ದಶಕದ ನೋವನ್ನು ಬೆಳಗಾವಿ ಅಧಿವೇಶನ ಕೊನೆಗೊಳಿಸಲಿ

  •  
  •  
  •  
  •  
  •    Views  

ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ 2011ರಲ್ಲಿ ಕೆಎಎಸ್ ಉತ್ತಿರ್ಣರಾದವರು

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಇವು ಪ್ರಜಾಪ್ರಭುತ್ವದ 3 ಆಧಾರ ಸ್ತಂಭಗಳು, ಶಾಸಕಾಂಗದ ಆದೇಶವನ್ನು ಕಾರ್ಯಾಂಗವು ಪಾಲಿಸಬೇಕು. ಕಾರ್ಯಾಂಗವು ತಪ್ಪು ಮಾಡಿದರೆ ಶಾಸಕಾಂಗವು ಅಧಿಕಾರಿಗಳಿಗೆ ಶಿಕ್ಷೆ ಕೊಡಬಹುದು. ಶಾಸಕಾಂಗ ಮತ್ತು ಕಾರ್ಯಾಂಗಗಳು ತಪ್ಪು ಮಾಡಿದರೆ ನ್ಯಾಯಾಂಗವು ಚಾಟಿ ಬೀಸಿ ಸರಿಯಾದ ನಿರ್ದೇಶನ ನೀಡಿ ನೊಂದವರಿಗೆ ನ್ಯಾಯ ಒದಗಿಸುತ್ತದೆ. ನ್ಯಾಯಾಂಗದ ಆದೇಶವನ್ನು ಶಾಸಕಾಂಗವಾಗಲೀ ಕಾರ್ಯಾಂಗವಾಗಲೀ ಪಾಲಿಸದೆ ವಿಧಿಯಿಲ್ಲ; ಪಾಲಿಸದಿದ್ದರೆ ನ್ಯಾಯಾಂಗ ನಿಂದನೆಯ ಗುರುತರ ಆರೋಪವನ್ನು ಹೊತ್ತು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಆದರೆ ಈಗ ಏನಾಗುತ್ತಿದೆ? ಶಾಸಕಾಂಗ ಮತ್ತು ಕಾರ್ಯಾಂಗಗಳು ಸುಳ್ಳು ಮಾಹಿತಿ ನೀಡಿ ನ್ಯಾಯಾಂಗವನ್ನೇ ದಿಕ್ಕುತಪ್ಪಿಸಿ ತಪ್ಪು ತೀರ್ಪು ಬರುವಂತೆ ಮಾಡುತ್ತಿವೆ. 

ಅನೇಕ ಸಲ ಕಾರ್ಯಾಂಗದ ಮರ್ಜಿಗೆ ಶಾಸಕಾಂಗವು ಒಳಗಾಗುತ್ತಿದೆ. ಕಾರ್ಯಾಂಗಕ್ಕೆ ಖಡಕ್ಕಾದ ನಿರ್ದೇಶನವನ್ನು ನೀಡುತ್ತಿಲ್ಲ. ಹೀಗಾಗಿ ಶಾಸಕಾಂಗವು ಕಾರ್ಯಾಂಗದ ಅಡಿಯಾಳಾಗಿ “ದಾಸ್ಯಾಂಗ”ವಾಗುತ್ತಿದೆ; ನಮ್ಮ ಮಠದ ಶಿಷ್ಯರೂ ಮತ್ತು ಹಿರಿಯ ತಲೆಮಾರಿನ ರಾಜಕೀಯ ದಿಗ್ಗಜರೂ ಆಗಿದ್ದ ಎಚ್. ಸಿದ್ದವೀರಪ್ಪನವರು ಗೃಹಮಂತ್ರಿಗಳಾಗಿದ್ದಾಗ ಯಾವುದೋ ಸಂದರ್ಭದಲ್ಲಿ ಅಧಿಕಾರಿಗೆ ಒಂದು ನಿರ್ದೇಶನ ನೀಡಿದ್ದರು. ಆದರೆ ಆ ಅಧಿಕಾರಿಯು ಮಂತ್ರಿಗಳ ಆದೇಶವನ್ನು ಪಾಲಿಸದೆ ಕಾನೂನಿನಲ್ಲಿ ಅವಕಾಶವಿಲ್ಲವೆಂದು ಟಿಪ್ಪಣಿ ಕಳುಹಿಸಿದ. ಸಿದ್ದವೀರಪ್ಪನವರು ಸಿಟ್ಟಿಗೆದ್ದು ಆ ಅಧಿಕಾರಿಯನ್ನು ತಮ್ಮ ಛೇಂಬರಿಗೆ ಖುದ್ದಾಗಿ ಕರೆಸಿ "Law is there to guide us but not to bind us. I am a responsible minister directing you to do this. Carry out my orders” ಎಂದು ಗದರಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅಂತಹ ಇಚ್ಛಾಶಕ್ತಿಯುಳ್ಳ, ಜನಪರ ಕಾಳಜಿಯುಳ್ಳ ಮಂತ್ರಿಗಳು ಈಗ ಬಹಳ ಅಪರೂಪ ಎಂದು ವಿಷಾದದಿಂದ ಹೇಳಬೇಕಾಗಿದೆ. 

