N-2548 
  03-06-2024 10:03 AM   
ಅರಬ್ ರಾಷ್ಟ್ರಗಳಲ್ಲಿ ಮಂದಿರ ಮಸೀದಿಗಳು
ಜಗದ್ಗುರುಗಳವರ "ಅರಬ್ ನೆಲದ ಮಂದಿರ ಮಸೀದಿ" ಅಂಕಣ ಕುರಿತು ನನ್ನ ಪ್ರತಿಕ್ರಿಯೆ: 🖊️
ಇಡೀ ಅಂಕಣದಲ್ಲಿ ನನ್ನ ಗಮನವನ್ನು ಹೆಚ್ಚಾಗಿ ಸೆಳೆದ ಅಂಶವೆಂದರೆ"ಧಾರ್ಮಿಕ ಸಾಮರಸ್ಯ". ಅದೂ ಸಹ ಮುಸ್ಲಿಂ ಬಾಹುಳ್ಯ ಇರುವ ಅರಬ್ ರಾಷ್ಟ್ರಗಳಲ್ಲಿ ಒಂದಾದ ದುಬೈನಲ್ಲಿ. ಅಲ್ಲಿನ ಧಾರ್ಮಿಕ ಸಹಿಷ್ಣುತೆಯ ಬಗ್ಗೆ ಹಲವು ಸಂದರ್ಭಗಳಲ್ಲಿ ಕೇಳಿ ಅರ್ಥ ಮಾಡಿಕೊಂಡಿದ್ದೆ. ಮತ್ತೊಮ್ಮೆ ಅದೇ ರೀತಿಯಲ್ಲಿ ಸಾಮರಸ್ಯವನ್ನು ವಿಶ್ಲೇಷಿಸುವ ಬರಹ ಮತ್ತೊಮ್ಮೆ ಓದಲು ಸಿಕ್ಕಂತಾಯಿತು. ಈ ವಿಷಯವನ್ನು ಪ್ರಸ್ತಾಪಿಸಿ ಅಂಕಣವನ್ನು ಬರೆದ ಪೂಜ್ಯರಿಗೆ ಶರಣು ಶರಣಾರ್ಥಿಗಳು.
ಈ ಧಾರ್ಮಿಕ ಸಹಿಷ್ಣುತೆಯನ್ನು ನಮ್ಮ ದೇಶದಲ್ಲಿನ ವ್ಯವಸ್ಥೆಯ ಜೊತೆಗೆ ಹೋಲಿಕೆ ಮಾಡಬೇಕೇ ಬೇಡವೇ ಎಂಬುದೇ ಜಿಜ್ಞಾಸೆಯಾಗಿ ಕಾಡುತ್ತದೆ. ಏಕೆಂದರೆ ವಿವಿಧತೆಯಲ್ಲಿ ಏಕತೆಗೆ ಹೆಸರಾಗಿದ್ದ ದೇಶದಲ್ಲಿ, ಹಲವು ರಾಜಕೀಯ ಸ್ಥಿತ್ಯಂತರಗಳು ನಡೆದು ದೇಶದ ಎಲ್ಲಾ ಧರ್ಮಗಳ ಒಳಗೆ ರಾಜಕೀಯ ಸೇರಿಹೋಗಿಬಿಟ್ಟಿದೆ. ಧರ್ಮ ಮತ್ತು ರಾಜಕೀಯ ಇವೆರಡರಲ್ಲಿ ಒಂದರಿಂದ ಮತ್ತೊಂದನ್ನು ಬೇರ್ಪಡಿಸಲು ಎಂದೆಂದಿಗೂ ಸಾಧ್ಯವೇ ಇಲ್ಲಾ ಅನ್ನುವಷ್ಟು ಎರಡೂ ಬೆರೆತು ಹೋಗಿವೆ.
ರಾಜಕೀಯ ನಾಯಕರುಗಳ ಅಥವಾ ರಾಜಕೀಯ ಪಕ್ಷಗಳ ಅಸ್ಥಿತ್ವ ಕಾಪಾಡಿಕೊಳ್ಳಲು ಧರ್ಮದ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮತ್ತೊಂದೆಡೆ ಒಂದು ಧರ್ಮದ ನಿರ್ಧಿಷ್ಟ ಮತದಾರರನ್ನು ಸೆಳೆದುಕೊಳ್ಳಲು ಓಲೈಕೆ ರಾಜಕಾರಣ ತನ್ನ ಇತಿಮಿತಿಗಳನ್ನು ದಾಟಿಕೊಂಡು ತಡೆಯಲಾಗದಷ್ಟು ದೂರ ಹೊರಟು ಹೋಗಿದೆ. ರಾಜಕಾರಣದಲ್ಲಿ ಆಗುವ ತಪ್ಪುಒಪ್ಪುಗಳನ್ನು ಮುಚ್ಚಿ ಹಾಕಲು ಒಂದು ನಿರ್ಧಿಷ್ಟ ಧರ್ಮವನ್ನು ಗುರಾಣಿಯಾಗಿ ಬಳಸಿಕೊಂಡಿರುವ ಅನೇಕ ಉದಾಹರಣೆಗಳಿವೆ. ಹಾಗೆಯೇ ಧಾರ್ಮಿಕ ನಾಯಕರು ಅಥವಾ ಧಾರ್ಮಿಕ ಸಂಸ್ಥೆಗಳ ಅವ್ಯವಹಾರ ಅಥವಾ ಅನ್ಯಾಯಗಳನ್ನು ನಡೆದೇ ಇಲ್ಲ ಎನ್ನುವಂತೆ ಮುಚ್ಚಿ ಹಾಕಲು ರಾಜಕೀಯದ ಹೊದಿಕೆ ತುಂಬಾ ಹೆಚ್ಚಾಗಿಯೇ ಬಳಕೆ ಆಗುತ್ತಿದೆ. ಧಾರ್ಮಿಕ ನೇತಾರರು ಮಾಡುವ ಅಧರ್ಮದ ಕಾರ್ಯಗಳಿಗೆ ರಾಜಕೀಯ ಮುಖಂಡರುಗಳ ಅಭಯ ಎಷ್ಟೋ ಸಂದರ್ಭಗಳಲ್ಲಿ ಎದ್ದು ಕಾಣುತ್ತಿದ್ದರೂ ನೋಡಿಕೊಂಡು ಸುಮ್ಮನೆ ಇರಬೇಕಾದ ಅಸಹಾಯಕ ಪರಿಸ್ಥಿತಿ ಸಮುದಾಯಗಳನ್ನು ಕಾಡುತ್ತಿದೆ.
ನಮ್ಮ ದೇಶದಲ್ಲಿ ರಾಜಕೀಯದಿಂದ ಧರ್ಮ ಮತ್ತು ಧರ್ಮದಿಂದ ರಾಜಕೀಯ ಬೇರ್ಪಡಿಸದ ಹೊರತು ಧಾರ್ಮಿಕ ಸಾಮರಸ್ಯ, ಸಹಿಷ್ಣುತೆ, ಶಾಂತಿ, ನೆಮ್ಮದಿ ಇನ್ನೊಂದು ಮತ್ತೊಂದು ಯಾವುದೂ ಸಹ ನೆಲೆಗೊಳ್ಳುವುದು ಸಾಧ್ಯವಿಲ್ಲ. ಈಗಿರುವ ಪರಿಸ್ಥಿತಿಯಲ್ಲಿ ಎಷ್ಟೇ ಪ್ರಯತ್ನ ಮಾಡಿದರೂ ಸಹ ಧರ್ಮದ ಹೆಸರಿನಲ್ಲಿ ರಾಜಕೀಯ ನಾಯಕರು ಮಾಡುತ್ತಿರುವ ಅನ್ಯಾಯವನ್ನು ಹಾಗೂ ರಾಜಕೀಯ ನಾಯಕರ ಅಭಯದಿಂದ ಧಾರ್ಮಿಕ ನಾಯಕರು ನಡೆಸುತ್ತಿರುವ ಸಾಮಾಜಿಕ ಶೋಷಣೆಯನ್ನು ತಡೆಯಲು ಸಾಧ್ಯವೇ ಇಲ್ಲ. ಇವರಿಬ್ಬರ ನಡುವಿನ ಹೊಂದಾಣಿಕೆಯ ಕಾರಣದಿಂದ ನ್ಯಾಯಾಂಗ ವ್ಯವಸ್ಥೆಯೂ ಸಹ ಹಲ್ಲು ಕಿತ್ತ ಹಾವಿನಂತೆ ಆಗಿಹೋಗಿದೆ. ನ್ಯಾಯ ಎನ್ನುವುದು ಉಳ್ಳವರ ಪಾಲಾಗುತ್ತಿದೆ. ಎಷ್ಟೇ ನ್ಯಾಯ ಮಾರ್ಗದಲ್ಲಿ ಬದುಕುತ್ತಿದ್ದರೂ ಸಹ ಹಣವಿಲ್ಲದವನು ಅಪರಾಧಿ ಎಂದು ಬಿಂಬಿತವಾಗುತ್ತಿದ್ದಾನೆ. ಅದೇನೇ ಇರಲಿ, ಧಾರ್ಮಿಕ ಸಾಮರಸ್ಯದ ವಿಷಯ ಬಂದಾಗ ಕನಿಷ್ಠ ಪಕ್ಷ ನ್ಯಾಯಾಂಗವೂ ಸಹ ಪೂರ್ವಾಗ್ರಹ ಪೀಡಿತವಾಗದೆ ನ್ಯಾಯದಾನ ಮಾಡಿದರೆ ಸ್ವಲ್ಪ ಮಟ್ಟಿಗೆ ಸಾಮರಸ್ಯ ಮೂಡಿಸಲು ಸಾಧ್ಯ
