ಯಮುನಾ ನದೀ ತೀರದಿಂದ ಒಂದು ಪತ್ರ

ವದಂತಿಗಳನ್ನು ಹರಿಬಿಟ್ಟು ನೆಮ್ಮದಿ ಹಾಳುಮಾಡುವ 'ಸತ್ರಾಜಿತ'ರಿಗೆ ಶಾಸ್ತಿಯಾಗಬೇಕು
ಯಮುನಾ ನದೀ ತೀರದಿಂದ ಒಂದು ಪತ್ರ
ಎರಡು ವಾರಗಳ ಹಿಂದೆ ಅನಿರೀಕ್ಷಿತವಾದ ದೂರವಾಣಿ ಕರೆಯೊಂದು ಕಾಶಿಯಿಂದ ಬಂದಿತ್ತು. ಕರೆ ಮಾಡಿದವರು 50 ವರ್ಷಗಳ ಹಿಂದೆ ಬನಾರಸ್ ಹಿಂದೂ ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾಗ ನಮ್ಮ ಆತ್ಮೀಯ ಒಡನಾಡಿಗಳಾಗಿದ್ದ ರಾಮ್ ಮೋಹನ್ ಪಾಂಡೆ! ಅವರು ವಿಶ್ವವಿದ್ಯಾನಿಲಯದ “ಪ್ರಜ್ಞಾ” ಎಂಬ ಸಂಶೋಧನಾ ಸಂಚಿಕೆಯ ಸಂಪಾದಕರಾಗಿದ್ದರು. ಅವರೊಂದಿಗೆ ಮಾತನಾಡದೆ ಬಹಳ ವರ್ಷಗಳೇ ಆಗಿದ್ದವು. ದೀರ್ಘಕಾಲ ಮಾತನಾಡದೇ ಇದ್ದರೂ ನಮ್ಮೊಡನೆ ಇದ್ದ ಅವರ ಸ್ನೇಹ ವಿಶ್ವಾಸವೇನೂ ಕಡಿಮೆಯಾಗಿರಲಿಲ್ಲ. ಆತ್ಮೀಯರೊಡನೆ ಅಪರೂಪಕ್ಕೆ ಮಾತನಾಡಿದಾಗ ಆಗುವ ಆನಂದವೇ ಬೇರೆ. ಅಂಥವರು ದೂರದಲ್ಲಿದ್ದರೂ ಹೃದಯಕ್ಕೆ ಹತ್ತಿರವಾಗಿರುತ್ತಾರೆ. ಕೆಲವರು ಹತ್ತಿರದಲ್ಲಿದ್ದರೂ ಹೃದಯದಿಂದ ದೂರವಾಗಿರುತ್ತಾರೆ. ಇಷ್ಟವಾಗದವರನ್ನು, ಆಹಮ್ಮಿನ ಕೋಟೆಯಲ್ಲಿರುವವರನ್ನು ಮಾತನಾಡಿಸಲು ಮನಸ್ಸು ಬರುವುದಿಲ್ಲ. ಅದಕ್ಕಾಗಿಯೇ ಏನೋ ಸ್ಮಾರ್ಟ್ ಫೋನ್ ಗಳಲ್ಲಿ ಅಂಥವರ ಪೋನ್ ನಂಬರ್ ಗಳನ್ನು ಬ್ಲಾಕ್ ಮಾಡುವ ಸೌಲಭ್ಯವನ್ನು ಕಂಪನಿಯವರು ಒದಗಿಸಿರುವಂತೆ ಕಾಣುತ್ತದೆ. ಮೊಬೈಲ್ ಫೋನ್ ಆಧುನಿಕ ಜೀವನದಲ್ಲಿ ಅನಿವಾರ್ಯವಾದ ಉಪಕರಣ. ವ್ಯಾಟ್ಸಾಪ್, ಫೇಸ್ ಬುಕ್ ಮೊದಲಾದ ಸಾಮಾಜಿಕ ಜಾಲತಾಣಗಳು ಒಳ್ಳೆಯ ವಿಚಾರಗಳನ್ನು ಮಂಡಿಸಲು ಉತ್ತಮ ವೇದಿಕೆಗಳಾಗಿ ಬಳಕೆಯಾಗಬಹುದು ಆಥವಾ ತಮಗಾಗದವರ ಚಾರಿತ್ರ್ಯವಧೆ ಮಾಡಲು ದುರ್ಬಳಕೆಯಾಗಬಹುದು. ಕೌಟುಂಬಿಕ ಮತ್ತು ಸಾಮಾಜಿಕ ಜೀವನದಲ್ಲಿ ಅನೇಕ ಕಲಹಗಳಿಗೂ ಮನಸ್ತಾಪಗಳಿಗೂ ಕಾರಣವಾಗಬಹುದು. “ನೂರು ಸುಳ್ಳು ಹೇಳಿ ಒಂದು ಮದುವೆ” ಮಾಡಬಹುದು ಎನ್ನುತ್ತಾರೆ. ಆದರೆ ಈಗ “ಸಾವಿರ ಸುಳ್ಳು ಹೇಳಿ ಪ್ರಚಾರ ಮಾಡುವ ಮಾನಹಾನಿ ಮಾಡುವ ದುಷ್ಟತನ” ಮೇರೆ ಮೀರಿ ಬೆಳೆದಿದೆ. ಇದು