ದೇಗುಲದ ಶಿಲಾಬಾಲಿಕೆಯರು ಧರೆಗಿಳಿದು ನರ್ತಿಸಿದಾಗ !

ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೆ,
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು
ಗಂಟೆಗಳ ದನಿಯಿಲ್ಲ ಜಾಗಟೆಗಳಿಲ್ಲಿಲ್ಲ
ಕರ್ಪೂರದಾರತಿಯ ಜ್ಯೋತಿಯಿಲ್ಲ!
ಭಗವಂತನಾನಂದ ರೂಪುಗೊಂಡಿಹುದಿಲ್ಲಿ
ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ!
ಈ ಕವಿತೆಯನ್ನು ಸೋಮನಾಥಪುರದ ದೇವಾಲಯವನ್ನು ಕುರಿತು ಕುವೆಂಪುರವರು 1928 ರಲ್ಲಿ ರಚಿಸಿದರು. ಪರಕೀಯರ ಧಾಳಿಯಿಂದ ಈ ದೇವಾಲಯ ಭಗ್ನವಾಗಿರುವುದರಿಂದ ಅಲ್ಲಿ ಯಾವ ಪೂಜೆಯೂ ಇಲ್ಲ, ಯಾವ ಪೂಜಾರಿ ಪುರೋಹಿತರೂ ಇಲ್ಲ. ಗಂಟೆಗಳ ದನಿಯಾಗಲೀ, ಜಾಗಟೆಗಳ ಸದ್ದಾಗಲೀ, ಕರ್ಪೂರದಾರತಿಯಾಗಲೀ ಇಲ್ಲ, ಆದರೂ ಏನೋ ನಷ್ಟವಾಯಿತು ಎಂಬ ವಿಷಾದಭಾವವನ್ನು ತಾಳದೆ ತನ್ನ ಶಿಲ್ಪಕಲಾ ವೈಭವದಿಂದ ಭಗವಂತನ ಆನಂದ ರೂಪುಗೊಂಡಂತಿರುವ ಈ ದೇವಸ್ಥಾನಕ್ಕೆ ಕುವೆಂಪು ಯಾತ್ರಿಕರನ್ನು ಕರೆಯುತ್ತಾರೆ ಎಂದು ಜಿ.ಎಸ್. ಶಿವರುದ್ರಪ್ಪನವರು ಬರೆಯುತ್ತಾರೆ. ನಮ್ಮ ದೃಷ್ಟಿಯಲ್ಲಿ ಕುವೆಂಪುರವರ ಈ ಕರೆಗೆ ಒಬ್ಬ ಪ್ರವಾಸಿಗ ಹೋಗಬಲ್ಲನೇ ಹೊರತು ಯಾತ್ರಿಕ ಹೋಗಲಾರ. ಪೂಜೆಗೊಳ್ಳದ ದೇವಾಲಯಗಳಿಗೆ ಹೋಗುವವರು ಯಾತ್ರಿಕರಲ್ಲ; ಪ್ರವಾಸಿಗರು, ಯಾತ್ರಿಕನೇ ಬೇರೆ, ಪ್ರವಾಸಿಗನೇ ಬೇರೆ. ದೋಣಿಯಲ್ಲಿ ಕುಳಿತು ವಿಹರಿಸುವ ವಿದೇಶೀ ಪ್ರವಾಸಿಗನಿಗೆ ಗಂಗೆಯು ಒಂದು ಸುಂದರವಾದ ನದಿಯಾಗಿ ಕಾಣಬಲ್ಲಳೇ ಹೊರತು “ಗಂಗಾ ಮೈಯಾ ಕೀ ಜಯ್ ಹೋ” ಎಂದು ಆ ದೋಣಿಯನ್ನು ನಡೆಸುವ ಬಡ ಭಾರತೀಯ ನಾವಿಕನ ಕಣ್ಣುಗಳಿಗೆ ಗೋಚರಿಸುವಂತೆ ಗಂಗಾ ಮಾತೆಯಾಗಿ ಕಾಣಿಸಲಾರಳು. ಪ್ರವಾಸಿಗನಿಗೆ ಗಂಗಾನದಿಯ ನೀರು ಕಲುಷಿತವಾಗಿ ಕಾಣಬಹುದು. ಆದರೆ ಯಾತ್ರಿಕನಿಗೆ ಪವಿತ್ರವಾದ ಗಂಗಾಜಲವಾಗಿ ಕಾಣಿಸುತ್ತದೆ.
