ಜೀವನದಲ್ಲಿ ನೆನಪಿಡಬೇಕಾದುದು ಯಾವುದು?

  •  
  •  
  •  
  •  
  •    Views  

ಇನ್ನೊಂದು ದಿನ ಕಳೆದರೆ ಈ ವರ್ಷ ಮುಗಿದು 2022 ನೇ ಹೊಸ ವರ್ಷ ಪಾದಾರ್ಪಣೆ ಮಾಡಲಿದೆ. ಕೊರೊನಾ ಕಾರಣದಿಂದ ಹೊಸ ವರ್ಷವನ್ನು ಹರ್ಷದಿಂದ ಸ್ವಾಗತಿಸುವಂತಿಲ್ಲ. ಕೆಲವರಿಗೆ ಈ ವರ್ಷ ಹರ್ಷ ತಂದಿರಬಹುದು. ಇನ್ನು ಕೆಲವರಿಗೆ ದುಃಖ ತಂದಿರಬಹುದು. ಮುಂದಿನ ವರ್ಷ ಹರ್ಷ ತರಬಹುದೆಂಬ ನಿರೀಕ್ಷೆಯಲ್ಲಿರಬಹುದು. ಕಾಲಮಾನದ ದೃಷ್ಟಿಯಿಂದ ಗ್ರಿಗೋರಿಯನ್ ಕ್ಯಾಲೆಂಡರ್ನಲ್ಲಿ ಇದು ಹೊಸ ವರ್ಷವೇ ಹೊರತು ಕೌಟುಂಬಿಕ ಜೀವನದಲ್ಲಿ ಎಲ್ಲರಿಗೂ ಹೊಸ ವರ್ಷ ಆಗುವುದಿಲ್ಲ. ನೀವು ಹುಟ್ಟಿದ/ಮದುವೆಯಾದ ದಿನಾಂಕ ಜನವರಿಯಲ್ಲಿ ಇದ್ದರೆ ನಿಮಗೆ ಜನವರಿ ಹೊಸ ವರ್ಷ. ನೀವು ಹುಟ್ಟಿದ/ಮದುವೆಯಾದ ದಿನಾಂಕ ಫೆಬ್ರವರಿಯಲ್ಲಿದ್ದರೆ ನಿಮಗೆ ಫೆಬ್ರವರಿ ಹೊಸ ವರ್ಷ, ಸಂಭ್ರಮದಿಂದ ಆಚರಿಸುತ್ತೀರಿ. ನೀವು ಮರಣ ಹೊಂದುವ ದಿನಾಂಕ ಯಾವ ತಿಂಗಳು ಬರುತ್ತದೆಯೋ ಅದು ನಿಮ್ಮ ವಾರ್ಷಿಕ ಪುಣ್ಯತಿಥಿ. ಆದರೆ ಅದು ನಿಮಗೆ ಗೊತ್ತಾಗುವುದೇ ಇಲ್ಲ. ಅದನ್ನು ನಿಮ್ಮ ಬಂಧುಗಳು ಆಚರಿಸುತ್ತಾರೆ. ಇದನ್ನು ಓದಿ ನೀವು ಬೆಚ್ಚಿ ಬೀಳಬೇಡಿ: “ನೀ ಹುಟ್ಟಿಸಿದಲ್ಲಿ ಹುಟ್ಟಿ ನೀ ಕೊಂದಲ್ಲಿ ಸಾಯದೆ ಎನ್ನ ವಶವೇ ಅಯ್ಯಾ! ನೀವಿರಿಸಿದಲ್ಲಿ ಇರದೆ ಎನ್ನ ವಶವೇ ಅಯ್ಯಾ... ಕೂಡಲಸಂಗಮ ದೇವಾ” ಎನ್ನುತ್ತಾರೆ ಬಸವಣ್ಣನವರು, “ಜಾತಸ್ಯ ಮರಣಂ ಧ್ರವಮ್” ಎನ್ನುವಂತೆ ಹುಟ್ಟು ಮತ್ತು ಸಾವು ಮನುಷ್ಯನ ಕೈಯಲ್ಲಿಲ್ಲ. ಅದು ದೈವ ನಿಯಾಮಕ, ಧೃತಿಗೆಡದೆ ಹುಟ್ಟು ಮತ್ತು ಸಾವಿನ ಮಧ್ಯೆ ಇರುವ ಕಾಲಾವಧಿಯಲ್ಲಿ ನೀವು ಮಾಡಬೇಕಾದ ಕರ್ತವ್ಯಗಳನ್ನು ಮಾಡಿರಿ.

