N-2633 
  05-09-2024 12:40 PM   
ವಿದ್ಯಾರ್ಥಿಗಳ ಶ್ರಮದಾನದಿಂದ ಕಟ್ಟಡ ನಿರ್ಮಾಣ : ಶ್ರೀ ಶಿವಕುಮಾರ ಶ್ರೀಗಳವರಿಂದ ಪ್ರೋತ್ಸಾಹ, ಮಾರ್ಗದರ್ಶನ
" ನಾನು ಕಂಡಂತೆ ಶ್ರೀ ಶಿವಕುಮಾರ "
ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ಬರೀ ಗುರುಗಳಲ್ಲ, ಅವರು ನಮ್ಮ ಸಮಾಜದ ಒಂದು ಅದ್ಭುತವಾದ ಶಕ್ತಿ. ಅವರು ಬರೀ ಕಟ್ಟಡಗಳನ್ನು ಕಟ್ಟಲಿಲ್ಲ. ಸಮಾಜದ ಸರ್ವರಿಗೂ ಶಿಸ್ತು, ತಾಳ್ಮೆ, ಸಮ್ಯಮ, ಸಂಸ್ಕಾರ, ಶಿಕ್ಷಣ, ಸನ್ನಡತೆ, ಪರಿಶ್ರಮ, ಪ್ರಾಮಾಣಿಕತೆ, ಕಾಯಕ, ದಾಸೋಹ, ವ್ಯವಹಾರ ಹೀಗೆ ಹತ್ತು ಹಲವು ವಿಚಾರಗಳನ್ನು ಸಮಾಜಕ್ಕೆ ಕೊಟ್ಟವರು. ಶ್ರೀಗಳವರ ಮನಸ್ಸು ಬಹಳ ಮೃದು, ತಾಯಿಯ ಹೃದಯ, ಮಮತೆಯ ಮಡಿಲು. ಅಷ್ಟೇ ಕಠೋರ. ಒಳ್ಳೆಯವರಿಗೆ ಒಳ್ಳೆಯವರು. ಕೆಟ್ಟವರಿಗೆ ಸಿಂಹಸ್ವಪ್ನವಾಗಿದ್ದವರು. ಇವರು ದಕ್ಷ ಆಡಳಿತಗಾರರೂ, ಸಮಾಜ ಸುಧಾರಕರೂ, ಸಂಘಟಕರೂ ಆಗಿದ್ದರು. "ಇವನಾರವ ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವ ಇವನಮ್ಮವನೆಂದೆನಿಸಯ್ಯಾ ಕೂಡಲ ಸಂಗಮ ದೇವಾ" ಎಂಬ ಬಸವಣ್ಣನವರ ವಾಣಿಗನುಗುಣವಾಗಿ ಎಲ್ಲರನ್ನೂ ಸಮಾನವಾಗಿ ಕಂಡವರು. ಎಲ್ಲ ಜಾತಿ ಜನಾಂಗದವರಿಗೂ ಕೂಡಿ ಓದುವ, ಕೂಡಿ ಉಣ್ಣುವ, ಕೂಡಿ ಬಾಳುವಂತೆ ಮಾಡಿದ ಮಹಾತ್ಮರಿವರು. ಅಂತೆಯೇ ಹಳ್ಳಿಗಾಡಿನಲ್ಲಿ ಶಿಕ್ಷಣದಿಂದ ವಂಚನೆಗೊಳಗಾಗಿದ್ದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುವಾಗಲೆಂದು ಹಳ್ಳಿಗಳಲ್ಲಿ ಶಾಲೆಗಳನ್ನು ಕಟ್ಟಿಸಿ ಪ್ರತಿಯೊಂದು ಮಗುವೂ ಶಿಕ್ಷಣವನ್ನು ಕಲಿಯಲು ಅವಕಾಶ ಮಾಡಿಕೊಟ್ಟರು. ದೀನ-ದಲಿತೋದ್ಧಾರಕ್ಕಾಗಿ ಶ್ರಮಿಸಿದವರು. 1974 ರಲ್ಲಿ ನಾನು ಸಿರಿಗೆರೆಯಲ್ಲಿ ಪಿ ಯೂ ಸಿ ಓದುತ್ತಿದ್ದಾಗ, ನನ್ನ ಶ್ರದ್ಧೆ, ಕಾಯಕನಿಷ್ಠೆಯನ್ನು ಗಮನಿಸಿದ ಪೂಜ್ಯರು ನನ್ನನ್ನು ತಮ್ಮ ಮರಿಯನ್ನಾಗಿ ಮಾಡಿಕೊಂಡರು. ಆ ದಿನಗಳಲ್ಲಿ ಸಿರಿಗೆರೆಯಲ್ಲಿ ನೀಲಾಂಬಿಕಾ ಬಾಲಿಕಾ ಪ್ರೌಢಶಾಲೆ, ಬಿ ಎಲ್ ಆರ್ ಪಿ ಯೂ ಕಾಲೇಜು ಕಟ್ಟಡಗಳಿದ್ದವು. ಎಂ ಬಿ ಆರ್ ಕಾಲೇಜು ಕಟ್ಟಡವಿರಲಿಲ್ಲ. ಬಿ ಎಲ್ ಆರ್ ಕಾಲೇಜಿನಲ್ಲಿಯೇ ಎಂ ಬಿ ಆರ್ ಕಾಲೇಜಿನ ತರಗತಿಗಳನ್ನು ಬೆಳಗ್ಗೆ 7. 30 ರಿಂದ 10. 30 ರವರೆಗೆ ಸಂಜೆ 4. 30 ರಿಂದ 7.30 ರವರೆಗೆ ನಡೆಸುತ್ತಿದ್ದರು. ಹಾಗಾಗಿ ಶ್ರೀಗಳವರು ಎಂ ಬಿ ಆರ್ ಕಾಲೇಜಿನ ನೂತನ ಕಟ್ಟಡವನ್ನು ವಿದ್ಯಾರ್ಥಿಗಳ ನೆರವಿನಿಂದ ಕಟ್ಟಿಸಿದರು. ನಂತರ ಶ್ರೀಮಠದಲ್ಲಿದ್ದ ಶ್ರೀ ಗುರುಸಿದ್ಧನಿಕೇತನವನ್ನು ಮತ್ತು ಸಾಸಲು ಹಳ್ಳದ ದಡದಲ್ಲಿ ತಾವು ಉಳಿದುಕೊಳ್ಳಲು ಒಂದು ಕಟ್ಟಡವನ್ನು ವಿದ್ಯಾರ್ಥಿಗಳ ನೆರವಿನಿಂದಲೇ ಕಟ್ಟಿಸಿದರು. ಶ್ರೀಗಳವರು ಬಹಳ ಸರಳ ವ್ಯಕ್ತಿತ್ವದವರು. ಎಂಥವರೂ ಶ್ರೀಗಳವರ ವ್ಯಕ್ತಿತ್ವಕ್ಕೆ ತಲೆಬಾಗುತ್ತಿದ್ದರು. ಇಂತಹ ಪೂಜ್ಯರನ್ನು
ಪಡೆದ ನಾವೆಲ್ಲರೂ ಭಾಗ್ಯವಂತರು ಎಂದರೆ ಅತಿಶಯೋಕ್ತಿಯಾಗಲಾರದು.
ಮಹಾಲಿಂಗಯ್ಯ ಮಾದಾಪುರ
ದಾವಣಗೆರೆ, ಮಾದಾಪುರ.