ಕೃತಜ್ಞತೆ/ಕೃತಘ್ನತೆಗಳಲ್ಲಿ ಇರುವ ಕಾಗುಣಿತ ವ್ಯತ್ಯಾಸ ಅತ್ಯಲ್ಪವೇ?

ಕೃತಜ್ಞತೆ ಮತ್ತು ಕೃತಘ್ನತೆ - ಇವೆರಡು ಶಬ್ದಗಳ ಕಾಗುಣಿತ ಮತ್ತು ಉಚ್ಚಾರಣೆಯಲ್ಲಿ ಇರುವ ವ್ಯತ್ಯಾಸ ಅತ್ಯಲ್ಪ, ಆದರೆ ಇವೆರಡರ ಅರ್ಥದಲ್ಲಿರುವ ವ್ಯತ್ಯಾಸವನ್ನು ಮಾತ್ರ ಅತ್ಯಲ್ಪವೆಂದು ಹೇಳಲು ಖಂಡಿತಾ ಸಾಧ್ಯವಿಲ್ಲ, “ಕೃತಜ್ಞತೆ” ಎಂದರೆ ಪಡೆದ ಉಪಕಾರವನ್ನು ಸದಾ ಸ್ಮರಣೆಯಲ್ಲಿಟ್ಟುಕೊಂಡು ಪ್ರತ್ಯುಪಕಾರ ಮಾಡುವುದು. “ಕೃತಘ್ನತೆ” ಎಂದರೆ ಪಡೆದ ಉಪಕಾರವನ್ನು ಮರೆತು ಉಪಕಾರ ಮಾಡಿದವರ ಬೆನ್ನಿಗೆ ಚೂರಿ ಹಾಕುವ ದ್ರೋಹದ ಕೆಲಸ ಮಾಡುವುದು.
ರಾಜಸ್ತಾನದ ಒಬ್ಬ ವರ್ತಕ ನಮ್ಮ ರಾಜ್ಯದ ಒಂದು ಪಟ್ಟಣಕ್ಕೆ ಬಂದು ವ್ಯಾಪಾರ ವಹಿವಾಟು ಅರಂಭಿಸಿ ಯಶಸ್ವಿಯಾದನು. ತನ್ನ ಊರಿನ ಸೋದರ ಸಂಬಂಧಿಯೊಬ್ಬನನ್ನು ಕರೆದುಕೊಂಡು ಬಂದು ಬಂಡವಾಳ ಕೊಟ್ಟು ಉದ್ದಿಮೆಗೆ ಹಚ್ಚಿದ. ಅವನೂ ಪ್ರವರ್ಧಮಾನಕ್ಕೆ ಬಂದ. ಆಗ ತಾನು ಕೊಟ್ಟ ಹಣವನ್ನು ಹಿಂದಿರುಗಿಸಬೇಕೆಂದು ಆ ಸಂಬಂಧಿಯನ್ನು ಕೇಳಿದ. ಹಣ ಕೊಡದೆ ಸತಾಯಿಸಿದಾಗ ಒತ್ತಾಯ ಮಾಡತೊಡಗಿದ. ಹಣ ಪಡೆದು ವ್ಯವಹಾರದಲ್ಲಿ ಚಿಗುರಿಕೊಂಡಿದ್ದ ಆ ಪಾಖಂಡಿ ಏನು ಮಾಡಿದ ಗೊತ್ತೆ? ತನ್ನನ್ನು ನೆಲೆ ನಿಲ್ಲಿಸಿದವನನ್ನೇ ನಿರ್ದಯವಾಗಿ ಕೊಲೆ ಮಾಡಿದ! ಇದು ವಾಸ್ತವ ಘಟನೆಯಾದರೆ ದುರ್ಗಸಿಂಹನ ಕನ್ನಡದ ಪಂಚತಂತ್ರದಲ್ಲಿ ಬರುವ ಈ ಮುಂದಿನ ಶಿವಭೂತಿಯ ಕಥೆ ಕೃತಘ್ನತೆಗೆ ಜೀವಂತ ರೂಪಕವಾಗಿ ನಿಲ್ಲುತ್ತದೆ:
ಒಂದು ದೊಡ್ಡ ಕಾಡಿನಲ್ಲಿ ಬೇಟೆಗಾರನೊಬ್ಬ ತನ್ನನ್ನು ಅಟ್ಟಿಸಿಕೊಂಡು ಬಂದ ಹುಲಿಯಿಂದ ಪಾರಾಗಲು ಹಾಳು ಬಾವಿಯೊಳಗೆ ಧುಮುಕುತ್ತಾನೆ. ಓಡಿಸಿಕೊಂಡು ಬಂದ ಹುಲಿಯೂ ಸಹ ಅದೇ ಬಾವಿಯೊಳಕ್ಕೆ ಹಾರುತ್ತದೆ. ಬಾಯಾರಿದ ಕಪಿಯೊಂದು ಬಾವಿಯೊಳಗಿಳಿಯಲು ನೇತಾಡುತ್ತಿದ್ದ ಹಾವನ್ನು ಬಳ್ಳಿಯೆಂದು ಭ್ರಮಿಸಿ ಹಿಡಿದುಕೊಂಡು ಸರ್ಪಸಹಿತವಾಗಿ ಬಾವಿಯೊಳಗೆ ಬೀಳುತ್ತದೆ. ಅದೇ ಮಾರ್ಗವಾಗಿ ಹೋಗುತ್ತಿದ್ದ ಶಿವಭೂತಿ ಎಂಬ ಯಾತ್ರಿಕನಿಗೆ ಬಾಯಾರಿಕೆಯಾಗುತ್ತದೆ. ಬಳ್ಳಿಯಿಂದ ಹಗ್ಗವನ್ನು ತಯಾರಿಸಿ ತನ್ನ ಕೈಯಲ್ಲಿದ್ದ ಕಲಶಕ್ಕೆ ಕಟ್ಟಿ ಬಾವಿಯೊಳಗೆ ಇಳಿಬಿಡುತ್ತಾನೆ. ಕಲಶಕ್ಕೆ ನೀರು ತುಂಬಿಸಿ ಭಾರವಾದಂತೆನಿಸಿದರೂ ಮೇಲೆ ಎಳೆದಾಗ ಅದನ್ನು ಹಿಡಿದುಕೊಂದು ಬಂದ ಹುಲಿಯು ತನ್ನನ್ನು ರಕ್ಷಣೆ ಮಾಡಿದ ಶಿವಭೂತಿಗೆ ನಮಸ್ಕರಿಸುತ್ತದೆ. ತಾನು, ಬೇಟೆಗಾರನು, ಕಪಿ ಮತ್ತು ಹಾವುಗಳು ಬಾವಿಗೆ ಬಿದ್ದ ಪರಿಯನ್ನು ತಿಳಿಸುತ್ತದೆ. ಅಲ್ಲದೆ ತಾನಿರುವ ದೊಡ್ಡ ಪರ್ವತದ ತಪ್ಪಲಿನಲ್ಲಿರುವ ಗುಹೆಗೆ ಬಂದರೆ ಅಮೂಲ್ಯವಾದ ರತ್ನಾಭರಣಗಳನ್ನು ನೀಡಿ ಉಪಚರಿಸುವುದಾಗಿ ನಿವೇದಿಸಿಕೊಳ್ಳುತ್ತದೆ. ಬಾವಿಯಲ್ಲಿರುವ ಇನ್ನೂ ಮೂರು ಜೀವಗಳನ್ನು ರಕ್ಷಿಸಿ ತೀರ್ಥಯಾತ್ರೆ ಮುಗಿಸಿ ಹಿಂದಿರುಗಿ ಬರುವಾಗ ಗುಹೆಗೆ ಬರುವುದಾಗಿ ಶಿವಭೂತಿ ಹೇಳುತ್ತಾನೆ. ಹುಲಿಯು “ನೀಚನಾದ ಆ ಮನುಷ್ಯನನ್ನು ಮಾತ್ರ ರಕ್ಷಿಸಬೇಡ” ಎಂದು ಹೇಳಿ ಹೋಗುತ್ತದೆ. ನಂತರ ಕಪಿ ಮತ್ತು ಹಾವುಗಳನ್ನು