ಕರ್ನಾಟಕ ಜಾನಪದ ಕ್ಷೇತ್ರಕ್ಕೆ ತರಳಬಾಳು ಮಠದ ಕೊಡುಗೆ ಅಪಾರ: ಕೆ ಯುವರಾಜ್
ಸಿರಿಗೆರೆ ಏ. 5 :- ಯುವ ಜನತೆಗೆ ಜನಪದ ಕಲೆಗಳನ್ನು ಕಲಿಸಿ, ಉಳಿಸುವ ಪ್ರಯತ್ನ ಮಾಡುತ್ತಿರುವ ತರಳಬಾಳು ಮಠದ ಈ ಪ್ರಯತ್ನ ಕರ್ನಾಟಕ ಜಾನಪದ ಕ್ಷೇತ್ರದಲ್ಲಿಯೇ ಅಪೂರ್ವವಾದುದು ಎಂದು ಕರ್ನಾಟಕ ಜಾನಪದ ಕೋಗಿಲೆ ಎಂದೆ ಹೆಸರಾದ ಕೆ ಯುವರಾಜ್ ಅಭಿಪ್ರಾಯಪಟ್ಟರು.
ಇಂದು ಸಿರಿಗೆರೆಯಲ್ಲಿ ತರಳಬಾಳು ಕಲಾಸಂಘ ಆಯೋಜಿಸಿರುವ ಜನಪದ ಕಲಾ ತರಬೇತಿ ಶಿಬಿರವನ್ನು ಡೊಳ್ಳು ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಕೆ ಯುವರಾಜ್, ನನಗೆ ಇದೊಂದು ರೋಮಾಂಚನಗೊಳಿಸಿದ ಕ್ಷಣ. 300 ವಿದ್ಯಾರ್ಥಿಗಳಿಗೆ, 25ಕ್ಕೂ ಹೆಚ್ಚು ಪ್ರಕಾರಗಳ ಜಾನಪದ ಕಲಾ ವೈಭವವನ್ನು ಯುವಜನರ ಹೃದಯಗಳಿಗೆ ತುಂಬುತ್ತಿರುವ ಈ ಶಿಬಿರ ರಾಜ್ಯದಲ್ಲಿಯೇ ಅಪೂರ್ವವಾದುದ್ದು. ಸಾಹಿತ್ಯ, ಸಂಗೀತ ಕಲೆ, ಸಂಸ್ಕೃತಿ ಇಲ್ಲದ ಹೃದಯ ಬರಡಾಗಿರುತ್ತದೆ. ಜನಪದ ಹಾಡು,ಗಾದೆ, ಒಗಟು, ಬೆಡಗು, ಮೋಜಿನಗಣಿತಗಳಿಂದ ನಮ್ಮ ಕನ್ನಡ ಭಾಷಾ ಸಂಪತ್ತು ಶ್ರೀಮಂತವಾಗಿದೆ. ಜನಪದರ ಆಡು ಭಾಷೆಯ ಸೊಗಡು ವಿಶಿಷ್ಟವಾದುದು. ಅವರಲ್ಲಿ ಶೀಲ ಅಶ್ಲೀಲಗಳೆಂಬ ಭೇದವಿಲ್ಲ. ಜನಪದರದು ಕೂಡುಸಂಸ್ಕೃತಿಯ ಸಾಮರಸ್ಯದ ಬದುಕು. ಹಳ್ಳಿಗಳಿಂದ ಬಂದಿರುವ ವಿದ್ಯಾರ್ಥಿಗಳು ಜನಪದ ಬದುಕಿನೊಂದಿಗೆ ಕಲೆಗಳನ್ನು ಮೈಗೂಡಿಸಿಕೊಳ್ಳಲು ಇಂತಹ ಶಿಬಿರಗಳು ಪೂರಕವಾಗುತ್ತವೆ ಎಂದರು. ಯುವರಾಜ್ ಹಲವು ಜನಪದ ಹಾಡುಗಳನ್ನು ಪ್ರಾತ್ಯಕ್ಷಿಕೆ ಮೂಲಕ ಹೇಳಿಕೊಡುವುದರೊಂದಿಗೆ ವಿದ್ಯಾರ್ಥಿಗಳಿಗೆ ರಂಜನೆ ಮತ್ತು ಪ್ರೇರಣೆ ನೀಡಿದರು.
ಮುಖ್ಯ ಅತಿಗಳಾಗಿದ್ದ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ಎಸ್ ಬಿ ರಂಗನಾಥ್ ಮಾತನಾಡಿ, ಅಂಕಗಳ ಮಾನದಂಡದಿಂದ ಕಲಿಯು ವಿದ್ಯೆ ಬುದ್ಧಿಗೆ ಸಂಬಂಧಿಸಿದ್ದು, ಕಲೆ, ಸಂಗೀತ, ನೃತ್ಯಗಳು ಭಾವಪ್ರಧಾನವಾದುದು. ಸುಸಂಸ್ಕೃತ ವ್ಯಕ್ತಿತ್ವವನ್ನು ರೂಢಿಸಿಕೊಳ್ಳಲು ಕಲೆಗಳು ಪೂರಕ. ಜನಪದ ಕಲೆಗಳನ್ನು ಕಲಿಯುವುದರ ಮೂಲಕ ಬದುಕನ್ನು ಶ್ರೀಮಂತಗೊಳಿಸಿಕೊಳ್ಳಿರೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತರಳಬಾಳು ಕಲಾಸಂಘದ ಅಧ್ಯಕ್ಷ ರಾಜಶೇಖರಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆರಂಭದಲ್ಲಿ ಭೀಮಸಮುದ್ರ ಶಾಲೆಯ ಕು. ಈಶ್ವರಿ ಮತ್ತು ಸಂಗಡಿಗರು ವಚನ ಗೀತೆಗಳನ್ನು ಹಾಡಿದರು. ಕಲಾಸಂಘದ ಕಾರ್ಯದರ್ಶಿ ಬಸವರಾಜ್ ಸಾರ್ಥವಳ್ಳಿ ಸ್ವಾಗತಿಸಿದರು. ಎಸ್ ಟಿ ಉಮೇಶ್ ಪ್ರಾಸ್ತವಿಕ ಮಾತುಗಳನ್ನಾಡಿದರು. ನಾಗರಾಜ ಸಿರಿಗೆರೆ ಅತಿಥಿಗಳನ್ನು ಪರಿಚಯಿಸಿದರು. ಕೊನೆಯಲ್ಲಿ ಕಾಶಿನಾಥ್ ವಂದನೆ ಸಲ್ಲಿಸಿದರು.