ಬೇರೆ ಯಾವ ದೇಶದಲ್ಲಿಯೂ ಕಾಣದಷ್ಟು ಜಾತಿ ಆಧಾರಿತ ಅಥವಾ ಧರ್ಮ ಆಧಾರಿತ ಸಂಘರ್ಷಗಳು ನಮ್ಮ ದೇಶದಲ್ಲಿ ನೋಡಲು ಸಿಗುತ್ತವೆ. ಹಿಂದೂ ಸಂಪ್ರದಾಯದ ಜನರಲ್ಲಿ ಮೇಲ್ವರ್ಗ ಮತ್ತು ದಲಿತರ ನಡುವಿನ ವ್ಯತ್ಯಾಸಗಳು ಇಂದು ನಿನ್ನೆಯವಲ್ಲ. ಮುಸ್ಲಿಂ ಸಮುದಾಯದಲ್ಲಿ ಶಿಯಾ ಮತ್ತು ಸುನ್ನಿಗಳು ಒಬ್ಬರನ್ನು ಕಂಡರೆ ಒಬ್ಬರು ಕತ್ತಿ ಮಸೆಯುತ್ತಾರೆ. ಕ್ಯಾಥೋಲಿಕ್ ಕ್ರೈಸ್ತರನ್ನು ಕಂಡರೆ ಪ್ರೊಟೆಸ್ಟೆಂಟ್ ಕ್ರೈಸ್ತರಿಗೆ ಆಗುವುದಿಲ್ಲ. ಸಿಖ್ ಧರ್ಮದಲ್ಲಿ ಮೂಲ ಸಿಖ್ಖರ ಆಚರಣೆಗಳು ಹಜೂರಿ ಸಿಖ್ಖರಿಗೆ ಹಿಡಿಸುವುದಿಲ್ಲ. ಯಹೂದಿಗಳಲ್ಲೂ ಇಂತದ್ದೇ ಸಮಸ್ಯೆಗಳು ಇವೆ. ಈ ರೀತಿ ಒಂದು ಧರ್ಮದೊಳಗಿನ ಸಮುದಾಯಗಳಲ್ಲಿಯೇ ಸಾಕಷ್ಟು ಸಂಘರ್ಷಗಳು ಇರುವಾಗ ಇನ್ನು ಧರ್ಮ ಧರ್ಮಗಳ ನಡುವೆ ಸಂಘರ್ಷ ಇರದೆ ಇರುತ್ತದೆಯೇ? ಇದಕ್ಕೆಲ್ಲ ಕೊನೆ ಯಾವಾಗ ಎಂಬ ಪ್ರಶ್ನೆಗೆ ಒಂದೇ ಒಂದು ಉತ್ತರ ಎಂದರೆ ಮಾನವ ಧರ್ಮದ ಸ್ಥಾಪನೆ.
ಎಲ್ಲರೂ ಒಂದೇ ಎಂಬ ವಿಶ್ವಮಾನವ ಮತ್ತು ವಿಶ್ವಬಂಧುತ್ವದ ಸಂದೇಶಗಳನ್ನು ಸಾರುವ ಮಾನವ ಧರ್ಮ ಎಲ್ಲಾ ಕಡೆಯಲ್ಲಿಯೂ ನೆಲೆಗೊಳ್ಳಬೇಕು. ತಾನೇ ಮೇಲು ತನ್ನ ಧರ್ಮವೇ ಮೇಲು ಎನ್ನುವ ಭಾವನೆಗಳು ಮಾನವ ಧರ್ಮದಲ್ಲಿ ಸುಳಿಯುವುದಿಲ್ಲ. ಅಂದಮೇಲೆ ಸಂಘರ್ಷಗಳು ನಡೆಯಲು ಸಾಧ್ಯವೇ ಇಲ್ಲ. ಜಗತ್ತಿನ ಪ್ರತಿಯೊಬ್ಬ ಮನುಷ್ಯನು ಮತ್ತೊಬ್ಬರನ್ನು ಕಂಡರೆ ಪ್ರೀತಿಸುವ ಮತ್ತು ಉಳಿದವರನ್ನು ತನ್ನವರೆಂದು ಅಪ್ಪಿಕೊಳ್ಳುವ ವಾತಾವರಣ ನಿರ್ಮಾಣವಾಗಬೇಕು. ಹಾಗೆ ಆದರೆ ಮಾತ್ರ ಇಡೀ ಜಗತ್ತಿನಲ್ಲಿ ವಿಶ್ವಶಾಂತಿ ನೆಲೆಸುವುದು. ಸಾಮರಸ್ಯ ತಾನಾಗಿಯೇ ಹುಟ್ಟುವುದು. ಆದರೆ ಇದನ್ನೆಲ್ಲ ಆಗುವಂತೆ ಮಾಡಲು ಅಡ್ಡಿಯಾಗಿರುವ ಕಾರಣಗಳು ಮಾತ್ರ ನಮ್ಮ ಅಹಮ್ಮಿನ ಕೋಟೆಯೊಳಗೆ ಅಡಗಿ ಕುಳಿತಿವೆ. ಅವುಗಳನ್ನು ಹೊರಗೆಳೆದು ಸದೆ ಬಡಿದು ಕೊಂದರೆ ಜಗತ್ತಿನ ಎಲ್ಲಾ ಜನರಿಗೂ ನೆಮ್ಮದಿ.
