ರೈತರ ಮುಖದಲ್ಲಿ ಗಂಗಾವತರಣ ಮಂದಹಾಸ - ಬಿಸಿಲು ಬೆಳದಿಂಗಳು ಅಂಕಣ ಬರಹ

  •  
  •  
  •  
  •  
  •    Views  

"ಶ್ರೇಯಾಂಸಿ ಬಹುವಿಜ್ಞಾನಿ ಎಂಬ ಮಾತು ಸಂಸ್ಕೃತದಲ್ಲಿ ಪ್ರಸಿದ್ಧವಾದುದು. ಒಳ್ಳೆಯ ಕೆಲಸಗಳಿಗೆ ವಿಘ್ನಗಳು ಬಹಳ ಎಂದು ಇದರ ಅರ್ಥ, ಉನ್ನತ ಗುರಿ ಇಟ್ಟಿಕೊಂಡಿರುವವರು ಬಂದ ಎಲ್ಲ ಅಡೆತಡೆಗಳನ್ನು ಧೃತಿಗೆಡದೆ ಎದುರಿಸಬೇಕಾಗುತ್ತದೆ. ಅಂತಹ ಕಾರ್ಯಸಾಧನೆಯ ಹಿನ್ನೆಲೆಯಲ್ಲಿ ಬಳಕೆಗೆ ಬಂದ ಪದಪುಂಜವೇ 'ಭಗೀರಥ ಪ್ರಯತ್ನ' ಸ್ವರ್ಗದಿಂದ ಗಂಗೆಯನ್ನು ಭೂಮಿಗೆ ಇಳಿದು ಬರುವಂತೆ ಮಾಡಿದ ಪುರಾಣ ಕಥೆಯನ್ನು ಅರಿಯದ ಭಾರತೀಯನೇ ಇಲ್ಲ, ಸಗರ ಚಕ್ರವರ್ತಿಯು ಅಶ್ವಮೇಧ ಯಾಗವನ್ನು ಮಾಡಿದ ಸಂದರ್ಭದಲ್ಲಿ ಯಜ್ಞಾಶ್ವವು ಕಾಣೆಯಾಗುತ್ತದೆ. ಅದನ್ನು ಹುಡುಕಿಕೊಂಡು ತರಲು ಸಗರನು ತನ್ನ ಮಕ್ಕಳನ್ನು ಕಳಿಸುತ್ತಾನೆ. ಹುಡುಕುತ್ತಾ ಬಂದ ಅವರಿಗೆ ಕುದುರೆಯು ಕಪಿಲ ಮಹರ್ಷಿಗಳ ಆಶ್ರಮದ ಬಳಿ ಕಟ್ಟಿಹಾಕಿರುವುದು ಕಂಡುಬರುತ್ತದೆ. ಕಪಿಲ ಮಹರ್ಷಿಯೇ ಆ ಕುದುರೆಯನ್ನು ಕಳವು ಮಾಡಿಕೊಂಡು ಬಂದಿದ್ದಾನೆಂದು ಭಾವಿಸಿದ ಅವರು ತಪಸ್ಸಿನಲ್ಲಿ ತೊಡಗಿದ್ದ ಋಷಿಯ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾರೆ. ಮಹರ್ಷಿಯ ಕೋಪಾಗ್ನಿಗೆ ತುತ್ತಾಗಿ ಭಸ್ಮವಾಗಿ ಹೋಗುತ್ತಾರೆ. ಈ ದುರ್ಭರ ಘಟನೆಯಿಂದ ಸಗರನೂ ಎದೆಯೊಡೆದು ಸಾವನ್ನಪ್ಪುತ್ತಾನೆ. 

