ಬೆರಳ ತುದಿಯಲ್ಲಿ ಶಿವಶರಣರ ಸಮಗ್ರ ವಚನಗಳು

  •  
  •  
  •  
  •  
  •    Views  

ವೈಶಾಖ ಶುದ್ಧ ತದಿಗೆಯನ್ನು “ಅಕ್ಷಯ ತೃತೀಯ” ಎಂದು ಆಚರಿಸುವುದು ಪುರಾತನ ಕಾಲದಿಂದಲೂ ನಡೆದು ಬಂದಿದೆ. ಆ ದಿನವನ್ನು ಸಾಡೇತೀನ್ ಮುಹೂರ್ತದಲ್ಲಿ ಸೇರಿಸಿ ಶುಭದಿನವೆಂದು ಕರೆಯಲಾಗಿದೆ. ಆ ದಿನ ಯಾವುದೇ ಶುಭಕಾರ್ಯವನ್ನು ನಡೆಸಲು ಪಂಚಾಂಗವನ್ನು ನೋಡುವ ಅಗತ್ಯವಿಲ್ಲವೆಂದು ನಂಬಲಾಗಿದೆ. ಅಂದು ದೇವರಿಗೆ ಏನನ್ನು ಸಮರ್ಪಿಸುತ್ತೀರೋ ಅದು ಅಕ್ಷಯವಾಗುತ್ತದೆ ಎಂಬ ನಂಬಿಕೆ. ಹೀಗಾಗಿ ಆ ದಿನ ಚಿನ್ನವನ್ನು ಹೊಸದಾಗಿ ಕೊಂಡು ದೇವರ ಮುಂದಿಟ್ಟು ಪೂಜಿಸುವ ಪರಿಪಾಠ ನಡೆದುಕೊಂಡು ಬಂದಿದೆ; ಹೊಳೆಹೊಳೆಯುವ ಮಿಸುನಿ ಮನೆ ತುಂಬುತ್ತಿರಲಿ ಎಂಬ ಆಶಯ! ಈಗಲೂ ಅದೇ ಜಾರಿಯಲ್ಲಿದೆ.  

ಇದು ಪೇಟೆ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಆರ್ಥಿಕವಾಗಿ ಚೆನ್ನಾಗಿರುವ ಜನರು ನಡೆಸಿಕೊಂಡು ಬಂದಿರುವ ಪದ್ದತಿಯಾದರೆ ಹಳ್ಳಿಗಾಡಿನ ರೈತರು ಅನುಸರಿಸಿಕೊಂಡು ಬಂದಿರುವ ಪದ್ದತಿಯೇ ಬೇರೆ. ಅವರ ಪಾಲಿಗೆ ಇದು “ಬಸವನ ಹಬ್ಬ”. ತಮ್ಮ ಬಾಳನ್ನು ಬಂಗಾರ ಮಾಡುವ, ತಮ್ಮ ಬದುಕಿನ ಜೀವನಾಡಿಯಾದ ಎತ್ತುಗಳನ್ನು ಅಂದು ಪೂಜಿಸುತ್ತಾರೆ. ಆ ದಿನ ಎತ್ತುಗಳ ಮೈತೊಳೆದು, ಕೋಡುಗಳನ್ನು ಹೆರೆದು ಬಣ್ಣಹಚ್ಚಿ ಜೂಲು ಹೊದಿಸಿ, ಸಿಹಿ ಖಾದ್ಯಗಳನ್ನು ತಿನ್ನಿಸಿ ಪೂಜೆ ಸಲ್ಲಿಸುವುದು ಅವರ ಶ್ರದ್ಧಾಭಕ್ತಿಯ ಪ್ರತೀಕ. ಉಳುಮೆ ಮಾಡುವಾಗ ರೈತರು ಬಾರಿಕೋಲು ತೆಗೆದುಕೊಂಡು ಎತ್ತುಗಳ ಮೈಮೇಲೆ ಬಾಸುಂಡೆ ಬರುವಂತೆ ಬಾರಿಸಿದರೂ ದನದ ಕೊಟ್ಟಿಗೆಯಲ್ಲಿ ಅವುಗಳನ್ನು ಕಟ್ಟಿ, ಮೇವು ಹಾಕಿ, ನೀರು ಕುಡಿಸಿ, ಮೈದಡವಿ ತೋರಿಸುವ ಅವರ ಪ್ರೀತಿ ಅನನ್ಯ. ಇದನ್ನು ವರ್ಣಿಸುವ ಜಾನಪದ ಗೀತೆ ಹೀಗಿದೆ. 