ಕುಮಾರವ್ಯಾಸ ಹೇಳುವಂತೆ: “ಅರಸು ರಕ್ಕಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ, ಬಡವರ ಬಿನ್ನಪವನಿನ್ನಾರು ಕೇಳುವರು ಉರಿ ಉರಿವುತಿದೆ ದೇಶ!.....” (ಕುಮಾರವ್ಯಾಸ) ಎಂಬ ಸ್ಥಿತಿ ಈಗ ಪ್ರಜಾಪ್ರಭುತ್ವದಲ್ಲಿ ತಲೆದೋರಿರುವುದು ವಿಪರ್ಯಾಸದ ಸಂಗತಿ! ಅನ್ಯಾಯಕ್ಕೆ ಒಳಗಾದವರ ಅಳಲನ್ನು ಕೇಳಬೇಕಾದವರು ಸರಿಪಡಿಸಬೇಕಾದವರು ಯಾರು? ಪ್ರಜಾಪ್ರಭುತ್ವವನ್ನು ಕುರಿತಂತೆ ಅಬ್ರಾಹಾಂ ಲಿಂಕನ್ನನ ಪ್ರಸಿದ್ದವಾದ ಉಕ್ತಿ: Democracy is a government of the people, by the people and for the people (ಪ್ರಜಾಪ್ರಭುತ್ವವೆಂದರೆ ಜನರ, ಜನರಿಂದ, ಜನರಿಗಾಗಿ ಇರುವ ಸರಕಾರ) ಆದರೆ ಈಗ ಏನಾಗಿದೆ? ವರ್ಷದ ಉದ್ದಕ್ಕೂ ಒಂದಿಲ್ಲೊಂದು ಚುನಾವಣೆಯನ್ನು ಎದುರಿಸುತ್ತಿರುವ ಸರಕಾರವು Off the people ಮತ್ತು Buy the people ಆಗಿದೆಯೇ ಹೊರತು For the people ಖಂಡಿತಾ ಆಗಿಲ್ಲ! ಸರಕಾರ ರಚನೆ ಮಾಡಲು ಜನರ ಓಟಿನ ಬೆಂಬಲ ಮಾತ್ರ ಬೇಕಾಗಿದೆ. ಆದರೆ ಅವರ ಸಂಕಷ್ಟಗಳನ್ನು ಕೇಳಿ ಸಕಾಲದಲ್ಲಿ ಪರಿಹರಿಸುವ ಹೊಣೆಗಾರಿಕೆಯನ್ನು ಸರಕಾರ ನಿರ್ವಹಿಸುತ್ತಿಲ್ಲ. “Pen is mightier than sword” ಅಂದರೆ ಲೇಖನಿ ಖಡ್ಗಕ್ಕಿಂತ ಹರಿತ ಎನ್ನುತ್ತಾರೆ, ಆದರೆ ಇಂದಿನ ದಿನಮಾನಗಳಲ್ಲಿ “Politics is even mightier than Pen” ರಾಜಕೀಯವು ಲೇಖನಿಗಿಂತಲೂ ಇನ್ನೂ ಹರಿತ ಎಂದು ಹೇಳಬೇಕಾದ ದುಸ್ಥಿತಿ ಒದಗಿ ಬಂದಿದೆ. 