ಅಜರಾಮರವತ್ ಪ್ರಾಜ್ಞೋ ವಿದ್ಯಾಂ ಅರ್ಥಂ ಚ ಚಿಂತಯೇತ್ | 
ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್ ||

ಅಂದರೆ ನಿಮಗೆ ಮುಪ್ಪಿಲ್ಲ, ಸಾವಿಲ್ಲ ಎಂದು ಭಾವಿಸಿ ಜೀವನದಲ್ಲಿ ಎರಡನ್ನು ಸಂಪಾದಿಸಬೇಕು: ಒಂದು ವಿದ್ಯೆ ಮತ್ತೊಂದು ಹಣ. ಬೆನ್ನ ಹಿಂದೆ ಮೃತ್ಯುದೇವತೆ ನಿಮ್ಮ ತಲೆಗೂದಲನ್ನು ಹಿಡಿದು ಜಗ್ಗುತ್ತಿದೆ, ನಾಳೆ ಬದುಕಿರುತ್ತೇನೆಯೋ ಇಲ್ಲವೋ ಎಂದು ಭಾವಿಸಿ ಇಂದೇ ಧರ್ಮಕಾರ್ಯಗಳನ್ನು ಮಾಡಬೇಕು, ಮುಂದಕ್ಕೆ ತಳ್ಳಬಾರದು ಎನ್ನುತ್ತದೆ ಈ ಸೂಕ್ತಿ. ಆದರೆ ಈಗ ವಿದ್ಯೆ ಕಲಿಯಲೂ ಹಣ ಬೇಕಾಗಿರುವುದು ಈ ಸುಭಾಷಿತಕ್ಕೆ ಸವಾಲಾಗಿದೆ! ಜಗತ್ತಿನ ಯಾವ ದೇಶದ ಜನರೂ ಒಂದೇ ಸಮಯಕ್ಕೆ ಸರಿಯಾಗಿ ವರ್ಷಾರಂಭವನ್ನು ಮಾಡುವುದಿಲ್ಲ, ಏಕೆಂದರೆ ಜಗತ್ತಿನ ಯಾವ ಗಡಿಯಾರವೂ ಒಂದೇ ಸಮಯವನ್ನು ತೋರಿಸುವುದಿಲ್ಲ. ಸರಿಯಾಗಿರುವ ನಿಮ್ಮ ಕೈಗಡಿಯಾರವು ನಿಮ್ಮ ದೇಶದ/ಪ್ರಾಂತ್ಯದ ಸಮಯವನ್ನು ತೋರಿಸುತ್ತದೆಯೇ ಹೊರತು ಬೇರೆ ದೇಶದ ಸಮಯವನ್ನು ತೋರಿಸುವುದಿಲ್ಲ. ಹಾಗೆ ನೋಡಿದರೆ ಕೆಟ್ಟಿರುವ ನಿಮ್ಮ ಕೈಗಡಿಯಾರವೇ ಎಲ್ಲ ದೇಶಗಳ ಸಮಯವನ್ನು ತೋರಿಸುತ್ತದೆ. ಕೆಟ್ಟು ನಿಂತ ನಿಮ್ಮ ಕೈ ಗಡಿಯಾರದ ಮುಳ್ಳು ಮುಂದಕ್ಕೆ ಸರಿಯದೆ ಪ್ರತಿ ಸೆಕೆಂಡಿಗೂ ಯಾವುದೋ ದೇಶದ ಸಮಯವನ್ನು ತೋರಿಸುತ್ತಿರುತ್ತದೆ. ಹೀಗಾಗಿ ನಿಂತ ಗಡಿಯಾರವೂ ಚಲನಶೀಲವಾಗಿ ದೃಷ್ಟಿಗೋಚರವಾಗುವುದು ಒಂದು ವೈಶಿಷ್ಟ! ಅಮೇರಿಕೆಯು ಒಂದೇ ದೇಶವಾದರೂ ಅದರ ವಿಭಿನ್ನ ಪ್ರಾಂತ್ಯಗಳಲ್ಲಿರುವ ಜನರ ಕೈಗಡಿಯಾರಗಳು ವಿಭಿನ್ನ ಸಮಯವನ್ನು ತೋರಿಸುತ್ತವೆ. ಹಾಗೆಯೇ ಐರೋಪ್ಯ ರಾಷ್ಟ್ರಗಳಲ್ಲಿಯೂ ಸಹ. ಅದರಲ್ಲೂ ಚಳಿಗಾಲದಲ್ಲಿ ಒಂದು ರೀತಿಯ ಸಮಯ, ಬೇಸಿಗೆಯ ಕಾಲದಲ್ಲಿ ಮತ್ತೊಂದು ರೀತಿಯ ಸಮಯ. ಸೂರ್ಯನ ಬೆಳಕನ್ನು ಸಮರ್ಪಕವಾಗಿ ಬಳಸಿಕೊಳ್ಳುವ ದೃಷ್ಟಿಯಿಂದ ಒಂದು ಗಂಟೆ ಹಿಂದೆ ಮುಂದೆ ಸರಿಸಲಾಗುತ್ತದೆ.