ಕಸವ ಹೊಡೆದಾ ಕೈಯಿ ಯಾತರ ನಾತಾವ
ಬಸವಣ್ಣ ನಿನ್ನ ಸಗಣಿಯ| ಹೊಡೆದ ಕೈಯಿ
ಎಸಳು ಯಾಲಕ್ಕಿ ಗೊನೆ ನಾತ||

ಗಾಡಿ ಓಡಿಸುವಾಗ ಎತ್ತು ಮುಗ್ಗರಿಸಿದರೆ ರೈತರ ಬಾಯಿಂದ ಸಹಜವಾಗಿ ಬರುವ ಉದ್ಗಾರ: “ಬಸವಾ, ಬಸವಾ!” ಇದು ಕಲ್ಯಾಣದ ಬಸವಣ್ಣನ ಸ್ಮರಣೆಯಲ್ಲ.  ಶಿವನ ವಾಹನವಾದ ನಂದಿಯ ನಾಮಸ್ಮರಣೆ. ಪ್ರಾಚೀನ ಶೈವಧರ್ಮದಲ್ಲಿ ಪಶು-ಪತಿ-ಪಾಶ ಎಂಬ ಮೂರು ತತ್ವಗಳಿವೆ. ಪಶು ಎಂದರೆ ದನಕರುಗಳು, ಪತಿ ಎಂದರೆ ಅವುಗಳ ಒಡೆಯ. ಪಾಶ ಎಂದರೆ ದನಕರುಗಳನ್ನು ಕಟ್ಟಲು ಬಳಸುವ ಹಗ್ಗ. ಈ ಲೌಕಿಕ ಉದಾಹರಣೆಯ ಮೂಲಕ ಶೈವ ದಾರ್ಶನಿಕರು ಭಕ್ತ ಮತ್ತು ಭಗವಂತನ ಸಂಬಂಧವನ್ನು ನಿರೂಪಿಸಲು ಯತ್ನಿಸಿದ್ದಾರೆ. ಜೀವಾತ್ಮನೇ ಪಶು. ಪರಮಾತ್ಮನೇ ಒಡೆಯ (ಪಶುಪತಿ), ಸಂಸಾರವೇ ಹಗ್ಗ (ಪಾಶ). ಈ ಸಂಸಾರವೆಂಬ ಹಗ್ಗದಿಂದ ದೇವರು ಮನುಷ್ಯನನ್ನು ಈ ಪ್ರಪಂಚದಲ್ಲಿ ಕಟ್ಟಿಹಾಕಿದ್ದಾನೆ. ಕೊಟ್ಟಿಗೆಯಲ್ಲಿರುವ ದನಕರುಗಳ ಕೊರಳಿಗೆ ಬಿಗಿದಿರುವ ಹಗ್ಗವನ್ನು ಬಿಡಿಸಿಕೊಳ್ಳಲು ಹಾತೊರೆಯುವಂತೆ ಮನುಷ್ಯನು ಈ ಸಂಸಾರವೆಂಬ ಪಾಶದಿಂದ ಬಿಡುಗಡೆ ಹೊಂದಲು ಯತ್ನಿಸಬೇಕು, ಕಣ್ಣಿಹಗ್ಗವನ್ನು ಬಿಚ್ಚಲು ಮನೆಯ ಯಜಮಾನನು ಬರುವುದನ್ನೇ ದನಕರುಗಳು ಹೇಗೆ ಅರಳಿದ ಕಣ್ಣುಗಳಿಂದ ನೋಡುತ್ತವೆಯೋ ಹಾಗೆ ಮನುಷ್ಯನು ಈ ಸಂಸಾರವೆಂಬ ಪಾಶದ ವಿಮೋಚನೆಗಾಗಿ ಸದಾ ಭಗವಂತನ ಧ್ಯಾನದಲ್ಲಿರಬೇಕು. ಅವನ ಅನುಗ್ರಹಕ್ಕಾಗಿ ಅನವರತವೂ ಹಂಬಲಿಸಬೇಕು.

ಗುಡಿಯಲ್ಲಿರುವ ಶಿವಲಿಂಗವು ಪರಮಾತ್ಮನ ಸಂಕೇತ. ಆ ಶಿವಲಿಂಗದ ಎದುರಿಗಿರುವ ನಂದಿಯು ಜೀವಾತ್ಮನ ಸಂಕೇತ. ಗುಡಿಗೆ ಬಂದ ಭಕ್ತನು ನಂದಿಯ ಕೋಡುಗಳನ್ನು ಹಿಡಿದು ಗರ್ಭಗುಡಿಯಲ್ಲಿರುವ ಶಿವಲಿಂಗವನ್ನು ನೋಡುವ ಸಂಪ್ರದಾಯವಾದ “ಶೃಂಗಿದರ್ಶನ” ತಾನು ಜೀವಾತ್ಮನಾಗಿ ಆ ನಂದಿಯೊಂದಿಗೆ ತಾದಾತ್ಮವನ್ನು ಕಲ್ಪಿಸಿಕೊಳ್ಳುವುದು. ಜೀವಾತ್ಮನ ಸಂಕೇತವಾದ ನಂದಿಯೇ ತಾನು ಎಂಬ ಅಭೇದಭಾವವನ್ನು ಹೊಂದುವುದು.  ನಂದಿಯ ಕೋಡುಗಳ ಮೂಲಕ ಶಿವಲಿಂಗ ದರ್ಶನವನ್ನು ಪಡೆಯುವುದೆಂದರೆ, ನಂದಿಯು ಹೇಗೆ ಶಿವಲಿಂಗವನ್ನು ಸದಾ ದಿಟ್ಟಿಸಿ ನೋಡುತ್ತಿರುತ್ತದೆಯೋ ಹಾಗೆಯೇ ತಾನೂ ಸಹ ತನ್ನ ನಿತ್ಯ ಜೀವನದಲ್ಲಿ ಯಾವಾಗಲೂ ಶಿವನನ್ನು ಧ್ಯಾನಿಸುತ್ತಿರಬೇಕು ಎಂಬ ಅರಿವನ್ನು ಮೂಡಿಸಿಕೊಳ್ಳುವುದು. ಅಂತಹ ಅರಿವು ಭಕ್ತನ ಹೃದಯದಲ್ಲಿ ಗಟ್ಟಿಯಾಗಿ ನೆಲೆಗೊಂಡಾಗ ಮಾತ್ರ ಈ ಸಾಂಸಾರಿಕ ಬಂಧನಗಳಿಂದ ಮುಕ್ತಿ ದೊರೆಯುತ್ತದೆ ಎಂಬ ತಾತ್ವಿಕ ವಿವೇಚನೆ ಶೈವದೇವಾಲಯಗಳಲ್ಲಿದೆ. “ಜೀವಾತ್ಮನೇ ಪಶು, ಪರಮಾತ್ಮನೇ ಪತಿ, ಸಂಸಾರವೇ ಪಾಶ” ಎಂಬ ಪ್ರಾಚೀನ ಶೈವಧರ್ಮದಲ್ಲಿರುವ ತಾತ್ವಿಕ ನಿಲುವು ಬಸವಣ್ಣನವರ ಅನೇಕ ವಚನಗಳಲ್ಲಿ ಅತ್ಯಂತ ಕಾವ್ಯಮಯವಾಗಿ ರೂಪುಗೊಂಡಿದೆ: 

ಬಡಪಶು ಪಂಕದಲ್ಲಿ ಬಿದ್ದೊಡೆ
ಕಾಲ ಬಡಿವುದಲ್ಲದೆ ಬೇರೆ ಗತಿಯುಂಟೆ?
ಶಿವ ಶಿವಾ! ಹೋದಹೆ ಹೋದಹೆನಯ್ಯಾ
ನಿಮ್ಮ ಮನದತ್ತಲೆನ್ನ ತೆಗೆಯಯ್ಯಾ
ಪಶುವಾನು, ಪಶುಪತಿ ನೀನು.

