ಕವಿತೆಗಳು ಆಗಸದಲ್ಲಿ ಸಂಚರಿಸುವ ಮೋಡಗಳಂತೆ!

“ರವಿ ಕಾಣದ್ದನ್ನು ಕವಿ ಕಂಡ” ಎಂಬ ನಾಣ್ಣುಡಿಯೊಂದು ಇದೆ. ಇದನ್ನು ಮುಂದುವರಿಸಿ “ಕವಿ ಕಾಣದ್ದನ್ನು ಕಾವ್ಯಾಸಕ್ತ ಕಂಡ” ಎಂದು ಹೇಳಬೇಕೆನಿಸುತ್ತದೆ. ರವಿಯು ಭೂಮಿಯ ಮೇಲಿನ ಎಲ್ಲದನ್ನೂ ನೋಡುತ್ತಾನೆಂಬುದು ನಿಜವೇ. ಆದರೆ ಅವನ ಗ್ರಹಿಕೆಗೆ ದಕ್ಕುವುದು ಕೇವಲ ಮೇಲ್ಮೈ ನೋಟ ಮಾತ್ರವೇ. ಮೇಲ್ಮೈ ಗ್ರಹಿಕೆಗೂ ಮಿಗಿಲಾದ ಒಳ ಆಂತರ್ಯ ಅವನಿಗೆ ದಕ್ಕಲಾರದು. ಆದರೆ ಕವಿಯ ವಿಷಯ ಹಾಗಲ್ಲ, ಅವನು ರವಿಯ ಹಾಗೆ ಮೇಲೆ ನೋಟವನ್ನು ಅಷ್ಟೇ ಗ್ರಹಿಸುವುದಿಲ್ಲ. ತನ್ನ ಕಣ್ಣುಗಳು ಗ್ರಹಿಸಿದ್ದಷ್ಟನ್ನೇ ಅವನು ನೋಡುವುದಿಲ್ಲ; ಬದಲಿಗೆ ತನ್ನ ಒಳನೋಟವೆಂಬ ಕ್ಷಕಿರಣವನ್ನು ಹಾಯಿಸಿ ರವಿಯು ಕಾಣದ ಆಂತರ್ಯದ ನೋಟವನ್ನು ಸಹ ಗ್ರಹಿಸುತ್ತಾನೆ; ಆ ಕಾಣೆಯನ್ನು ತನ್ನ ಕಾವ್ಯದಲ್ಲಿ ಕಂಡರಿಸುತ್ತಾನೆ. ಆದಾಗ್ಯೂ ಕವಿಯ ನೋಟವೇ ಸಮಗ್ರ ಎನ್ನುವಂತೆಯೂ ಇಲ್ಲ. ಕವಿಯ ಕಾಣ್ಕೆಗಿಂತಲೂ ಮಿಗಿಲಾದ ಅರ್ಥವನ್ನು ಕಾವ್ಯಾಸಕ್ತನು ಕಾಣಬಲ್ಲ. ರವಿಗೂ, ಕವಿಗೂ ಇಬ್ಬರಿಗೂ ದಕ್ಕದ ಒಳನೋಟ ಕಾವ್ಯಾಸಕ್ತರಿಗೆ ಸಾಧ್ಯವಾಗುತ್ತದೆ. ತಂತಮ್ಮ ಅನುಭವ ಮತ್ತು ಸಂಸ್ಕಾರದ ಹಿನ್ನೆಲೆಯಲ್ಲಿ ವಿವಿಧ ರೀತಿಯಲ್ಲಿ ಕಾವ್ಯವನ್ನು ಗ್ರಹಿಸಬಲ್ಲರು. ಕವಿಗೂ ಸಾಧ್ಯವಾಗದ ಆಂತರ್ಯದ ಗ್ರಹಿಕೆ ಕಾವ್ಯಾಸಕ್ತರಿಗೆ ಉಂಟಾಗುತ್ತದೆ. ಆದ್ದರಿಂದ ಕಾವ್ಯವನ್ನು ಒಬ್ಬೊಬ್ಬ ಕಾವ್ಯಾಸಕ್ತನೂ ವಿವಿಧ ರೀತಿಯಲ್ಲಿ ಗ್ರಹಿಸುತ್ತಾನೆ. ಅವನ ಈ ಗ್ರಹಿಕೆ ಮತ್ತೊಂದು ಓದಿನಲ್ಲಿ ಪರಿಷ್ಕಾರವಾಗುವುದಿಲ್ಲ ಎನ್ನುವಂತೆಯೂ ಇಲ್ಲ. ಹೀಗೆ ಕಾವ್ಯವೆನ್ನುವುದು ನವ ನವೋನ್ಮೇಶಶಾಲಿಯಾಗಿ ತನ್ನ ದಿಗಂತವನ್ನು ವಿಸ್ತರಿಸಿಕೊಳ್ಳುತ್ತಲೇ ಹೋಗುತ್ತದೆ!
