ಅಲ್ಲಿರುವುದು ನಮ್ಮ ಮನೆ; ಇಲ್ಲಿರುವುದು ಸುಮ್ಮನೆ!

"ಅಲ್ಲಿದೆ ನಮ್ಮನೆ ಇಲ್ಲಿಗೆ ಬಂದೆ ಸುಮ್ಮನೆ, ಕದ ಬಾಗಿಲಿರಿಸಿದ ಕಳ್ಳಮನೆ, ಮುದದಿಂದ ಲೋಲಾಡೊ ಸುಳ್ಳು ಮನೆ!” ಎಂದು ಲೌಕಿಕ ಜೀವನದ ನಶ್ವರತೆಯನ್ನು, ಪಾರಮಾರ್ಥಿಕ ಜೀವನದ ಆತ್ಯಂತಿಕ ಸತ್ಯವನ್ನು ಬಣ್ಣಿಸುತ್ತಾರೆ ಪುರಂದರ ದಾಸರು. ಆದರೆ ಲೌಕಿಕ ಜೀವನದಲ್ಲಿ ಎಲ್ಲರಿಗೂ ತಾವು ಜನ್ಮವೆತ್ತಿದ ಸ್ಥಳದ ಸೆಳೆತ, ತಮ್ಮ ಕುಟುಂಬದವರ ಕರುಳಬಳ್ಳಿಯ ಮೋಹ ಇದ್ದೇ ಇರುತ್ತದೆ. “ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ, ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ, ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ, ಇದಾವಾವ ಪರಿಯಲ್ಲಿ ಕಾಡಿತ್ತು ಮಾಯೆ, ಈ ಮಾಯೆಯ ಕಳೆವೊಡೆ ಎನ್ನಳವಲ್ಲ, ನೀವೇ ಬಲ್ಲಿರಿ ಕೂಡಲಸಂಗಮ ದೇವಾ!” ಎಂದು ಸಾಂಸಾರಿಕ ಜೀವನದಲ್ಲಿರುವ ವಿಭಿನ್ನ ಸಂಬಂಧಗಳ ಸೆಳೆತವನ್ನು ಬಸವಣ್ಣನವರು ಮನೋಜ್ಞವಾಗಿ ವರ್ಣಿಸುತ್ತಾರೆ. ಅಧ್ಯಾತ್ಮಿಕ ಸಾಧನೆಯ ಪಥದಲ್ಲಿ ಅಡಿ ಇಡುವವರಿಗೆ “ಬಿಟ್ಟೆನೆಂದಡೆ ಬಿಡದೀ ಮಾಯೆ, ಬಿಡದಿದ್ದಡೆ ಬೆಂಬತ್ತಿತ್ತು ಮಾಯೆ!” ಎಂದು ಎಚ್ಚರಿಸುತ್ತಾಳೆ ವೀರವಿರಾಗಿಣಿ ಅಕ್ಕಮಹಾದೇವಿ.
ಎಲ್ಲರಿಗೂ ಬಾಲ್ಯಜೀವನಲ್ಲಿ ಬೆಳೆದ ಪರಿಸರ, ಹೊಲ ಗದ್ದೆ, ಹಳ್ಳ ಕೊಳ, ಕೆರೆ ಕಟ್ಟೆ, ನದಿ, ಗಿಡ ಮರ ಹೂ ಬಳಿ, ಹೆತ್ತವರ ಪ್ರೀತಿ ವಾತ್ಸಲ್ಯಗಳು, ಆತ್ಮೀಯ ಒಡನಾಡಿಗಳು, ಅವರೊಂದಿಗಿನ ತುಂಟಾಟಗಳು, ಆಟೋಟಗಳು ಮನಸ್ಸಿನ ಮೂಲೆಯೊಂದರಲ್ಲಿ ಅಚ್ಚಳಿಯದಂತೆ ಅಡಗಿ ಕುಳಿತಿರುತ್ತವೆ. ಅವುಗಳೆಲ್ಲವನ್ನೂ ಯಥಾವತ್ತಾಗಿ ದಾಖಲಿಸಿ ಇಡಬೇಕೆಂದರೆ ಈಗ ಗಣಕಯಂತ್ರದಲ್ಲಿ ಲಭ್ಯವಿರುವ ಗರಿಷ್ಠ ಮೂರು ಟೆರಾಬೈಟ್ಗಳ ಹಾರ್ಡ್ ಡಿಸ್ಕ್ ಸಾಕಾಗುವುದಿಲ್ಲ. ಅಂತಹ ನೂರಾರು ಹಾರ್ಡ್ ಡಿಸ್ಕ್ ಗಳು ಬೇಕಾಗುತ್ತವೆ. ಕೆಲವನ್ನು ಪ್ರಜ್ಞಾಪೂರ್ವಕವಾಗಿ ಮರೆಯಲು ಪ್ರಯತ್ನಿಸಿದರೂ ಪೂರ್ಣವಾಗಿ Delete ಆಗಿರುವುದಿಲ್ಲ. ಅವು ಮೆದುಳೆಂಬ Harddiskನ ಯಾವುದೋ ಮೂಲೆಯ Recycle Bin ನಲ್ಲಿ ಅಡಗಿ ಕುಳಿತಿರುತ್ತವೆ. ಯಾವುದೋ ಸಂದರ್ಭದಲ್ಲಿ ನೆನಪಾಗಿ ಗೂಗಲ್ ನಲ್ಲಿ ಸರ್ಚ್ ಮಾಡಿದಾಗ ಸಿಗುವುದಕ್ಕಿಂತಲೂ ಮಿಂಚಿನ ವೇಗದಲ್ಲಿ ಮನದ ಮುಂದೆ ಸುಳಿದಾಡುತ್ತವೆ. “ಆರಂಕುಶಮಿಟ್ರೊಡಂ ನೆನೆವುದೆನ್ನ ಮನಂ ಬನವಾಸಿ ದೇಸಮಂ!” ಎಂದು ಭಾವತುಂಬಿ ಮಹಾಕವಿ ಪಂಪ ಉದ್ಗರಿಸಿದಂತೆ!
1960 ರಲ್ಲಿ ಶಿವಮೊಗ್ಗದ ಸರಕಾರಿ ಪ್ರೌಢಶಾಲೆಗೆ ಸೇರುವಾಗ ಯಾವ ಐಚ್ಚಿಕ ವಿಷಯಗಳನ್ನು ತೆಗೆದುಕೊಳ್ಳಬೇಕೆಂಬ ಪರಿಜ್ಞಾನ ಗ್ರಾಮೀಣ ಪ್ರದೇಶದಿಂದ ಬಂದ ನಮಗೆ ಇರಲಿಲ್ಲ. ಈಗಿನ ಪ್ರೌಢಶಾಲೆಯ ಮಕ್ಕಳಂತೆ ಎಲ್ಲರೂ ಸಮಾನವಾಗಿ ಓದುವ ಪಠ್ಯಕ್ರಮ ಆಗ ಇರಲಿಲ್ಲ. ಈಗ ಪಿ.ಯು.ಸಿ ಯಲ್ಲಿ ಆಯ್ಕೆ ಮಾಡಿಕೊಳ್ಳುವಂತೆ ಆಗ ಪ್ರೌಢಶಾಲೆಯ 8 ನೆಯ ತರಗತಿಯಲ್ಲಿಯೇ Arts ಅಥವಾ Science ವಿಷಯಗಳನ್ನು ಐಚ್ಛಿಕವಾಗಿ ಆಯ್ಕೆ ಮಾಡಿಕೊಳ್ಳಬೇಕಾಗಿತ್ತು. ಅದರಲ್ಲಿಯೂ ಸೈನ್ಸ್ ವಿಷಯದಲ್ಲಿ ಪಿ.ಸಿ.ಎಂ ಅಥವಾ ಪಿ.ಸಿ.ಬಿ ಎಂಬ ಐಚ್ಛಿಕ ವಿಷಯಗಳಿದ್ದವು. ಅಷ್ಟಾಗಿ ವಿದ್ಯಾವಂತರಲ್ಲದಿದ್ದರೂ ಹಿರಿದಾದ ಜೀವನಾನುಭವವುಳ್ಳವರಾಗಿದ್ದ ನಮ್ಮ ಪೂರ್ವಾಶ್ರಮದ ತಂದೆ ಈಶ್ವರಯ್ಯನವರು ತಮ್ಮ ವ್ಯವಹಾರದಲ್ಲಿ ನಿಕಟಸಂಪರ್ಕವಿದ್ದ ಶಿವಮೊಗ್ಗದ ದೊರೆಸ್ವಾಮಿ ಅಯ್ಯಂಗಾರ್ ರವರ ಅಂಗಡಿಗೆ ನಮ್ಮನ್ನು ಕರೆದುಕೊಂಡು ಹೋದರು. ಅವರ ಮಗ ಮೋಹನ್ ಭಾರದ್ವಾಜ್ ಅಂಗಡಿಯಲ್ಲಿ ಕುಳಿತಿದ್ದರು. ಅವರ ಹಣೆಯ ಮಧ್ಯದಲ್ಲಿ ಹುಬ್ಬುಗಳ ನಡುವೆ ಉದ್ದನೆಯ ಹಾಗೂ ತೆಳುವಾದ ಕೆಂಪು ಬಣ್ಣದ ನಾಮದ ಗೆರೆ ರಾರಾಜಿಸುತ್ತಿತ್ತು. “ನನ್ನ ಮಗನಿಗೆ ಏನನ್ನು ಓದಲು ಹೇಳಬೇಕು?” ಎಂದು ಸಲಹೆ ಕೇಳಿದರು. “The Hindu” ಆಂಗ್ಲ ಪತ್ರಿಕೆಯನ್ನು ಓದುತ್ತಿದ್ದ ಅವರು ನನ್ನತ್ತ ತಿರುಗಿ “ನಮ್ಮ ಅಂಗಡಿಯ ಬೋರ್ಡ್ ಓದಿದೀಯಾ? ಅದನ್ನು ತೆಗೆದುಕೊ” ಎಂದು ಹೇಳಿದರು. ಓಡಾಡಲು ಅವರ ಅಂಗಡಿಯಿಂದಲೇ Atlas ಕಂಪನಿಯ ಸೈಕಲ್ಲನ್ನು ತಂದೆಯವರು ಕೊಡಿಸಿದ್ದರಿಂದ ಅವರ ಅಂಗಡಿಯ ಹೆಸರು “The Popular Cycle and Motor Co” ಎಂದು ನಮಗೆ ಚೆನ್ನಾಗಿ ನೆನಪಿತ್ತು. ಒಗಟಿನೋಪಾದಿಯಲ್ಲಿದ್ದ ಅವರ ಪ್ರಶ್ನೆಯನ್ನು ಕುರಿತು ಕ್ಷಣಕಾಲ ಚಿಂತಿಸಿ ಅವರ ಅಂಗಡಿಯ ಹೆಸರಿನ ಒಂದೊಂದೇ ಪದದ ಮೊದಲನೇ ಅಕ್ಷರವನ್ನು ಗಮನದಲ್ಲಿರಿಸಿಕೊಂಡು “ನೀವು PCM = Physics, Chemistry, Mathematics ತೆಗೆದುಕೊಳ್ಳಲು ಸಲಹೆ ಮಾಡುತ್ತಿದ್ದೀರಿ” ಎಂದು ಹೇಳಿದಾಗ ಭಾರದ್ವಾಜ್ ನಕ್ಕು “ನಿಮ್ಮ ಹುಡುಗ ತುಂಬಾ ಜಾಣನಿದ್ದಾನೆ” ಎಂದು ಮೆಚ್ಚುಗೆಯ ಮಾತನ್ನಾಡಿದರು. ಅವರ ಸಲಹೆಯಂತೆಯೇ PCM ಆಯ್ಕೆ ಮಾಡಿಕೊಂಡು ಓದಲು ಆರಂಭಿಸಿದ ನಮಗೆ ಭಾರದ್ವಾಜ್ ಓದುತ್ತಿದ್ದ “The Hindu” ಇಂಗ್ಲೀಷ್ ದಿನಪತ್ರಿಕೆಯ ಹಾಳೆಗಳೇ ಅಂದು ನಮ್ಮ ಪಠ್ಯಪುಸ್ತಕಗಳನ್ನು ಹಾಳಾಗದಂತೆ ಜೋಪಾನವಾಗಿ ಇಟ್ಟುಕೊಳ್ಳಲು ರಕ್ಷಾಕವಚಗಳಾಗಿ ಬಳಕೆಯಾಗಿದ್ದವು. ಅವರ ಮನೆಗೆ ಹೋದಾಗಲೆಲ್ಲ ಸದಾ ಕೆಂಪು ಸೀರೆಯನ್ನು ಉಡುತ್ತಿದ್ದ ಅಜ್ಜಿ ಕುಮುದಮ್ಮ ಅಕ್ಕರೆಯಿಂದ ಘಮ ಘಮಿಸುವ ಬಿಸಿ ಬಿಸಿ ಕಾಫಿಯನ್ನು ತಂದುಕೊಡುತ್ತಿದ್ದರು.