ರಕ್ಷಿಸುತ್ತಾನೆ. ಕಪಿಯು ಇಲ್ಲೇ ಹತ್ತಿರದಲ್ಲಿರುವ ಬದರಿಕಾಶ್ರಮದ ಉಪವನದಲ್ಲಿ ತಾನಿರುವುದಾಗಿಯೂ ಅಲ್ಲಿಗೆ ಬಂದು ಆತಿಥ್ಯ ಸ್ವೀಕರಿಸಬೇಕೆಂದೂ ಹೇಳಿ ಹೋಗುತ್ತದೆ. ಸರ್ಪವು ಆಪತ್ತು ಬಂದಾಗ ಸ್ಮರಿಸಿದರೆ ಸಾಕು ಧಾವಿಸಿ ಬಂದು ನಿನ್ನ ಸೇವೆ ಮಾಡುವುದಾಗಿ ಹೇಳಿ ಹೋಗುತ್ತದೆ. ಮನುಷ್ಯನನ್ನು ರಕ್ಷಣೆ ಮಾಡಬಾರದು ಎಂದು ಹುಲಿ ಹೇಳಿದಂತೆ ಮಾಡಿದರೆ ಅಮಾನವೀಯವಾಗುತ್ತದೆ. ಬಾವಿಯಲ್ಲಿರುವ ಅವನನ್ನು ರಕ್ಷಿಸುವುದು ನನ್ನ ಧರ್ಮವೆಂದು ಶಿವಭೂತಿಯು ಭಾವಿಸಿ ಬೇಡನನ್ನು ರಕ್ಷಿಸುತ್ತಾನೆ. ಆ ಕಿರಾತನು ತಾನು ಪದ್ಯನಗರದಲ್ಲಿರುವುದಾಗಿಯೂ ಅನುಕೂಲವಾದಾಗ ಅಲ್ಲಿಗೆ ಬಂದು ತನ್ನ ಸೇವೆಯನ್ನು ಸ್ವೀಕರಿಸಬೇಕೆಂದು ಹೇಳಿ ಹೋಗುತ್ತಾನೆ.
ಕೆಲ ಕಾಲದ ನಂತರ ಶಿವಭೂತಿಯು ತೀರ್ಥಯಾತ್ರೆ ಮುಗಿಸಿಕೊಂಡು ಹಿಂದಿರುಗುವಾಗ ಉತ್ತುಂಗ ಶಿಖರದ ತಪ್ಪಲಿನಲ್ಲಿ ಅವನನ್ನು ನೋಡಿದ ಹುಲಿಯು ಗುಹೆಗೆ ಕರೆದೊಯ್ದು ಅಮೂಲ್ಯವಾದ ರತ್ನಾಭರಣಗಳನ್ನು ಸಮರ್ಪಿಸುತ್ತದೆ. ಉಪವನದಲ್ಲಿ ವಿಶ್ರಾಂತಿಗಾಗಿ ಕುಳಿತಾಗ ಕಪಿಯು ಸ್ವಾದಿಷ್ಟವಾದ ಹಣ್ಣುಗಳನ್ನು ನೀಡಿ ಉಪಚರಿಸುತ್ತದೆ. ಕೆಲಕಾಲದ ನಂತರ ಅವನು ಪದ್ಯನಗರಕ್ಕೆ ಬಂದು ಕಿರಾತನನ್ನು ಕಾಣುತ್ತಾನೆ. ಅವನು “ಸ್ವಾಮಿ ನೀವು ಬಂದರೂ ಆತಿಥ್ಯ ಮಾಡಲಾರದಷ್ಟು ಬಡತನ ನನಗಿದೆ” ಎಂದು ದುಃಖಿಸುತ್ತಾನೆ. ಶಿವಭೂತಿಯು ಮರುಗಿ ತನ್ನಲ್ಲಿರುವ ಆಭರಣಗಳನ್ನು ತೋರಿಸಿ ಬೇಡನಿಗೆ ಕೊಟ್ಟು ಸಂತೈಸುತ್ತಾನೆ.