ಅಧಿಕಾರಾರೂಢ ಸರಕಾರವು ತೆಗೆದುಕೊಳ್ಳುವ ನಿರ್ಧಾರಗಳನ್ನು ಬಹಳ ಸಲ ವಿರೋಧಪಕ್ಷವು ವಿರೋಧಿಸುತ್ತದೆ. ಅನೇಕ ವೇಳೆ ಸರಕಾರದ ಒಳ್ಳೆಯ ನಿರ್ಧಾರಗಳನ್ನೂ ಸಹ ವಿಪಕ್ಷವು ವಿರೋಧಿಸಬೇಕೆಂದೇ ವಿರೋಧಿಸುತ್ತದೆ. ಆದರೆ KAS 2011 ರ ಪ್ರಕರಣದಲ್ಲಿ ವಿರೋಧ ಪಕ್ಷದವರು ತಾವು ಅಧಿಕಾರದಲ್ಲಿದ್ದಾಗ ಮಾಡಿದ ತಪ್ಪನ್ನು ಮನವರಿಕೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈಗಿನ ಅಧಿಕಾರರೂಢ ಸರಕಾರವನ್ನು ಹಿಂದೆ ಆಗಿರುವ ತಪ್ಪನ್ನು ಸರಿಪಡಿಸಲು ಮೂರು ಅಧಿವೇಶನಗಳ ಹಿಂದೆಯೇ ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ. ಆದರೂ ಸರಕಾರವು ಮನಸ್ಸು ಮಾಡದೇ ಇರುವುದು ತೀರಾ ವಿಷಾದದ ಸಂಗತಿ. 

ಧಾರ್ಮಿಕ ಸಮಾರಂಭಗಳಲ್ಲಿ ಭಾಗವಹಿಸಲು ರಾಜಕೀಯ ಧುರೀಣರಿಗೆ ಮುಕ್ತ ಅವಕಾಶವಿದೆ. ಆದರೆ ವಿಧಾನಸಭೆಯ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಯಾವ ಧರ್ಮ ಗುರುಗಳಿಗೂ ಸಂವಿಧಾನದಲ್ಲಿ ಅವಕಾಶವಿಲ್ಲ. ಹಾಗೇನಾದರೂ ಮುಕ್ತ ಅವಕಾಶ ಕಲ್ಪಿಸಿಕೊಟ್ಟರೆ ಪಕ್ಷವಿಪಕ್ಷಗಳು ಕಾದಾಡಿ ಕೈಕೈ ಮಿಲಾಯಿಸಿದಂತೆ ಕಾವಿಧಾರಿಗಳೂ ಕಾದಾಡಿ ಜಾತಿ ಸಂಘರ್ಷವೇರ್ಪಟ್ಟು ಸಭಾಧ್ಯಕ್ಷರ ಪೀಠದ ಮುಂದೆಯೇ ಮಾಡುವ ಶಿವಪೂಜೆ, ಹೋಮ ಹವನದ ಬೆಂಕಿ ವಿಧಾನಸಭೆಯನ್ನು ಆವರಿಸಿ ಯಾವ ಅಗ್ನಿಶಾಮಕ ದಳದಿಂದಲೂ ನಂದಿಸಲು ಸಾಧ್ಯವಾಗುವುದಿಲ್ಲ! ಈಗ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದೆ. ಅದರಲ್ಲಿ ನಾವು ಭಾಗವಹಿಸಲು ಅವಕಾಶವಿಲ್ಲವಾದರೂ ಪ್ರಜಾಪ್ರಭುತ್ವದ ನಾಲ್ಕನೆಯ ಆಧಾರ ಸ್ತಂಭವೆನಿಸಿದ ಪತ್ರಿಕಾರಂಗವನ್ನು ಆಶ್ರಯಿಸಿ ಈ ಅಂಕಣದ ಮೂಲಕ KAS 2011 ರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಯೂ ಆಯ್ಕೆ ಪಟ್ಟಿ ಅಕ್ರಮವಾಗಿ ರದ್ದಾಗಿ ಸರಕಾರದಿಂದ ನೇಮಕಾತಿ ಆದೇಶ ಪಡೆಯದ ನತದೃಷ್ಟ ಪ್ರತಿಭಾನ್ವಿತರ ಕಣ್ಣೀರ ಕಥೆಯನ್ನು ಅವರ ಶಬ್ದಗಳಲ್ಲಿಯೇ ಕೆಲವನ್ನು ಈ ಕೆಳಗೆ ಸಂಗ್ರಹಿಸಿ ಕೊಡಲಾಗಿದೆ. ಇದನ್ನು ಓದಿಯಾದರೂ ಸರಕಾರವು ಬೆಳಗಾವಿ ಅಧಿವೇಶನದಲ್ಲಿ ಕಾನೂನು ಸಚಿವಾಲಯವು ಸಿದ್ದಪಡಿಸಿರುವ ಮಸೂದೆಯನ್ನು ಮಂಡಿಸಿ, ಕಳೆದ ಹತ್ತು ವರ್ಷಗಳಿಂದ ಅನುಭವಿಸುತ್ತಾ ಬಂದಿರುವ ಇವರ ಯಾತನೆಯನ್ನು ದೂರಮಾಡಲಿ. 

