ನಮ್ಮ ವಿದ್ಯಾರ್ಥಿ ಜೀವನದ ಸ್ವಾರಸ್ಯಕರ ಪ್ರಸಂಗಗಳು..... ದಡ್ಡ ಮಡ್ಡಿಯನ್ನು ಬೇಕಾದರೆ ಮಠಕ್ಕೆ ಮರಿ ಮಾಡಿಕೊಳ್ಳಿ!
ವಿದ್ಯಾರ್ಥಿಗಳಿಗೆ ಪ್ರೌಢಶಾಲೆಯ ಹಂತದವರೆಗೆ ಶಿಕ್ಷಕರೊಂದಿಗೆ ಇರುವ ಭಾವನಾತ್ಮಕ ಸಂಬಂಧ ಕಾಲೇಜಿನ ಅಧ್ಯಾಪಕರ ಬಗ್ಗೆ ಅಷ್ಟೊಂದು ಇರುವುದಿಲ್ಲ. ವಿದ್ಯಾವಂತರಾದವರು ಯಾರು ಎಷ್ಟೇ ಉನ್ನತ ಸ್ಥಾನವನ್ನು ಅಲಂಕರಿಸಿದ್ದರೂ ಅವರು ಚಿಕ್ಕವರಾಗಿದ್ದಾಗ ಕಿವಿಹಿಂಡಿ ಪಾಠ ಹೇಳಿದ್ದ ಶಿಕ್ಷಕರ ಮತ್ತು ಓರಿಗೆಯ ಸಹಪಾಠಿಗಳ ನೆನಪು ಅವರಿಗೆ ತುಂಬಾ ಮಧುರ. ಶಾಲೆಯಲ್ಲಿದ್ದಾಗ ಶಿಕ್ಷಕರನ್ನು ಗೌರವಿಸಿದಂತೆ ಕಾಲೇಜಿಗೆ ಹೋದಾಗ ಅಧ್ಯಾಪಕರನ್ನು ಗೌರವದಿಂದ ನೋಡುವ ದೃಷ್ಟಿ ಆರಂಭದಲ್ಲಿ ಇರುವುದಿಲ್ಲ. ಹೊಸ ಅಧ್ಯಾಪಕರನ್ನು ನೋಡಿದಾಗ ವಯಸ್ಸಿಗೆ ಸಹಜವಾದ ಕೀಟಲೆ ಮಾಡುವ ಮನೋಧರ್ಮ ಬೆಳೆದಿರುತ್ತದೆ. ಆ ಕೀಟಲೆಯಲ್ಲಿ ಅಧ್ಯಾಪಕರು ಪಾಸಾದರೆ ಆನಂತರ ಗೌರವದಿಂದ ಕಾಣುತ್ತಾರೆ. ಅವರ ತೋರು ಬೆರಳಿನ ಸನ್ನೆಗೆ ಕುಣಿಯುತ್ತಾರೆ. ಬೆನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ ನಮ್ಮ ಅನುಭವಕ್ಕೆ ಬಂದ ಒಂದೆರಡು ಘಟನೆಗಳು ಹೀಗಿವೆ:
ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಅದೇ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಪದವಿಗಾಗಿ ಸಂಶೋಧನೆಯನ್ನು ಮಾಡಲು ಆರಂಭಿಸಿದಾಗ ನಮಗೆ ಯು.ಜಿ.ಸಿ ಇಂದ ಜೂನಿಯರ್ ರಿಸರ್ಚ್ ಫೆಲೋಷಿಪ್ ಮುಂಜೂರಾಗಿತ್ತು. ಆಗ ನಮ್ಮ ಪ್ರೊಫೆಸರ್ ಆಗಿದ್ದ ಡಾ. ಸಿದ್ದೇಶ್ವರ ಭಟ್ಟಾಚಾರ್ಯರು ನಮ್ಮನ್ನು ಅವರ ಛೇಂಬರ್ಗೆ ಕರೆಸಿ ಫೆಲೋಷಿಪ್ ಮುಂಜೂರಾದ ಸಂತಸದ ಸುದ್ದಿಯನ್ನು ತಿಳಿಸಿ ಅಭಿನಂದಿಸಿ ಫೆಲೋಷಿಪ್ ನಿಯಮಾನುಸಾರ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ವಾರದಲ್ಲಿ ಕೆಲವಾರು ಗಂಟೆ ಪಾಠ ಮಾಡಬೇಕೆಂದು ಸೂಚಿಸಿದರು. ನಮಗೆ ತುಂಬಾ ಸಂತೋಷವಾಯಿತು. ಅಧ್ಯಾಪಕರೆನಿಸಿದ ಹೊಸ ಹುರುಪಿನಲ್ಲಿ ಪಾಠ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ತರಗತಿಯನ್ನು ಪ್ರವೇಶಿಸಿದೆವು. ಅಧ್ಯಾಪಕರು ತರಗತಿಯ ಆರಂಭದಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ತೆಗೆದುಕೊಳ್ಳುವಾಗ ಪ್ರತಿ ದಿನವೂ ಅವರ ಹೆಸರನ್ನು ಹೇಳುವ ಬದಲು ಸಮಯದ ಉಳಿತಾಯದ ದೃಷ್ಟಿಯಿಂದ ಹಾಜರಿ ಪುಸ್ತಕದಲ್ಲಿರುವ ಕ್ರಮ ಸಂಖ್ಯೆಯನ್ನು ಕೂಗಿ ಕರೆಯುವುದು ವಾಡಿಕೆ. ಅದರಂತೆ ಮೊದನೆಯ ದಿನ ಎಲ್ಲಾ ವಿದ್ಯಾರ್ಥಿಗಳ ಹೆಸರನ್ನು ಹೇಳಿ ಅವರ ಕ್ರಮ ಸಂಖ್ಯೆಯನ್ನು ಬರೆಸಿ ನೆನಪಿಟ್ಟುಕೊಳ್ಳುವಂತೆ ಸೂಚಿಸಿದೆವು. ಮಾರನೆಯ ದಿನ ತರಗತಿಗೆ ಹೋದಾಗ ಇರುಸುಮುರಿಸಿನ ಪ್ರಸಂಗ ಎದುರಾಯಿತು. ತರಗತಿಯ ಆರಂಭದಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ಗುರುತುಮಾಡಲು ಹೆಸರು ಹೇಳುವ ಬದಲು ಹಾಜರಿ ಪುಸ್ತಕದಲ್ಲಿರುವ ಕ್ರಮ ಸಂಖ್ಯೆಯನ್ನು ಇಂಗ್ಲೀಷಿನಲ್ಲಿ ಕೂಗಿ ಕೀಟಲೆ ಹುಡುಗ “ಸಾರ್, ಆಪ್ ಹಿಂದೀ ಮೇಂ ಕಹಿಏ” ಎಂದು ಏರಿದ ದನಿಯಲ್ಲಿ ಕೂಗಿದ. ಹದಿನೈದು ಕ್ರಮ ಸಂಖ್ಯೆಗಳನ್ನು ಆಗಲೇ ಕರೆದಾಗಿತ್ತು. ಅವನನ್ನು ಅಸಹನೆಯಿಂದ ದುರುಗುಟ್ಟಿಕೊಂಡು ನೋಡಿ ನಂತರ ಮುಂದಿನ ಸಂಖ್ಯೆಗಳಾದ ಸೋಲಹ್, ಸತ್ರಹ್, ಅಟ್ಠಾರಾ,ಉನ್ನೀಸ್, ಬೀಸ್ ಎಂದು ಹಿಂದಿಯಲ್ಲಿ ಹೇಳಿದೆವು. ನಂತರ ಎಲ್ಲರತ್ತ ತಿರುಗಿ ಸಿಟ್ಟಿನಿಂದ “ಆಪ್ ಲೋಗ್ ವಿಶ್ವವಿದ್ಯಾಲಯ್ ಮೇಂ ಪಢನೇ ಆತೇ ಹೈಂ, ಇತನೀ ಸೀ ಅಂಗ್ರೇಜೀ ನಹೀಂ ಆತೀ ಹೈಂ, ಶರ್ಮ್ ಆನಾ ಚಾಹಿಯೇ ಆಪ್ ಲೋಗೋಂ ಕೋ” (ವಿಶ್ವವಿದ್ಯಾನಿಲಯದಲ್ಲಿ ಓದಲು ಬರುತ್ತೀರಿ, ಇಷ್ಟೂ ಇಂಗ್ಲೀಷ್ ಬರುವುದಿಲ್ಲವೇ, ನಾಚಿಕೆಯಾಗಬೇಕು ನಿಮಗೆ) ಎಂದು ಜೋರು ಮಾಡಿ ಮತ್ತೆ ಇಂಗ್ಲೀಷಿನಲ್ಲಿ ಕ್ರಮ ಸಂಖ್ಯೆಯನ್ನು ಕರೆಯಲು ಮುಂದುವರಿಸಿದೆವು. ವಾಸ್ತವವಾಗಿ ನಮಗೆ 21ರ ಸಂಖ್ಯೆಯ ನಂತರ ಹಿಂದಿಯಲ್ಲಿ ಸಂಖ್ಯೆಗಳನ್ನು ತಡವರಿಸದೆ ಹೇಳುವುದು ಸ್ವಲ್ಪ ಕಷ್ಟವಿತ್ತು! ಮುಂದಿನ ತರಗತಿಗಳಲ್ಲಿ ಯಾರೂ ತುಟಿಪಿಟಕ್ಕೆನ್ನದೆ ಗರಬಡಿದವರಂತೆ ಹುಡುಗರು ಕುಳಿತು ಪಾಠ ಕೇಳತೊಡಗಿದರು!