ತಕ್ಷಣ ಆ ಕಿರಾತನು ರಾಜನಲ್ಲಿಗೆ ಹೋಗಿ “ಸ್ವಾಮೀ, ನೀವು ತೊಡುವ ಅಮೂಲ್ಯವಾದ ಆಭರಣಗಳನ್ನು ಬಚ್ಚಿಟ್ಟುಕೊಂಡಿರುವ ಮನುಷ್ಯನೊಬ್ಬನನ್ನು ಹಿಡಿದು ಮನೆಗೆ ಕರೆತಂದಿದ್ದೇನೆ” ಎಂದು ಹೇಳುತ್ತಾನೆ. ರಾಜಭಟರು ಕೂಡಲೇ ಧಾವಿಸಿ ಬಂದು ಶಿವಭೂತಿಯನ್ನು ಹೆಡೆಮುರಿ ಕಟ್ಟಿ ರಾಜನ ಮುಂದೆ ನಿಲ್ಲಿಸುತ್ತಾರೆ. ರಾಜನು ಅವನಲ್ಲಿದ್ದ ಆಭರಣಗಳನ್ನೆಲ್ಲ ವಶಪಡಿಸಿಕೊಂಡು ಸೆರೆಮನೆಗೆ ತಳ್ಳುತ್ತಾನೆ. ಶಿವಭೂತಿಯು ಹುಲಿಯ ಮಾತನ್ನು ಕೇಳದೆ ತಪ್ಪು ಮಾಡಿದೆ ಎಂದು ತನ್ನ ಮೂರ್ಖತನವನ್ನು ಹಳಿದುಕೊಳ್ಳುತ್ತಾ “ಆಪತ್ತು ಬಂದಾಗ ನೆನೆಯಿರಿ” ಎಂದು ಹೇಳಿದ್ದ ಸರ್ಪದ ಮಾತು ನೆನಪಾಗಿ ಸ್ಮರಿಸಿಕೊಳ್ಳುತ್ತಾನೆ. ತಕ್ಷಣವೇ ಹಾವು ಹಾಜರಾಗಿ ಕಿರಾತನ ನೀಚತನವನ್ನು ಕೇಳಿ ಕೋಪಗೊಳ್ಳುತ್ತದೆ. “ನಾನೀಗಲೇ ಹೋಗಿ ರಾಜನ ಹಿರಿಯ ಮಗನನ್ನು ಕಚ್ಚುತ್ತೇನೆ. ಮೃತ್ಯುಶಯ್ಯೆಯಲ್ಲಿರುವ ಅವನನ್ನು ಬದುಕಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ನೀವು ಜಲವನ್ನು ಮಂತ್ರಿಸಿ ಪ್ರೋಕ್ಷಣೆ ಮಾಡಿದರೆ ಮಾತ್ರ ಬದುಕುತ್ತಾನೆ. ಹಾಗೆ ಮಾಡಿರಿ” ಎಂದು ಹೇಳಿ ಹೋಗಿ ಉದ್ಯಾನದಲ್ಲಿ ಆಡುತ್ತಿದ್ದ ರಾಜಕುಮಾರನನ್ನು ಅದು ಕಚ್ಚುತ್ತದೆ. ಯಾರು ಏನೇ ಚಿಕಿತ್ಸೆ ನೀಡಿದರೂ ಉಪಯೋಗವಾಗುವುದಿಲ್ಲ, “ನಾನು ಬದುಕಿಸುತ್ತೇನೆ” ಎಂದು ಹೇಳಿದ ಶಿವಭೂತಿಯು ಸೆರೆಮನೆಯಿಂದ ಬಿಡುಗಡೆ ಹೊಂದಿ ಬಂದು ಜಲವನ್ನು ಅಭಿಮಂತ್ರಿಸಿ ಪ್ರೋಕ್ಷಿಸಿದಾಗ ನಿದ್ದೆಯಿಂದ ಎಚ್ಚರಗೊಂಡವನಂತೆ ರಾಜಕುಮಾರ ಎದ್ದು ಕುಳಿತುಕೊಳ್ಳುತ್ತಾನೆ. ಶಿವಭೂತಿಯಿಂದ ಎಲ್ಲ ವಿದ್ಯಮಾನಗಳನ್ನು ರಾಜನು ಕೇಳಿ ಮರುಕಗೊಂಡು ಅವನಿಗೆ ಕೃತಘ್ನತೆ ತೋರಿದ ಕಿರಾತನನ್ನು “ಯಮಪುರಿಗಟ್ಟಿದ” ಎಂದು ಕಥೆ ಮುಕ್ತಾಯವಾಗುತ್ತದೆ.
ಈ ಕಥೆಯಲ್ಲಿ ನಿರೂಪಿತವಾದಂತೆ ಈ ಕಾಲದಲ್ಲೂ ಸಲೀಸಾಗಿ ಕೃತಘ್ನರಿಗೆ ಅಷ್ಟು ಸುಲಭವಾಗಿ ಶಿಕ್ಷೆಯಾಗಿ ಸುಖಾಂತ್ಯವಾಗುತ್ತದೆ ಎಂದು ಹೇಳಲು ಬರುವುದಿಲ್ಲ, ಏಕೆಂದರೆ ಕೃತಘ್ನರು ಬಲಿತುಕೊಂಡು ತಮ್ಮದೇ ಸಾಮ್ರಾಜ್ಯವನ್ನು ಕಟ್ಟಿಕೊಂಡಿರುತ್ತಾರೆ; ವಾಮಮಾರ್ಗದಿಂದ ಗಳಿಸಿದ ತಮ್ಮ ಹಣದ ಬಲದಿಂದ ಅನೇಕ ಸ್ವಾರ್ಥಿಗಳನ್ನು ಸಾಕಿಕೊಂಡಿರುತ್ತಾರೆ. ಅವರ ಮುಖಾಂತರ ಎಲ್ಲ ರೀತಿಯ ಸಂಚುಗಳನ್ನು ಮಾಡಿಸುತ್ತಾರೆ. ಎರಡು ತಿಂಗಳ ಹಿಂದೆ ಹಳ್ಳಿಯ ಸಮಾರಂಭವೊಂದರಲ್ಲಿ ನಮ್ಮೊಂದಿಗೆ ಭಾಗವಹಿಸಿದ್ದ ಕಥೆಗಳ ಕಣಜರಾದ ಕಾಗಿನೆಲೆಯ ನಿರಂಜನಾನಂದ ಪುರಿ ಶ್ರೀಗಳವರಿಂದ ಕೇಳಿದ ಒಂದು ರೋಚಕ ಕಥೆ ಹೀಗಿದೆ: ಒಂದು ಇಲಿ ಇತ್ತು, ತನ್ನನ್ನು ತಿನ್ನಲು ಅಟ್ಟಿಸಿಕೊಂಡು ಬರುವ ಬೆಕ್ಕುಗಳ ಕಾಟವನ್ನು ತಾಳಲಾರದೆ ಋಷಿಯ ಹತ್ತಿರ ಹೋಗಿ ನಮಸ್ಕರಿಸಿ “ನನ್ನನ್ನು ಬೆಕ್ಕನ್ನಾಗಿ ಮಾಡಿ” ಎಂದು ಬೇಡಿಕೊಂಡಿತು. ಕಮಂಡಲದಿಂದ ನೀರನ್ನು ಅಭಿಮಂತ್ರಿಸಿ ಋಷಿಯು ಇಲಿಯನ್ನು ಬೆಕ್ಕನ್ನಾಗಿ ಮಾಡಿದ. ಮುಂದೆ ಬೆಕ್ಕಿನ ಕಾಟ ತಪ್ಪಿತು. ಬೆಕ್ಕಾಗಿದ್ದ ಇಲಿಯನ್ನು ನಾಯಿ ಅಟ್ಟಿಸಿಕೊಂಡು ಬರುತ್ತಿತ್ತು. ಪುನಃ ಅದು ಋಷಿಯ ಹತ್ತಿರ ಬಂದು ತನ್ನನ್ನು ನಾಯಿಯನ್ನಾಗಿ ಮಾಡಲು ಬೇಡಿಕೊಂಡು ನಾಯಿಯಾಗಿ ಪರಿವರ್ತನೆಗೊಂಡಿತು. ನಾಯಿಯ ಉಪಟಳವೇನೋ ತಪ್ಪಿತು. ಆದರೆ ಚಿರತೆ ಅಟ್ಟಿಸಿಕೊಂಡು ಬರಲಾರಂಭಿಸಿತು. ಯಥಾಪ್ರಕಾರ ನಾಯಿಯ ರೂಪದಲ್ಲಿದ್ದ ಇಲಿಯು ಋಷಿಯ ಹತ್ತಿರ ಬಂದು “ನನ್ನನ್ನು ಚಿರತೆಯನ್ನಾಗಿ ಮಾಡಿ, ಕಾಪಾಡಿ!” ಎಂದು ಬೇಡಿಕೊಂಡಿತು. ಋಷಿಯು ನಾಯಿ ರೂಪಿ ಇಲಿಯನ್ನು ಚಿರತೆಯನ್ನಾಗಿ ಮಾಡಿದ. ಕೆಲ ದಿನಗಳ ನಂತರ ದಷ್ಟಪುಷ್ಟವಾಗಿ ಬೆಳೆದ ಆ ಚಿರತೆಯು ಋಷಿಯ ಹತ್ತಿರ ಬಂದಿತು. ಅದು ಗರ್ಜಿಸುತ್ತಾ ಬರುವುದನ್ನು ನೋಡಿ ಈ ಬಾರಿ ತನ್ನನ್ನು ಹುಲಿಯನ್ನಾಗಿ ಮಾಡುವಂತೆ ಕೇಳಲು ಬಂದಿದೆ ಎಂದು ಭಾವಿಸದೆ ನನ್ನನ್ನೇ ತಿಂದು ತೇಗಲು ಬಂದಿದೆ ಎಂದು ಋಷಿಯು ಎಚ್ಚರಗೊಂಡು ಕಮಂಡಲದ ನೀರನ್ನು ಅಭಿಮಂತ್ರಿಸಿ ಪ್ರೋಕ್ಷಣೆ ಮಾಡಿದ. ಕಣ್ತೆರೆಯುವಷ್ಟರಲ್ಲಿ ಚಿರತೆಯು ಇಲಿಯಾಗಿ ಪರಿವರ್ತನೆಯಾಗಿ ಬಿಲವನ್ನು ಸೇರಿಕೊಂಡಿತು!
ಕೃತಘ್ನರು ನಾನಾ ರೀತಿಯ ಉಪಕಾರವನ್ನು ಪಡೆದರೂ ಕೊನೆಗೆ ಬೆನ್ನಿಗೆ ಚೂರಿ ಹಾಕಲು ಹೊಂಚು ಹಾಕುತ್ತಿರುತ್ತಾರೆ. ಅವರ ಮನಸ್ಸೆಂಬುದು ಕಸಾಯಿಖಾನೆ. ಅಂತಹವರಿಗೆ ಉಪಕಾರ ಮಾಡಲು ಹೋದರೆ ಅಪಾಯವನ್ನು ಎದುರು ಹಾಕಿಕೊಂಡಂತೆಯೇ ಸರಿ. ಆದರೆ ನಾವು ನಂಬಿದ ವ್ಯಕ್ತಿಯು ಕೃತಜ್ಞನೇ ಅಥವಾ ಕೃತಘ್ನನೇ ಎಂಬುದನ್ನು ಮನವರಿಕೆ ಮಾಡಿಕೊಳ್ಳುವಷ್ಟರಲ್ಲಿ ಕಾಲ ಮಿಂಚಿಹೋಗಿರುತ್ತದೆ. ಇದಕ್ಕೆ ರಾಜಮನೆತನಗಳ ಇತಿಹಾಸವೇ ಸಾಕ್ಷಿ, ಎಲ್ಲರನ್ನೂ ಅನುಮಾನಿಸುತ್ತಾ ಹೋದರೆ ನಿಜವಾಗಿಯೂ ಉಪಕಾರಕ್ಕೆ ಅರ್ಹನಾದ ವ್ಯಕ್ತಿಗೆ ಅನ್ಯಾಯವಾಗುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇನು? ಉಪಕಾರ ಪಡೆಯುವ ವ್ಯಕ್ತಿಯು ಕೃತಘ್ನನೆಂಬ ಸುಳಿವು ಸಿಕ್ಕರೆ ಕಥೆಯಲ್ಲಿನ ಋಷಿಯ ಹಾಗೆ ಅವನನ್ನು ನಿಗ್ರಹಿಸುವ ಶಕ್ತಿ ಇರಬೇಕು. ಇಲಿಯನ್ನು ಹಂತಹಂತವಾಗಿ ಚಿರತೆಯನ್ನಾಗಿ ಮಾಡಿ ಕೊನೆಗೆ ಚಿರತೆಯೇ ಯಮರೂಪಿಯಾಗಿ ನಿಂತಾಗ ಕ್ಷಣಮಾತ್ರದಲ್ಲಿ ಅದನ್ನು ಪೂರ್ವಜನ್ಮದ ಇಲಿಯನ್ನಾಗಿ ಮಾಡುವ ಶಕ್ತಿ ನಿಮಗಿರಬೇಕು! ಆ ಮಿತಿಯಲ್ಲಿಯೇ ನೀವು ಉಪಕಾರಿಯಾಗಬೇಕು. ಇಲ್ಲದಿದ್ದರೆ ಉಪಕಾರಸ್ಮರಣೆಯಿಲ್ಲದ ನಯವಂಚಕ ಕೃತಘ್ನ ಜನರ ಮಸೆದ ಕೂರಲಗಿಗೆ ನೀವು ಬಲಿಯಾಗಬೇಕಾಗುತ್ತದೆ.
