ಮೂರ್ಖರ ದಿನವೋ ಮೂರ್ಖರನ್ನಾಗಿಸುವ ದಿನವೋ?!

  •  
  •  
  •  
  •  
  •    Views  

ಪ್ಪತ್ತರ ದಶಕದ ಆರಂಭ. ಆಗ ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಓದುತ್ತಿದ್ದ ನಮ್ಮ ವಿದ್ಯಾರ್ಥಿ ಜೀವನದ ಒಂದು ಹಸಿರಾದ ನೆನಪು. ಈಗಿರುವಷ್ಟು ವಿಶ್ವವಿದ್ಯಾನಿಲಯಗಳು ಆಗ ಇರಲಿಲ್ಲ. ಕರ್ನಾಟಕದ ಈಗಿನ ವಿಶ್ವವಿದ್ಯಾನಿಲಯಗಳು ಹೆಸರಿಗೆ ಮಾತ್ರ ವಿಶ್ವವಿದ್ಯಾನಿಲಯಗಳಾಗಿವೆ. ಆದರೆ ಇವುಗಳಲ್ಲಿ ನಡೆಯುವ ಅಧ್ಯಯನವು ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ ಇತ್ಯಾದಿ ಒಂದು ನಿರ್ದಿಷ್ಟ ವಿಷಯಕ್ಕೆ ಸೀಮಿತವಾಗಿದೆ. ಆಯಾಯ ವಿಷಯದ ಅಧ್ಯಯನದ ವಿಸ್ತಾರವು ವಿಶ್ವವ್ಯಾಪಕವಾಗಿದ್ದರೂ ವಿಷಯಗಳ ಅಧ್ಯಯನದ ವೈವಿಧ್ಯತೆಯು ಕಾಣುತ್ತಿಲ್ಲ. ಹೆಚ್ಚು ಹೆಚ್ಚು ಹೊಸ ವಿಶ್ವವಿದ್ಯಾನಿಲಯಗಳು ಸ್ಥಾಪನೆಯಾದಂತೆ ಹಳೆಯ ವಿಶ್ವವಿದ್ಯಾನಿಲಯಗಳ ಭೌಗೋಲಿಕ ವ್ಯಾಪ್ತಿಯು ಕಡಿಮೆಯಾಗಿ ವಿಭಿನ್ನ ವಿಷಯಗಳ ಅಧ್ಯಯನದ ವ್ಯಾಪ್ತಿಯೂ ಸಂಕುಚಿತಗೊಂಡಿದೆ. 

ಮಹಾತ್ಮಾ ಗಾಂಧೀಜಿಯವರ ಆತ್ಮೀಯ ಒಡನಾಡಿಗಳಾಗಿದ್ದ ಪಂಡಿತ್ ಮದನಮೋಹನ ಮಾಲವೀಯಜೀ ಅವರಿಂದ ಸ್ಥಾಪಿತಗೊಂಡ ಬನಾರಸ್ ಹಿಂದೂ ಯೂನಿವರ್ಸಿಟಿಯು ಮಾತ್ರ ಈಗಲೂ ತನ್ನ ಮೊದಲಿನ ಸ್ವರೂಪವನ್ನೇ ಉಳಿಸಿಕೊಂಡು ಬಂದಿದೆ. ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಲ್ಲಿ ಆರ್ಟ್ಸ್, ಸೈನ್ಸ್, ಮೆಡಿಕಲ್, ಇಂಜಿನಿಯರಿಂಗ್ ಇತ್ಯಾದಿ ಆಯಾಯ ವಿಷಯಗಳಿಗೆ ಸಂಬಂಧಪಟ್ಟಂತೆ ಕಾಲೇಜುಗಳು ಇರುವಂತೆ ಆಯಾಯ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆಂದೇ ಪ್ರತ್ಯೇಕ ವಿದ್ಯಾರ್ಥಿನಿಲಯಗಳಿವೆ. ಬೋಧಿಸುವ ಎಲ್ಲ ಅಧ್ಯಾಪಕರಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಒಂದೊಂದು ಬಡಾವಣೆಯೋ ಎಂಬಂತೆ ನೂರಾರು ಮನೆಗಳಿವೆ. ಒಂದೇ ಕ್ಯಾಂಪಸ್ ನಲ್ಲಿ ಇಷ್ಟೊಂದು ವ್ಯವಸ್ಥಿತವಾದ ಬೃಹತ್ ಪ್ರಮಾಣದ ದೇಶವಿದೇಶಗಳ ವಿದ್ಯಾರ್ಥಿಗಳನ್ನು ಆಕರ್ಷಿಸುವ ವಿಶ್ವವಿದ್ಯಾನಿಲಯ ಏಷ್ಯಾಖಂಡದಲ್ಲಿಯೇ ಮತ್ತೊಂದು ಇಲ್ಲವೆಂದು ಹೇಳುತ್ತಾರೆ. 