ವಾರ್ಷಿಕ ಪರೀಕ್ಷೆಯ ಸಂದರ್ಭದಲ್ಲಿ ನಮ್ಮನ್ನು ಮೇಲ್ವಿಚಾರಕರೆಂದು ನೇಮಿಸಲಾಗಿತ್ತು. ಪರೀಕ್ಷೆ ಬರೆಯಲು ಕುಳಿತಿದ್ದ ವಿದ್ಯಾರ್ಥಿಗಳತ್ತ ಕಣ್ಣುಹಾಯಿಸಿದಾಗ ಒಬ್ಬಿಬ್ಬರು ಕಾಪಿ ಹೊಡೆಯಲು ಯತ್ನಿಸುತ್ತಿರುವುದು ಕಂಡುಬಂತು. ಎಲ್ಲರಿಗೂ ಎಚ್ಚರಿಕೆ ಕೊಟ್ಟರೂ ಒಬ್ಬ ಹುಡುಗ ಮಾತ್ರ ಕಣ್ತಪ್ಪಿಸಿ ಕಾಪಿಹೊಡೆಯುತ್ತಿರುವಾಗ ಸಿಕ್ಕಿಬಿದ್ದ. ಕಾಪಿ ಚೀಟಿ ಸಮೇತ ಅವನನ್ನು ಹಿಡಿದು ಡಿಬಾರ್ ಮಾಡಿದೆವು. ಪರೀಕ್ಷೆ ಮುಗಿದ ಮೇಲೆ ಈ ವಿಷಯ ತಿಳಿದು ನಮ್ಮ ಪ್ರೊಫೆಸರ್ ಭಟ್ಟಾಚಾರ್ಯರು ನಮ್ಮನ್ನು ಮತ್ತೆ ಅವರ ಛೇಂಬರ್ಗೆ ಕರೆಸಿ ನಮ್ಮ ಮೇಲಿನ ಕಾಳಜಿಯಿಂದ ಕಿವಿ ಮಾತು ಹೇಳಿದರು: “ದೇಖೋ ಬೇಟೇ, ಇಸ್ ವಿಶ್ವವಿದ್ಯಾಲಯ್ ಮೇಂ ಕುಛ್ ಗೂಂಡೇ ವಿದ್ಯಾರ್ಥೀ ಭೀ ಹೈಂ! ತುಮ್ ಕೋ ಜಿಂದಾ ಮೈಸೂರ್ ಜಾನಾ ಹೋ ತೋ ಭವಿಷ್ಯ್ ಮೇಂ ಇಸ್ ತರಹ್ ಮತ್ ಕರನಾ!” (ನೋಡಪ್ಪಾ, ಈ ವಿಶ್ವವಿದ್ಯಾಲಯದಲ್ಲಿ ಕೆಲವರು ಗೂಂಡಾ ವಿದ್ಯಾರ್ಥಿಗಳೂ ಇದ್ದಾರೆ. ನೀನು ಜೀವಂತವಾಗಿ ಮೈಸೂರಿಗೆ (ಆಗಿನ ಹೆಸರು ಮೈಸೂರು ರಾಜ್ಯ) ಹೋಗಬೇಕೆಂದಿದ್ದರೆ ಈ ರೀತಿ ಮುಂದೆ ಮಾಡಬೇಡ!) ಎಂದು ಹಿತೋಪದೇಶ ಮಾಡಿದರು.
