N-2572 
  08-07-2024 07:13 PM   
ಕುಣಿಯುವ ಮನಸ್ಸಿಗೆ ಕುಣಿಕೆ ಹಾಕುವುದೇ ಯೋಗ!
ಶ್ರೀ ಗುರುಗಳ ಚರಣಾರವಿಂದಗಳಿಗೆ ಶಿರಸಾಷ್ಟಾಂಗ ನಮನಗಳು.
ಈ ಸಾರಿಯ ಅಂಕಣದಲ್ಲಿ ಕುಣಿವ ಮನಕ್ಕೆ ಯೋಗ ಮದ್ದು ಎಂಬ ವಿಷಯವನ್ನು ಚೆನ್ನಾಗಿ ನಿರೂಪಿಸಿದ್ದೀರಿ. ತಾವು ವಿಯೆನ್ನಾ ವಿವಿ ಯಲ್ಲಿ ಓದುತ್ತಿದ್ದಾಗ ಪುಸ್ತಕದ ಅಂಗಡಿಗೆ ಹೋದಾಗ ಹೊಸ ಪುಸ್ತಕಗಳು (new arrivals) ಎಂಬ ಶೀರ್ಷಿಕೆ ನೋಡಿ ಪುಸ್ತಕ ಕೊಳ್ಳಲು ಹೋದಾಗ ಅಲ್ಲಿ ಯೋಗ ಪಾಕಶಾಸ್ತ್ರ (yoga kochbuch) ಎನ್ನುವ ಪುಸ್ತಕ ಖರೀದಿಸಲು ಮುಂದಾದಾಗ ಪುಸ್ತಕದ ಬೆಲೆಯ ಹಣ ಬಳಿಯಲ್ಲಿ ಇಲ್ಲದ ಕಾರಣ ಮತ್ತೆ ಹಣ ಒದಗಿಸಿಕೊಂಡು ಹೋಗುವಷ್ಟರಲ್ಲಿ ಪುಸ್ತಕಗಳು ಖಾಲಿಯಾಗಿತ್ತು ಎಂದು ಬರೆದಿದ್ದೀರಿ. ಅದನ್ನು ಓದುತ್ತಾ ಮುಂದೆ ಹೋದಾಗ ನಿಮಗೆ ಮತ್ತೆ ಆ ಪುಸ್ತಕ ಸಿಕ್ಕಿತೇ? ಅದರಲ್ಲಿ ಏನಿತ್ತು ಎಂಬ ಕುತೂಹಲ ಮೂಡುತ್ತಿತ್ತು. ಆದರೆ ಆ ವಿಷಯ ಮತ್ತೆ ಪ್ರಸ್ತಾಪವಾಗಿಲ್ಲ. ಆ ಪುಸ್ತಕದಲ್ಲಿ ಏನಿತ್ತೆಂದು ತಿಳಿದುಕೊಳ್ಳುವ ಕುತೂಹಲ ಹಾಗೆಯೇ ಉಳಿಯಿತು. ಬಹುಶಃ ಮುಂದೆ ಯಾವಾಗಲಾದರೂ ಸಿಗಬಹುದೇನೋ, ಕಾದು ನೋಡೋಣ.
ಮುಂದೆ ಯೋಗದ ಬಗ್ಗೆ ವಿಚಾರ ಮಾಡುತ್ತಾ ಸಂಯಮ ಹಾಗೂ ಶಿಸ್ತುಬದ್ಧ ಜೀವನ, ಶರೀರ ಮತ್ತು ಮನಸ್ಸನ್ನು ಸುಸ್ಥಿತಿಯಲ್ಲಿಡುವ ಒಂದು ಸಾಧನವೆಂದು ಹೇಳುತ್ತಾ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಈ ಅಷ್ಟಾಂಗಗಳನ್ನು ಉದಾಹರಿಸುತ್ತಾ ಮೊದಲನೇ ನಾಲ್ಕು ಬಹಿರಂಗ ಸಾಧನಗಳಾದರೆ ಕೊನೆಯ ೪ ಅಂತರಂಗ ಸಾಧನಗಳೆಂದು ತಿಳಿಸುತ್ತಾ, ಬಸವಣ್ಣನವರ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ…. ಈ ವಚನದಲ್ಲಿ ಅಷ್ಟಾಂಗ ಯೋಗಗಳ ವಿವರಣೆ ಅದರಲ್ಲಿ ಒಳಗೊಂಡಿರುವುದನ್ನು ತಿಳಿಸಿರುವಿರಿ, ಮತ್ತು ಇನ್ನೊಂದು ವಚನ ಮನವೇ ಸರ್ಪ, ತನುವೇ ಹೇಳಿಗೆ, ಹಾವಿನೊಡತಣ ಹುದುವಾಳಿಗೆ ….. ಈ ವಚನವನ್ನು ಉದಾಹರಿಸಿದ್ದೀರಿ. ಮನುಷ್ಯನು ತನ್ನ ಮನಸ್ಸನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಬೇಕೆಂಬ ಪತಂಜಲಿಯ ಅಷ್ಟಾಂಗ ಯೋಗದ ಸೂತ್ರಗಳನ್ನೊಳಗೊಂಡ ವಚನಗಳ ಉದಾಹರಣೆ ಸಮಯೋಚಿತವಾಗಿ ಮೂಡಿಬಂದಿದೆ. ಧನ್ಯವಾದಗಳು.
ನಿಮ್ಮ ಮಹತ್ ವಿಷಯಗಳನ್ನೊಳಗೊಂಡ ಲೇಖನಗಳ ಹೂರಣವನ್ನು ಹಲವಾರು ಪುಸ್ತಕಗಳ ಮೂಲಕ ಉಚಿತವಾಗಿ ಎಲ್ಲರಿಗೂ ತಲ್ಪುವಂತೆ ಮಾಡುತ್ತಿರುವ ನಿಮ್ಮ ಈ ಮಹತ್ಕಾರ್ಯಕ್ಕೆ ಹಾಗೂ ನಿಮ್ಮ ಶಿಷ್ಯರಾದ ರಾ.ವೆಂಕಟೇಶ ಶೆಟ್ಟಿಯವರಿಗೂ ವಂದಿಸುತ್ತಾ, ತಮ್ಮ ಚರಣಾರವಿಂದಗಳಿಗೂ ನಮಿಸುತ್ತಾ,
ತಮ್ಮ ಆಶೀರ್ವಾದವನ್ನು ಬೇಡುವ,
ಎಂ. ಜೆ.ನಾಗಲಕ್ಷ್ಮಿ, ಚಿಕ್ಕಮಗಳೂರು.