N-2540 
  26-05-2024 04:44 PM   
ಹವಳ ಮುತ್ತುಗಳ ನಾಡಿನಿಂದ ಒಂದು ಪತ್ರ
ಸಿರಿಗೆರೆಯ ತರಳಬಾಳು ಜಗದ್ಗುರು
*ಡಾ.ಶಿವಮೂರ್ತಿ ಶಿವಾಚಾರ್ಯ*
ಸ್ವಾಮೀಜಿಯವರ ಬಿಸಿಲು ಬೆಳದಿಂಗಳು ಸರಣಿಯ
*ಹವಳ ಮುತ್ತುಗಳ ನಾಡಿನಿಂದ ಒಂದು ಪತ್ರ* ಕುರಿತ
ಅನಿಸಿಕೆ.
ಶ್ರೀ ಗುರುಗಳು ಅತ್ಯಂತ ಶಾಂತಿಪ್ರಿಯ ರಾಷ್ಟ್ರ ಒಮಾನ್ ದೇಶದ ಬಗ್ಗೆ ಬರೆದ ಪರಿಚಯ ಲೇಖನ ತುಂಬಾ ರೋಮಾಂಚನಕಾರಿಯಾಗಿತ್ತು.
ಎಲ್ಲಾ ಧರ್ಮದವರು ಬಹಳ ಶಾಂತ ರೀತಿಯಿಂದ ನಡೆದುಕೊಳ್ಳುತ್ತಿರುವುದು ಕೋಮುದಳ್ಳುರಿಯಲ್ಲಿ ನಲುಗುತ್ತಿರುವ ದೇಶಗಳಿಗೆ ಈ ಮಾದರಿ ಆದರ್ಶ ಪ್ರಾಯವಾಗಬೇಕು. ಎಲ್ಲಾ ಧರ್ಮಾಚರಣೆಗಳು ತಮ್ಮ ತಮ್ಮ ಮನೆಗಳಿಗಷ್ಟೇ ಸೀಮಿತಗೊಂಡಿರುವುದು ಎಲ್ಲಾ ತಿಕ್ಕಾಟಗಳಿಗೂ ಮುಕ್ತಿಯನ್ನು ನೀಡಿದೆ. ನಮ್ಮ ದೇಶ ಜಾತ್ಯತೀತ ರಾಷ್ಟ್ರ ಎಂದು ಹೇಳಿಕೊಂಡರೂ ಜಾತಿ ಆಧಾರಿತ ರಾಜಕಾರಣ, ಆಡಳಿತ, ಮೀಸಲು ಮತ್ತು ವ್ಯವಸ್ಥೆ ಜನಾಂಗಗಳ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿಸಿದೆ.
ಒಮಾನ್ ಮಾದರಿ ನಮಗೂ ಕೂಡ ಉತ್ತಮವೇ. ಇದನ್ನು ಅಳವಡಿಸಿಕೊಂಡಲ್ಲಿ ದೇಶ ಇನ್ನೂ ಅಭಿವೃದ್ಧಿಯ ಹಾದಿಯಲ್ಲಿ ಸಾಗುವುದರಲ್ಲಿ ಸಂಶಯವಿಲ್ಲ.
ಕನಿಷ್ಟ ಮಳೆಯಾಗುವ ದೇಶವಾಗಿದ್ದರೂ ಪ್ರತಿಹನಿಯನ್ನು ಶೇಖರಿಸಲು ವಾಡಿಗಳನ್ನು ನಿರ್ಮಿಸಿಕೊಂಡಿರುವುದು ಅತ್ಯಂತ ಜಾಣ್ಮೆಯ ವಿಷಯ. ಅದು ನಮ್ಮ ಚಿತ್ರದುರ್ಗದ ಪಾಳೆಗಾರರ ಮಾದರಿಯನ್ನು ನೆನಪಿಸುತ್ತದೆ, ಚಿತ್ರದುರ್ಗದಲ್ಲಿ ಬಿದ್ದ ಒಂದು ಮಳೆಹನಿಯೂ ವ್ಯರ್ಥವಾಗದೆ ಕೆರೆಕಟ್ಟೆಗಳನ್ನು ಹೊಂಡಗಳನ್ನು ತಲುಪಿ ಅದು ಕೋಡಿ ಹರಿದಾಗ ಮತ್ತೊಂದಕ್ಕೆ ಹರಿಯುತ್ತದೆ. ಇದು ಜಾನುವಾರುಗಳಿಗೆ ಮತ್ತು ಮನೆ ಬಳಕೆಗೆ ಉಪಯೋಗಕ್ಕೆ ಬರುತ್ತದೆ. ಅದೇ ರೀತಿ ಒಮಾನ್ ದೇಶವು ಕೂಡ ವಾಡಿಗಳನ್ನು ತನ್ನ ಜನರ ಜಾನುವಾರುಗಳ ಬಳಕೆಗೆ ಉಪಯೋಗಿಸಿಕೊಳ್ಳುತ್ತಿದೆ.
*ಸಮುದ್ರದ ನೆಂಟಸ್ತನ ನೀರಿಗೆ ಬಡತನ* ಎಂಬ ಗಾದೆಯನ್ನು ಸುಳ್ಳಾಗಿಸಿ ಅದೇ ಉಪ್ಪು ನೀರನ್ನೇ ಪರಿಷ್ಕರಿಸಿ ಯಥೇಚ್ಛವಾಗಿ ಮನೆ ಮನೆಗೂ ತಲುಪಿಸುತ್ತಿರುವುದು ನಿಜಕ್ಕೂ ತುಂಬಾ ಸಾಹಸದ ವಿಷಯ. ನಮ್ಮ ದೇಶದಲ್ಲಿ ಇರುವ ನೀರನ್ನು ಹಾಗೆಯೇ ಎಲ್ಲರಿಗೂ ಯಥೇಚ್ಛವಾಗಿ ತಲುಪಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ನಮ್ಮ ಅಗಾಧ ಜನಸಂಖ್ಯೆಯೂ ಕಾರಣವಾಗಿರಬಹುದು.