ಭಕ್ತಿ ಸಂಪನ್ನನಾದ ಯಾತ್ರಿಕನಿಗೆ ಗಂಗೆಯಾಗಲೀ, ತುಂಗೆಯಾಗಲೀ, ಕಾವೇರಿಯಾಗಲೀ, ಕೃಷ್ಣೆಯಾಗಲೀ ಅಥವಾ ಇನ್ನಾವುದೇ ನದಿಯ ನೀರಾಗಲೀ ಪವಿತ್ರ ಗಂಗಾಜಲವಾಗಿಯೇ ಗೋಚರಿಸುತ್ತದೆ. ಯಾರಾದರೂ ಮೃತ್ಯು ಶಯ್ಯೆಯಲ್ಲಿದ್ದರೆ ಬೇಗನೆ “ಗಂಗಾಜಲ” ತನ್ನಿ ಎನ್ನುತ್ತಾರೆ. ಆಗ ಕಾಶಿಗೆ ಓಡಿ ಹೋಗಿ ಯಾರೂ ಗಂಗೆಯ ಜಲವನ್ನು ತರುವುದಿಲ್ಲ. ಬಿಂದಿಗೆಯಲ್ಲಿರುವ ನೀರಾದರೂ ಸರಿಯೇ ಅದನ್ನೇ “ಗಂಗಾಜಲ”ವೆಂದು ಭಾವಿಸಿ ಕೊನೆಯುಸಿರೆಳೆಯುವವರಿಗೆ ಬೇಗನೆ ಕುಡಿಸುತ್ತಾರೆ. ಅದರಿಂದ ಅವರಿಗೆ ಸದ್ಗತಿ ದೊರೆಯುತ್ತದೆ ಎಂಬ ಬಲವಾದ ನಂಬುಗೆ.
ಪೂಜೆಗೊಳ್ಳುವ ದೇವಾಲಯವು ಬಾಹ್ಯ ನೋಟದಲ್ಲಿ ಶಿಲ್ಪಕಲಾ ಸೌಂದರ್ಯದಿಂದ ಕೂಡಿರದಿದ್ದರೂ, ಅಂತರಂಗದಲ್ಲಿ ಭಕ್ತಿಭಾವ ಸಂಪನ್ನರಾಗಿರುವವರು ಆ ದೇಗುಲದಲ್ಲಿರುವ ದೇವರ ಮೂರ್ತಿಯನ್ನು ಭಕ್ತಿಭಾವಗಳಿಂದ ಆರಾಧಿಸುತ್ತಾರೆ. ಹಾಳು ದೇಗುಲದ ಶಿಲ್ಪಕಲಾ ವೈಭವವನ್ನು ನೋಡುವ ಪ್ರವಾಸಿಗನೂ ಸಹ ದೇವರ ಮೇಲೆ ನಂಬಿಕೆ ಇಲ್ಲದ ನಾಸ್ತಿಕನಾಗಿದ್ದರೂ “ಸತ್ಯಂ ಶಿವಂ ಸುಂದರಮ್” ಎಂಬ ತಾತ್ವಿಕ ದೃಷ್ಟಿಯಿಂದ ಯಾತ್ರಿಕನೂ ಆಗಬಲ್ಲ. ಶಿಲ್ಪಿಯ ಕರಕುಶಲತೆಯಿಂದ ಮೂಡಿಬಂದ ಶಿಲ್ಪಕಲೆಯ ಹಿಂದಿರುವ ಸತ್ಯ-ಶಿವ-ಸೌಂದರ್ಯವನ್ನು ಆಸ್ವಾದಿಸಬಲ್ಲ!