ವಾಸ್ತವವಾಗಿ ಅದು ಆ ದೇಶದ ಸರಿಯಾದ ಸಮಯ ಅಲ್ಲ. ಅಲ್ಲಿಯ ಹವಾಮಾನಕ್ಕೆ ತಕ್ಕಂತೆ ನಾಗರಿಕರಿಗೆ ಅನುಕೂಲವಾಗುವ ಸಮಯ. ಅದಕ್ಕೆ Winter Time/Summer Time ಎಂದು ಕರೆಯುತ್ತಾರೆ. ನಮ್ಮಲ್ಲಿ ಬೇಗನೆ ಏಳುವವರನ್ನು “ಚಂದ್ರವಂಶಿ” ಎಂದೂ ತಡವಾಗಿ ಏಳುವವರನ್ನು “ಸೂರ್ಯವಂತಿ” ಎಂದೂ ವಿಡಂಬಿಸುತ್ತಾರೆ. ಇನ್ನು ಶಾಲಾ ವರ್ಷ ಮತ್ತು ಹಣಕಾಸಿನ ವರ್ಷಕ್ಕೆ ಬಂದರೆ ನಮ್ಮ ದೇಶದಲ್ಲಿ Academic Year/Financial Year ಏಪ್ರಿಲ್ನಿಂದ ಮಾರ್ಚ್ವರೆಗೆ. ಆದರೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜನವರಿಯಿಂದ ಡಿಸೆಂಬರ್ವರೆಗೆ. ವಾಸ್ತವವಾಗಿ ಡಿಸೆಂಬರ್ ಹತ್ತನೆಯ (ದಶ) ತಿಂಗಳಾಗಿತ್ತು, ಅದರ ಹಿಂದಿನ ತಿಂಗಳುಗಳಾದ ಸೆಪ್ಟೆಂಬರ್ (ಸಪ್ತ), ಅಕ್ಟೋಬರ್ (ಅಷ್ಟ) ಮತ್ತು ನವಂಬರ್ (ನವ) ಏಳು, ಎಂಟು ಮತ್ತು ಒಂಭತ್ತನೆಯ ತಿಂಗಳುಗಳಾಗಿದ್ದವು. ಆದರೆ ಕ್ರಿ.ಪೂ 2 ನೆಯ ಶತಮಾನದಲ್ಲಿ ರೋಮನ್ ಸೆನೆಟ್ ಜನವರಿಯನ್ನು ಹೊಸ ವರ್ಷದ ಆರಂಭವೆಂದು ಪರಿಗಣಿಸಿದ್ದರಿಂದ ಡಿಸೆಂಬರ್ ತನ್ನ ಅನ್ವರ್ಥಕ ನಾಮವನ್ನು ಕಳೆದುಕೊಂಡು 12 ನೆಯ ತಿಂಗಳು ಆಯಿತು. ಈಗ ಹಿಂದಕ್ಕೆ ಸರಿಯಲಿರುವ 2021 ನೇ ವರ್ಷ ಈ ಜಗತ್ತಿನ ಜನ್ಮ ದಿನಾಂಕ ಅಲ್ಲ. ಭಾರತೀಯ ತತ್ವಜ್ಞಾನಿಗಳ ಪ್ರಕಾರ ಕಾಲ “ಪರ” ಮತ್ತು “ಅಪರ” ಎಂದು ಎರಡು ವಿಧ. ವಾಸ್ತವವಾಗಿ ಕಾಲ ಅಖಂಡ. ಅದು ಅನಾದಿ ಮತ್ತು ಅನಂತ. ಭೂತ, ಭವಿಷ್ಯ, ವರ್ತಮಾನ ಎಂಬುದಿಲ್ಲ. ಈಗ ವ್ಯವಹಾರದಲ್ಲಿ ಬಳಕೆಯಲ್ಲಿರುವ ನಾಲ್ಕು ಅಂಕಿಗಳ ವರ್ಷ ಮುಂದೆ ಲಕ್ಷಾಂತರ ವರ್ಷಗಳಾದಾಗ ಮುಂದಿನ ಪೀಳಿಗೆಯವರು ವರ್ಷದ ಸಂಖ್ಯೆಯನ್ನು ಹೇಗೆ ಬರೆಯುತ್ತಾರೋ ಏನೋ! 2000 ನೇ ವರ್ಷ ಬಂದಾಗ Software ಇಂಜಿನಿಯವರಿಗೆ Y2K ಸಮಸ್ಯೆ ತಲೆದೋರಿತ್ತು. ಮುಂದೆ ಒಂದು ಮಿಲಿಯನ್ (ಹತ್ತು ಲಕ್ಷ) ವರ್ಷ ದಾಟಿದ ಮೇಲೆ ಗಣಕಯಂತ್ರಗಳಲ್ಲಿ YIM ಸಮಸ್ಯೆ ಉದ್ಭವಿಸಬಹುದು!  