ಭಾರದ್ವಾಜ್ ಅವರ ಕಿರಿಯ ಮಗ ಶ್ರೀನಿವಾಸ್ ನಮಗೆ ಸಂಗೀತದಲ್ಲಿ ತುಂಬಾ ಆಸಕ್ತಿ ಇದೆಯೆಂದು ತಿಳಿದು ಇತ್ತೀಚೆಗೆ ಒಂದು ಭಾವಗೀತೆಯ ವೀಡಿಯೋ ಕಳುಹಿಸಿಕೊಟ್ಟಿದ್ದಾರೆ. ಗಾಯಕಿ ದಿವ್ಯಾ ಗಿರಿಧರ್ ಸ್ವತಃ ರಚಿಸಿ ಸುಶ್ರಾವ್ಯವಾಗಿ ಹಾಡಿದ ಆ ಭಾವಗೀತೆಯ ಆಯ್ದ ಸಾಲುಗಳು ಹೀಗಿವೆ:
ಮಲೆನಾಡಿನ ಮಡಿಲೊಳಗಿರುವ ಸಾಗರವೆಂಬುದು ನನ್ನೂರು
ಎಷ್ಟೇ ಊರನು ಸುತ್ತಿ ಬಂದರೂ ನನ್ನಯ ಊರಿಗೆ ಸಮವೇನು?
ಸಾಗರವೆಂದರೆ ನನ್ನೂರು, ನನ್ನಯ ಹೆಮ್ಮೆಯ ತವರೂರು!
ಶಿವಪ್ಪನಾಯಕ ಚೆನ್ನಮ್ಮಾಜಿಯ ಹೆಮ್ಮೆಯ ಕೆಳದಿಯ ಸಂಸ್ಥಾನ
ಅಘೋರೇಶ್ವರನ ಇಕ್ಕೇರಿಯದು ಶಿಲ್ಪಕಲೆಯ ಅದ್ಭುತ ತಾಣ!
ಜೋಗದಿ ಧುಮುಕುವ ತಾಯಿ ಶರಾವತಿ |
ಕರುನಾಡಿಗೆ ಬೆಳಕನ್ನು ನೀಡಿಹಳು!
ಕೃಷಿಕರ ಪಾಲಿಗೆ ಸ್ವರ್ಗವಿದು
ತೆಂಗು ಕಂಗಿನ ತಾಯಿನಾಡು, ಗಂಧದ ಕಲೆಯ ನೆಲೆವೀಡು!