ಕವಿಯು ಕಾವ್ಯರಚನೆ ಮಾಡುವಾಗ ಅವನ ಕವಿತೆಗೆ ಸ್ಫೂರ್ತಿದಾಯಕವಾದ ಏನೋ ಒಂದು ಘಟನೆ ಅಥವಾ ಕಲ್ಪನಾ ಲಹರಿ ಇರುತ್ತದೆ. ಅದೇ ಅರ್ಥ ಆ ಕವಿತೆಗೆ ಸೀಮಿತವಾಗಿ ಇರಬೇಕೆಂದೇನೂ ಇಲ್ಲ. “ಎದೆ ತುಂಬಿ ಹಾಡಿದ” ಕವಿತೆಗೆ ಕಾವ್ಯಾಸಕ್ತರ ಹೃದಯದ ವೀಣೆ ವಿಭಿನ್ನ ರೀತಿಯಲ್ಲಿ ಮಿಡಿಯುವ ಸಾಧ್ಯತೆ ಇದೆ. ಒಮ್ಮೆ ರವೀಂದ್ರನಾಥ ಠಾಗೂರ್ ಅವರಿಗೆ ಅವರ ಒಂದು ಪದ್ಯವನ್ನು ವಿಭಿನ್ನವಾಗಿ ಅರ್ಥೈಸಿ ಬರೆದ ವಿಮರ್ಶೆಯನ್ನು ಯಾರೋ ತೋರಿಸಿ ಅವರ ಪ್ರತಿಕ್ರಿಯೆಯನ್ನು ಕೇಳಿದರಂತೆ. ಠಾಗೂರ್ ಅವರು ಅದನ್ನು ಓದಿ ನಕ್ಕು ಸುಮ್ಮನಾದರಂತೆ. ಇದೇ ರೀತಿ ದ.ರಾ.ಬೇಂದ್ರೆಯವರು ಚಿತ್ರದುರ್ಗದ ಸರಕಾರೀ ಕಾಲೇಜಿನ ಕಾರ್ಯಕ್ರಮಕ್ಕೆ ಬಂದಾಗ “ಜೋಗಿ” ಎಂಬ ಕವಿತೆಯನ್ನು ಕುರಿತು “ನಿಮ್ಮ ಈ ಕವಿತೆಯ ಅರ್ಥ ಹೀಗೆ ಇರಬಹುದೇ?” ಎಂದು ಕಾವ್ಯಾಸಕ್ತರೊಬ್ಬರು ಕೇಳಿದಾಗ “ಹಾಗೂ ಇರಬಹುದು” ಎಂದು ಪ್ರತಿಕ್ರಿಯಿಸಿದರಂತೆ. ವಿಜ್ಞಾನವು ನಭೋಮಂಡಲದಲ್ಲಿ ಸಂಚರಿಸುವ ಗ್ರಹನಕ್ಷತ್ರಗಳಂತೆ. ಕವಿತೆಯು ಆಗಸದಲ್ಲಿ ಸಂಚರಿಸುವ ಮೋಡಗಳಿದ್ದಂತೆ! ಗ್ರಹನಕ್ಷತ್ರಗಳು ಖಚಿತವಾದ ಆಕಾರ, ಗಾತ್ರ ಮತ್ತು ಗತಿಯನ್ನು ಹೊಂದಿದ್ದು ಅನಾದಿಕಾಲದಿಂದ ಒಂದು ನಿರ್ದಿಷ್ಟ ಕಕ್ಷೆಯಲ್ಲಿ ಸಂಚರಿಸುತ್ತಾ ಬಂದಿವೆ. ಅವು “ಪ್ರಳಯಾಂತಕ”ರಾದ ಮನುಷ್ಯರಂತೆ ದ್ವೇಷ ಕಲಹ ಸೇಡುಗಳನ್ನು ಸಾಧಿಸುತ್ತಾ ಸಂಚುಮಾಡಿ ಅಡ್ಡಾದಿಡ್ಡಿ ತಿರುಗಾಡಿದ್ದರೆ ಪರಸ್ಪರ ಡಿಕ್ಕಿ ಹೊಡೆದು ನಭೋಮಂಡಲವೇ ಹತ್ತಿ ಉರಿಯುತ್ತಿತ್ತು. ಅಗ್ನಿ ಜ್ವಾಲೆ ಆವರಿಸಿ ಈ ಬ್ರಹ್ಮಾಂಡದಲ್ಲಿ ಯಾರೂ ನೋಡಲಾಗದೆ ಆಕಾಶ ಮಾತ್ರ ಉಳಿದಿರುತ್ತಿತ್ತು.
ಮೋಡಗಳ ಆಕಾರ ಮತ್ತು ಗತಿ ಕ್ಷಣ ಕ್ಷಣಕ್ಕೂ ಭಿನ್ನವಾಗಿರುತ್ತದೆ. ಮೇಲ್ನೋಟಕ್ಕೆ ಅವು ಮನುಷ್ಯರಂತೆ ಅಡ್ಡಾದಿಡ್ಡಿ ತಿರುಗಾಡಿದಂತೆ ಕಂಡರೂ ಅವುಗಳಲ್ಲಿ ಒಂದು ಮೋಹಕತೆ ಇರುತ್ತದೆ. ಅವುಗಳನ್ನು ಚದುರಿಸುವ ಗಾಳಿಯು ಆಗಸವನ್ನೇ ವಿಶಾಲವಾದ ಚಿತ್ರಪಟಲವನ್ನಾಗಿ ಮಾಡಿಕೊಂಡು ಕ್ಷಣ ಕ್ಷಣವೂ ಸುಂದರವಾದ ಚಿತ್ತಾರ ಬಿಡಿಸುವ ನುರಿತ ಚಿತ್ರಕಲಾವಿದನಂತೆ ತೋರುತ್ತದೆ! ಗುಡುಗು, ಸಿಡಿಲು, ಕೋಲ್ಮಿಂಚು ಭಯಭೀತಿಯನ್ನುಂಟು ಮಾಡಿದರೂ ಮೋಡಗಳು ಮಳೆ ಸುರಿಸಿ ಇಳೆಯಲ್ಲಿ ಬೆಳೆ ಬೆಳೆಯುವಂತೆ ಮಾಡುತ್ತವೆ. ಕೆಲವೊಮ್ಮೆ ರಾತ್ರಿ ಹೊತ್ತು ಮೋಡಗಳೆಲ್ಲಾ ಚದುರಿ ಸುಂದರವಾದ ವಿಸ್ಮಯಕಾರಕವಾದ ತಾರಾಮಂಡಲ ಗೋಚರಿಸುವಂತೆ ಮಾಡುತ್ತದೆ. ಹಾಗೆಯೇ ಈ ಸೃಷ್ಟಿಯ ಸೌಂದರ್ಯ ಮತ್ತು ಜೀವನದ ಸಿಹಿಕಹಿ ಅನುಭವಗಳನ್ನು ಕವಿತೆಗಳಲ್ಲಿ ಹಿಡಿದಿಡುವ ಕುಶಾಗ್ರಮತಿಗಳು ಕವಿಗಳು. “ಜಗಕೆ ಬಲ್ಲಿದ ನೀನು, ನಿನಗೆ ಬಲ್ಲಿದ ನಾನು, ಕರಿಯು ಕನ್ನಡಿಯೊಳಗಡಗಿದಂತೆ ನೀನೆನ್ನೊಳಗಡಗಿದೆ ಕೂಡಲಸಂಗಮದೇವಾ” ಎಂದು ಬಸವಣ್ಣನವರು ಹೇಳುವಂತೆ ಹೆಸರಾಂತ ಕವಿಗಳ ಕವಿತೆಗಳು ಕಾವ್ಯಾಸಕ್ತರ ಹೃದಯದಲ್ಲಿ ಅಡಗಿ ಕುಳಿತು ಆನಂದಿಸುವಂತೆ ಮಾಡುತ್ತವೆ.
