N-2601 
  24-08-2024 08:23 PM   
ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!
ಈ ಬಾರಿಯ ಶ್ರೀಗಳ ಅಂಕಣ "ಮೇಟಿ ವಿದ್ಯಾ ಸಂಪನ್ನರಿಗೆ ಮಾಡುತಿರುವ ಮರೆ ಮೋಸ" ರೈತ ಜನಾಂಗದ ಪರವಾಗಿ ಇರುವ ಗುರುಗಳ ಅಂತಃಕರಣದ ಅನಾವರಣವಾಗಿದೆ.
ಪ್ರತಿ ವರ್ಷವೂ ಆಯಾ ವರ್ಷ ಸರ್ಕಾರದ ಮೇಲೆ ಇರುವ ಬೆಟ್ಟದಷ್ಟು ನಿರೀಕ್ಷೆಗಳು ಬಜೆಟ್ನಲ್ಲಿ ಸಾಕಾರವಾಗುವವೆಂಬ ಕೌತುಕದ ಖಜಾನೆ ಎಂದರೆ ತಪ್ಪಾಗಲಿಕ್ಕಿಲ್ಲ.
ಆಡಳಿತ ಪಕ್ಷಕ್ಕೆ ಪ್ರತಿವರ್ಷವೂ ಆಯವ್ಯಯ ಮಂಡನೆಯ ಸಮಯ ಎಂದರೆ ಕತ್ತಿಯ ಮೇಲಿನ ನಡಿಗೆಯೆ ಸರಿ. ಯಾರನ್ನೂ ತೃಪ್ತಿ ಪಡಿಸಲು ಸಾಧ್ಯವಿಲ್ಲ ಎಷ್ಟು ಕೊಟ್ಟರೂ ಇನ್ನಷ್ಟು ಬೇಕು. ಗುರುಗಳು ತಿಳಿಸಿದಂತೆ ಆಡಳಿತ ಪಕ್ಷದವರಿಗೆ ಎಲ್ಲವೂ ಸರಿ; ವಿರೋಧ ಪಕ್ಷದವರಿಗೆ ಎಲ್ಲವೂ ತಪ್ಪು. ಮೈತ್ರಿ ಸರ್ಕಾರವಿದ್ದರಂತೂ ಮಿತ್ರ ಪಕ್ಷಗಳ ಆದ್ಯತೆಗಳಿಗೆ ಮಣೆ ಹಾಕಲೇಬೇಕು ಅವರು ಕೇಳಿದಷ್ಟು ಕೊಡಲೇಬೇಕು. ಇದು ಸರ್ಕಾರ ಉಳಿಯಲು ಅನಿವಾರ್ಯವೂ ಹೌದು.
ಸಂಘಟಿತ ವರ್ಗಗಳು ತಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ಮುಟ್ಟಿಸಲು ಶಕ್ತರು. ಆದರೆ ರೈತಾಪಿ ವರ್ಗವು ಸಂಪೂರ್ಣವಾಗಿ ಸರ್ಕಾರದ ದಯೆ ಅನುಕಂಪದ ಮೇಲೆ ಅವಲಂಬಿತವಾಗಿದೆ.
ಈಗಿನ ಸರ್ಕಾರವು ಹಿಂದಿನ ಆಡಳಿತ ಅವಧಿಯಲ್ಲಿ ಮಂಡನೆಮಾಡಿ ಸಂಸತ್ತಿನ ಒಪ್ಪಿಗೆ ಪಡೆದಿದ್ದ ಕೃಷಿ ಸಂಶೋಧನ ಬಿಲ್ಲ್ ನ್ನು ಜಾರಿಮಾಡಲು ಸಾಧ್ಯವಾಗಲಿಲ್ಲ ಅದನ್ನು ಹಾದಿ ತಪ್ಪಿಸಲು ರಾಜಕೀಯ ಪಟ್ಟಭದ್ರ ಹಿತಾಸಕ್ತಿಗಳು ಯಶಸ್ವಿಯಾಗಿರುವುದು ರೈತರ ದುರ್ದೈವ.
ಈ ಖಾಯಿದೆಯಲ್ಲಿ ಇದ್ದ ಪ್ರಮುಖ ವಿಷಯಗಳು ಇಂತಿವೆ.
ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಅನುಕೂಲ) ಕಾಯಿದೆ, 2020
ಈ ಮಸೂದೆಯು ರೈತರು ಮತ್ತು ವ್ಯಾಪಾರಿಗಳಿಗೆ ರಾಜ್ಯಗಳ ಎಪಿಎಂಸಿಗಳ ಅಡಿಯಲ್ಲಿ ನೋಂದಾಯಿತ "ಮಂಡಿಗಳ" ಹೊರಗೆ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಖರೀದಿಸಲು ಅನುಮತಿಸುತ್ತದೆ. ಇದು ನಿಗದಿತ ರೈತರ ಉತ್ಪನ್ನಗಳ ಎಲೆಕ್ಟ್ರಾನಿಕ್ ವ್ಯಾಪಾರ ಮತ್ತು ಇ-ಕಾಮರ್ಸ್‌ಗೆ ಸಹ ಅನುಮತಿ ನೀಡುತ್ತದೆ ಮತ್ತು "ಹೊರಗಿನ ವ್ಯಾಪಾರ ಪ್ರದೇಶಗಳಲ್ಲಿ" ವ್ಯಾಪಾರಕ್ಕಾಗಿ ರೈತರು, ವ್ಯಾಪಾರಿಗಳು ಮತ್ತು ಎಲೆಕ್ಟ್ರಾನಿಕ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳ ಮೇಲೆ ಶುಲ್ಕವನ್ನು ವಿಧಿಸುವುದನ್ನು ರಾಜ್ಯ ಸರ್ಕಾರಗಳನ್ನು ನಿಷೇಧಿಸುತ್ತದೆ. ಈ ಮಸೂದೆಯ ಗುರಿಯು ರಾಜ್ಯಗಳ ಒಳಗೆ ಮತ್ತು ರಾಜ್ಯಗಳ ನಡುವೆ ರೈತರ ಉತ್ಪನ್ನಗಳ ಅಡೆತಡೆ-ಮುಕ್ತ ವ್ಯಾಪಾರವನ್ನು ಉತ್ತೇಜಿಸುವುದು.
