N-2556 
  25-06-2024 02:36 PM   
ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!
ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು *ಡಾ||ಶಿವಮೂರ್ತಿ ಶಿವಾಚಾರ್ಯ* ಮಹಾಸ್ವಾಮಿಗಳವರ ಅಂಕಣ " *ಬಿಸಿಲು ಬೆಳದಿಂಗಳು* " ಸಂಚಿಕೆ " *ಮತ್ತೊಬ್ಬ ಶೇಷನ್ ಗಾಗಿ ದೇಶ ಕಾಯುತ್ತಿದೆ* "ರ ಬಗ್ಗೆ ಮನದಲ್ಲಿ ಮೂಡಿದ ಒಂದೆರಡು ಮಾತು.
ಈ ಬಾರಿಯ ಚುನಾವಣಾ ಪ್ರಕ್ರಿಯೆ ಮತ್ತು ರಾಜಕೀಯ ಪಕ್ಷಗಳು ರೀತಿ ನೀತಿ ಗಳನ್ನು ಗಾಳಿಗೆ ತೂರಿದ ನಡೆ ಮಹಾಗುರುಗಳು ಮಾಜಿ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ರವರನ್ನು ನೆನೆಯುವಂತೆ ಮಾಡಿರುವುದು ಸೂಕ್ತವಾಗಿಯೇ ಇದೆ. ಅವರು ಅಧಿಕಾರದಲ್ಲಿ ಇದ್ದಾಗ ಎಲ್ಲಾ ರಾಜಕೀಯ ಪಕ್ಷಗಳಿಗೆ ಸಿಂಹ ಸ್ವಪ್ನವಾಗಿದ್ದರು; ಅದರ ಛಾಯೆ ಈಗಲೂ ಕಾಣುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ಎಲ್ಲಿಯೂ ಯಾವ ಪಕ್ಷದ ಭಿತ್ತಿ ಪತ್ರವೂ ಕಾಣಲಿಲ್ಲ. ಅಷ್ಟೇ ಏಕೆ ಯಾವ ಯಾವ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆಂಬುದು ಸಹ ಮತದಾನದ ಯಂತ್ರ ನೋಡಿದಾಗಲೇ ತಿಳಿದದ್ದು.
ಆದರೂ ಮೊದಲಿಗಿಂತಲೂ ಈಗ ಶೇಷನ್ ರಂತಹ ವ್ಯಕ್ತಿಗಳ ಅವಶ್ಯಕತೆ ಹೆಚ್ಚಾಗಿದೆ.
ಎಗ್ಗಿಲ್ಲದೆ ಉಚಿತ ಆಶ್ವಾಸನೆಗಳನ್ನು ಮುದ್ರಿಸಿ ಹಂಚುವುದು, ಯಾವುದೋ ಒಂದು ಜನಾಂಗವನ್ನು ಮೆಚ್ಚಿಸಲು ದೇವರುಗಳನ್ನು ವಾಚಾಮಗೋಚರವಾಗಿ ನಿಂದಿಸುವುದು, ಕರ್ತವ್ಯನಿರತ ರಕ್ಷಣಾ ಮತ್ತು ಚುನಾವಣಾ ಸಿಬ್ಬಂದಿಯ ಮೇಲೆ ಹಲ್ಲೆಯ ಪ್ರಕರಣಗಳು, ದೊಂಬಿ ದೋಪಿಡಿಗಳು, ಪ್ರತಿಪಕ್ಷದ ಅಭ್ಯರ್ಥಿಗಳಿಗೆ ಜೀವ ಬೆದರಿಕೆ. ಮೊದಲಾದರೆ ಮತಪತ್ರಗಳನ್ನು ಕಸಿದು ತಮಗೆ ಬೇಕಾದವರಿಗೆ ಮತಚಲಾವಣೆ, ಮತಗಟ್ಟೆಗಳನ್ನೆ ಆಕ್ರಮಿಸಿ ಮತಗಳನ್ನು ಕದಿಯುವುದು, ಅಸ್ತಿತ್ವದಲ್ಲಿ ಇಲ್ಲದ ಮತ್ತು ಮರಣ ಹೊಂದಿದ ವ್ಯಕ್ತಿಗಳ ಹೆಸರಿನಲ್ಲಿ ಮತ ಚಲಾವಣೆ. ಇಂತಹ ನೀತಿಗೆಟ್ಟ ಆಚರಣೆಗಳು ಮೊದಲಿಗಿಂತಲೂ ಈಗ ಹೆಚ್ಚಾಗಿದೆ. ಅಷ್ಟೇ ಅಲ್ಲದೆ ಶಿಕ್ಷೆ ಅನುಭವಿಸುತ್ತಿರುವ ಉಗ್ರವಾದಿಗಳು ಮತ್ತು ಭಯೋತ್ಪಾದಕರು ಜೈಲಿನಿಂದಲೇ ಸ್ಪರ್ಧಿಸಿ ಘಟಾನುಘಟಿಗಳನ್ನು ಸೋಲಿಸಿ ಗೆದ್ದ ಉದಾಹರಣೆಗಳು ಈ ಭಾರಿಯ ಚುನಾವಣೆಯಲ್ಲಿ ಕಾಣಸಿಗುತ್ತವೆ. ಅಷ್ಟೇ ಅಲ್ಲದೆ ಭಾರತದ ಸಾರ್ವಭೌಮತ್ವವನ್ನು ಒಪ್ಪದ ಮನೋಸ್ಥಿತಿ ಹೊಂದಿದ ಪ್ರತ್ಯೇಕತವಾದಿಗಳು ಅವರು. ಅದಕ್ಕೆಲ್ಲಾ ಬಿಗಿಯಾದ ಕಾನೂನು ಬೇಕಾಗಿದೆ. ಅದರಲ್ಲಿನ ಲೋಪದೋಷಗಳನ್ನೆ ಬಂಡವಾಳ ಮಾಡಿಕೊಂಡ ನ್ಯಾಯವಾದಿಗಳು ಕಾನೂನಿನ ಕೆಳಗೆ ನುಸುಳುವ ಅವಕಾಶಗಳನ್ನು ಬಳಸಿ ಅದರ ಮೇಲೆ ಭಯ ಇಲ್ಲದಂತೆ ಮಾಡಿದ್ದಾರೆ. ಕಾನೂನೆಂದರೆ ಕೇವಲ ಪುಸ್ತಕಕ್ಕೆ ಸೀಮಿತ ಎಂಬಂತಾಗಿದೆ.