ಕೆಲವು ದಿನಗಳ ಹಿಂದೆ ಸಾಹಿತ್ಯಾಭಿರುಚಿಯುಳ್ಳ ಮತ್ತು ಅನೇಕ ಭಾಷೆಗಳಲ್ಲಿ ಪರಿಣತರಾದ ಮೈಸೂರಿನ ಸಿ.ಪಿ.ವಿ ಗುಪ್ತ ಅವರು ಕಳುಹಿಸಿದ ವಾಟ್ಸಾಪ್ ಸಂದೇಶವನ್ನು ಆತ್ಮೀಯರೊಬ್ಬರು ನಮ್ಮ ಮೊಬೈಲಿಗೆ ಮುಂತಳ್ಳಿದ್ದರು. ಅದು ಖಲೀಲ್ ಗಿಬ್ರಾನ್ ಬರೆದ ಒಂದು ಅಪರೂಪದ ಇಂಗ್ಲೀಷ್ ಕವನ, ಖಲೀಲ್ ಗಿಬ್ರಾನ್ ನಮ್ಮ ಮೆಚ್ಚಿನ ಚಿಂತಕ ಮತ್ತು ಕವಿ, ಅವನನ್ನು ಕುರಿತು ಇದೇ ಅಂಕಣದಲ್ಲಿ ಬಹಳ ಹಿಂದೆ ಬರೆದ ನೆನಪು. "Fear” (ಭಯ) ಎಂಬ ಶೀರ್ಷಿಕೆಯಡಿಯಲ್ಲಿ ಗಿಬ್ರಾನ್ ಬರೆದ ಇಂಗ್ಲೀಷ್ ಕವಿತೆಯ ಪೂರ್ಣ ಪಾಠ ಮತ್ತು ನಮ್ಮ ಕನ್ನಡ ಭಾವನುವಾದ ಹೀಗಿದೆ:
FEAR
It is said that before entering the seaa river trembles with fear.
She looks back at the path she has traveled,
from the peaks of the mountains,
the long winding road crossing forests and
villages.
And in front of her,
she sees an ocean so vast,
that to enter
there seems nothing more than to disappear
forever.
But there is no other way.
The river cannot go back.
Nobody can go back.
To go back is impossible in existence.
The river needs to take the risk
of entering the ocean
because only then will fear disappear,
because thats where the river will know
its not about disappearing into the ocean,
but of becoming the ocean.
