ವಯಸ್ಸು ಕಳೆದಂತೆ ಮನಸ್ಸು ಮಾಗಬೇಕು…., ನಗುನಗುತ್ತಾ ಜೀವಿಸಲು ಮನಸ್ಸು ತಿಳಿಯಾಗಿರಲಿ….
ಕಳೆದ ಮಾರ್ಚ್ 19 ರಂದು ದಾವಣಗೆರೆಯ ಕನ್ನಡ ಭವನದಲ್ಲಿ ಸಾಹಿತ್ಯಾಸಕ್ತರ ಒಂದು ಆತ್ಮೀಯ ಸಮಾರಂಭ ನಮ್ಮ ಸಮ್ಮುಖದಲ್ಲಿ ನಡೆಯಿತು. ನಮ್ಮ ವಿದ್ಯಾಸಂಸ್ಥೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆಯನ್ನು ಸಲ್ಲಿಸಿ ಪ್ರಾಂಶುಪಾಲರಾಗಿ ನಿವೃತ್ತರಾದ ಮೇಲೆ ಆಡಳಿತಾಧಿಕಾರಿಗಳಾಗಿರುವ ಪ್ರೊ| ಎಸ್.ಬಿ.ರಂಗನಾಥ್ ಅವರಿಗೆ ಎಂಬತ್ತು ತುಂಬಿದ ಸಂಭ್ರಮದಲ್ಲಿ ಸಹಸ್ರ ಚಂದ್ರದರ್ಶನ, ಅಭಿನಂದನೆ ಹಾಗೂ “ರಂಗವಿಸ್ತಾರ” ಎಂಬ ಅಭಿನಂದನಾ ಗ್ರಂಥದ ಲೋಕಾರ್ಪಣೆ. ಇದೇ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದ ಅವರ ಕಿರುನಗೆ ಬರೆಹಗಳ ಸಂಗ್ರಹವಾದ, ಓದುತ್ತಾ ಹೋದಂತೆ ನಗೆಯ ಕಚಗುಳಿ ಇಡುವ “ಕಚಗುಳಿ (ಗೆ) ಕಾಲ” ಕೃತಿಯ ಬಿಡುಗಡೆ. 1964-67 ಕಾಲಾವಧಿಯಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದಾಗ ನಮಗೆ ಕನ್ನಡ ಪ್ರಾಧ್ಯಾಪಕರಾಗಿದ್ದ ಸಿ.ಪಿ.ಕೆ ಅವರಿಂದ ಈ ಕೃತಿಯನ್ನು ಕುರಿತ ಮುನ್ನುಡಿ: “ರಂಗನಾಥರ ಬರವಣಿಗೆ ವಿಡಂಬನಾತ್ಮಕ, ವಿಶೇಷವಾಗಿ ರಾಜಕೀಯ ವ್ಯಕ್ತಿಗಳಿಗೆ ಅವರ ಲೆಕ್ಕಣಿಯ ಹರಿತ ತಿವಿತ, ಮುಸುಕಿನ ಗುದ್ದು. Skit ಎಂದು ಕರೆಯುವ ಈ ತರಹದ ಬರಹಗಳಲ್ಲಿ ರಂಗನಾಥ್ ಸಿದ್ಧಹಸ್ತರು, ಅಭಿರುಚಿಯ ದೃಷ್ಟಿಯಿಂದ ಶುದ್ಧಹಸ್ತರೂ ಹೌದು. ಒಟ್ಟಿನಲ್ಲಿ ಹಾಸ್ಯ-ಲಾಸ್ಯಕ್ಕೆ ಗದ್ದುಗೆ! ಅವರ ವಿನೋದ ಬರಹಗಳು ರೋಚಕ, ವ್ಯಂಗ್ಯಕ್ಕೆ ವ್ಯಂಗ್ಯಚಿತ್ರಗಳ ಮೆರುಗು!” ಎಂದು ಬಣ್ಣಿಸಿದ್ದಾರೆ.
ಇತ್ತೀಚೆಗೆ ಯಾವುದೇ ಪುಸ್ತಕವನ್ನು ಲೋಕಾರ್ಪಣೆ ಮಾಡುವಾಗ ಪುಸ್ತಕ ಬಿಡುಗಡೆ ಮಾಡಿದವರಷ್ಟೇ ಅಲ್ಲ ವೇದಿಕೆಯ ಮೇಲೆ ಇರುವ ಗಣ್ಯವ್ಯಕ್ತಿಗಳೆಲ್ಲರೂ ಎದ್ದು ನಿಂತು ಎರಡೂ ಕೈಗಳಿಂದ ಆ ಪುಸ್ತಕವನ್ನು ಹಿಡಿದು ತಮ್ಮ ಎದೆಯ ಮೇಲೆ ಒತ್ತಿಟ್ಟುಕೊಂಡು ಮಂದಸ್ಮಿತವದನರಾಗಿ ತದೇಕಚಿತ್ತದಿಂದ ಕ್ಯಾಮರಾ ಕಣ್ಣುಗಳತ್ತ ದೃಷ್ಟಿ ಹಾಯಿಸುತ್ತಾರೆ. ಸಭೆಯಲ್ಲಿ ಕ್ಷಣಕಾಲ ಮೌನ ಆವರಿಸುತ್ತದೆ. ನಮಗಂತೂ ಆ ದೃಶ್ಯವನ್ನು ನೋಡಿದಾಗಲೆಲ್ಲಾ ಪತ್ರಿಕೆಗಳಲ್ಲಿ ಆಗಾಗ್ಗೆ ಪ್ರಕಟವಾಗುವ ಪೋಲೀಸರು ಕಳ್ಳರ ಕೈಗಳಲ್ಲಿ Crime Number Slate ಕೊಟ್ಟು ತೆಗೆಸಿಕೊಂಡ ಚಿತ್ರಗಳಂತೆ ಕಾಣಿಸುತ್ತದೆ! ಇನ್ನು ಮುಂದೆ ಪುಸ್ತಕ ಬಿಡುಗಡೆ ಸಮಾರಂಭಗಳಲ್ಲಿ ತಮ್ಮ ಕೈಗೆ ಕೊಟ್ಟ ಪುಸ್ತಕಗಳನ್ನು ಗಣ್ಯರು ಬಲಗೈಯಲ್ಲಿ ಎತ್ತಿಹಿಡಿದು ತೋರಿಸುವುದು ವಿಹಿತ ಎಂದು ನಮ್ಮ ಸಲಹೆ! ಅದರ ಮೇಲೆ ಕಳ್ಳರಾಗುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ!
ನಗು ಸಮುದ್ರದ ಮೇಲಿನ ಅಲೆಗಳಂತೆ! ಅಲೆಗಳು ಉಕ್ಕಿ ಹರಿದಂತೆ ನಕ್ಕು ನಗಿಸುವ ನಗೆಯೇ ಲೇಸು! ನಗೆಯಲ್ಲಿ ಅನೇಕ ಬಗೆ ಇವೆ. ಅವು ನಗೆಯ ಪ್ರಸಂಗ ಮತ್ತು ನಗುವ ವ್ಯಕ್ತಿಯನ್ನು ಅವಲಂಬಿಸಿರುತ್ತವೆ. ಹುಸಿನಗೆ, ಮುಗುಳ್ನಗೆ, ತುಂಟನಗೆ, ವಿಷಾದದ ನಗೆ, ವಿಕೃತ ನಗೆ, ಗಹಗಹಿಸಿ ನಗುವುದು, ಬಿದ್ದು ಬಿದ್ದು ನಗುವುದು, ಹೊಟ್ಟೆ ಹುಣ್ಣಾಗುವಂತೆ ನಗುವುದು ಇತ್ಯಾದಿ. ಒಂದು ಇನ್ನೊಂದಕ್ಕೆ ಇರುವ ವ್ಯತ್ಯಾಸ “ತುಟಿ ಎಷ್ಟರಮಟ್ಟಿಗೆ ತೆರೆದಿರುತ್ತದೆ, ಹಲ್ಲು ಸಾಲಿನ ಎಷ್ಟು ಭಾಗ ಗೋಚರಿಸುತ್ತದೆ, ಕಣ್ಣು ಎಷ್ಟು ಅಗಲವಾಗಿ ಅರಳುತ್ತದೆ, ಶಬ್ದ ಕೇಳಿಬರುತ್ತದೆಯೇ, ಕಣ್ಣೀರು ಹರಿಯುತ್ತದೆಯೇ, ಮೈಯ ಅಂಗಗಳು ಕಂಪಿಸುತ್ತವೆಯೇ? ಎಂಬ ವಿವರಗಳನ್ನು ಅವಲಂಬಿಸಿದೆ” ಎನ್ನುತ್ತಾರೆ. “ಭಾರತೀಯ ಕಾವ್ಯಮೀಮಾಂಸೆ” ಎಂಬ ಅಪರೂಪದ ಗ್ರಂಥ ಬರೆದಿರುವ ಹಿರಿಯ ತಲೆಮಾರಿನ ಕನ್ನಡ ಸಾರಸ್ವತ ಲೋಕದ ದಿಗ್ಗಜರಾದ ತೀ.ನಂ.ಶ್ರೀ.