70 ರ ದಶಕದಲ್ಲಿ ದಕ್ಷಿಣಭಾರತದಿಂದ ಈ ವಿಶ್ವವಿದ್ಯಾನಿಲಯದಲ್ಲಿ ಓದಲು ಬರುವ ವಿದ್ಯಾರ್ಥಿಗಳ ಸಂಖ್ಯೆ ಬಹಳವಾಗಿತ್ತು. ಆಗ ಈ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶಾವಕಾಶವನ್ನು ಪಡೆದ ನಮಗೆ ವಿದ್ಯಾಭ್ಯಾಸದ ಖರ್ಚಿಗೆಂದು ಮಠದಿಂದ ಹಣ ತರಿಸಿಕೊಳ್ಳುವ ಪ್ರಮೇಯ ಅಷ್ಟಾಗಿ ಬರಲಿಲ್ಲ. ಯು.ಜಿ.ಸಿ ಯಿಂದ ತಿಂಗಳಿಗೆ 300 ರೂ. ಜೂನಿಯರ್ ರಿಸರ್ಚ್ ಫೆಲೋಷಿಪ್ ಬರುತ್ತಿತ್ತು. ಅಷ್ಟರಲ್ಲಿ ತಿಂಗಳ ಖರ್ಚನ್ನು ನಿಭಾಯಿಸುವುದು ನಮಗೆ ಕಷ್ಟವೇನೂ ಆಗುತ್ತಿರಲಿಲ್ಲ. ಒಮ್ಮೆ ಎಂದಿನಂತೆ ಬೆಳಗ್ಗೆ ಕಾಲೇಜಿಗೆ ಹೋಗಲು ಸಿದ್ದರಾಗಿ ನಮ್ಮ ವಿದ್ಯಾರ್ಥಿನಿಲಯದ ವಾಸದ ಕೊಠಡಿಯಿಂದ ಹೊರಬಂದಾಗ ಓಡಾಡಲು ಬಳಸುತ್ತಿದ್ದ ನಮ್ಮ ಬೈಸಿಕಲ್ ಇರಲಿಲ್ಲ. ವಿದ್ಯಾರ್ಥಿನಿಲಯದ ಒಳ ಅವರಣದೊಳಗೆ ವಾಸದ ಕೊಠಡಿಯ ಮುಂಭಾಗದಲ್ಲಿಯೇ ಸದಾ ನಿಲ್ಲಿಸಿರುತ್ತಿದ್ದ ಅದನ್ನು ಯಾರೂ ಕದ್ದುಕೊಂಡು ಹೋಗಲು ಸಾಧ್ಯವಿರಲಿಲ್ಲ. ಯಾರಾದರೂ ಗೆಳೆಯರು ತೆಗೆದುಕೊಂಡು ಹೋಗಿರಬಹುದೇ ಎಂದು ಅಕ್ಕಪಕ್ಕದವರನ್ನು ಕೇಳಿದಾಗ ಎಲ್ಲರೂ ಗಂಭೀರವದನರಾಗಿ ವಿಸ್ಮಯ ವ್ಯಕ್ತಪಡಿಸಿದರು. ಅವರಲ್ಲೊಬ್ಬ ಆತ್ಮೀಯ ಗೆಳೆಯ ಹುಡುಕುವವನಂತೆ ನಟಿಸಿ ‘‘ಆಪ್ ಕೀ ಬೈಸಿಕಲ್ ಪೇಡ್ ಕೇ ಊಪರ್ ಚಡ್ ರಹೀಂ ಹೈಂ’’ (ತಮ್ಮ ಬೈಸಿಕಲ್ ಮರವನ್ನು ಹತ್ತುತ್ತಿದೆ!) ಎಂದು ಮರದ ಕಡೆ ತೋರಿಸಿ ಗೇಲಿಮಾಡಿದ. ಕತ್ತೆತ್ತಿ ನೋಡಿದಾಗ ಮರದ ಕೊಂಬೆಯ ಮೇಲೆ ನಮ್ಮ ಬೈಸಿಕಲ್ ಇತ್ತು! ಎಲ್ಲ ಗೆಳೆಯರೂ ನೋಡಿ ಹೋ..!! ಎಂದು ಗಹಗಹಿಸಿ ನಗತೊಡಗಿದರು. ಆಗ ನಮಗೆ ನೆನಪಾಯಿತು: ಅಂದು ಏಪ್ರಿಲ್ ಒಂದು. ನಮ್ಮನ್ನು ಏಪ್ರಿಲ್ ಫೂಲ್ ಮಾಡಲು ಗೆಳೆಯರು ಸಂಚು ಮಾಡಿ ಹಿಂದಿನ ರಾತ್ರಿ ಮಾಡಿದ್ದ ಸಾಹಸಕೃತ್ಯ ಅದಾಗಿತ್ತು! 

ಅದರ ಹಿಂದೆ ಗೆಳೆತನದ ಸಲುಗೆ, ಗಾಢವಾದ ಸ್ನೇಹವಿಶ್ವಾಸ ಅಡಗಿದ್ದವು. ಅವರ ನಗುವಿನೊಂದಿಗೆ ಒಂದಾದಾಗ ಎಲ್ಲರೂ ಮರದ ಮೇಲಿನಿಂದ ಬೈಸಿಕಲ್ಲನ್ನು ಕೆಳಗೆ ಇಳಿಸಿಕೊಳ್ಳಲು ನೆರವಾದರು. ಗೆಳೆತನದ ಸ್ನೇಹ ವಿಶ್ವಾಸದಲ್ಲಿ ಅವರಿಗೆ ಸಿಹಿತಿಂಡಿಯನ್ನು ಕೊಡಿಸಿದಾಗಲಂತೂ ಖುಷಿಯೋ ಖುಷಿ. ಆ ಖುಷಿಯಲ್ಲಿ ಮೈಮರೆತರೆ ಮೋಸಹೋಗುವ ಸಂದರ್ಭಗಳೂ ಉಂಟೆಂದು ಕಣ್ಣಾರೆ ಕಂಡ ಉದಾಹರಣೆಗಳೂ ಇಲ್ಲದಿಲ್ಲ. ಕೆಲವರು ಗೆಳೆಯರು ತಮ್ಮ ಜನ್ಮದಿನವೆಂದು ಹೇಳಿಕೊಂಡು ಬರುತ್ತಿದ್ದರು. ಕೈಯಲ್ಲಿ ತೆಗೆದುಕೊಂಡು ಬಂದ ತಿಂಡಿತಿನಸುಗಳುಳ್ಳ ಮಣ್ಣಿನ ಕುಡಿಕೆಯ ಮುಚ್ಚಳವನ್ನು ಮೇಲೆತ್ತಿ ಗೆಳೆಯರ ಮುಂದೆ ಹಿಡಿಯುತ್ತಿದ್ದರು. ಅವರು ನೋಡದೆ ಕೈಚಾಚಿ ತೆಗೆದುಕೊಂಡರೆ ಕೆಲವರಿಗೆ ಮಾತ್ರ ಮೇಲೆ ಇದ್ದ ಜಿಲೇಬಿ ಮತ್ತು ಬರ್ಫಿ ಒಂದೆರಡು ಮಾತ್ರ ಸಿಗುತ್ತಿದ್ದವು !  ಉಳಿದವರಿಗೆ ಕೆಳಗೆಲ್ಲಾ ಬರೀ ಮಣ್ಣು ಮತ್ತು ಮರಳು! 