ಯಾವುದೇ ಪದ್ಯವನ್ನು ಓದುವಾಗ ಉಂಟಾಗುವ ಆನಂದಕ್ಕಿಂತ ಅದನ್ನು ಸುಶ್ರಾವ್ಯವಾಗಿ ಹಾಡುವಾಗ ಆಗುವ ಆನಂದವೇ ಬೇರೆ. ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಈ ಕನ್ನಡದ ಭಾವಗೀತೆಯನ್ನು ಕೇಳಿದಾಗ ನಮಗೆ ತಟ್ಟನೆ ನೆನಪಾಗಿದ್ದು 45 ವರ್ಷಗಳ ಹಿಂದೆ (1977-79) ವಿಯೆನ್ನಾ ವಿಶ್ವವಿದ್ಯಾನಿಲಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಗ ಕೇಳಿದ್ದ ಜರ್ಮನ್ ಜನಪದ ಗೀತೆ (Volkslied), ಆಸ್ಟ್ರಿಯಾ ದೇಶದ ರಾಜಧಾನಿ ವಿಯೆನ್ಮಾ, ಈ ದೇಶದ ಪಶ್ಚಿಮ ಭಾಗದಲ್ಲಿ ಅಂದರೆ ಜರ್ಮನಿಯ ಗಡಿರೇಖೆಗೆ ಹತ್ತಿರವಿರುವ South Tirol ಪ್ರದೇಶದಲ್ಲಿ ಪ್ರಸಿದ್ದವಾದ ಜನಪದ ಗೀತೆ ಇದೆ. ಇದನ್ನು ಅಲ್ಲಿಯ ಜನರು ಎಷ್ಟು ಖುಷಿಯಿಂದ ರಾಗಬದ್ಧವಾಗಿ ಹಾಡುತ್ತಾರೆಂದರೆ ಅದರ ಆಯ್ದ ಕೆಲವು ಸಾಲುಗಳು ಹೀಗಿವೆ:
Wohl ist die Welt so groß und weit
Und voller Sonnenschein,
Das allerschönste Stück davon
Ist doch die Heimat mein!
(ಹೆಚ್ಚಿನ ಭಾವಾನುವಾದ)
ವಿಶಾಲವಾದೀ ವಿಶ್ವದಲಿ
ಬೃಹದಾಕಾರದ ಭೂಮಿಯಲಿ
ಸೂರ್ಯನ ಕಿರಣದ ಬೆಳಕಿನಲಿ
ಕಾಣುವ ಸುಂದರ ವಸ್ತುಗಳೆಲ್ಲಾ
ಇರುವುವು ನನ್ನಯ ನಾಡಿನಲಿ!
ಮುಗಿಲ ಮುಟ್ಟುವ ಆಲ್ಪ್ಸ್ ಪರ್ವತ ಶ್ರೇಣಿ
ಹರಡಿದೆ ನನ್ನೀ ಸುಂದರ ನಾಡು
ಹೆಮ್ಮೆಯ ಗುಡ್ಡಬೆಟ್ಟಗಳ ತಪ್ಪಲಲಿ
ಘಮ ಘಮಿಸುವ ಹೂಗಳು ಸಾಸಿರ ಸುಂದರ
ವಸಂತಕಾಲದಿ ಕಣಿವೆಗಳುದಕ್ಕೂ
ಅಂಕುರಿಸುವ ಬಗೆ ಬಗೆ ಮೊಗ್ಗುಗಳು
ಗ್ರೀಷ್ಮಕಾಲದಿ ಕರಗುವ ಮಂಜು
ಕೂಗಿ ಕರೆಯುತಿದೆ ನನ್ನಯ ನಾಡು
ನಿಲ್ಲಲಾರೆ, ಅರೆ ಕ್ಷಣವೂ ಇಲ್ಲಿ
ಇಗೋ ಹೊರಟೆ ಸಂತಸದಿ ನನ್ನೂರಿಗೆ!
ಜರ್ಮನ್ ಭಾಷೆಯಲ್ಲಿರುವ ಈ ಜನಪದ ಗೀತೆಯನ್ನು ಕನ್ನಡದ ಭಾವಗೀತೆಗೆ ತುಲನೆ ಮಾಡಿ ನೋಡಿದಾಗ ಎಷ್ಟೊಂದು ಹೋಲಿಕೆ ಇದೆ! ಭಾಷೆಗಳು ಬೇರೆ ಬೇರೆಯಾದರೂ ಇವೆರಡರಲ್ಲಿರುವ ಭಾವ ಒಂದೇ. “ಎಷ್ಟೇ ಊರನು ಸುತ್ತಿ ಬಂದರೂ ನನ್ನಯ ಊರಿಗೆ ಸಮವೇನು?” ಎಂದು ಸಾಗರದ ಗಾಯಕಿಯು ಭಾವುಕಳಾಗಿ ಎಸೆದ ಸವಾಲಿಗೆ “ಈ ಸೃಷ್ಟಿಯ ಎಲ್ಲಾ ಸುಂದರ ವಸ್ತುಗಳು ಇರುವುವು ನನ್ನಯ ಊರಿನಲಿ” ಎಂದು ದೂರದ ಯೂರೋಪಿನ South Tirol ಕೃಷಿಕನು ಎದೆ ತಟ್ಟಿ ಉತ್ತರ ಕೊಟ್ಟಂತಿದೆ. ಹೃದಯದ ಭಾವನೆಗಳು ದೇಶಾತೀತ, ಭಾಷಾತೀತ, ಕಾಲಾತೀತ ಎಂಬುದನ್ನು ಇಲ್ಲಿ ಮನಗಾಣಬಹುದು.
