N-2601 
  09-08-2024 06:15 PM   
ಮೇಟಿವಿದ್ಯಾ ಸಂಪನ್ನರಿಗೆ ಮಾಡುತ್ತಿರುವ ಮರೆಮೋಸ!
ಗುರುಗಳಿಗೆ ಹಾಗೂ ಗುರುಸನ್ನಿಧಾನಕ್ಕೆ ,
ಪೊಡಮಡುತ್ತಾ, ಗುರುಗಳು ಬರೆದ ಇಂದಿನ ,”ಮೇಟಿವಿದ್ಯಾ ಸಂಪನ್ನರಿಗೆ ಮರೆ ಮೋಸ”, ಅಂಕಣಕ್ಕೆ ನನ್ನ ಪ್ರತಿಕ್ರಿಯೆ!
ವ್ಯವಹಾರ ಪ್ರಪಂಚದಲ್ಲಿ ಒಂದು ಗಾದೆ ಮಾತಿದೆ. “ಹೊಗಳಿ ಮಾರು, ತೆಗಳಿ ಕೊಳ್ಳು”, ಅಂತ. ಅದೇ ರೀತಿ, ಪ್ರತಿ ಸಾಲಿನ ಬಜೆಟ್ ಮಂಡನೆಯಲ್ಲೂ ಪ್ರತಿಪಕ್ಷಗಳು,”ನಾವು ಮಂಡಿಸಿರುವ ಈ ಸಾಲಿನ ಬಜೆಟ್ ಎಲ್ಲ ರಂಗಗಳ ಅಭಿವೃದ್ದಿಯನ್ನು ಗಣನೆಗೆ ತೆಗೆದುಕೊಂಡು ತೀರ್ಮಾನಿಸಲಾದ ಅತ್ಯಂತ ಸಮರ್ಪಕವಾದ ಬಜೆಟ್”ಎಂದು ಹೊಗಳಿಕೊಂಡರೆ,ವಿರೋಧ ಪಕ್ಷಗಳು,”ಇಂಥ ಪಕ್ಷಪಾತಿ ಬಜೆಟ್ ಅನ್ನು ನಾವು ಇತಿಹಾಸದಲ್ಲೇ ನೋಡಿಲ್ಲ”, ಎಂದು ನೂರಾರು ತಪ್ಪುಗಳನ್ನ ಎತ್ತಿ ತೋರಿಸುತ್ತಾರೆ. ಇದು ಹೇಗೆ ಎಂದರೆ, ಒಂದು ಹೆಣ್ಣು ಮಗಳು ಮಾಡಿದ ಕೆಲಸವನ್ನು ತಾಯಿಯಾಗಿ ನಿಂತು, ಹಾಗೇ ಅತ್ತೆಯಾಗಿ ನಿಂತು ವಿಶ್ಲೇಷಣೆ ಮಾಡಿದಂತೆ. ವಿರೋಧ ಪಕ್ಷದವರು ಮಾತ್ರ ಆ ಜಾಗದಲ್ಲಿದ್ದರೆ, ಅವರು ಮಾಡುತ್ತಿದ್ದುದ್ದೂ ಅದನ್ನೇ. ಗುರುಗಳು ತಿಳಿಸಿದಂತೆ, ಕೆಲವೊಮ್ಮೆ ಸುತ್ತಲ ಒತ್ತಡಗಳಿಗೆ ಮಣಿದು, ಮುಂದಿನ ರಾಜಕೀಯ ಭವಿಷ್ಯ ಯೋಚಿಸಿ, ಆ ಚುನಾವಣೆಯಲ್ಲಿ ತಮ್ಮನ್ನ ಬೆಂಬಲಿಸಿದವರನ್ನ ಬಿಟ್ಟುಕೊಡದಂತೆ, ಜೊತೆಗೆ ಅಧಿಕಾರಕ್ಕೆ ಬಂದರೆ, ಏನೇನು ಮಾಡಿ ಕೊಡುತ್ತ ಅವರ ಎಂದು ವಾಗ್ದಾನ ಮಾಡಿ ಗೆದ್ದು ಬಂದಿರುತ್ತಾರೋ, ಇವೆಲ್ಲಕ್ಕೂ ಅಧಿಕಾರದ ಗಾದಿಯಲ್ಲಿ ಕೂತವರು ಅನ್ಯಾಯ ಎನಿಸಿದರೂ ನಡೆದುಕೊಳ್ಳಬೇಕಾಗುತ್ತದೆ. ಅತಿ ನಿಷ್ಠೂರವಾದಿಯಾಗಿ ಶ್ರೀರಾಮ ಚಂದ್ರನಂತೆಯೇ ಇದ್ದು ತೀರುತ್ತೇನೆ ಎಂದು ಈ ಕಲಿಯುಗದಲ್ಲಿ ನಡೆದುಕೊಂಡರೆ, ಖಂಡಿತ ಅಂಥ ವ್ಯಕ್ತಿ ಮುಂದೆ ಬರಲೂ ಆಗುವುದಿಲ್ಲ. ಬಂದರೂ ಏನೂ ಮಾಡಲಾಗುವುದಿಲ್ಲ. ಈಗಿನ ಕಾಲಮಾನಕ್ಕೆ ರಾಮನ ಗುಣಕ್ಕಿಂತಲೂ, ಶ್ರೀಕೃಷ್ಣನ ಲೀಲೆ ಅತ್ಯಂತ ಸೂಕ್ತ. ನಾಯಕನಾದವನು ಅದನ್ನು ಅರ್ಥ ಮಾಡಿಕೊಂಡು ಯಾರಿಗೆ ಯಾವ ರೀತಿ ನ್ಯಾಯ ಒದಗಿಸಬೇಕೆಂದು ವಿವೇಕದಿಂದ ನಿರ್ಧಾರಗಳನ್ನು ತೆಗೆದುಕೊಂಡರೆ, ಆಗ, ಎಲ್ಲ ವರ್ಗದ ಜನರೂ ಸಂತೃಪ್ತರಾಗಿ ಬದುಕುವುದರಲ್ಲಿ ಸಂದೇಹವಿಲ್ಲ. ಆದರೆ, ನೂರ ನಲವತ್ತು ಕೋಟಿ ಜನಸಂಖ್ಯೆಯ ಈ ಭರತಖಂಡದಲ್ಲಿ ಎಲ್ಲರನ್ನೂ ತೃಪ್ತಿಗೊಳಿಸುವಂತೆ ಆಡಳಿತ ನಡೆಸುವುದು ಅಷ್ಟು ಸುಲಭವಂತೂ ಅಲ್ಲವೇ ಅಲ್ಲ. ಏನೇ ಆಗಲಿ, ಮಧ್ಯವರ್ತಿಗಳು ಖಂಡಗದಷ್ಟು ಮೊಸರು ಕುಡಿದರೆ, ರೈತರಾಗಲಿ, ನಾಗರೀಕರಾಗಲೀ ಪಾತ್ರೆ ನೆಕ್ಕಿ ಸಮಾಧಾನ ಪಡಬೇಕು. ಹಾಗಿದೆ ಈಗಿನ ದಿನಗಳು. ಸರಕಾರ ಈ ವಿಚಾರದಲ್ಲಿ ಏನಾದರೂ ಪರಿಹಾರ ಹುಡುಕಿದರೆ ರೈತಾಪಿ ವರ್ಗದ ಶ್ರಮಕ್ಕೆ ಸಾರ್ಥಕತೆ ದೊರೆತಂತೆ!
ಒಂದೆರಡು ಸಾಲನ್ನು ಬರೆಯಲು ಅವಕಾಶ ಮಾಡಿಕೊಟ್ಟ ಗುರುಮಠಕ್ಕೆ ಸಾಷ್ಟಾಂಗ ವಂದನೆಗಳು.
ರೂಪ ಮಂಜುನಾಥ, ಹೊಳೆನರಸೀಪುರ.