ಉಕ್ರೇನ್ ನಿಂದ ನಿರ್ಜೀವವಾಗಿ ತಾಯ್ನಾಡಿಗೆ ಮರಳಿದ ನವೀನ್!

ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳನ್ನು ಭಾರತ ಸರ್ಕಾರ ಮತ್ತು ವಿದೇಶಗಳಲ್ಲಿರುವ ಭಾರತೀಯ ದೂತಾವಾಸಗಳ ಎಲ್ಲ ರಾಯಭಾರಿಗಳು ಮತ್ತು ಪದಾಧಿಕಾರಿಗಳು ಅಹರ್ನಿಶಿ ಶ್ರಮ ವಹಿಸಿ ಆಪರೇಷನ್ ಗಂಗಾ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಸ್ವದೇಶಕ್ಕೆ ಸುರಕ್ಷಿತವಾಗಿ ಬರುವಂತೆ ಮಾಡಿದ್ದು ಪ್ರಶಂಸನೀಯವಾದ ಸಂಗತಿ. ಅವರಲ್ಲಿ ಕರ್ನಾಟಕದ ನವೀನ್ ಎಂಬ ವಿದ್ಯಾರ್ಥಿ ಮಾತ್ರ ಅಡಗುದಾಣದಲ್ಲಿ ಆಹಾರವಿಲ್ಲದೆ ಕಂಗಾಲಾಗಿ ಕುಳಿತಿದ್ದ ತನ್ನ ಸ್ನೇಹಿತರಿಗೂ ಹಾಗೂ ತನಗೂ ಆಹಾರ ಸಾಮಾಗ್ರಿಗಳನ್ನು ತರಲು ಧೈರ್ಯ ಮಾಡಿ ಅಂಗಡಿಗೆ ಹೋದಾಗ ಅಚಾನಕ್ ಗುಂಡಿಗೆ ಬಲಿಯಾಗಿದ್ದು ಅತ್ಯಂತ ದುರದೃಷ್ಟಕರ. ವಿಜಯನಗರದ ಪ್ರೌಢ ಪ್ರತಾಪದೇವರಾಯನ ಮಂತ್ರಿ ಲಕ್ಷೀಧರ ಅಮಾತ್ಯನ ಕಾಲದ ಒಂದು ಶಾಸನದಲ್ಲಿ (ಕ್ರಿ.ಶ 1411) “ಅಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು ಮಿತ್ರರ್ಗೆ ಇಂಬುಗೆಯ್” ಎಂದು ಬರೆದಿರುವಂತೆ ಮಿತ್ರರಿಗೆ ಸಹಾಯ ಮಾಡಲು ಹೋದ ನವೀನ್ ತನ್ನ ನಿಸ್ವಾರ್ಥ ಗುಣದಿಂದ ತನ್ನ ಜೀವಕ್ಕೇ ಎರವಾಗಿದ್ದಾನೆ. ಶಾಸನದ ಆಶಯವನ್ನು ಸಾಕಾರಗೊಳಿಸಿದ ತ್ಯಾಗಜೀವಿ ಯುವ ಕನ್ನಡಿಗನಾಗಿದ್ದಾನೆ. ಈ ದುಃಖದ ವಾರ್ತೆ ತಿಳಿದೊಡನೆ ಅವನ ತಂದೆ-ತಾಯಿ ಮತ್ತು ಕುಟುಂಬದ ಸದಸ್ಯರನ್ನು ಸಂತೈಸಲು ರಾಣೇಬೆನ್ನೂರು ತಾಲ್ಲೂಕು ಚಳಗೇರಿ ಗ್ರಾಮಕ್ಕೆ ಖುದ್ದಾಗಿ ಹೋದಾಗ ಅವರ ದುಃಖ ಮಡುಗಟ್ಟಿತ್ತು. ಕಿಸಾ ಗೌತಮಿ ತನ್ನ ಮಗುವನ್ನು ಬದುಕಿಸಿಕೊಡಿ ಎಂದು ಗೌತಮ ಬುದ್ಧನನ್ನು ಕೇಳಿದಂತೆ ಅವರು ನಮ್ಮನ್ನು ಕೇಳಲಿಲ್ಲ. ವಾಸ್ತವತೆಯ ಅರಿವುಳ್ಳ ಅವರು ನನ್ನ ಮಗನ ಮೃತ ದೇಹವನ್ನಾದರೂ ನೋಡಲು ತರಿಸಿಕೊಡಿ ಎಂದು ಅಂಗಲಾಚಿ ಬೇಡಿಕೊಂಡರು. ಅದೂ ಆಗದಿದ್ದರೆ "ಕೊನೆಯ ಪಕ್ಷ ಅವನ ಕಳೇಬರದ ಭಾವಚಿತ್ರವನ್ನಾದರೂ ತರಿಸಿಕೊಡಿ” ಎಂದು ಕಣ್ಣೀರಿಟ್ಟ ವಿಚಾರವನ್ನು ಈ ಹಿಂದಿನ ಅಂಕಣದಲ್ಲಿ ಬರೆಯಲಾಗಿದೆ.