ಕಾಶಿಯಲ್ಲಿರುವ ಮೂರು ವಿಶ್ವವಿದ್ಯಾನಿಲಯಗಳಲ್ಲಿ ಪಂಡಿತ್ ಮದನಮೋಹನ ಮಾಲವೀಯಜೀಯವರು ಸ್ಥಾಪಿಸಿದ BHU ಎಂದೇ ಪ್ರಸಿದ್ದವಾದ ನಮ್ಮ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಚಿಕಿತ್ಸೆಗೆಂದೇ “Students Clinic” ಎಂಬ ಒಂದು ವಿಶೇಷ ಚಿಕಿತ್ಸಾಲಯವಿತ್ತು. ಅದರಲ್ಲಿ ತುಂಬಾ ಪರಿಣತರಾದ ಹಿರಿಯ ವಯಸ್ಸಿನ ನಿವೃತ್ತ ವೈದ್ಯರೊಬ್ಬರು ಇದ್ದರು. ಬೆಳ್ಳನೆಯ ಮತ್ತು ದುಂಡನೆಯ ಮುಖ. ತುಂಬಾ ಗಂಭೀರವಾದ ವ್ಯಕ್ತಿತ್ವ, ಮೈಮೇಲೆ Apron ಹಾಕಿಕೊಂಡು ಅಪ್ಪಟ ಶ್ವೇತವಸ್ತ್ರಧಾರಿಯಾಗಿದ್ದ ಅವರು ದಪ್ಪನೆಯ ಗಾಜಿನ ಕನ್ನಡಕವನ್ನು ಧರಿಸುತ್ತಿದ್ದರು. ವಿದ್ಯಾರ್ಥಿಗಳು ಅವರನ್ನು ನೋಡಿ ಖಾಸಗಿಯಾಗಿ ಮಾತನಾಡುವಾಗ “ಘೋಡಾ ಡಾಕ್ಟರ್” (ಕುದುರೆ ಡಾಕ್ಟರ್) ಎಂದು ಗೇಲಿ ಮಾಡುತ್ತಿದ್ದರು. ಈ ಮೂದಲಿಕೆಯ ಮಾತು ಆ ಡಾಕ್ಟರ್ ಕಿವಿಗೂ ಬಿದ್ದಿತ್ತು. ಆದರೂ ಅವರು ಕೋಪಗೊಳ್ಳದೆ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಮಾತನಾಡಿಸಿ ಒಳ್ಳೆಯ ಚಿಕಿತ್ಸೆಯನ್ನು ನೀಡುತ್ತಿದ್ದರು. ಕೆಲವು ವಿದ್ಯಾರ್ಥಿಗಳಂತೂ ಸ್ನೇಹಿತರೊಂದಿಗೆ ಬಂದು ಸಾಲಿನಲ್ಲಿ ನಿಂತು ನೆಪಮಾತ್ರಕ್ಕೆ ತಲೆನೋವೆಂದು ಏನೇನೋ ಸುಳ್ಳು ಹೇಳಿ ಅವರಿಂದ ಗುಳಿಗೆಗಳನ್ನು ಪಡೆದು ನಂತರ ಕಸದ ಬುಟ್ಟಿಗೆ ಹಾಕುತ್ತಿದ್ದರು. ನಿಮ್ಮನ್ನು ಈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಏಕೆ “ಘೋಡಾ ಡಾಕ್ಟರ್” ಎಂದು ಕರೆಯುತ್ತಾರೆಂದು ಒಮ್ಮೆ ಅವರನ್ನು ಯಾರೋ ಕೇಳಿದರು. ಅದಕ್ಕೆ ಅವರು ಕೊಟ್ಟ ಉತ್ತರ: “ಮೈಂ ಇಸ್ ವಿಶ್ವವಿದ್ಯಾಲಯ್ ಮೇಂ ಘೋಡೋಂ ಕೋ ಇಲಾಜ್ ಕರತಾ ಹ್ಞೊಂ, ಇಸೀಲಿಯೇ ಮುಝೇ ಘೋಡಾ ಡಾಕ್ಟರ್ ಕಹತೇ ಹೈಂ!” (ನಾನು ಈ ವಿಶ್ವವಿದ್ಯಾನಿಲಯದಲ್ಲಿ ಕುದುರೆಗಳಿಗೆ ಚಿಕಿತ್ಸೆ ನೀಡುತ್ತೇನೆ; ಅದಕ್ಕಾಗಿ ನನ್ನನ್ನು “ಕುದುರೆ ಡಾಕ್ಟರ್” ಎಂದು ಕರೆಯುತ್ತಾರೆ). ಅವರ ಈ ಮಾತನ್ನು ಕೇಳಿ ವಿದ್ಯಾರ್ಥಿಗಳು ಇಂಗು ತಿಂದ ಮಂಗನಂತಾದರು! ನಮಗೆ ಚೆನ್ನಾಗಿ ನೆನಪಿರುವಂತೆ ಆ ಹಿರಿಯ ವೈದ್ಯರು ತಮ್ಮ ಕುರ್ಚಿಯ ಹಿಂಬದಿಯ ಗೋಡೆಯ ಮೇಲೆ ಒಂದು ಬೋರ್ಡನ್ನು ತೂಗುಹಾಕಿದ್ದರು. ಅದರಲ್ಲಿ ಹೀಗೆ ಬರೆಯಲಾಗಿತ್ತು: “I treat, He cures!” (ನಾನು ಚಿಕಿತ್ಸೆ ನೀಡುತ್ತೇನೆ; ಅವನು ವಾಸಿ ಮಾಡುತ್ತಾನೆ!). ಅಂದರೆ ನಾನು ವೈದ್ಯನಾಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತೇನೆ, ನಿಜ. ಆದರೆ ರೋಗದಿಂದ ಗುಣಮುಖರಾಗುವುದು ನನ್ನಿಂದಾಗಲೀ, ನಾನು ಕೊಟ್ಟ ಔಷಧಿಯಿಂದಾಗಲೀ ಅಲ್ಲ. ನಿಜವಾಗಿ ರೋಗಿಯ ರೋಗವನ್ನು ನಿವಾರಣೆ ಮಾಡುವವನು ಅವನು: ಅಂದರೆ ಆ ದೇವರು!
ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾಗಿ ಅಭಿಷಿಕ್ತರಾಗುವ ಮುನ್ನ ನಮ್ಮ ಗುರುವರ್ಯರ ಆಣತಿಯಂತೆ ದೇಶ-ವಿದೇಶಗಳ ವಿಶ್ವವಿದ್ಯಾನಿಲಯಗಳಲ್ಲಿ ಸಾಹಿತ್ಯ, ಸಂಗೀತ ಮತ್ತು ಸಂಶೋಧನೆಯಲ್ಲಿ ಹತ್ತಾರು ವರ್ಷಗಳ ಕಾಲ ನಿರತರಾಗಿದ್ದ ನಮಗೆ ಲೌಕಿಕ ವ್ಯವಹಾರಗಳ ಯಾವ ಸೋಂಕೂ ಇರಲಿಲ್ಲ, ಅವುಗಳಿಂದ ದೂರವಿದ್ದು ಜಗತ್ತಿನ ಬೌದ್ದಿಕ ಪ್ರತಿಭೆಗಳ ಪ್ರಭಾವಲಯದಲ್ಲಿ ಬೆಳೆದು ಬಂದ ಸೌಭಾಗ್ಯ ನಮ್ಮದು. ಅಧ್ಯಯನದ ವಿಷಯಗಳನ್ನು ಕುರಿತು ಬೌದ್ಧಿಕ ಚಿಂತನೆ ನಡೆಸಿ ಹೊಸದಾಗಿ ಮೂಡಿಬಂದ ವಿಚಾರಗಳನ್ನು ನಿಖರವಾಗಿ ಲೇಖನಿಸುವುದು ನಮಗೆ ರೂಢಿಗತವಾಗಿತ್ತು. ಆದರೆ 1979 ರಲ್ಲಿ ಮಠದ ಅಧಿಕಾರ ವಹಿಸಿಕೊಂಡ ದಿನದಿಂದ ಅನಿವಾರ್ಯವಾದ ಸಾಮಾಜಿಕ ಕೆಲಸಕಾರ್ಯಗಳ ಒತ್ತಡದಲ್ಲಿ ನಮ್ಮ ಸ್ವಾಧ್ಯಾಯಕ್ಕೆ ಕೊಡಲಿ ಪೆಟ್ಟು ಬಿತ್ತು. ಮಠದ ಜವಾಬ್ದಾರಿಯನ್ನು ಹೊತ್ತು ನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ನೂರಾರು ಶಾಲಾಕಾಲೇಜುಗಳ ನಿರ್ವಹಣೆ ಹಾಗೂ ಸಾರ್ವಜನಿಕ ಸಭೆ ಸಮಾರಂಭಗಳ ಗದ್ದಲದಲ್ಲಿ ಸಾಹಿತ್ಯಕೃಷಿಯ ಕತ್ತು ಹಿಸುಕಿದಂತಾಯಿತು. ಒಬ್ಬರ ಬುದ್ದಿಯನ್ನು ಹಾಳುಮಾಡಬೇಕೆಂದಿದ್ದರೆ ಅವರನ್ನು ಯಾವುದಾದರೂ ವಿಶ್ವವಿದ್ಯಾನಿಲಯದ ಕುಲಪತಿಗಳನ್ನಾಗಿ ಮಾಡಬೇಕೆಂದು ರಾಷ್ಟ್ರಕವಿ ಕುವೆಂಪು ಹೇಳುತ್ತಿದ್ದರಂತೆ. ಅವರ ಈ ಮಾತನ್ನು ಮುಂದುವರಿಸಿ ನಮ್ಮ ಸ್ವಾನುಭವದಿಂದ ಹೇಳುವುದಾದರೆ ಯಾರದಾದರೂ ಬುದ್ದಿಯನ್ನು ಹಾಳುಮಾಡಬೇಕೆಂದಿದ್ದರೆ ಅವರನ್ನು ದೊಡ್ಡ ದೊಡ್ಡ ಮಠದ ಸ್ವಾಮಿಗಳನ್ನಾಗಿ ಮಾಡಬೇಕು. ಅವರು ತಮ್ಮ ಶಿಷ್ಯರಿಂದ “ಬುದ್ದಿ, ಬುದ್ದಿ” ಎಂದು ಕರೆಸಿಕೊಂಡೇ ನಿಃಸಂಶಯವಾಗಿ ತಮ್ಮ ಬುದ್ದಿಯನ್ನು ಕಳೆದುಕೊಳ್ಳುತ್ತಾರೆ. ಮಠದ ಸ್ವಾಮಿಗಳಾಗುವವರು ಡಾಕ್ಟರೇಟ್ ಪದವಿಯನ್ನು ಪಡೆದವರಾಗಿರಬೇಕೆಂದೇನೂ ಇಲ್ಲ. ಈಗ ಅನೇಕ ಮಠದ ಸ್ವಾಮಿಗಳಿಗೆ ಗೌರವ ಡಾಕ್ಟರೇಟ್ ಪದವಿಯ ಗೀಳು ಹತ್ತಿದೆ. ಇದು ಮಠದ ಸ್ವಾಮಿಗಳಿಗಿರುವ ಗೀಳೋ, ಶಿಷ್ಯರಿಗಿರುವ ಗೀಳೊ ಅಥವಾ ಸ್ವಾಮಿಗಳಿಗೆ ಗೌರವ ಡಾಕ್ಟರೇಟ್ ಕೊಡಿಸಿ ತಮ್ಮ ಕೆಲಸವನ್ನು ಸಾಧಿಸಿಕೊಳ್ಳಬೇಕೆಂಬ ಹುನ್ನಾರ ನಡೆಸುವ ಸ್ವಾರ್ಥಿಗಳ ಗೀಳೊ ಅವರವರ ಆತ್ಮನಿರೀಕ್ಷಣೆಗೆ ಬಿಟ್ಟ ವಿಚಾರ, ಶಿಷ್ಯರು ಕೊಡುವ ಗೌರವಕ್ಕಿಂತ ವಿಶ್ವವಿದ್ಯಾಲಯಗಳು ಕೊಡುವ ಈ ಗೌರವ ಡಾಕ್ಟರೇಟ್ ದೊಡ್ಡದೇನೂ ಅಲ್ಲ. ಸ್ವಾಮಿಗಳಾಗುವವರಿಗೆ ಮುಖ್ಯವಾಗಿ ನೈತಿಕ ನೆಲೆಗಟ್ಟು ಇರಬೇಕು. ಲೌಕಿಕ ಕಾಮನೆಗಳನ್ನು ಮೀರಿ ಆಧ್ಯಾತ್ಮಿಕ ಪಥದತ್ತ ದೃಢವಾದ ಹೆಜ್ಜೆಗಳನ್ನಿಟ್ಟವರಾಗಿರಬೇಕು. ವೈಯಕ್ತಿಕ ಸುಖವನ್ನು ತೊರೆದು ಸಮಾಜದ ಸುಖದಲ್ಲಿ ತಮ್ಮ ಸುಖವನ್ನು ಕಾಣುವ ಮಾತೃಹೃದಯವುಳ್ಳವರಾಗಿರಬೇಕು. ರಾಜಕಾರಣಿಗಳಂತೆ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಟ್ಟು ಸಮಾಜದ ಸ್ವಾಸ್ಥವನ್ನು ಹಾಳು ಮಾಡುವ “ಧರ್ಮರಾಜಕಾರಣಿಗಳು” ಆಗಬಾರದು.