ನನ್ನ ತಾಯಿಯು ಮರಣ ಹೊಂದಿದ ಮೇಲೆ 2010 ರಲ್ಲಿ ಮದುವೆ ಮಾಡಿಕೊಂಡೆ. 2011 ರ ಸ್ಪರ್ಧಾತ್ಮಕ ಪರೀಕ್ಷೆ ನನಗೆ ಇದ್ದ ಕೊನೆಯ ಅವಕಾಶ. ನನ್ನ ವೈವಾಹಿಕ ಜೀವನದ ಕಡೆ ಗಮನ ಕೊಡದೆ ಪರೀಕ್ಷೆಯ ಸಿದ್ದತೆ ನಡೆಸಿದೆ. ಇದರಿಂದ ನನ್ನ ಪತಿಗೆ ತುಂಬಾ ಬೇಸರ ಉಂಟಾಯಿತು. ಪರೀಕ್ಷೆ ಮುಂದಕ್ಕೆ ಹೋಯಿತು. ಈ ಮಧ್ಯೆ ನಾನು ಗರ್ಭವತಿಯಾಗಿ 6 ತಿಂಗಳ ಕೂಸು ನನ್ನ ಉದರದಲ್ಲಿತ್ತು. ಪರೀಕ್ಷೆ ಹತ್ತಿರ ಬಂದಾಗ ತುಂಬಾ ಓದಲು ಆರಂಭಿಸಿದೆ. ರಕ್ತದ ಒತ್ತಡ ಏರತೊಡಗಿತು. ಆದರೂ ಕಷ್ಟಪಟ್ಟು ಓದಿ ಪರೀಕ್ಷೆ ಮುಗಿಸಿ ಉನ್ನತ ಶ್ರೇಣಿಯಲ್ಲಿ ಪಾಸಾದೆ. ಆದರೆ ಶಸ್ತ್ರ ಚಿಕಿತ್ಸೆಗೆ ಒಳಗಾದ 22 ಗಂಟೆಯೊಳಗೆ ನನ್ನ ಮಗುವು ಕೊನೆಯುಸಿರೆಳೆಯಿತು. ಆಯ್ಕೆ ಪಟ್ಟಿಯು ರದ್ದಾದಾಗ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯುವುದಕ್ಕಿಂತ ನನ್ನ ಕೈಯಲ್ಲಿ ಮಗುವಿದ್ದಿದ್ದರೆ ಚೆನ್ನಾಗಿತ್ತು ಎಂದು ದುಃಖಿಸಿದೆ. ಆದರೆ ಕಾಲ ಮಿಂಚಿ ಹೋಗಿತ್ತು. ಈಗ ನನ್ನದು ಖಾಲಿ ಕೈ. ಇತ್ತ ಮಗುವೂ ಇಲ್ಲ, ಅತ್ತ ನೌಕರಿಯೂ ಇಲ್ಲ! ಇನ್ನೂ ಹೆಚ್ಚು ಕಾಯದೆ ಒಮ್ಮೆಲೇ ಸತ್ತು ಬಿಡೋಣ ಎನ್ನಿಸುತ್ತಿದೆ!" 