“ವಹ್ ಆಪ್ ಕಾ ಬೇಟಾ ನಹೀಂ, ಹಮಾರೇ ದೇಶ್ ಕಾ ಬೇಟಾ ಹೈ, ಯಹ್ ಹಮಾರೀ ಜಿಮ್ಮೇದಾರೀ ಹೈ. ಹಮ್ ಪೂರೀ ತರಹ್ ಖೋಷಿಷ್ ಕರೇಂಗೆ” ಎಂದು ಭಾರತದ ಪ್ರಧಾನಿ ಮೋದಿಯವರು ನವೀನ್ ತಂದೆ ಶೇಖರಪ್ಪ ಗ್ಯಾನಗೌಡರ್ ಗೆ ದೂರವಾಣಿಯಲ್ಲಿ ಕರೆ ಮಾಡಿ ಹೇಳಿದ ಮಾತು ಕೇವಲ ತಾತ್ಪೂರ್ತಿಕವಾಗಿರದೆ ಕಾರ್ಯರೂಪಕ್ಕೆ ಬಂದಿರುವುದು ಇಡೀ ದೇಶದ ಜನರನ್ನು ಚಕಿತಗೊಳಿಸಿದೆ. ಉಕ್ರೇನ್ ನಿಂದ ಪೋಲೆಂಡಿನ ವಾರ್ಸಾ ಮತ್ತು ದುಬೈ ಮೂಲಕ ನವೀನ್ ಕಳೇಬರ ದಿನಾಂಕ 21.3.2022 ರಂದು ಸೋಮವಾರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ತಲುಪಿ ಬೆಳಗ್ಗೆ 9 ಗಂಟೆಗೆ ಸ್ವಗ್ರಾಮ ತಲುಪಿದ್ದು ನೊಂದ ಜೀವಗಳಿಗೆ ನಿಜವಾದ ಸಾಂತ್ವನವನ್ನು ನೀಡಿದೆ. ಭೀಕರ ಯುದ್ಧದ ನಡುವೆಯೂ ಪ್ರಧಾನಿ ಮಾಡಿದ ಈ ಪ್ರಯತ್ನ ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದ ಚರಿತ್ರಾರ್ಹ ಘಟನೆಯಾಗಿದೆ. ಮಾರ್ಚ್ 1 ರಂದು ಮಡಿದ ನವೀನ್ ಯುವಕನ ಮೃತ ಶರೀರವನ್ನು 21 ದಿನಗಳ ಕಾಲ ಕೆಡದಂತೆ ಕಾಯ್ದಿರಿಸಿದ ಉಕ್ರೇನ್ ದೇಶದ ಅಧಿಕಾರಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ವರ್ಗದವರು ಅಭಿನಂದನಾರ್ಹರು. ಮೂರು ವಾರಗಳ ಕಾಲ ಮೃತ ಶರೀರವನ್ನು ಇಡಲು ಬರುತ್ತದೆಯೆಂದು ಯಾರೂ ನಂಬಿರಲಿಲ್ಲ. ಯುದ್ಧ ಕಾಲದಲ್ಲಿ ಉಕ್ರೇನ್ ನಿಂದ ತರಿಸಲು ಸಾಧ್ಯವಿಲ್ಲ ಎಂದು ಎಲ್ಲರೂ ಅನುಮಾನ ವ್ಯಕ್ತಪಡಿಸಿದ್ದರು. ನವೀನ್ ಶವಪೆಟ್ಟಿಗೆ ಸೋಮವಾರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ತಲುಪಿದಾಗ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಅಪರಾತ್ರಿಯಲ್ಲಿ ಖುದ್ದಾಗಿ ವಿಮಾನ ನಿಲ್ದಾಣಕ್ಕೆ ಹೋಗಿದ್ದು ಮತ್ತು ಅಂದೇ ಬೆಳಗ್ಗೆ ಚಳಗೇರಿ ಗ್ರಾಮಕ್ಕೆ ಬಂದು ದಿವಂಗತ ನವೀನ್ ತಂದೆ-ತಾಯಿರನ್ನು ಸಂತೈಸಿದ್ದನ್ನು ಕಣ್ಣಾರೆ ನೋಡಿ ಅವಾಕ್ಕಾದೆವು. ಅವರೊಂದಿಗೆ ಮಾತನಾಡುವಾಗ ಅವರು ಲವಲವಿಕೆಯಿಂದ ಇದ್ದು ಮುಖದಲ್ಲಿ ನಿದ್ದೆಗಣ್ಣಿನ ಯಾವ ಛಾಯೆಯೂ ಇರಲಿಲ್ಲ. ಪ್ರಜಾಪ್ರಭುತ್ವದಲ್ಲಿ ಜನನಾಯಕರು ಮಾಡಬೇಕಾದ ಕೆಲಸವಿದು. "ಜನ ಸೇವೆಯೇ ಜನಾರ್ಧನನ ಸೇವೆ" ಎನ್ನುವಂತೆ ಜನಹಿತಕ್ಕಾಗಿ ಮಾನವೀಯ ನೆಲೆಯಲ್ಲಿ ಮಾಡುವ ಇಂತಹ ಕಾರ್ಯಗಳು ಸದಾ ಕಾಲ ಸ್ಮರಣೀಯವಾಗಿರುತ್ತವೆ.
2014 ರಲ್ಲಿಯೇ ಉಕ್ರೇನ್ ಜನರಲ್ಲಿ ಯುದ್ದದ ಭೀತಿ ಇತ್ತು ಎಂದು ದಿವಂಗತ ನವೀನನ ಆತ್ಮೀಯ ಮಿತ್ರ ಅದೇ ಊರಿನ ಸೀನಿಯರ್ ವೈದ್ಯಕೀಯ ವಿದ್ಯಾರ್ಥಿ ಡಾ. ಸುಮನ್ ಶ್ರೀಧರ್ ವೈಶ್ಯರ್ ಹೇಳುತ್ತಾನೆ. ಉಕ್ರೇನ್ ನಲ್ಲಿ ಓದುತ್ತಿರುವ ಎಲ್ಲ ಕನ್ನಡಿಗ ವಿದ್ಯಾರ್ಥಿಗಳನ್ನು ಸಂಘಟಿಸಿ ಕನ್ನಡ ರಾಜ್ಯೋತ್ಸವವನ್ನು ಆಯೋಜಿಸುವ ಮಣಿಹದ ಮುಂಚೂಣಿಯಲ್ಲಿ ನವೀನ್ ಇದ್ದ ಎಂದು ಡಾ. ಸುಮನ್ ಭಾವುಕನಾಗಿ ನೆನೆಸಿಕೊಂಡು ನಮಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾನೆ. ದಿನಾಂಕ 15.2.2022 ರಿಂದ ಇಲ್ಲಿಯವರೆಗೆ ಅಂಡರ್ ಗ್ರೌಂಡ್ ಮೆಟ್ರೋವನ್ನು ಬಂಕರ್ ತರಹ ಬಳಸುತ್ತಿದ್ದುದು, ಬಾಂಬ್ ಸ್ಫೋಟದಿಂದ ಕಟ್ಟಡಗಳು ನಡುಗುತ್ತಿದ್ದುದು, ರಸ್ತೆಗಳ ಮೇಲೆಲ್ಲಾ ಗುಂಡಿನ ಸುರಿಮಳೆ, ಹೊರಗೆ ಹೋಗಲಾಗದೆ ಹಸಿವು, ಬಾಯಾರಿಕೆ ಮತ್ತು ಭಯದಿಂದ ರಾತ್ರಿ ಕಳೆಯುತ್ತಿದ್ದುದು, ನವೀನ್ ಮತ್ತಿತರ ಮಿತ್ರರ ಜೊತೆಗೆ ಕಾನ್ಫರೆನ್ಸ್ ಕರೆ ಮಾಡುತ್ತಿದ್ದುದು, ಅಲ್ಲಿಂದ ತಪ್ಪಿಸಿಕೊಂಡು ಓಡಿಹೋಗಲು ನಡೆಸಿದ ವಿಫಲ ಪ್ರಯತ್ನ, ನವೀನನ ದುರ್ಮರಣದ ಸುದ್ದಿಯನ್ನು ಕೇಳಿ ತಲೆ ಸುತ್ತು ಬಂದು ಬಿದ್ದದ್ದು ಇತ್ಯಾದಿ ನಡೆದ ಎಲ್ಲ ವಿದ್ಯಮಾನಗಳನ್ನು ವಿವರವಾಗಿ ಬರೆದು ಕಳುಹಿಸಿದ್ದಾನೆ. ತಾನು ಓದುತ್ತಿದ್ದ ನೂರಾರು ವರ್ಷಗಳ ಇತಿಹಾಸವುಳ ವಿಶ್ವವಿದ್ಯಾನಿಲಯದ ಕಟ್ಟಡ ಸಂಪೂರ್ಣವಾಗಿ ಧ್ವಂಸಗೊಂಡಿದ್ದನ್ನು ನೆನೆಸಿಕೊಂಡು ಸ್ವರ್ಗದಂತಿದ್ದ ಉಕ್ರೇನ್ ದೇಶವನ್ನು ನರಕ ಮಾಡಿದ ರಷ್ಯನ್ ಸರಕಾರದ ಮೇಲೆ ನನಗೆ ತುಂಬಾ ಕೋಪವಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುತ್ತಾನೆ. ನವೀನ್ ಬಾಲ್ಯದಿಂದಲೂ ತುಂಬಾ ಪ್ರತಿಭಾನ್ವಿತ ವಿದ್ಯಾರ್ಥಿ. ರಾಣೇಬೆನ್ನೂರಿನ ಸೇಂಟ್ ಲಾರೆನ್ಸ್ ನರ್ಸರಿ ಶಾಲೆಯಿಂದ ಆರಂಭಗೊಂಡು ತಂದೆ ಶೇಖರಪ್ಪ ಗ್ಯಾನಗೌಡರ್ ಉದ್ಯೋಗ ನಿಮಿತ್ತ ಮೈಸೂರಿನ ನಂಜನಗೂಡಿಗೆ ವಲಸೆ ಹೋದ ಕಾರಣ ಅಲ್ಲಿಯೇ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜಿನವರೆಗೆ ಶಿಕ್ಷಣ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣನಾದ. ತಾನು ಅತ್ಯುತ್ತಮ ವೈದ್ಯನಾಗಬೇಕೆಂಬ ಕನಸು ಹೊತ್ತು ಉಕ್ರೇನ್ ದೇಶದ ಎರಡನೆಯ ಪ್ರಮುಖ ನಗರವಾದ ಖಾರ್ಕೀವ್ ನ ರಾಷ್ಟ್ರೀಯ ವೈದ್ಯಕೀಯ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಹಿಂದೆ ಪ್ರವೇಶ ಪಡೆದು ಅಲ್ಲಿಯೂ ಕಾಲೇಜಿನಲ್ಲಿ ಅತ್ಯುತ್ತಮ ವೈದ್ಯಕೀಯ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದನು. ತಂದೆ ಶೇಖರಪ್ಪ ಹುಲುಕೋಟೆಯಲ್ಲಿ ಡಿಪ್ಲೊಮೋ ಮಾಡಿ ಹುಬ್ಬಳ್ಳಿ ಮತ್ತು ಕುಕನೂರು ಗಣಿಯಲ್ಲಿ ಕೆಲಸ ಮಾಡಿ ನಂತರ ಅಬುಧಾಬಿಯಲ್ಲಿ 9 ವರ್ಷಗಳ ಕಾಲ ಇಂಜಿನಿಯರಾಗಿ ಕಾರ್ಯ ನಿರ್ವಹಿಸಿದವರು. ಆನಂತರ ಸ್ವದೇಶಕ್ಕೆ ಹಿಂದಿರುಗಿ ನಂಜನಗೂಡಿನ ಪೇಪರ್ ಮಿಲ್ ನಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿ 2020 ರಲ್ಲಿ ಸ್ವಂತ ಊರಿಗೆ ಮರಳಿ ಬಂದು ಕೃಷಿ ಕಾಯಕದಲ್ಲಿ ತೊಡಗಿದವರು.