1977-79 ರ ಕಾಲಾವಧಿಯಲ್ಲಿ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗವನ್ನು ಮಾಡುತ್ತಿದ್ದಾಗ ಕ್ರಿಸ್ಮಸ್ ರಜಾವೇಳೆಯಲ್ಲಿ ಅಮೇರಿಕೆಗೆ ಹೋಗಿದ್ದೆವು. ವಾಷಿಂಗ್ಟನ್ ಮಹಾನಗರದಲ್ಲಿ ಶಿಷ್ಯರೊಬ್ಬರ ಮನೆಯಲ್ಲಿ ತಂಗಿದ್ದಾಗ ಅವರು ತಮ್ಮ ಆತ್ಮೀಯ ಸ್ನೇಹಿತರನ್ನು ಔತಣ ಕೂಟಕ್ಕೆ ಆಹ್ವಾನಿಸಿದ್ದರು. ಆಗಿನ್ನೂ ವಿದ್ಯಾರ್ಥಿಗಳ ಬಟ್ಟೆ ಧರಿಸಿದ್ದ ನಮ್ಮನ್ನು ಬಂದವರಿಗೆ “ವಿಯೆನ್ನಾದಲ್ಲಿ ಓದುತ್ತಿರುವ ಇವರು ನಮ್ಮ ಮಠದ ಮುಂದಿನ ಗುರುಗಳಾಗುವವರು” ಎಂದು ಪರಿಚಯಿಸಿಕೊಟ್ಟರು. ಇದನ್ನು ಕೇಳಿದ ಅವರ ಸ್ನೇಹಿತರಾದ ಡಾ. ಹಿರೇಮಠರು “ನಾನೂ ಒಂದು ಮಠದ ಸ್ವಾಮಿಯಾಗುವವನಿದ್ದೆ, ಸ್ವಲ್ಪದರಲ್ಲಿ ತಪ್ಪಿಹೋಯಿತು” ಎಂದು ನಗೆಯಾಡಿದರು. ಮಾತು ಮುಂದುವರಿಸಿದ ಅವರು ತಮ್ಮ ಬಾಲ್ಯದ ದಿನಗಳನ್ನು ನೆನೆಸಿಕೊಂಡರು. ಅವರ ಮನೆಗೆ ಅವರ ಮಠದ ಗುರುಗಳು ದಯಮಾಡಿಸಿದ್ದರಂತೆ. ಚುರುಕಾಗಿ ಓಡಾಡುತ್ತಿದ್ದ ಅವರನ್ನು ನೋಡಿ ತಮ್ಮ ಮಠಕ್ಕೆ ಮರಿಯನ್ನಾಗಿ ಮಾಡಿಕೊಳ್ಳುವ ಹಂಬಲವನ್ನು ವ್ಯಕ್ತಪಡಿಸಿದರಂತೆ. ಅದಕ್ಕೆ ಅವರ ತಂದೆ “ಬುದ್ದಿ! ಇವನು ಓದುವುದರಲ್ಲಿ ತುಂಬಾ ಜಾಣನಿದ್ದಾನೆ. ಓದಲಿ ಬಿಡಿ. ಇವನನ್ನೇಕೆ ಕೇಳುತ್ತೀರಿ? ಇವನ ತಮ್ಮನೊಬ್ಬನಿದ್ದಾನೆ. ಹೇಳಿ ಮಾಡಿಸಿದ ದಡ್ಡ, ಮಡ್ಡಿ ಮುಠ್ಠಾಳ. ಅವನನ್ನು ಬೇಕಾದರೆ ಮಠಕ್ಕೆ ಮರಿ ಮಾಡಿಕೊಳ್ಳಿ!” ಎಂದು ಹೇಳಿದರಂತೆ.
