N-2528 
  04-05-2024 06:23 PM   
ಎದೆಯಲ್ಲಿ ಇರಿಯುವ 'ಪ್ರೀತಿಯ' ಚೂರಿ!
ಸತ್ಯ ಮನೆಯ ಹೊಸ್ತಿಲನ್ನು ದಾಟುವುದರೊಳಗೆ ಸುಳ್ಳು ಊರೆಲ್ಲಾ ಸುತ್ತಿ ಬಂದಿತ್ತು ಅಂತಾ ಹೇಳುವ ಆಡು ಮಾತಿದೆ. ಇಂದಿನ ದಿನಮಾನಗಳಲ್ಲಿ ಸತ್ಯ ಯಾರಿಗೂ ಬೇಡವಾದ ಸಂಗತಿಯಾಗಿದೆ. ಎಲ್ಲರಿಗೂ ಒಂದು ರೀತಿ "ಕಿಕ್" ಕೊಡುವಂತಹ ಸುಳ್ಳುಗಳೇ ಬೇಕಾಗಿದೆ. ಏಕೆಂದರೆ ಸುಳ್ಳುಗಳು ಹೇಳುವವನಿಗಷ್ಟೇ ಅಲ್ಲ ಅದನ್ನು ಕೇಳಿಸಿಕೊಳ್ಳುವವನಿಗೂ ಅಮೃತದಷ್ಟು ಸಿಹಿ ಎನ್ನಿಸುತ್ತಿರುತ್ತದೆ. ಸತ್ಯ ಹೇಳುವವನಿಗೆ ಮಾತ್ರ ಹಿತ. ಅದನ್ನು ಕೇಳಿಸಿಕೊಳ್ಳುವವನಿಗೆ ಕಾರ್ಕೋಟಕ ವಿಷದಂತೆ ಭಾಸವಾಗುತ್ತದೆ. ಯಾವ ವಿಷಯವೇ ಆಗಿರಲಿ ಅಥವಾ ಎಂತಹ ಸಂದರ್ಭವೇ ಆಗಿರಲಿ ಸುಳ್ಳುಗಳು ಒಂದಷ್ಟು ದಿನ ವಿಜೃಂಭಿಸಬಹುದು, ಆದರೆ ಒಮ್ಮೆ ಸತ್ಯ ಏನೆಂದು ಅನಾವರಣ ಆದರೆ ಸುಳ್ಳುಗಳು ಉಸಿರುಕಟ್ಟಿ ಅಂದೇ ಸಾಯುತ್ತವೆ.
ಸ್ವಾರ್ಥಕ್ಕಾಗಿ ಅಥವಾ ಮಾಡಿದ ತಪ್ಪಿನಿಂದ ಏನಾದರೂ ಮಾಡಿ ಮುಖಭಂಗ ಅಥವಾ ಅವಮಾನ ಅಥವಾ ಮುಜುಗರ ತಪ್ಪಿಸಿಕೊಳ್ಳಲು ಕೆಲವರು ಹೇಳುವ ಸುಳ್ಳುಗಳು ತಾತ್ಕಾಲಿಕವಾಗಿ ಅಂತವರಿಗೆ ಖುಷಿ ಕೊಡಬಹುದು. ಆದರೆ ಕಾಲಕ್ರಮೇಣ ಸತ್ಯ ಏನೆಂದು ಪ್ರಪಂಚಕ್ಕೆ ಗೊತ್ತಾದರೆ ಅವರ ಕತೆ ಮುಗಿದಂತೆ. ಒಂದು ರೀತಿಯಲ್ಲಿ ತಮ್ಮವರ ನಡುವೆ ಇದ್ದರೂ ಸತ್ತಂತೆ. ಯಾರು ತನ್ನನ್ನು ನಂಬಿದ್ದರೋ ಅಂತವರಿಗೆ ತಾನು ನಂಬಿಕೆ ದ್ರೋಹ ಮಾಡಿದ್ದೇನೆ ಅಂತಾ ದಿನನಿತ್ಯ ವಿಲವಿಲ ಒದ್ದಾಡುತ್ತಾ ನರಕ ಯಾತನೆ ಅನುಭವಿಸುವುದು ಶತಸಿದ್ಧ.
