ಒಲೆ ಹತ್ತಿ ಉರಿದಂತೆ ಧರೆಹತ್ತಿ ಉರಿಯಬಲ್ಲುದೆ?

  •  
  •  
  •  
  •  
  •    Views  

ಲೆ ಹತ್ತಿ ಉರಿದೊಡೆ ನಿಲಬಹುದಲ್ಲಿದ ಧರೆ ಹತ್ತಿ ಉರಿ ದೊಡೆ ನಿಲಬಹುದೇ?' ಎಂದು ಬಸವಣ್ಣನವರು ಪ್ರಶ್ನಿಸು ತ್ತಾರೆ. ತಾಯಂದಿರು ಬೆಳಗಾದೊಡನೆ ಒಲೆಯನ್ನು ಹಚ್ಚಿ ಪಕ್ಕ ದಲ್ಲಿಯೇ ಇದ್ದು ರುಚಿರುಚಿಯಾದ ಅಡುಗೆ ಮಾಡಿ ಉಣಬಡಿ ಸುತ್ತಾರೆ. ಹಂಡೆಯಲ್ಲಿ ಬಿಸಿ ನೀರನ್ನು ಕಾಯಿಸಿ ಮನೆಮಂದಿಗೆಲ್ಲಾ ಸ್ನಾನ ಮಾಡಲು ಕೊಡುತ್ತಾರೆ. ಪುರುಷರು ಯುಗಾದಿ ಹಬ್ಬದಂದು ಮೈಗೆ ಎಣ್ಣೆ ಹಚ್ಚಿಕೊಂಡು ಬಿಸಿಲಲ್ಲಿ ಕುಳಿತು ನಂತರ ಬಚ್ಚಲು ಮನೆಯಲ್ಲಿ ಬೆಚ್ಚನೆಯ ನೀರನ್ನು ತಲೆಯ ಮೇಲೆ ಸುರಿದುಕೊಂಡು ಸ್ನಾನ ಮಾಡುವುದೇ ಒಂದು ಹಿತಕರ ಅನುಭವ. ಬಾಲ್ಯದಲ್ಲಿ ನಾವು ಕಂಡಂತೆ ಹಳ್ಳಿಯ ಜನರು ಚಳಿಗಾಲದಲ್ಲಿ ಬೆಳಗಿನ ಹೊತ್ತು ಮನೆಯ ಮುಂದೆ ಬೀದಿಗಳಲ್ಲಿ ಗುಂಪು ಗುಂಪಾಗಿ ಸೇರಿ ಒಣ ಕಟ್ಟಿಗೆ, ಸೊಪ್ಪೆ ದಂಟು, ತೊಗರಿ ಕಡ್ಡಿ ಗುಡ್ಡೆ ಹಾಕಿ ಬೆಂಕಿ ಹಚ್ಚಿ ಅದರ ಸುತ್ತ ಕುಳಿತು ಮೈ ಕಾಯಿಸಿಕೊಳ್ಳುತ್ತಿದ್ದರು. ವಯಸ್ಸಾದ ಹಿರಿಯರು ಉರಿಯುವ ಕೊಳ್ಳಿಯನ್ನು ಹಿಡಿದು ಬೀಡಿ ಹಚ್ಚಿ'ದಂ' ಎಳೆಯುತ್ತಿದ್ದರು. ಅಂತಹ ದೃಶ್ಯ ಈಗಿನ ಮಕ್ಕಳಿಗೆ ಕಾಣಸಿಗುವುದಿಲ್ಲ. ಆಧುನಿಕ ವೈಜ್ಞಾನಿಕ ಉಪಕರಣಗಳ ಆವಿಷ್ಕಾರವಾದಂತೆ ಅಡುಗೆ ಮನೆಯೂ ಬದಲಾಗಿದೆ, ಹಳ್ಳಿಯ ಜೀವನ ಶೈಲಿಯೂ ಬದಲಾಗಿದೆ. ಹಳ್ಳಿಯ ಜನರ ಒಗ್ಗಟ್ಟು ಗ್ರಾಮೀಣ ಸಂಸ್ಕೃತಿ ಕ್ರಮೇಣ ಕಣ್ಮರೆಯಾಗುತ್ತಿವೆ. ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತಿತರ ಚುನಾವಣೆಗಳ ರಾಜಕೀಯ ಬೇಗುದಿ ಹರಡಿ ಹಳ್ಳಿಗಳು ಹತ್ತಿ ಉರಿಯುತ್ತಿವೆ. 

ಮೇಲಿನ ಬಸವಣ್ಣನವರ ವಚನದ ಮೇಲೊಂದು ವಿಮರ್ಶೆ: ಅಡುಗೆಯ ಮನೆಯಲ್ಲಿ ಹತ್ತಿ ಉರಿಯುತ್ತಿರುವ ಒಲೆಯ ಮುಂದೆ ನಿಲ್ಲಬಹುದು, ಅಡುಗೆ ಮಾಡಬಹುದು. ಆದರೆ ಇಡೀ ಭೂಮಿಯೇ ಹತ್ತಿ ಉರಿದರೆ ನಿಲ್ಲಲು ಜಾಗವೆಲ್ಲಿ! ಎಂಬ ಆತಂಕ ಬಸವಣ್ಣನವರ ಮನಸ್ಸಿಗೆ ಏಕೆ ಬಂತು? ಒಲೆ ಹತ್ತಿ ಉರಿಯುವುದು ಸಹಜ, ನಿತ್ಯ ಜೀವನದಲ್ಲಿ ಪರಿಚಿತ! ಆದರೆ ಇಡೀ ಭೂಮಿಯೇ ಹತ್ತಿ ಉರಿಯುವುದು ಅವಾಸ್ತವ, ಕಪೋಲಕಲ್ಪಿತ. ಆದರೆ ಬಸವಣ್ಣ ನವರು ತಮ್ಮ ಈ ವಚನದಲ್ಲಿ ಸಂರಕ್ಷಕನಾದ ದೇವರೇ ನಿಷ್ಕರುಣಿ ಯಾದರೆ ಇನ್ನಾರಲ್ಲಿ ಮೊರೆ ಹೋಗಲು ಸಾಧ್ಯ ಎಂದು ಪ್ರತಿ ಪಾದಿಸಲು ಮಾಡಿಕೊಂಡಿರುವ ಈ ಪರಿಕಲ್ಪನೆ ಕೇವಲ ಕಲ್ಪನೆಯಾಗಿ ಉಳಿದಿಲ್ಲ. ಈಗ ಪ್ರಪಂಚದಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಹವಾಮಾನ ವೈಪರೀತ್ಯದ (Climate Change) ಮುನ್ಸೂಚನೆ ಇದರಲ್ಲಿ ಇದ್ದಂತೆ ಭಾಸವಾಗುತ್ತದೆ. ವಿಜ್ಞಾನಿಗಳ ಪ್ರಕಾರ ಭೂಮಿಯ ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ. ಈಗಾಗಲೇ ಕೈಗಾರಿಕೀಕರಣ ಪೂರ್ವದ ದಿನಗಳಿಗೆ ಹೋಲಿಸಿದರೆ ಎರಡು ಡಿಗ್ರಿ (2°C) ಯಷ್ಟು ತಾಪಮಾನ ಏರಿಕೆಯಾಗಿದೆ. ಕಳೆದ 2 ಲಕ್ಷ ವರ್ಷಗಳಲ್ಲಿ ದಾಖಲೆಯ ತಾಪಮಾನ ಏರಿಕೆಯಾಗಿದ್ದು ಈ ಶತಮಾನದ ಅಂತ್ಯದ ವೇಳೆಗೆ 2.8°C ಯಷ್ಟು ತಾಪಮಾನ ಏರಿಕೆಯಾಗುವ ಸಂಭವ ಇದೆಯೆಂದು ಲೆಕ್ಕಾಚಾರ ಮಾಡಲಾಗಿದೆ. ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಭೂಮಿಯ ಮೇಲಿನ ಸಸ್ಯಸಂಕುಲ ಮತ್ತು ಜೀವರಾಶಿಗಳು ಸುಟ್ಟು ಕರಕಲಾಗುತ್ತವೆ ಎಂದು ವಿಜ್ಞಾನಿಗಳ ಖಡಕ್ ಎಚ್ಚರಿಕೆ! ಆಹಾರದ ಕೊರತೆ, ನೀರಿನ ಕೊರತೆ, ಆರ್ಥಿಕ ದುರ್ಭರತೆ, ಸಾಂಕ್ರಾಮಿಕ ರೋಗಗಳನ್ನುಂಟುಮಾಡುವ ಈ ತಾಪಮಾನದ ಏರಿಕೆಯನ್ನು ವಿಶ್ವಸಂಸ್ಥೆಯು ಈ ಶತಮಾನದ ಬಹು ದೊಡ್ಡ ಗಂಡಾಂತರವೆಂದು ಪರಿಗಣಿಸಿದೆ. 

ಭೂಮಿಯ ಸರಾಸರಿ ತಾಪಮಾನವನ್ನು ಕೈಗಾರಿಕೀಕರಣ ಪೂರ್ವಕ್ಕಿಂತ 1.5°C ಡಿಗ್ರಿಗೆ ಇಳಿಸುವಂತೆ ಮಾಡಲು ಅಂದರೆ ಸದ್ಯದ ತಾಪಮಾನಕ್ಕಿಂತ ಅರ್ಧ ಡಿಗ್ರಿ ಕಡಿಮೆ ಮಾಡಲು 2015 ರಲ್ಲಿ ಎಲ್ಲ ದೇಶದ ಪ್ರಮುಖರು ಪ್ಯಾರಿಸ್ನಲ್ಲಿ ಸೇರಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದನ್ನು ಪ್ಯಾರಿಸ್ ಒಪ್ಪಂದ ಎಂದು ಕರೆಯುತ್ತಾರೆ. ಈ ಗುರಿಯನ್ನು ಸಾಧಿಸಲು ಮತ್ತೊಂದು ಸಮಾವೇಶವು ವಿಶ್ವಸಂಸ್ಥೆಯ ಆಶ್ರಯದಲ್ಲಿ ಇದೇ ವರ್ಷದ ನವೆಂಬರ್ 12 ರಂದು ಸ್ಕಾಟ್ಲೆಂಡಿನ ಗ್ಲಾಸ್ಕೋದಲ್ಲಿ ನಡೆಯಲಿದೆ. ಇಂದು ಬದುಕಿರುವ ನಾವು ಭಾಗ್ಯಶಾಲಿಗಳು. ನಮ್ಮ ಹಿರಿಯರು ಈ ಭೂಮಿಯೆಂಬ ನಂದನವನವನ್ನು ನಮಗೆ ಬಳುವಳಿಯಾಗಿ ನೀಡಿದ್ದಾರೆ. ಇದನ್ನು ಮರುಭೂಮಿಯನ್ನಾಗಿಸಿ ಮುಂದಿನ ಪೀಳಿಗೆಗೆ ನಾವು ನೀಡಬಾರದು; ನಂದನ ವನವನ್ನಾಗಿಯೇ ಉಳಿಸಿ ನೀಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂಬುದನ್ನು ಎಲ್ಲರಿಗೂ ಮನದಟ್ಟುಮಾಡಿ ಕೊಡಬೇಕೆಂಬುದೇ ಈ ಶೃಂಗಸಭೆಯ ಮೂಲ ಉದ್ದೇಶ. ಇದಕ್ಕೆ ಪೂರ್ವಭಾವಿಯಾಗಿ ವಿಶ್ವದ ಪ್ರಮುಖ ಧಾರ್ಮಿಕ ಮುಖಂಡರು, ಸಾಮಾಜಿಕ ಮುಖಂಡರ ಸಭೆಯು ಇದೇ ಅಕ್ಟೋಬರ್ 4 ರಂದು ಸೋಮವಾರ ರೋಂ ನಗರದಲ್ಲಿ ನಡೆಯಿತು. ಕ್ರೈಸ್ತ ಧರ್ಮ ಗುರುಗಳಾದ ಪೋಪ್ ಫ್ರಾನ್ಸಿಸ್ ರವರು ಇದನ್ನು ಆಯೋಜಿಸಿದ್ದರು. ನಮ್ಮನ್ನೂ ಒಳಗೊಂಡಂತೆ ವಿಶ್ವಾದ್ಯಂತ 37 ಜನ ಧಾರ್ಮಿಕ ಮುಖಂಡರು ಮತ್ತು ವಿಜ್ಞಾನಿಗಳನ್ನು ಈ ಸಭೆಗೆ ಆಹ್ವಾನಿಸಿದ್ದರು. ಇಟಲಿ ಮತ್ತು ಇಂಗ್ಲೆಂಡಿನಲ್ಲಿರುವ ಅವರ ರಾಯಭಾರಿಗಳಿಂದ ಕಳೆದ ಜನವರಿ ತಿಂಗಳಲ್ಲಿ ಬಂದ ಆಹ್ವಾನವನ್ನು ಒಪ್ಪಿದ್ದರೂ ಈ ಸಭೆಗೆ ಹೋಗಲಾಗಲಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಭಾರತದಿಂದ ಬರುವವರು ಹತ್ತು ದಿನ ಮುಂಚಿತವಾಗಿ ಬಂದು ಕ್ವಾರೆಂಟೀನ್ ಆಗಬೇಕೆಂಬ ಬಿಗಿಯಾದ ನಿರ್ಬಂಧವಿದ್ದುದರಿಂದ ಕಾರ್ಯ ಗೌರವದ ನಿಮಿತ್ತ ನಮ್ಮ ಪ್ರವಾಸವನ್ನು ರದ್ದುಪಡಿಸಬೇಕಾಯಿತು. 

ಕಳೆದ ಜನವರಿ ತಿಂಗಳಿಂದ ಅಂತರ್ಜಾಲದಲ್ಲಿ ನಡೆದ Zoom ಮೀಟಿಂಗ್ಗಳಲ್ಲಿ ನಮ್ಮ ವಿಚಾರಗಳನ್ನು ಮಂಡಿಸಿದ್ದು, ಸರಕಾರ ದಿಂದ ಕೋಟ್ಯಂತರ ರೂ. ಗಳನ್ನು ಮುಂಜೂರು ಮಾಡಿಸಿ ಗ್ರಾಮೀಣ ಪ್ರದೇಶಗಳಲ್ಲಿ ನದಿಯಿಂದ ಕೆರೆಗಳಿಗೆ ನೀರನ್ನು ಹರಿಸುವ ಏತ ನೀರಾವರಿ ಯೋಜನೆಗಳನ್ನು ವಿವರಿಸಿದ್ದು ಎಲ್ಲರ ಗಮನ ಸೆಳೆದಿತ್ತು. ಅಕ್ಟೋಬರ್ 4 ರಂದು ಬೆಳಗ್ಗೆ ನಡೆದ ಸಭೆಯಲ್ಲಿ ಪೋಪ್ ಫ್ರಾನ್ಸಿಸ್ ರವರ ನುಡಿಯ ನಂತರ ನಮ್ಮ ಮತ್ತು ನಮ್ಮಂತೆ ಖುದ್ದಾಗಿ ಭಾಗವಹಿಸಲು ಆಗದ ಗಣ್ಯಮಾನ್ಯ ಆಹ್ವಾನಿತರ ವೀಡಿಯೊ ಸಂದೇಶಗಳನ್ನು