ಪ್ರವಾಸಿಗ ಪ್ರಕೃತಿಯ ಬಾಹ್ಯಸೌಂದರ್ಯದ ಉಪಾಸಕ, ಯಾತ್ರಿಕ ಈ ಪ್ರಕೃತಿಯ ಆಚೆ ಇರುವ ದೈವೀಸೌಂದರ್ಯದ ಉಪಾಸಕ, ಪೂಜೆಗೊಳ್ಳದ ಹಾಳು ದೇಗುಲದ ಶಿಲ್ಪಕಲಾವೈಭವವನ್ನು ನೋಡಿ ಸಂತಸ ಪಡುವವನು ಸೌಂದರ್ಯೋಪಾಸಕನಾದ ಪ್ರವಾಸಿಗ. ಅಂದಮಾತ್ರಕ್ಕೆ ಭಕ್ತಿಸಂಪನ್ನನಾದ ಯಾತ್ರಿಕನು ಅಂತಹ ಹಾಳು ದೇಗುಲಗಳಿಗೆ ಹೋಗಿ ಅಲ್ಲಿಯ ಶಿಲ್ಪಕಲಾವೈಭವವನ್ನು ಸವಿಯುವುದಿಲ್ಲ ಎಂದರ್ಥವಲ್ಲ. ಆಗ ಅವನು ಯಾತ್ರಿಕನಾಗಿರುವುದಿಲ್ಲ, ಪ್ರವಾಸಿಗನಾಗಿರುತ್ತಾನೆ. ಅಲ್ಲಿಗೆ ಹೋದಾಗ ಅವನಿಗೆ ಭಕ್ತಿಯ ಕಡಲುಕ್ಕಿ ಹರಿಯುವುದಕ್ಕಿಂತ ಅಲ್ಲಿಯ ಭಗ್ನಾವಶೇಷಗಳನ್ನು ನೋಡಿ ಗತಕಾಲದಲ್ಲಿ ನಡೆದ ಮತೀಯ ಸಂಘರ್ಷಗಳನ್ನು ನೆನೆಸಿಕೊಂಡು ವಿಷಾದ ಮತ್ತು ಆಕ್ರೋಶದ ಕಡಲು ಭೋರ್ಗರೆಯುತ್ತದೆ.
ಪ್ರಸಿದ್ಧವಾದ ಪ್ರಾಚೀನ ಕಾಲದ ದೇವಾಲಯಗಳ ನವರಂಗಮಂಟಪದಲ್ಲಿ ನಡೆಯುತ್ತಿದ್ದ ನೃತ್ಯವು ದೇವರ ಪೂಜೆಯ ಭಾಗವೇ ಆಗಿತ್ತು. ಅದು ಜನರ ಮನರಂಜನೆಗಾಗಿ ಏರ್ಪಡಿಸಿದ ಕಾರ್ಯಕ್ರಮವಾಗಿರುತ್ತಿರಲಿಲ್ಲ. ಬೇಲೂರು ಚೆನ್ನಕೇಶವ ದೇವಾಲಯದಲ್ಲಿ ಹೊಯ್ಸಳರ ರಾಜ ವಿಷ್ಣುವರ್ಧನನ ರಾಣಿ ಶಾಂತಲೆಯು ನಾಟ್ಯರಾಣಿಯಾಗಿ ಮಾಡುತ್ತಿದ್ದ ನೃತ್ಯವು ದೇವರ ಸೇವೆಯಾಗಿತ್ತು. ಶಿಲ್ಪಕಲಾವೈಭವದಿಂದ ಕಂಗೊಳಿಸುವ ಪೂಜೆಗೊಳ್ಳದ ಸೋಮನಾಥ ದೇವಾಲಯವನ್ನಾಗಲೀ, ಗಂಟೆ ಜಾಗಟೆಗಳ ನಿನಾದದಲ್ಲಿ ಪೂಜೆಗೊಳ್ಳುವ ಹಂಪಿ, ಹಳೇಬೀಡು, ಬೇಲೂರು ಮೊದಲಾದ ದೇವಾಲಯಗಳನ್ನಾಗಲೀ ಸಂದರ್ಶಿಸುವವರಲ್ಲಿ ಯಾತ್ರಿಕರು ಮತ್ತು ಪ್ರವಾಸಿಗರಲ್ಲದೆ ಕಲಾವಿದರೂ ಇರುತ್ತಾರೆ. ಅಂಥವರಿಗೆ ಪುರಾತತ್ವ ಇಲಾಖೆಯ (Archaeology) ನಿಯಮಾವಳಿಗಳು “ಕಲೆಯ ಬಲೆ”ಯಾಗದೆ ಅವರ ಕಲೆಗೇ ಬಲೆಯನ್ನು ಬೀಸಿ ಹಿಡಿದಂತಾಗಿದೆ. ಅಂತಹ ಒಂದು ವಿಷಾದನೀಯ ಘಟನೆಯನ್ನು ಕಳೆದ ವಾರ ಮಥುರಾ ಬೃಂದಾವನದಿಂದ ನಮ್ಮ ಮಠಕ್ಕೆ ಬಂದಿದ್ದ ಯುವಕಲಾವಿದೆಯೊಬ್ಬಳು ಆಕ್ರೋಶ, ಆವೇಶ ಮತ್ತು ದುಃಖಭರಿತಳಾಗಿ ನಿವೇದಿಸಿಕೊಂಡಳು.