ಆತ್ಮೀಯ IAS ಅಧಿಕಾರಿಯೊಬ್ಬರು ಉನ್ನತ ಸ್ಥಾನದಲ್ಲಿರುವ ಅವರ ಗೆಳೆಯರೊಬ್ಬರನ್ನು ನಮ್ಮ ಹತ್ತಿರ ಕರೆದುಕೊಂಡು ಬಂದಿದ್ದರು. ಆ ಗಣ್ಯವ್ಯಕ್ತಿಗಳು ನಮಗೆ ನಮಸ್ಕಾರ ಮಾಡಿ ನಮ್ಮ ಪದತಲದಲ್ಲಿ ಕುಳಿತುಕೊಂಡರು. ಎಷ್ಟೇ ಒತ್ತಾಯಿಸಿದರೂ ಕುರ್ಚಿಯ ಮೇಲೆ ಕುಳಿತುಕೊಳ್ಳಲಿಲ್ಲ. “ಉಪನಿಷತ್” (ಉಪ+ನಿ+ಸದ್) ಅಂದರೆ ಗುರುವಿನ ಪದತಲದಲ್ಲಿ ಶ್ರದ್ಧಾಭಕ್ತಿಯಿಂದ ಕುಳಿತುಕೊಳ್ಳುವುದು ಎಂಬ ನಿಜವಾದ ಅರ್ಥ ಅವರ ಸುಸಂಸ್ಕೃತ ವರ್ತನೆಯಲ್ಲಿ ಕಾಣಿಸಿತು. ಅವರು ಯಾವುದೇ ವ್ಯವಹಾರಾರ್ಥವಾಗಿ ನಮ್ಮ ಹತ್ತಿರ ಬಂದಿರಲಿಲ್ಲ. ಕೇವಲ ನಮ್ಮ ದರ್ಶನಾಶೀರ್ವಾದ ಪಡೆಯಬೇಕೆಂಬ ಉದ್ದೇಶದಿಂದ ಮಾತ್ರ ಬಂದಿದ್ದನ್ನು ಕೇಳಿ ಆಶ್ಚರ್ಯವಾಯಿತು. ಬಹಳ ಹೊತ್ತಿನವರೆಗೆ ಭಾರತೀಯ ತತ್ವಜ್ಞಾನ ಮತ್ತು ಸಂಸ್ಕೃತಿಯ ಬಗ್ಗೆ ನಮ್ಮೊಡನೆ ಸಂವಾದ ನಡೆಯಿತು. ನಂತರ ನಮ್ಮ ಬಿಡಾರದಲ್ಲಿಯೇ ಪ್ರಸಾದ ಸ್ವೀಕರಿಸಿ ಹಿಂದಿರುಗಿದರು. ಅಂದಿನಿಂದ ನಮ್ಮಿರ್ವರ ಮಧ್ಯೆ ಗಾಢವಾದ ಆತ್ಮೀಯತೆ ಬೆಳೆಯಿತು. ಅಲ್ಲದೆ WhatsApp ನಲ್ಲಿ ಬೌದ್ಧಿಕ ಚಿಂತನ ಮಂಥನ ನಡೆಯತೊಡಗಿತು. ಅವರು ಕಳೆದ ವಾರ ಅಮೇರಿಕೆಯ NASA ದ ಬಾಹ್ಯಾಕಾಶ ನೌಕೆಯು ಸೆರೆಹಿಡಿದ, ಭೂಮಿಯ ಚಿತ್ರದ ವೀಡಿಯೋ ತುಣುಕನ್ನು ಕಳುಹಿಸಿದ್ದರು. ಅದನ್ನು ನೋಡಿ ಒಮ್ಮೆ NASA ಕ್ಕೆ ಹೋದಾಗ ಗಗನಯಾತ್ರಿಕರು ಚಂದ್ರನಿಂದ ತಂದಿದ್ದ ಮೃದುವಾದ ಕರಿಯ ಕಲ್ಲನ್ನು ಮುಟ್ಟಿದ ನೆನಪಾಗಿ ಅವರಿಗೆ ಬರೆದ ನಮ್ಮ ಪ್ರತಿಕ್ರಿಯೆ: “The only eyes that can see this wonderful universe are on our mother planet Earth. But unfortunately people camouflage their eyes with ego, hatred, selfishness etc and do not realise that they are a spec of dust not even noticeable from the far away planets of this universe full of mysteries!”
