N-2458 
  07-08-2024 01:47 PM   
ತಾಯಿಯ ಮಡಿಲನ್ನು ಸೇರಿದ ವೀರ ಯೋಧ
ಜಗದ್ಗುರುಗಳವರು ಲೇಖನೀಕರಿಸಿದ, 2018 ರಲ್ಲಿ ಪ್ರಕಟವಾಗಿದ್ದ "ತಾಯಿಯ ಮಡಿಲನ್ನು ಸೇರಿದ ವೀರ ಯೋಧ" ಅಂಕಣ ಕುರಿತು ನನ್ನ ಪ್ರತಿಕ್ರಿಯೆ:
ಇಡೀ ಅಂಕಣ ಓದುವಾಗ ನಮ್ಮ ದೇಶವನ್ನು ಹಗಲು-ರಾತ್ರಿ ಎನ್ನದೆ ಕಾಯುತ್ತಿರುವ ಸೈನಿಕರ ಬಗ್ಗೆ ಮತ್ತಷ್ಟು ಗೌರವ ಮೂಡುತ್ತದೆ. ವಿಶೇಷವಾಗಿ ನಮ್ಮವರೇ ಆದ ಕರ್ನಲ್ ರವೀಂದ್ರನಾಥ್ ಅವರ ಬಗ್ಗೆ ಹೆಮ್ಮೆ ಅನ್ನಿಸುತ್ತದೆ. ಸೈನ್ಯಕ್ಕೆ ಸೇರುವುದು ಹಲವರಿಗೆ ಕನಸಾದರೆ ಮತ್ತೆ ಕೆಲವರಿಗೆ ಅವಕಾಶ ಸಿಕ್ಕರೂ ಹಿಂಜರಿತ. ಸೈನ್ಯ ಸೇರುವ ಕನಸು ನನಸಾದ ಮೇಲೆ ದೇಶವನ್ನು ಕಾಯಲು, ದೇಶದ ನಾಗರಿಕರ ರಕ್ಷಣೆ ಮಾಡಲು ಅನೇಕರಿಗೆ ಎಲ್ಲಿಲ್ಲದ ಉತ್ಸಾಹ. ನನಗೆ ಬುದ್ಧಿ ಬಂದಾಗಿನಿಂದ ಅನೇಕ ಸೈನಿಕರ ಸತ್ಯವಾದ ವೀರಮರಣದ ಸುದ್ಧಿಗಳನ್ನು ಪತ್ರಿಕೆಗಳಲ್ಲಿ ಓದಿ, ದೂರದರ್ಶನದಲ್ಲಿ ನೋಡಿ ಅರಿತುಕೊಂಡಿದ್ದೇನೆ. ತನಗೆ ಸಾವು ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಬಂದು ಅಪ್ಪಿಕೊಳ್ಳುತ್ತದೆ ಎಂಬ ವಿಷಯ ಗೊತ್ತಿದ್ದರೂ ಮನಸ್ಸಿನಲ್ಲಿ ಸಣ್ಣ ಅಂಜಿಕೆಯೂ ಇಲ್ಲದೆ, ಭಯವೂ ಇಲ್ಲದೇ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುವ ಸೈನಿಕರೇ ನಿಜವಾದ ದೇವರುಗಳು. ಬಹುಶಃ ಇದೇ ಕಾರಣಕ್ಕಾಗಿ ಮಾಜಿ ಪ್ರಧಾನಿ ದಿ. ಲಾಲ್ ಬಹಾದ್ದೂರ್ ಶಾಸ್ತ್ರಿಯವರು "ಜೈ ಜವಾನ್, ಜೈ ಕಿಸಾನ್" ಎಂಬ ಘೋಷಣೆಯ ಮೂಲಕ ಕೆಚ್ಚೆದೆಯ ಸೈನಿಕರಿಗೆ ಮತ್ತು ಶ್ರಮಿಕ ರೈತ ಸಮುದಾಯಕ್ಕೆ ಗೌರವ ಸಮರ್ಪಣೆ ಮಾಡಿದ್ದು. ಏನೇ ಆದರೂ ಸೈನಿಕರ ಋಣವನ್ನು ಮಾತ್ರ ಯಾವ ಜನ್ಮದಲ್ಲೂ ಯಾರಿಂದಲೂ ತೀರಿಸಲು ಸಾಧ್ಯವಿಲ್ಲ.