ಇನ್ನು ಧೃತರಾಷ್ಟ್ರಾಲಿಂಗನದ ಉಲ್ಲೇಖ ನಿಜಕ್ಕೂ ಅರ್ಥಪೂರ್ಣ ಅನ್ನಿಸಿತು. ತನಗಾಗದವರನ್ನು ಏನಾದರೂ ಮಾಡಿ ಮುಗಿಸಿಯೇ ಬಿಡಬೇಕು ಎಂದು ತುದಿಗಾಲಲ್ಲಿ ನಿಂತು ಸೇಡು ತೀರಿಸಿಕೊಳ್ಳುವ ಮನಸ್ಥಿತಿಯ ಜನರಿಗೆ ಇದು ತಲುಪಬೇಕು. ಎಷ್ಟೋ ಜನ ಅಮಾಯಕರು ತಮ್ಮ ಮುಗ್ಧತೆಯ ಕಾರಣದಿಂದ ನಿತ್ಯವೂ ಒಂದಿಲ್ಲೊಂದು ರೀತಿಯಲ್ಲಿ ಮೋಸ ಹೋಗುತ್ತಾರೆ. ಅಂತವರ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡು ತಮ್ಮ ಹೊಟ್ಟೆಪಾಡಿಗಾಗಿ ಬಳಸಿಕೊಳ್ಳುವ ಕೆಲವು ಗೋಮುಖ ವ್ಯಾಘ್ರಗಳಿಗೆ ಯಾರು ಹೇಳಿದರೂ ಬುದ್ದಿ ಬರುವುದಿಲ್ಲ. ಅಂತವರಿಗೆ ಅವರ ಸ್ವಾರ್ಥ ಮಾತ್ರ ಕಣ್ಣಿಗೆ ಕಾಣುತ್ತಿರುತ್ತದೆ. ಧೃತರಾಷ್ಟ್ರನ ವಿಚಾರದಲ್ಲಿ ಆಗಿದ್ದು ಸಹ ಅದೇ. ತನ್ನ ಮಗನ ಮೇಲಿನ ಕುರುಡು ಪ್ರೀತಿಯನ್ನು ಮುದುಡಿಕೊಂಡು ಭೀಮನನ್ನು ಆಲಂಗಿಸುವ ನೆಪದಲ್ಲಿ ಅವನ ಎದೆಯ ಮೂಳೆಗಳನ್ನು ಪುಡಿಪುಡಿ ಆಗುವಂತೆ ಅಪ್ಪಿಕೊಳ್ಳುವ ಹುನ್ನಾರ ಶ್ರೀ ಕೃಷ್ಣ ಪರಮಾತ್ಮನ ಅಂತಃಶಕ್ತಿಗೆ ಅರಿವಾಗಿ ಆಗಬೇಕಾಗಿದ್ದ ದುರಂತವೊಂದು ತಪ್ಪಿತು. ಈ ಆಧುನಿಕ ಜಗತ್ತಿನಲ್ಲಿ ಇದು ಬೇರೆಬೇರೆ ರೂಪಗಳಲ್ಲಿ ಅಭಿವ್ಯಕ್ತಿಗೊಳ್ಳುತ್ತಿದೆ. ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ಬೇರೆಯವರ ಜೀವನದ ಜೊತೆಗೆ ಹೇಗೆಲ್ಲಾ ಆಟವಾಡುತ್ತಾರೆ ಎಂದು ನೊಂದವರನ್ನು ಕೇಳಿಯೇ ತಿಳಿದುಕೊಳ್ಳಬೇಕು. ಕೆಲವರು ಸ್ನೇಹದ ರೂಪದಲ್ಲಿ, ಮತ್ತೆ ಕೆಲವರು ಪ್ರೀತಿಯ ರೂಪದಲ್ಲಿ ಮತ್ತು ಇನ್ನಷ್ಟು ಜನ ವಿಶ್ವಾಸದ ರೂಪದಲ್ಲಿ ತಮಗಾಗದವರ ಜೊತೆಗೆ ಗೊತ್ತಾಗದಂತೆ ಸೇರಿಕೊಂಡು