ನಾನು ಮಧ್ಯಮ ವರ್ಗದ ಹಿಂದೂ ಕುಟುಂಬಕ್ಕೆ ಸೇರಿದವಳು. ಆರಂಭದಿಂದಲೂ ಶಾಲೆಯಲ್ಲಿ ಪ್ರಥಮ ಸ್ಥಾನ ಪಡೆಯುತ್ತಿದ್ದ ನನ್ನನ್ನು ಬಂಧುಗಳು ತುಂಬಾ ಪ್ರಶಂಸೆ ಮಾಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಯಿತು. ಸ್ಪರ್ಧಾತ್ಮಕ ಪರೀಕ್ಷೆಗೆ ಕುಳಿತುಕೊಳ್ಳಬೇಕೆಂಬ ನನ್ನ ಮನದಾಳದ ಇಂಗಿತವನ್ನು ಪತಿಯೊಂದಿಗೆ ಹಂಚಿಕೊಂಡಾಗ ಪ್ರೋತ್ಸಾಹಿಸಿದರು. ನನ್ನ 4 ವರ್ಷದ ಮಗನನ್ನು ತಾಯಿಯ ವಶಕ್ಕೆ ಕೊಟ್ಟು ಮನೆಯನ್ನು ಬಿಟ್ಟು ಹೋಗಿ ಪರೀಕ್ಷಾ ಸಿದ್ಧತೆ ನಡೆಸಿದೆ. ಪರೀಕ್ಷೆಯಲ್ಲಿ ಉತ್ತೀರ್ಣಳಾದಾಗ ನನ್ನ ಆನಂದಕ್ಕೆ ಪಾರವೇ ಇಲ್ಲ. ಆದರೆ ನನ್ನ ಬಾಳನ್ನು ರೂಪಿಸಿಕೊಳ್ಳಲು ಕಾಣುತ್ತಿದ್ದ ಕನಸುಗಳೆಲ್ಲಾ ಭಗ್ನವಾದವು! ಯಾರೇ ಬಂಧುಗಳು ಕಂಡರೂ ಇದೇ ಚರ್ಚೆ. ನಾನು ಯಾರಿಗೂ ಮುಖ ತೋರಿಸದಂತೆ ಆಗಿದ್ದೇನೆ.

