N-2458 
  25-07-2024 11:01 PM   
ತಾಯಿಯ ಮಡಿಲನ್ನು ಸೇರಿದ ವೀರ ಯೋಧ
ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರ ಇಂದಿನ *ತಾಯಿಯ ಮಡಿಲನ್ನು ಸೇರಿದ ವೀರ ಯೋಧ* ಹೃದಯಸ್ಪರ್ಶಿ ಲೇಖನ ಸಾಕಾಲಿಕವಾಗಿ ಮೂಡಿ ಬಂದಿದ್ದು ಯೋಧರೊಬ್ಬರ ಮತ್ತು ಅವರ ಮಾತಾ ಪಿತೃಗಳು ಸಲ್ಲಿಸಿದ ನಿಸ್ವಾರ್ಥ ದೇಶ ಸೇವೆ ಮನ ಮಿಡಿಯುವಂತಿದೆ.
1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ವಿಜಯ ಪತಾಕೆ ಹಾರಿಸಿದ್ದ ದಾವಣಗೆರೆ ಮೂಲದ ವೀರ ಸೇನಾನಿ, ವೀರಚಕ್ರ ಪ್ರಶಸ್ತಿಗೆ ಪಾತ್ರರಾಗಿದ್ದ ಕರ್ನಲ್ ರವೀಂದ್ರನಾಥ್ ಅವರು ಶಿವಸಾಯುಜ್ಯವನ್ನು ಹೊಂದಿದ ಸುದ್ದಿ ತಿಳಿದ ಕೂಡಲೇ ಅವರ ದಾವಣಗೆರೆಯ ಮನೆಗೆ ಧಾವಿಸಿ ಮನೆತನದವರಿಗೆ ಸಾಂತ್ವನಾಶೀರ್ವಾದ ಕರುಣಿಸಿದ ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರ ಪಾದ ಸ್ಪರ್ಶದಿಂದ ಅಗಲಿದ ವೀರ ಸೇನಾನಿಯ ಆತ್ಮಕ್ಕೆ ಸದ್ಗತಿ ದೊರಕಿದೆಯೆಂದು ಭಾವಿಸುತ್ತೇನೆ.
ಮದುವೆಯಾದ ಒಂದೇ ವರ್ಷಕ್ಕೆ ಕಾರ್ಗಿಲ್ ರೆಜಿಮೆಂಟ್ ಸೇರಿ ರವೀಂದ್ರನಾಥ್ ಅವರ ಮಾರ್ಗದರ್ಶನದಲ್ಲಿ ಯುದ್ಧದಲ್ಲಿ ಹೋರಾಡಿ, ಮುದ್ದಿನ ಹೆಂಡತಿಯ ಪತ್ರವನ್ನು ತನ್ನ ಜೇಬಿನಲ್ಲಿರಿಸಿಕೊಂಡು ಪ್ರಾಣ ತೆತ್ತ ರಾಜಸ್ಥಾನದ ಮೂಲದ ಸೈನಿಕ ಹುತಾತ್ಮನಾದ ಸಂಗತಿ ಮನ ಕಲಕುವಂತಿದ್ದು ಓದುತ್ತಿದ್ದಂತೆ ಕಣ್ಣಾಲಿಗಳು ತೇವಗೊಂಡವು.
ಇಂತಹ ಅದೆಷ್ಟೋ ಸಾವಿರಾರು ಜೀವಗಳು ದೇಶದ ಚೀನಾ, ಪಾಕಿಸ್ತಾನ ಗಡಿಯಲ್ಲಿ ಕೊರೆಯುವ ಚಳಿ, ಮಳೆಯನ್ನು ಲೆಕ್ಕಿಸದೆ ದೇಶ ರಕ್ಷಣೆಗಾಗಿ ಹೋರಾಡುತ್ತಿದ್ದರೆ ಇಂದಿನ ನಮ್ಮನ್ನು ಆಳುವ ರಾಜಕಾರಣಿಗಳು `ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ` ಎಂಬಂತೆ ಪರಸ್ಪರ ಕುರ್ಚಿಗಾಗಿ ಒಬ್ಬರಿಗೊಬ್ಬರು ಟೀಕೆ ಮಾಡುತ್ತಾ ಸಾರ್ವಜನಿಕರ ಹಣವನ್ನು ವ್ಯಯ ಮಾಡಿ ಮುಂದಿನ ಚುನಾವಣೆಗೆ ಅಣಿಯಾಗಲು ಹೋರಾಡುತ್ತಿರುವ ಇಂದಿನ ರಾಜಕೀಯದ ಪರಿಸ್ಥಿತಿ ಅಸಹ್ಯ ಹುಟ್ಟಿಸುವಂತಿದೆ.