ಒಡಿಸ್ಸಿ ನೃತ್ಯದಲ್ಲಿ ಪರಿಣತಿಯನ್ನು ಪಡೆದ ಆ ಯುವಕಲಾವಿದೆಯ ಹೆಸರು ವಿಷ್ಣುಪ್ರಿಯಾ ಗೋಸ್ವಾಮಿ. ನಾವು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸಂಸ್ಕೃತ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಡಾಕ್ಟರೇಟ್ ಪದವಿ ಪಡೆಯಲು ಸಂಶೋಧನೆಯಲ್ಲಿ ನಿರತರಾಗಿದ್ದಾಗ (1967-76) ಪಕ್ಕದ ದರ್ಶನಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ಕೈಗೊಂಡಿದ್ದವರು ನಮ್ಮ ಆತ್ಮೀಯ ಮಿತ್ರರಾದ ಶ್ರೀವತ್ಸ ಗೋಸ್ವಾಮಿಯವರು. ಅವರು ಈಗ ಬೃಂದಾವನದಲ್ಲಿ ಚೈತನ್ಯ ಮಹಾಪ್ರಭು ಸಂಪ್ರದಾಯದ ಆಚಾರ್ಯರಾಗಿದ್ದಾರೆ. ವೈಷ್ಣವ ಸಂಪ್ರದಾಯದ ಪ್ರಕಾರ ಗ್ರಹಸ್ಥರಾದ ಅವರ ಮೊಮ್ಮಗಳೇ ವಿಷ್ಣುಪ್ರಿಯಾ. ಬಾಲ್ಯದಿಂದಲೂ ಆಕೆಯ ಪ್ರಬುದ್ಧ ಅಭಿನಯವನ್ನು ನಾವು ಗಮನಿಸಿದ್ದು ಕಳೆದ ವಾರ ನಡೆದ ನಮ್ಮ ಮಠದ ವಾರ್ಷಿಕ ಸಮಾರಂಭವಾದ “ತರಳಬಾಳು ಹುಣ್ಣಿಮೆ ಮಹೋತ್ಸವ”ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನರ್ತಿಸಲು ಬರುವಂತೆ ಮಠದಿಂದ ಆಹ್ವಾನ ಹೋದಾಗ ಆಕೆಯು ತನ್ನ ತಂದೆ ರಾಜು ಗೋಸ್ವಾಮಿ, ತಾಯಿ ಶಿಲ್ಪಿ ಗೋಸ್ವಾಮಿ ಮತ್ತು ತಂಗಿ ಜಯತಿ ಗೋಸ್ವಾಮಿ ಜೊತೆಗೆ ಬೃಂದಾವನದಿಂದ ಸಿರಿಗೆರೆಗೆ ಬಂದಿದ್ದಳು. ತರಳಬಾಳು ಹುಣ್ಣಿಮೆಯ ಬೆಳದಿಂಗಳಲ್ಲಿ ಶಿವನನ್ನು ಕುರಿತ “ಅಷ್ಟಶಂಭು” ಎಂಬ ಪ್ರಸಿದ್ದ ಒಡಿಸ್ಸಿ ನೃತ್ಯವನ್ನು ಪ್ರಬುದ್ಧವಾಗಿ ಪ್ರಸ್ತುತಪಡಿಸಿ ಸಹಸ್ರಾರು ಭಕ್ತಾದಿಗಳ ಮೆಚ್ಚುಗೆಯನ್ನು ಗಳಿಸಿದಳು.