1976 ರ ಡಿಸೆಂಬರ್ ತಿಂಗಳು ಆಸ್ಟ್ರಿಯಾ ದೇಶದ ರಾಜಧಾನಿ ವಿಯೆನ್ನಾದಲ್ಲಿರುವ Afro Asian Institute ನಿಂದ ನಮ್ಮ ಉನ್ನತ ವ್ಯಾಸಂಗಕ್ಕೆ ಫೆಲೋಷಿಪ್ ಮುಂಜೂರಾಗಿ ಬಂದಿತ್ತು. ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಓದುವುದಕ್ಕೆ ಹೊರಡಲು ಎರಡೇ ತಿಂಗಳು ಉಳಿದಿದ್ದವು. ಆಗ ತಾನೇ ಕಾಶಿಯಿಂದ ಸಿರಿಗೆರೆಗೆ ಹಿಂದಿರುಗಿದ್ದ ನಮಗೆ ಸಂಶೋಧನೆಯ ಗುಂಗು ಇನ್ನೂ ಹೋಗಿರಲಿಲ್ಲ. ಮಠದಲ್ಲಿದ್ದ ಹಳೆಯ ಕಾಗದ ಪತ್ರದ ಕಡತಗಳನ್ನು ಕೋಳಿಯಂತೆ ಕೆದಕುತ್ತಾ ನೋಡತೊಡಗಿದೆವು. ಜೋಪಾನವಾಗಿ ಒಂದೆಡೆ ಗಂಟು ಕಟ್ಟಿ ಸುತ್ತಿಟ್ಟಿದ್ದ ಕೆಲವು ಬಟ್ಟೆಯ ಗಂಟುಗಳು ಕಣ್ಣಿಗೆ ಬಿದ್ದು ಇತಿಹಾಸದ ಬುತ್ತಿಯ ಗಂಟಿನಂತೆ ತೋರಿದವು. ಒಂದೊಂದು ಗಂಟನ್ನು ಬಿಚ್ಚಿ ಅವುಗಳಲ್ಲಿದ್ದ ಹಳೆಯ ಪತ್ರಗಳನ್ನು ಹರಡಿಕೊಂಡು ಕುಳಿತೆವು. ಕಾಲಾನುಕ್ರಮದಲ್ಲಿ ಕ್ರಮಬದ್ಧವಾಗಿ ಜೊಡಿಸತೊಡಗಿದೆವು. ಮೊದಲು ಇಸವಿಗೆ ಅನುಗುಣವಾಗಿ ವರ್ಗೀಕರಣ ನಂತರ ಆಯಾಯ ವರ್ಷದ ತಿಂಗಳು ಮತ್ತು ದಿನ ಹೀಗೆ ವಿಭಾಗ ಸಿದ್ಧವಾಯಿತು. ಒಂದೊಂದನ್ನೇ ಪಂಚ್ ಮಾಡಿ ಫೈಲ್ ಮಾಡಿದೆವು. ಗಂಟುಗಳಲ್ಲಿದ್ದ ತೀರಾ ಹಳೆಯ, ಜೀರ್ಣವಾದ ಮತ್ತು ಮಹತ್ವಪೂರ್ಣವಾದ ಕೆಲವು ದಾಖಲೆಗಳನ್ನು ಪಂಚ್ ಮಾಡಿದರೆ ಅಕ್ಷರಗಳು ಕಾಣದಾಗಬಹುದೆಂಬ ಭೀತಿಯಿಂದ ಹಾಗೆಯೇ ಪಾರದರ್ಶಕ ಪ್ಲಾಸ್ಟಿಕ್ ಕವರ್ಗಳಲ್ಲಿ ಸುರಕ್ಷಿತವಾಗಿ ಸೇರಿಸಿ ಭದ್ರಪಡಿಸಿದೆವು.