ನವೀನ್ ಅಣ್ಣನಾದ ಹರ್ಷ ಕೃಷಿ ವಿಜ್ಞಾನದಲ್ಲಿ ಡಾಕ್ಟರೇಟ್ ಮಾಡುತ್ತಿದ್ದು ತನ್ನ ತಮ್ಮನ ಅಗಲಿಕೆಯಿಂದ ತುಂಬಾ ನೊಂದು ಕೆಳಕಂಡಂತೆ ನಮಗೆ ವಾಟ್ಸಾಪ್ ಸಂದೇಶ ಕಳುಹಿಸಿರುತ್ತಾನೆ: “ನನ್ನ ತಮ್ಮ ನವೀನ್ ಚಿಕ್ಕಂದಿನಿಂದಲೂ ತುಂಬಾ ಚತುರ ಮತ್ತು ಸಂಭಾವಿತ, ನಾವು ಬಹಳ ಹೊತ್ತು ಒಟ್ಟಿಗೆ ಆಟ ಆಡುತ್ತಿದ್ದೆವು; ಒಮ್ಮೊಮ್ಮೆ ಜಗಳ ಸಹ ಮಾಡುತ್ತಿದ್ದೆವು. ಆಗ ನಮ್ಮ ತಾಯಿ ಸಮಾಧಾನಪಡಿಸುತ್ತಿದ್ದರು. ಅವನು ನನಗಿಂತಲೂ ತುಂಬಾ ಧಾರ್ಮಿಕ ಪ್ರವೃತ್ತಿಯುಳ್ಳವನಾಗಿದ್ದನು. ನನ್ನ ತಮ್ಮನೊಂದಿಗೆ ಚಿಕ್ಕಂದಿನಿಂದ ಇದ್ದ ಆತ್ಮೀಯ ಒಡನಾಟವನ್ನು ನಾನು ಎಂದೂ ಮರೆಯಲಾರೆ ಮತ್ತು ಶಬ್ದಗಳಲ್ಲಿ ವರ್ಣಿಸಲಾರೆ. ಅವನು ತುಂಬಾ ಮೃದು ಸ್ವಭಾವದವನಾಗಿದ್ದು ಸ್ನೇಹಿತರ ಜೊತೆಗೆ ಮತ್ತು ಸಾಕು ಪ್ರಾಣಿಗಳ ಜೊತೆಗೆ ತುಂಬಾ ಕಾಲ ಕಳೆಯುತ್ತಿದ್ದನು. ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ನಾನು ಮನೆ ಬಿಟ್ಟು ಹೋದಾಗ ಅವನೊಂದಿಗೆ ಹೆಚ್ಚು ಸಮಯ ಕಳೆಯಲಾಗಲಿಲ್ಲ. ಅವನ ದುರ್ಮರಣವು ನನಗೆ ತೀವ್ರ ಆಘಾತವನ್ನುಂಟುಮಾಡಿದೆ. ನಾನು ಜರ್ಝರಿತನಾಗಿದ್ದೇನೆ. ನನಗಿಂತ ಚಿಕ್ಕವನು ಅವನು. ಇಷ್ಟು ಬೇಗ ಅವನು ಏಕೆ ಈ ಲೋಕದಿಂದ ಕಣ್ಮರೆಯಾಗಬೇಕಾಗಿತ್ತು ಎಂಬ ಪ್ರಶ್ನೆ ನನ್ನನ್ನು ಕಾಡಿಸುತ್ತಿದೆ. ನನ್ನಂತೆ ಅವನನ್ನು ಬಹಳ ಕಾಲ ಜೀವಿಸಲು, ತಂದೆತಾಯಿಗಳ ಸೇವೆ ಮಾಡಲು ದೇವರು ಏಕೆ ಅವಕಾಶ ಮಾಡಿಕೊಡಲಿಲ್ಲ? ಎಂಬ ತೀವ್ರ ಆಕ್ರೋಶ ನನ್ನ ಹೃದಯದಲ್ಲಿದೆ! ಅವನ ಹೆಸರು ಈ ಲೋಕದಲ್ಲಿ ಅಜರಾಮರವಾಗಿ ಉಳಿಯುವಂತೆ ಏನಾದರೂ ಮಾಡಬೇಕೆಂಬ ಹಂಬಲ ನನಗಿದೆ.”