ಲಿಂಕ್: http://math.taralabalu.in/news.php?tp=650
ಮಾರನೆಯ ದಿನ ಈ ಯುವಕಲಾವಿದೆಯನ್ನು ಆಕೆಯ ತಂದೆತಾಯಿಗಳೊಂದಿಗೆ ವಿಶ್ವವಿಖ್ಯಾತ ಹಂಪಿ, ಹಳೇಬೀಡು ಮತ್ತು ಬೇಲೂರು ದೇವಾಲಯಗಳಿಗೆ ಕಳುಹಿಸಿದಾಗ ಉಂಟಾದ ಕಹಿ ಅನುಭವಗಳನ್ನು ಸಂಜೆ ವೈಯಕ್ತಿಕವಾಗಿ ನಿವೇದಿಸಿಕೊಂಡದ್ದಲ್ಲದೆ ಬೃಂದಾವನಕ್ಕೆ ಹಿಂದಿರುಗಿದ ಮೇಲೆ ನಡೆದ ಘಟನೆಗಳನ್ನು ವಿವರಿಸಿ ಸುದೀರ್ಘವಾದ ಮಿಂಚೋಲೆಯನ್ನು ನಮಗೆ ಬರೆದಿರುತ್ತಾಳೆ. ಅದರ ಸಾರಾಂಶ ಹೀಗಿದೆ:
“ಫೆಬ್ರವರಿ 17ರಂದು ಗುರುವಾರ (ಅದು ನನ್ನ ಜನ್ಮದಿನವೂ ಹೌದು) ಹಂಪಿಯ ವಿಠ್ಠಲ ದೇವಾಲಯವನ್ನು ತಲುಪಿದಾಗ ಮಧ್ಯಾಹ್ನದ ಸುಡುಬಿಸಿಲು. ನಾನು ಮತ್ತು ನನ್ನ ತಂಗಿ ಜಯತಿ ನೋಡಲು ತುಂಬಾ ಬೆಳ್ಳಗಿರುವುದರಿಂದ ಅಲ್ಲಿದ್ದವರೆಲ್ಲರೂ ನಮ್ಮನ್ನು ದುರುಗುಟ್ಟಿಕೊಂಡು ನೋಡತೊಡಗಿದರು. ನಾವೇನು ವಿದೇಶೀಯರೋ ಅಥವಾ ಬಾರತೀಯರೋ ಎಂದು ಪರಿಶೀಲಿಸಲು ಅಲ್ಲಿಯ ಕಾವಲುಗಾರರು ನಮ್ಮ ಆಧಾರ್ ಕಾರ್ಡುಗಳನ್ನು ಕೇಳಿದರು. ಇದೇನೂ ನಮಗೆ ಹೊಸತಲ್ಲ, ಪುರಿಯ ಜಗನ್ನಾಥ ದೇವಾಲಯಕ್ಕೆ ಆಗಾಗ್ಗೆ ಹೋದಾಗಲೆಲ್ಲಾ ಇದೇ ರೀತಿ ನಮ್ಮನ್ನು ದೇವಾಲಯದ ಮುಖ್ಯದ್ವಾರದಲ್ಲಿ ತಡೆದು ನಿಲ್ಲಿಸಿ ತಪಾಸಣೆ ಮಾಡುತ್ತಿದ್ದರು. ನಮ್ಮ ಐಡಿ ಕಾರ್ಡುಗಳನ್ನು ತೋರಿಸಿ ಮುಂದೆ ಸಾಗಿದೆವು. ನಂತರ ಕೆಲವೇ ಕ್ಷಣಗಳಲ್ಲಿ ಪೋಲೀಸರು ಧಾವಿಸಿ ನನ್ನನ್ನು ತಡೆದು ನಿಲ್ಲಿಸಿ ನಾನು ಧರಿಸಿದ ಉಡುಗೆ ಕಾನೂನು ಬಾಹಿರ ಎಂದು ಆಕ್ಷೇಪಿಸಿದರು. ಆ ದಿನ ನಾನು ಧರಿಸಿದ್ದು ಒರಿಸ್ಸಾದಲ್ಲಿ ಸಾಮಾನ್ಯವಾಗಿ ಎಲ್ಲ ಯುವತಿಯರೂ ಧರಿಸುವ ಸಾಧಾರಣ ಸೀರೆ ಮತ್ತು ಬೆಳ್ಳಿಯ ಬಳೆಗಳೇ ಹೊರತು ಒಡಿಸ್ಸಿ ನೃತ್ಯದ ಉಡುಗೆ ತೊಡಿಗೆಗಳಲ್ಲ. ಇದು ಒರಿಸ್ಸಾದಲ್ಲಿ ಸಾಂಪ್ರದಾಯಿಕವಾಗಿ ಧರಿಸುವ ಸೀರೆ, ನೃತ್ಯಮಾಡುವಾಗ ಧರಿಸುವ ಉಡುಗೆಯಲ್ಲ, ಇದರಲ್ಲಿ ತಪ್ಪೇನಿದೆ? ಎಂದು ನಾನು ಪ್ರಶ್ನಿಸಿದಾಗ ಕೆಲ ಹೊತ್ತು ವಾದ ವಿವಾದ ನಡೆದು ಮುಂದೆ ಹೋಗಲು ಬಿಟ್ಟರು.
ದೇವಾಲಯದ ಕೆತ್ತನೆಯ ಕೆಲಸ ಮತ್ತು ನಾಟ್ಯದ ವಿವಿಧ ಭಂಗಿಗಳಲ್ಲಿರುವ ಶಿಲಾಬಾಲಿಕೆಯರನ್ನು ನೋಡಿ ನರ್ತಕಿಯಾದ ನಾನು ಅದೇ ಭಂಗಿಯಲ್ಲಿ ನಿಂತಾಗ ನನ್ನ ತಂದೆ ಫೋಟೋ ಕ್ಲಿಕ್ಕಿಸಿದರು. ಕೂಡಲೇ ಕಾವಲುಗಾರನು ಶಿಳ್ಳೆ ಹೊಡೆಯುತ್ತಾ ಓಡೋಡಿ ಬಂದು ಒರಟಾಗಿ ಮಾತನಾಡಿ ತೆಗೆದುಕೊಂಡ ಫೋಟೋಗಳನ್ನು ಅಳಿಸಬೇಕೆಂದು ಒತ್ತಾಯಿಸತೊಡಗಿದನು. ಅದಕ್ಕೆ ಕಾರಣವೇನೆಂದು ಕೇಳಿದಾಗ “ಇಲ್ಲಿ ವಿವಾಹ ಪೂರ್ವದ ಭಾವಚಿತ್ರಗಳನ್ನು ತೆಗೆಯುವಂತಿಲ್ಲ” ಎಂದು ಜೋರು ಮಾಡಿದನು. ನಾನು ಉಟ್ಟಿರುವುದು ಸಾಧಾರಣ ಸೀರೆ, ಮಧ್ಯಾಹ್ನದ ಬಿಸಿಲಲ್ಲಿ ಮುಖ ಬೆವರುತ್ತಿದೆ, ತಲೆಗೂದಲು ಕೆದರಿದೆ, ಇದು ಹೇಗೆ ವಿವಾಹ ಪೂರ್ವದ ಚಿತ್ರವಾಗಲು ಸಾಧ್ಯ? ಹಾಗಾದರೆ ನನ್ನೊಂದಿಗೆ ಬಂದಿರುವ ವರ ಎಲ್ಲಿದ್ದಾನೆ? ತೋರಿಸಿ ಎಂದು ಜೋರು ಮಾಡಿದೆ. ನನ್ನ ತಂದೆ ಭಾವಚಿತ್ರಗಳನ್ನು ಅಳಿಸಲು ನಿರಾಕರಿಸಿದರು. ಅಲ್ಲಿಯ ಕಾವಲುಗಾರರು ಮತ್ತು ಕಸ ಗುಡಿಸುವ ಕೆಲಸಗಾರರು ಗುಂಪುಗೂಡಿ ಕನ್ನಡದಲ್ಲಿ ನಮ್ಮ ಬಗ್ಗೆ ಏನೇನೋ ಮಾತನಾಡಿಕೊಳ್ಳುತ್ತಾ ನಮ್ಮನ್ನು ಅಂತಾರಾಷ್ಟ್ರೀಯ ಭಯೋತ್ಪಾದಕರಂತೆ ಕೆಕ್ಕರಿಸಿ ನೋಡತೊಡಗಿದರು. ನಂತರ ಅವರೆಲ್ಲರೂ ನನ್ನನ್ನು ಮತ್ತು ನನ್ನ ತಾಯಿಯನ್ನು ಸುತ್ತುವರೆದು ಮತ್ತೆ ಪ್ರಶ್ನಿಸತೊಡಗಿದಾಗ “ನಾನು ಸಿರಿಗೆರೆಯ ಮಠದಲ್ಲಿ ನಿನ್ನೆ ರಾತ್ರಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಒಡಿಸ್ಸಿ ನೃತ್ಯ ಮಾಡಿದ್ದು ಆಗ ನನ್ನ ಪಾದಗಳಿಗೆ ಹಚ್ಚಿಕೊಂಡಿದ್ದ ಅಲ್ತಾ, ಅದನ್ನು ಇನ್ನೂ ಅಳಿಸಿಕೊಂಡಿಲ್ಲ” ಎಂದು ಉತ್ತರಿಸಿದ ಮೇಲೆ ಹತ್ತು ನಿಮಿಷಗಳ ಕಾಲ ಚರ್ಚೆ ನಡೆದು ನಂತರ ನಾನೊಬ್ಬಳು ಯುವನರ್ತಕಿ ಎಂದು ಒಪ್ಪಿಕೊಂಡರು. ಆದರೂ “ನೃತ್ಯ ಭಂಗಿಯಲ್ಲಿ ಫೋಟೋ ತೆಗೆಯುವಂತಿಲ್ಲ ಸುಮ್ಮನೆ ನಗುಮುಖದಲ್ಲಿ ನಿಂತುಕೊಂಡು ಫೋಟೋ ತೆಗೆಸಿಕೊಳ್ಳಬಹುದು” ಎಂದು ಆಜ್ಞಾಪಿಸಿದರು. ಹೀಗೆ ಪೋಲೀಸರು ನಮಗೆ ವಿನಾ ಕಾರಣ ಕಿರುಕುಳ ಕೊಡುತ್ತಿರುವಾಗ ಅಲ್ಲಿದ್ದವರು ನಾವೇನೋ ಅಕ್ರಮ ಎಸಗಿರಬೇಕೆಂದು ನಮ್ಮನ್ನು ದುರುಗುಟ್ಟಿಕೊಂಡು ನೋಡುತ್ತಿದ್ದರು. ಇದರಿಂದ ಬೇಸತ್ತ ನಾನು ವಿಠಲ ದೇವಸ್ಥಾನದಿಂದ ನಿರ್ಗಮಿಸಿ ಹಂಪಿಯಲ್ಲಿ ಉಳಿದ ಸ್ಥಳಗಳನ್ನು ನೋಡುವಾಗ ನನಗೆ ಯಾವ ಉತ್ಸಾಹವೂ ಇರಲಿಲ್ಲ.