ಮಠದ ಒಂದೊಂದು ಮೂಲೆಯಿಂದಲೂ ಕಸಗುಡಿಸುತ್ತಾ ಹಳೆಯ ಪತ್ರಗಳನ್ನು ಹೀಗೆ ಹುಡುಕಿಕೊಂಡು ಹೊರಟ ನಮ್ಮ ಶೋಧನೆಯ ಜಾಡು ಮಠದ ಮಹಾದ್ವಾರದ ಮೇಲೆ ಬೆಳ್ಳಿಯ ರೂಮೆಂದೇ ಪ್ರಸಿದ್ದವಾಗಿರುವ ಒಂದು ರೂಮಿಗೆ ನಮ್ಮನ್ನು ಕರೆದೊಯ್ದಿತು. ಸುತ್ತಲೂ ಅಸ್ತವ್ಯಸ್ತವಾಗಿ ಬಿದ್ದಿದ್ದ ಮಠಕ್ಕೆ ಭಕ್ತಿಕಾಣಿಕೆಯಾಗಿ ಬಂದ ಬೆಳ್ಳಿಯ ತಟ್ಟೆಗಳು, ಲೋಟಗಳು, ತಂಬಿಗೆಗಳು, ಕರಂಡಕಗಳು, ದೀಪಗಳು, ನಿರಾಂಜನ ಇತ್ಯಾದಿ ಇತ್ಯಾದಿ ಹಿಂದಿನ ಕಾಲದ ಭಕ್ತಾದಿಗಳ ನಿರ್ಮಲ ಭಕ್ತಿಯ ಪ್ರತೀಕವಾಗಿದ್ದವು. ಅವುಗಳ ಮಧ್ಯೆ ಒಂದು ಗೋಡೆಯ ಬೀರುವಿನ ಕೆಳಗಿನ ಖಾನಿಯಲ್ಲಿ ಧೂಳು ತಿಂದು ಬಿದ್ದಿದ್ದ ಹಳೆಯ ಕಾಲದ ಅನೇಕ ಡೈರಿಗಳು ಕಣ್ಣಿಗೆ ಗೋಚರಿಸಿದವು. ಅವುಗಳೆಲ್ಲವನ್ನು ಧೂಳು ಕೊಡವಿ ಇಸವಿಯ ಕ್ರಮದಲ್ಲಿ ಜೋಡಿಸಿದೆವು. ಕುತೂಹಲದಿಂದ ಅವುಗಳಲ್ಲಿ ಒಂದೆರಡನ್ನು ತೆಗೆದು ನೋಡಿದಾಗ ಆಗಿನ ಕಾಲದ ಗುರುಗಳ ಕಾಣಿಕೆಯ ಜಮಾ-ಖರ್ಚಿನ ಲೆಕ್ಕಗಳು ಮಾತ್ರ ಕಂಡುಬಂದವು. ಉಳಿದ ಡೈರಿಗಳಲ್ಲೇನಿರಬಹುದೆಂದು ಮತ್ತೊಂದನ್ನು ಕೈಗೆತ್ತಿಕೊಂಡಾಗ ಅದು ನಮ್ಮ ಲಿಂಗೈಕ್ಯ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಡೈರಿಯಾಗಿತ್ತು. “ಬರೀ ಜಮಾ-ಖರ್ಚಿನ ಲೆಕ್ಕ, ಅವುಗಳಲ್ಲೇನಿದೆಯೆಂದು ಹಾಗೇ ನೋಡುತ್ತೀರಿ?” ಎಂದು ಆಪ್ತಸಹಾಯಕರೊಬ್ಬರು ಉದ್ಧಾರವೆಳೆದರು. “ಕಾಲದ ದೃಷ್ಟಿಯಿಂದ ಅವುಗಳಿಗೂ ಮಹತ್ವವಿದೆ” ಎಂದು ಉತ್ತರಿಸಿ ಪುಟಗಳನ್ನು ತಿರುವಿಹಾಕಿದಾಗ ದಿನಾಂಕ 11.9.1938 ರ ಪುಟದಲ್ಲಿ ಆಗ ಪೆಟ್ರೋಲು ಧಾರಣೆ 2 ಗ್ಯಾಲನ್ನಿಗೆ ಅಂದರೆ 10 ಲೀಟರುಗಳಿಗೆ 2 ರೂ 14 ಆಣೆ! ಎಂದು ತಿಳಿದುಬಂದಿತು. ಹಣದ ಮೌಲ್ಯ ಬದಲಾಗಬಹುದೇ ಹೊರತು, ಜೀವನದ ಮೌಲ್ಯ ಬದಲಾಗಲು ಸಾಧ್ಯವಿಲ್ಲ ಎನಿಸಿತು. ಅದೆಲ್ಲವನ್ನೂ ನಿಧಾನವಾಗಿ ಹಿಂದಿನಿಂದ ನೋಡಿದರಾಯಿತು ಎನಿಸಿದರೂ ಕೈಗೆತ್ತಿಕೊಂಡ ನಮ್ಮ ಗುರುವರ್ಯರ ಡೈರಿಯ ಮುಂದಿನ ಪುಟಗಳನ್ನು ತಿರುವಿ ಹಾಕದೆ ಹಾಗೆಯೇ ತೆಗೆದಿಡಲು ಮನಸ್ಸು ಬರಲಿಲ್ಲ, ಸಹಜವಾಗಿ ಅದರ ಮತ್ತೊಂದು ಪುಟವನ್ನು ತೆರೆದಾಗ ನಮಗೆ ಅಶ್ಚರ್ಯ ಕಾದಿತ್ತು. ದಾರಿಯ ಬದಿಯಲ್ಲಿ ಕುಳಿತ ಜ್ಯೋತಿಷಿಯು ಗಿಳಿಯನ್ನು ಪಂಜರದಿಂದ ಬಿಟ್ಟೊಡನೆಯೇ ಅದು ತೊನೆದಾಡುತ್ತಾ ನಾಲ್ಕು ಹೆಜ್ಜೆ ಮುಂದಕ್ಕೆ ಹೋಗಿ ಹರಡಿದ ಅನೇಕ ಓಲೆಗರಿಗಳಲ್ಲಿ ಒಂದನ್ನು ಕೊಕ್ಕಿನಿಂದ ಹೆಕ್ಕಿ ತಂದು ಭವಿಷ್ಯ ನುಡಿದಂತಾಗಿತ್ತು!