ವಾಕ್ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳುವ ಬೇಜವಾಬ್ದಾರಿ ವ್ಯಕ್ತಿಗಳಿಂದ ಆಗುತ್ತಿರುವ ಅನಾಹುತ. ಇದನ್ನು ನಿಯಂತ್ರಿಸಲು ಸರಿಯಾದ ಕಾನೂನು ಇಲ್ಲದಿರುವುದು ವಿಷಾದಕರ ಸಂಗತಿ. ನಿಮ್ಮ ಸ್ನೇಹಿತರು ಯಾರೆಂದು ಹೇಳಿದ ನೀವು ಎಂಥವರು ಎಂದು ಹೇಳಬಹುದು. ಹಾಗೆಯೇ ನೀವು ನಿಮ್ಮ ಮೊಬೈಲನ್ನು ಹೇಗೆ ಬಳಸಿಕೊಳ್ಳುತ್ತೀರಿ ಎಂದು ಗೊತ್ತಾದರೆ ನೀವು ಎಂಥವರು ಎಂದು ಸುಲಭವಾಗಿ ನಿರ್ಧರಿಸಬಹುದು.
ದೂರದ ಕಾಶಿಯಿಂದ ನಮಗೆ ಫೋನ್ ಮಾಡಿದ ರಾಮ್ ಮೋಹನ್ ಪಾಂಡೆಯವರು ತುಂಬಾ ಧಾರ್ಮಿಕ ಪ್ರವೃತ್ತಿಯುಳ್ಳವರು ಹಾಗೂ ಸಾತ್ವಿಕ ಸ್ವಭಾವದವರು. ಬೃಂದಾವನದಲ್ಲಿ ಅವರು ಏರ್ಪಡಿಸಿದ್ದ ಹತ್ತು ದಿನಗಳ “ಭಾಗವತ ಕಥಾ ಸತ್ರ”ಕ್ಕೆ ನಮ್ಮನ್ನು ಆಹ್ವಾನಿಸುವುದು ಅವರ ಉದ್ದೇಶವಾಗಿತ್ತು. ನಾವೀರ್ವರೂ ವಿಭಿನ್ನ ಸಂಪ್ರದಾಯದವರಾಗಿದ್ದರೂ ನಿಜವಾದ ಧರ್ಮತತ್ವಗಳನ್ನು ಆತ್ಮೀಯ ಗೆಳೆತನದಲ್ಲಿ ಕಾಣಬಹುದು. ಮಾನವೀಯ ಭಾವನೆಯನ್ನು ಬೋಧಿಸುವ ಧರ್ಮದ ಅರಿವು ನೈಜಗೆಳೆತನದಲ್ಲಿ ಅನುಭವಕ್ಕೆ ಬರುತ್ತದೆ. ಗೆಳೆತನವೆಂಬುದು “ಎರಡು ದೇಹಗಳಲ್ಲಿರುವ ಒಂದು ಅತ್ಮ” ಎಂದು ಮಹಾನ್ ದಾರ್ಶನಿಕ ಅರಿಸ್ಟಾಟಲ್ ಹೇಳುತ್ತಾನೆ. ಜಾತಿಮತಗಳು, ಸಂಪ್ರದಾಯಗಳು ಬಂಧುತ್ವಕ್ಕೆ ಅಡ್ಡಿಬರುತ್ತವೆಯೇ ಹೊರತು ಗೆಳೆತನಕ್ಕೆ ಅಡ್ಡಿಬರುವುದಿಲ್ಲ. ನಿಜವಾದ ಗೆಳೆತನದಲ್ಲಿ ಜಾತಿಮತಗಳ ಸೋಂಕು ಇರುವುದಿಲ್ನ ಸಂಬಂಧಿಗಳನ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯ ನಿಮಗೆ ಇಲ್ಲ. ಆದರೆ ಗೆಳೆಯರನ್ನು ಆಯ್ಕೆಮಾಡಿಕೊಳ್ಳುವ ಸಾತಂತ್ರ್ಯ ಮಾತ್ರ ಖಂಡಿತಾ ಇದೆ. ಬಂಧುತ್ವದಲ್ಲಿ ಸಿಗದ ಸುಖ, ನೆಮ್ಮದಿ, ಮನಶಾಂತಿ ನಿಮಗೆ ಗೆಳೆತನದಲ್ಲಿ ಸಿಗುತ್ತದೆ. ಒಮ್ಮೆ ಗೆಳೆಯರಾಗಿದ್ದವರು ಬಂಧುಗಳಾದರೆ ಗೆಳೆತನಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎಂದು ಹಿರಿಯ ತಲೆಮಾರಿನ ಸಾಹಿತ್ಯ ದಿಗ್ಗಜರಾದ ತೀನಂಶ್ರೀಯವರು ತಮ್ಮ “ನಂಟರು” ಎಂಬ ಗ್ರಂಥದಲ್ಲಿ ವಿಡಂಬಿಸುತ್ತಾರೆ.