ತರಿಸಿಕೊಂಡು ಬಿತ್ತರಿಸಿದರು. ಆ ದಿನ ಮಧ್ಯಾಹ್ನ ಮೂರು ಗಂಟೆಗಳ ಕಾಲ ನಡೆದ ಸಭೆಯ ಕಾರ್ಯಕಲಾಪಗಳನ್ನು ವೀಕ್ಷಿಸಲು, ಸಭೆಗೆ ಬಂದ ಜಗತ್ತಿನ ಧರ್ಮಗುರುಗಳು ಮತ್ತು ವಿಜ್ಞಾನಿಗಳನ್ನು ನಮ್ಮ ವಾಸದ ಕೊಠಡಿಯಲ್ಲಿಯೇ Zoomನಲ್ಲಿ ನೋಡಲು ಮತ್ತು ಅವರ ವಿಚಾರಗಳನ್ನು ಕೇಳಲು ಸಾಧ್ಯವಾಯಿತು. ಆಗ ನಮಗೆ ನೆನಪಾಗಿದ್ದು ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟ, ಆ ಪೂಜೆಯೂ ಆ ಮಾಟವೂ ಚಿತ್ರದ ರೂಹು ಕಾಣಿರಣ್ಣಾ ಚಿತ್ರದ ಕಬ್ಬು ಕಾಣಿರಣ್ಣಾ ಅಪ್ಪಿದರೆ ಸುಖವಿಲ್ಲ ಮೆಲಿದರೆ ರುಚಿ ಯಿಲ್ಲ....” ಎಂಬ ಬಸವಣ್ಣನವರ ವಚನ, ಶಾಸ್ತ್ರಕ್ಕೆ, ಕಾಟಾಚಾರಕ್ಕೆ ಮಾಡುವ ಪೂಜೆ ಹಾಗೂ ಒತ್ತಾಯಕ್ಕೆ ಮಣಿದು ಮಾಡುವ ಕೆಲಸ ಚಿತ್ರಪಟಲದಲ್ಲಿರುವ ವ್ಯಕ್ತಿಯ ಚಿತ್ರವಿದ್ದಂತೆ, ಚಿತ್ರದಲ್ಲಿ ಕಾಣಿಸುವ ಕಬ್ಬಿನಂತೆ! ಚಿತ್ರ ಎಷ್ಟೇ ಸುಂದರವಾಗಿರಬಹುದು. ಆದರೆ ನೀವು ಪ್ರೀತಿಸುವ ವ್ಯಕ್ತಿಯನ್ನು ಚಿತ್ರದಲ್ಲಿ ಬಿಗಿದಪ್ಪಿ ಪ್ರೀತಿಸಲು ಬರುವುದಿಲ್ಲ. ಚಿತ್ರದಲ್ಲಿ ಕಾಣುವ ಕಬ್ಬನ್ನು ಹಿಡಿದು ತಿನ್ನಲು ಬರುವುದಿಲ್ಲ ಅದರಲ್ಲಿ ಯಾವ ಸವಿಯೂ ಇರುವುದಿಲ್ಲ! ಎನ್ನುತ್ತಾರೆ ಬಸವಣ್ಣನವರು. ಅನಿವಾರ್ಯ ಕಾರಣಗಳಿಂದ ರೋಂ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗದೆ Zoomನಲ್ಲಿ ಮಾಡಿದ ವೀಕ್ಷಣೆ ಅಲ್ಲಿಯ ಕಾರ್ಯ ಕಲಾಪಗಳಲ್ಲಿ ಖುದ್ದಾಗಿ ಭಾಗವಹಿಸಿದಾಗ ಉಂಟಾಗುವ ತೃಪ್ತಿಯನ್ನು ತಂದುಕೊಡಲಿಲ್ಲ. 