 ನನ್ನ ದೊಡ್ಡಪ್ಪ ಸಣ್ಣ ನೀರಾವರಿ ಇಲಾಖೆಯಲ್ಲಿ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ. ನನ್ನ ತಂದೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿರದ ಕಾರಣ ಅಲ್ಲಿಗೆ ಕರೆದುಕೊಂಡು ಹೋದ. ಬಿ.ಸಿ.ಎಂ ಹಾಸ್ಟೆಲ್ ನಲ್ಲಿ ಸೇರಿಸಿದ. 5ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಹಾಸ್ಟೆಲ್ ನಲ್ಲಿಯೇ ಇದ್ದು ವಿದ್ಯಾಭ್ಯಾಸ ಮಾಡಿದೆ. ಪ್ರತಿ ತರಗತಿಯಲ್ಲಿಯೂ ಪ್ರಥಮ ಸ್ಥಾನದಲ್ಲಿಯೇ ಉತ್ತೀರ್ಣನಾಗುತ್ತಿದ್ದೆ. ಪದವಿ ತರಗತಿಯಲ್ಲಿ ಓದುತ್ತಿರುವಾಗ ನಾನೊಬ್ಬ ಕೆ.ಎ.ಎಸ್ ಅಧಿಕಾರಿಯಾಗಬೇಕೆಂಬ ಬಲವಾದ ಗುರಿ ಇತ್ತು. ಸತತ 4 ವರ್ಷ ಹಗಲೂ ರಾತ್ರಿ ಕಷ್ಟಪಟ್ಟು ಓದಿದೆ. ಕಾರ್ಯನಿರ್ವಾಹಕ ಅಧಿಕಾರಿಯಾಗಿ ಆಯ್ಕೆಗೊಂಡೆ. ನನ್ನ ಕುಟುಂಬದವರಿಗೂ, ಪ್ರಾಣಸ್ನೇಹಿತರಿಗೂ, ನನ್ನ ಗ್ರಾಮದವರಿಗೂ ಆದ ಖುಷಿಯನ್ನು ಹೇಳಿಕೊಳ್ಳಲು ಪದಗಳಿಲ್ಲ. ಆ ಖುಷಿ ಅಷ್ಟೇ ಬೇಗ ಕಳೆದು ಹೋಯಿತು. ಈ 10 ವರ್ಷಗಳಲ್ಲಿ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಯಾರು ನನ್ನ ಸಾಧನೆಯನ್ನು ನೋಡಿ ಹೊಗಳುತ್ತಿದ್ದರೋ ಅವರೇ ನನ್ನನ್ನು ಈಗ ಹೀಯಾಳಿಸುತ್ತಿದ್ದಾರೆ. ಇವನು ಎಂದೂ ಕೆ.ಎ.ಎಸ್ ಅಧಿಕಾರಿ ಆಗಲು ಸಾಧ್ಯವಿಲ್ಲ. ಇವನ ಕತೆ ಮುಗಿಯಿತು ಎಂದು ಚುಚ್ಚು ಮಾತನಾಡಿ ನನ್ನ ಮನಸ್ಸನ್ನು ಘಾಸಿಗೊಳಿಸುತ್ತಿದ್ದಾರೆ. ಕೋರ್ಟು ಕೂಡ ಇವರ ಆಯ್ಕೆ ಪಟ್ಟಿಯನ್ನು ರದ್ದು ಮಾಡಿದ ಮೇಲೆ ಇನ್ನೇನು ಉಳಿಯಿತು. “ನೂರು ಅಪರಾಧಿಗಳಿಗೆ ಶಿಕ್ಷೆ ಆಗದಿದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು” ಎಂಬ ಮಾತು ಸುಳ್ಳಾಯಿತು. 

"ನಾನು ಮಾಡದ ತಪ್ಪಿಗೆ ಅಂದಿನಿಂದ ಅನುಭವಿಸುತ್ತಿರುವ ಯಾತನೆಗೆ ನರಳಾಟಕ್ಕೆ ಮೂಕವೇದನೆಗೆ ಈಗ ದಶಕಗಳೇ ಸಂದಿವೆ. ಆತ್ಮೀಯವಾಗಿ ಸಂಬಂಧ ಹೊಂದಿದ ಕೆಲವರನ್ನು ಹೊರತು ಪಡಿಸಿ ಅಂದು ಸತ್ಕಾರಕ್ಕೆ ಮುಂದಾಗಿದ್ದ ಸಂಘ ಸಂಸ್ಥೆಗಳು, ಬಂಧುಗಳು, ಮಿತ್ರರು, ಸಮಾಜ ಬಾಂಧವರು ಈ ಹತ್ತು ವರ್ಷಗಳಲ್ಲಿ ಮತ್ತೆಂದೂ ಕರೆ ಮಾಡಿ ಸಾಂತ್ವನ ಹೇಳುವ ಧೈರ್ಯ ಮಾಡಿಲ್ಲ. ಒಂದು ಕಾಲಕ್ಕೆ ಪ್ಲೇಗ್ ಮಹಾಮಾರಿ ಬಂದವರನ್ನು ಊರಾಚೆ ಇಟ್ಟಂತೆ ಇವರೆಲ್ಲರೂ ತಮ್ಮ ಮನದಿಂದ ಬಲುದೂರ ಇಟ್ಟುಬಿಟ್ಟಿದ್ದಾರೆ. ನಮ್ಮ ಜೊತೆಗೆ ಹೆಜ್ಜೆ ಹಾಕಿದವರು ನಮ್ಮಿಂದ ಸಹಾಯ ಪಡೆದು ಅಧಿಕಾರಿಗಳಾದವರು ಹೊಟ್ಟೆ ಹುಣ್ಣಾಗುವಂತೆ ನಕ್ಕ ಕುಹಕದ ಮಾತಿನ ಕರ್ಕಶ ಧ್ವನಿ ದಶಕವಾದರೂ ಇನ್ನೂ ನಿಂತಿಲ್ಲ.