ಮತ್ತೊಂದು ರೋಚಕ ಘಟನೆ. ಮಠ-ಮಂದಿರಗಳಲ್ಲಿ ಮೊದಲಿನಿಂದಲೂ ಇರುವ ಸಾಂಪ್ರದಾಯಿಕ ಮಡಿ-ಮೈಲಿಗೆ ಒಂದು ತೆರನಾದರೆ ಇಂದಿನ ವೈಚಾರಿಕ ಯುಗದಲ್ಲಿ ಮಠ-ಮಂದಿರಗಳೊಂದಿಗೆ ಒಡನಾಟವನ್ನು ಇಟ್ಟುಕೊಳ್ಳುವುದೇ ಇನ್ನೊಂದು ತೆರನಾದ ಮೈಲಿಗೆ ಎಂಬಂತಹ ಹೊಸರೀತಿಯ ಮಡಿವಂತಿಕೆ ಕೆಲವರು ವಿಚಾರವಂತರೆನಿಸಿಕೊಂಡವರ ಮನಸ್ಸಿನಲ್ಲಿ ಇರುವುದು ಕಂಡುಬರುತ್ತಿದೆ. ಇದು ವೈಚಾರಿಕತೆಯ ಸೋಗಿನಲ್ಲಿ ತಮ್ಮ ಸ್ವಂತಿಕೆಯನ್ನು ಗುರುತಿಸಿಕೊಳ್ಳಬೇಕೆಂಬ Identity ಯ ಹಪಾಹಪಿ. “ಇರುವ ಒಂದು ಜಗತ್ತಿಗೆ ಜಾತಿಗೊಬ್ಬರಂತೆ ನೂರಾರು ಜನ ಜಗದ್ಗುರುಗಳು ತಗಲುಹಾಕಿಕೊಂಡಿದ್ದಾರೆ!” ಎಂಬ ಮೂದಲಿಕೆಯ ಮಾತೂ ಕೇಳಿಬರುತ್ತಿದೆ. ಇಂತಹ ಉಡಾಫೆಯ ಮಾತುಗಳನ್ನಾಡುವುದೇ ಅವರ ಬದುಕಿನ ಬಂಡವಾಳ. “ಇವರು ಯಾವ ಜಗತ್ತಿಗೆ ಜಗದ್ಗುರು?” ಎಂದು ಟೀಕಿಸುತ್ತಿದ್ದ ಬಂಡಾಯ ಸಾಹಿತಿಯೊಬ್ಬರನ್ನು ನಮ್ಮ ಮಠದ ವಾರ್ಷಿಕ ಸಮಾರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಆಹ್ವಾನಿಸಿ ನಮ್ಮ ಗುರುವರ್ಯರು ಶಿಷ್ಯರಿಂದ ಪತ್ರ ಬರೆಸಿದ್ದರು. ಅದಕ್ಕೆ ಆ ಬಂಡಾಯ ಸಾಹಿತಿ ಬರೆದ ಧಾರ್ಷ್ಟ್ಯದ ಉತ್ತರ: “ನಾನು ಮಠಗಳನ್ನು, ಸ್ವಾಮಿಗಳನ್ನು ಕೆಟ್ಟದಾಗಿ ಬೈಯುತ್ತೇನೆ. ಅದನ್ನು ಸಹಿಸಿಕೊಳ್ಳಲು ನಿಮ್ಮ ಸ್ವಾಮಿಗಳು ಸಿದ್ದರಿದ್ದರೆ ಬರುತ್ತೇನೆ”. ಇದನ್ನು ಓದಿ ನಮ್ಮ ಲಿಂಗೈಕ್ಯ ಗುರುಗಳು ನಸುನಕ್ಕು ಬರೆಸಿದ ಮಾರುತ್ತರ: “ನಮ್ಮ ಮಠದ ಕಾರ್ಯಕ್ರಮದಲ್ಲಿ ನಿಮಗೆ ಮಾತನಾಡಲು ನಮ್ಮ ಗುರುಗಳು ಮುಕ್ತ ಅವಕಾಶ ಕಲ್ಪಿಸಿಕೊಡುತ್ತಾರೆ. ಆದರೆ ನಿಮ್ಮ ಮಾತುಗಳನ್ನು ಕೇಳಿ ಸಿಟ್ಟಿಗೆದ್ದ ಶಿಷ್ಯರು ನಮ್ಮ ಗುರುಗಳು ಎಷ್ಟೇ ಸಮಾಧಾನಪಡಿಸಲು ಯತ್ನಿಸಿದರೂ ಸುಮ್ಮನಾಗದೆ ನಿಮ್ಮನ್ನು ಹಿಡಿದು ಬಡಿಯುತ್ತಾರೆ; ಹಿಗ್ಗಾಮುಗ್ಗಿ ಜಗ್ಗಾಡುತ್ತಾರೆ, ಒದೆಯುತ್ತಾರೆ, ನಿಮ್ಮ ಕೈಕಾಲು ಮುರಿಯುತ್ತಾರೆ. ಅದನ್ನು ಸಹಿಸಿಕೊಳ್ಳಲು ನೀವು ಸಿದ್ಧರಿದ್ದರೆ ಖಂಡಿತಾ ಬನ್ನಿ!”
-ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ.
ವಿಜಯ ಕರ್ನಾಟಕ : 21-4-2022