ತಾಪಮಾನದ ಏರಿಕೆಯು ಕಳೆದ ಕೆಲವಾರು ದಶಕಗಳಿಂದ ಜಗತ್ತಿನ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೊರೊನಾಕ್ಕಿಂತಲೂ ಮಿಗಿಲಾದ ಆತಂಕವನ್ನು ಸೃಷ್ಟಿ ಮಾಡಿದೆ. ಜಗತ್ತಿನ ಅನೇಕ ಪ್ರಾಣಿಗಳು, ಬಗೆ ಬಗೆಯ ಸಸ್ಯಗಳು ನಾಶಗೊಳ್ಳುತ್ತಲಿವೆ. ಹವಾಮಾನದ ವೈಪರೀತ್ಯಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ಈ ಜಗತ್ತಿನಲ್ಲಿ ಎರಡು ಬಗೆಯ ಆಪತ್ತು /ವಿಪತ್ತುಗಳು ಇವೆ: ಒಂದು ನೈಸರ್ಗಿಕ ಮತ್ತೊಂದು ಮನುಷ್ಯನಿರ್ಮಿತ. ಹವಾಮಾನ ಏರುಪೇರಾಗಲು ಒಂದೆಡೆ ಜ್ವಾಲಾಮುಖಿಗಳು, ಸೌರವಿಕಿರಣ ಇತ್ಯಾದಿ ನೈಸರ್ಗಿಕ ವಿಪತ್ತುಗಳು ಕಾರಣವಾದರೆ ಮತ್ತೊಂದೆಡೆ ಅರಣ್ಯನಾಶ, ವಿಷಗಾಳಿಯನ್ನುಗುಳುವ ಮತ್ತು ತ್ಯಾಜ್ಯವಸ್ತುಗಳನ್ನು ಹೊರದೂಡುವ ಕಾರ್ಖಾನೆಗಳು ಇತ್ಯಾದಿ ಮಾನವ ನಿರ್ಮಿತ ವಿಪತ್ತುಗಳು ಕಾರಣ. ಈ ಸೃಷ್ಟಿಯಲ್ಲಿ ನೈಸರ್ಗಿಕ ವಿಪತ್ತುಗಳಿಗಿಂತ ಹೆಚ್ಚಾಗಿ ಮಾನವ ನಿರ್ಮಿತ ವಿಪತ್ತುಗಳೇ ಮನುಕುಲಕ್ಕೆ ಕಂಟಕಪ್ರಾಯವಾಗಿರುವುದಲ್ಲದೆ ಅನೇಕ ಸಸ್ಯಸಂಕುಲ ಮತ್ತು ಪ್ರಾಣಿಗಳ ಮಾರಣಹೋಮಕ್ಕೂ ಕಾರಣವಾಗಿವೆ. ತನ್ನ ಸ್ವಾರ್ಥಕ್ಕಾಗಿ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವ ಮನುಷ್ಯನನ್ನು ಹದ್ದುಬಸ್ತಿನಲ್ಲಿಡಲು ಮತ್ತು ನಿಸರ್ಗವನ್ನು ಸಮತೋಲನದಲ್ಲಿ ಇರಿಸುವ ಉದ್ದೇಶದಿಂದಲೋ ಏನೋ ಕೊರೊನಾ ಬಂದಿರುವಂತೆ ಕಾಣಿಸುತ್ತದೆ. ಮನುಷ್ಯನು ತನ್ನ ಸ್ವಾರ್ಥಕ್ಕಾಗಿ, ಸುಖಲೋಲುಪತೆಗಾಗಿ ನೈಸರ್ಗಿಕ ಸಂಪತ್ತನ್ನು ಲೂಟಿ . "There is enough in this world for man's need but not enough for man's greed!"     ( ಪ್ರಪಂಚದಲ್ಲಿ ಮನುಷ್ಯನಿಗೆ ಜೀವಿಸಲು ಬೇಕಾಗುವಷ್ಟು ಇದೆ, ಆದರೆ ಅವನ ದುರಾಸೆಗಳಿಗೆ ಬೇಕಾಗುವಷ್ಟು ಇಲ್ಲ) ಎನ್ನುತ್ತಾರೆ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು. ಸಮುದ್ರದಲ್ಲಿದ್ದ ಮರಿ ಮೀನು ತಾಯಿಮೀನನ್ನು ಕೇಳಿತಂತೆ: ""Mom! Why should we live in waters, Why cannot we live on earth?" (ಅಮ್ಮಾ! ನಾವೇಕೆ ನೀರಿನಲ್ಲಿ ಇರಬೇಕು? ಭೂಮಿಯ ಮೇಲೆ ಏಕೆ ವಾಸವಾಗಿರಬಾರದು?) ಅದಕ್ಕೆ ತಾಯಿ ಮೀನು ಕೊಟ್ಟ ಮಾರ್ಮಿಕ ಉತ್ತರ : ""Oh, my kid! The Earth is made for selfish, not for fish!" ( ಕಂದಾ! ಭೂಮಿ ಇರುವುದು ನಮ್ಮಂತಹ ಮೀನು (fish) ಗಳಿಗೆ ಅಲ್ಲ, ಸ್ವಾರ್ಥಿ (selfish) ಗಳಾದ ಮನುಷ್ಯರಿಗೆ!) 

ಈ ಸುಂದರವಾದ ಜಗತ್ತನ್ನು ನೋಡುವ ಕಣ್ಣುಗಳು ಇರುವುದು ಸದ್ಯಕ್ಕೆ ಈ ಭೂಮಿಯ ಮೇಲೆ ಮಾತ್ರ. ಇಂತಹ ಕಣ್ಣುಗಳು ಈ ಭೂಮಂಡಲದಾಚೆ ಇವೆಯೇ ಎಂಬ ಪ್ರಶ್ನೆಗೆ ವಿಜ್ಞಾನದಿಂದ ಇನ್ನೂ ಉತ್ತರ ಸಿಕ್ಕಿಲ್ಲ. ತಾಪಮಾನದ ಏರಿಕೆಯಿಂದ ಇಂತಹ ಅಪರೂಪದ ಕಣ್ಣುಗಳು ಈ ಭೂಮಿಯ ಮೇಲೆ ಇಲ್ಲವಾದರೆ ಈ ಸುಂದರವಾದ ಜಗತ್ತನ್ನು ನೋಡಿ ಆನಂದಿಸುವವರೇ ಇಲ್ಲದಂತಾಗುತ್ತದೆ. ಸಹ ಸ್ರಾರು ವರ್ಷಗಳ ಹಿಂದೆ 'ವಸುಧೈವ ಕುಟುಂಬಕಮ್' ಎಂಬ ಉದಾತ್ತ ಧೈಯವನ್ನಿರಿಸಿಕೊಂಡಿದ್ದ ಉದಾತ್ತ ಚರಿತರಾದ ಋಷಿ ಮುನಿಗಳು ಜಪಿಸಿದ ಈ ಕೆಳಗಿನ ಯಜುರ್ವೇದದ ಶಾಂತಿಮಂತ್ರವು ಅಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿದೆ. 