ಇದೇ ವಂಶಜನಾದ ರಾಜ ಭಗೀರಥನು ಋಷಿಯ ಕೋಪಾಗ್ನಿಗೆ ತುತ್ತಾಗಿ ಭಸ್ಮವಾಗಿದ್ದ ತನ್ನ 60 ಸಾವಿರ ಪಿತೃಗಳಿಗೆ ಸದ್ಗತಿ ದೊರಕಿಸಲು ಮುಂದಾಗುತ್ತಾನೆ. ಅವರ ಚಿತಾಭಸ್ಮದ ಮೇಲೆ ದೇವಗಂಗೆಯನ್ನು ಹರಿಸಿದರೆ ಮುಕ್ತಿ ದೊರೆಯುತ್ತದೆ ಎಂದು ನಿರ್ಧರಿಸಿ ಉಗ್ರ ತಪಸ್ಸು ಮಾಡುತ್ತಾನೆ. ಗಂಗೆಯು ಅವನ ತಪಸ್ಸಿಗೆ ಮೆಚ್ಚಿಸ್ವರ್ಗದಿಂದ ಭೂಮಿಗೆ ಇಳಿದು ಬರಲು ಸಿದ್ದಳಾಗುತ್ತಾಳೆ. ಆದರೆ ಅವಳದೊಂದು ಪ್ರಶ್ನೆ: ಆಗಸದಿಂದ ಧುಮ್ಮಿಕ್ಕುವ ತನ್ನ ರಭಸಕ್ಕೆ ಭೂಮಿ ಕುಸಿದು ಬೀಳುತ್ತದೆ, ಭೂಮಿಯ ಮೇಲೆ ತನ್ನನ್ನು ತಡೆದು ನಿಲ್ಲಿಸುವವರು ಯಾರು? ಎಂದು ಠೇಂಕಾರದ ಮಾತನ್ನಾಡುತ್ತಾಳೆ. ಭಗೀರಥನು ನಿರಾಶನಾಗದೆ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ಗಂಗೆಯ ಅಹಂಕಾರಕ್ಕೆ ಪ್ರತಿಸವಾಲಾಗಿ ಶಿವ ಜಡೆ ಬಿಚ್ಚಿ ನಿಲ್ಲುತ್ತಾನೆ. ಸ್ವರ್ಗದಿಂದ ಧುಮ್ಮಿಕ್ಕಿದ ಗಂಗೆಯನ್ನು ಶಿವನು ತನ್ನ ಜಟೆಯಲ್ಲಿ ಕೇವಲ ಒಂದು ಹನಿಯನ್ನಾಗಿ ಹಿಡಿದು ನಿಲ್ಲಿಸುತ್ತಾನೆ. ಭಗೀರಥನು ಮತ್ತೆ ಶಿವನನ್ನು ಒಲಿಸಿಕೊಂಡು ಗಂಗೆಯು ಜಟೆಯಿಂದ ಮುಂದೆ ಹರಿಯುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾನೆ. ಆದರೆ ಭಗೀರಥನಿಗೆ ಮತ್ತೊಂದು ವಿಘ್ನ ಎದುರಾಗುತ್ತದೆ. ಶಿವನ ಜಟೆಯಿಂದ ಬಿಡುಗಡೆ ಹೊಂದಿದ ಗಂಗೆಯ ನೀರು ಮುಂದೆ ಹರಿದು ಜಹ್ನು ಋಷಿಯ ಆಶ್ರಮಕ್ಕೆ ನುಗ್ಗಿ ಹಾಳು ಮಾಡುತ್ತದೆ. ಇದರಿಂದ ಸಿಟ್ಟಿಗೆದ್ದ ಋಷಿಯು ಗಂಗೆಯನ್ನು ಒಂದೇ ಗುಟುಕಿನಲ್ಲಿ ಪಾನ ಮಾಡಿಬಿಡುತ್ತಾನೆ. ಭಗೀರಥನು ಋಷಿಯನ್ನು ಒಲಿಸಿಕೊಂಡು ಗಂಗೆ ಬಿಡುಗಡೆ ಹೊಂದುವಂತೆ ಮಾಡುತ್ತಾನೆ. ಜಹ್ನು ಮಹರ್ಷಿಯಿಂದ ಬಿಡುಗಡೆ ಹೊಂದಿದ ಕಾರಣದಿಂದ ಗಂಗೆಯು ಜಾಹ್ನವಿ ಎಂಬ ಹೆಸರನ್ನು ಪಡೆಯುತ್ತಾಳೆ. ಹೀಗೆ ಭಗೀರಥನು ಗಂಗಾಜಲವನ್ನು ತನ್ನ ಪಿತೃಗಳ ಭಸ್ಮದ ಮೇಲೆ ಹರಿಸಿ ಅವರಿಗೆ ಸದ್ಧತಿಯನ್ನು ದೊರಕಿಸುತ್ತಾನೆ. ವ್ಯಕ್ತಿಯೊಬ್ಬನು ಎಷ್ಟೇ ಅಡೆತಡೆಗಳು ಎದುರಾದರೂ ಶತಾಯ ಗತಾಯ ಹೀಗೆ ಅತಿ ಕಷ್ಟಸಾಧ್ಯವಾದ ಕೆಲಸವನ್ನು ಸಾಧಿಸುವ ಹಿನ್ನೆಲೆಯಲ್ಲಿ ಬಳಕೆಗೆ ಬಂದುದು 'ಭಗೀರಥ ಪ್ರಯತ್ನ' ಎಂಬ ನುಡಿಗಟ್ಟು, 

ಇದೊಂದು ಪುರಾಣ ಕಥೆ ಆಗಿರಬಹುದು. ಆದರೆ ಇದನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ಬರುತ್ತದೆ. ಭಗೀರಥನ ಪಿತೃಗಳು ಕಪಿಲ ಮಹರ್ಷಿಯ ಕೋಪಾಗ್ನಿಗೆ ಸಿಲುಕಿ ಭಸ್ಮವಾದಂತೆ ನಮ್ಮನಾಡಿನ ರೈತರು ಅತಿವೃಷ್ಟಿ ಅನಾವೃಷ್ಟಿಗಳೆಂಬ ಪ್ರಾಕೃತಿಕ ವಿಕೋಪಗಳಿಗೆ ಸಿಲುಕಿ ಬೆಂದು ಹೋಗಿದ್ದಾರೆ. ಮಳೆಗಾಗಿ ಮುಗಿಲು ನೋಡುತ್ತಾ ವಿಹ್ವಲರಾಗಿದ್ದಾರೆ. ಕಾಲೇಜು ದಿನಗಳಲ್ಲಿ ನಮ್ಮ ಪ್ರಾಧ್ಯಾಪಕರಾಗಿದ್ದ ರಾಷ್ಟ್ರಕವಿ ಜಿ. ಎಸ್ ಶಿವರುದ್ರಪ್ಪನವರು ರೈತರ ಈ ನೋವಿಗೆ ಮಿಡಿದು ರಚಿಸಿದ ಕವಿತೆ ನೆನಪಾಗುತ್ತದೆ: “ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ನಾಲ್ಕು ಹನಿಯ ಚೆಲ್ಲಿ, ದಿನದಿನವು ಕಾದು ಬಾಯಾರಿ ಬೆಂದೆ ಬೆಂಗದಿರ ತಾಪದಲ್ಲಿ....! ಇದು ಕೇವಲ ನೆಲದ ನೋವಲ್ಲ ಕೋಟಿ ಕೋಟಿ ಅಸಹಾಯಕ ರೈತರ ಮನದಾಳದ ಆಕ್ರಂದನವೇ ಆಗಿದೆ! ಅಮೆರಿಕೆಯ ನಯನ ಮನೋಹರವಾದ ನಯಾಗರಾ ಜಲಪಾತವನ್ನು ನಾವು ಅನೇಕ ಸಾರಿ ನೋಡಿದ್ದೇವೆ. ವಿಶೇಷವಾಗಿ ಕೆನಡಾದ ಕಡೆಯಿಂದ ನೋಡುವುದು ಪ್ರವಾಸಿಗರಿಗೆ ತುಂಬಾ ಆಕರ್ಷಣೆ. ಆಪಾರ ಜಲರಾಶಿಯಿಂದ ಭೋರ್ಗರೆದು ಧುಮ್ಮಿಕ್ಕುವ ಈ ಜಲಪಾತ ರುದ್ರ ರಮಣೀಯ! ರಭಸವಾಗಿ ಸುರಿಯುವ ಜಲರಾಶಿಯನ್ನು ನೋಡಿದಾಗಲೆಲ್ಲಾ ನಮಗೆ ಅನಿಸಿದ್ದು: “ಅಯ್ಯೋ ದೇವರೇ, ಈ ನೀರನ್ನೆಲ್ಲಾ ನಮ್ಮ ನಾಡಿನ ಬಡರೈತರ ಹೊಲಗಳಿಗೆ ಹರಿಸಬಾರದಿತ್ತೇ! ಸೂಯಜ್ ಕಾಲುವೆ ನಿರ್ಮಿಸಿದಂತೆ ಏನಾದರೂ ಮಾಡಿ ಈ ನೀರನ್ನು ನಮ್ಮ ನಾಡಿಗೆ ಹರಿಯುವಂತೆ ಮಾಡಲು ಎಂಜಿನಿಯರುಗಳಿಂದ ಸಾಧ್ಯವೇ ಎಂಬ ಹುಚ್ಚು ಕಲ್ಪನೆ ನಮ್ಮ ಮನಸ್ಸಿನಲ್ಲಿ ಮೂಡಿದೆ! ಗಂಗಾ ಮತ್ತು ಕಾವೇರಿಯನ್ನುಸೇರಿಸುವ ಬೃಹತ್ ಯೋಜನೆಯೊಂದರ ಪರಿಕಲ್ಪನೆ ವಾಜಪೇಯಿ ಅವರು ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿತ್ತು. ಇದು ಒಂದು ದೃಷ್ಟಿಯಿಂದ ಒಳ್ಳೆಯ ಯೋಜನೆ ಎನಿಸಿದರೂ ಮತ್ತೊಂದು ದೃಷ್ಟಿಯಿಂದ ನೋಡಿದಾಗ ಇದು ಕಾರ್ಯಗತವಾದರೆ ದೇಶದ ಸಾವಿರಾರು ಅಂತಾರಾಜ್ಯ ತಂಟೆ ತಕರಾರುಗಳಿಗೆ ಕಾರಣವಾಗುವುದರಲ್ಲಿ ಸಂಶಯವೇ ಇಲ್ಲ ಎನಿಸುತ್ತದೆ. ಕರ್ನಾಟಕದಿಂದ ತಮಿಳುನಾಡಿಗೆ ಹರಿಯುವ ಇರುವುದೊಂದು ಕಾವೇರಿ ನದಿಯ ವಿಷಯದಲ್ಲಿಯೇ ಎಷ್ಟೊಂದು ವಾದ ವಿವಾದಗಳು; ಪ್ರಾಣ ಹಾನಿಗಳು, ಭಸ್ಮವಾದ ಬಸ್ಸುಗಳಿಗೆ ಲೆಕ್ಕವಿದೆಯೆ! 

ಮಾನವನ ನಾಗರಿಕತೆ ವಿಕಾಸಗೊಂಡದ್ದೇ ಪ್ರಮುಖ ನದಿಗಳ ದಂಡೆಯ ಮೇಲೆ, ಕರ್ನಾಟಕದ ಹಳ್ಳಿಗಳಂತೂ ಇರುವುದು ಕೆರೆಗಳ ಬಳಿಯಲ್ಲಿಯೇ. ಬಹುತೇಕ ಹಳ್ಳಿಗಳ ಹೆಸರುಗಳು ಕೊನೆಗೊಳ್ಳುವುದೇ 'ಕೆರೆ'ಯಿಂದ. ಉದಾಹರಣೆಗೆ ಸಿರಿಗೆರೆ, ಹೊಳಲ್ಕೆರೆ, ಕಬ್ಬಿಗೆರೆ, ಮಳಲ್ಕೆರೆ. ವಿಜಯನಗರದ ಪ್ರೌಢ ಪ್ರತಾಪದೇವರಾಯನ ಮಂತ್ರಿ ಲಕ್ಷ್ಮೀಧರ ಅಮಾತ್ಯನ ಕಾಲದ ಒಂದು ಶಾಸನ (ಕ್ರಿ.