ಬೃಂದಾವನದಲ್ಲಿ ಇರುವ ನಮ್ಮ ಇನ್ನೊಬ್ಬ ಅಪರೂಪದ ಗೆಳೆಯರೆಂದರೆ ಶ್ರೀವತ್ಸಗೋಸ್ವಾಮಿಯವರು ಬನಾರಸ್ ಹಿಂದೂ ಯೂನಿವರ್ಸಿಟಿಯ ಸಂಸ್ಕೃತ ವಿಭಾಗದಲ್ಲಿ ನಮ್ಮ ಸಂಶೋಧನಾ ಕಾರ್ಯ ನಡೆದಿದ್ದರೆ ತತ್ವಜ್ಞಾನ ವಿಭಾಗದಲ್ಲಿ ಅವರ ಸಂಶೋಧನಾ ಕಾರ್ಯ ಸಾಗಿತ್ತು, ವೈಷ್ಣವರಲ್ಲಿ ರಾಮಾನುಜ, ನಿಂಬಾರ್ಕ, ಚೈತನ್ಯ ಇತ್ಯಾದಿ ಅನೇಕ ಸಂಪ್ರದಾಯಗಳವೆ. ಶ್ರೀವೈಷ್ಣವ ಸಂಪ್ರದಾಯದ ಬಹುತೇಕ ಆಚಾರ್ಯರು ಗೃಹಸ್ಥರು. ನನ್ನ ಗೆಳೆಯರಾದ ಗೋಸ್ವಾಮಿಯವರು ಚೈತನ್ಯ ಸಂಪ್ರದಾಯದವರು. ನಮ್ಮ ನಮ್ಮ ಸಂಪ್ರದಾಯಗಳು ಏನೇ ಇದ್ದರೂ ನಮ್ಮ ಗೆಳೆತನ ಅವುಗಳಿಂದ ಅತೀತವಾದುದು. ದೆಹಲಿಗೆ ಹೋದಾಗಲೆಲ್ಲಾ ಬೃಂದಾವನದ ಜಮುನಾ ತೀರದ ದಂಡೆಯಲ್ಲಿರುವ ಅವರ ಶ್ರೀಚೈತನ್ಯ ಸಂಸ್ಥಾನ ಆಶ್ರಮಕ್ಕೆ ಹೋಗದ ಹಿಂದಿರುಗಿದ ದಿನಗಳಿಲ್ಲ. ಅವರ ಮಕ್ಕಳು ಮತ್ತು ಮೊಮ್ಮೊಕ್ಕಳೊಂದಿಗೆ ಮಾತನಾಡುವುದೆಂದರೆ ಸ್ವರ್ಗಸುಖ, “ನನ್ನಯ್ಯನಂಥೋರು ಹನ್ನೆರಡು ಮಕ್ಕಳು ಹೊನ್ನೆಯ ಮರದ ನೆಳಲಲ್ಲಿ ಆಡುವಾಗ ಸಂನ್ಯಾಸಿ ಜಪವ ಮರೆದಾನಾ!” ಎಂಬ ಜಾನಪದ ಗೀತೆ ನಮ್ಮ ಅನುಭವಕ್ಕೆ ಬಂದುದು. ಈ ಮಕ್ಕಳೊಂದಿಗೆ ಮಾತನಾಡುವಾಗ! ರಾಮ್ ಮೋಹನ್ ಪಾಂಡೆಯವರ ಆಹ್ವಾನದ ಮೇರೆಗೆ ಕಳೆದ ಭಾನುವಾರ ಬೆಂಗಳೂರಿನಿಂದ ದೆಹಲಿಗೆ ನಮ್ಮ ಪ್ರಯಾಣ, ಏರ್ ಇಂಡಿಯಾ ವಿಮಾನ ಮೇಲೇರುತ್ತಿದ್ದಂತೆಯೇ ಗಗನ ಸಖಿಯು ಪ್ರಯಾಣಿಕರೆಲ್ಲರಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಲು ಸೂಚನೆ ನೀಡಿದರೂ ಅನೇಕರು ಧರಿಸುವ ಗೋಜಿಗೆ ಹೋಗಲಿಲ್ಲ. ಗಗನ ಸಖಿಯು ಯಾಂತ್ರಿಕವಾಗಿ ನೀಡುತ್ತಿದ್ದ ಸೂಚನೆಯು ಧರ್ಮೋಪದೇಶದಂತೆ ಮುಂದುವರಿದಿತ್ತು. ಆದರೆ ಮೊಬೈಲ್ ಫೋನ್ ಗಳಲ್ಲಿ ದೃಷ್ಟಿ ನೆಟ್ಟಿದ್ದ ಪ್ರಯಾಣಿಕರ ಮನಸ್ಸು ಎಲ್ಲಿಯೋ ಹರಿದಾಡುತ್ತಿತ್ತು. ಆಗ ನಮಗೆ ನೆನಪಾಗಿದ್ದು ಭಾಗವತದ ಈ ಮುಂದಿನ ಶ್ಲೋಕ: ''ಧರ್ಮಂ ಪ್ರವಕ್ಷಂತಿ ಅಧರ್ಮಜ್ಞಾ, ತಸ್ಮಾತ್ ಧರ್ಮೋ ಕ್ಷೀಯತೇ!" (ಧರ್ಮವೇನೆಂದು ತಿಳಿಯದ ಮೂಢರು ಧರ್ಮೋಪದೇಶ ಮಾಡುತ್ತಾರೆ; ಆದಕಾರಣ ಧರ್ಮವು ಕ್ಷೀಣವಾಗುತ್ತಿದೆ). ಗಗನ ಸಖಿ ಎಷ್ಟೇ ಹೇಳಿದರೂ ಮಾಸ್ಕ್ ಧರಿಸದ ಸಹಪ್ರಯಾಣಿಕರ ವರ್ತನೆಯನ್ನು ನೋಡಿ ಭಾಗವತದ ಈ ಶ್ಲೋಕವನ್ನು ಬದಲಾಯಿಸಿ ಹೀಗೆ ಹೇಳಬೇಕೆನಿಸಿತು: ''ಧರ್ಮ೦ ನ ಪಾಲಯಂತಿ ಮೂಢಾಃ| ತಸ್ಮಾತ್ ಕೊರೋನಾ ನ ಕ್ಷೀಯತೇ||” (ಧರ್ಮೋಪದೇಶವನ್ನು ಮೂಢ ಜನರು ಪಾಲಿಸುತ್ತಿಲ್ಲ, ಆದಕಾರಣ ಕೊರೊನಾ ಕ್ಷೀಣಿಸುತ್ತಿಲ್ಲ).
“ಧರ್ಮ ಪ್ರವಕ್ಷಂತಿ ಆಧರ್ಮಜ್ಞಾ” ಎಂಬ ಭಾಗವತದ ಮಾತು ತುಂಬಾ ಮಾರ್ಮಿಕವಾದುದು. ಇಲ್ಲಿ ಧರ್ಮ ಜ್ಞಾನಿಗೆ ಧರ್ಮೋಪದೇಶದಂತೆ ನಡೆಯದ ಜನ ಕಾರಣ ಎಂದು ದೂಷಿಸಿಲ್ಲ. ಧರ್ಮೋಪದೇಶ ಮಾಡುವವರೇ ಸರಿ ಇಲ್ಲ. ಆವರಿಗೆ ಧರ್ಮದ ಅರಿವೇ ಇಲ್ಲ, ಅವರು ಧರ್ಮದಂತೆ ನಡೆಯುತ್ತಿಲ್ಲ, ಅವರಿಗೆ ಧರ್ಮೋಪದೇಶ ಮಾಡುವ ನೈತಿಕತೆಯೇ ಇಲ್ಲ. ಆದಕಾರಣ ಧರ್ಮ ಕ್ಷೀಣಿಸುತ್ತಿದೆ ಎಂದು ಭಾಗವತ ಮನೋಜ್ಞವಾಗಿ ವರ್ಣಿಸಿದೆ. ಸಾಮಾನ್ಯ ಗೃಹಸ್ಥರ ನಡವಳಿಕೆಗಿಂತಲೂ ಇಂತಹ ಢೋಂಗಿ ಧರ್ಮೋಪದೇಶಕರ ನಡೆ ಕಡೆ! ಸಾಮಾನ್ಯ ಜನರ ಪ್ರಶ್ನೆಗೂ ಉತ್ತರ ಕೊಡಲಾಗದೆ ಮೌನಮುದ್ರೆ ಧರಿಸುವ ನೈತಿಕ ದೌರ್ಬಲ್ಯ ಇವರದು. ವೇದಿಕೆಯ ಮೇಲೆ ಆಡುವ ಇಂಥವರ ಮಾತೇ ಬೇರೆ, ವ್ಯವಹಾರದಲ್ಲಿ ಇರುವ ಇವರ ನಡಯೇ ಬೇರೆ. ಇದು “ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟ ನೆಗೆದಂತಾಯಿತ್ತು!” ಎಂಬ ದೇವರ ದಾಸಿಮಯ್ಯನವರ ವಚನವನ್ನು