ಸ್ವಾರ್ಥ ಮತ್ತು ಕೃತಘ್ನತೆಯಲ್ಲಿ ಮನುಷ್ಯನನ್ನು ಮೀರಿಸುವ ಕ್ರೂರ ಪ್ರಾಣಿ ಮತ್ತೊಂದಿಲ್ಲ. ಬ್ರೂಟಸ್ ವಿದ್ರೋಹಿಗಳ ಜತೆ ಕೈಜೋಡಿಸಿ ಜೂಲಿಯಸ್ ಸೀಜರ್ನನ್ನು ಇರಿಯುತ್ತಾನೆ. ಜೀವದ ಗೆಳೆಯನೆಂದು ಭಾವಿಸಿದ್ದ ಬ್ರೂಟಸ್ ಮಾರಣಾಂತಿಕವಾಗಿ ಇರಿದದ್ದು ದೊರೆಗೆ ಬಹಳ ನೋವುಂಟು ಮಾಡುತ್ತದೆ. ಕತ್ತಿಯ ಇರಿತದ ನೋವಿಗಿಂತ ಮಿತ್ರದ್ರೋಹದ ನೋವಿನಿಂದ ನರಳಿ “You too Brutus!” ಎಂಬ ಮೂರೇ ಶಬ್ದಗಳನ್ನಾಡಿ ಕೊನೆಯುಸಿರು ಎಳೆಯುತ್ತಾನೆ.
ಶೇಕ್ಸ್ಪಿಯರನ ಇನ್ನೊಂದು ದುರಂತ ನಾಟಕ “ಮ್ಯಾಕ್ಬೆತ್". ಅಲ್ಲಿಯೂ ಲೇಡಿ ಮ್ಯಾಕ್ಬೆತ್ ಔತಣ ಕೊಡುವ ನೆಪದಲ್ಲಿ ಆಹ್ವಾನಿಸಿ ಸ್ಮಾಟ್ಲ್ಯಾಂಡಿನ ಡಂಕನ್ ದೊರೆಯನ್ನು ಮಾನವೀಯತೆಯ ಲವಲೇಶವೂ ಇಲ್ಲದೆ ಇರಿದು ಕೊಲ್ಲುತ್ತಾಳೆ. ತನ್ನ ರಕ್ತಸಿಕ್ತ ಹಸ್ತಗಳನ್ನು ನೋಡಿಕೊಳ್ಳುತ್ತಾ “All the perfumes of Arabia will not sweeten this little hand” (ನನ್ನ ಕೈಗಳಿಗೆ ಮೆತ್ತಿದ ಈ ರಕ್ತದ ವಾಸನೆ ಇಡೀ ಅರೇಬಿಯಾದ ಸುಗಂಧದ್ರವ್ಯಗಳನ್ನೆಲ್ಲಾ ಹಾಕಿ ತೊಳೆದರೂ ಹೋಗುವುದಿಲ್ಲ!)