ಆ ವೀಡಿಯೋದಲ್ಲಿ ಭೂಮಿಯು ಚಂದ್ರನ ಷೋಡಶ ಕಲೆಗಳಂತೆ ಸ್ವಲ್ಪ ಸ್ವಲ್ಪವೇ ಅನಾವರಣಗೊಳ್ಳುತ್ತದೆ. ತಿರುಗುವ ಭೂಮಿಯ ದೃಶ್ಯಾವಳಿಗಳ ಕೆಳಗೆ Flash News ರೀತಿಯಲ್ಲಿ ಗತಕಾಲದ ಮತ್ತು ಈಗಲೂ ನಡೆಯುತ್ತಿರುವ ವಿದ್ಯಮಾನಗಳನ್ನು ಆಕರ್ಷಕ ಧ್ವನಿಯಲ್ಲಿ ನಿರೂಪಿಸಲಾಗಿದೆ. ಸಾವಿರಾರು ಕಿಲೋ ಮೀಟರ್ ದೂರದಿಂದ ಒಂದು ಚುಕ್ಕೆಯಂತೆ ಕಾಣುವ ಈ ಭೂಮಿಯ ಮೇಲೆ ಏನು ಸದ್ವರ್ತನೆ/ದುರ್ವರ್ತನೆಗಳು ನಡೆಯುತ್ತಾ ಬಂದಿವೆ ಎಂಬುದನ್ನು ಅರ್ಥಪೂರ್ಣವಾಗಿ ವಿವರಿಸಲಾಗಿದೆ. ಮನುಷ್ಯನ ಪ್ರೀತಿ, ವಾತ್ಸಲ್ಯ, ಸುಖ/ದುಃಖಗಳು, ತಂದೆ-ತಾಯಿ, ಪ್ರೀತಿಯ ಮಕ್ಕಳು, ಪ್ರೇಮದ ಸುಳಿಯಲ್ಲಿ ಸಿಲುಕಿಕೊಂಡಿರುವ ಯುವಕ ಯುವತಿಯರು, ವಿವಿಧ ಧರ್ಮಗಳ ಬೋಧನೆ, ಆರ್ಥಿಕ ಚಿಂತನೆ, ಸಂಶೋಧಕರು, ಆವಿಷ್ಕಾರಕರು, ಸಂತರು, ಅನ್ನ ನೀಡುವ ರೈತರು, ನೀತಿಬೋಧೆ ಮಾಡುವ ಅಧ್ಯಾಪಕರು, ವೀರರು-ಹೇಡಿಗಳು, ನಾಗರಿಕತೆಯನ್ನು ಹುಟ್ಟು ಹಾಕಿದವರು/ಹಾಳು ಮಾಡಿದವರು, ಪಾಪಿಗಳು, ಭ್ರಷ್ಟ ರಾಜಕಾರಣಿಗಳು, ಸೌರಶಕ್ತಿಯಿಂದ ಆಗಸದಲ್ಲಿ ತೂಗಾಡುತ್ತಿರುವ, ವಿಶಾಲವಾದ ಈ ವಿಶ್ವದಲ್ಲಿ ಒಂದು ಬಿಂದುವಿನಂತೆ ಕಾಣುವ ಈ ಭೂಮಿಯ ಮೇಲೆ ಮನುಕುಲದ ಇತಿಹಾಸದಲ್ಲಿ ಏನೆಲ್ಲ ನಡೆದುಹೋಗಿದೆ. ಸ್ವಾರ್ಥ, ಲಾಲಸೆ, ದ್ವೇಷ, ಕಪಟತನ, ಒಂದು ಧೂಳಿನ ಕಣದಷ್ಟು ಜಾಗದ ಮೇಲೆ ವಿಜಯಪತಾಕೆಯನ್ನು ಹಾರಿಸಲು ಚಕ್ರವರ್ತಿಗಳು, ಸೇನಾಧಿಪತಿಗಳು ಎಷ್ಟೊಂದು ಜನರ ರಕ್ತದ ಕೋಡಿ ಹರಿಸಿದ್ದಾರೆ. ಪರಸ್ಪರ ದ್ವೇಷದಿಂದ ಒಬ್ಬರನ್ನೊಬ್ಬರು ನಿರ್ದಯರಾಗಿ ಕೊಲ್ಲುವ ಕೊನೆ ಇಲ್ಲದ ಕ್ರೌರ್ಯದ ಕಾಲಚಕ್ರ!
