N-2728 
  29-11-2024 10:29 PM   
ಕನ್ನಡ ಭುವನೇಶ್ವರಿಯ ಕೊರಗು...
ಪೂಜ್ಯ ಜಗದ್ಗುರುಗಳ ಪ್ರಸ್ತುತ ಬಿಸಿಲು ಬೆಳದಿಂಗಳ ಲೇಖನ ಕನ್ನಡ ನಾಡಿನಲ್ಲೇ ತಾಯಿ ಭುವನೇಶ್ವರಿಗೆ ಕನ್ನಡಿಗರಿಂದಲೇ ಆಗುತ್ತಿರುವ ಅನ್ಯಾಯವನ್ನು ಯಥಾವತ್ತಾಗಿ ಬಿಂಬಿಸಿದೆ. ಸಮಾಜದ ಕುಂದು ಕೊರತೆಗಳು, ಲೋಪ ದೋಷಗಳನ್ನು ಸುಸೂತ್ರವಾಗಿ, ಸಮಯೋಚಿತವಾಗಿ ಎತ್ತಿ ಹಿಡಿದು ಹಲವಾರು ದೃಷ್ಟಾಂತಗಳ ಮೂಲಕ ಲಘುವಾದ ಹಾಸ್ಯಭರಿತ ಶೈಲಿಯಲ್ಲಿ ತಮ್ಮ ನಿಲುವನ್ನು ಪ್ರತಿಪಾದಿಸುವ ಕಲೆಗಾರಿಕೆ ಅವರ ಬರಹಗಳಲ್ಲಿ ಕಾಣಬಹುದು. ಕನ್ನಡ ಸಾರಸ್ವತ ಲೋಕಕ್ಕೆ ಅವರ ಕೊಡುಗೆ ಅಪಾರ ಹಾಗೂ ಅಮೂಲ್ಯ. ಈ ಬಾರಿಯ ಕನ್ನಡ ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಮ್ಮೇಳನಕ್ಕೆ ಪೂಜ್ಯ ಗುರುಗಳ ಹೆಸರು ಸೂಚಿತವಾಗಿರುವುದು ಸೂಕ್ತ ಹಾಗೂ ಸಂತಸದ ವಿಷಯ. ಶ್ರೀಮಠದಲ್ಲಿ ನಡೆಸಿಕೊಡುವ ಸಾಹಿತ್ಯ ಸಮ್ಮೇಳನ, ಹಾಸ್ಯ ಸಂಜೆ, ತರಳಬಾಳು ಹುಣ್ಣಿಮೆ, ಕವಿ ಗೋಷ್ಠಿ ,ಮುಂತಾದ ಸಮಾರಂಭಗಳಿಗೆ ಗುರುವರ್ಯರು ಗಣ್ಯಸಾಹಿತಿಗಳ ಜೊತೆಜೊತೆಯಾಗಿ ಉದಯೋನ್ಮುಖ ಬರಹಗಾರರನ್ನೂ ಆಮಂತ್ರಿಸಿ ಕನ್ನಡಾಂಬೆಯ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಹಾಗೂ ಹೆಮ್ಮೆಯ ವಿಷಯ. ಕನ್ನಡತ್ವಕ್ಕೇ ಧಕ್ಕೆ ಬರುವ ವಾತಾವರಣದಲ್ಲಿ ಪೂಜ್ಯ ಜಗದ್ಗುರುಗಳು ಅದನ್ನು ಉಳಿಸಿ ಬೆಳೆಸುವ ಕಾಯಕವನ್ನು ಕೈಗೊಂಡು ದಾಸೋಹ ಮಾಡುತ್ತಿರುವುದು ಸ್ತುತ್ಯಾರ್ಹ ಹಾಗೂ ದಾರಿದೀಪ.
ಕನ್ನಡದ ಬಳಕೆಯ ಬಗ್ಗೆ ಹಿಂಜರಿಯುವ ಕನ್ನಡಿಗರನ್ನು ಉದ್ದೇಶಿಸಿ ನಾನು ಹಿಂದೊಮ್ಮೆ ಬರೆದ ಒಂದು ಕವನ ಇಲ್ಲಿ ಹಾಕುವುದು ಸೂಕ್ತವಾಗಬಹುದು ಎಂಬ ನಂಬಿಕೆಯಿಂದ ಕೆಳಗೆ ಇದನ್ನು ಲಗತ್ತಿಸಿದ್ದೇನೆ—
ಕನ್ನಡಾಂಬೆಯ ಕಂಬನಿ
ಕನ್ನಡ ಮಾತೆ ಓ ನನ್ನ ಜನ್ಮದಾತೆ
ಚೆಲುವಾದ ನಿನ್ನಾ ಮೊಗದ ಮೇಲೇಕೆ
ಎದ್ದು ಕಾಣುತಿದೆ ಚಿಂತೆಯಾ ಗೆರೆ?