ಧರ್ಮದ ವಿಷಯ ಬಂದಾಕ್ಷಣ ನೆನಪಾಗುವುದು ಮಾತ್ರ ಬಸವಣ್ಣನವರ ಈ ವಚನ:
ದಯವಿಲ್ಲದ ಧರ್ವವದಾವುದಯ್ಯ
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲಿಯೂ
ದಯವೇ ಧರ್ಮದ ಮೂಲವಯ್ಯ
ಕೂಡಲಸಂಗಮದೇವ ನಂತಲ್ಲದೊಲ್ಲನಯ್ಯಾ !!
ಹಾಗೆಯೇ ಪ್ರಪಂಚದ ವೈರುಧ್ಯಗಳನ್ನು ತುಂಬಾ ಮಾರ್ಮಿಕವಾಗಿ ಬಿಂಬಿಸುವ ಪುರಂದರದಾಸರ "ಮೂರು ಮುಳ್ಳು" ಪದಗಳ ಸಾಲುಗಳು ನಿಜವಾಗಿಯೂ ಅದೆಷ್ಟು ಅರ್ಥವನ್ನು ನೀಡುತ್ತವೆ ಎಂದರೆ ಆ ವೈರುಧ್ಯಗಳನ್ನು ಮೆಟ್ಟಿ ನಿಂತರೆ, ಹಾಗೆಯೇ ನನ್ನನ್ನು ಮೊದಲು ನಾನು ಸರಿ ಮಾಡಿಕೊಂಡರೆ ಎಲ್ಲವನ್ನೂ ಸರಿ ಮಾಡಲು ಸಾಧ್ಯ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ.
"ಬೇಯಲಿಲ್ಲದ ಅಕ್ಕಿಗೆ ಬಂದರು ಮೂವರು ನೆಂಟರು,
ಇಬ್ಬರು ಉಣ್ಣರು ಒಬ್ಬಗೆ ಹಸಿವೇ ಇಲ್ಲ !!
ಹಸಿವೆ ಇಲ್ಲದ ನೆಂಟಗೆ ಕೊಟ್ಟರು ಮೂರು ತೊಣಪೆಗಳು,
ಎರಡು ತಾಕದು ಒಂದು ತಾಕಲೇ ಇಲ್ಲ !!
ತಾಕಲಿಲ್ಲದ ತೊಣಪೆಯ ತಾಕಿಸಿ ಸದ್ಗತಿಯ ನೀಯಬೇಕು ಪುರಂದರ ವಿಠ್ಠಲ ನೀನು !!"
-ಪುರಂದರದಾಸರು
ಮತ್ತೊಂದು ಮನಮಿಡಿಯುವ ವಿಚಾರಗಳನ್ನು ಅನಾವರಗೊಳಿಸಿದ ಅಂಕಣವನ್ನು ಕರುಣಿಸಿದ ಜಗದ್ಗುರುಗಳಿಗೆ ಭಕ್ತಿಪೂರ್ವಕ ನಮಸ್ಕಾರಗಳು. ನನ್ನ ವೈಯಕ್ತಿಕ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸಿರುವ ನನ್ನ ವಿದ್ಯಾ ಗುರುಗಳಾದ ಶ್ರೀ ವೆಂಕಟೇಶ್ ಶೆಟ್ಟಿ ಸರ್ ಅವರಿಗೂ ಗೌರವ ಶರಣಾರ್ಥಿಗಳು.
"ALWAYS AIM AT COMPLETE HARMONY OF THOUGHT AND WORD AND DEED. ALWAYS AIM AT PURIFYING YOUR THOUGHTS AND EVERYTHING WILL BE WELL."
-MAHATMA GANDHI
Prasanna U
Sirigere