N-2608 
  13-08-2024 08:23 PM   
ಸಿರಿಗೆರೆ,ಪಲ್ಲಾಗಟ್ಟೆ, ಮೆಳ್ಳೇಕಟ್ಟೆ ಗ್ರಾಮಗಳ ಭಕ್ತರ ಸಭೆ : ತರಳಬಾಳು ಶ್ರೀಗಳ ಪರ ಬೆಂಬಲ
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಮೂಲ ಪುರುಷ ವಿಶ್ವಬಂಧು ಮರುಳಸಿದ್ಧರು. ಇವರು ಬಾಲ್ಯಾವಸ್ಥೆಯಲ್ಲಿಯೇ ಸಮಾಜದಲ್ಲಿ ನಡೆಯುತ್ತಿದ್ದ ಅನಿಷ್ಟ ಪದ್ದತಿಗಳಾದ ಯಜ್ಞ ಯಾಗಗಳ ವಿರುದ್ದ, ಕುಡಿತದ ವಿರುದ್ದ, ಪ್ರಾಣಿ ಬಲಿಯ ವಿರುದ್ದ ಹೋರಾಡಿ ಜನರ ಕಣ್ಣು ತೆರೆಸಿದ ಮಹಾತ್ಮರು. ಇವರು ಜೀವಿಸಿದ್ದ 12 ನೇ ಶತಮಾನದಲ್ಲಿಯೇ ಇವರ ಹೋರಾಟಗಳನ್ನು ಹತ್ತಿಕ್ಕಲು ಸಮಾಜದ ಕೆಲವು ಪಟ್ಟಭದ್ರ ಹಿತಾಸಕ್ತರು ಮರುಳಸಿದ್ದರ ಕೈ ಕಾಲುಗಳನ್ನು ಕಟ್ಟಿ ಕೆರೆಯಲ್ಲಿ ಹಾಕಿದ್ದು, ಅವರನ್ನು ಹಗೇವಿಗೆ ಹಾಕಿ ಸುಣ್ಣ ಸುರಿದು ನೀರು ಸುರಿದದ್ದು, ಜಾತ್ರೆಯಲ್ಲಿ ಪ್ರಾಣಿ ಬಲಿಯ ಕೊಡುವ ಸಂದರ್ಭದಲ್ಲಿ ತಡೆಯಲು ಹೋದಾಗ ಕೆಲವರು ಆತನ ವಿರುದ್ದ ಮಾತನಾಡಿದ್ದು ಇವೆಲ್ಲವೂ ಇತಿಹಾಸ.
ಮರುಳಸಿದ್ದ, ಬಸವಣ್ಣ, ಏಸು, ಗಾಂಧಿ, ಅಂಬೇಡ್ಕರ್ ಅವರನ್ನೇ ನಿಂದಿಸಿ ಕಾಡಿದ ನಮ್ಮ ಜನ ಇನ್ನು ಮಠದ ಸ್ವಾಮಿಗಳನ್ನು ಬಿಡುತ್ತಾರೆಯೇ? ಬಸವಣ್ಣ ಕಲ್ಯಾಣ ಪಟ್ಟಣವನ್ನು ಬಿಟ್ಟ ಮೇಲೆ, ಕಲ್ಯಾಣದಲ್ಲಿ ಕ್ರಾಂತಿಯೇ ಆಯಿತು.
ಇನ್ನು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಸದ್ಧರ್ಮ ಪೀಠವನ್ನು ಸಂಸ್ಥಾಪಿಸಿದ ಮರುಳಸಿದ್ದರನ್ನು ಮೊದಲ್ಗೊಂಡು ಇಂದಿನ ಡಾ. ಜಗದ್ಗುರುಗಳವರೆಗೆ ನಮ್ಮ ಜನ ಕಾಡದೆ ಬಿಟ್ಟಿಲ್ಲ. ಉಜಯಿನಿಯಲ್ಲಿರುವ ಮೂಲ ಮಠದಲ್ಲಿ ನೆಲೆಸಿದ್ದ 12 ನೆಯ ಜಗದ್ಗುರು
ಶ್ರೀ ಜಂಬಪ್ಪ ದೇವರು ಅಲ್ಲಿನ ಜನರ ಕಿರುಕುಳದಿಂದ ಬೇಸತ್ತು ಮಠದಿಂದ ಹೊರಬಂದರು. ತರುವಾಯ,
19 ನೇ ಜಗದ್ಗುಗಳಾಗಿದ್ದ
ಶ್ರೀ ಗುರುಶಾಂತರಾಜ ದೇಶೀಕೇಂದ್ರ ಮಹಾಸ್ವಾಮಿಗಳವರ ಏಳಿಗೆಯನ್ನು ಸಹಿಸದ ಕೆಲವರು ಮಜ್ಜಿಗೆಯಲ್ಲಿ ವಿಷ ಹಾಕಿ ಕೊಲೆಗೈದರು. ಆ ಸಂದರ್ಭದಲ್ಲಿ ಸಿರಿಗೆರೆಯ ಶ್ರೀ ಮಠದ ಆರ್ಥಿಕ ಪರಿಸ್ಥಿತಿ ಬಹಳ ಹದಗೆಟ್ಟಿತ್ತು. ನಮ್ಮ ಮಠವನ್ನು ಬಹಳ ಕಾಲದಿಂದಲೂ ದುಗ್ಗಾಣಿ ಮಠವೆಂದೇ ಕರೆಯುತ್ತಿದ್ದರು.