ನೆನಪು ಮಾಡಿಕೊಡುತ್ತದೆ. ಇಂತಹ ಎಷ್ಟೋ ಕಳ್ಳ ಬೆಕ್ಕುಗಳು ಈಗ ಧಾರ್ಮಿಕ ರಂಗದಲ್ಲಿ ವಿಜೃಂಭಿಸುತ್ತಿವೆ! ತಮ್ಮ ಸ್ವಾರ್ಥಕ್ಕಾಗಿ ಒಬ್ಬೊಬ್ಬ ಸ್ವಾಮಿಗಳನ್ನು ಕಟ್ಟಿಕೊಂಡು ಕುಣಿಸುವ ಶಿಷ್ಯರೂ ಇದ್ದಾರೆಂದು ನಮ್ಮ ಗುರುವರ್ಯರಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಒಂದೆಡೆ ಬರೆದಿದ್ದಾರೆ. ಸತ್ಯಪಥದಲ್ಲಿ ಸದೃಢವಾದ ಹೆಜ್ಜೆಗಳನ್ನಿಟ್ಟು ನಡೆಯುವ ಗುರುಗಳ ಬಗ್ಗೆ ಶ್ರದ್ಧಾಭಕ್ತಿಯುಳ್ಳ ಶಿಷ್ಯರು ಅಪಾರ ಸಂಖ್ಯೆಯಲ್ಲಿದ್ದಾರೆ. ಆದರೆ ಅಂಥವರ ಮನಸ್ಸಿನಲ್ಲಿಯೂ ಸಂಶಯದ ಬೀಜ ಬಿತ್ತುವ ಕುತಂತ್ರಿಗಳು ಇದ್ದಾರೆ. ಶ್ರೀಮದ್ ಭಾಗವತದ ಹತ್ತನೆಯ ಅಧ್ಯಾಯದಲ್ಲಿ ಬರುವ ಸತ್ರಾಜಿತನ ಕಥಾಪ್ರಸಂಗ ಇದಕ್ಕೆ ಒಂದು ಉದಾಹರಣೆ.
ಸತ್ರಾಜಿತ್ ಸೂರ್ಯದೇವನ ನಿಷ್ಠಾವಂತ ಭಕ್ತ ಮತ್ತು ಆತ್ಮೀಯ ಸ್ನೇಹಿತ, ಅವನ ಭಕ್ತಿಗೆ ಮೆಚ್ಚಿ ಸೂರ್ಯದೇವನು ಅವನಿಗೆ ಒಂದು ಅಪರೂಪದ ಜಾಜ್ವಲ್ಯಮಾನವಾದ “ಸ್ಯಮಂತಕ ಮಣಿ”ಯನ್ನು ಅನುಗ್ರಹಿಸಿದ, “ಸೂರ್ಯನಷ್ಟೇ ಪ್ರಕಾಶಮಾನವಾದ ಆ ಮಣಿ”ಯನ್ನು ಕೊರಳಲ್ಲಿ ಧರಿಸಿ ಸತ್ರಾಜಿತನು ದ್ವಾರಕೆಯ ಹೊರವಲಯಕ್ಕೆ ಬಂದ. ಪ್ರಖರವಾದ ಬೆಳಕಿನ ಕಾರಣ ಅವನನ್ನು ಜನರು ನೋಡಲಾಗದೆ ಕಣ್ಣುಕತ್ತಲುಗುಡಿಸಿತು. ಸೂರ್ಯದೇವನೇ ತಮ್ಮ ದರ್ಶನ ಪಡೆಯಲು ಬಂದಿದ್ದಾನೆಂದು ಜನರು ಶ್ರೀಕೃಷ್ಣನಿಗೆ ವರದಿ ಮಾಡಿದರು. ಶ್ರೀಕೃಷ್ಣನು ಅದನ್ನು ಕೇಳಿ ನಕ್ಕು ಅವನು ಸೂರ್ಯ ದೇವನಲ್ಲ, ಸೂರ್ಯದೇವ ಕೊಟ್ಟ ಪ್ರಕಾಶಮಾನವಾದ ಸ್ಯಮಂತಕ ಮಣಿಯನ್ನು ಧರಿಸಿದ ಸತ್ರಾಜಿತ್ ಎಂದು ಜನರಿಗೆ ತಿಳಿಹೇಳಿದ. ಪ್ರತಿದಿನವೂ ಅಪಾರವಾದ ಚಿನ್ನವನ್ನು ಕೊಡುವ ಆ ಮಣಿಯನ್ನು ರಾಜನಾದ ಉಗ್ರಸೇನನಿಗೆ ಕೊಟ್ಟರೆ ಕ್ಷಾಮಡಾಮರ ಬಂದಾಗ ಜನರಿಗೆ ಸಹಾಯ ಮಾಡಲು ಅನುಕೂಲವಾಗುತ್ತದೆಯೆಂದು ಶ್ರೀಕೃಷ್ಣನು ಸತ್ರಾಜಿತನಿಗೆ ಹೇಳಿದ. ಸ್ವಾರ್ಥಿಯಾದ ಸತ್ರಾಜಿತ್ ಅದನ್ನು ಕೊಡಲು ಒಪ್ಪಲಿಲ್ಲ,