ಕಡೆಗೆ ಅವರ ಜೀವನವನ್ನು ಹಾಳು ಮಾಡಲು ಎಂತೆಂತಾ ಷಡ್ಯಂತ್ರಗಳನ್ನು ಹೆಣೆಯುತ್ತಾರೆ ಅನ್ನುವುದೇ ರೋಚಕ. ಸ್ನೇಹಿತನಂತೆ, ಪ್ರೇಯಸಿಯಂತೆ, ವಿಶ್ವಾಸಿಗನಂತೆ ಹೀಗೆ ಯಾವುದೋ ರೂಪದಲ್ಲಿ ಕಾಣಿಸಿಕೊಂಡು ಕೊನೆಗೆ ತಮ್ಮ ಷಡ್ಯಂತ್ರಕ್ಕೆ ಸಿಲುಕಿ ಆ ವ್ಯಕ್ತಿ ಜೀವನ ಅಥವಾ ಜೀವ ಎರಡರಲ್ಲೊಂದು ಕಳೆದುಕೊಳ್ಳುವವರೆಗೆ ಅವರಿಗೆ ಸಮಾಧಾನ ಇರುವುದೇ ಇಲ್ಲ. ಆದರೆ ಅಂತವರಿಗೆ ದೇವರು ಯಾವ ಸಮಯದಲ್ಲಿ ಏನನ್ನು ಮಾಡಬೇಕೆಂದು ಮುಂಚಿತವಾಗಿಯೇ ನಿರ್ಧಾರ ಮಾಡಿರುತ್ತಾನೆ.
ಒಂದೇ ಸುಳ್ಳನ್ನು ನೂರು ಬಾರಿ ಅಥವಾ ಸಾವಿರ ಬಾರಿ ಹೇಳಿದರೆ ಅದೇ ನಿಜವಾಗುತ್ತದೆ ಎನ್ನುವ ಅನುಭವಿಗಳ ಮಾತಿದೆ. ಇದು ಅಕ್ಷರಶಃ ಸತ್ಯ ಕೂಡಾ. ಕೆಲವರಿಗೆ ಅವರು ಹೇಳುವ ಸುಳ್ಳುಗಳು ಅವರ ಜೀವಂತಿಕೆಯನ್ನು ಕಾಡುತ್ತಿರುತ್ತವೆ. ಆ ಸುಳ್ಳುಗಳನ್ನು ಜೀವಂತವಾಗಿ ಇರುವಂತೆ ನೋಡಿಕೊಳ್ಳುವುದೇ ಅವರಿಗೆ ನಿತ್ಯದ ಕೆಲಸ. ತಾನು ಏನೆಂಬುದನ್ನು ಮರೆತು, ತನ್ನ ಅಸ್ಥಿತ್ವದ ಉಳಿವಿಗೆ ಅವರು ನಿತ್ಯವೂ ಸುಳ್ಳುಗಳನ್ನೇ ಮನೆದೇವರು ಮಾಡಿಕೊಂಡು ಪೂಜೆ ಮಾಡುತ್ತಾರೆ. ಅವರಿಂದ ಆಗುವ ಅನಾಹುತಗಳು ಒಂದೆರಡಲ್ಲ. ಕಾಲವು ಹೀಗೇ ಇರುವುದಿಲ್ಲ. ಮುಂದೊಮ್ಮೆ ಸತ್ಯ ಏನೆಂದು ಗೊತ್ತಾದಾಗ ಅಂತವರ ಅಸ್ತಿತ್ವ ಒತ್ತಟ್ಟಿಗಿರಲಿ ಅವರು ತಮ್ಮ ಜೀವವನ್ನೇ ಬಿಡಬೇಕಾದ ಸಂದರ್ಭಗಳು ಒದಗಿ ಬರಬಹುದು. ಹುಟ್ಟು ಸಾವುಗಳ ನಡುವಿನ ಎರಡು ದಿನದ ಈ ಬದುಕಿನಲ್ಲಿ ಇವೆಲ್ಲಾ ನಮಗೆ ಬೇಕೇ. ಸ್ವಾರ್ಥ ಸಾಧನೆಗಾಗಿ ಸುಳ್ಳುಗಳನ್ನು ಪೊರೆದು ಪೋಷಿಸುವ ಕೆಲಸವನ್ನು ಅಂತವರು ಮಾಡಬೇಕೇ ಅನ್ನುವುದು ಪ್ರಶ್ನೆ.