ಭಯ
ಸಾಗರವ ಸೇರುವ ಮೊದಲು
ನಡುಗಿದಳು ಗಂಗೆಯು ಭಯದಿಂದ
ಹಿಂತಿರುಗಿ ನೋಡಿದಳು
ತಾನು ನಡೆದು ಬಂದ ಪಥವನು
ಹಿಮಾಲಯ ಪರ್ವತ ಶ್ರೇಣಿಯ ತುದಿಯಿಂದ
ದೂರದ ಕಾಡುಮೇಡುಗಳ ವಕ್ರ ದಾರಿಯನು ದಾಟಿ
ನೋಡಿದಳು ಎದುರಿಗಿರುವ ವಿಶಾಲವಾದ ಸಮುದ್ರವನು
ಕಂಗಾಲಾದಳು ಅದರೊಳಗೆ ಕಾಲಿರಿಸಿದರೆ
ತಾನು ಶಾಶ್ವತವಾಗಿ ಕಣ್ಮರೆಯಾಗುವೆ ಎಂದು!
ಆದರೆ ಹಿಂದಿರುಗಲು ಅವಳಿಗೆ ಬೇರೆ ದಾರಿಯಿಲ್ಲ
ಜೀವನದಲ್ಲಿ ಯಾರಿಗೂ ಹಿಂತಿರುಗಲು ಅವಕಾಶಗಳಿಲ್ಲ!
ಸಾಗರವನ್ನು ಸೇರುವ ಅಪಾಯ ತಪ್ಪಿದ್ದಲ್ಲ
ಆಗಲೇ ಗಂಗೆಯ ಭಯ ನಿವಾರಣೆಗೊಳ್ಳಲು ಸಾಧ್ಯ!
ಸಾಗರದಲ್ಲಿ ಕಣ್ಮರೆಯಾಗುವ ಭಯವಲ್ಲವದು
ಸಾಗರವೇ ತಾನಾಗುವುದು!
ಖಲೀಲ್ ಗಿಬ್ರಾನ್ ಅವರ ಈ ಇಂಗ್ಲೀಷ್ ಕವಿತೆಯಲ್ಲಿ ಮೂಲತಃ ಆಧ್ಯಾತ್ಮಿಕತೆಯ ಅರ್ಥ ಅಡಗಿದ್ದರೂ ಕಾವ್ಯಾಸಕ್ತರು ಇದನ್ನು ಬೇರೊಂದು ದೃಷ್ಟಿಯಿಂದ ನೋಡಲು ಸಾಧ್ಯವಿದೆ. ಭಾರತೀಯ ಮಹಿಳೆಯರ ಸಾಂಸಾರಿಕ ಜೀವನದಲ್ಲಿ ಹಸೆಮಣೆಯನ್ನೇರಿ ಕುಳಿತ ನವವಧುವು ತನ್ನ ತವರು ಮನೆಯನ್ನು ತೊರೆದು ಗಂಡನ ಮನೆಗೆ ಹೋಗುವಾಗ ಉಂಟಾಗುವ ಹೃದಯದ ತಳಮಳಕ್ಕೂ ಇದನ್ನು ಅನ್ವಯಿಸಬಹುದು. ಗಂಡನ ಮನೆ ಸೇರಿದಾಗ ಅದುವರೆಗೆ ಇದ್ದ ಭಯ ಹೋಗಿ ಗಂಡನ ಮನೆಯೇ ತನ್ನ ಮನೆಯಾಗಿ ಬಾಳುವ ಭಾರತೀಯ ಗೃಹಿಣಿಯರ ಮನಃಸ್ಥಿತಿಯನ್ನು ಇಲ್ಲಿ ಮನಗಾಣಲು ಸಾಧ್ಯ.
ಆಧ್ಯಾತ್ಮಿಕ ದೃಷ್ಟಿಯಿಂದ ಖಲೀಲ್ ಗಿಬ್ರಾನ್ ಅವರ ಈ ಇಂಗ್ಲೀಷ್ ಕವಿತೆಯು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ “ತೊರೆಯ ಹಂಬಲ” ಎಂಬ ಶೀರ್ಷಿಕೆಯುಳ್ಳ ಕವಿತೆಯ ಈ ಮುಂದಿನ ಸಾಲುಗಳನ್ನು ನೆನಪಿಗೆ ತಂದು ಕೊಡುತ್ತದೆ.