ಕೃತಘ್ನತೆಯೆಂಬುದು ದೇಶಾತೀತ, ಕಾಲಾತೀತ, ನಮ್ಮ ದೇಶಕ್ಕೆ ಹೊಂದಿಕೊಳ್ಳುವಂತೆ ಕೃತಘ್ನರ ಪಾಪವನ್ನು “ಯಾವ ಗಂಗೆಯ ಪುಣ್ಯ ಜಲವೂ ತೊಳೆಯಲಾರದು!” ಎಂದು ಬೇಕಾದರೆ ಹೇಳಬಹುದು! ನಮ್ಮ ದೇಶದಲ್ಲಿಯೇ ಮೊಟ್ಟ ಮೊದಲಿಗೆ ಬ್ರಿಟಿಷರನ್ನು ಸೋಲಿಸಿದ ರಾಣಿ ಚೆನ್ನಮ್ಮ ಮೋಸಹೋಗಿದ್ದು ಯಾರಿಂದ? ಮೈಸೂರು ಹುಲಿ ಟಿಪ್ಪೂ ಸುಲ್ತಾನನು ಮೋಸಹೋಗಿದ್ದು ಯಾರಿಂದ?
“ಅಧಿಕಾರವಿದ್ದಲ್ಲಿ ಇಂದ್ರ, ಚಂದ್ರ ಎಂದು ಹೊಗಳಿಕೊಂಡು ಸುತ್ತು ಹಾಕುವವರು ಬಹಳ ಜನ. ಇವರೆಲ್ಲರೂ ತಮಗೆ ಸದಾ ಕಾಲದಲ್ಲೂ ಗಿಟ್ಟುತ್ತಲೇ ಇರಬೇಕೆನ್ನುವವರು. ತಮಗೇನಾದರೂ ಸ್ವಲ್ಪ ಕೊರತೆಯಾದರೆ ಭೂಮಿ, ಆಕಾಶವನ್ನೆಲ್ಲಾ ಒಂದು ಮಾಡಿ ಕೂಗಾಡುತ್ತಾರೆ. ನಮ್ಮ ಶತ್ರುಗಳು ನಮ್ಮ ಸುತ್ತಲೂ ಆಪ್ತರೂ ಸ್ನೇಹಿತರೂ ಎನಿಸಿಕೊಂಡಿರುತ್ತಾರೆ. ಅಡವಿಯಲ್ಲಿರುವ ಹುಲಿಯು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ಪಕ್ಕದಲ್ಲಿರುವ ಮಾನವನು ಸ್ನೇಹಿತನ ವೇಷದಲ್ಲಿದ್ದು ನಮ್ಮ ಪ್ರಾಣವನ್ನೇ ತಿನ್ನುತ್ತಾನೆ.” ಎಂದು ನಮ್ಮ ಪರಮಾರಾಧ್ಯ ಗುರುವರ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ತಮ್ಮ ಆತ್ಮಕಥನದಲ್ಲಿ ವಿಷಾದಿಸಿದ್ದಾರೆ. ಅವರ ಈ ಅನುಭವವು ನಾಲ್ಕು ದಶಕಗಳಿಗೂ ಹೆಚ್ಚಿನ ನಮ್ಮ ಸಾರ್ವಜನಿಕ ಜೀವನದಲ್ಲಿ ನಮ್ಮ ಸ್ವಾನುಭವಕ್ಕೂ ಬಂದಿದೆ.
ಕೃತಘ್ನರದು ರಕ್ತಬೀಜಾಸುರನ ವಂಶ, ಒಬ್ಬ ನಾಶವಾದರೆ ನೂರು ಜನ ಕೃತಘ್ನರು ಹುಟ್ಟಿಕೊಳ್ಳುತ್ತಾರೆ. ನಡೆಯುತ್ತಲೇ ಇರುತ್ತದೆ “ಇರುಳ ವಿರುದ್ದ ಬೆಳಕಿನ ಯುದ್ಧ!”. ಏನೇ ಆದರೂ ಹಣತೆಯನ್ನು ಹಚ್ಚುತ್ತಲೇ ಇರಬೇಕು; ಕಾರ್ಗತ್ತಲ ಅಂಚಿನಲ್ಲಿ ಮಿಣುಕು ದೀಪವಾದರೂ ಸರಿಯೇ ಸದಾ ಉರಿಯುತ್ತಲೇ ಇರಬೇಕು! ಅದು ಮುಂದೆ ಜಾಜ್ವಲ್ಯಮಾನವಾಗಿ ಬೆಳಗುವುದರಲ್ಲಿ ಸಂಶಯವಿಲ್ಲ!
ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆ
ಕೃಪೆ: ವಿಜಯ ಕರ್ನಾಟಕ 13.1.2022