ಹಾಗಾಗಿಯೇ ಪರಮ ಪೂಜ್ಯರು ಇಂದಿನ ಚುನಾವಣಾ ಟಿಕೇಟು ಹೋರಾಟಗಾರರನ್ನು ಕುರಿತು `ಕನಿಷ್ಠ ಎರಡು ವರ್ಷ ಮಿಲಿಟರಿಯಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸಿದವರಿಗೆ ಮಾತ್ರ ಚುನಾವಣಾ ಟಿಕೇಟು ದೊರೆಯುವ ಷರತ್ತು ವಿಧಿಸಬೇಕೆಂದು` ನೊಂದು ತಿಳಿಸಿರುವುದು ಒಳ್ಳೆಯ ನಿರ್ದೇಶನ ನೀಡಿದಂತಾಗಿದೆ.
ಆಗಲಾದರೂ ದೇಶ ಸೇವೆಯ ಕಾಳಜಿ ಉಂಟಾಗಬಹುದು...!
ಆದರ್ಶ ದಂಪತಿಗಳಾದ ಹೊಳೆ ಸಿರಿಗೇರಿ ಬಸಪ್ಪ ಮೇಷ್ಟ್ರು ಮತ್ತು ಸರೋಜಮ್ಮ ಶ್ರೀಮಠದ ಶಿಜ್ಯರಾಗಿದ್ದು ಈರ್ವರೂ ಪೂಜ್ಯ ಗುರುಗಳವರ ಕೃಪೆಗೆ ಪಾತ್ರರಾಗಿ ತಮ್ಮ ಮನೆತನದ ಒಳಿತಿಗಿಂತಲೂ ಹೆಚ್ಚಾಗಿ ಸಮಾಜದ ಒಳಿತಿಗೆ ಒತ್ತು ನೀಡಿದ್ದು,ಒಮ್ಮೆ ಗುರುಗಳ ಜೊತೆಗಿನ ವಿದೇಶ ಪ್ರವಾಸಕ್ಕೆ ಕಟ್ಟಿದ್ದ ಹಣ ವೀಸಾ ಸಿಗದ ಕಾರಣಕ್ಕೆ ರದ್ದಾದ ಕಾರಣ ಅದೇ ಹಣವನ್ನು ಸಮಾಜದ ಒಳಿತಿಗೆ ಸಹಾಯ ಹಸ್ತ ನೀಡಿ ದಾನ ಮಾಡಿರುವುದು ಶ್ಲಾಘನೀಯ.
ತರಳಬಾಳು ಹುಣ್ಣಿಮೆ ಸಂದರ್ಭದಲ್ಲಿ ಪೂಜ್ಯಶ್ರೀ ತರಳಬಾಳು ಜಗದ್ಗುರುಗಳವರಿಂದ ದೇಶ ಸೇವೆಗೆ ದುಡಿದ ಕಾರಣಕ್ಕಾಗಿ ಸನ್ಮಾನ ಸ್ವೀಕರಿಸಿ ಗುರುಕೃಪೆಗೆ ಪಾತ್ರರಾಗಿದ್ದು,ತಮ್ಮದೇ ಒಂದು ಸಂಸ್ಥೆಯನ್ನು ಕಟ್ಟಿ ಸಾರ್ಥಕ ಜೀವನ ಸಾಗಿಸಿದ ರವೀಂದ್ರನಾಥ್ ಇಂದು ಕಣ್ಮರೆಯಾಗಿ ತಾಯಿ ಮಡಿಲು ಸೇರಿರುವುದನ್ನು ಪರಮ ಪೂಜ್ಯರು ಲೇಖನದಲ್ಲಿ ತಿಳಿಸಿರುವುದು ಇಂತಹ ಅನೇಕ ನೊಂದ ಹುತಾತ್ಮ ಯೋಧರ ಕುಟುಂಬದವರಿಗೆ ಮನ ಶಾಂತಿ ದೊರೆಯಬಹುದೆಂದು ಭಾವಿಸುತ್ತೇನೆ...
ಭಕ್ತಿ ಪೂರ್ವಕ ಪ್ರಣಾಮಗಳು...
🙏🏻🙏🏻🙏🏻
ಡಿ. ಪ್ರಸನ್ನಕುಮಾರ್
ಬೆಂಗಳೂರು