12ನೆಯ ಶತಮಾನದ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಪುರುಷ ಬಸವಣ್ಣನವರ ಪೂರ್ವ ಕಾಲದಿಂದಲೂ ಅಂದರೆ ಬಸವಣ್ಣನವರ ಅರಿವೇ ಇಲ್ಲದ ಕಾಲದಿಂದಲೂ ನಂದಿಯನ್ನು ಪೂಜಿಸುತ್ತಾ ಬಂದಿರುವ ಪದ್ದತಿಯು ಈಗಲೂ ಮುಂದುವರಿದಿದೆ. ಬಹಳ ಕಾಲ ಮಕ್ಕಳಾಗದ ಮಾದಲಾಂಬಿಕೆಯು ನಂದಿಯನ್ನು ಪೂಜಿಸಿದ ಫಲವಾಗಿ ಬಸವಣ್ಣನವರು ಜನಿಸಿದರು. ಆದಕಾರಣ ಬಸವಣ್ಣನವರು ಶಿವನ ವಾಹನವಾದ ನಂದಿಯ ಅವತಾರವೆಂದು ಪುರಾಣಕಾರರ ಕಲ್ಪನಾಲಹರಿ ಗರಿಗೆದರಿತು. ಬಸವಣ್ಣನವರು ವೈಶಾಖ ಶುದ್ಧ ತದಿಗೆಯಂದೇ ಜನಿಸಿದ ಕಾರಣ ಮೊದಲಿನಿಂದಲೂ ಆಚರಿಸಿಕೊಂಡು ಬಂದ “ಅಕ್ಷಯ ತೃತೀಯ” ಅಥವಾ “ಬಸವನ ಹಬ್ಬದ” ಜೊತೆಗೆ ಇತ್ತೀಚೆಗೆ “ಬಸವ ಜಯಂತಿ”ಯೂ ಸೇರ್ಪಡೆಯಾಗಿದೆ. ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಸರ್ಕಾರಗಳಿಂದ ರಜಾ ಘೋಷಣೆಯೂ ಆಗಿದೆ. ರಜಾ ಪಡೆದ ಜನರೆಲ್ಲರೂ ಬಸವ ಜಯಂತಿಯಂದು “ಸಕಲ ಜೀವಾತ್ಮರಿಗೆ ಲೇಸನೇ ಬಯಸಿದ” ಐತಿಹಾಸಿಕ ಪುರುಷ ಬಸವಣ್ಣನನ್ನೇ ಆರಾಧಿಸುತ್ತಾರೆಂದು ಹೇಳಲು ಬರುವುದಿಲ್ಲ. ಅವರವರ ಭಾವನೆಗಳಿಗೆ ತಕ್ಕಂತೆ ಅವರವರು ಆಚರಿಸುತ್ತಾರೆ.