ಈ ದೇಶಕ್ಕೆ ಮುಖ್ಯವಾಗಿ ಭೂಮಿಯಲ್ಲಿ ದೊರಕುವ ಖನಿಜಗಳು, ಪೆಟ್ರೋಲಿಯಂ ಉತ್ಪನ್ನಗಳು ಹಾಗೂ ಸಮುದ್ರಾಧಾರಿತ ಉತ್ಪನ್ನಗಳು ಮತ್ತು ಸಮುದ್ರ ದಡದಲ್ಲಿ ಬೇಳೆಯುವ ಖರ್ಜೂರ, ನಿಂಬೆ ಮತ್ತು ಉಷ್ಣವಲದಲ್ಲಿ ಬೆಳೆಯುವ ತೆಂಗು, ಪಪಾಯ ಬಾಳೆಹಣ್ಣು ಮತ್ತು ತರಕಾರಿಗಳು ಮುಖ್ಯ ಆದಾಯದ ಮೂಲ. ಇವುಗಳಲ್ಲಿ ಪ್ರಮುಖವಾಗಿ ಶೇ85 ಭಾಗ ಪೆಟ್ರೂಲಿಯಂ ಉತ್ಪನ್ಮಗಳಿಂದಲೇ ಬಂದು ಶ್ರೀಮಂತ ರಾಷ್ಟ್ರವಾಗಿದೆ.
ನಮ್ಮ ದೇಶದ ನಡುವೆ ನಡೆಯುತ್ತಿದ್ದ ಮುತ್ತು ರತ್ನಗಳ ವ್ಯಾಪಾರದ ಕುರುಹಾಗಿಯೇ ಮೋತೀಶ್ವರ್ ಮಂದಿರ್ ಇದ್ದು ಅದರಲ್ಲಿ ಪ್ರತಿಯೊಂದು ಹಬ್ಬವನ್ನು ಆಚರಿಸಿಕೊಂಡು ಬರುತ್ತಿರುವುದು ಸಂತಸದ ವಿಷಯ. 50 ವರ್ಷಗಳ ಕಾಲ ಆಳ್ವಿಕೆ ನೆಡೆಸಿದ ಸುಲ್ತಾನ್ ಖಬೂಸ್ ರವರು ನಮ್ಮ ರಾಷ್ಟ್ರಪತಿಗಳಾಗಿದ್ದ ಶಂಕರದಯಾಳ್ ಶರ್ಮ ರವರು ತಮ್ಮ ಆಧ್ಯಾಪಕ ವೃತ್ತಿಯಲ್ಲಿದ್ದಾಗ ಗುರುಗಳಾಗಿದ್ದುದನ್ನು ನೆನಪಿಟ್ಟುಕೊಂಡು ತಾವು ಸುಲ್ತಾನರಾಗಿದ್ದಾಗ ಸಾಮಾನ್ಯ ನೆಚ್ಚಿನ ವಿದ್ಯಾರ್ಥಿಯಂತೆ ಸ್ವಾಗತಿಸಿದ್ದುದನ್ನು ತಿಳಿದು ತುಂಬಾ ಸಂತೋಷವಾಯಿತು. ಇದು ಎರಡೂ ದೇಶದ ನಡುವಿನ ಭಾವನಾತ್ಮಕ ಸಂಬಂಧವನ್ನು ಮತ್ತಷ್ಟು ಹೆಚ್ಚಿಸಿದೆ.
ಇವುಗಳೆಲ್ಲದರ ಮೇಲೆ ಪ್ರಕೃತಿಯ ಮುನಿಸಿಗೆ ತುತ್ತಾಗಿ ಜೀವಹಾನಿಯಾಗುತ್ತಿರುವುದನ್ನು ಗುರುಗಳು " ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ ಎನ್ನ ವಶವೇ ಅಯ್ಯಾ?" ಎಂದು ಬಸವಣ್ಣನವರನ್ನು ನೆನೆಯುತ್ತಾರೆ ಇಲ್ಲಿ ಮಾನವನ ಮೇಲೆ ದೈವದ ಮೇಲಾಟ ಕಾಣ ಸಿಗುತ್ತದೆ.
ಪ್ರತಿ ಬಾರಿಯೂ ವಿಭಿನ್ನ ವಿಷಯಗಳನ್ನು ಆರಿಸಿ ನಮಗೆಲ್ಲಾ ಜ್ಞಾನ ಸುಧೆ ಹರಿಸುತ್ತಿರುವ ಶ್ರೀಗಳಿಗೆ ಹೃದಯ ಪೂರ್ವಕ ಪ್ರಣಾಮಗಳು.
ಗುರುಗಳ ಜ್ಞಾನ ಸುಧೆಗೆ ನಮ್ಮೆಲ್ಲರ ಮನ ಮಿಡಿಸುತ್ತಿರುವ ರಾ. ವೆಂಕಟೇಶ ಶ್ರೇಷ್ಠಿಯವರಿಗೆ ಧನ್ಯವಾದಗಳು.
ನಾರಾಯಣ ದೊಂತಿ ಚಿತ್ರದುರ್ಗ