ದಿನಾಂಕ 4.4.1938 ರಂದು ಸೋಮವಾರ ನಮ್ಮ ಪರಮಾರಾಧ್ಯ ಗುರುಗಳವರು ಬರೆದಿರುವ ಈ ಕೆಳಗಿನ ಸಾಲುಗಳನ್ನು ಓದುತ್ತಲೇ ನಮ್ಮ ಕಂಠ ಗದ್ಗದಿತವಾಯಿತು, ಕಣ್ಣೆವೆ ಹನಿಗೂಡಿತು. ಮೈ ಪುಳಕಗೊಂಡಿತು: “ದೇವ! ನಿನ್ನ ವಿರಹವು ನನ್ನ ಮನಸ್ಸನ್ನು ಬಾಡಿಸಿತು. ಇಂದು ನಿನ್ನ ದರ್ಶನದಿಂದ ಎನ್ನ ಮನಃಕುಸುಮವು ಅರಳಿ ತನ್ನ ಸೌಗಂಧವನ್ನು ಎಲ್ಲಾ ಕಡೆಗೂ ಬೀರುತ್ತಾ ಇದೆ. ನಾನು ಧನ್ಯನಾದೆನು. ನನ್ನ ಆನಂದಕ್ಕೆ ಪಾರವಿಲ್ಲ, ಆನಂದವೇ ಆನಂದ! ನನ್ನ ಡೈರಿಯನ್ನು ಯಾವ ಪುಣ್ಯಾತ್ಮನು ಓದುತ್ತಾನೋ ಅವನೇ ಧನ್ಯನು!” ಈ ಡೈರಿಯನ್ನು ನಮ್ಮ ಗುರುವರ್ಯರು ಬರೆದಾಗ ನಾವು ಹುಟ್ಟೇ ಇರಲಿಲ್ಲ. 1938 ರಷ್ಟು ಹಿಂದೆ ಬರೆದ ಅವರ ಈ ಡೈರಿಯು 38 ವರ್ಷಗಳ ನಂತರ ನಮ್ಮ ಕೈಗೇ ಸಿಗಲು ಯಾವ ದೈವ ನಿಯಾಮಕವಿತ್ತೋ ಹೇಳಲಾರೆವು. ಡೈರಿಯ ಉಳಿದ ಪುಟಗಳನ್ನು ಓದುತ್ತಾ ಹೋದಂತೆ ಹೃದಯದಲ್ಲಿ ಧನ್ಯತೆಯ ಭಾವವು ಮಿಡಿಯಿತು. ನಮ್ಮ ಪೂರ್ವಜನ್ಮದ ಪುಣ್ಯದ ಫಲವೇ ಮೂರ್ತಿವೆತ್ತು ನಮ್ಮ ಕೈಯೊಳಗಿದೆಯೆಂಬ ಭಾವನೆಯು ಅಂಕುರಿಸಿತು. “ಆತ್ಮನಿವೇದನೆ” ಎಂಬ ಹೆಸರಿಟ್ಟು ಸಂಪಾದಿಸಿ ಪ್ರಕಟಿಸಿದ ಈ ಗ್ರಂಥದ ಒಳಪುಟಗಳನ್ನು ಶುದ್ಧಾಂತಃಕರಣದಿಂದ ನೋಡುವ ಓದುಗರೆಲ್ಲರಿಗೂ ಸಹ ಅದೇ ಧನ್ಯತೆಯ ಭಾವವು ಮೂಡಿಬಂದರೆ ಆಶ್ಚರ್ಯವಿಲ್ಲ. ಇದು ಪ್ರಜ್ಞಾಪೂರ್ವಕವಾಗಿ ಒಂದು ಪುಸ್ತಕವನ್ನು ಬರೆಯಬೇಕೆಂಬ ಉದ್ದೇಶದಿಂದ ಬರೆದ ಗ್ರಂಥವಲ್ಲ, ಅಂದಂದಿನ ಸ್ವಾನುಭವದ ಹಿನ್ನೆಲೆಯಲ್ಲಿ ಆತ್ಮದಲ್ಲಿ ಸಹಜವಾಗಿ ಉದಯಿಸಿದ ಅಂತರಂಗದ ತೀವ್ರತರವಾದ ನೈಜ ಭಾವನೆಗಳ ಮಿಡಿತ ಇಲ್ಲಿದೆ. ಜೀವನದಲ್ಲಿ ಎಲ್ಲ ಲೌಕಿಕ ಸುಖಾನುಭವಗಳನ್ನೂ ಪಡೆದು ಜಿಗುಪ್ಪೆಗೊಂಡು ನಿರಾಸಕ್ತಿ ಹೊಂದಿ ಒಂದು ಕಾಲು ಈ ಲೋಕದಲ್ಲಿಯೂ ಮತ್ತೊಂದು ಕಾಲು ಪರಲೋಕದಲ್ಲಿಯೂ ಇರುವ ಇಳಿವಯಸ್ಸಿನವರು ಬರೆದ ಆತ್ಮಕಥೆಯೂ ಇದಲ್ಲ, ವಯಸ್ಸು ಕಳೆದ ಮೇಲೆ ಹಿಂದಿನದನ್ನೇ ಸ್ಮರಿಸಿಕೊಂಡು ಪರಿ ಹರಿಯಾಗಿ ಹಳಹಳಿಸುವ ಹತಾಶ ಭಾವನೆಯನ್ನಾಗಲೀ ನಿಜವನ್ನು ಮುಚ್ಚಿಟ್ಟು ಸುಳ್ಳನ್ನು ಪೋಣಿಸಿ ಹೆಗ್ಗಳಿಕೆಯಾಗಿ ಬರೆಯುವ ಆತ್ಮಕಥೆಯ ಆತ್ಮವಂಚನೆಯಾಗಲೀ, ಕಪಟತನವಾಗಲೀ ಇಲ್ಲಿಲ್ಲ. 23-24ರ ಪ್ರಾಯದಲ್ಲಿ ಬರೆದ ಈ ಬರವಣಿಗೆಯಲ್ಲಿ ವಯಸ್ಸಿಗೆ ಸಹಜವಾದ ಆಸೆ ಆಕಾಂಕ್ಷೆಗಳ ಸೆಳೆತ, ಅದಕ್ಕೂ ಮೀರಿದ ಅಪರೂಪದ ಆಧ್ಯಾತ್ಮಿಕ ಸಾಧಾನಾಕಾಂಕ್ಷೆಯ ಅಂತರಂಗದ ತುಡಿತ ಇದ್ದು ಜೀವಂತ ಬರಹವೆನಿಸುತ್ತದೆ. ನಡೆ ನುಡಿಯ ಪಾರದರ್ಶಕತೆಯನ್ನು ಪ್ರತಿಬಿಂಬಿಸುವ ಈ ಬರಹವು ಬಸವಣ್ಣನವರ ಭಕ್ತಸ್ಥಲದ ವಚನಗಳ ಗದ್ಯರೂಪವೇನೋ ಎನ್ನುವಂತಿದೆ.

ಹಳೆಯ ಕಾಲದ ಡೈರಿಗಳಲ್ಲಿ ಲೆಕ್ಕ ಬರೆದಿಡಲು ಅನುಲೂಲವಾಗುವಂತೆ ಜಮಾಖರ್ಚು ತಃಖ್ತೆಯ ಪುಟಗಳು ಕೊನೆಯಲ್ಲಿ ಇರುತ್ತಿದ್ದವು. ಈಗಿನ ಡೈರಿಗಳಲ್ಲಿ ಆ ಪುಟಗಳು ಮಂಗಮಾಯ, ಐ.ಟಿ ಅಧಿಕಾರಿಗಳು ಧಾಳಿ ಮಾಡುತ್ತಾರೆಂಬ ಬಯವೋ ಏನೋ! ಆದರೆ ನಮ್ಮ ಗುರುವರ್ಯರು ಬರೆದಿಟ್ಟಿರುವ ಈ ಮೇಲಿನ ಲೆಕ್ಕ ಯಾವ ಐ.ಟಿ ಕಾಯಿದೆಗೂ ನಿಲುಕದ ಲೆಕ್ಕ ಇದನ್ನು ಆಧ್ಯಾತ್ಮಿಕ ಜೀವನದಲ್ಲಿ ಅಡಿ ಇಡುವ “ಮುಮುಕ್ಷುವಿನ ಜಮಾ-ಖರ್ಚು ತಃಖ್ತೆ” ಎನ್ನಬಹುದು.

ಡೈರಿಯ ಕೊನೆಯ ಜ್ಞಾಪಕ ಪುಟದಲ್ಲಿ (Memorandum) ನಮ್ಮ ಗುರುವರ್ಯರು ಬರೆದಿಟ್ಟಿರುವ ಈ ಕೆಳಗಿನ ಸಾಲು ಎಲ್ಲರೂ ಜೀವನದಲ್ಲಿ ನೆನಪಿಟ್ಟುಕೊಳ್ಳಬಹುದಾದ ಸೂತ್ರಬದ್ಧವಾದ ಹಿತೋಕ್ತಿಯಾಗಿದೆ. “ದೇವಾ! ನಿನ್ನನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕಾಗಿದೆಯೇ ವಿನಾ ಈ ಸಂಸಾರದಲ್ಲಿ ಜ್ಞಾಪಕದಲ್ಲಿಟ್ಟುಕೊಳ್ಳುವ ವಸ್ತು ಯಾವುದೂ ಇಲ್ಲ.!”

ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ಕೃಪೆ: ಬಿಸಿಲು ಬೆಳದಿಂಗಳು -474
ವಿಜಯಕರ್ನಾಟಕ  (30-12-2021).