N-2594 
  05-08-2024 07:00 AM   
ಮಗುವಿನ ಮೈ ಚಿವುಟಿ ಜೋಗುಳ ಹಾಡುವ ಜನರು
ಗುರು ದೇವೋಭವ!
ಸುಮಾರು 1979/ 80 ನೇ ಇಸ್ವಿ. ಆಗ ಸಿರಿಗೆರೆ ಮಠದ ಆಸ್ತಿ ಕೇವಲ ಲಕ್ಷ ರೂಗಳಲ್ಲಿ ಇತ್ತು. ಆದರೆ ಈಗ ಮಠದ ಆಸ್ತಿಯ ಮೌಲ್ಯ ಮಾರುಕಟ್ಟೆ ಬೆಲೆಯಲ್ಲಿ ಹೇಳುವುದಾದರೆ ಸಾವಿರಾರು ಕೋಟಿ. ಕೇವಲ 40 ವರ್ಷಗಳಲ್ಲಿ ಇಷ್ಟೊಂದು ಮೊತ್ತದ ಸಂಪತ್ತು ವೃದ್ಧಿಯಾಗಲು ಮಠದ ಜವಾಬ್ದಾರಿಯನ್ನ ಹೊತ್ತುಕೊಂಡವರು ನಿಷ್ಠೆ, ನಿಸ್ವಾರ್ಥ ಮತ್ತು ಪ್ರಾಮಾಣಿಕತೆ ಹಾಗೂ ಬುದ್ಧಿವಂತಿಕೆಯಿಂದ ನಿರ್ವಹಿಸಿದರೆ ಮಾತ್ರ ಸಾಧ್ಯ ಎನ್ನುವುದು ನಿತ್ಯ ಸತ್ಯ.
ಮಠದ ಬೆಳವಣಿಗೆಯ ಜೊತೆ ಜೊತೆಗೆ ಅಲ್ಲಿ ನಡೆಯುವ ತ್ರಿವಿಧ ದಾಸೋಹಗಳಿಗೆ ಯಾವುದೇ ಧಕ್ಕೆ ಬರದಂತೆ ನೋಡಿಕೊಂಡು ಭಕ್ತರ ಅಶೋತ್ತರಗಳಿಗೆ ಸ್ಪಂದಿಸಿ ಮಠವನ್ನ ಮುನ್ನಡೆಸಿಕೊಂಡು ಹೋಗುವುದಿದೆಯಲ್ಲ ಅದು ಅಂತಿಂಥವರಿಂದ ಸಾಧ್ಯವಿಲ್ಲ. ಅಂತಹ ಅಸಾಧ್ಯವಾದ, ಅದ್ವಿತೀಯ ಸಾಧನೆಯನ್ನು ಮಾಡಿರುವ ಮತ್ತು ಅದನ್ನು ಮುಂದುವರಿಸಿಕೊಂಡು ಹೋಗುತ್ತಿರುವ ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು. ಇದು ನಿಜಕ್ಕೂ ಹೆಮ್ಮೆಪಡುವಂತಹ ವಿಷಯ.
ಕಳೆದ ನಾಲ್ಕು ದಶಕಗಳಿಂದ ಮಠಕ್ಕೆ ಯಾವುದೇ ಕಪ್ಪು ಚುಕ್ಕೆ ಬರದಂತೆ ನಡೆಸಿಕೊಂಡು ಮಠದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿರುವ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ಮೇಲೆ ಈಗ ಕೆಲ ಸ್ವಯಂಘೋಷಿತ ಸಮಾಜ ಮುಖಂಡರುಗಳು ಅಪಸ್ವರ ಎತ್ತಿರುವುದು ಕೇವಲ ಸ್ವಹಿತಾಸಕ್ತಿಗಾಗಿ.
ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು, ಪೇಜಾವರ ಶ್ರೀಗಳು, ಬಾಲಗಂಗಾಧರನಾಥ ಶ್ರೀಗಳು ಮುಂತಾದವರು ತಮ್ಮ ಕೊನೆಯುಸಿರುವವರೆಗೂ ಪೀಠದಲ್ಲಿಯೇ ಇದ್ದರಲ್ವಾ ? ಅವರಗಳ ಬಗ್ಗೆ ಯಾರಾದರೂ ಅಪಸ್ವರ ಎತ್ತಿದ್ದಾರಾ ? ಸಿರಿಗೆರೆ ಮಠವನ್ನು ಪ್ರಪಂಚದ ಎತ್ತರಕ್ಕೆ ಒಯ್ದಿರುವ ಡಾ. ಶಿವಮೂರ್ತಿ ಶಿವಾಚಾರ್ಯ ಗುರುಗಳ ಬಗ್ಗೆ ಯಾಕೆ ಈ ಅಸಹನೆ ?
ಇಸ್ವಿ 2012 ರಲ್ಲಿ ಗುರುಗಳು ಉತ್ತರಾಧಿಕಾರಿಯನ್ನು ನೇಮಕ ಮಾಡಲು ಮುಂದಾದಾಗ, ಮಠದ ಅಧಿಕಾರಿಯೊಬ್ಬ ತಾನೆ ಮುಂದಿನ ಪೀಠಾಧಿಪತಿ ಅಂತ ಕುತಂತ್ರ ಮಾಡಿದ ಪರಿಣಾಮ, ಆಯ್ಕೆಗೆ ತಡೆ ನೀಡಿದ್ದು ಸಮಾಜದ ಸ್ವಯಂ ಘೋಷಿತ ಮುಖಂಡರುಗಳಿಗೆ ತಿಳಿದಿಲ್ಲವಾ ?