ಬಿಜಾಪುರದಲ್ಲಿ ಇತಿಹಾಸಕಾರರ ಮತ್ತು ಪ್ರವಾಸಿಗರ ಕಣ್ಮನ ತಣಿಸುವ “ಗೋಳ ಗುಮ್ಮಟ”  ಇದ್ದರೆ, ಕನ್ನಡ ಸಾಹಿತ್ಯ ಲೋಕದ ಹೃನ್ಮನ ತಣಿಸುವ ಮತ್ತೊಂದು “ಗೋಳ ಗುಮ್ಮಟ”  ಇತ್ತು. ಈ ಎರಡನೆಯ ಗೋಳ ಗುಮ್ಮಟವೇ ಫ.ಗು. ಹಳಕಟ್ಟಿಯವರು. 17ನೆಯ ಶತಮಾನದಲ್ಲಿ ಆದಿಲ್ ಶಾ ನಿರ್ಮಿಸಿದ ಗೋಳ ಗುಮ್ಮಟದಲ್ಲಿ ರಾಜ ರಾಣಿಯರ ಸಮಾಧಿ ಇದ್ದರೆ, ತಾಳೆಗರಿಗಳಲ್ಲಿ ಹೂತು ಹೋಗಿದ್ದ 12ನೆಯ ಶತಮಾನದ ಬಸವಾದಿ ಶಿವಶರಣರ ವಚನ ಸಾಹಿತ್ಯವನ್ನು ಬೆಳಕಿಗೆ ತಂದವರು ಫ.ಗು.ಹಳಕಟ್ಟಿಯವರು. 1940ರಲ್ಲಿ ಮಠದ ಗದ್ದುಗೆಯನ್ನೇರಿದ ಮೇಲೆ ನಮ್ಮ ಗುರುವರ್ಯರು ಹಳಕಟ್ಟಿಯವರ ನಿಕಟಸಂಪರ್ಕಕ್ಕೆ ಬಂದು ಸಂಸ್ಕೃತ ಸಾಹಿತ್ಯದಿಂದ ವಚನ ಸಾಹಿತ್ಯದ ಕಡೆ ಆಕರ್ಷಿತರಾದರು. ಕರ್ನಾಟಕದಲ್ಲಿ ಮೊಟ್ಟಮೊದಲು ವಚನ ಸಾಹಿತ್ಯವನ್ನು ಸಂಶೋಧಿಸಿದವರು ಫ.ಗು. ಹಳಕಟ್ಟಿಯವರಾದರೆ, ವಚನ ಸಾಹಿತ್ಯವನ್ನು ವ್ಯಾಪಕವಾಗಿ ಪ್ರಚಾರ ಮಾಡಲು ಆರಂಭಿಸಿದ ಮಠಾಧೀಶರಲ್ಲಿ ನಮ್ಮ ಪರಮಾರಾಧ್ಯ ಗುರುವರ್ಯರಾದ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಮೊಟ್ಟ ಮೊದಲಿಗರು. ಆಧುನಿಕ ಸ್ವತಂತ್ರ ಭಾರತದಲ್ಲಿ ಈಗಲೂ ಸಾಧ್ಯವಾಗದ,  ಜಾತಿ-ಮತ-ಪಂಥಗಳ ಭೇದವಿಲ್ಲದೆ ಸಕಲ ಜೀವಾತ್ಮರಿಗೂ ಲೇಸನೇ ಬಯಸುವ ಧಾರ್ಮಿಕ ಮತ್ತು ಸಾಮಾಜಿಕ ಮಹಾಕ್ರಾಂತಿಯನ್ನು 12ನೆಯ ಶತಮಾನದಲ್ಲಿ ಮಾಡಿದ ಕ್ರಾಂತಿ ಪುರುಷ ಬಸವಣ್ಣನವರ ವಿಚಾರಧಾರೆಯನ್ನು ಜಗತ್ತಿನ ತುಂಬೆಲ್ಲಾ ಪಸರಿಸಬೇಕೆಂಬ ಸಂಕಲ್ಪವನ್ನು ಮಾಡಿದವರು ನಮ್ಮ ಗುರುವರ್ಯರು. ಆ ನಿಟ್ಟಿನಲ್ಲಿ ಬಸವಣ್ಣನವರ ವಚನಗಳನ್ನು ಕನ್ನಡದಿಂದ – ಇಂಗ್ಲಿಷ್, ತೆಲುಗು ಮತ್ತು ಹಿಂದೀ ಭಾಷೆಗಳಲ್ಲಿ ವಿದ್ವಾಂಸರಿಂದ ಅನುವಾದ ಮಾಡಿಸಿದರು. 

ಇದರ ಫಲವಾಗಿ ಬಸವಣ್ಣನವರ ಸಮಗ್ರ ವಚನಗಳನ್ನು ಮೊಟ್ಟ ಮೊದಲು ಕನ್ನಡದಿಂದ ಆಂಗ್ಲ ಭಾಷೆಗೆ ತರ್ಜುಮೆ ಮಾಡುವ ಕಾರ್ಯವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಆಂಗ್ಲ ಭಾಷಾ ಪ್ರೊಫೆಸರ್ ಆಗಿದ್ದ ಪ್ರೊ. ಎಲ್.ಎಂ.ಎ ಮೆನೆಜಿಸ್ ಮತ್ತು ಎಸ್.ಎಂ ಅಂಗಡಿಯವರಿಗೆ ವಹಿಸಿದರು. ಪ್ರಾಯೋಗಿಕವಾಗಿ ಒಂದು ನೂರು ವಚನಗಳ ಆಂಗ್ಲಭಾಷಾ ಅನುವಾದವುಳ್ಳ  ಪುಸ್ತಕವನ್ನು ಪ್ರಕಟಿಸಿ 1965ರಲ್ಲಿ ಚಿತ್ರದುರ್ಗದಲ್ಲಿ ನಡೆದ ನಮ್ಮ ಮಠದ ವಾರ್ಷಿಕ ಸಮಾರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ರವರಿಂದ ಬಿಡುಗಡೆ ಮಾಡಿಸಿದರು. ನಂತರ ಬಸವಣ್ಣನವರ ಸಮಗ್ರ ವಚನಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡಿಸಿ 1967ರಲ್ಲಿ “Vachanas of Basavanna” ಎಂಬ ಪುಸ್ತಕವನ್ನು ಮಠದಿಂದ ಪ್ರಕಟಿಸಿದರು. ಆಂಗ್ಲಭಾಷೆಯಲ್ಲಿ ಬಸವಣ್ಣನವರ  ಸಮಗ್ರ ವಚನಗಳ ಮೊಟ್ಟ ಮೊದಲ ಶ್ರೇಷ್ಠ ಆಂಗ್ಲ ಅನುವಾದ ಗ್ರಂಥವಿದು ಎಂಬ ಹೆಗ್ಗಳಿಕೆಗೆ ಈ ಕೃತಿ ಪಾತ್ರವಾಗಿದೆ.


ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತೆಲುಗು ಭಾಷಾ ಪ್ರೊಫೆಸರ್ ಆಗಿದ್ದ ಪ್ರೊ. ಬಾಡಾಲು ರಾಮಯ್ಯನವರು ನಮ್ಮ ಗುರುವರ್ಯರ ಆಣತಿಯಂತೆ ಬಸವಣ್ಣನವರ ಸಮಗ್ರ ವಚನಗಳನ್ನು ಅತ್ಯಂತ ಶ್ರದ್ದೆಯಿಂದ ತೆಲುಗು ಭಾಷೆಗೆ ಅನುವಾದ ಮಾಡಿದರು. ಅನುವಾದದ ಜೊತೆಗೆ ಅನೇಕ ಶಾಸನಗಳನ್ನು ಆಧರಿಸಿ ಸುದೀರ್ಘವಾಗಿ ಬರೆದ ಈ ಸಂಶೋಧನಾ ಗ್ರಂಥಕ್ಕೆ ಮೈಸೂರು ವಿಶ್ವವಿದ್ಯಾನಿಲಯದಿಂದ ಅವರಿಗೆ ಡಾಕ್ಟರೇಟ್ ಪದವಿಯೂ ದೊರೆಯಿತು. ಈ ತೆಲುಗು ಭಾಷಾ ಅನುವಾದ ಕೃತಿಯನ್ನು 1977ರಲ್ಲಿ ಮಠದಿಂದ ಪ್ರಕಟಿಸಿ ಆಸಕ್ತ ಓದುಗರಿಗೆ ವಿತರಣೆ ಮಾಡಿದ ಮೇಲೆ ವಚನಸಾಹಿತ್ಯವು ಆಂಧ್ರಪ್ರದೇಶದಲ್ಲಿ ವ್ಯಾಪಕವಾಗಿ ಪ್ರಚಾರವಾಯಿತು. ಈ ಅನುವಾದ ಕೃತಿಯ ಎರಡನೇ ಆವೃತ್ತಿಯನ್ನು ಮುದ್ರಿಸಲು ಸಂಕಲ್ಪಿಸಿ ಈ ವರ್ಷದ ಬಸವ ಜಯಂತಿಯ ಪವಿತ್ರ ದಿನದಂದು (3-5-2022 ) ಲೋಕಾರ್ಪಣೆ ಮಾಡಿದೆ. 