ತನ್ನನ್ನು ಬಿಜ್ಜಳನ ಸಿಂಹಾಸನದ ಪಕ್ಕದಲ್ಲಿ ಕುಳಿತುಕೊಂಡು ಹೊಟ್ಟೆಹೊರೆಯುವ ಒಬ್ಬ ಮಂತ್ರಿ ಎಂದು ಜನರು ಎಲ್ಲಿ ಕರೆದು ಬಿಡುತ್ತಾರೋ ಎಂಬ ಆತಂಕ ಬಸವಣ್ಣನವರನ್ನೂ ಕಾಡಿತ್ತು ಅನ್ನಿಸುತ್ತಿದೆ. ಅದಕ್ಕಾಗಿ ಅವರು ಕೂಡಲಸಂಗಮದೇವನಲ್ಲಿ ಹಂಬಲಿಸುವ ಕೆಳಗಿನ ವಚನ ಸಾಕ್ಷಿಯಾಗುತ್ತದೆ.
ಹೊತ್ತಾರೆ ಎದ್ದು ಕಣ್ಣ ಹೊಸೆಯುತ್ತಾ
ಎನ್ನೊಡಲಿಂಗೆ, ಎನ್ನೊಡವೆಗೆ,
ಎನ್ನ ಮಡದಿ ಮಕ್ಕಳಿಗೆಂದು ಕೂಡಿದೆನಾದರೆ,
ಎನ್ನ ಮನವೇ ಸಾಕ್ಷಿ !!
ಭವಿ ಬಿಜ್ಜಳನ ಗದ್ದುಗೆಯ ಕೆಳಗೆ
ಕುಳ್ಳಿರ್ದು ಓಲೈಸಿಹೆನೆಂದು ನುಡಿವರಯ್ಯಾ..
ಪ್ರಮಥರು !!
ಕೊಡುವೆನುತ್ತರವನವರಿಗೆ !!
ಕೊಡಲಮ್ಮುವೆ !!
ಹೊಲೆಯ ಹೊಲೆಯರ ಮನೆಯ ಹೊಕ್ಕು,
ಸಲೆ ಕೈಕೂಲಿಯ ಮಾಡಿಯಾದರೆಯೂ,
ನಿಮ್ಮ ನಿಲುವಿಂಗೆ ಕೂಡಿವೆನಲ್ಲದೆ,
ಎನ್ನೊಡಲವಸರಕ್ಕೆ ಕೂಡಿದೆನಾದರೆ,
ತಲೆದಂಡ !!
ಕೂಡಲಸಂಗಮದೇವಾ..!!