ಸಿದ್ದಯ್ಯನೆಂಬ ಕುತಂತ್ರಿ, ಕಾವಿ ವೇಷ ತೊಡಲು ಮುಂಚೂಣಿಯಲ್ಲಿದ್ದ ವ್ಯಾಪಾರಿಗೆ ಸೌಮ್ಯ, ಸುಸಂಸ್ಕೃತ, ಸಜ್ಜನ, ವಿವಾದ ರಹಿತ, ಹಗರಣ ರಹಿತ ಮಠವನ್ನು ಡಾಕ್ಟರ್ ಗುರುಗಳು ಧಾರೆ ಎರೆಯಲು ಸಾಧ್ಯವೇ ?
ಒಮ್ಮೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಮಾಜದ ... ಖಂಡಿತ ಅಲ್ಲ... ಸಮಾಜದಿಂದ ರಾಜಕೀಯ ಪದವಿ ಹೊಂದಿದ ಅನೇಕರು ಗುರುಗಳೊಂದಿಗೆ ಕೆಲವು ವಿಚಾರಗಳನ್ನು ಚರ್ಚಿಸಿದಾಗ, ಗುರುವರ್ಯರು ನಮ್ಮಗಳ ಮಧ್ಯೆ ಚರ್ಚೆ ಬೇಡ ಹೊರಗೆ ಮಠದ ಸಾವಿರಾರು ಭಕ್ತರಿದ್ದಾರೆ. ಅವರೆದುರು ವಿಚಾರವನ್ನು ಪ್ರಸ್ತಾಪಿಸಿ ಎಂದು ಹೇಳಿದಾಗ ಮಠದ ಭಕ್ತರ ಮುಂದೆ ಯಾಕೆ ಪ್ರಸ್ತಾಪಿಸಲಿಲ್ಲ ಭಯವೇನು ?
ಖಂಡಿತ ಸಮಾಜದಲ್ಲಿ ಹುಟ್ಟಿದ ನವಜಾತ ಶಿಶುವು ಕೂಡ ಮಠದ ಭಕ್ತನೇ ಆಗಿರುತ್ತಾನಲ್ಲವೇ ? ಕೇವಲ ಮಠದಿಂದ ಸಮಾಜದಿಂದ ಪಡೆದ ಕೆಲದಿನಗಳ ಅಧಿಕಾರವುಳ್ಳ ನೀವೇ ಮಠದ ಭಕ್ತರೇ?
ಅದೊಂದು ದಿನ ಸೋಮವಾರ ರಾತ್ರಿ 8:00 ಸಮಯ. ನ್ಯಾಯ ಪೀಠವನ್ನು ಮುಗಿಸಿದ ಹೊತ್ತು. ದೈವಿ ಸ್ವರೂಪಿ ಶ್ರೀಗಳವರನ್ನು ಕ್ಷಮೆ ಇರಲಿ ನಾನೊಂದು ಪ್ರಶ್ನೆ ಕೇಳಿದೆ. ಮುಂಜಾನೆಯಿಂದ ಇಷ್ಟು ಹೊತ್ತು ಈ ವಯಸ್ಸಿನಲ್ಲಿ ಅತ್ಯಂತ ತಾಳ್ಮೆಯಿಂದ ವಿವರಣಾತ್ಮಕವಾಗಿ ಸಹನೆಯಿಂದ 10 ತಾಸುಗಳ ಕಾಲ ನಿರಂತರವಾಗಿ ಆಲಿಸಲು ಹೇಗೆ ಸಾಧ್ಯ ಎಂದು ಕೇಳಿದಾಗ ಶ್ರೀಗಳಿಂದ ಬಂದ ಉತ್ತರವನ್ನು ಕೇಳಿ ಸ್ತಬ್ಧನಾದೆ. ಅದೇನು ಗೊತ್ತಾ ?
*“ನೋಡಪ್ಪಾ! ಸಮಾಜದ ಭಕ್ತರು ನಮ್ಮ ಮೇಲೆ ಇಟ್ಟಿರುವ ಭಕ್ತಿ, ನಿಷ್ಠೆ, ಅಭಿಮಾನ, ಪ್ರೀತಿ ನಮ್ಮನ್ನು ಈ ರೀತಿಯಾಗಿ ನ್ಯಾಯಪೀಠದಲ್ಲಿ ಕೂರುವಂತೆ ಮಾಡಿದೆ".*
ಗುರುಗಳ ಈ ಮಾತಿಗೆ ಸಮಾಜದ ಭಕ್ತರು ಎಂತಹ ಸೇವೆಯನ್ನು ಮಾಡಿದರೂ ಸಾಲದು.
ಶ್ರೀಧರ್
ದೊಡ್ಡಮಲ್ಲಾಪುರ, ಚನ್ನಗಿರಿ ತಾ.