ಹೇಳು ತಾಯೆ ಮಾಡಲೇನು ಗೆರೆಯನಳಿಸಿ
ಸೊಬಗ ತರಲು ನಿನ್ನಾ ಮೊಗಕೆ
ಮೂಢ ನೀನು, ಗೊತ್ತಿದ್ದೂ ಕೇಳಲೇಕೆ
ನನ್ನೀ ನಾಡಲೀಗ ನಡೆಯುತಿಹ
ಅನ್ಯಾಯ ಅನ್ಯಾಚಾರಗಳ ಅರಿವು
ಕಾಣದಾಯಿತೇನು ನಿಮಗೆ
ಇದು ಬರಿಯ ಗೆರೆಯಲ್ಲ ಮಗನೆ
ನೊಂದು ಬೆಂದಿರುವ ಬರೆಯ ಗೆರೆ!
ಸಂತಸದಿ ತಾಯ್ತನವ ಸವಿದೆ ಬಹುಕಾಲ
ಇತಿಹಾಸ ಪೇಳುವುದೆನ್ನ ವೈಭವದ ಕಥೆಯ:
ಬಸವ ಅಲ್ಲಮ ಮಹಾದೇವಿಯಕ್ಕ
ಕನಕ ಪುರಂದರ ಶ್ರೀಪಾದ ಜಗನ್ನಾಥ
ರನ್ನ ಪಂಪ ಕುಮಾರವ್ಯಾಸ ಹರಿಹರ
ಶಾತವಾಹನ ಚೋಳ ಚಾಳುಕ್ಯ ಪಲ್ಲವ
ರಾಷ್ಟ್ರಕೂಟ ಗಂಗ ಕದಂಬ ವಿಜಯನಗರ
ಹಕ್ಕ ಬುಕ್ಕ ವಿದ್ಯಾರಣ್ಯ
ಮುದ್ದಣ ಶಿಶುನಾಳ ಸರ್ವಜ್ಞ
ಆಲಿಸು, ಇವು ಬರಿ ಹೆಸರುಗಳಲ್ಲ ಮಗನೆ
ಇವು ಕನ್ನಡ ನಾಡಿನ ನಾಡಿಯ ಬಡಿತಗಳು!
ಮೆರೆಸಿದರೆನ್ನನೀ ವೆಲದಲಿ
ಕೊಟ್ಟರೆಂತಹ ಸಡಗರ!
ನನ್ನುಡಿಯನೇ ನುಡಿದು
ಸಂಸ್ಕೃತಿಯನುಳಿಸಿ ಬೆಳಸಿ
ಉಚ್ಛತೆಯನು ಸಾರಿ
ವಿಶ್ವದಾದ್ಯಂತ ಪ್ರಸರಿಸಿ
ತಣಿಸಿದರೆನ್ನ ತನುವನೂ
ಮನವನೂ ಬಾರಿ ಬಾರಿ!
ಕಾರಂತ ಕುವೆಂಪು ಬೇಂದ್ರೆ ಅಂದ್ರೆ
ಮೊಗದಲಿ ಮೆರೆವುದು ಸಂತಸ ಮುದ್ರೆ
ಎಂತಹ ಚಂದ ಅವರಿಂದು ಇದ್ರೆ
ನಿಮ್ಮೀ ತಾಯಿಗಂತು ಸುಖದ ನಿದ್ರೆ!
ನನ್ನ ನೆಲದಲಿತ್ತು ಎಂತ ಕಸುವು ಎಂತ ಸೊಗಸು
ಆದರೇನು ನೀವು ತಂದರಿಲ್ಲಿ
ಎಲ್ಲ ಕಡೆಯ ಹೊಲಸು
ಕೊಳಕು ತುಂಬಿದೆ ಮಗನೇ
ನೀನು ಬಂದು ಕಸವ ಗುಡಿಸು
ಎಂದು ನಿನ್ನ ತಾಯಿಯಿಂದು
ನೊಂದು ನಿನ್ನ ಕರೆಯುತಿಹಳು!
ನನ್ನ ಭಾಷೆ ನನ್ನ ಜನಕೆ ಇಂದು ಬೇಡವಾಗಿದೆ
ಅನ್ಯ ಭಾಷೆ ಬಂದು ಇಂದು
ನನ್ನ ಜನಕೆ ಮೋಡಿಮಾಡಿದೆ
ಉಳಿಸಿಕೊಳ್ಳಿ ನಿಮ್ಮ ಭಾಷೆ ನಿಮ್ಮತನವ
ಪೊರಕೆಹಿಡಿದು ಕಸವನೋಡಿಸಿ
ಇದ್ದು ಮೆರೆಯಿರಿಲ್ಲಿ ಎಂದು
ತಾಯ್ಮಡಿಲು ಕೂಗಿ ಕರೆದಿದೆ
ಮಾತೆ ನೀನು ಹಲುಬಲೇಕೆ
ಅರಿವಾಗಿದೆ ನಮ್ಮ ನೆಲದ ಉಳಿವು
ನಿನ್ನ ಹರಕೆ ಕೊರತೆ ಇಲ್ಲದೆ ಸಿಗಲು
ಅನ್ಯರಾಕ್ರಮಣವನು ತಡೆದು ಬಡಿದು
ಕನ್ನಡತ್ವವನು ಉಳಿಸಿ ಬೆಳಸುವೆವು
ತಾಯೆ ನಿನ್ನ ಮೊಗದಿ ಮತ್ತೆ
ಮೂಡಿ ಬರಲಿ ಸಂತಸದ ಕಂಪು!!
….ಆಣ್ಣಾಪುರ್ ಶಿವಕುಮಾರ್
Dr. Annapur Shivakumar
Chicago, USA