ಕಾರ್ಗಿಲ್ ಯುದ್ಧವು ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರತಿಷ್ಠೆಯ ಘಟನೆಯಾಗಿ ಮಾರ್ಪಾಡಾಗಿದೆ. ಹಾಗಾಗಿಯೇ ತುಂಬಾ ಸಂಭ್ರಮ ಮತ್ತು ಗೌರವದಿಂದ ಕಾರ್ಗಿಲ್ ವಿಜಯೋತ್ಸವವನ್ನು ದೇಶದಾದ್ಯಂತ ಆಚರಣೆ ಮಾಡಲಾಗುತ್ತಿದೆ. ದೇಶದ ಗಡಿಯನ್ನು ದಾಟಿ ನಮ್ಮ ಭಾಗಗಳನ್ನು ಆಕ್ರಮಿಸಿಕೊಳ್ಳಲು ಪ್ರಯತ್ನ ಮಾಡಿದ ಪಾಕಿಸ್ತಾನಿ ಸೈನಿಕರ ಹೆಡೆಮುರಿ ಕಟ್ಟಿದ ಅತ್ಯಂತ ದುಸ್ಸಾಹಸದ ಸೆಣಸಾಟ ಈ ಯುದ್ಧ ಎಂದರೆ ತಪ್ಪಾಗಲಾರದು. ಅತ್ಯಂತ ಕಡಿದಾದ ಬೆಟ್ಟ ಪ್ರದೇಶಗಳು ಮತ್ತು 24 ಗಂಟೆಯೂ ಮೈ ಕೊರೆಯುವ ಚಳಿಯ ನಡುವೆ ಶತ್ರುಗಳ ವಿರುದ್ಧ ಹೋರಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಮ್ಮ ಸೈನಿಕರದ್ದು. ಇಂತಹ ವಿಷಮ ಪರಿಸ್ಥಿತಿಯಲ್ಲಿ ಶತ್ರುರಾಷ್ಟ್ರದ ಜವಾನರನ್ನು ಹತ್ಯೆ ಮಾಡಿ ನಮ್ಮ ನೆಲದ ಘನತೆಯನ್ನು ಕಾಪಾಡಿದ ನಮ್ಮೆಲ್ಲಾ ಸೈನಿಕರಿಗೆ ಒಂದು ದೊಡ್ಡ ಸೆಲ್ಯೂಟ್.
ಕಾರ್ಗಿಲ್ ಯುದ್ಧದಲ್ಲಿ ಕರ್ನಲ್ ರವೀಂದ್ರನಾಥ್ ಅವರ ಪಾತ್ರ ತುಂಬಾ ಮಹತ್ತರವಾದುದು. ಒಂದು ರೆಜಿಮೆಂಟನ್ನು, ಟ್ರೂಪನ್ನು ಯಶಸ್ವಿಯಾಗಿ ಮುನ್ನಡೆಸಿದ ಗೌರವ ಅವರಿಗೆ ಸಲ್ಲುತ್ತದೆ. ಸೈನ್ಯದಿಂದ ನಿವೃತ್ತಿ ಹೊಂದಿದ ಬಳಿಕ ಇನ್ನಷ್ಟು ಕ್ರಿಯಾಶೀಲರಾಗಿ ಉದ್ದಿಮೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಕರ್ನಲ್ ರವೀಂದ್ರನಾಥ್ ಅವರ ಮಹತ್ವಾಕಾಂಕ್ಷೆ ಎಂತದ್ದು ಎಂದು ಈ ಅಂಕಣದ ಮೂಲಕ ನನಗೆ ಮತ್ತಷ್ಟು ವಿವರವಾಗಿ ಅರ್ಥವಾಯಿತು. ಕರ್ನಲ್ ಅವರನ್ನು ವೈಯಕ್ತಿಕವಾಗಿ ಎರಡು ಬಾರಿ ಭೇಟಿಯಾಗಿದ್ದ ನನಗೆ ಅವರ ಬಗ್ಗೆ ಇಷ್ಟೊಂದು ಮಾಹಿತಿ ಸಿಕ್ಕಿದ್ದು ಈ ಅಂಕಣವು ಆರು ವರ್ಷಗಳ ಹಿಂದೆ ಪ್ರಕಟಣೆ ಆದಾಗ. ಅವರ ಕುಟುಂಬದ ಹರ್ಷ ಮಾಗೋಡು ಹಾಗೂ ನಾನು ಇಬ್ಬರೂ ನಮ್ಮ ಕಾಲೇಜು ದಿನಗಳಿಂದಲೂ ಪರಿಚಿತರು. ಅವರ ಮೂಲಕವೇ ಕರ್ನಲ್ ಭೇಟಿ ಸಾಧ್ಯವಾಯಿತು. ಮೊದಲು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಿಟೀಲು ಚೌಡಯ್ಯ ಸಭಾಭವನದಲ್ಲಿ ಅವರನ್ನು ಭೇಟಿಯಾಗಿದ್ದೆ. ಆಗ ಹರ್ಷ ಅವರು ನನಗೆ ಕರ್ನಲ್ ಅವರನ್ನು ಪರಿಚಯ ಮಾಡಿಸಿದ್ದು. ಅಂತವರನ್ನು ಕಂಡು ಎರಡೆರಡು ಬಾರಿ ಮಾತನಾಡಿಸಿದ ಸದಾವಕಾಶ ನನ್ನ ಪಾಲಿಗೆ ಸಿಕ್ಕಿತ್ತು. ಕರ್ನಲ್ ರವೀಂದ್ರನಾಥ್ ಅವರ ಬಗ್ಗೆ ಓದುತ್ತಾ, ತುಂಬಾ ಹೆಮ್ಮೆ ಅನ್ನಿಸುತ್ತಾ ಅವರ ನಿರ್ವಹಣಾ ಸಾಮರ್ಥ್ಯವನ್ನು ನಮ್ಮ ಜೀವನದಲ್ಲಿ ಪಾಲನೆ ಮಾಡಬೇಕು ಎಂದು ನನಗೆ ಭಾಸವಾಗುತ್ತಿದೆ.
ಸೈನಿಕರು ಮಿನುಗುವ ನಕ್ಷತ್ರಗಳು ಇದ್ದಂತೆ. ಅವರು ಸದಾ ಮಿನುಗುತ್ತಾ ಬ್ರಹ್ಮಾಂಡವನ್ನು ಬೆಳಗುತ್ತಿರಲಿ ಎಂದು ಆಶಿಸುತ್ತೇನೆ.
ದೇಶವನ್ನು ರಕ್ಷಣೆ ಮಾಡುತ್ತಿರುವ ಸೈನಿಕರ ಬಗ್ಗೆ, ಕರ್ನಲ್ ರವೀಂದ್ರನಾಥ್ ಅವರು ದೇಶಕ್ಕಾಗಿ ಮಾಡಿದ ಅದ್ವಿತೀಯ ಕೆಲಸವನ್ನು ಕುರಿತು, ಅವರ ತಂದೆತಾಯಿಯ ತ್ಯಾಗ ಗುಣ, ಕರ್ನಲ್ ಮತ್ತು ಅವರ ಕುಟುಂಬದವರ ಜೀವನದ ಬಗ್ಗೆ ಮನಸ್ಸು ತುಂಬುವ ಮಾಹಿತಿಯನ್ನು ಒಳಗೊಂಡ ಈ ಅಂಕಣವನ್ನು ಕರುಣಿಸಿದ ಜಗದ್ಗುರುಗಳಿಗೆ ಶರಣು ಶರಣಾರ್ಥಿಗಳು. ಪ್ರತಿಕ್ರಿಯೆ ಬರೆಯಲು ಪ್ರೇರಣೆ ನೀಡಿ ಅದಕ್ಕಾಗಿ ವೇದಿಕೆ ಕಲ್ಪಿಸಿರುವ ನನ್ನ ವಿದ್ಯಾ ಗುರುಗಳಾದ ಶ್ರೀ ಆರ್. ವೆಂಕಟೇಶ್ ಶೆಟ್ಟಿ ಸರ್ ಅವರಿಗೂ ಶರಣಾರ್ಥಿಗಳು.
ಸಿರಿಗೆರೆಯಲ್ಲಿ ಓದು ಮುಗಿದ ಮೇಲೆ ಭಾರತೀಯ ಸೈನ್ಯ ಸೇರಿ, ದೇಶಕ್ಕಾಗಿ ತಮ್ಮ ಪ್ರಾಣ ಸಮರ್ಪಣೆ ಮಾಡಿದ ನನ್ನ ಇಬ್ಬರು ಸಹಪಾಠಿಗಳಾದ ಕಡೂರು ತಾಲ್ಲೂಕಿನ ಶ್ರೀ ಕೆ.ಎಸ್. ಶೇಷಣ್ಣ ಮತ್ತು ರಾಣೆಬೆನ್ನೂರು ತಾಲ್ಲೂಕಿನ ಶ್ರೀ ಕರಿಯಪ್ಪ ಹನುಮಂತಪ್ಪ ಶಿರಗುಂಬಿ ಇಬ್ಬರಿಗೂ ನನ್ನ ಗೌರವ ನಮನಗಳನ್ನು ಈ ಮೂಲಕ ಸಮರ್ಪಣೆ ಮಾಡುತ್ತೇನೆ.
ಜೈ ಜವಾನ್, ಜೈ ಕಿಸಾನ್ !! 🙏
ಪ್ರಸನ್ನ ಯು, ಸನ್ನದು ಆರ್ಥಿಕ ಗುರಿಯೋಜಕರು