ಉಕ್ರೇನ್ ಯುದ್ಧಭೂಮಿಯಿಂದ ದಾರುಣ ವಾರ್ತೆ

ಉಕ್ರೇನ್ ದೇಶದ ಎರಡನೆಯ ಪ್ರಮುಖ ನಗರವಾದ ಖಾರ್‍ಕೀವ್ ರಷ್ಯಾ ಬಾಂಬ್ ಧಾಳಿಯಿಂದ ತತ್ತರಿಸಿ ಹೋಗಿದೆ. ಸರಕಾರದ ಅನೇಕ ಮುಖ್ಯ ಕಟ್ಟಡಗಳು ಧ್ವಂಸಗೊಂಡು ಅಗಣಿತ ಸಂಖ್ಯೆಯಲ್ಲಿ ಸಾವು ನೋವುಗಳು ಸಂಭವಿಸಿವೆ. ಅಗ್ನಿಜ್ವಾಲೆ ಧಗಧಗಿಸಿ ಉರಿದು ಅದರಿಂದ ಹೊರಹೊಮ್ಮಿದ ಹೊಗೆಯು ಈ ನಗರದ ಆಗಸದಲ್ಲಿ ಕರಿನೆರಳಾಗಿ ಅಲ್ಲಿಯ ನಾಗರಿಕರ ಜೀವನವನ್ನು ಕಂಗಾಲಾಗಿಸಿದೆ. ಯುದ್ಧ ಆರಂಭವಾಗುವುದನ್ನು ಮನಗಂಡು 15 ದಿನಗಳ ಮುಂಚಿತವಾಗಿಯೇ ಭಾರತ ಸರಕಾರ ಉಕ್ರೇನ್ ನಲ್ಲಿ ವಾಸವಾಗಿರುವ ಭಾರತೀಯರಿಗೆ ಮುನ್ನೆಚ್ಚರಿಕೆ ನೀಡಿತ್ತು. ಆದರೂ ಅಲ್ಲಿಯ ಸರಕಾರ ಏನೂ ಆಗುವುದಿಲ್ಲವೆಂದು ನೀಡಿದ ಭರವಸೆಯನ್ನು ನಂಬಿ ಭಾರತೀಯರು ಸಂಕಷ್ಟಕ್ಕೆ ಸಿಲುಕಿಕೊಂಡರು. ಅದರಲ್ಲೂ ರಷ್ಯಾದ ಗಡಿ ಪ್ರದೇಶದಲ್ಲಿರುವ ಖಾರ್‍ಕೀವ್ ನಗರದಲ್ಲಿ ವಾಸವಾಗಿದ್ದ ಭಾರತೀಯ ವಿದ್ಯಾರ್ಥಿಗಳು ಅನುಭವಿಸಿದ ಸಂಕಟ ಹೇಳತೀರದು. ನಮ್ಮ ಮಠದ ಶಿಷ್ಯರು ಕೆಲವರು ಅಲ್ಲಿ ಸಿಲಿಕಿಕೊಂಡಿದ್ದ ತಮ್ಮ ಮಕ್ಕಳನ್ನು ಪಾರು ಮಾಡಬೇಕೆಂದು ಕಳೆದ ತಿಂಗಳ ಕೊನೆಯಲ್ಲಿ ನಮ್ಮ ಹತ್ತಿರ ಅಲವತ್ತುಕೊಂಡರು. ಅವರ ಮಕ್ಕಳ ಮೊಬೈಲ್ ನಂಬರ್ ಪಡೆದು ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಅವರೊಂದಿಗೆ ಸಂಪರ್ಕವನ್ನಿಟ್ಟುಕೊಂಡು ಅಲ್ಲಿಯ ವಿದ್ಯಾರ್ಥಿನಿಲಯಗಳಲ್ಲಿ ವಾಸವಾಗಿದ್ದ ಭಾರತೀಯ ಯುವಕ/ಯುವತಿಯರನ್ನು ಪಾರು ಮಾಡಲು ಮಾಡಿದ ನಮ್ಮ ಚಿಕ್ಕ ಪ್ರಯತ್ನದ ವಿವರ ಇಲ್ಲಿದೆ.
ಪೋಷಕರು ನಮ್ಮನ್ನು ಸಂಪರ್ಕಿಸಿದಾಗ ಭಗವದ್ಗೀತೆಯ ಆರಂಭದಲ್ಲಿ ಬರುವ “ಧರ್ಮಕ್ಷೇತ್ರ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ?” ಎಂಬ ಶ್ಲೋಕ ನೆನಪಾಯಿತು. ತನ್ನ ಮಕ್ಕಳು ಮತ್ತು ಪಾಂಡವರು ಕುರುಕ್ಷೇತ್ರದಲ್ಲಿ ಯುದ್ಧ ಮಾಡಲು ಸನ್ನದ್ದರಾಗಿರುವಾಗ ಯುದ್ಧಭೂಮಿಯಲ್ಲಿ ಏನು ನಡೆಯಿತು ಎಂದು ಧೃತರಾಷ್ಟ್ರನು ಸಂಜಯನನ್ನು ಕೇಳುತ್ತಾನೆ. ಹಾಗೆಯೇ ರಷ್ಯಾ ಮತ್ತು ಉಕ್ರೇನ್ ದೇಶಗಳ ಮಧ್ಯೆ ನಡೆಯುತ್ತಿರುವ ಭೀಕರ ಯುದ್ಧದ ಸಂದರ್ಭದಲ್ಲಿ ಖಾರ್ಕೀವ್ ನಗರದ ಬಂಕರ್ ನಲ್ಲಿ 300 ಭಾರತೀಯ ವಿದ್ಯಾರ್ಥಿಗಳು ಜೀವ ಉಳಿಸಿಕೊಳ್ಳಲು ಅವಿತುಕೊಂಡಿದ್ದು ಅವರ ಪೈಕಿ ನಮ್ಮ ಸಂಪರ್ಕದಲ್ಲಿದ್ದ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ಮೆಡಿಕಲ್ ವಿದ್ಯಾರ್ಥಿ ಕುಶಾಲ್ ಈಶ್ವರ್ ಸಂಕಣ್ಣನವರ್ ಭಗವದ್ಗೀತೆಯ ಸಂಜಯನ ಪಾತ್ರವನ್ನು ವಹಿಸಿದ. ಕಳೆದ ತಿಂಗಳು ಫೆ.25 ರಿಂದ ಇಲ್ಲಿಯವರೆಗೆ ನಮ್ಮೀರ್ವರ ಮಧ್ಯೆ ನಿತ್ಯವೂ ದೂರವಾಣಿ ಕರೆಗಳು ಮತ್ತು ವಾಟ್ಸಾಪ್ ಸಂದೇಶಗಳು ಹರಿದಾಡತೊಡಗಿದವು.
ನೆಲಮಾಳಿಗೆಯ ಬಂಕರ್ ನ ಇಕ್ಕಟ್ಟಾದ ಜಾಗದಲ್ಲಿ ಪ್ರಾಣಭೀತಿಯಿಂದ ಅವಿತುಕೊಂಡಿದ್ದ ಅವರಿಗೆ ಒಂದೆರಡು ದಿನಗಳ ನಂತರ ಕೈಯಲ್ಲಿದ್ದ ಆಹಾರ ಸಾಮಾಗ್ರಿಗಳೆಲ್ಲವೂ ಮುಗಿದು ಹೋದವು. ಕುಡಿಯಲು ಒಂದು ತೊಟ್ಟು ನೀರೂ ಸಹ ಸಿಗದಂತಾಯಿತು. ಕಳೆದ ಮಾರ್ಚ್ 2ರ ಶಿವರಾತ್ರಿಯಂದು ನಮ್ಮ ಜನರು ಒಂದು ರಾತ್ರಿ ಶಾಸ್ತ್ರಕ್ಕಾಗಿ ಉಪವಾಸ ಮತ್ತು ಜಾಗರಣೆ ಮಾಡಿದರೆ ಈ ವಿದ್ಯಾರ್ಥಿಗಳಿಗೆ ಯುದ್ಧ ಆರಂಭವಾದ ದಿನದಿಂದಲೂ ಉಪವಾಸ ಮತ್ತು ಜಾಗರಣೆ! ಮಾರ್ಷಲ್ ಲಾ ಇದ್ದುದರಿಂದ ಮಾರುಕಟ್ಟೆಗೆ ಹೋಗುವಂತಿರಲಿಲ್ಲ. ಹೊರಗೆ ಹೋದರೆ ಗುಂಡೇಟು ಶತಃಸಿದ್ದ. ಈ ಮಧ್ಯೆ ಬೇರೆಡೆ ಫ್ಲಾಟ್ ನಲ್ಲಿ ವಾಸವಾಗಿದ್ದ ರಾಣೇಬೆನ್ನೂರು ತಾಲ್ಲೂಕ್ ಚಳಗೇರಿ ಗ್ರಾಮದ ಅಂತಿಮ ವರ್ಷದ ಮೆಡಿಕಲ್ ವಿದ್ಯಾರ್ಥಿ ನವೀನ್ ಶೇಖರಗೌಡ ಗ್ಯಾನಗೌಡ್ರ ತನಗೆ ಮತ್ತು ತನ್ನ ಸ್ನೇಹಿತರಿಗೆ ಆಹಾರ ಸಾಮಗ್ರಿಗಳನ್ನು ತರಲು ಮಾರುಕಟ್ಟೆಗೆ ಹೋದಾಗ ಗುಂಡೇಟಿಗೆ ಬಲಿಯಾಗಿದ್ದು ಮತ್ತಷ್ಟೂ ಭಯಭೀತಿಯನ್ನುಂಟುಮಾಡಿತ್ತು. ಮುಂದೇನು ಮಾಡಬೇಕೆಂದು ತಿಳಿಯದಂತಾಗಿದೆ ಎಂದು ಕುಶಾಲ್ ತುಂಬಾ ಆತಂಕದಿಂದ ನಮಗೆ ಸಂದೇಶ ರವಾನಿಸಿದ.
ಉಕ್ರೇನ್ನಲ್ಲಿರುವ ಭಾರತದ ರಾಯಭಾರಿ ಕಛೇರಿಯ ಅಧಿಕಾರಿಗಳು ಯಾರೂ ನಮಗೆ ಪರಿಚಿತರಿರಲಿಲ್ಲ. ಯುದ್ದದ ಭೀಕರತೆಯಿಂದ ರಾಜಧಾನಿ ಕೀವ್ ನಲ್ಲಿದ್ದ ದೂತಾವಾಸವೂ ಸಹ ಮುಚ್ಚಿಹೋಗಿ ಬೇರೆಡೆಗೆ ಸ್ಥಳಾಂತರಗೊಂಡಿತ್ತು. ನಮಗೆ ಆತ್ಮೀಯರಾದ ಬೇರೆ ದೇಶದ ರಾಯಭಾರಿಯೊಬ್ಬರಿಗೆ ಕುಶಾಲ್ ಮತ್ತು ಅವನ ಸ್ನೇಹಿತರ ಸಂಕಷ್ಟವನ್ನು ವಿವರಿಸಿ ಸಂದೇಶ ರವಾನಿಸಿದಾಗ ಅವರಿಂದ ಸೂಕ್ತವಾದ ಮಾಹಿತಿ ದೊರೆಯಿತು.
ಉಕ್ರೇನ್ನಲ್ಲಿರುವ ಭಾರತೀಯ ದೂತಾವಾಸವು ರಷ್ಯಾದಲ್ಲಿರುವ ದೂತಾವಾಸವನ್ನು ಸಂಪರ್ಕಿಸಿ ಒಂದು ಸಲಹೆ ನೀಡಿತು. ಅದನ್ನು ಕುಶಾಲ್ ಗೆ ತಿಳಿಸಿದಾಗ ಎಲ್ಲರೂ ಧೈರ್ಯ ಮಾಡಿ ಭಾರತದ ತ್ರಿವರ್ಣಧ್ವಜವನ್ನು ಹಿಡಿದು ಖಾರ್ಕೀವ್ ನಗರದಿಂದ 25ಕಿ.ಮೀ ದೂರದಲ್ಲಿರುವ “ಪಿಸೋಚಿನ್" ಎಂಬ ಒಂದು ಹಳ್ಳಿಗೆ ಕಾಲುನಡಿಗೆಯಲ್ಲಿ ಹೋದರು. ಅವರಲ್ಲಿ ಕೆಲವರು ಭಾರತದ ನೆರೆ ರಾಷ್ಟ್ರಗಳ ಮಿತ್ರರೂ ತ್ರಿವರ್ಣಧ್ವಜದ ಹಿಂದೆ ಇದ್ದರು. ಅಲ್ಲಿ ಬೇರೆಡೆಯಿಂದ ಬಂದವರೂ ಸೇರಿ ಒಟ್ಟು ಒಂದು ಸಾವಿರ ವಿದ್ಯಾರ್ಥಿಗಳು ಜಮಾಯಿಸಿದ್ದರು.
“ಪಿಸೋಚಿನ್" ಹಳ್ಳಿಯಿಂದ ಮುಂದೇನು ಎಂಬ ಪ್ರಶ್ನೆ ವಿದ್ಯಾರ್ಥಿಗಳಿಗೆ ಕಾಡತೊಡಗಿತು. ಸ್ಥಳೀಯ ಬಸ್ ಏಜಂಟರುಗಳು ಪ್ರತಿಯೊಬ್ಬ ವಿದ್ಯಾರ್ಥಿ 500 ಡಾಲರ್ ಗಳನ್ನು ಕೊಟ್ಟರೆ ಮತ್ತು ಸಂಭವನೀಯ ಅಪಾಯಕ್ಕೆ ಸಿದ್ದರಿದ್ದರೆ (at your own risk) ರುಮೇನಿಯಾ ಗಡಿಯ ವರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದರು. ಅದರಂತೆ ಒಪ್ಪಿ ಮುಂದೆ ಪ್ರಯಾಣ ಮಾಡಬಹುದೇ? ಎಂದು ಕುಶಾಲ್ ನಮಗೆ ಕರೆ ಮಾಡಿ ನಮ್ಮ ಒಪ್ಪಿಗೆಯನ್ನು ಕೇಳಿದ. ಹಾಗೆ ಮಾಡುವುದು ಬೇಡ ಎಂದು ನಿರಾಕರಿಸಿ, ರಾಯಭಾರಿಗಳನ್ನು ಸಂಪರ್ಕಿಸಿ ತಿಳಿಸುವುದಾಗಿ ಹೇಳಿದೆವು. ಅದರಂತೆ ನಡೆದುಕೊಳ್ಳುವುದಾಗಿ ಎಲ್ಲರೂ ಒಪ್ಪಿದರು. ಆದರೂ ಸುಮಾರು 50 ಜನ ವಿದ್ಯಾರ್ಥಿಗಳು ತಲಾ 500 ಡಾಲರ್ ಹಣತೆತ್ತು ಬಸ್ಸಿನಲ್ಲಿ ಹೊರಟರು. ಒಂದೆರಡು ಗಂಟೆಗಳಲ್ಲಿಯೇ ಅವರು ಮುಂದೆ ಪ್ರಯಾಣ ಬೆಳೆಸಲು ಸಾಧ್ಯವಾಗದೆ ಮರಳಿ ಬಂದರೆಂದು ಕುಶಾಲ್ ಮತ್ತೆ ದೂರವಾಣಿ ಕರೆ ಮಾಡಿ ತಿಳಿಸಿದ. ಯಥಾಪ್ರಕಾರ ಈ ಮಾಹಿತಿಯನ್ನು ನಮ್ಮ ಆತ್ಮೀಯರಾದ ರಾಯಭಾರಿಯವರಿಗೆ ರವಾನಿಸಿದಾಗ ಉಕ್ರೇನ್ ದೂತಾವಾಸದ ರಾಯಭಾರಿ ಹೊರಡಿಸಿದ ಸಂದೇಶವನ್ನು ಕಳುಹಿಸಿದರು. ಅದರ ಆಯ್ದ ಭಾಗ:
“The last two weeks have been extremely harrowing and challenging for all of us. Hardly anyone would have ever witnessed such pain and disruption in our lives. Nevertheless, I am proud of the maturity and fortitude displayed by our Indian Nationals, especially young Indian students, in continuing to stay brave during these difficult times.
We are deeply concerned about Indian students in Sumy, Ukraine. We have strongly pressed Russian and Ukrainian governments through multiple channels for an immediate ceasefire to create a safe corridor for our students. Russia has provided 100s of buses and is waiting to take Indians out. India has sent supplies like food and water to its nationals in Pisochyn and Kharkiv. The cost will be taken care by Indian Government. Be Safe, Be Strong, Jai Hind!”
ಇದರಂತೆ ಪಿಸೋಚಿನ್ ಮತ್ತು ಖಾರ್ಕೀವ್ ನಲ್ಲಿರುವ ಎಲ್ಲ ವಿದ್ಯಾರ್ಥಿಗಳನ್ನು ಭಾರತೀಯ ದೂತಾವಾಸದ ಅಧಿಕಾರಿಗಳು ಸುಮಾರು 1600 ಕಿ.ಮೀ. ದೂರದಲ್ಲಿರುವ ರುಮೇನಿಯಾ ದೇಶದ ಗಡಿಪ್ರದೇಶಕ್ಕೆ ನೂರಾರು ಬಸ್ಸುಗಳಲ್ಲಿ ಸುಖವಾಗಿ ಕರೆತಂದಿದ್ದಾರೆಂದು ಕುಶಾಲ್ ತುಂಬಾ ಸಂತಸದಿಂದ ವರದಿ ಮಾಡಿದ್ದಾನೆ.
ಅಲ್ಲದೆ ದೂತಾವಾಸದವರು ತನಗೆ ಉಚಿತವಾಗಿ ಕೊಟ್ಟ ವಿಮಾನದ ಬೋರ್ಡಿಂ ಪಾಸನ್ನು ತನ್ನ ಪಾಸ್ ಪೋರ್ಟ್ ನಲ್ಲಿ ಕಾಣುವಂತೆ ಇಟ್ಟು ಅದರ ಚಿತ್ರವನ್ನೂ ನಮಗೆ ರವಾನಿಸಿದ್ದಾನೆ. ವಿಮಾನ ಹತ್ತುವ ಮುನ್ನ ರುಮೇನಿಯಾ ದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳೆಲ್ಲರಿಗೂ ತಂಗಲು ವ್ಯವಸ್ಥೆ ಮಾಡಿದ್ದ ವಿಶಾಲವಾದ ತಂಗುದಾಣದ ಚಿತ್ರವನ್ನೂ ವಾಟ್ಸಾಪ್ ಮಾಡಿರುತ್ತಾನೆ.
ಸುಮಾರು 50 ಜನ ಕರ್ನಾಟಕದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮೊನ್ನೆ ತಾನೆ ದೆಹಲಿ ತಲುಪಿ ಕರ್ನಾಟಕ ಭವನದಲ್ಲಿದ್ದು ಬೆಂಗಳೂರಿಗೆ ಸುಖವಾಗಿ ತಲುಪಿದ್ದಾರೆ. “ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ” ಎಂಬುದರ ನಿಜಾರ್ಥವೇನೆಂದು ಮನಗಂಡಿದ್ದಾರೆ.