ನವರಸಗಳಲ್ಲಿ ಹಾಸ್ಯಕ್ಕೂ ಸ್ಥಾನ ಉಂಟು. ಭರತನ ನಾಟ್ಯಶಾಸ್ತ್ರದ ಪ್ರಕಾರ ಎಂಟು ಸ್ಥಾಯಿಭಾವಗಳಿಗೆ ಸಮನಾದ ಎಂಟು ರಸಗಳಲ್ಲಿ ಮೊದಲನೆಯದು ಶೃಂಗಾರ, ಎರಡನೆಯದು ಹಾಸ್ಯ. ಸಂಸ್ಕೃತದ ನಾಟಕಗಳಲ್ಲಿ ಕಾಣಿಸಿಕೊಳ್ಳುವ ವಿದೂಷಕನ ಪಾತ್ರ ಇದಕ್ಕೆ ಪುರಾವೆಯಾಗಿ ನಿಲ್ಲುತ್ತದೆ. ನಾಟಕಗಳಲ್ಲಿ ಹಾಸ್ಯವಿಲ್ಲವಾದರೆ ನೀರಸವೆನಿಸುತ್ತದೆ. ಜೀವನದಲ್ಲಿ ನೈಜ ಹಾಸ್ಯದ ಪಾಲುಂಟು, ಹಾಗೆಯೇ ಕಾಲ್ಪನಿಕ ಹಾಸ್ಯದ ಪಾಲೂ ಉಂಟು. ತನ್ನನ್ನೇ ತಾನು ಹಾಸ್ಯದ ವಸ್ತುವಾಗಿಸಿಕೊಳ್ಳುವವರೂ ಇದ್ದಾರೆ. ನಗೆಹಬ್ಬಗಳಲ್ಲಿ ಭಾಗವಹಿಸುವ ಸ್ಥೂಲಕಾಯದ ಇಂದುಮತಿ ಸಾಲಿಮಠ ಅವರು ತಮ್ಮನ್ನು ಆನೆಮರಿಗೆ ಹೋಲಿಸಿಕೊಂಡು ನಗುತ್ತಾರೆ, ನಗಿಸುತ್ತಾರೆ! ಈಗೀಗ ನಗರಗಳ ಉದ್ಯಾನವನಗಳಲ್ಲಿ ಬೆಳಗಿನ ಹೊತ್ತು ವಾಯುವಿಹಾರ ಹೋದಾಗ ಸಮಾನಾಸಕ್ತರು ಗುಂಪುಗೂಡಿ ಗಹಗಹಿಸಿ ಕೇಕೆ ಹಾಕಿ ನಗುವ ಲಾಫಿಂಗ್ ಕ್ಲಬ್ಬುಗಳು ಕಾಣ ಸಿಗುತ್ತವೆ. ನಗುವಿನಿಂದ ಆರೋಗ್ಯ ವರ್ಧಿಸುತ್ತದೆ ಎಂಬುದು ನಿಜ. ಆದರೆ ಸಹಜ ನಗುವಲ್ಲದ ಒತ್ತಾಯಪೂರ್ವಕವಾದ ನಗು ತನಗೆ ತಾನೇ ಕಚಕುಳಿ ಇಟ್ಟುಕೊಂಡಂತೆ. ಈ ಬಗೆಯ ಹುಚ್ಚುನಗುವಿನಿಂದ ಆರೋಗ್ಯ ವರ್ಧಿಸಲು ಹೇಗೆ ತಾನೇ ಸಾಧ್ಯ?