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೆ ಒಂದು ದಿನ
ಕಡಲನು ಕೂಡಬಲ್ಲೆನೆ ಒಂದು ದಿನ?
ಒಂದೇ ಸಮನಾಗಿಹುದಂತೆ!
ಸನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ!
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು!
ಎಂದಿಗಾದರೂ ಕಾಣದ ಕಡಲಿಗೆ
ಸೇರಬಲ್ಲೆನೇನು, ಆ ಪುಣ್ಯವೆಂದಿಗೋ, ಕಾಲವೆಂದಿಗೋ
ಕಡಲೊಲವಿನ ಆ ರತ್ನ ಗರ್ಭದಲಿ
ಸೇರಬಹುದೇ ನಾನು, ಕಡಲ ನೀಲಿಯೊಳು
ಕರಗಬಹುದೆ ನಾನು?
ವಿಶಾಲ ಗಗನದಲ್ಲಿರುವ ಆಕರ್ಷಣ ಶಕ್ತಿಗೆ ಒಳಗಾಗಿ ನಿತ್ಯ ವಿಹರಿಸುವ ಗ್ರಹನಕ್ಷತ್ರಗಳಂತೆ ಮನುಷ್ಯನ ಇಂದ್ರಿಯಗಳಿಗೆ ಅಗೋಚರವಾದ ಪರಾತ್ಪರ ವಸ್ತುವಿನ ಆಕರ್ಷಣೆಗೆ ಜಿ.ಎಸ್.ಎಸ್ ಅವರ ಹೃದಯ ಒಳಗಾಗುತ್ತದೆ. ಆ ವಿಶ್ವಚೈತನ್ಯದ ವಿಶಾಲತೆ ಮತ್ತು ಗಹನತೆಯ ಆಕರ್ಷಣೆ ಅದನ್ನು ಪಡೆಯಬೇಕೆಂಬ ಹಂಬಲವಾಗಿ ಪರಿಣಮಿಸಿ, ಅದರೊಂದಿಗೆ ಒಂದಾಗುವ ಉತ್ಕಟೇಚ್ಛೆ ಹೊಂದಿರುವುದನ್ನು ಇಲ್ಲಿ ಮನಗಾಣಬಹುದು. ಪರಾತ್ಪರ ವಸ್ತುವಿನ ಬಗೆಗೆ ಶಾಸ್ತ್ರಗಳ ಅಧ್ಯಯನದಿಂದ ಓದಿ ತಿಳಿದಿರುವುದುಂಟು. ಅದು ಸ್ವಾನುಭವವಲ್ಲ; ಅನ್ಯ ಮೂಲಗಳ ಜ್ಞಾನವಷ್ಟೇ. ಆದ್ದರಿಂದಲೇ ಕಡಲು ಎಲ್ಲಿರುವುದೋ, ಎಂತಿರುವುದೋ, ಹಾಗಂತೆ, ಹೀಗಂತೆ; ಆದರೆ ವಿಶಾಲ ಅಂಬುಧಿಯನ್ನು ಬೆರೆತಾಗ ತೊರೆ ತಾನಾಗಿ ಇರುವುದಿಲ್ಲ, ತನ್ನ ಅಸ್ಮಿತೆಯನ್ನೇ (ನಾಮರೂಪ) ಕಳೆದುಕೊಂಡಿರುತ್ತದೆ! “ಜಟಿಲ ಕಾನನದ ಕುಟಿಲ ಪಥಗಳಲಿ ಹರಿವ ತೊರೆಯು ನಾನು!” ಎನ್ನುವ ಪದ್ಯದ ಸಾಲು ಸಾಂಸಾರಿಕ ಜೀವನದ ಗತಿವಿಧಾನಗಳನ್ನು ಮನೋಜ್ಞವಾಗಿ ಚಿತ್ರಿಸುತ್ತದೆ. ಗಹನವಾದ ವೇದಾಂತ ವಿಚಾರಕ್ಕೆ ಸ್ಪೋಪಜ್ಞ ಸ್ಪರ್ಶ ಈ ಪದ್ಯದಲ್ಲಿದೆ. ಜೀವಾತ್ಮವು ಪರಮಾತ್ಮನನ್ನು ಎರಡಿಲ್ಲದಂತೆ ಒಂದಾಗಿ ಬೆರೆಯುವ ಆ ಸ್ಥಿತಿಯು ಶರಣರು ಹೇಳುವಂತೆ “ಉರಿಯುಂಡ ಕರ್ಪುರದಂತೆ”!
ಖಲೀಲ್ ಗಿಬ್ರಾನ್ ಮತ್ತು ಶಿವರುದ್ರಪ್ಪ ಇಬ್ಬರಲ್ಲಿಯೂ ನದಿಯು ಪ್ರಾಪಂಚಿಕ ವಿಷಯಗಳಲ್ಲಿ ತಲ್ಲಣಗೊಂಡಿರುವ ಜೀವಾತ್ಮದ ಸಂಕೇತವೇ ಆಗಿದೆ. ನದಿಯ ಗಮ್ಮ ಸಮುದ್ರವಾದರೆ ಜೀವಾತ್ಮದ ಗಮ್ಮ ಪರಮಾತ್ಮ. ಶಿವರುದ್ರಪ್ಪನವರ ಪದ್ಯದಲ್ಲಿ ಜೀವಾತ್ಮಕ್ಕೆ ಪರಮಾತ್ಮನನ್ನು ಬೆರೆಯುವ ಹಂಬಲ ಕಂಡರೆ ಗಿಬ್ರಾನ್ ಕವಿತೆಯಲ್ಲಿ ಬೆರೆಯುವ ಸಂದರ್ಭದ ತಲ್ಲಣವಷ್ಟೇ ಕಾಣಿಸುತ್ತದೆ. ಎರಡೂ ಕವಿತೆಗಳಲ್ಲಿರುವ ದೃಷ್ಟಿಕೋನದಲ್ಲಿ ಮತ್ತೊಂದು ಮುಖ್ಯ ವ್ಯತ್ಯಾಸವಿದೆ. ಗಿಬ್ರಾನ್ ಕವಿತೆಯ ಕೊನೆಯ ಎರಡು ಸಾಲುಗಳಾದ “ಸಾಗರದಲ್ಲಿ ಕಣ್ಮರೆಯಾಗುವ ಭಯವಲ್ಲವದು, ಸಾಗರವೇ ತಾನಾಗುವುದು!” ಎನ್ನುವುದರಲ್ಲಿ ತಾತ್ವಿಕ ಸಿದ್ದಾಂತದ ನಿರೂಪಣೆಯನ್ನು ಕಾಣಬಹುದು. ಜಿ.ಎಸ್.ಎಸ್ ರವರ ಕವಿತೆಯ ಕೊನೆಯ ಸಾಲುಗಳಾದ “ಕಡಲೊಲವಿನ ಆ ರತ್ನ ಗರ್ಭದಲಿ ಸೇರಬಹುದೇ ನಾನು? ಕಡಲ ನೀಲಿಯೊಳು ಕರಗಬಹುದೆ ನಾನು?” ಎಂದು ಸಂದೇಹಿಸುವಾಗ ಸಾಧನಾವಸ್ಥೆಯಲ್ಲಿರುವ ಮುಮುಕ್ಷುವಿನ ಮನಸ್ಸಿನ ತುಡಿತವನ್ನು ಎತ್ತಿ ತೋರಿಸುತ್ತದೆ.
ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