ಉಕ್ರೇನ್ ನಲ್ಲಿರುವ ಎಲ್ಲ ಯುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ತಾಯ್ನಾಡಿಗೆ ಸುಖವಾಗಿ ತಲುಪುವಂತೆ “ಆಪರೇಷನ್ ಗಂಗಾ” ಹೆಸರಿನಲ್ಲಿ ಕಾರ್ಯಾಚರಣೆಗೆ ತಂದ ಭಾರತೀಯ ದೂತಾವಾಸಗಳ ಎಲ್ಲ ರಾಯಭಾರಿಗಳು ಮತ್ತು ಎಲ್ಲ ಪದಾಧಿಕಾರಿಗಳು ಅಭಿನಂದನಾರ್ಹರು. ಯುದ್ಧದ ಭೀಕರ ಸಂದರ್ಭದಲ್ಲಿ ಧೃತಿಗೆಡದೆ ಅವರು ಮಾಡಿದ ದಣಿವರಿಯದ ಶ್ರಮ ನಿಜಕ್ಕೂ ಸಾರ್ಥಕ. ನವೀನ್ ಗುಂಡಿಗೆ ಬಲಿಯಾದ ದುಃಖಕರ ಸಂಗತಿ ಕುಶಾಲ್ ನಿಂದ ತಿಳಿದೊಡನೆಯೇ ಅವನ ತಂದೆ ಶೇಖರಪ್ಪ ಗ್ಯಾನಗೌಡ್ರ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದಾಗ ಮತ್ತು ಮೊನ್ನೆ ಅವರ ಮನೆಗೆ ಖುದ್ದಾಗಿ ಹೋದಾಗ ಅವರು ಮತ್ತು ಅವರ ಧರ್ಮಪತ್ನಿಯ ದುಃಖ ಮಡುಗಟ್ಟಿತ್ತು, ಕಿಸಾ ಗೌತಮಿ ತನ್ನ ಮಗುವನ್ನು ಬದುಕಿಸಿಕೊಡಿ ಎಂದು ಗೌತಮ ಬುದ್ಧನನ್ನು ಕೇಳಿದಂತೆ ಅವರು ನಮ್ಮನ್ನು ಕೇಳಲಿಲ್ಲ. ವಾಸ್ತವತೆಯ ಅರಿವುಳ್ಳ ಅವರು “ನನ್ನ ಮಗನ ಮೃತ ದೇಹವನ್ನಾದರೂ ನೋಡಲು ತರಿಸಿಕೊಡಿ” ಎಂದು ಅಂಗಲಾಚಿ ಬೇಡಿಕೊಂಡರು. ಅದೂ ಆಗದಿದ್ದರೆ ಕೊನೆಯ ಪಕ್ಷ ಅವನ ಕಳೇಬರದ ಭಾವಚಿತ್ರವನ್ನಾದರೂ ತರಿಸಿಕೊಡಿ” ಎಂದು ಕಣ್ಣೀರಿಟ್ಟರು. ಅವರ ಮನೆಗೆ ಹೋದಾಗ ಪ್ರಧಾನಿ ಮೋದಿಯವರು ಸಹ ದೂರವಾಣಿಯಲ್ಲಿ ಮಾತನಾಡಿ ಅವರನ್ನು ಕೆಳಕಂಡಂತೆ ಸಂತೈಸಿದ ವಿಷಯ ತಿಳಿಸಿದರು:
“ಹಮ್ ಆಪ್ ಕಾ ಔರ್ ಮಾ ಕಾ ದುಃಖ್ ಅಚ್ಚೀ ತರಹ್ ಸಮಝ್ ಸಕ್ತೆ ಹೈ, ವಹ್ ಆಪ್ ಕಾ ಬೇಟಾ ನಹೀ, ಹಮಾರೇ ದೇಶ್ ಕಾ ಬೇಟಾ ಹೈ. ಯಹ್ ಹಮಾರೀ ಜಿಮ್ಮೇದಾರೀ ಹೈ, ವಹಾಂ ಕೀ ಹಾಲತ್ ಬಹುತ್ ಖರಾಬ್ ಹೈ, ಲೇಕಿನ್ ಹಮ್ ಪೂರೇ ತರಹ್ ಖೋಷಿಷ್ ಕರೇಂಗೆ.”
-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ
ದಿನಾಂಕ 10-3-2022
ವಿಜಯ ಕರ್ನಾಟಕ