ಒಂದು ದಿನ ಸತ್ರಾಜಿತನ ತಮ್ಮನಾದ ಪ್ರಸೇನನು ಆ ಮಣಿಯನ್ನು ಕೊರಳಲ್ಲಿ ಧರಿಸಿ ಬೇಟೆಯಾಡಲು ಕುದುರೆ ಹತ್ತಿ ಕಾಡಿಗೆ ಹೋದ. ಕಾಡಿನಲ್ಲಿದ್ದ ಸಿಂಹವು ಅವನ ಮೇಲೆ ಎರಗಿ ಕೊಂದು ಹಾಕಿತು. ಜಾಂಬವಂತನು ಆ ಸಿಂಹವನ್ನು ಕೊಂದು ಆಕರ್ಷಕವಾದ ಆ ಮಣಿಯನ್ನು ತನ್ನ ಮಗನಿಗೆ ಆಡಲು ಕೊಟ್ಟನು. ಕಾಡಿಗೆ ಹೋದ ತನ್ನ ತಮ್ಮನು ಎಷ್ಟು ಹೊತ್ತಾದರೂ ಮನೆಗೆ ಬಾರದ ಕಾರಣ ಶ್ರೀಕೃಷ್ಣನೆ ಅವನನ್ನು ಕೊಂದು ಆ ಶ್ಯಮಂತಕ ಮಣಿಯನ್ನು ಅಪಹರಿಸಿದ್ದಾನೆಂದು ಸತ್ರಾಜಿತ್ ಆರೋಪಿಸಿ ಜನರಲ್ಲಿ ಗುಲ್ಲೆಬ್ಬಿಸಿದ. ಕಿವಿಯಿಂದ ಕಿವಿಗೆ ಹರಡಿದ ಈ ಸುಳ್ಳು ಸುದ್ದಿಯು ಶ್ರೀಕೃಷ್ಣನ ಕಿವಿಗೂ ಮುಟ್ಟಿತು. ತಮ್ಮ ಮೇಲೆ ಬಂದ ಈ ಆರೋಪವನ್ನು ನಿವಾರಿಸಿಕೊಳ್ಳುವ ದೃಷ್ಟಿಯಿಂದ ಶ್ರೀಕೃಷ್ಣನು ದ್ವಾರಕೆಯ ಕೆಲವರು ಜನರನ್ನು ಜೊತೆಯಲ್ಲಿ ಕರೆದುಕೊಂಡು ಕಾಡಿಗೆ ಹೋಗಿ ಪ್ರಸೇನನ ಕುದುರೆಯ ಹೆಜ್ಜೆಯ ಗುರುತುಗಳನ್ನು ಹಿಂಬಾಲಿಸುತ್ತಾ ನಡೆದ. ಪ್ರಸೇನ ಮತ್ತು ಅವನ ಕುದುರೆಯ ಮೃತ ದೇಹಗಳು ಪತ್ತೆಯಾದವು, ನಂತರ, ಅವನನ್ನು ಕೊಂದ ಸಿಂಹದ ಹೆಜ್ಜೆ ಗುರುತನ್ನು ಹಿಂಬಾಲಿಸುತ್ತಾ ಹೋದಾಗ ಗುಹೆಯೊಂದರ ಹತ್ತಿರ ಸಿಂಹ ಸತ್ತು ಬಿದ್ದಿತ್ತು,
ಶ್ರೀಕೃಷ್ಣನು ಜನರನ್ನು ಹೊರಗೆ ನಿಲ್ಲಿಸಿ ಕಗ್ಗತ್ತಲು ಆವರಿಸಿದ್ದ ಭಯಾನಕ ಗುಹೆಯೊಳಗೆ ಏಕಾಂಗಿಯಾಗಿ ಪ್ರವೇಶಿಸಿದ. ಮಣಿಯನ್ನು ಕೈಯಲ್ಲಿ ಹಿಡಿದುಕೊಂಡು ಆಡುತ್ತಿದ್ದ ಪುಟ್ಟ ಕರಡಿ ಮರಿಯನ್ನು ನೋಡುತ್ತಾ ಪಕ್ಕದಲ್ಲಿ ನಿಂತ, ಅದನ್ನು ನೋಡಿಕೊಳ್ಳುತ್ತಿದ್ದ ದಾದಿಯು ಮನುಷ್ಯ ರೂಪದಲ್ಲಿದ್ದ ವ್ಯಕ್ತಿಯನ್ನು ನೋಡಿ ಗಾಬರಿಗೊಂಡು ಕಿರುಚಿದಳು. ಅವಳ ಕೂಗನ್ನು ಕೇಳಿ ಬಂದ ಜಾಂಬವಂತನು ಆ ವ್ಯಕ್ತಿಯನ್ನು ನೋಡಿ ಮಣಿಯನ್ನು ಅಪಹರಿಸಿಕೊಂಡು ಹೋಗಲು ಬಂದಿರುವ ಸಾಮಾನ್ಯ ಮನುಷ್ಯನೆಂದು ತಿಳಿದು ಮಲ್ಲಯುದ್ದದಲ್ಲಿ ತೊಡಗಿದನು. ಸತತವಾಗಿ 28 ದಿನಗಳ ಅಹೋರಾತ್ರಿ ಸೆಣಸಾಟ ನಡೆಯಿತು. ಜಾಂಬವಂತನು ತುಂಬಾ ಏಟುಗಳನ್ನು ತಿಂದು ಸುಸ್ತಾಗಿ ಎದುರಾಳಿಯು ವಿಷ್ಣುವಿನ ಅವತಾರ ಪುರುಷನಾದ ಶ್ರೀಕೃಷ್ಣನೆಂದೂ, ತನ್ನ ಆರಾಧ್ಯದೈವವಾದ ಶ್ರೀರಾಮಚಂದ್ರನ ಬೇರೊಂದು ರೂಪವೆಂದು ಗುರುತಿಸಿ ಅವನೊಂದಿಗೆ ಹೋರಾಟ ಮಾಡುವುದನ್ನು ನಿಲ್ಲಿಸಿದನು. ಶ್ರೀಕೃಷ್ಣನು ಮೆಲುದನಿಯಲ್ಲಿ ''ನಾನು ದ್ವಾರಕೆಯ ಜನರೊಂದಿಗೆ ನಿನ್ನ ಗುಹೆಗೆ ಬಂದಿರುವುದು ಈ ಮಣಿಯನ್ನು ಅಪಹರಿಸಲು ಅಲ್ಲ; ಈ ಮಣಿಯ ಕಾರಣದಿಂದ ನನ್ನ ಮೇಲೆ ಬಂದಿರುವ ಕೆಟ್ಟ ಲೋಕಾಪವಾದವನ್ನು ನಿವಾರಿಸಿಕೊಳ್ಳಲು ಎಂದು ಜಾಂಬವಂತನಿಗೆ ಹೇಳುತ್ತಾನೆ. ಜಾಂಬವಂತನು ನಿಜಸಂಗತಿಯನ್ನು ತಿಳಿದು ಗದ್ಗದಿತನಾಗಿ ಆ ಶ್ಯಮಂತಕ ಮಣಿಯನ್ನು ಶ್ರೀ ಕೃಷ್ಣನಿಗೆ ಒಪ್ಪಿಸುತ್ತಾನೆ. ಗುಹೆಯೊಳಗೆ ಹೋಗಿದ್ದ ಶ್ರೀಕೃಷ್ಣನು ಬಹಳ ದಿನಗಳಾದರೂ ಬಾರದ ಕಾರಣ ಹೊರಗೆ ನಿಂತಿದ್ದ ಜನರು ದುಃಖಿತರಾಗಿ ದ್ವಾರಕೆಗೆ ಹಿಂತಿರುಗುತ್ತಾರೆ. ತಾಯಿ-ತಂದೆಯಾದ ದೇವಕಿ ಮತ್ತು ವಸುದೇವ ದುಃಖತಪ್ತರಾಗಿ ಸತ್ರಾಜಿತನಿಗೆ ಶಾಪ ಹಾಕುತ್ತಾರೆ. ಭಕ್ತಿಯಿಂದ ದುರ್ಗಾದೇವಿಗೆ ಪೂಜೆ ಸಲ್ಲಿಸುತ್ತಾರೆ, ಸ್ವಲ್ಪ ಹೊತ್ತಿನಲ್ಲಿಯೇ ಶ್ರೀಕೃಷ್ಣ ಬರುವುದನ್ನು ನೋಡಿ ಸಂತಸಪಟ್ಟು ಮಗನಿಗೆ ಮರುಜನ್ಮ ಬಂದಂತಾಯಿತು ಎಂದು ಉದ್ಗರಿಸುತ್ತಾರೆ.