ತಂದೆಯಾದ ಶೇಖರಪ್ಪ ಗ್ಯಾನಗೌಡರ್ ತನ್ನ ಮಗನನ್ನು ಕುರಿತು ಹೇಳುವ ಮಾತು: “ನವೀನ್ ತುಂಬಾ ಮೃದು ಸ್ವಭಾವದವನು, ದಯಾಪರನೂ ಸಹ. ಬಾಲ್ಯದಿಂದ ಸ್ನೇಹಿತರೊಂದಿಗೆ ಬೆರೆತು ಸಹಾಯ ಮಾಡುವ ಸ್ವಭಾವವುಳ್ಳವನಾಗಿದ್ದನು. ಓದುವುದರಲ್ಲಿ ತುಂಬಾ ಜಾಣ. ಎಲ್ಲ ತರಗತಿಗಳಲ್ಲಿ ಮೊದಲ ಸ್ಥಾನ ಪಡೆಯುತ್ತಿದ್ದನು. ನಾನು ಉದ್ಯೋಗದ ನಿಮಿತ್ತ ಬೇರೆ ಬೇರೆ ಸ್ಥಳಗಳಿಗೆ ಹೋಗುವ ಪ್ರಸಂಗ ಬಂದು ಶಾಲೆ ಬದಲಾವಣೆಯಾದರೂ ಅವನ ವಿದ್ಯಾಭ್ಯಾಸ ಕುಂಠಿತವಾಗದೆ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿ ಮುಂದುವರೆದ, ಚಿತ್ರಕಲೆ ಮತ್ತು ರಸಪ್ರಶ್ನೆ ಸ್ಪರ್ಧೆಗಳಲ್ಲಿ ಅವನು ಅನೇಕ ಬಹುಮಾನಗಳನ್ನು ಪಡೆದಿದ್ದ. ಮೆಡಿಕಲ್ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿದ್ದರೂ ಮೀಸಲಾತಿಯ ಕಾರಣದಿಂದ ಅವನಿಗೆ ಮೆಡಿಕಲ್ ಸೀಟು ದೊರೆಯಲಿಲ್ಲ. ಅವನು ಡಾಕ್ಟರ್ ಆಗಲೇಬೇಕೆಂಬ ಕನಸನ್ನು ಹೊತ್ತು ಇತರೆ ವಿದ್ಯಾರ್ಥಿಗಳಂತೆ ಉಕ್ರೇನ್ ದೇಶದ ಖಾರ್ಕೀವ್ ನಗರಕ್ಕೆ ಹೋದ. ಹೆಚ್ಚಿನ ಸಮಯವನ್ನು ಅಲ್ಲಿಯ ಗ್ರಂಥಾಲಯಗಳಲ್ಲಿ ಕಳೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣನಾಗುತ್ತಾ ಬಂದ. ಡಾಕ್ಟರಾಗಿ ಹಳ್ಳಿಗೆ ಬಂದು ಒಂದು ಆಸ್ಪತ್ರೆಯನ್ನು ತೆರೆದು ಬಡಜನರಿಗೆ ಚಿಕಿತ್ಸೆ ನೀಡಬೇಕೆಂಬ ಹಂಬಲ ಅವನಿಗಿತ್ತು. ದುರದೃಷ್ಟವಶಾತ್ ಅವನ ಕನಸುಗಳೆಲ್ಲಾ ನುಚ್ಚು ನೂರಾದವು! ಇದರಿಂದ ನನಗೆ ತುಂಬಾ ಆಘಾತವಾಗಿದೆ.”