ಕೃಷಿ ಮಸೂದೆ 2020
ಈ ಮಸೂದೆಯು ರೈತರ ಉತ್ಪನ್ನಗಳಿಗೆ ಹೆಚ್ಚು ಉದಾರೀಕೃತ ಮಾರುಕಟ್ಟೆಯ ಮೂಲಕ ಅವರ ಆದಾಯವನ್ನು ಹೆಚ್ಚಿಸುವ ಮೂಲಕ ಅವರ ಜೀವನೋಪಾಯವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯಿದೆ, 2020
ಈ ಮಸೂದೆಯು ರೈತರನ್ನು ರಕ್ಷಿಸುವ ಮತ್ತು ಅಧಿಕಾರ ನೀಡುವ ಕೃಷಿ ಒಪ್ಪಂದಗಳಿಗೆ ರಾಷ್ಟ್ರೀಯ ಚೌಕಟ್ಟನ್ನು ರಚಿಸುತ್ತದೆ. ಕೃಷಿ-ವ್ಯಾಪಾರ ಸಂಸ್ಥೆಗಳು, ಪ್ರೊಸೆಸರ್‌ಗಳು, ಸಗಟು ವ್ಯಾಪಾರಿಗಳು, ರಫ್ತುದಾರರು ಅಥವಾ ದೊಡ್ಡ ಚಿಲ್ಲರೆ ವ್ಯಾಪಾರಿಗಳೊಂದಿಗೆ ಭವಿಷ್ಯದ ಕೃಷಿ ಉತ್ಪನ್ನಗಳನ್ನು ಪರಸ್ಪರ ಒಪ್ಪಿದ ಬೆಲೆಗೆ ಮಾರಾಟ ಮಾಡಲು ಇದು ರೈತರಿಗೆ ಅನುವು ಮಾಡಿಕೊಡುತ್ತದೆ.
ಈ ಖಾಯಿದೆಯಲ್ಲಿ ರೈತರಿಗೆ ತೊಂದರೆಯಾಗುವ ಯಾವ ಅಂಶಗಳಿದ್ದವು ಎಂದು ಬಲ್ಲವರು ಹೇಳಬಲ್ಲರು. ಮಹಾಗುರುಗಳು ಈ ಖಾಯಿದೆಯ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಬೇಕು ಅದರಲ್ಲಿರುವ ನೂನ್ಯತೆಗಳ ಬಗ್ಗೆ ಸಂಭಂದ ಪಟ್ಟವರ ಕಿವಿಹಿಂಡಿ ಮರುಜಾರಿಗೆ ಪ್ರಯತ್ನ ಪಡಬೇಕು.
ಈ ಖಾಯಿದೆಗಳನ್ನು ಜಾರಿಗೆ ತರಲು ಎದುರಿಸಿದ ಪ್ರತಿರೋಧವನ್ನು ಮನಗಂಡ ಸರ್ಕಾರ ಯಾವುದೇ ಕ್ರಾಂತಿಕಾರಕ ರೈತರ ಯೋಜನೆಗಳನ್ನು ಜಾರಿಗೆ ತರಲು ಮೀನಮೇಷ ಎಣಿಸುತ್ತಿದೆ.
ಗುರುಗಳು ತಿಳಿಸಿದಂತೆ ಬೆಳೆ ವಿಮಾ ಪದ್ಧತಿಯಲ್ಲಿ ಸಾಕಷ್ಟು ನೂನ್ಯತೆಗಳು ಇರುವುದು ಸ್ಪಷ್ಟವಾಗಿದೆ. ತೆರೆದ ಮನಸಿನಿಂದ ಸರ್ಕಾರ ಕಾಲಕಾಲಕ್ಕೆ ಕಾಯ್ದೆಗೆ ತಿದ್ದುಪಡಿ ತಂದು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸುವುದು ಅವಶ್ಯಕ. ಸರ್ಕಾರಿ ಯೋಜನೆ ಹೇಗಿರಬೇಕಂದರೆ ನಾಲ್ಕುಜನ ಅಪಾತ್ರರಿಗೆ ಅನುಕೂಲವಾದರೂ ಚಿಂತೆ ಇಲ್ಲ ಒಬ್ಬ ಪಾತ್ರನಿಗೆ ಯೋಜನೆಯ ಲಾಭ ಯವುದೇ ಕಾರಣಕ್ಕೂ ತಪ್ಪಬಾರದು ಅಲ್ಲವೇ?
ಇಂತಹ ಸರ್ಕಾರಿ ಧೋರಣೆಗಳನ್ನು ಖಂಡಿಸಿ ರೈತರ ಪರವಾಗಿ ಅಪಾರವಾದ ಕಾಳಜಿಯನ್ನು ಅಂತಃಕರಣ ವನ್ನು ವ್ಯಕ್ತಪಡಿಸುತ್ತಿರುವ ಮಹಾನ್ ಕ್ರಾಂತಿಕಾರಿ ಗುರುಗಳಿಗೆ ಪ್ರಣಾಮಗಳು.
ನಾರಾಯಣ ದೊಂತಿ
ಚಿತ್ರದುರ್ಗ