ಶ್ರೀ ಗುರುಶಾಂತ ಮಹಾಸ್ವಾಮಿಗಳ ನಂತರ ಪಟ್ಟಾಭಿಷಿಕ್ತರಾದ
ಶ್ರೀ ಶಿವಕುಮಾರ ಶಿವಾಚಾರ್ಯ
ಮಹಾ ಸ್ವಾಮಿಗಳು ಅಧಿಕಾರ ವಹಿಸಿಕೊಂಡ ನಂತರ ಮಠ ಮತ್ತು ಗುರುಗಳನ್ನು ಕಾಯುತ್ತಿದ್ದ ದುಷ್ಟರನ್ನು ಹಂತಹಂತವಾಗಿ ಬಗ್ಗುಬಡಿಯುತ್ತಾ ಮುನ್ನಡೆದರು. ಪೂಜ್ಯರ ಅವಧಿಯಲ್ಲಿ ಶ್ರೀ ಮಠ ಸಾಕಷ್ಟು ಸಮಸ್ಯೆಗಳಿಂದ ನಲುಗುತ್ತಿತ್ತು. ಹಿರಿಯ ಜಗದ್ಗುರುಗಳು ಆ ಎಲ್ಲಾ ಸಮಮಯಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುತ್ತಾ
ಮಠವನ್ನು ಧಾರ್ಮಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿಯ ಕಡೆಗೆ ಕೊಂಡೊಯ್ದರು. ಆಗ ದುಗ್ಗಾಣಿ ಮಠ ದುಡ್ಡಿನ ಮಠವಾಗಿ ತಲೆಯೆತ್ತಿ ನಿಂತಿತು.
ತಮ್ಮ ಅಧಿಕಾರದ ಅವಧಿಯಲ್ಲಿ ಬಹಳಷ್ಟು ಚಿಂತನೆ ಮಾಡಿ ನಮ್ಮ ಮಠ ಮತ್ತು ಸಮಾಜಕ್ಕೆ ಒಬ್ಬ ಸೂಕ್ತ, ಸಮಾಜವನ್ನು ತಿದ್ದಿ ತೀಡಿ ಬೆಳಕಿನೆಡೆಗೆ ಕೊಂಡೊಯ್ಯುವಂತಹ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿ 1979 ರ ಫೆಬ್ರವರಿ 11ರಂದು ಸಿರಿಗೆರೆಯಲ್ಲಿ ನಡೆದ ತರಳಬಾಳು ಹುಣ್ಣಿಮೆಯ ಸಂದರ್ಭದಲ್ಲಿ ಪಟ್ಟಾಭಿಷೇಕ ಮಾಡಿ
ಸದ್ಧರ್ಮ ಸಿಂಹಾಸನದಲ್ಲಿ ಕುಳ್ಳಿರಿಸಿ ಭಕ್ತ ಸಮೂಹದ ಎದುರಿನಲ್ಲಿ"ತರಳಾ ಬಾಳು" ಎಂದು ಆಶೀರ್ವದಿಸಿ ನಮ್ಮ ಸಮಾಜಕ್ಕೆ 21ನೆಯ
ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ
ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮಿಗಳವರನ್ನು ನಮ್ಮ ಸಮಾಜಕ್ಕೆ ಜಗದ್ಗುರುವನ್ನಾಗಿಸಿದರು.