ನಮ್ಮ ಗುರುವರ್ಯರ ಆಣತಿಯಂತೆ ಬಸವಣ್ಣನವರ ಸಮಗ್ರ ವಚನಗಳನ್ನು ಪ್ರೊ. ಕೊಟ್ಟೂರು ಗೌಡಪ್ಪನವರು ಹಿಂದಿಯಲ್ಲಿ ಅನುವಾದ ಮಾಡಿದ್ದರು. ಆಂದ್ರಪ್ರದೇಶದಲ್ಲಿನ  ಕಾಲೇಜುಗಳಲ್ಲಿ  ಹಿಂದಿ ಪ್ರೊಫೆಸರ್ ಆಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅವರು ವಿದ್ಯಾರ್ಥಿ ಜೀವನದಲ್ಲಿ ಮಹಾತ್ಮ ಗಾಂಧೀಜಿಯವರಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದವರು. ಈ ಹಿಂದೀ ಅನುವಾದ ಗ್ರಂಥವು ನಮ್ಮ ಗುರುವರ್ಯರ ಮತ್ತು ಅನುವಾದಕರ ಜೀವಿತಾವಧಿಯಲ್ಲಿ ಪ್ರಕಟವಾಗಲಿಲ್ಲವೆಂಬ ವಿಷಾದ ಆವರಿಸಿತ್ತು. ಮಠದ ಹಳೆಯ ದಾಖಲೆಗಳನ್ನು ಸಂಶೋಧಿಸುವಾಗ ನಮ್ಮ ಕೈಗೆ ದೊರೆತ ಈ ಹಿಂದೀ ಅನುವಾದದ ಹಸ್ತಪ್ರತಿಯನ್ನು ಅಚ್ಚು ಹಾಕಿಸಿದ್ದು ಇದೇ ಬಸವಜಯಂತಿಯಂದು ಬೆಂಗಳೂರಿನ ನಮ್ಮ ತರಳಬಾಳು ಕೇಂದ್ರದಲ್ಲಿ ಲೋಕಾರ್ಪಣೆಗೊಂಡಿದೆ. 

