕೂ ಯಾವುದೇ ಸಂಘರ್ಷ ಇಲ್ಲ. ಎರಡೂ ಸಹ ಈ ಜಗತ್ತನ್ನು ಕುರಿತು ಆಳವಾದ ವಿಮರ್ಶಾತ್ಮಕ ಚಿಂತನೆಗಳನ್ನು ಹೊಂದಿವೆ. ವಿಜ್ಞಾನವು ಭೌತಿಕ ಪ್ರಪಂಚವನ್ನು ಕುರಿತು ಚಿಂತನೆಯನ್ನು ಮಾಡಿದರೆ, ತತ್ವಜ್ಞಾನವು ಇದರಾಚೆ ಇರುವ ಆತ್ಯಂತಿಕ ಸತ್ಯವನ್ನು ಕುರಿತು ಚಿಂತನೆಯನ್ನು ನಡೆಸುತ್ತದೆ. ಇಂದು ಯಾವುದನ್ನು ವಿಜ್ಞಾನ (science) ಎಂದು ಕರೆಯಲಾಗುತ್ತಿದೆಯೋ ಅದನ್ನು ಪ್ರಾಚೀನ ಕಾಲದಲ್ಲಿ ಕೇವಲ ಒಂದು ಸಾಮಾನ್ಯ ಜ್ಞಾನ (knowledge) ಎಂದು ಪರಿಗಣಿಸಲಾಗಿತ್ತು. ಈ ಸೃಷ್ಟಿಯ ಒಳಹೊರಗಿರುವ ಆತ್ಮದ ಅರಿವನ್ನು ಪಡೆಯುವುದಕ್ಕೆ ಮಾತ್ರ “ವಿಜ್ಞಾನ” ಎಂದು ಕರೆಯುತ್ತಿದ್ದರು. ಕಠೋಪನಿಷತ್ತಿನ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ಅಂತಹ ಆತ್ಮಜ್ಞಾನವುಳ್ಳ ವಿಜ್ಞಾನಿಯಾಗಬೇಕು. ಆಗ ಅವನು ನಿತ್ಯಸುಖವನ್ನು ಪಡೆಯುತ್ತಾನೆ (ಯಸ್ತು ವಿಜ್ಞಾನವಾನ್ ಭವತಿ, ಸಮನಸ್ಕಃ ಸದಾ ಶುಚಿಃ, ಸ ತು ತತ್‌ಪದಮಾಪ್ಪೋತಿ ಯಸ್ಮಾತ್ ಭೂಯೋ ನ ಜಾಯತೇ).
ಪ್ರಖ್ಯಾತ ಭೌತವಿಜ್ಞಾನಿಯಾದ ಐನ್‌ಸ್ಟೈನ್ “The word God is for me nothing but the expression and product of human weaknesses" (ದೇವರು ಎಂಬ ಶಬ್ದ ಮಾನವನ ದೌರ್ಬಲ್ಯಗಳಿಂದ ರೂಪುಗೊಂಡ ಒಂದು ಮೂರ್ತಸ್ವರೂಪ) ಎಂದು ಹೇಳಿದ್ದರೂ ಅವರು ದೇವರನ್ನು ಸಂಪೂರ್ಣವಾಗಿ ನಿರಾಕರಿಸುವ ನಾಸ್ತಿಕರಾಗಿರಲಿಲ್ಲ. ಅವರಿಗೆ ಪ್ರತಿಯೊಬ್ಬ ವ್ಯಕ್ತಿಯ ಭವಿತವ್ಯವನ್ನು ರೂಪಿಸಬಲ್ಲ ವ್ಯಕ್ತಿಗತ ದೇವರು (Personal God) ಇದ್ದಾನೆಂಬ ಬಗ್ಗೆ ಮಾತ್ರ ಸಮ್ಮತಿ ಇರಲಿಲ್ಲ. ಒಳ್ಳೆಯ ಕೆಲಸ ಮಾಡಿದವರಿಗೆ ಬಹುಮಾನ ಕೊಡುವ, ಕೆಟ್ಟ ಕೆಲಸ ಮಾಡಿದವರಿಗೆ ಶಿಕ್ಷೆ ಕೊಡುವ ದೇವರನ್ನು ನಾನು ಕಲ್ಪಿಸಿಕೊಳ್ಳಲಾರೆ (I cannot conceive of a God who rewards and punishes his creatures) ಎಂಬುದು ಅವರ ನಿಲುವಾಗಿತ್ತು. ಆದರೆ ಈ ಬ್ರಹ್ಮಾಂಡದ ಅಸೀಮ, ಅಭೇದ್ಯ, ಸುವ್ಯವಸ್ಥಿತ ರಚನೆಯ ಹಿಂದೆ ಇರುವ ಅದ್ಭುತ ಚೇತನವನ್ನು ಅವರು ದೇವರೆಂದು ಗೌರವಿಸಿದ್ದರು.
