N-2556 
  13-06-2024 02:36 PM   
ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!
ಪರಮ ಪೂಜ್ಯ ಜಗದ್ಗುರುಗಳವರ ಇಂದಿನ ಲೇಖನ ನಮ್ಮ ದೇಶದಲ್ಲಿ ಇಂದು ನಡೆಯುತ್ತಿರುವ ಚುನಾವಣೆಗಳ ಅವ್ಯವಸ್ಥೆ ಕುರಿತು ತಿಳಿಸುತ್ತಾ ಹೇಗೆ ಹಣ ಬಲ ಚುನಾವಣೆಯಲ್ಲಿ ಪ್ರಭಾವ ಬೀರಿ ಕಾನೂನು, ವ್ಯಕ್ತಿತ್ವ, ಒಳ್ಳೆಯತನ, ಪ್ರಾಮಾಣಿಕತೆ ಇವುಗಳನ್ನು ಮೀರಿ ರಾಜಕೀಯ ದುರುಳ ಶಕ್ತಿ ಬೆಳೆಯಲು ಕಾರಣವಾಗುತ್ತದೆಯೆಂಬುದನ್ನು ಇಂಗ್ಲೆಂಡ್ ದೇಶದ ಅಧ್ಯಕ್ಷ ಚರ್ಚಿಲ್ ಗೆ ಆದ ಅನುಭವ, ಸಂವಿಧಾನ ಕರ್ತೃ ಎಂದು ಕರೆಯಲ್ಪಡುವ ಅಂಬೇಡ್ಕರ್ ಮತ್ತು ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ಹಲವು ಸುಧಾರಣೆಗಳನ್ನು ತಂದು ದೇಶದ ಗಮನ ಸೆಳೆದ ಟಿ. ಎನ್. ಶೇಷನ್ ಅಂಥವರು ಸಹ ಸ್ವತ: ಚುನಾವಣೆಯಲ್ಲಿ ಸ್ಪರ್ಧಿಸಿ ಹೀನಾಯವಾಗಿ ಸೋಲು ಅನುಭವಿಸಿದ್ದನ್ನು ಉದಾಹರಣೆ ಸಹಿತ ಇಂದಿನ ಹತೋಟಿ ತಪ್ಪಿದ ಪರಿಸ್ಥಿಯ ಬಗ್ಗೆ ನಿರಾಶೆಯ ವ್ಯಥೆಯನ್ನು ಲೇಖನ ರೂಪದಲ್ಲಿ ವ್ಯಕ್ತ ಪಡಿಸಿದ್ದಾರೆ.
ಬಹುಷಃ ಈ ಅವ್ಯವಸ್ಥೆಯನ್ನು ಪರಿವರ್ತನೆ ಮಾಡಲು ಸಾಧ್ಯವಾಗದಂತಹ ಸ್ಥಿತಿಯನ್ನು ನಮ್ಮ ದೇಶದ ರಾಜಕೀಯ ಪರಿಸ್ಥಿತಿ ತಲುಪಿ, ಅತಂತ್ರ ವ್ಯವಸ್ಥೆ ನಿರ್ಮಾಣವಾಗಿದೆಯೆಂದರೆ
ಅದಕ್ಕೆ ಆಡಳಿತ ಚುಕ್ಕಾಣಿ ಹಿಡಿಯುವ ರಾಜಕಾರಣಿಗಳು,ಸರಕಾರಗಳೇ ಕಾರಣವಾಗುತ್ತವೆ.
ಕಾರಣವೇನೆಂದರೆ ಚುನಾವಣಾ ಆಯೋಗಕ್ಕೆ ಕಮಿಷನರುಗಳನ್ನು ನೇಮಕ ಮಾಡುವ ಅಧಿಕಾರವೂ ಸಹ ಸರಕಾರಕ್ಕೆ ಇದ್ದು ಈಗ ಕೇಂದ್ರದ ಹೊಸ ಸರಕಾರವು ಪರಮ ಪೂಜ್ಯ ಜಗದ್ಗುರುಗಳವರ ಮನದಾಳದ ಅಭಿಲಾಷೆ ಮತ್ತು ಅಪ್ಪಣೆಯಂತೆ ಶೇಷನ್ ಅವರಂತಹ ದಕ್ಷ, ಪ್ರಾಮಾಣಿಕ ವ್ಯಕ್ತಿತ್ವದ ಹಿನ್ನೆಲೆಯುಳ್ಳ ಅಧಿಕಾರಿಗಳನ್ನು ನೇಮಿಸುವ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುವುದು ಸಕಾಲಿಕವಾಗಿದೆ.
ಇದೆಲ್ಲವನ್ನು ನೋಡುತ್ತಿದ್ದರೆ ಪ್ರಜಾ ಪ್ರಭುತ್ವ ವ್ಯವಸ್ಥೆ ನಿಜವಾಗಿ ನಮ್ಮ ದೇಶದ ಸಾಮಾಜಿಕ ಪರಿಸ್ಥಿತಿಗೆ ಹೊಂದಿಕೊಳ್ಳುವುದೋ? ಅಥವಾ ಅಮೇರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಇರುವಂತೆ ಅಧಿಕೃತ ಎರಡೇ ಪಕ್ಷಗಳ ಅಧ್ಯಕ್ಷೀಯ ಮಾದರಿ ಆಡಳಿತ ವ್ಯವಸ್ಥೆ ಸರಿಯಾಗಬಹುದೇ? ಎಂಬ ಚಿಂತನೆ ಉಂಟಾಗುತ್ತದೆ.