ಮಾರನೆಯ ದಿನ ತಮ್ಮ ಮಠದ ಶಿಷ್ಯೆ ಭರತನಾಟ್ಯದ ಗೆಳತಿ ಪೃಥ್ವಿಯೊಡನೆ ಬೇಲೂರು, ಹಳೇಬೀಡು ದೇವಾಲಯಗಳನ್ನು ನೋಡಲು ತಾವು ಕಳುಹಿಸಿಕೊಟ್ಟಾಗಲೂ ಇದೇ ಕತೆ. ಪೋಲೀಸರ ಕಣ್ಣು ತಪ್ಪಿಸಿ ಫೋಟೋ ತೆಗೆಸಿಕೊಳ್ಳುವಾಗ ನಾವೇನೋ ಕಳವು ಮಾಡುತ್ತಿದ್ದೇವೆಂಬ ಅಪರಾಧಿ ಪ್ರಜ್ಞೆ ನಮ್ಮನ್ನು ಕಾಡಿಸುತ್ತಿತ್ತು. ಕೋನಾರ್ಕ್ ಮತ್ತು ಮುಕ್ತೇಶ್ವರ ದೇವಾಲಯಗಳಲ್ಲಿ ಇದಾವ ನಿರ್ಬಂಧವೂ ಇಲ್ಲ. “ಬೇಲೂರು ದೇವಾಲಯದ ಶಿಲಾಬಾಲಿಕೆಯರ ಕೆಳಗೆ ನಿಂತು ಅದೇ ಭಂಗಿಯಲ್ಲಿ ಭಾವಚಿತ್ರ ತೆಗೆಸಿಕೋ” ಎಂದು ತಾವು ಸೂಚಿಸಿದಂತೆ ತೆಗೆಸಿಕೊಳ್ಳಲು ಕೊನೆಗೂ ಆಗಲಿಲ್ಲ ಎಂಬ ವಿಷಾದ ನನ್ನನ್ನು ಆವರಿಸಿದೆ. ಕೋವಿಡ್ ಕಾರಣಕ್ಕಾಗಿ ಪುರಾತತ್ವ ಇಲಾಖೆಯವರು ತುಂಬಾ ಬಿಗಿ ಮಾಡಿದ್ದಾರೆ ಎಂದು ಪೃಥ್ವಿ ಹೇಳಿದಳು. ಆದರೆ ತಾವು ಆದೇಶಿಸಿದಂತೆ ಶಿಲಾಬಾಲಿಕೆಯರ ಕೆಳಗೆ ನಿಂತು ಅದೇ ಭಂಗಿಯಲ್ಲಿ ನಾನು ಭಾವಚಿತ್ರ ತೆಗಿಸಿಕೊಂಡಿದ್ದರೆ ಕೋವಿಡ್ ವೈರಾಣು ಹರಡುತ್ತಿತ್ತೇ?”
ಇತ್ತೀಚೆಗೆ ತಾನೆ ಮುಂಬೈನ ಐಐಟಿ ಸಂಸ್ಥೆಯು ಅಂತಾರಾಷ್ಟ್ರೀಯ ಮಟ್ಟದಲ್ಲಿ Mood Indigo Classical Dance Competition ನಡೆಸಿದ್ದು ಅದರಲ್ಲಿ ಪ್ರಥಮ ಸ್ಥಾನ ಪಡೆದ ಯುವ ಒಡಿಸ್ಸಿ ನರ್ತಕಿಯಾದ ವಿಷ್ಣುಪ್ರಿಯಾಳ ಪ್ರಶ್ನೆ:
"When I visited these temples, I was just wearing a simple Saari trying to bring life to the sculptural spirit to the temple architecture. How am I violating the sanctity of the temple?"
ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು,
ಸಿರಿಗೆರೆ
ಕೃಪೆ: ವಿಜಯ ಕರ್ನಾಟಕ 24.2.2022