ಒಮ್ಮೆ ಕೇಳಿದ ಹಾಸ್ಯ ಚಟಾಕಿ ಮೊದಲ ಸಲ ಖುಷಿ ಕೊಟ್ಟಂತೆ, ಎರಡನೆಯ ಸಲ, ಮೂರನೆಯ ಸಲ ಕೊಡುವುದಿಲ್ಲ. ಮೊದಲು ಜೆರಾಕ್ಸ್ ಮಾಡಿದಾಗ ಪರವಾಗಿಲ್ಲ ಎಂಬಷ್ಟು ಒಳ್ಳೆಯ ಪ್ರಿಂಟ್ ಬರುತ್ತದೆ. ಪ್ರತಿ ಸಾರಿ ಜೆರಾಕ್ಸ್ ಮಾಡಿದ ಪ್ರತಿಯನ್ನು ಮತ್ತೆ ಮತ್ತೆ ಜೆರಾಕ್ಸ್ ಗೆ ಬಳಸಿದರೆ ಅದು ಮಬ್ಬಾಗುತ್ತಾ ಹೋಗುತ್ತದೆ. ಜೋಕುಗಳ ವಿಷಯವೂ ಹಾಗೆಯೇ. ಅದೇ ಜೋಕನ್ನು ಪುನಃ ಪುನಃ ಕೇಳುತ್ತಾ ಹೋದರೆ ಸ್ಪಂದನೆಯನ್ನು ಕಳೆದುಕೊಂಡು ಬಿಡುತ್ತದೆ. ಸಂಗೀತ ಮಾತ್ರ ಹಾಗಲ್ಲ, “ಇಂದು ನಾ ಹಾಡಿದರೂ ಅಂದಿನಂತೆಯೆ ಕುಳಿತು ಕೇಳುವಿರಿ ನಾ ಬಲ್ಲೆ, ಅದುವೆ ಸನ್ಮಾನ”ಎಂದು ರಾಷ್ಟ್ರಕವಿ ಜಿ.ಎಸ್.ಎಸ್. ತಮ್ಮ ವಿದ್ಯಾಗುರುಗಳಾದ ತ.ಸು ಶಾಮರಾಯರನ್ನು ಕುರಿತು ಹೇಳುವಂತೆ ಪ್ರತಿ ಸಲ ಅದೇ ಹಾಡನ್ನು ಹಾಡಿದಾಗಲೂ, ಕೇಳಿದಾಗಲೂ ಸಂತೋಷ ಉಕ್ಕುತ್ತದೆ. ಜೋಕುಗಳು ಜೆರಾಕ್ಸ್ ನಂತೆ ಮಬ್ಬಾಗುತ್ತಾ ಹೋದರೆ ಸಂಗೀತವು ಕಂಪ್ಯೂಟರ್ ಫೈಲ್ಗಳನ್ನು ಕಾಪಿ ಮಾಡಿದಂತೆ ನವನವೋನ್ಮೇಷಶಾಲಿನಿಯಾಗಿ ಮನಸ್ಸಿಗೆ ಮುದವನ್ನು ನೀಡುತ್ತದೆ. ನಮ್ಮ ಸ್ವಾನುಭವಕ್ಕೆ ಬಂದ ಕೆಲವು ಹಾಸ್ಯಪ್ರಸಂಗಗಳು ಹೀಗಿವೆ:
“ದಿಟ್ಟ ಹೆಜ್ಜೆ ಧೀರ ಕ್ರಮ”ಕ್ಕೆ ಹೆಸರಾದ ನಮ್ಮ ಗುರುವರ್ಯರಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಒಮ್ಮೆ ಒಂದು ಹಳ್ಳಿಯ ಕಾರ್ಯಕ್ರಮಕ್ಕೆ ಹೋಗಿದ್ದರು. ಸಮಯಕ್ಕೆ ಸರಿಯಾಗಿ ಊರ ಹೊರವಲಯ ತಲುಪಿದಾಗ ಗ್ರಾಮಸ್ಥರು ನಂದಿಧ್ವಜ, ಡೊಳ್ಳು, ಬಾಜಾಬಜಂತ್ರಿ ಇಟ್ಟುಕೊಂಡು ಸ್ವಾಗತ ಮಾಡಲು ಸಜ್ಜಾಗಿ ನಿಂತಿದ್ದರು. ಅದೇ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ಇನ್ನೋರ್ವ ಪ್ರಸಿದ್ದ ಮಠದ ಸ್ವಾಮಿಗಳು ಇನ್ನೂ ಬಂದಿರಲಿಲ್ಲ. ಅವರು ಬರುವುದು ಸ್ವಲ್ಪ ತಡವಾಗುತ್ತದೆ, ಇಬ್ಬರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಗ್ರಾಮದ ಪ್ರಮುಖರು ವಿನಂತಿಸಿಕೊಂಡರು. ನಮ್ಮ ಗುರುವರ್ಯರು ಅವರ ಮಾತನ್ನು ಕೇಳಿಸಿಕೊಂಡು “ನಮಗೆ ಡೊಳ್ಳುಗಿಳ್ಳು ಏನೂ ಬೇಡ, ಮುಂದೆ ಹೋಗಿ ವೇದಿಕೆಯ ಮೇಲೆ ಕುಳಿತುಕೊಂಡಿರುತ್ತೇವೆ. ತಡವಾಗಿ ಬರುವ ಸ್ವಾಮಿಗಳನ್ನು ನೀವು ಇಲ್ಲಿಯೇ ಕಾಯುತ್ತಾ ನಿಂತಿದ್ದು ಅವರು ಬಂದೊಡನೆ ಚೆನ್ನಾಗಿ ಬಾರಿಸಿ ವೇದಿಕೆಗೆ ಕರೆತನ್ನಿ” ಎಂದು ಹೇಳಿ ಕಾರಿನಿಂದ ಕೆಳಗೆ ಇಳಿಯದೆ ವೇದಿಕೆಯತ್ತ ಸಾಗಿದರು. (“ಚೆನ್ನಾಗಿ ಬಾರಿಸಿ” ಎಂಬ ಪದಗಳಲ್ಲಿರುವ ಶ್ಲೇಷೆಯನ್ನು ಓದುಗರು ಗಮನಿಸಬೇಕು).
ಬೆನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಅದೇ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಪದವಿಗಾಗಿ ಸಂಶೋಧನೆಯನ್ನು ಮಾಡಲು ಆರಂಭಿಸಿದಾಗ ನಮಗೆ ಯು.ಜಿ.ಸಿ ಇಂದ ಜೂನಿಯರ್ ರಿಸರ್ಚ್ ಫೆಲೋಷಿಪ್ ಮುಂಜೂರಾಗಿತ್ತು, ಫೆಲೋಷಿಪ್ ನಿಯಮಾನುಸಾರ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ವಾರದಲ್ಲಿ ಕೆಲವಾರು ಗಂಟೆ ಪಾಠ ಮಾಡಬೇಕಾಗಿತ್ತು, ಅಧ್ಯಾಪಕರೆನಿಸಿದ ಹೊಸ ಹುರುಪಿನಲ್ಲಿ ಪಾಠ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ತರಗತಿಯನ್ನು ಪ್ರವೇಶಿಸಿದಾಗ ವಿದ್ಯಾರ್ಥಿಗಳಿಗೆ ಹೊಸ ಅಧ್ಯಾಪಕರು ಯಾರೆಂದು ತಿಳಿದುಕೊಳ್ಳಬೇಕೆಂಬ ಕುತೂಹಲವಿರುತ್ತದೆಯೆಂದು ಊಹಿಸಿ ಉತ್ತರಭಾರತೀಯರಿಗೆ ದಕ್ಷಿಣಭಾರತೀಯರ ಹೆಸರುಗಳು ವಿಲಕ್ಷಣವಾಗಿ ಕಾಣಿಸುವುದರಿಂದ ಬೋರ್ಡ್ ಮೇಲೆ ನಮ್ಮ ಹೆಸರನ್ನು “ಶಿವಮೂರ್ತಿ” ಎಂದು ದೇವನಾಗರಿಯಲ್ಲಿ ಸ್ಪುಟವಾಗಿ ಬರೆದೆವು. ನಂತರ ವಿದ್ಯಾರ್ಥಿಗಳ ಕಡೆ ತಿರುಗುತ್ತಿದ್ದಂತೆಯೇ ಒಬ್ಬ ಹುಡುಗ ಎದ್ದು ನಿಂತು “ಸಾರ್, ಆಗೇ ಕ್ಯಾ ಹೈಂ?” (ತಮ್ಮ ಹೆಸರಿನ ಮುಂದೆ ಏನಿದೆ?) ಎಂದು ಕೇಳಿದ. ಆ ಹುಡುಗನ ಕೀಟಲೆ ಏನೆಂದು ನಮಗೆ ಅರ್ಥವಾಗಿತ್ತು. ಉತ್ತರಭಾರತೀಯರ ಹೆಸರುಗಳ ಮುಂದೆ ಅವರವರ ಜಾತಿಸೂಚಕವಾದ “ಚತುರ್ವೇದೀ, ತ್ರಿವೇದೀ, ದ್ವಿವೇದೀ, ಸಿಂಹ್, ಠಾಕೂರ್, ಅಗರ್ವಾಲ್, ಗುಪ್ತಾ, ರಾಂ, ಯಾದವ್” ಇತ್ಯಾದಿ ಮನೆತನದ ಹೆಸರುಗಳು ಇರುತ್ತವೆ. ನಮ್ಮನ್ನು ಯಾವ ಜಾತಿಯವರೆಂದು ನೇರವಾಗಿ ಕೇಳಲಾಗದೆ ಆ ಹುಡುಗ ತುಂಬಾ ಜಾಣೆಯ ಪ್ರಶ್ನೆಯನ್ನು ಕೇಳಿದ್ದ, ಚೆಸ್ ಆಟದಲ್ಲಿ ಅತ್ತಿತ್ತ ಸರಿಯದ ಹಾಗೆ “ಚೆಕ್ಮೇಟ್” ಮಾಡಿದ್ದ. ನಾವು ಧೃತಿಗೆಡದೆ ಆತನನ್ನೇ ದುರುಗುಟ್ಟಿಕೊಂಡು ನೋಡುತ್ತಾ “ದೇಖೋ, ಆಗೆ ಪೀಛೆ ಕುಛ್ ನಹೀಂ ಹೈಂ, ಆಗೆ ಆಪ್ ಲೋಗ್ ಹೈಂ, ಪೀಛೇ Black Board ಹೈಂ!” (ನೋಡೊ, ಹಿಂದೆ ಮುಂದೆ ಏನೂ ಇಲ್ಲ, ಮುಂದೆ ನೀವು ವಿದ್ಯಾರ್ಥಿಗಳು ಇದ್ದೀರಿ, ಹಿಂದೆ ಕಪ್ಪು ಹಲಗೆ ಇದೆ) ಎಂದಾಗ ಇಡೀ ತರಗತಿಯ ವಿದ್ಯಾರ್ಥಿಗಳು ಅವನತ್ತ ತಿರುಗಿ ಗೊಳ್ಳೆಂದು ನಕ್ಕರು. ಪ್ರಶ್ನೆ ಕೇಳಿದ ಹುಡುಗ ಇಂಗು ತಿಂದ ಮಂಗನಂತಾಗಿದ್ದ!
ಭಾರತೀಯರು ಮತ್ತು ಆಫ್ರಿಕನ್ನರ ಹಲ್ಲುಗಳಿಗೆ ಹೋಲಿಸಿದರೆ ಯೂರೋಪಿಯನ್ನರ ಹಲ್ಲುಗಳು ಬಹಳ ದುರ್ಬಲ. ನೋಡಲು ಪೇಲವವಾಗಿರುತ್ತವೆ. ಆಸ್ಟ್ರಿಯಾ ದೇಶದ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ 1977-79 ರ ಕಾಲಾವಧಿಯಲ್ಲಿ ಓದುತ್ತಿದ್ದಾಗ ನಮ್ಮ ಶ್ವೇತ ದಂತಪಂಕ್ತಿಯನ್ನು ನೋಡಿ ವಿಸ್ಮಯಗೊಂಡ ವಿದೇಶೀ ಸಹಪಾಠಿಗಳು “Sind Ihre Zahne echt” (ನಿಮ್ಮ ಬಾಯಲ್ಲಿರುವುದು ನಿಜವಾದ ಹಲ್ಲುಗಳೇ?) ಎಂದು ಕೇಳುತ್ತಿದ್ದರು. ನಮ್ಮ ದೇಶದಲ್ಲಿ ಹೀಗೆ ನೀವು ಯಾರನ್ನಾದರೂ ಕೇಳಿದರೆ ಹಲ್ಲು ಉದುರಿಸಿಕೊಳ್ಳುತ್ತೀರಿ ಎಂದು ಹಾಸ್ಯ ಮಾಡುತ್ತಿದ್ದೆವು.