ಶ್ರೀಕೃಷ್ಣನು ದ್ವಾರಕೆಗೆ ಹಿಂತಿರುಗಿದ ಮೇಲೆ ರಾಜನಾದ ಉಗ್ರಸೇನನ ಸಮ್ಮುಖದಲ್ಲಿ ಅರಮನೆಯ ಮುಂದೆ ಒಂದು ಬಹಿರಂಗ ಸಭೆಯನ್ನು ಕರೆಯುತ್ತಾನೆ. ಸತ್ರಾಜಿತನನ್ನು ಅಲ್ಲಿಗೆ ಕರೆಸಿ ನಡೆದ ವಿದ್ಯಮಾನಗಳನ್ನು ಸಭೆಗೆ ವಿವರಿಸಿ ಶ್ಯಮಂತಕ ಮಣಿಯನ್ನು ಆವನಿಗೆ ಕೊಡುತ್ತಾನೆ. ಸತ್ರಾಜಿತನು ಎಲ್ಲರೆದುರಿಗೆ ನಾಚಿಕೆಯಿಂದ ತಲೆತಗ್ಗಿಸಿ ಮಣಿಯನ್ನು ಪಡೆಯುತ್ತಾನೆ. ತಾನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟು ಶ್ಯಮಂತಕ ಮಣಿಯೊಂದಿಗೆ ತನ್ನ ಕನ್ಯಾಮಣಿಯಾದ ಸತ್ಯಭಾಮೆಯನ್ನು ಶ್ರೀಕೃಷ್ಣನಿಗೆ ಕೊಟ್ಟು ಮದುವೆ ಮಾಡುತ್ತಾನೆ. ಶ್ರೀಕೃಷ್ಣನು "ಶೀಲರೂಪ ಔದಾರ್ಯ ಗುಣವಂತೆ”ಯಾದ ಸತ್ಯಭಾಮೆಯನ್ನು ಸ್ವೀಕರಿಸುತ್ತಾನೆಯೇ ಹೊರತು ಶ್ಯಮಂತಕ ಮಣಿಯನ್ನು ಸ್ವೀಕರಿಸಲು ನಿರಾಕರಿಸುತ್ತಾನೆ. ಅದರಿಂದ ಯಥೇಚ್ಛವಾಗಿ ನಿತ್ಯವೂ ಬರುವ ಚಿನ್ನವನ್ನು ನಾಗರಿಕರ ಹಿತಕ್ಕೆ ಬಳಸಬೇಕೆಂದು ಹೇಳಿ ರಾಜನಿಗೆ ಅದನ್ನು ಒಪ್ಪಿಸುತ್ತಾನೆ.
ಸಮಾಜದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಅಶಾಂತಿಯನ್ನುಂಟು ಮಾಡುವ ಸತ್ರಾಜಿತನಂತಹ ಸುಳ್ಳಿನ ಸರದಾರರು ಈಗಲೂ ಇದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿಗಳನ್ನು ಹರಿಬಿಟ್ಟು ಕುಟುಂಬ ಮತ್ತು ಸಮಾಜದ ನೆಮ್ಮದಿಯನ್ನು ಹಾಳು ಮಾಡುವ ಅಂತಹ ಧೂರ್ತರಿಗೆ ಹೊಸ ಕಾನೂನು ರೂಪಿಸಿ ನ್ಯಾಯಾಲಯಗಳು ತ್ವರಿತವಾಗಿ ಮೂಗುದಾರ ಎರಿಸುವಂತೆ ಮಾಡುವುದು ಒಳಿತು.
swamiji@taralabalu.org
editor@vijaykarnataka.am
ವಿಜಯ ಕರ್ನಾಟಕ
ದಿ. 2-12-2021