ಕ್ರಿ.ಪೂ 5ನೇ ಶತಮಾನದಲ್ಲಿದ್ದ ಮಹರ್ಷಿ ಪಾಣಿನಿಯ ನಾಲ್ಕು ಸಾವಿರ ವ್ಯಾಕರಣ ಸೂತ್ರಗಳನ್ನು ಆಧರಿಸಿ “ಗಣಕಾಷ್ಟಾಧ್ಯಾಯೀ” ಎಂಬ ತಂತ್ರಾಂಶವನ್ನು (software) 1994ರಷ್ಟು ಹಿಂದೆಯೇ ನಾವು ರೂಪಿಸಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ವಿಶ್ವವಿದ್ಯಾನಿಲಯದಲ್ಲಿ ನಡೆದ 9ನೆಯ ವಿಶ್ವಸಂಸ್ಕೃತ ಸಮ್ಮೇಳನದಲ್ಲಿ ಪ್ರಾತ್ಯಕ್ಷಿಕೆಯನ್ನು ನೀಡಿದ್ದ ಸಂಗತಿಯನ್ನು ಕುರಿತು ಇದೇ ಅಂಕಣದಲ್ಲಿ ಹಿಂದೆ ಬರೆಯಲಾಗಿದೆ. ಅದೇ ಮಾದರಿಯಲ್ಲಿ ಬಸವಾದಿ ಶಿವಶರಣರ ವಚನಗಳನ್ನು ಆಧರಿಸಿ “ಗಣಕ ವಚನ ಸಂಪುಟ” ಎಂಬ ಹೆಸರಿನಲ್ಲಿ DOS platform ನಲ್ಲಿ ಮತ್ತೊಂದು ತಂತ್ರಾಂಶವನ್ನು (Software) ರೂಪಿಸಿದ್ದು ಇವೆರಡೂ ತಂತ್ರಾಂಶಗಳು ಅಂತರಜಾಲದಲ್ಲಿ (www.taralabalu.org) ಈಗಲೂ ಲಭ್ಯವಿದ್ದು ಕಂಪ್ಯೂಟರ್ ಬಲ್ಲವರು ವಿಶ್ವಾದ್ಯಂತ ಬಳಸುತ್ತಿದ್ದಾರೆ. ಆದರೆ ಜನಸಾಮಾನ್ಯರು ಬಳಸಲು ಆಗುತ್ತಿಲ್ಲ. ಆದಕಾರಣ ಈಗ ಆಧುನಿಕ ಕಾಲಮಾನಕ್ಕೆ ತಕ್ಕಂತೆ ಜಗತ್ತಿನೆಲ್ಲೆಡೆ ವ್ಯಾಪಕವಾಗಿ ಮೊಬೈಲ್ ಬಳಕೆಯಲ್ಲಿರುವುದರಿಂದ ಎಲ್ಲಾ ಶಿವಶರಣರ ಎಲ್ಲ ವಚನಗಳು ನಿಮ್ಮ ಬೆರಳ ತುದಿಯಲ್ಲಿ ದೊರೆಯುವಂತೆ ಒಂದು Mobile App ರೂಪಿಸಲಾಗಿದೆ. ಇದೂ ಸಹ ಇದೇ ಬಸವಜಯಂತಿಯಂದು ಬಿಡುಗಡೆಯಾಗಿದೆ. ಆಸಕ್ತರು ಅಂತರಜಾಲದಲ್ಲಿ www.vachana.taralabalu.in ಕೊಂಡಿಯನ್ನು ಕ್ಲಿಕ್ಕಿಸಿ ಪಡೆಯಬಹುದಾಗಿದೆ. ಇದರಲ್ಲಿ ಸುಮಾರು 22 ಸಾವಿರಕ್ಕೂ ಹೆಚ್ಚು ಸಂಖ್ಯೆಯ ವಚನಗಳವೆ. ಅವುಗಳಲ್ಲಿ ಯಾವುದೇ ವಚನ ಬೇಕೆಂದರೂ ಅದರ ಒಂದೆರಡು ಅಕ್ಷರಗಳನ್ನು ನಿಮ್ಮ ಕೈಯಲ್ಲಿರುವ ಮೊಬೈಲ್ನಲ್ಲಿ ಟೈಪ್ ಮಾಡಿ search ಬಟನ್ ಒತ್ತಿದರೆ ಸಾಕು ಕ್ಷಣಾರ್ಧದಲ್ಲಿ ಆ ವಚನದ ಪೂರ್ಣಪಾಠವನ್ನು ಪಡೆಯಬಹುದಾಗಿದೆ. ಅಲ್ಲದೆ ಯಾವುದೇ ನಿರ್ದಿಷ್ಟ ಶಬ್ದ ಯಾವ ಯಾವ ವಚನಗಳಲ್ಲಿ ಎಲ್ಲೆಲ್ಲಿ ಬರುತ್ತದೆಯೆಂಬುದನ್ನೂ ಸಹ ಕಣ್ಣು ರೆಪ್ಪೆ ಬಡಿಯುವುದರೊಳಗೆ ನೋಡಬಹುದಾಗಿದೆ. ಇದರಲ್ಲಿ ಬಸವಣ್ಣನವರ ವಚನಗಳಿಗೆ ಇಂಗ್ಲಿಷ್, ತೆಲುಗು, ತಮಿಳು, ಹಿಂದಿ ಮತ್ತು ಉರ್ದು ಭಾಷೆಗಳ ಅನುವಾದವನ್ನೂ ಅಳವಡಿಸಲಾಗಿದೆ. ಇದರಿಂದ “ಬಸವಾದಿ ಶಿವಶರಣರ ವಚನಸಾಹಿತ್ಯವನ್ನು ಜಗತ್ತಿನ ಜನರಿಗೆ ದೊರೆಯುವಂತೆ ನೀವು ಮಾಡಬೇಕು” ಎಂದು ಆಜ್ಞಾಪಿಸಿದ್ದ ನಮ್ಮ ಗುರುವರ್ಯರ ಸತ್ಯಸಂಕಲ್ಪವು ಈಡೇರಿದಂತಾಗಿದ್ದು ಅವರ ಪವಿತ್ರಾತ್ಮಕ್ಕೆ ಸಂತೃಪ್ತಿಯನ್ನುಂಟುಮಾಡಿದೆಯೆಂದೇ ನಮ್ಮ ಭಾವನೆ.

-ಶ್ರೀ ತರಳಬಾಳು ಜಗದ್ಗುರು
ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು
ಸಿರಿಗೆರೆ.

ವಿಜಯ ಕರ್ನಾಟಕ 
ಬಿಸಿಲು ಬೆಳದಿಂಗಳು ದಿ.5-5-2022.