ಹೀಗೆ ಸ್ನೇಹಿತರು, ಸಹೋದ್ಯೋಗಿಗಳು, ಕುಟುಂಬದ ಸದಸ್ಯರು, ಅಧ್ಯಾಪಕರು, ಅಕ್ಕಪಕ್ಕದ ಮನೆಯವರು ಮುಂತಾದವರನ್ನು ಯಾವುದೇ ದುರುದ್ದೇಶವಿಲ್ಲದೆ ತಮಾಷೆಗಾಗಿ ಮೋಸಗೊಳಿಸಿ ಖುಷಿಪಡುವುದೇ ಮೂರ್ಖರ ದಿನ. ಏಪ್ರಿಲ್ ಒಂದನೆಯ ದಿನಾಂಕ ಬಂತೆಂದರೆ ಪ್ರತಿವರ್ಷವೂ ಅನೇಕರು ಆ ದಿನದಂದು ಇತರರನ್ನು ಮೂರ್ಖರನ್ನಾಗಿಸಲು ತುದಿಗಾಲ ಮೇಲೆ ನಿಂತಿರುತ್ತಾರೆ. ಗೆಳೆಯರಿಗೆ ಆಘಾತಕಾರಿಯಾದ ಸುದ್ದಿಯೊಂದನ್ನು ಹೇಳಿ ಅವರನ್ನು ಕಕ್ಕಾವಿಕ್ಕಿಯಾಗಿಸಿ ನಂತರ ಅದು ಸುಳ್ಳೆಂದು ತಿಳಿಸಿ ಮೂರ್ಖರನ್ನಾಗಿಸುವ ತಂತ್ರ ಅದು. ಗೆಳೆಯರಾಗಲಿ ಬಂಧುಗಳಾಗಲಿ ಆ ದಿನ ಯಾವುದಾದರೂ ನೆಪವೊಡ್ಡಿ ನಿಮ್ಮನ್ನು ಮೂರ್ಖರನ್ನಾಗಿಸುತ್ತಾರೆ. ಅನೇಕ ಶತಮಾನಗಳಿಂದ ಪಾಶ್ಚಾತ್ಯರಾಷ್ಟ್ರಗಳಲ್ಲಿ ಆಚರಿಸಿದಂತೆ ನಮ್ಮ ದೇಶದಲ್ಲಿಯೂ ಇದು ಜಾರಿಗೆ ಬಂದಿರುವುದರಿಂದ ನಿಮಗೆ ಮುನ್ನೆಚ್ಚರಿಕೆ ನೀಡುವುದಕ್ಕಾಗಿ ಈ ಲೇಖನ. 