ಚುನಾವಣಾ ನಂತರವೂ ಅಷ್ಟೇ. ಗೆದ್ದಾಗ ವ್ವವಸ್ಥೆ ಮತ್ತು ಕಾನೂನಿನ ಮೇಲೆ ಎಂದೂ ಇಲ್ಲದ ನಂಬಿಕೆ ವಿಶ್ವಾಸ ಗೌರವ ತೋರಿಸುತ್ತಾರೆ. ಸೋತರೆ ಎಲ್ಲವೂ ತಪ್ಪು , ಸುಮ್ಮನೆ ಎಲಾಕ್ಟ್ರಾನಿಕ್ ಮತಯಂತ್ರಗಳನ್ನು ದೂಷಿಸುವುದು, ಹಳೆಯ ಮತಪತ್ರಗಳ ಚುನಾವಣೆಗೆ ಒತ್ತಾಯಿಸುವುದು. ಏಕೆಂದರೆ ಆ ವ್ಯವಸ್ಥೆಯಲ್ಲಿ ಮತವಂಚನೆ ಬಹಳ ಸುಲಭ. ಇವೆಲ್ಲಾ ಮಾಮೂಲಿ ರಾಗಗಳಾಗಿವೆ.
ಇಂತಹ ಸನ್ನಿವೇಶದಲ್ಲಿ ಎಲ್ಲಾ ಲೋಪದೋಷಗಳಿಗೆ ಮದ್ದು ಅರೆಯಬಲ್ಲ ಶೇಷನ್ ರಂತಹ ಚಾಣಾಕ್ಷ ಚುನಾವಣಾ ಆಯುಕ್ತರ ಅವಶ್ಯಕತೆ ಇದೆ. ಕಾನೂನಿನ ಬಿಗಿ ಮುಷ್ಟಿಯ ರುಚಿಯನ್ನು ಅಪರಾಧಿಗಳಿಗೆ ತೋರಿಸಬೇಕಾಗಿದೆ. ಕಳಂಕಿತರನ್ನು ಸ್ಪರ್ಧಿಸದಂತೆ ಮಾಡುವ ರೀತಿ ನೀತಿಗಳನ್ನು ರೂಪಿಸಬೇಕಾಗಿದೆ. ಎರಡೆರಡು ಕಡೆ ನಿಂತು ಎರಡರಲ್ಲಿಯೂ ಗೆದ್ದಾಗ ಒಂದು ಕ್ಷೇತ್ರವನ್ನು ತ್ಯಜಿಸುವ ವ್ಯವಸ್ಥೆಯನ್ನು ನಿಲ್ಲಿಸಬೇಕಾಗಿದೆ. ಇಲ್ಲದಿದ್ದರೆ ದೇಶಕ್ಕೆ ಮರು ಚುನಾವಣೆ ನಡೆಸುವ ಅನಿವಾರ್ಯತೆ ಉಂಟಾಗುತ್ತದೆ. ಒಂದು ದೇಶ ಒಂದು ಚುನಾವಣೆ ಜಾರಿಗೆ ತಂದರೆ ಪದೇ ಪದೇ ಒಂದಿಲ್ಲೊಂದು ಚುನಾವಣೆಗಳಿಗೆ ದೇಶವನ್ನು ಒಡ್ಡುವುದು ತಪ್ಪಿ ಅಭಿವೃದ್ಧಿಯ ವೇಗ ಹೆಚ್ಚಾಗುತ್ತದೆ.
ಕ್ಷಣಕ್ಷಣದ ವಿದ್ಯಮಾನಗಳನ್ನು ಗಮನಿಸಿ ನಮ್ಮನ್ನೆಲ್ಲ ಜಾಗೃತಗೊಳಿಸುತ್ತಿರುವ ಮಹಾಗುರುಗಳಿಗೆ ಪ್ರಣಾಮಗಳು.
ಪ್ರತಿಕ್ರಿಯಿಸಲು ಸೂಕ್ತ ಮಾರ್ಗದರ್ಶನ ನೀಡುತ್ತಿರುವ ರಾ.ವೆಂಕಟೇಶ ಶ್ರೇಷ್ಠಿ ಯವರಿಗೆ ಧನ್ಯವಾದಗಳು.
ನಾರಾಯಣ ದೊಂತಿ, ಚಿತ್ರದುರ್ಗ