ಉಕ್ರೇನ್ ನಿಂದ ತನ್ನ ಮಗನ ಕಳೇಬರ ಬೆಂಗಳೂರಿಗೆ ಬರುತ್ತಿದೆ ಎಂದು ಖಚಿತವಾಗುತ್ತಿದ್ದಂತೆಯೇ ಶೇಖರಪ್ಪ ಗ್ಯಾನಗೌಡರ್ ಅವರಿಂದ ನಮಗೆ ಮೊಬೈಲ್ ಕರೆ ಬಂತು. “ಬುದ್ದೀ, ವೈದ್ಯನಾಗಬೇಕೆಂಬ ನನ್ನ ಮಗನ ಕನಸಂತೂ ಈಡೇರಲಿಲ್ಲ, ಬೇರೆಯವರ ಮಕ್ಕಳಾದರೂ ನನ್ನ ಮಗನ ಮೃತ ಶರೀರವನ್ನು ಅಧ್ಯಯನ ಮಾಡಿ ಒಳ್ಳೆಯ ವೈದ್ಯರಾಗಲಿ. ಅವನ ಶರೀರವನ್ನು “ಮಣ್ಣು ಮಾಡದೆ ಯಾವುದಾದರೂ ವೈದ್ಯಕೀಯ ಕಾಲೇಜಿಗೆ ದಾನಮಾಡಬೇಕೆಂದಿದ್ದೇನೆ, ಒಪ್ಪಿಸಿಕೊಡಿ” ಎಂದಾಗ ಒಂದು ಕ್ಷಣ ಸ್ತಂಭೀಭೂತರಾದೆವು. ತಕ್ಷಣವೇ ದಾವಣಗೆರೆಯ ಎಸ್.ಎಸ್. ಆಸ್ಪತ್ರೆಯ ಪ್ರಾಂಶುಪಾಲರಾದ ಡಾ. ಪ್ರಸಾದ್ ರವರಿಗೆ ಫೋನ್ ಕರೆ ಮಾಡಿ ಒಪ್ಪಿಸಿ ಶೇಖರಪ್ಪನವರಿಗೆ ತಿಳಿಸಿದಾಗ ಸಮಾಧಾನದ ನಿಟ್ಟುಸಿರುಬಿಟ್ಟರು. ನವೀನ್ ತಾಯಿಯಾದ ವಿಜಯಲಕ್ಷ್ಮೀ ಗ್ಯಾನಗೌಡರ್ ಅವರು “ನನ್ನ ಮಗ ನವೀನ್ ನಾಗರಪಂಚಮಿಯಂದು ಹುಟ್ಟಿದ, ಮಹಾಶಿವರಾತ್ರಿಯಂದು ಮರಣ ಹೊಂದಿದ, ಸಂಕಷ್ಟಿಯಂದು ಅವನ ಮೃತಶರೀರವನ್ನು ದಾನ ಮಾಡಲು ನಮ್ಮ ಯಜಮಾನರು ಕೈಗೊಂಡ ತೀರ್ಮಾನಕ್ಕೆ ನನ್ನ ಒಪ್ಪಿಗೆ ಇದೆ” ಎಂದು ಹೇಳಿದ್ದನ್ನು ಹಿರಿಯ ಮಗನಾದ ಹರ್ಷನಿಂದ ತಿಳಿದು ಹೃದಯ ಗದ್ಗದಿತವಾಗಿ ಬಸವಣ್ಣನವರ ಈ ಕೆಳಗಿನ ವಚನ ನೆನಪಾಯಿತು:
ನೀ ಹುಟ್ಟಿಸಿದಲ್ಲಿ ಹುಟ್ಟದೆ, ನೀ ಕೊಂದಲ್ಲಿ ಸಾಯದೆ
ಎನ್ನ ವಶವೇ ಆಯಾ?
ನೀವಿರಿಸಿದಲ್ಲಿ ಇರದೆ ಎನ್ನ ವಶವೇ ಆಯ್ತಾ?
ಅಕಟಕಟಾ...ಕೂಡಲಸಂಗಮದೇವಾ!
- ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು, ಸಿರಿಗೆರೆ
ಬಿಸಿಲು ಬೆಳದಿಂಗಳು-480
ವಿಜಯ ಕರ್ನಾಟಕ : 24.3.2022