ಶ 1411)ದ ಮೊದಲ ಎರಡು ಸಾಲುಗಳು ಹೀಗಿವೆ: ಕೆರೆಯಂ ಕಟ್ಟಿಸು ಬಾವಿಯಂ ಸವೆಸು ದೇವಾಗಾರಮಂ ಮಾಡಿಸು, ಅಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು ಮಿತ್ರರ್ಗ ಇಂಬುಗೆಯ್ ". ಹಾಲುಣಿಸುವಾಗ ತಾಯಿ ಮಗುವಿನ ಕಿವಿಯಲ್ಲಿ ಕೆರೆ ಬಾವಿಗಳನ್ನು ಕಟ್ಟಿಸು, ದೇವಾಲಯಗಳನ್ನು ನಿರ್ಮಿಸು, ಆಪತ್ತಿನಲ್ಲಿ ಸಿಲುಕಿದ ಅನಾಥರನ್ನು ರಕ್ಷಿಸು, ಸ್ನೇಹಿತರಿಗೆ ನೆರವಾಗು ಎಂದು ಹೇಳಿ ಮಾನವೀಯತೆಯ, ದೈವಭಕ್ತಿಯ ಓಂಕಾರವನ್ನು ಬರೆಯುತ್ತಿದ್ದಳು. ಈಗ ಕಾಲ ಬದಲಾವಣೆಯಾಗಿದೆ. ಸಾಫ್ಟ್ ವೇರ್ ಎಂಜಿನಿಯರ್ ಆಗು, ಡಾಕ್ಟರಾಗು, ಅಮೆರಿಕೆಗೆ ಹೋಗು” ಎಂಬುದು ಇಂದಿನ ತಾಯಂದಿರ ಹಾರೈಕೆ. ದೇವಾಲಯ ಮತ್ತು ಕೆರೆಗಳನ್ನು ಕಟ್ಟಿಸುವುದು ಪುಣ್ಯ ಕಾರ್ಯ ಎಂಬ ನಂಬಿಕೆ ಜನರಲ್ಲಿತ್ತು. ಈಗಲೂ ದೇವಾಲಯಗಳನ್ನು ಕಟ್ಟಿಸುವುದು ಮುಂದುವರಿದಿದೆ. ಹಳೆಯ ದೇವಾಲಯಗಳನ್ನು ಪುನರುಜ್ಜಿವನಗೊಳಿಸುವುದು, ಹೊಸ ಹೊಸ ದೇವಾಲಯಗಳನ್ನು ನಿರ್ಮಿಸುವುದು ನಡೆದೇ ಇದೆ. ಇದಕ್ಕಾಗಿ ನೂರಾರು ಕೋಟಿ ರೂ. ಗಳನ್ನು ವೆಚ್ಚ ಮಾಡಲು ಜನರು ಹಿಂದೆ ಮುಂದೆ ನೋಡುವುದಿಲ್ಲ, ಆದರೆ ದೇವಸ್ಥಾನಗಳನ್ನು ಕಟ್ಟುವಲ್ಲಿ ಇರುವ ಧಾರ್ಮಿಕ ಶ್ರದ್ಧೆ ಕೆರೆಗಳ ನಿರ್ಮಾಣದಲ್ಲಿ ಇಲ್ಲ, ಕೆರೆಗಳನ್ನು ಕಟ್ಟಿಸುವುದಿರಲಿ, ಹೂಳು ತೆಗೆಸುವುದಿರಲಿ, ಅವುಗಳನ್ನೇ ಒತ್ತುವರಿ ಮಾಡಿ ನುಂಗಿ ನೀರು ಕುಡಿದಿದ್ದಾರೆ. ಇದ್ದ ಕೆರೆಗಳೂ ಹೂಳು ತುಂಬಿರುವುದನ್ನು ನೋಡಿದರೆ ನಮ್ಮ ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯೇ ಹೂಳು ತುಂಬಿದೆ ಎಂದು ಹೇಳಬೇಕೆನಿಸುತ್ತದೆ. 

ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ನದಿಯ ನೀರನ್ನು ಕೆರೆಗಳಿಗೆ ತುಂಬಿಸುವ ನಮ್ಮ ಅಭಿಯಾನಕ್ಕೆ ಕಳೆದ 20 ವರ್ಷಗಳಿಂದ ಎಲ್ಲ ಸರಕಾರಗಳೂ ಸ್ಪಂದಿಸಿ ಕೊಟ್ಯಂತರ ರೂ. ವೆಚ್ಚದ ಅನೇಕ ಏತ ನೀರಾವರಿ ಯೋಜನೆಗಳನ್ನು ಮುಂಜೂರು ಮಾಡಿ ಪ್ರೋತ್ಸಾಹಿಸಿವೆ. ದಾವಣಗೆರೆ, ಜಗಳೂರು, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸುಮಾರು 500 ಕೆರೆಗಳಿಗೆ 6 ಟಿ.ಎಂ.ಸಿಗೂ ಹೆಚ್ಚು ನದಿಯ ನೀರು ಹರಿಯುವಂತಾಗಿದೆ. ನಮ್ಮ ಈ ಅಭಿಯಾನದ ಅಡಿಯಲ್ಲಿಯೇ ಸೇರಿದ ಯೋಜನೆಯೆಂದರೆ ಹರಿಹರದಲ್ಲಿ ಹರಿಯುತ್ತಿರುವ ತುಂಗಭದ್ರೆಯಿಂದ ಸಿರಿಗೆರೆಯ ಸುತ್ತಮುತ್ತ ಇರುವ 43 ಕೆರೆಗಳನ್ನು ತುಂಬಿಸುವ ಭರಮಸಾಗರ ಏತ ನೀರಾವರಿ ಯೋಜನೆ. ಈ ಯೋಜನೆ ಕಾರ್ಯರೂಪಕ್ಕೆ ಬರಲು ಅಡ್ಡಿಯಾಗಿದ್ದ ಕೋರ್ಟ್ ಕೇಸುಗಳನ್ನು ರೈತ ಪ್ರಮುಖರು ರಾಜಿ ಮಾಡಿಸಿದ್ದಾರೆ. ಹೊಸದಾಗಿ ಕಟ್ಟಿದ ಸುಂದರವಾದ ಮನೆಗಳನ್ನೇ ಅವುಗಳ ಮಾಲೀಕರು ಬಿಟ್ಟುಕೊಟ್ಟಿದ್ದಾರೆ. ಸರಕಾರದಿಂದ ಬೇರೆಡೆ ಮನೆ ಕಟ್ಟಿಕೊಳ್ಳಲು ಪರಿಹಾರವನ್ನು ನೀಡಿದ್ದರೂ ವಾಸವಾಗಿದ್ದ ಅವರ ಮನೆಗಳು ರಾತ್ರೋ ರಾತ್ರಿ ನೆಲಸಮ ಆಗಿದ್ದನ್ನು ನೋಡಿ ಯಾರಿಗಾದರೂ “ಅಯ್ಯೋ ಪಾಪ! ಎನಿಸದಿರದು. 

ಈ ಯೋಜನೆಯ ಮೊದಲ ಹಂತ ಪೂರ್ಣಗೊಳ್ಳುತ್ತಲಿದ್ದು ನಾಳೆ(ಸೆಪ್ಟೆಂಬರ್ 24) ನಡೆಯಲಿರುವ ನಮ್ಮ ಲಿಂಗೈಕ್ಯ ಗುರುವರ್ಯರ ಶ್ರದ್ಧಾಂಜಲಿಯ ದಿನದಂದು ಹರಿಹರದಿಂದ ತುಂಗಭದ್ರೆಯ ನೀರು ಭರಮಸಾಗರ ಕೆರೆಗೆ ಹರಿಯುವ ನಿರೀಕ್ಷೆ ಇದೆ. ಐದಾರು ದಶಕಗಳಿಂದ ಬರಿದಾಗಿ ಬಾಯಾರಿದ್ದ ಸುಮಾರು ಒಂದು ಸಾವಿರ ಎಕರೆ ವಿಸ್ತೀರ್ಣದ ಭರಮಸಾಗರ ಕೆರೆ ಮೈದುಂಬಿ ರೈತರ ಮುಖದಲ್ಲಿ ಮಂದಹಾಸ ಮೂಡಲಿದೆ! ದ.ರಾ. ಬೇಂದ್ರೆಯವರ ಕವಿತೆ ಈ ಭಾಗದ ಮಣ್ಣಿನ ಮಕ್ಕಳ ಹೃದಯದಲ್ಲಿ ಮಿಡಿಯವಂತಾಗಲಿದೆ: 

ಇಳಿದು ಬಾ ತಾಯೆ ಇಳಿದು ಬಾ 
ಹರನ ಜಡೆಯಿಂದ ಹರಿಯ ಅಡಿಯಿಂದ 
ಋಷಿಯ ತೊಡೆಯಿಂದ ನುಸುಳಿ ಬಾ 
ದೇವ ದೇವರನು ತಣಿಸಿ ಬಾ 
ಚರಾಚರಗಳಿಗೆ ಉಣಿಸಿ ಬಾ 
ಇಳಿದು ಬಾ ತಾಯಿ ಇಳಿದು ಬಾ!

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.23-9-2021
ಬಿಸಿಲು ಬೆಳದಿಂಗಳು