ಪಾಶ್ಚಾತ್ಯ ದೇಶಗಳ ಪ್ರಸಿದ್ದ ಪತ್ರಿಕೆಗಳು ಈ ದಿನದಂದು ಮುಖಪುಟದಲ್ಲಿ ಪ್ರತಿಷ್ಠಿತ ವ್ಯಕ್ತಿಗಳ ಸಾವಿನ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಓದುಗರನ್ನು ಬೆಚ್ಚಿಬೀಳಿಸಿದ ಉದಾಹರಣೆಗಳು ಇವೆ. ಸ್ವೀಡನ್ ದೇಶದಲ್ಲಿ 60ರ ದಶಕದಲ್ಲಿ ಬಣ್ಣದ ಟಿ.ವಿ ಗಳು ಇರಲಿಲ್ಲ. ಆ ದೇಶದ ದೂರದರ್ಶನ ಕೇಂದ್ರ ಒಂದು ಅಪ್ಪಟ ಸುಳ್ಳು ಸುದ್ದಿಯನ್ನು ಪ್ರಕಟಿಸಿತು. ಒಂದು ನೈಲಾನ್ ಬಟ್ಟೆಯನ್ನು ಬಳಸಿಕೊಂಡು ಕಪ್ಪು-ಬಿಳುಪು ಟಿ.ವಿ ಸೆಟ್ ಗಳನ್ನೇ ಬಣ್ಣದ ಟಿ.ವಿ. ಗಳನ್ನಾಗಿ ಹೇಗೆ ಪರಿವರ್ತಿಸಿಕೊಳ್ಳಲು ಬರುತ್ತದೆಯೆಂದು ಹೆಸರಾಂತ ತಾಂತ್ರಿಕ ತಜ್ಞರಿಂದ ಬಿತ್ತರಿಸಲಾಯಿತು. ತಕ್ಷಣವೇ ಸಾವಿರಾರು ಜನರು ಪ್ರಯೋಗ ಮಾಡತೊಡಗಿ ಬೇಸ್ತುಬಿದ್ದರು.  70ರ ದಶಕದಲ್ಲಿ ಇಂಗ್ಲೆಂಡಿನ The Guardian ಪತ್ರಿಕೆ 7 ಪುಟಗಳ ಒಂದು ವಿಶೇಷ ಪುರವಣಿಯನ್ನು ಹೊರತಂದು ಅದರಲ್ಲಿ ಹಿಂದೂ ಮಹಾಸಾಗರದಲ್ಲಿ ಇಲ್ಲದ ಎರಡು ಸುಂದರ ದ್ವೀಪಗಳ ಬಗ್ಗೆ ಅನೇಕ ರೋಚಕ ಲೇಖನಗಳನ್ನು ಪ್ರಕಟಿಸಿ ಪ್ರವಾಸದ ಹುಚ್ಚು ಇರುವವರನ್ನು ಬೇಸ್ತುಬೀಳಿಸಿತ್ತು. ಇಡೀ ದಿನವೆಲ್ಲಾ ಪತ್ರಿಕಾ ಕಾರ್ಯಾಲಯಕ್ಕೆ ಹೆಚ್ಚಿನ ಮಾಹಿತಿ ಕೇಳಿ ಪ್ರವಾಸಿಗರಿಂದ ಫೋನುಗಳ ಸುರಿಮಳೆ! 

ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಮೂರ್ಖರ ವಿಚಾರ ಇಲ್ಲವೆಂದು ಹೇಳಲಾಗದು. ದಾರ್ಶನಿಕರಿಗೆ ಪ್ರಾಪಂಚಿಕರು ಮೂರ್ಖರಂತೆ ಕಾಣಿಸುತ್ತಾರೆ. ಆದರೆ ಪ್ರಾಪಂಚಿಕರು ದಾರ್ಶನಿಕರನ್ನೇ ಮೂರ್ಖರು ಎಂದು ಕರೆಯಬಹುದು. ಇರುವ ಧನ-ಕನಕ ಭಾಗ್ಯವನ್ನೆಲ್ಲಾ ಬಿಟ್ಟು ತಾಳ ತಂಬೂರಿ ಕೈಯಲ್ಲಿ ಹಿಡಿದು ಕಾಲಿಗೆ ಗೆಜ್ಜೆ ಕಟ್ಟಿ ಕೀರ್ತನೆ ಹಾಡುತ್ತಾ ಮನೆಯಿಂದ ಹೊರನಡೆದ ಪುರಂದರದಾಸರು ಈಗಿನ ಧನ-ಕನಕ ದಾಸರುಗಳಿಗೆ ಮೂರ್ಖರಂತೆ ಕಂಡರೆ ಆಶ್ಚರ್ಯವಿಲ್ಲ. ಅಂತಹ ಪ್ರಾಪಂಚಿಕರು ಪುರಂದರದಾಸರಿಗೆ ಹುಚ್ಚಪ್ಪಗಳಂತೆ ಕಾಣಿಸುತ್ತಾರೆ. ಬದ್ಧರನ್ನು ನೋಡಿ ಬುದ್ಧ ನಕ್ಕರೆ ಬುದ್ಧನನ್ನು ನೋಡಿ ನಗುವ ಹಕ್ಕು ಬದ್ದರಿಗೂ ಇರಲೇಬೇಕಲ್ಲವೇ! ಗಾಂಧಿಯನ್ನೂ ಮೂರ್ಖನನ್ನಾಗಿ ನೋಡುವುದು ಈಗ ಒಂದು ಹೊಸ ನೋಟವಾಗಿದೆ. 