ಮುಂದೆ ಮಠದ ಸ್ವಾಮಿಗಳಾಗಲಿದ್ದೇವೆಂಬ ವಿಷಯ ತಿಳಿದು ನಮ್ಮ ಇಂಡಾಲಜಿ ವಿಭಾಗದ ವಿದೇಶೀ ಮಹಿಳಾ ಸಹಪಾಠಿಗಳು ಜರ್ಮನ್ ಭಾಷೆಯಲ್ಲಿ ನಮ್ಮನ್ನು “Ein alter Mann in einem jungen Körper” (An old man in an young body!) ಎಂದು ಲೇವಡಿ ಮಾಡುತ್ತಿದ್ದರು. ಸ್ವಾಮಿಗಳಾಗುವವರು ತಲೆಬೋಳಿಸಬೇಕಾಗುತ್ತದೆ ಎಂದು ತಿಳಿದ ಅವರು ನಮ್ಮ ತಲೆಯ ಮೇಲಿನ ಗುಂಗುರು ಕೂದಲನ್ನು ನೋಡಿ ವಾಪಾಸು ಭಾರತಕ್ಕೆ ಬರುವಾಗ ವಿಮಾನ ನಿಲ್ದಾಣದವರೆಗೂ ಬಂದು “Send a parcel of your curly hairs” ಎಂದು ಮ್ಲಾನವದನೆಯರಾಗಿ ಬೀಳ್ಕೊಟ್ಟರು.
ತೀರಾ ಇತ್ತೀಚೆಗೆ ನಡೆದ ಒಂದು ರೋಚಕ ಪ್ರಸಂಗ: ನಮ್ಮ ಮಠಕ್ಕೆ ಹತ್ತಿರದಲ್ಲಿರುವ ಕೊಡಗನೂರು ಎಂಬ ಹಳ್ಳಿಯ ಕೆರೆ ತುಂಬಿ ಕೋಡಿಬಿದ್ದು ಗ್ರಾಮಸ್ಥರೆಲ್ಲರೂ ತುಂಬಾ ಶ್ರದ್ಧಾಭಕ್ತಿಯಿಂದ ನಮ್ಮನ್ನು ಆಹ್ವಾನಿಸಿದ್ದರು. ಮಹಿಳೆಯರೆಲ್ಲರೂ ಗಂಗಾಪೂಜೆ ಮಾಡಿ ಬಾಗಿನ ಬಿಟ್ಟಮೇಲೆ ಕೆರೆಯ ಪಕ್ಕದಲ್ಲಿಯೇ ನಮ್ಮ ಸಮ್ಮುಖದಲ್ಲಿ ಸಭೆ ಆರಂಭವಾಯಿತು. ಸ್ವಾಗತ ಮಾಡಿದ ಆ ಊರಿನ ವಿದ್ಯಾವಂತನೊಬ್ಬ ನಮ್ಮ ಹೆಸರು ಹೇಳುವ ಬದಲು ಬಾಯಿತಪ್ಪಿ ಅವನಿಗೆ ಹೆಚ್ಚಿನ ಒಡನಾಟವಿರುವ ಸ್ವಾಮಿಗಳ ಹೆಸರನ್ನು ಹೇಳಿದ. ತಕ್ಷಣವೇ ತನ್ನ ತಪ್ಪನ್ನು ಮನಗಂಡು ನಮ್ಮ ಹೆಸರನ್ನು ಹೇಳಿದ. ಸಭಿಕರು ಕಸಿವಿಸಿಗೊಂಡರೂ ನಾವು ಮಾತ್ರ ಮುಖ ಸಿಂಡರಿಸಲಿಲ್ಲ, ಸ್ವಾಗತ ಭಾಷಣ ಮುಗಿಯುತ್ತಿದ್ದಂತೆಯೇ ಆತನನ್ನು ನಗುಮುಖದಲ್ಲಿಯೇ ಕೈಬೀಸಿ ಹತ್ತಿರ ಕರೆದಾಗ ಅಧೀರನಾಗಿಯೇ ಬಂದ. “ನಿನಗೆ ಮದುವೆಯಾಗಿದೆಯೇ?” ಎಂದು ಕೇಳಿದಾಗ “ಹೌದು” ಎಂದು ಉತ್ತರಿಸಿದ. “ನಿನ್ನ ಹೆಂಡತಿಯ ಹೆಸರು ಏನು?” ಎಂದು ಕೇಳಿದಾಗ ತಡವರಿಸದೆ ತನ್ನ ಪತ್ನಿಯ ಹೆಸರು ಹೇಳಿದ. “ಅಲ್ಲ ಕಣೋ, ನಿನ್ನ ಹೆಂಡತಿಯ ಹೆಸರು ಕೇಳಿದಾಗ ಅಪ್ಪಿ ತಪ್ಪಿ ಬೇರೆ ಮಹಿಳೆಯ ಹೆಸರು ಹೇಳಿದ್ದರೆ ನಿನಗೆ ಮರ್ಯಾದೆ ಬರುತ್ತಿತ್ತೇನೋ?” ಎಂದಾಗ ಪೆಚ್ಚಾದ, ಹೆಚ್ಚಾಗಿ ಮಹಿಳೆಯರೇ ಇದ್ದ ಆ ಸಭೆ ನಗೆಗಡಲಲ್ಲಿ ತೇಲಿತು. ಪಕ್ಕದಲ್ಲಿದ್ದ ಅತಿಥಿಗಳೊಬ್ಬರು “ಹಾಗೇನಾದರೂ ಈತನು ಬಾಯ್ತಪ್ಪಿ ಬೇರೆ ಹೆಸರು ಹೇಳಿದ್ದರೆ ಇಲ್ಲಿರುವ ಆತನ ಪತ್ನಿಯೇ ಕಾಲಲ್ಲಿರುವುದನ್ನು ಕೈಗೆ ತೆಗೆದುಕೊಂಡು ಬಾರಿಸುತ್ತಿದ್ದಳು!” ಎಂದು ನಗೆಯಾಡಿದರು. ತನ್ನ ತಪ್ಪಿನ ಅರಿವಾಗಿ ಆತನೂ ಸಹ ಎಲ್ಲರ ನಗೆಯಲ್ಲಿ ಪಾಲ್ಗೊಂಡ! ಶರೀರದ ಆರೋಗ್ಯ ವರ್ಧಕ ನಗು. ಸ್ವಸ್ಥ ಬದುಕಿಗೆ ನಗೆಯು ಬಹಳ ಮುಖ್ಯ. ಕೆಲಸದಿಂದ ನಿವೃತ್ತರಾದವರು ಇಂದು ಹೆಚ್ಚಾಗಿ ಅವರಿವರ ಬಗ್ಗೆ ಕಾಡುಹರಟೆಯಲ್ಲಿ ತೊಡಗುವವರೇ ಜಾಸ್ತಿ. ಸುಮ್ಮನಿದ್ದರೂ ಸುಮ್ಮನಿರಗೊಡದೆ ಇನ್ನೊಬ್ಬರ ಜೀವನವನ್ನು ಗೋಳು ಹೊಯ್ದುಕೊಳ್ಳುವ ಕುತಂತ್ರಗಳನ್ನು ಹೆಣೆಯುತ್ತಾರೆ. ಅದನ್ನು ಬಿಟ್ಟು ಮುಗ್ಧ ಮಕ್ಕಳು ಮೊಮ್ಮಕ್ಕಳೊಂದಿಗೆ ಮಾತನಾಡಿದರೆ ಅವರ ಆಯುಷ್ಯ ಹೆಚ್ಚುತ್ತದೆ. ನಗುನಗುತ್ತಾ ಜೀವಿಸಬೇಕೆಂದರೆ ಮನಸ್ಸು ತಿಳಿಯಾಗಿರಬೇಕು. ವಯಸ್ಸು ಕಳೆದಂತೆ ಮನಸ್ಸು ಮಾಗಬೇಕು. “ನಗುವ ಕಣ್ಣುಗಳಿಗೆ ಹೊಗೆಯೂದಬಾರದು” ಎಂದು ಡಿ.ವಿ.ಜಿ ವಿವೇಕದ ಮಾತುಗಳನ್ನು ಹೇಳುತ್ತಾರೆ:
ನಗುನಗುವ ಕಣ್ಗಳಿಗೆ ಹೊಗೆಯನೂದಲು ಬೇಡ
ಜಗವ ಸುಡುಗಾಡೆನುವ ಕಟು ತಪಸು ಬೇಡ
ಮಗುವು ತಾಯ್ತಂದೆ ಕಣ್ಮುಂದೆ ನಡೆವಂತೆ ನಡೆ
ಮಿಗೆ ಚಿಂತೆ ನಿನ್ನ ತಲೆಹರಟೆ – ಮಂಕುತಿಮ್ಮ
-ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ.
ಬಿಸಿಲು ಬೆಳದಿಂಗಳು-481
ವಿಜಯ ಕರ್ನಾಟಕ 7.4.2022