N-2540 
  16-05-2024 11:58 AM   
ಹವಳ ಮುತ್ತುಗಳ ನಾಡಿನಿಂದ ಒಂದು ಪತ್ರ
"ಹವಳ ಮುತ್ತುಗಳ ನಾಡಿ"ನಿಂದ ಮೂಡಿ ಬಂದಿರುವ ಶ್ರೀಗಳ ಮುತ್ತಿನ ನುಡಿಗಳು, ಮುಂಜಾನೆಯ ರವಿಯ ಪ್ರಖರ ಕಿರಣಗಳ ಜೊತೆಗೂಡಿ, ನನ್ನ ಮನದಂಗಳದಲ್ಲಿ ಅವತರಣಿಸುತ್ತಿವೆ, ಅನುಗುಣಿಸುತ್ತಿವೆ, ಪ್ರತಿಫಲಿಸುತ್ತಿವೆ. ಕೆಲವೇ ಶಬ್ದಗಳಲ್ಲಿ, ಒಮಾನಿನ, ಅದರ ರಾಜಧಾನಿ ಮಸ್ಕತ್ತಿನ ಬಗ್ಗೆ ವಿವರಿಸಿರುವ ಶಿವಾಚಾರ್ಯರು, ಶಬ್ದಗಳ ವ್ಯಾಪಕತೆಯನ್ನು, ಅಭಿವ್ಯಕ್ತಿಯನ್ನು ಮೀರಿದಂತಹ ಭಾವನಾತ್ಮಕ ಲೋಕಕ್ಕೆ ಓದುಗರನ್ನು, ಸಹಜತೆಯೊಂದಿಗೆ, ಸೆಳೆದೊಯ್ಯುತ್ತಾರೆ. ಒಂದು ರಾಷ್ಟ್ರದ ಐತಿಹಾಸಿಕ, ಸಾಂಸ್ಕೃತಿಕ, ಧಾರ್ಮಿಕ, ಪ್ರಾಕೃತಿಕ, ಸಾಮಾಜಿಕ, ಶೈಕ್ಷಣಿಕ, ವ್ಯಾವಹಾರಿಕ ಸ್ತರಗಳನ್ನು, ಕುತೂಹಲ ಹುಟ್ಟಿಸುವ ಮಟ್ಟಕ್ಕಷ್ಟೆ ತೆರೆದು ತೋರುವ ಹಾಗೆ ಬರೆದಿರುವ ಸ್ವಾಮೀಜಿಯವರ ಅನನ್ಯ ಸಾಧನೆಯ ಹಿಂದೆ, ಹದಿನೈದು ವರ್ಷಗಳಿಗೂ ಹೆಚ್ಚಿನ ಕಾಲಾವಧಿಯಲ್ಲಿ, ನಿಯಮಿತ ರೂಪದಲ್ಲಿ, ಲೇಖನಿಯ ಮಸಿಯನ್ನು ಹರಿಸಿದ, ಒಬ್ಬ ಪರಿಪಕ್ವ ಅಂಕಣಕಾರ ಅಡಗಿ ಕುಳಿತಿದ್ದಾನೆ. ಅಪರಿಚಿತ ದೇಶವೊಂದಕ್ಕೆ ಕಾಲಿಟ್ಟಾಗ, ಅಲ್ಲಿನ ಯಾವ್ಯಾವ ಸಂಗತಿಗಳು ಚಿಕಿತ್ಸಕ, ಅಧ್ಯಯನ ಶೀಲ ಹಾಗೂ ಸೃಜನಶೀಲ ಮನಸ್ಸನ್ನು ಸೆಳೆಯುತ್ತವೆ ಎನ್ನುವುದಕ್ಕೆ ಜಗದ್ಗುರುಗಳ ಈ ಅಂಕಣಕ್ಕಿಂತಹ ಹೆಚ್ಚಿನ ಯೋಗ್ಯ ಉದಾಹರಣೆಗಳು ಕಾಣ ಸಿಗುವುದು ದುರ್ಲಭ.