ಡಾ. ಜಗದ್ಗುರುಗಳವರು ತಾವು ಪಟ್ಟಕ್ಕೆ ಬಂದಂದಿನಿಂದ ಇಂದಿನವರೆಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ನಮ್ಮ ಸಮಾಜದ ಭಕ್ತರು ಅರ್ಥ ಮಾಡಿಕೊಳ್ಳಬೇಕು. 1979 ರಿಂದ ಇಲ್ಲಿಯವರೆಗೆ ನಮ್ಮ ಮಠ ಬರೀ ಕರ್ನಾಟಕದಲ್ಲಷ್ಟೇ ಅಲ್ಲ, ಇಡೀ ಭಾರತದಲ್ಲಷ್ಟೇ ಅಲ್ಲ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆಯುವಂತೆ ಮಾಡಿರುವುದು ನಮ್ಮ ಸಮಾಜದ ಕೆಲವು ಭಕ್ತರಿಗೆ ಕಾಣುತ್ತಿಲ್ಲವೇ? ಈಗ್ಗೆ ಕೆಲವು ವರ್ಷಗಳಿಂದ ಮಠಕ್ಕೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿಲ್ಲ, ಹಿರಿಯ ಗುರುಗಳು 60 ವರ್ಷಕ್ಕೆ ನಿವೃತ್ತಿ ಹೊಂದಿದ್ದರು, ಈಗಿನ ಗುರುಗಳಿ 78 ವರ್ಷಗಳಾದರೂ ಏಕೆ ನಿವೃತ್ತಿ ಹೊಂದಿಲ್ಲ. ಓಹೋ ತಮ್ಮ ತಂಗಿಯ ಮಗನನ್ನು ಅಧಿಕಾರಕ್ಕೆ ತರುವ ಹುನ್ನಾರ ನಡೆಸಿದ್ದಾರೆಂದೂ, ಮಠದ ಆಸ್ತಿಯನ್ನು ಸ್ವಂತತ್ರ ಹೆಸರಿಗೆ ಮಾಡಿಕೊಂಡಿದ್ದಾರೆಂದೂ, ಏಕವ್ಯಕ್ತಿ ಟ್ರಸ್ಟ್ ಡೀಡ್ ಮಾಡಿಕೊಂಡಿದ್ದಾರೆಂದೂ, ಮಠದ ಆಸ್ತಿಯನ್ನು ಮತ್ತು ಹಣವನ್ನು ಕಬಳಿಸುವ ಹುನ್ನಾರ ನಡೆಸಿದ್ದಾರೆಂದೂ ಆರೋಪಿಸುವ ಮಹಾ ಭಕ್ತರೇ, ಹಿರಿಯ ಜಗದ್ಗುರುಗಳು ದೂರಾಲೋಚನೆ ಮಾಡಿ ನಮ್ಮ ಸಮಾಜವನ್ನು ವ್ಯವಸ್ಥಿತವಾಗಿ ಮುನ್ನಡೆಸುವಂತಹ ವೈಚಾರಿಕತೆಯುಳ್ಳ, ಬುದ್ಧಿವಂತ, ನಿಸ್ವರ್ಥ ಸೇವಾಮನೋಭಾವವಿರುವ ಜಗದ್ಗುರುಗಳನ್ನು ನಮಗೆ ನೀಡಿದ್ದಾರೆ. ಅವರನ್ನು ಕಾಪಾಡಿಕೊಳ್ಳಬೇಕಾದ ಬಹು ಮುಖ್ಯ ಜವಾಬ್ದಾರಿ ನಮ್ಮ ಸಮಾಜದ ಮೇಲಿದೆ. ನಮ್ಮ ಸಮಾಜದವರೇ ಹಾದಿರಂಪ ಬೀದಿರಂಪ ಮಾಡಿದರೆ ನಮ್ಮ ಮತ್ತು ನಮ್ಮ ಸಮಾಜದ ಘನತೆಗೆ ಧಕ್ಕೆಯಾಗುತ್ತದೆಯೆಂಬ ಒಂದು ಸಣ್ಣ ತಿಳಿವಳಿಕೆ ನಮಗಿರಬೇಕಲ್ಲವೇ? ಡಾ. ಜಗದ್ಗುರುಗಳು ಅಧಿಕಾರ ಕ್ಕೆ ಬಂದ ಮೇಲೆ ಶ್ರೀ ಮಠ, ವಿದ್ಯಾಸಂಸ್ಥೆ, ಸಮಾಜದ ಅಭಿವೃದ್ಧಿಗಾಗಿ ಎಷ್ಟೆಲ್ಲಾ ಶ್ರಮಿಸಿದ್ದಾರೆಂಬುದು ಗೊತ್ತಿದ್ದರೂ ಏಕೆ ನಕ್ಷಕರ ರೀತಿಯಲ್ಲಿ ಕಾಡುತ್ತಿದ್ದೀರಿ. ಅದೆಲ್ಲವನ್ನು ಬಿಟ್ಟು ಪರಿಶುದ್ಧ ಮನಸ್ಸಿನಿಂದ ಅಧಿಕಾರದ ದಾಹವನ್ನು ಬಿಟ್ಟು ಸಮಾಜದ ಒಳಿತಿಗಾಗಿ ನಾವೆಲ್ಲರೂ ಡಾ. ಜಗದ್ಗುರುಗಳೊಂದಿಗೆ ಟೊಂಕ ಕಟ್ಟಿ ನಿಲ್ಲೋಣ. ಜೊತೆಗೆ ಡಾ.ಪಂಡಿತಾರಾಧ್ಯ ಗುರುಗಳನ್ನು ಕರೆತಂದು
ಡಾ. ಜಗದ್ಗುರುಗಳವರ ಕಾರ್ಯಗಳಲ್ಲಿ ಕೈ ಜೋಡಿಸುವಂತೆ
ನಾಡಿನ ಸದ್ಭಕ್ತರೆಲ್ಲರೂ ಒಕ್ಕೊರಲಿನಿಂದ ನಿವೇದಿಸಿಕೊಳ್ಳೋಣ.
Mahalingaiah madapura
ಮಹಾಲಿಂಗಯ್ಯ ಮಾದಾಪುರ
Davangere Karnataka India