ನೂರಾರು ಕನಸನ್ನು ಹೊತ್ತು ಮಧ್ಯಮ ವರ್ಗದಿಂದ ಬಂದು ಉನ್ನತ ಹುದ್ದೆಯ ಕನಸನ್ನು ಕಾಣುತ್ತಾ ಅದಕ್ಕಾಗಿ ಹತ್ತಾರು ವರ್ಷ ಕಷ್ಟಪಟ್ಟು ಅಧ್ಯಯನ ಮಾಡಿ ಬೀದಿಗೆ ಬಿದ್ದ ಅನಾಥರು ನಾವು. ದುಷ್ಟ-ಭ್ರಷ್ಟ ರಾಜಕೀಯ ವ್ಯವಸ್ಥೆ, ಭಾರತದ ನ್ಯಾಯಾಂಗ ವ್ಯವಸ್ಥೆ ನನ್ನೆಲ್ಲ ಕನಸುಗಳನ್ನು ನುಚ್ಚುನೂರು ಮಾಡಿತು. ಅದರಲ್ಲೂ ಮಧ್ಯಮ ವರ್ಗದ ಅವಿವಾಹಿತ ಮಹಿಳೆ ನಾನು. ನನ್ನ ತಂದೆ ಇಹಲೋಕ ತ್ಯಜಿಸಿದ್ದಾರೆ. ಉನ್ನತ ಹುದ್ದೆಯ ಕನಸು ನಮ್ಮ ವೈಯಕ್ತಿಕ ಬಾಳನ್ನು ಹೊಸಕಿಬಿಟ್ಟಿದೆ. ಸಾಧನೆ ವೇದನೆಯಾಗಿ, ಸಂಭ್ರಮ ಸೂತಕವಾಗಿ ನಮ್ಮದಲ್ಲದ ತಪ್ಪಿಗೆ ನಮ್ಮ ಬದುಕು ದುರಂತವಾಗಿ ಕುಟುಂಬದವರನ್ನು ಸಾಕಿ ಸಲಹಬೇಕಾದ ನಾವೇ ನಮ್ಮ ಕುಟುಂಬಗಳಿಗೆ ಹೊರೆಯಾಗಿದ್ದೇವೆ. ಹೆತ್ತವರ ಮೊಗದಲ್ಲಿ ಆನಂದ ಬಾಷ್ಪಗಳನ್ನು ನೋಡಬೇಕಾದ ನಾವು ಇಂದು ನಮ್ಮಿಂದಾಗಿ ಕಣ್ಣೀರ ಕೋಡಿ ಹರಿಸುವಂತಾಗಿದೆ. ಭೂಮಿಯು ಬಾಯ್ಬಿಟ್ಟು ನುಂಗಬಾರದೇ ನಮ್ಮನ್ನ! ಈ ಕೊರೊನಾ ನಮ್ಮನ್ನು ಹೊತ್ತೊಯ್ಯ ಬಾರದೇ? 