ಎಣೆಯಿಲ್ಲದ ಈ ವಿಶ್ವದಲ್ಲಿ ನಮ್ಮ ಭೂಮಿ ಒಂದು ಸಣ್ಣ ಚುಕ್ಕೆ, ಜೀವದ ಸೆಲೆ ಇರುವುದು ಈ ಭೂಮಿಯ ಮೇಲೆ ಮಾತ್ರ. ಇದುವರೆಗೆ ಖಗೋಳ ವಿಜ್ಞಾನಿಗಳಿಗೆ ಗೊತ್ತಿರುವಂತೆ ಮತ್ತೆಲ್ಲಿಯೂ ಇಲ್ಲ, ಈ ಮನುಕುಲ ಇನ್ನೆಲ್ಲಿಗೆ ವಲಸೆ ಹೋಗಲು ಸಾಧ್ಯ? ದೂರದ ಗ್ರಹ ನಕ್ಷತ್ರಗಳಿಗೆ ಹೋಗಬಹುದೇ? ಹೌದು. ಅಲ್ಲಿ ನೆಲೆಸಬಹುದೇ? ಇಲ್ಲ. ಸದ್ಯಕ್ಕಂತೂ ಭೂಮಿಯನ್ನು ಬಿಟ್ಟರೆ ನಮಗೆ ಬೇರೆ ನೆಲೆ ಇಲ್ಲ, ಇದುವೇ ನಮಗೆ ಇಹಲೋಕದಲ್ಲಿ ಬದುಕಲು ಗೊತ್ತಿರುವ ಒಂದೇ ಒಂದು ಮನೆ! ಇದು ಖಗೋಳ ವಿಜ್ಞಾನಿಗಳ ಮಾತಾದರೆ ಆತ್ಮಜ್ಞಾನಿಗಳ ಮಾತು: “ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ, ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ ಕೂಡಲ ಸಂಗಮದೇವಾ!”
ನಿನ್ನೆ ಆಚರಿಸಿದ ಗಣರಾಜ್ಯೋತ್ಸವ ಸ್ವತಂತ್ರ ಭಾರತಕ್ಕೆ ಸೀಮಿತವಾದ ಸಂವಿಧಾನ, ಸಾವಿರಾರು ವರ್ಷಗಳ ಹಿಂದೆ ಇದ್ದ ಭಾರತದ ಋಷಿಮುನಿಗಳು, ದ್ರಷ್ಟಾರರು “ವಸುಧೈವ ಕುಟುಂಬಕಮ್” ಎಂದು ಇಡೀ ಭೂಮಂಡಲವನ್ನೇ ಒಂದು ಕುಟುಂಬವನ್ನಾಗಿ ಪರಿಗಣಿಸಿ ನಾಲ್ಕೇ ನಾಲ್ಕು ಸಾಲುಗಳಲ್ಲಿ ವಿರಚಿಸಿದ ವಿಶ್ವಮಾನ್ಯ ಸಂವಿಧಾನವೆಂದರೆ:
ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದುಃಖಭಾಗ್ ಭವೇತ್!
ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆ
ಕೃಪೆ: ವಿಜಯ ಕರ್ನಾಟಕ 27-1-2022