ವಿನೋದಕ್ಕಾಗಿ, ಕುಚೇಷ್ಟೆಗಾಗಿ ಆಚರಿಸುವ ಈ ದಿನ ಹಾಸ್ಯಮಯವಾಗಿರಬೇಕೇ ವಿನಾ ಕುಚೋದ್ಯ, ಅಪಹಾಸ್ಯಗಳು ಆಘಾತ ತರುವಂಥದ್ದಾಗಬಾರದು. ಆಂಥದೊಂದು ಘಟನೆಯನ್ನು ಹಿರಿಯರಿಂದ ಬಾಲ್ಯದಲ್ಲಿ ಕೇಳಿದ ನೆನಪು, ಹಳ್ಳಿಗಳಲ್ಲಿ ನಡೆಯುವ ಮದುವೆಮನೆಗಳಲ್ಲಿ ಮದುಮಗನನ್ನು ಬಚ್ಚಿಡುವ ಒಂದು ಸಂಪ್ರದಾಯವಿತ್ತು. ಹಾಗೆ ಬಚ್ಚಿಟ್ಟು ಅವನನ್ನು ಹುಡುಕಲು ಮದುವಣಗಿತ್ತಿಗೆ ಹಚ್ಚುತ್ತಿದ್ದರು. ಹುಡುಕಲು ಆಗದಿದ್ದಾಗ ಗಂಡನ್ನು ಬಚ್ಚಿಟ್ಟ ಸ್ಥಳಕ್ಕೆ ಕರೆದುಕೊಂಡು ಹೋಗಿ ತೋರಿಸಿ ಬಂಧುಗಳು ವಧುವನ್ನು ಗೇಲಿ ಮಾಡುತ್ತಿದ್ದರು. ಅಂತಹ ಒಂದು ಸಂದರ್ಭ. ಎಷ್ಟು ಹುಡುಕಿದರೂ ಬಚ್ಚಿಟ್ಟ ಗಂಡನ್ನು ಪತ್ತೆ ಮಾಡಲು ವಧುವಿನಿಂದ ಆಗಲಿಲ್ಲ. ಮದುವೆ ಗಂಡನ್ನು ಉಪ್ಪರಿಗೆ ಮನೆಯ ಮೂಲೆಯಲ್ಲಿದ್ದ ಮರದ ಪೆಟ್ಟಿಗೆಯೊಂದರಲ್ಲಿ ಬಚ್ಚಿಟ್ಟು ಬೀಗ ಹಾಕಲಾಗಿತ್ತು. ಹುಡುಕಲು ಸೋತ ವಧುವನ್ನು ಕರೆದುಕೊಂಡು ಹೋಗಿ ಪೆಟ್ಟಿಗೆಯ ಬೀಗವನ್ನು ತೆರೆದು ನೋಡಿದರೆ ಮದುವೆ ಗಂಡು ಉಸಿರುಕಟ್ಟಿ ಸತ್ತುಹೋಗಿದ್ದ! 