ನಮ್ಮ ಸುತ್ತಲಿನ ಜನರಿಂದ ಬಂದ ನಿಂದನೆ, ಅಪಮಾನ ಇವುಗಳನ್ನೆಲ್ಲಾ ಸಹಿಸಿಕೊಂಡು ಇನ್ನೆಷ್ಟು ದಿನ ಬದುಕಬೇಕು? ನಮ್ಮ ಜೀವನದಲ್ಲಿ ಕಳೆದುಕೊಂಡ ಅಮೂಲ್ಯ ಹತ್ತು ವರ್ಷಗಳನ್ನು ಯಾರಾದರೂ ಮರಳಿ ತಂದು ಕೊಡುತ್ತಾರೆಯೇ? ನಾಲೈದು ವರ್ಷಗಳ ಕಾಲ ಕಷ್ಟಪಟ್ಟು ಓದಿದ ಶ್ರಮಕ್ಕೆ ಬೆಲೆ ಇಲ್ಲವೇ? ಪ್ರತಿದಿನವೂ ಮಾನಸಿಕ ಯಾತನೆಯಿಂದ ಸಾಯುವ ಬದಲು ಒಂದೇ ದಿನ ಸತ್ತರೆ ಮೇಲಲ್ಲವೇ? ಇವರೆಲ್ಲರ ಮಾನಸಿಕ ತೊಳಲಾಟ ಮತ್ತು ಸಂಕಟವನ್ನು ದಾಖಲಿಸಲು ಒಂದು ವಿಶೇಷ ಸಂಚಿಕೆಯೇ ಬೇಕು. ಇವರೆಲ್ಲರೂ ದೈನೇಸಿಯಾಗಿ ಕಾಡಿ ಬೇಡಿದರೂ ಕೆಲಸ ಮಾಡಿಕೊಡದ ಮಂತ್ರಿಮಹೋದಯರನ್ನು, ಶಾಸಕರನ್ನು ಸಭೆಸಮಾರಂಭಗಳಲ್ಲಿ ಶಾಲು ಹೊದಿಸಿ ಸನ್ಮಾನಿಸುವುದು ನಮ್ಮ ದೇಶದ ಜನರ ಅತಿ ದೊಡ್ಡ ಗುಣ. ನಮ್ಮ ಜನನಾಯಕರು ಆಶ್ವಾಸನೆಗಳನ್ನು ಕೊಡುವುದರಲ್ಲಿ ಮಾತ್ರ ನಿಪುಣರು, ಅದ್ವಿತೀಯರು. ಅವರು ಅರಿಯಬೇಕಾದ ಒಂದು ಸತ್ಯ ಇದೆ. ಕೆಲವು ಸಲ ಕೆಲವರನ್ನು ಮಾತ್ರ ಮೋಸಗೊಳಿಸಬಹುದೇ ಹೊರತು ಎಲ್ಲ ಕಾಲದಲ್ಲೂ ಎಲ್ಲರನ್ನೂ ಮರುಳು ಮಾಡುವುದು ಸಾಧ್ಯವಿಲ್ಲ ಜನರೂ ಸಹ ನಿಧಾನವಾಗಿಯಾದರೂ ಬುದ್ದಿವಂತರಾಗುತ್ತಿದ್ದಾರೆ. ತಮ್ಮ ಪ್ರತಿನಿಧಿಗಳ ಮಾತುಗಳನ್ನು ಎಷ್ಟು ನಂಬಬೇಕು, ಎಷ್ಟು ನಂಬಬಾರದು ಎಂದು ಖಂಡಿತ ತೀರ್ಮಾನಿಸುತ್ತಾರೆ. ಶರಣರೊಂದಿಗೆ ಸರಸವಾಡಿದರೆ ಏನಾಗಬಹುದೆಂದು ಎಚ್ಚರಿಸುವ ಬಸವಣ್ಣನವರ ಈ ಮುಂದಿನ ವಚನದ ಹಿನ್ನೆಲೆಯಲ್ಲಿ ಪ್ರಜಾಪ್ರಭುತ್ವದಲ್ಲಿ ಜನರೊಂದಿಗೆ ಹೇಗೆ ವರ್ತಿಸಬೇಕೆಂಬ ಒಳ ಎಚ್ಚರ ಜನಪ್ರತಿನಿಧಿಗಳಿಗೆ ಇದ್ದರೆ ನಾಡಿಗೆ ಒಳಿತು ಆದೀತು. 

ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸಿಕೊಂಡಂತೆ 
ಹುಲಿಯ ಮೀಸೆಯ ಹಿಡಿದು ಒಲಿದು ಉಯ್ಯಾಲೆ ಆಡಿದಂತೆ 
ಉರಿವ ಕೊಳ್ಳಿಯ ಹಿಡಿದು ಮಂಡೆಯ ಸಿಕ್ಕ ಬಿಡಿಸಿದಂತೆ 
ಕೂಡಲ ಸಂಗನ ಶರಣರೊಡನೆ ಮರೆದು ಸರಸವಾಡಿದರೆ 
ಸುಣ್ಣದ ಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ!

ಕೃಪೆ: ವಿಜಯ ಕರ್ನಾಟಕ 16.12.2021

ಶ್ರೀ ತರಳಬಾಳು ಜಗದ್ಗುರು 
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು 
ಸಿರಿಗೆರೆ.