ಪ್ರಾಚೀನ ಋಷಿಮುನಿಗಳು ಇದನ್ನು ಸಾವಿರಾರು ವರ್ಷಗಳ ಹಿಂದೆಯೇ ಗುರುತಿಸಿದ್ದಾರೆ. ಈ ಸೃಷ್ಟಿಯಲ್ಲಿ ಒಂದು ಕ್ರಮವಿದೆ, ಶಿಸ್ತು (order) ಇದೆ. ಅದೇ “ಋತ!” ಆಕಾಶದಲ್ಲಿ ಗೋಚರಿಸುವ ಗ್ರಹತಾರೆಗಳು ಒಂದೆಡೆ ನಿಂತಂತೆ ತೋರಿದರೂ ನಿಂತಲ್ಲಿಯೇ ನಿಂತಿರುವುದಿಲ್ಲ. ಮನುಷ್ಯನಂತೆ ಅಡ್ಡಾದಿಡ್ಡಿ ತಿರುಗಾಡುವುದೂ ಇಲ್ಲ. ಒಂದು ನಿರ್ದಿಷ್ಟ ಕಕ್ಷೆಯಲ್ಲಿ ನಿರ್ದಿಷ್ಟವಾದ ಗತಿಯಲ್ಲಿ ಮನುಷ್ಯನ ಗ್ರಹಿಕೆಗೂ ಮೀರಿ ಗತಕಾಲದಿಂದ ತಿರುಗಣೆಯಂತೆ ತಿರುಗುತ್ತಾ ಬಂದಿವೆ.
ಜಗವ ನಿಕ್ಷೇಪಿಸಿದ ಕುಕ್ಷಿಯಲ್ಲಿ ಅಕ್ಷಯನಗಣಿತನು!
ಸಾಸಿರ ತಲೆ, ಸಾಸಿರ ಕಣ್ಣು, ಸಾಸಿರ ಕೈ, ಸಾಸಿರ ಪಾದ
ಸಾಸಿರ ಸನ್ನಿಹಿತ ನಮ್ಮ ಕೂಡಲಸಂಗಯ್ಯ!
ಈ ಸೃಷ್ಟಿಯ ಆಚೆ ಇರುವ ವಿಶ್ವಚೈತನ್ಯದ ವಿರಾಡ್‌ರೂಪ ದರ್ಶನವನ್ನು ಬಸವಣ್ಣನವರು ಇಲ್ಲಿ ಮಾಡಿಕೊಟ್ಟಿದ್ದಾರೆ. "ಸಹಸ್ರಶೀರ್ಷಾ ಪುರುಷಃ ಸಹಸ್ರಾಕ್ಷಾತ್ ಸಹಸ್ರಪಾತ್" ಎಂದು ಋಗ್ವೇದದ ಪುರುಷಸೂಕ್ತದಲ್ಲಿ ವರ್ಣಿಸಿದಂತೆ ಆ ವಿಶ್ವಾತ್ಮನಿಗೆ ಸಾವಿರ ತಲೆ, ಸಾವಿರ ಕಣ್ಣು, ಸಾವಿರ ಕೈ, ಸಾವಿರ ಪಾದಗಳು ಇವೆಯೆಂದು ಇಲ್ಲಿ ಹೇಳಲಾಗಿದೆ. ಇದನ್ನು ಶಾಬ್ದಿಕವಾಗಿ ಅರ್ಥೈಸಿದರೆ ಹಿಂದೂಗಳ ದೇವರು ಎಂತಹ ವಿಚಿತ್ರ ಪ್ರಾಣಿ ಎಂಬ ಮೂದಲಿಕೆಗೆ ಗ್ರಾಸವಾಗುತ್ತದೆ. ವೈದ್ಯಕೀಯ ಶಾಸ್ತ್ರದಲ್ಲಿ ಆರು ಕೈಬೆರಳು, ಆರು ಕಾಲ್ಬೆರಳು ಇರುವ ಮಕ್ಕಳನ್ನು ಅಥವಾ ಎರಡು ಶರೀರಗಳು ಪರಸ್ಪರ ಅಂಟಿಕೊಂಡು ಹುಟ್ಟುವ ಸಯಾಮಿ ಮಕ್ಕಳನ್ನು abnormal children ಎಂದು ಕರೆಯುತ್ತಾರೆ. ಹಾಗೆ ದೇವರು ಸಾವಿರ ತಲೆ, ಸಾವಿರ ಕಣ್ಣು, ಸಾವಿರ ಕೈಕಾಲುಗಳನ್ನುಳ್ಳ ವಿಲಕ್ಷಣಕಾಯನಲ್ಲ. ಅಂತಹ ದೇವರೇನಾದರೂ ಪ್ರತ್ಯಕ್ಷನಾದರೆ ಭಕ್ತರು ಅಡ್ಡಬಿದ್ದು ಆರಾಧಿಸದೆ ಭಯಭೀತರಾಗಿ ಓಟ ಕೀಳುವುದರಲ್ಲಿ ಅನುಮಾನವಿಲ್ಲ! ಮನುಷ್ಯನ ಅಂಗಾಂಗಗಳ ಹೆಸರುಗಳನ್ನು ಬಳಸಿ ಮಾಡಿರುವ ಈ ವರ್ಣನೆಯನ್ನು ಶಾಬ್ದಿಕವಾಗಿ ಗ್ರಹಿಸದೆ ಸಾಂಕೇತಿಕ ಅರ್ಥದಲ್ಲಿ ಗ್ರಹಿಸಬೇಕು. ದೇವರು ಸಾವಿರ ತಲೆಯುಳ್ಳವನು ಎಂದರೆ ಸರ್ವಜ್ಞ (omniscient), ಸಾವಿರ ಕಣ್ಣುಗಳುಳ್ಳವನು ಎಂದರೆ ವಿಶ್ವಚೈತನ್ಯ (cosmic consciousness), ಸಾವಿರ ಕೈಯುಳ್ಳವನು ಎಂದರೆ ಸರ್ವಶಕ್ತ (omnipotent), ಸಾವಿರ ಪಾದಗಳುಳ್ಳವನು ಎಂದರೆ ಸರ್ವಾಂತರ್ಯಾಮಿ (omnipresent) ಎಂಬ ದಾರ್ಶನಿಕ ಅರ್ಥ ಈ ವಚನದ ಸಾಲುಗಳಲ್ಲಿ ಅಡಗಿದೆ. ಪ್ರಖ್ಯಾತ ಆಂಗ್ಲಕವಿ ಲಾರ್ಡ್ ಬೈರನ್ ಬರೆದ ಕವಿತೆ ಇಲ್ಲಿ ಸ್ಮರಣೀಯ:
There's music in the sighing of a ree;
There's music in the gushing of a rill;
There's music in all things, if men had ears;
Their earth is but an echo of the spheres!
(ಭಾವಾನುವಾದ)
ಸುಳಿವ ಗಾಳಿಯಲಿ ನಾದ ಮಾಧುರ್ಯವಿದೆ,
ಹರಿವ ಝರಿಯಲ್ಲಿ ತಾಳ, ತಾನವಿದೆ,
ಕೇಳುವ ಕಿವಿಗಳಿದ್ದರೆ ಎಲ್ಲೆಡೆ ಸಂಗೀತವಿದೆ
ಧರೆಯ ನಿನಾದ ನಭೋ ಮಂಡಲದಿ ಮಾರ್ದನಿಗೊಳ್ಳುತಲಿದೆ!
ನಿಸರ್ಗವು ಭಗವಂತನ ಕೈಯಲ್ಲಿರುವ ಶ್ರುತಿಗೈದ ವೀಣೆ . ಈ ಸೃಷ್ಟಿಯಲ್ಲಿ ಒಂದು ತಾಳವಿದೆ, ರಾಗವಿದೆ. ಆದರೆ ನಿಸರ್ಗದ ಕೂಸಾದ ಮನುಷ್ಯನ ಜೀವನ ಮಾತ್ರ ರಾಗ ತಾಳಮೇಳಗಳಿಲ್ಲದ ಒಡೆದ ಮಡಕೆಯಂತಾಗಿದೆ...!
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.
ವಿಜಯ ಕರ್ನಾಟಕ
ಬಿಸಿಲು ಬೆಳದಿಂಗಳು (27.3.2025)