N-2572 
  28-06-2024 04:09 PM   
ಕುಣಿಯುವ ಮನಸ್ಸಿಗೆ ಕುಣಿಕೆ ಹಾಕುವುದೇ ಯೋಗ!
ಸಿರಿಗೆರೆಯ ತರಳಬಾಳು ಜಗದ್ಗುರು *ಡಾ||ಶಿವಮೂರ್ತಿ ಶಿವಾಚಾರ್ಯ* ಮಹಾಸ್ವಾಮಿಗಳವರ
" *ಬಿಸಿಲು ಬೆಳದಿಂಗಳು* " ಸಂಚಿಕೆ
" *ಕುಣಿಯುವ ಮನಸ್ಸಿಗೆ ಕುಣಿಕೆ ಹಾಕುವುದೇ ಯೋಗ!* " ದ ಕುರಿತು ನನ್ನ ಅನಿಸಿಕೆ.
ಈ ಬಾರಿ ಜೂನ್ 21ರಂದು ನಡೆದ " *ವಿಶ್ವ ಯೋಗ ದಿನ* " ದ ಸಂದರ್ಭದಲ್ಲಿ ಮೂಡಿದ ಈ ಲೇಖನ ತಂಬಾ ಸಮಯೋಚಿತವಾಗಿದೆ. ಗುರುಗಳು ಸದಾ ತತ್ ಕ್ಷಣದ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲಿ ನಮ್ಮನ್ನು ಆ ವಿಷಯದ ಬಗ್ಗೆ ಜ್ಞಾನಾಸಕ್ತರನ್ನಾಗಿರುವಂತೆ ಪ್ರೇರೇಪಿಸುತ್ತಿದ್ದಾರೆ. ನಿಜಕ್ಕೂ ಇದು ಸಮಾಜವನ್ನು ಜಾಗೃತವನ್ನಾಗಿ ಮಾಡುತ್ತಿದೆ.
ಗುರುಗಳು ಜೂನ್ 21 ರಂದೇ ಯೋಗ ದಿನವೆಂದು ನಿರ್ಧಾರ ಮಾಡಿರುವುದರ ಔಚಿತ್ಯವನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ; ಆ ದಿನ ವರ್ಷದ ಅತ್ಯಂತ ದೀರ್ಘಾವಧಿಯ ದಿನ. ಅಂದು ಹೆಚ್ಚಿನ ಬೆಳಕು ಇರುವಂತೆ ವ್ಯಕ್ತಿಯ ಬದುಕಿನಲ್ಲಿ ಹೊಸ ಬೆಳಕು ನವ ಚೈತನ್ಯ ಮೂಡಲಿ ಎಂಬ ಆಶಯ. ಈ ದಿನವನ್ನು ಅರ್ಥ ಪೂರ್ಣವಾಗಿ ಆಯ್ಕೆ ಮಾಡಿದವರು ನಿಜಕ್ಕೂ ಪ್ರಶಂಸಾರ್ಹರು.
ಯೋಗವು ಯಾವುದೇ ಜಾತಿ ಮತಕ್ಕೆ ಸಂಬಂಧಪಟ್ಟಿದ್ದಲ್ಲ. ಅದರ ಧ್ಯೇಯವೇನಿದ್ದರೂ ಜೀವ, ಜಗತ್ತು ಮತ್ತು ಚೈತನ್ಯದ ಉನ್ನತೀಕರಣವೇ ಆಗಿದೆ.
ಯೋಗದಿಂದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯ ಲಭಿಸುತ್ತದೆ ಮತ್ತು ಸಂಯಮ ಹಾಗೂ ಶಿಸ್ತು ಬದ್ಧ ಜೀವನ ನಮ್ಮದಾಗುತ್ತದೆ ಎಂದು ವಿವರಿಸಿದ್ದಾರೆ.
ಗುರುಗಳು ಅಷ್ಟಾಂಗ ಯೋಗಗಳನ್ನು ವಿವರಿಸುತ್ತಾ ಅವು ಶರೀರ ಮತ್ತು ಮನಸ್ಸಿನ ಅಂತರಂಗ ಮತ್ತು ಬಹಿರಂಗ ಶುಚಿತ್ವವನ್ನು ನೀಡುವ ಸಾಧನಗಳು ಎಂದು ವಿವರಿಸಿದ್ದಾರೆ.
ಯೋಗಿಯಾದವನು ದೇಹಕ್ಕೆ ಸಂಬಂಧಿಸಿದ ಆಸನಗಳ ಪರಿಣಿತಿಯ ಜೊತೆಗೆ ಮಾನಸಿಕ ಆರೋಗ್ಯ ಪಡೆಯಲು ಅಜ್ಞಾನ,ಅಹಂಕಾರ,ರಾಗ,ದ್ವೇಷ ಮತ್ತು ಮೋಹ ಎಂಬ ಕ್ಲೇಶಕಾರಕಗಳನ್ನು ಮೆಟ್ಟಿ ನಿಲ್ಲ ಬೇಕಾಗುತ್ತದೆ. ಆಗ ಮಾತ್ರ ಅವನು ಯೋಗಿಯಾಗುತ್ತಾನೆ; ಇಲ್ಲದಿದ್ದರೆ ಕೇವಲ ಯೋಗ ಪಟುವಾಗಬಲ್ಲ ಎಂದು ಎಚ್ಚರಿಸಿದ್ದಾರೆ.
ಮನುಷ್ಯ ಲೌಕಿಕ ಆಕರ್ಷಣೆಗಳಿಂದಾಗುವ ತನ್ನ ಚಂಚಲ ಮನಸ್ಸಿಗೆ ತನ್ನ ಧೃಡ ನಿರ್ಧಾರದಿಂದ ಕುಣಿಕೆಯನ್ನು ಹಾಕಬೇಕು, ವಿಕೃತ ಆಲೋಚನೆಗಳನ್ನು ಹತ್ತಿಕ್ಕಬಲ್ಲ ಗಾರುಡಿಗನಾಗಬೇಕು ಎಂದು ಯೋಗದ ಬಗ್ಗೆ ನಮಗೆ ಮನವರಿಕೆ ಮಾಡಿಕೊಟ್ಟ ಮಹಾಗುರುಗಳಿಗೆ ಶಿರಸಾಷ್ಟಾಂಗ ಪ್ರಣಾಮಗಳು.
ಗುರುಗಳ ವಿಚಾರ ಧಾರೆಯನ್ನು ನಮಗೆಲ್ಲಾ ತಲುಪಿಸಿ ನಮ್ಮ ಅನಿಸಿಕೆಯನ್ನು ಪಡೆಯುತ್ತಿರುವ *ರಾ.ವೆಂಕಟೇಶ ಶ್ರೇಷ್ಠಿ* ಇವರಿಗೆ ಧನ್ಯವಾದಗಳು.
ನಾರಾಯಣ ದೊಂತಿ, ಚಿತ್ರದುರ್ಗ