ಮೇಲ್ನೋಟಕ್ಕೆ ಇದು ಒಂದು ಅಂಕಣ ಅನ್ನಿಸಿದರೂ, ಅಂತರಂಗಪ್ರಜ್ಞೆಗೆ ಇದು ಒಂದು ಪ್ರವಾಸ ಕಥನದ ಎಲ್ಲಾ ಗುಣಗಳನ್ನೂ ತನ್ನಲ್ಲಿ ಮೇಳೈಸಿಕೊಂಡ, ಬರಹವಾಗಿಯೇ ಅವಿರ್ಭವಿಸುತ್ತದೆ, ಅವತರಿಸುತ್ತದೆ. ಹೊಸ ದೇಶವೊಂದನ್ನು ನೋಡುವ ಗುರುವರ್ಯರ ಬೆರಗು ತುಂಬಿದ ಕಣ್ಣುಗಳಲ್ಲಿ ಅಲ್ಲಿನ ಪ್ರಾಚೀನ, ಆವಾರ್ಚೀನ ಪ್ರಜ್ಞೆಗಳೂ ಒಡೆದು ಮೂಡುತ್ತವೆ. ಒಮಾನ್ ದೇಶ, ಆಧುನಿಕತೆಯತ್ತ ದಾಪುಗಾಲು ಹಾಕುತ್ತಿರುವ ಕುರುಹುಗಳ ಚಿನ್ಹೆಗಳೂ ಢಾಳಾಗಿ ಗೋಚರಿಸುತ್ತವೆ. ತಮ್ಮ ಸುತ್ತಮುತ್ತಲ ಜಗತ್ತನ್ನು, ವಚನಗಳ ಬೆಳಕಿನಲ್ಲಿ ಸಾಕ್ಷಾತ್ಕರಿಸುವ, ಅರ್ಥೈಸಿಕೊಳ್ಳುವ, ರಕ್ತಗತ ಆದಮ್ಯ ಹಂಬಲವೂ, ಶರಣಮನದ ಪ್ರಾಂಜಲತೆಯೂ ತೋರುತ್ತದೆ.
ಒಟ್ಟರ್ಥದಲ್ಲಿ, ಸಿರಿಗೆರೆ ಬೃಹನ್ಮಠದ ಯತಿಗಳು ತಮ್ಮ ಸುಂದರ, ಚಿಕ್ಕ, ಚೊಕ್ಕ, ಸುಲಭಗ್ರಾಹ್ಯ ಅಂಕಣದ ಮೂಲಕ ಬಸವ ಜಯಂತಿಯ ಶುಭ ಸಂದರ್ಭದಲ್ಲಿ, ಮಸ್ಕತ್ತಿನ ಭಕ್ತಗಣವನ್ನು ಆಶೀರ್ವದಿಸುವ ಮುನ್ನಾದಿನವೇ, ಹವಳದ ಮುತ್ತುಗಳ ನಾಡಿನ ತಮ್ಮ ಪತ್ರದ ಮುಖೇನ ಕರುನಾಡಿನ ಕೋಟ್ಯಂತರ ಓದುಗ ಬಳಗವನ್ನು, ಕಡಲಾಚೆಯಿಂದಲೇ, ಮನಸಾರೆ ಹರಸಿದ್ದಾರೆ.
ಗುರುಗಳ ಅಂಕಣವನ್ನು ನಿಯಮಿತವಾಗಿ ಓದದೇ ಇದ್ದ ಅನಾಹುತದ ಅರಿವು ನನಗಾಗಿದೆ; ಸಿರಿಗೆರೆ ಸ್ವಾಮಿಗಳ ಅಸಂಖ್ಯಾತ ಓದುಗ ಬಳಗದಲ್ಲಿ ನನ್ನ ಗಣತಿಯೂ ಮುಂದಿನ ದಿನಗಳಲ್ಲಿ, ಪ್ರತೀ ಪ್ರಾಕ್ಷಿಕಕ್ಕೆ ಒಮ್ಮೆ, ತನ್ನ ಹಾಜರಾತಿಯನ್ನು ಜರೂರಾಗಿ ದಾಖಲಿಸಲಿದೆ.
Shivaprakash
Muscat, Oman