ಜಾಣ ಓದುಗರೇ! ಮೂರ್ಖರ ಪೆಟ್ಟಿಗೆ (Idiots Box) ಎನ್ನಿಸಿದ ಟಿ.ವಿ ಬಂದ ಮೇಲೆ ನಮ್ಮ ದೇಶದ ರಾಜಕಾರಣದಲ್ಲಿ ದೂರದರ್ಶನದಲ್ಲಿ ಕಾಣಿಸಿಕೊಳ್ಳುವವರು ಮೂರ್ಖರೋ, ನೋಡುವವರು ಮೂರ್ಖರೋ ಅಥವಾ ಇಬ್ಬರೂ ಮೂರ್ಖರೋ ಎಂದು ತಿಳಿಯದಾಗಿದೆ! ನಮ್ಮ ದೇಶದಲ್ಲಿ ಮೂರ್ಖರ ದಿನ ವರ್ಷಕ್ಕೊಮ್ಮೆ ಏಪ್ರಿಲ್ 1 ರಂದು ಮಾತ್ರ ನಡೆಯುತ್ತದೆ ಎಂದು ಯಾರೂ ಭಾವಿಸಬೇಕಿಲ್ಲ. ಚುನಾವಣೆಗಳು ಬಂದಾಗಲೆಲ್ಲಾ ನಮ್ಮ ದೇಶದ ರಾಜಕಾರಣಿಗಳು ಮತದಾರರನ್ನು ಮೂರ್ಖರನ್ನಾಗಿಸುತ್ತಾರೆ. ಉಪಚುನಾವಣೆಗಳು ನಡೆಯುವ ಕ್ಷೇತ್ರಗಳಲ್ಲಂತೂ ಯುಗಾದಿ ಬಂದರೆ  ಭಾರೀ ಜೋರು. ಆ ಕ್ಷೇತ್ರಗಳ ಅನೇಕ ಮತದಾರರಿಗೆ ಆಗಸದಲ್ಲಿ ಬಿದಿಗೆಯ ಚಂದ್ರ ಒಂದಲ್ಲ ಎರಡು ಕಂಡರೆ ಆಶ್ಚರ್ಯಪಡಬೇಕಾಗಿಲ್ಲ !  ಈ ಹಿನ್ನೆಲೆಯಲ್ಲಿ ನಮ್ಮ ಮಠದ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ರಾ. ವೆಂಕಟೇಶ ಶೆಟ್ಟರು ಬರೆದ ಪದ್ಯದ ಪರಿಷ್ಕೃತ ರೂಪ:

ಡ್ರೈವರ್ ವೇದಾಂತ !

ಸೀಟಿನಲಿ ನೀನು ಬಾಟ್ಲಿಯಲಿ ಪರಮಾತ್ಮನು
ಇರುವುದೇ ದ್ವೈತ!
ಬಾಟ್ಲಿಯ ಪರಮಾತ್ಮನು ಹೊಟ್ಟೆಗಿಳಿದರೆ
ಅದೇ ಅದ್ವೈತ!
ಕಣ್ಣು ಮಂಜಾಗಿ ರೋಡು ಎರಡಾಗಿ
ಲಾರಿ ಡ್ಯಾನ್ಸ್ ಮಾಡುವುದೇ ವಿಶಿಷ್ಟಾದ್ವೈತ!
ಮರಕ್ಕೆ ಮುತ್ತಿಟ್ಟು ಪಕ್ಕೆಲಬು ಮುರಿದು
On the spot ಗೊಟಕ್ ಎಂದರೆ,
ಅದೇ ಶಕ್ತಿವಿಶಿಷ್ಟಾದ್ವೈತ ಕಾಣಾ, ಗೊಟಕೇಶ್ವರಾ!
 

ಶ್ರೀ ತರಳಬಾಳು ಜಗದ್ಗುರು 
ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು, ಸಿರಿಗೆರೆ.

1.4.2025

Test