ವೇದೋಪನಿಷತ್ತುಗಳ ಕಾಲದಲ್ಲಿ ಜನರು ಸೇವಿಸುತ್ತಿದ್ದ ಗಾಳಿ, ನೀರು, ಆಹಾರ ಇಂದಿನಷ್ಟು ಕಲುಷಿತಗೊಂಡಿರಲಿಲ್ಲ. ಸುತ್ತಣ ಪರಿಸರ ಇಷ್ಟೊಂದು ವಿನಾಶಗೊಂಡಿರಲಿಲ್ಲ. ಇಂದಿನ ಪರಿಸ್ಥಿತಿಯನ್ನು ಮನಗಂಡೇ ಅಂದಿನ ದ್ರಷ್ಟಾರರಾದ ಋಷಿಮುನಿಗಳು ಈ ಮಂತ್ರವನ್ನು ಜಪಿಸಿದಂತಿದೆ. ಪ್ರಕೃತಿಯ ಮೇಲೆ ಅವರಿಗಿದ್ದ ಪ್ರೀತಿ, ಮನುಕುಲದ ಬಗ್ಗೆ ಅವರಿಗಿದ್ದ ಕಾಳಜಿ, ಪಶುಪಕ್ಷಿಪ್ರಾಣಿಗಳ ಬಗ್ಗೆ ಅವರಿಗಿದ್ದ ಅನುಕಂಪೆ ವರ್ಣಿಸಲಸದಳ. ಇವೆಲ್ಲವೂ ತಮ್ಮ ಅನುಕೂಲಕ್ಕಾಗಿ ಇವೆಯೆಂಬ ಸ್ವಾರ್ಥಭಾವನೆ ಇರದೆ ತಮ್ಮಂತೆಯೇ ಅವೂ ಸಹ ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಿಕೊಡಬೇಕೆಂಬ ವಿಶಾಲ ಹೃದಯ ಅವರು ಜಪಿಸಿದ ಈ ಮಂತ್ರದಲ್ಲಿದೆ: 

ಪೃಥ್ವಿ ಶಾಂತಿಃ, ಅಂತರಿಕ್ಷಗ್ಂ ಶಾಂತಿಃ 
ದೌಃ ಶಾಂತಿಃ, ದಿಶಃ ಶಾಂತಿಃ, ಅವಾಂತರದಿಶಾಃ ಶಾಂತಿಃ 
ಅಗ್ನಿಃ ಶಾಂತಿಃ, ವಾಯುಃ ಶಾಂತಿಃ, 
ಆದಿತ್ಯಃ ಶಾಂತಿಃ, ಚಂದ್ರಮಾಃ ಶಾಂತಿಃ, ನಕ್ಷತ್ರಾಣಿ ಶಾಂತಿಃ 
ಆಪಃ ಶಾಂತಿಃ, ಓಷಧಯಃ ಶಾಂತಿಃ, ವನಸತಯಃ ಶಾಂತಿಃ 
ಗೌಃ ಶಾಂತಿಃ, ಅಜಾಃ ಶಾಂತಿಃ, ಅಶಃ ಶಾಂತಿಃ, 
ದ್ವಿಪದೇ ಚತುಷ್ಪದೇ ಚ ಶಾಂತಿಂ ಕರೋಮಿ 
ಶಾಂತಿರ್ಮೇಽಸ್ತು ಶಾಂತಿಃ! 
(ನೆಲೆಸಲಿ ಶಾಂತಿ ಧರೆಯಲ್ಲಿ, 
ಆಗಸದಲ್ಲಿ, ದಶದಿಕ್ಕುಗಳಲ್ಲಿ. 
ಅಗ್ನಿಯಲ್ಲಿ, ವಾಯುವಿನಲ್ಲಿ, 
ಸೂರ್ಯ-ಚಂದ್ರ-ನಕ್ಷತ್ರಗಳಲ್ಲಿ 
ಜಲದಲ್ಲಿ, ಗಿಡಮರಬಳ್ಳಿಗಳಲ್ಲಿ 
ಪಶುಪಕ್ಷಿಪ್ರಾಣಿಗಳಲ್ಲಿ, ಸಕಲ ಜೀವರಾಶಿಗಳಲ್ಲಿ, 
ನೆಲೆಸಲಿ ಶಾಂತಿ ಎನ್ನಯ ಹೃದಯಾಂತರಾಳದಲ್ಲಿ!)

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ ಪತ್ರಿಕೆ
ದಿನಾಂಕ.7-10-2021
ಬಿಸಿಲು ಬೆಳದಿಂಗಳು