ಈ ವ್ಯವಸ್ಥೆ ಬಂದರೆ ಸ್ವಲ್ಪ ಮಟ್ಟಿಗೆ ಹಣ ಬಲ, ಛೋಟಾ ಮೋಟಾ ಪಕ್ಷಗಳ ಉಪದ್ರವ ನಿಯಂತ್ರಣಕ್ಕೆ ಬರಬಹುದೇನೋ.ಬಹಳ ಹಿಂದೆ ಆಗಿನ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ ಅವರು ಈ ರೀತಿಯ ಅಧ್ಯಕ್ಷಿಯಾ ಮಾದರಿ ಆಡಳಿತ ವ್ಯವಸ್ಥೆ ಕುರಿತು ಅಭಿಪ್ರಾಯ ವ್ಯಕ್ತ ಪಡಿಸಿದ್ದರು.
ಏಕೆಂದರೆ ಒಂದು ದೊಡ್ಡ ಪಕ್ಷ ಅಧಿಕಾರಕ್ಕೆ ಬರುವಷ್ಟು ಬಹುಮತ ಪಡೆಯದೇ ಇದ್ದಾಗ ಸಣ್ಣ ಪಕ್ಷಗಳಿಂದ ಗೆಲ್ಲುವ ಹತ್ತಾರು ಸದಸ್ಯರುಗಳು ಮೇಲುಗೈ ಸಾಧಿಸಿ ಅವರ ಬೆಂಬಲವಿಲ್ಲದೆ ಸರಕಾರ ರಚನೆಗೆ ಸಾಧ್ಯವಾಗದ ಮಟ್ಟಿಗೆ ತಮ್ಮ ಹಿಡಿತ ಸಾಧಿಸಿ ಆಡಳಿತದ ನಿಯಂತ್ರಣ ದುರ್ಬಲವಾಗಲು ಕಾರಣವಾಗಿ `ಬಾಲವೇ ನಾಯಿಯನ್ನು ಅಲುಗಾಡಿಸುವಂತಹ` ಪರಿಸ್ಥಿತಿ ನಿರ್ಮಾಣವಾಗುತ್ತದೆ.
ದೊಡ್ಡ ಪಕ್ಷಗಳಿಗೆ ಬಹುಮತ ಗಳಿಸುವ ವಿಶ್ವಾಸದ ಕೊರತೆಯಿಂದಲೋ,ಏನೋ
ಈಗ ಅನೇಕ ಪಕ್ಷಗಳು ಸೇರಿ `ಸಮಾನ ಮನಸ್ಕರು` ಎಂಬ ಹೆಸರಿನಲ್ಲಿ ಎನ್ ಡಿ ಎ ಮತ್ತು ಐ ಎನ್ ಡಿ ಐ ಎ ಗುಂಪುಗಳನ್ನು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು ಅಧಿಕಾರಕ್ಕಾಗಿ ಮತ್ತೆ ಚೌಕಸಿ ರಾಜಕಾರಣ ಶುರುವಾಗಲು ಕಾರಣವಾಗಿದೆ.
ಈಗ ಒಂದು ದೊಡ್ಡ ಪಕ್ಷಕ್ಕೆ ಸಹಕಾರ ನೀಡಿದವರು ನಾಳೆ ಯಾವುದೋ ನೆಪವೊಡ್ಡಿ ಮತ್ತೊಂದು ದೊಡ್ಡ ಪಕ್ಷಕ್ಕೆ ತಮ್ಮ ಬೆಂಬಲವನ್ನು ನೀಡಿ ಸರಕಾರದ ಪತನಕ್ಕೆ ಕಾರಣವಾಗಬಹುದು.
ಇಂತಹ ಅತಂತ್ರ ಪರಿಸ್ಥಿತಿ
ದೇಶದ ಸುಭದ್ರ ಆಡಳಿತಕ್ಕೆ ಮಾರಕವಾಗಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದು ದುರ್ಬಲ ಶಾಸಕಾಂಗದಿಂದ ಆಡಳಿತಾಂಗ ಮೇಲುಗೈ ಸಾಧಿಸುವಂತಾಗುತ್ತದೆ.
ಇಂದಿನ ಲೇಖನ ಚಿಂತನೆಗೆ ಒಳಪಡಿಸುವಂತಿದ್ದು ಪ್ರಸಕ್ತ ಸನ್ನಿವೇಶದಲ್ಲಿ ಪರಮ ಪೂಜ್ಯ ಜಗದ್ಗುರುಗಳವರು ಮತದಾರರ ಮತ್ತು ಸುಭದ್ರ ಆಡಳಿತದ ಹಿತದೃಷ್ಟಿಯಿಂದ ಚುನಾವಣೆಗಳ ಸುಧಾರಣೆ ಕುರಿತಂತೆ ಕೇಂದ್ರ ಸರಕಾರಕ್ಕೆ ಸೂಕ್ತ ಮಾರ್ಗದರ್ಶನ ಮಾಡುವುದು ಸಮಂಜವೆಂದು ಭಾವಿಸುತ್ತೇನೆ...
ಪರಮ ಪೂಜ್ಯರ ಅರ್ಥಪೂರ್ಣ
ಮತ್ತು ಸಕಾಲಿಕ ಲೇಖನಕ್ಕಾಗಿ ಭಕ್ತಿ ಪೂರ್ವಕ ಪ್ರಣಾಮಗಳು...
🙏🏻🙏🏻🙏🏻
ಡಿ. ಪ್ರಸನ್ನಕುಮಾರ್
ಬೆಂಗಳೂರು