ಸ್ವಾರ್ಥಕ್ಕಾಗಿ ಬದುಕುತ್ತಿದ್ದೇನೆ ಅನ್ನುವುದಾದರೆ ನನ್ನ ಜೀವ ಬೇಕಾದರೆ ಹೋಗಲಿ ಎಂದು ಹೇಳುವ ಬಸವಣ್ಣನವರ ಈ ಮಾತುಗಳಲ್ಲಿ ಅವರು ಮಹೋನ್ನತ ಗುಣ ಅನಾವರಣಗೊಂಡಿದೆ. ಸ್ವಾರ್ಥದಿಂದ ನಾವು ದೂರವಾದರೆ ಜಗತ್ತೇ ನಮಗೆ ಹತ್ತಿರವಾಗುತ್ತದೆ. ಸತ್ಯದ ಜೊತೆಗೆ ನಾವು ಸಾಂಗತ್ಯ ಮಾಡಿದರೆ ಕಣ್ಣು ಮುಚ್ಚಿದ ತಕ್ಷಣ ನಿದ್ದೆ ಬರುತ್ತದೆ. ಧರ್ಮದ ಹೆಸರಿನಲ್ಲಿ ನಾವು ಜೀವನ ಸಾಗಿಸಿದರೆ ಎಂತವರೂ ನಮ್ಮೊಂದಿಗೆ ಸ್ನೇಹದಿಂದ ಸೌಹಾರ್ದದಿಂದ ಇರಲು ಬಯಸುತ್ತಾರೆ. ನ್ಯಾಯ ಮಾರ್ಗದಲ್ಲಿ ನಮ್ಮ ಆಲೋಚನೆಗಳು ರೂಪುಗೊಂಡರೆ ದೇವರಿಗೂ ಹೆದರುವ ಅವಶ್ಯಕತೆ ನಮಗಿಲ್ಲ. ಅದೇ ನಾನು ನನ್ನದು ಎನ್ನುವ ಸ್ವಾರ್ಥ ಮನಸ್ಸನ್ನು ಸೇರಿಕೊಂಡರೆ ಒಬ್ಬೊಬ್ಬರೂ ಸ್ವಂತ ಮಗನ ಆಯಸ್ಸನ್ನು ಆಪೋಶನ ಮಾಡಿಕೊಳ್ಳುವ ಯಯಾತಿಗಳಾಗುತ್ತೇವೆ.
ಟೆಲಿಫೋನ್ ಆಟ ನಿಜವಾಗಿಯೂ ಸತ್ಯವಾದ ಒಂದು ನಿದರ್ಶನ. ಇದನ್ನು ಕಾರ್ಪೊರೇಟ್ ಕಂಪನಿಗಳಲ್ಲಿ ಅಲ್ಲಿನ ನೌಕರರಿಗೆ ತರಬೇತಿ ನೀಡುವಾಗ ನಾನೇ ಸ್ವತಃ ಈ ಟೆಲಿಫೋನ್ ಆಟದ ಚಟುವಟಿಕೆಯನ್ನು ಆಡಿಸಿದ್ದೇನೆ. ಅದರ ಹಿಂದಿನ ಉದ್ದೇಶ ಸಂವಹನದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಸುವುದು. ಇಲ್ಲಿ ಮೂರು ಬೇರೆಬೇರೆ ಸ್ಥರಗಳಲ್ಲಿ ವಿಷಯ ಸಂವಹನಗೊಳ್ಳುತ್ತದೆ. ಒಂದು ಹೇಳುವಾಗ, ಎರಡನೆಯದು ಅದನ್ನು ಗ್ರಹಿಸುವಾಗ ಮತ್ತು ಮೂರನೆಯದು ಅದನ್ನು ಕೇಳಿಸಿಕೊಳ್ಳುವಾಗ. ಯಾವ ಉದ್ದೇಶದಿಂದ ಏನನ್ನು ಯಾವ ಸಂದರ್ಭದಲ್ಲಿ ಯಾರು ಹೇಳುತ್ತಿದ್ದಾರೆ ಎನ್ನುವುದು ಒಂದು ಕಡೆ ಮುಖ್ಯವಾದರೆ, ಹೇಳಿದ್ದನ್ನು ಎಷ್ಟರ ಮಟ್ಟಿಗೆ ಕೇಳಿಸಿಕೊಂಡವನು ಗ್ರಹಿಸಿಕೊಂಡು ಆ ವಿಷಯವನ್ನು ಅರ್ಥ ಮಾಡಿಕೊಳ್ಳುತ್ತಾನೆ ಎಂಬುದು ಮತ್ತೊಂದೆಡೆ ಮುಖ್ಯವಾದರೆ, ಇನ್ನೊಂದೆಡೆ ಕೇಳಿಸಿಕೊಂಡವನು ಆ ವಿಷಯವನ್ನು ಮುಂದಿನವರಿಗೆ ಏನೆಂದು ಹೇಳುತ್ತಾನೆ ಎನ್ನುವುದು ಮುಖ್ಯವಾಗುತ್ತದೆ. ಒಂದಂತೂ ಸತ್ಯ ಉದಾಹರಣೆಗೆ ರಮೇಶನು ಎಂದೆಂದೂ ಒಂದು ರೂಪಾಯಿ ವ್ಯತ್ಯಾಸ ಮಾಡಿದವನಲ್ಲ ಎಂದು ಒಬ್ಬ ಹೇಳುವ ವಿಷಯ ಕಿವಿಯಿಂದ ಕಿವಿಗೆ ದಾಟಿಕೊಂಡು ಹೋಗುವ ಅವಸರದಲ್ಲಿ ನೂರನೆಯವನ ಕಿವಿಗೆ ತಲುಪುವುದು ಹೀಗೆ - "ರಮೇಶನು ಒಂದು ಲಕ್ಷ ರೂಪಾಯಿ ಅವ್ಯವಹಾರ ಮಾಡಿದ್ದನಂತೆ" ಎಂದು. ಇಂದು ಸಂವಹನ ತನ್ನದೇ ಆದ ವೇಗ ಪಡೆದುಕೊಂಡಿದೆ. ಅದನ್ನು ಪ್ರಗತಿಗಾಗಿ, ಶ್ರೇಷ್ಠ ಸಾಧನೆಗಾಗಿ, ಔನ್ನತ್ಯಕ್ಕಾಗಿ ನಾವು ಬಳಸಿಕೊಂಡರೆ ಬದುಕು ಸಾರ್ಥಕ. ಅದರ ಬದಲಾಗಿ ಸ್ವಾರ್ಥವನ್ನು, ಸ್ವಪ್ರತಿಷ್ಠೆಯನ್ನು ಮುಂದುಮಾಡಿಕೊಂಡು ಬೀದಿಗಿಳಿದರೆ ಮಾಡಿದ್ದೆಲ್ಲ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ.
ಬದುಕಿನಲ್ಲಿ ಹೆಜ್ಜೆ ಹೆಜ್ಜೆಗೂ ಜಾರಿಣಿಯ ಮಕ್ಕಳ ಸಂತತಿ ಹೆಚ್ಚುತ್ತಿರುವ ಈ ದಿನಮಾನಗಳಲ್ಲಿ ಹನಿ ಟ್ರ್ಯಾಪಿಂಗ್, ವಂಚನೆ, ಭ್ರಷ್ಟಾಚಾರ, ಕಪಟ, ವಾಮಾಚಾರ, ಬ್ಲಾಕ್ಮೇಲ್ ಇವೆಲ್ಲಾ ನಿತ್ಯವೂ ಸುದ್ದಿಯ ಒಂದು ಭಾಗವಾಗಿಬಿಟ್ಟಿವೆ. ನಮ್ಮ ಎಚ್ಚರದಲ್ಲಿ ನಾವು ಇದ್ದರೆ ಯಾರಿಂದಲೂ ಏನು ಮಾಡಲೂ ಸಾಧ್ಯವಿಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ಇದರಲ್ಲಿ ಯಾವುದಾದರೂ ಒಂದಕ್ಕೆ ಬಲಿಯಾಗುವುದು ಶತಸಿದ್ಧ. ಇವುಗಳಲ್ಲಿ ಒಂದರಿಂದ ಕೂದಲೆಳೆಯಲ್ಲಿ ನಾನೇ ತಪ್ಪಿಸಿಕೊಂಡಿದ್ದೇನೆ. ನಿಮಗೆ ಆ ದಿನಗಳು ಬಾರದಿರಲಿ.
ಔಚಿತ್ಯಪೂರ್ಣ, ಸಾಂದರ್ಭಿಕ ಮತ್ತು ವಸ್ತುನಿಷ್ಠತೆಯನ್ನು ಒಟ್ಟೊಟ್ಟಿಗೆ ಅನಾವರಣ ಮಾಡಿದ ಈ ಅಂಕಣವನ್ನು ಕರುಣಿಸಿದ ಗುರುಗಳಿಗೆ ಶರಣು ಶರಣಾರ್ಥಿಗಳು.
ಪ್ರಸನ್ನ ಯು, ಸನ್ನದು ಆರ್ಥಿಕ ಗುರಿಯೋಜಕರು
ಸಿರಿಗೆರೆ