N-2458 
  25-07-2024 09:59 AM   
ತಾಯಿಯ ಮಡಿಲನ್ನು ಸೇರಿದ ವೀರ ಯೋಧ
ಮನಃಸ್ಪರ್ಶೀ ಲೇಖನ, ಶ್ರೀಗಳ ಹೃದಯಸ್ಪರ್ಶೀ ಅಂತರಂಗದಿಂದ ಮೂಡಿ ಬಂದಿರುವುದು. ಹುಣ್ಣಿಮೆಯ ಆಹ್ಲಾದಕರ ಅನುಭೂತಿಗೆ ನನ್ನನ್ನು ಒಡ್ಡಿದೆ. ನಮ್ಮ ಇಂದಿನ ವ್ಯವಸ್ಥೆಗೆ, ಸಹಜವಾಗಿಯೇ ಅತೀವ ಬೇಸರ ಹೊರಸೂಸುವ ಜಗದ್ಗುರುಗಳ ಮನಃಸ್ಥಿತಿ ಸುಲಭದಲ್ಲಿ ಅರ್ಥವಾಗುವಂತಹುದು. ತನ್ಮೂಲಕ, ನನ್ನ ಆಂತರ್ಯದ ಮಾತುಗಳನ್ನೇ ಶ್ರೀವರ್ಯರು ಧ್ವನಿಸಿದಂತಿದೆ. ದೇಶ ರಕ್ಷಣೆಯ ವಿಷಯದಲ್ಲಿ "ಜೀವತ್ಯಾಗ" ಮಾಡುವ ಸೈನಿಕರಿಗೂ, ದೇಶ ಭಕ್ಷಣೆಯ ವಿಷಯದಲ್ಲಿ "ಮಾನತ್ಯಾಗ" ಮಾಡುವ ರಾಜಕಾರಣಿಗಳಿಗೂ ಎಲ್ಲಿಂದೆಲ್ಲಿಯ ಹೋಲಿಕೆ? ಇದನ್ನೇ "ಭೂಮ್ಯಾಕಾಶಗಳ ನಡುವಿನ ಅಂತರ" ಎನ್ನುವುದು.
ಕರ್ನಲ್ ರವೀಂದ್ರನಾಥರ ವೀರಗಾಥೆ ಕನ್ನಡಿಗರ ಮಟ್ಟಿಗೆ ಬಹುದೊಡ್ಡ ಸ್ಫೂರ್ತಿಯ ಸೆಲೆ ಎನಿಸುತ್ತದೆ. ಕಾರ್ಗಿಲ್ ಹೋರಾಟದಲ್ಲಿ ಕರ್ನಲ್ ತೋರಿದ ಅಪ್ರತಿಮ ಸಾಹಸ, ಸಮಯಪ್ರಜ್ಞೆ, ನಾಯಕತ್ವ ಗುಣಗಳು ಮೈ ನವಿರೇಳಿಸುತ್ತದೆ. ರವೀಂದ್ರರ ಮನೆಯ ಪರಿಸರ, ಸಂಸ್ಕಾರ ಇದಕ್ಕೆ ಪೂರಕವಾಗಿದ್ದಂತೆ ತೋರುತ್ತದೆ. ಶರಣ ದಂಪತಿಗಳ, ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದ ಈ ಅಸಾಮಾನ್ಯ ಯೋಧ ಮೆರೆದ ರಾಷ್ಟ್ರಭಕ್ತಿಯ ಹಿಂದೆ, ಆತನ ಕುಟುಂಬದ ನಂಬಿಕೆಗಳೂ, ಅಸ್ಮಿತೆಗಳೂ, ಭಗವಂತನಲ್ಲಿ ಅಚ್ಚಳಿಯದ ಭಕ್ತಿ, ನಿಷ್ಠೆಗಳೂ ಸಾಕಷ್ಟು ಕೆಲಸ ಮಾಡಿವೆ.
ಒಬ್ಬರಾದ ಮೇಲೊಬ್ಬರಂತೆ, ಅಪ್ರತಿಮ ಸೇನಾನಿಗಳಿಗೆ ಜನ್ಮ ನೀಡುತ್ತಿರುವ ತಾಯಿ ಭಾರತಿಯ ಬಸಿರು "ರತ್ನಗರ್ಭ" ಎನ್ನುವ ಉಪಮೆಗೆ ನೂರಕ್ಕೆ ನೂರರಷ್ಟು ಹೊಂದಿಕೆಯಾಗುತ್ತದೆ. ಕರ್ನಲ್ ರಂತಹ ವೀರ ಸೈನಿಕರು ಇರುವವರೆಗೆ ಭಾರತದ ಒಂದು ಇಂಚು ಭೂಮಿಯೂ ಪರರ ಪಾಲಾಗುವುದಿಲ್ಲ ಎನ್ನುವ ನಂಬಿಕೆಗೆ ಮತ್ತೊಂದು ದೃಢವಾದ ನೆಲೆ ಸಿಗುತ್ತದೆ. ನಿನ್ನೆ ರಾತ್ರಿ ನಾನು ಮಾಡಿದ ಸುಖದ ನಿದ್ರೆಯ ಹಿಂದೆ ಈ ಕಾಣದ ಸೈನಿಕರ ಬಹುದೊಡ್ಡ ಕೈವಾಡವಿದೆ. ಸುಭದ್ರವಾದ ದೇಶದ ಗಡಿಗಳು, ದೇಶದ ಉತ್ತರೋತ್ತರ ಅಭಿವೃದ್ದಿಯ ಬುನಾದಿಗಳು ಎನ್ನುವ ಭಾವಕ್ಕೆ ಸಿರಿಗೆರೆ ಶ್ರೀಗಳ ಲೇಖನ ಮತ್ತಷ್ಟು ಇಂಬು ಕೊಡುತ್ತದೆ.
ಶಿವಪ್ರಕಾಶ್
Muscat, Oman