N-2556 
  20-06-2024 08:38 AM   
ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ದೇಶ ಕಾಯುತ್ತಿದೆ….!
ಜಗದ್ಗುರುಗಳವರ "ಮತ್ತೊಬ್ಬ ಟಿ.ಎನ್. ಶೇಷನ್ ಗಾಗಿ ಭಾರತ ಕಾಯುತ್ತಿದೆ" ಅಂಕಣ ಕುರಿತು ನನ್ನ ಪ್ರತಿಕ್ರಿಯೆ:
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳಿಗೆ ವಿಶೇಷ ಸ್ಥಾನವಿದೆ. ದೇಶವನ್ನು ಆಳುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಇದೊಂದೇ ನಮ್ಮ ದೇಶದಲ್ಲಿ ಇರುವ ವ್ಯವಸ್ಥೆ. ನಮ್ಮಲ್ಲಿ ರಾಜಾಡಳಿತ ವ್ಯವಸ್ಥೆ ಅಳಿದು ಹೋಗಿ ದಶಕಗಳೇ ಕಳೆದು ಹೋಗಿವೆ. ಚುನಾವಣೆ ನಡೆಸುವ ವ್ಯವಸ್ಥೆ ಜಾರಿಗೆ ಬಂದಿದ್ದರೂ ಕೆಲವೇ ಕೆಲವು ವರ್ಷಗಳು ಮಾತ್ರ ವ್ಯವಸ್ಥಿತವಾಗಿ ಚುನಾವಣೆಗಳು ಈ ದೇಶದಲ್ಲಿ ನಡೆದವು. ನಂತರ ಚುನಾವಣೆಗಳ ದಿಕ್ಕೇ ಬದಲಾಗಿ ಹೋಯಿತು.
ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಯ ಚಾರಿತ್ರ್ಯ ಮತ್ತು ನೈತಿಕ ಬಲವನ್ನು ನೋಡದೆ ಅವನ ಹಣಬಲ ಮಾತ್ರ ನೋಡಿ ತಮ್ಮ ಪಕ್ಷದಿಂದ ಟಿಕೆಟ್ ಕೊಟ್ಟು ಸ್ಪರ್ಧಿಸುವಂತೆ ಮಾಡುವ ರಾಜಕೀಯ ಪಕ್ಷಗಳು ಇಂದಿನ ವ್ಯವಸ್ಥೆಯಲ್ಲಿವೆ. ತನ್ನ ಪಕ್ಷದ ಅಭ್ಯರ್ಥಿ ಕ್ರಿಮಿನಲ್ ಹಿನ್ನೆಲೆ ಉಳ್ಳವರಾಗಿದ್ದರೂ ಪರವಾಗಿಲ್ಲ ಅವನ ಬಳಿಯಲ್ಲಿ ಮತದಾರರಿಗೆ ಹಂಚಲು ಹಣವಿದ್ದರೆ ಸಾಕು, ಅವನು ಗೆದ್ದು ಬರುತ್ತಾನೆ ಎಂಬ ಸಣ್ಣ ನಂಬಿಕೆ ಹುಟ್ಟಿದರೂ ಅವನಿಗೆ ಟಿಕೆಟ್ ಸಿಗುವುದು ಖಚಿತ.
ಕಳೆದ ಬಾರಿಯ ವಿಧಾನಸಭಾ ಚುನಾವಣೆ ಸಮಯ. ಎಂದಿನಂತೆ ಸಂಜೆ ವಾಕ್ ಮಾಡುತ್ತಿದ್ದೆ. ಕತ್ತಲು ಮೆಲ್ಲನೆ ಆವರಿಸಿತ್ತು. ಪಾರ್ಕಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಬಂದ ಮೂರು ಜನರು `ನಮಸ್ಕಾರ ಸರ್` ಎಂದರು. ಅವರ ಕೈಯಲ್ಲಿ ಒಂದಷ್ಟು ಪೇಪರ್ ಕಂಡವು. ಇವರು ಚುನಾವಣೆಗೆ ಸಂಬಂಧಪಟ್ಟವರು ಎಂದು ತಕ್ಷಣವೇ ಗ್ರಹಿಸಿದೆ. "ನಮಸ್ಕಾರ, ಹೇಳಿ ಸರ್ ಏನು ವಿಷಯ?" ಎಂದೆ. "ನಾನು ವಕೀಲ ಕುಮಾರ್. ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ದಯವಿಟ್ಟು ತಮ್ಮ ಮತವನ್ನು ನನಗೆ ನೀಡಿ" ಎಂದು ಮತ ಯಾಚಿಸಿದರು. "ಆಯ್ತು ಸರ್" ಅಂತಾ ಹೇಳಿದ ಮೇಲೆ ಸ್ವಲ್ಪ ಹೊತ್ತು ಅವರೊಂದಿಗೆ ಮಾತುಕತೆ ಮುಂದುವರಿಸಿದೆ. "ಅಲ್ಲ ಸರ್ ಹಣದ ರುದ್ರ ನರ್ತನ ನಡೆಯುವ ಈ ಚುನಾವಣೆಯಲ್ಲಿ ನೀವೇಕೆ ಸ್ಪರ್ಧೆ ಮಾಡಿ ಸಮಯ ಹಣ ಎರಡನ್ನೂ ಕಳೆದುಕೊಳ್ಳುತ್ತೀರಾ?" ಎಂದೆ. "ಸರ್ ಹಣವಿದ್ದರೆ ಮಾತ್ರ ಚುನಾವಣೆಗೆ ಸ್ಪರ್ಧೆ ಮಾಡಬೇಕೇ. ಹಣ ಇಲ್ಲದಿದ್ದರೆ ಸುಮ್ಮನೆ ಇರಬೇಕೇ. ಎಲ್ಲರೂ ಸುಮ್ಮನೆ ಕುಳಿತರೆ ವ್ಯವಸ್ಥೆಯಲ್ಲಿ ಬದಲಾವಣೆ ತರುವವರು ಯಾರು?" ಎಂದರು. "ಏನೋ ಸರ್ ನಿಮಗೆ ಒಳ್ಳೆಯದಾಗಲಿ" ಎಂದು ನಾನು ಅಲ್ಲಿಂದ ಹೊರಟೆ, ಅವರು ಸಹ ಹೊರಟು ಹೋದರು. ಅವರು ಮಾತನಾಡುವಾಗ ವ್ಯವಸ್ಥೆಯ ಬಗ್ಗೆ ಅವರಿಗಿರುವ ಅಸಮಾಧಾನ ಎದ್ದು ಕಾಣುತಿತ್ತು. ಆದರೆ ಅವರಿಗೆ ಅದನ್ನು ಬದಲಿಸುವ ಶಕ್ತಿ ಇರಲಿಲ್ಲ. ಉತ್ತಮ ಆಲೋಚನೆ ಇರುವವನಿಗೆ ಅವಕಾಶವಿಲ್ಲ. ಇದು ಎಲ್ಲಾ ಕ್ಷೇತ್ರಗಳಲ್ಲಿ ಆವರಿಸಿರುವ ಕೆಟ್ಟ ಪರಿಸ್ಥಿತಿ.
ಸದ್ಯದ ಚುನಾವಣಾ ವ್ಯವಸ್ಥೆ ಸರಿ ಹೋಗಲೇ ಬೇಕು ಎನ್ನುವುದಾದರೆ ಚುನಾವಣೆಗಳಲ್ಲಿ ಹರಿಸುವ ಹಣಕ್ಕೆ ಕಡಿವಾಣ ಹಾಕಬೇಕು. ಇದಂತೂ ಅಸಾಧ್ಯದ ಮಾತು. ಚುನಾವಣೆ ಬಂತೆಂದರೆ ಅಭ್ಯರ್ಥಿಯ ಆಪ್ತರ ಮನೆಗಳೇ ರಿಸರ್ವ್ ಬ್ಯಾಂಕಿನ ನಗದು ವಿಭಾಗದಂತೆ (Cash vault) ಕಾಣಿಸುತ್ತವೆ. ಚುನಾವಣೆಯ ಹಿಂದಿನ ಕೆಲವೇ ದಿನಗಳಲ್ಲಿ ರಾತ್ರಿ ಹೊತ್ತಿನಲ್ಲಿ ಅವರ ಮನೆಗಳಿಂದ ವ್ಯವಸ್ಥಿತವಾಗಿ ಒಂದೊಂದು ಬೂತಿಗೆ ಇಷ್ಟಿಷ್ಟು ಹಣ ಎಂದು ವಿಲೇವಾರಿ ಆಗುತ್ತದೆ. ಅದನ್ನು ನಾಜೂಕಾಗಿ ಮತದಾರರಿಗೆ ತಲುಪಿಸುವ ಜವಾಬ್ದಾರಿ ಆ ಬೂತಿನ ಪ್ರಮುಖನದ್ಧು. ಇಲ್ಲಿ ಹಣ ಪ್ರವಾಹದಂತೆ ಹರಿಯುವುದಿಲ್ಲ. ಅದರ ಬದಲು ಕವಲಾಗಿ ಚಿಕ್ಕ ಚಿಕ್ಕ ಮೊತ್ತಗಳಲ್ಲಿ ಅಧಿಕಾರಿಗಳ ಕಣ್ಣಿಗೆ ಕಾಣದಂತೆ ಲೆಕ್ಕಕ್ಕೆ ಸಿಗದಂತೆ ಹರಿದು ಹೋಗುತ್ತದೆ. ಇದನ್ನು ತಡೆಯಲು ಸಾಧ್ಯವೇ ಇಲ್ಲ. ಎಂತಹ ಚುನಾವಣಾ ಸುಧಾರಣೆ ತಂದರೂ ಸಹ ಹಣದ ಹರಿವನ್ನು ತಗ್ಗಿಸಲು ಸಾಧ್ಯವೇ ಇಲ್ಲ. ಒಂದು ಎಂಎಲ್ಎ ಚುನಾವಣೆಗೆ ಇತ್ತೀಚೆಗೆ 50 ಕೋಟಿ ಹಣ ಖರ್ಚಾಗುತ್ತದೆ ಎಂದು ನನ್ನ ಪರಮಾಪ್ತ ಶಾಸಕರೊಬ್ಬರು ತುಂಬಾ ಬೇಸರದಿಂದ ಹೇಳಿದ ಮಾತು ನೆನಪಾಗುತ್ತಿದೆ. ಹಾಗೆಯೇ ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಒಂದು ಪಕ್ಷದ ಅಭ್ಯರ್ಥಿಯ ಪರವಾಗಿ ಸುಮಾರು 150 ಕೋಟಿ ರೂಪಾಯಿ ಹಣ ಹೊಳೆಯು ಹರಿದಿದೆ ಎಂದು ಆ ಪಕ್ಷದ ಪ್ರಮುಖ ನಾಯಕರೊಬ್ಬರು ಹೇಳಿದ್ದು ಕೇಳಿಸಿಕೊಂಡು ದಿಗ್ಭ್ರಮೆ ಆಯಿತು. ಇತ್ತೀಚೆಗಂತೂ ಗ್ರಾಮಪಂಚಾಯಿತಿ ಚುನಾವಣೆ ಅಂದರೂ ಕನಿಷ್ಟ 5 ಲಕ್ಷ ರೂಪಾಯಿ ಖರ್ಚಾಗುತ್ತವೆ ಅಂತಾ ಮುಂದಿನ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತ ಹೊಂದಿರುವ ನನ್ನ ಗೆಳೆಯನೊಬ್ಬ ಬೇಸರದಿಂದ ಹೇಳಿದ. ಇದನ್ನೆಲ್ಲಾ ನೋಡುತ್ತಿದ್ದರೆ ಪ್ರಜಾಪ್ರಭುತ್ವ ಸಂಪೂರ್ಣ ಹಣಬಲದ ಮೇಲೆ ನಿಂತಿದೆ ಎಂದರೆ ತಪ್ಪಾಗುವುದಿಲ್ಲ.
ಚುನಾವಣೆಗಳಲ್ಲಿ ಪಾರದರ್ಶಕತೆ ತರಲು ಪ್ರಯತ್ನ ಮಾಡುತ್ತಿರುವ ಚುನಾವಣಾ ಆಯೋಗದ ಬಗ್ಗೆಯೇ ಅಸಮಾಧಾನ ಹೊರಹಾಕುವ ರಾಜಕೀಯ ಪ್ರಮುಖರು ಇರುವ ಈ ಕಾಲದಲ್ಲಿ ಎಂತಹ ಪ್ರಾಮಾಣಿಕ ಮತ್ತು ನಿರ್ಭೀತ ವ್ಯಕ್ತಿಯೇ ಆಯೋಗದ ಜವಾಬ್ದಾರಿ ವಹಿಸಿಕೊಂಡರೂ ಸುಧಾರಣೆ ತರುವುದು ತುಂಬಾ ಕಷ್ಟ.
ಬ್ಯಾಲೆಟ್ ಪೇಪರ್ ಬಳಸಿ ನಡೆಯುತ್ತಿದ್ದ ಚುನಾವಣೆಗಳಲ್ಲಿ ಅಕ್ರಮ ಹೆಚ್ಚಾಗುತ್ತಿದೆ ಎಂದು ಹೇಳಿ ವಿದ್ಯುನ್ಮಾನ ಮತಯಂತ್ರಗಳ ಬಳಕೆಯನ್ನು ಜಾರಿಗೆ ತರಲಾಯಿತು. ಆದರೆ ಈಗ ಈ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆಯೇ ಅನುಮಾನ ಇದೆ ಎಂದು ದೂರುವ ವ್ಯವಸ್ಥೆ ಹುಟ್ಟಿಕೊಂಡಿದೆ. ಒಂದೊಮ್ಮೆ ಮತ್ತೆ ಬ್ಯಾಲೆಟ್ ಪೇಪರ್ ಚುನಾವಣೆ ಬಂತೆಂದರೆ ಕತೆ ಮುಗಿಯಿತು. ಕೇವಲ ಹಣವಿದ್ದರೆ ಟಿಕೆಟ್ ಸಿಗುವುದಿಲ್ಲ, ಜೊತೆಗೆ ಆ ಅಭ್ಯರ್ಥಿಯ ಸುತ್ತಲೂ ದೌರ್ಜನ್ಯ ಮಾಡುವ ಪುಂಡರ ಗುಂಪು ಇರಬೇಕು ಎಂದು ಪಕ್ಷಗಳು ನೋಡಲು ಆರಂಭಿಸುತ್ತವೆ. ಮತಗಟ್ಟೆಗಳಲ್ಲಿ ದೌರ್ಜನ್ಯ ಮಾಡಿ ಯಾರಿಗೆ ಮತ ಹಾಕುತ್ತೇವೆ ಎಂದು ಬ್ಯಾಲೆಟ್ ಪೇಪರ್ ತೋರಿಸಿ ಮತ ಹಾಕಬೇಕಾಗುತ್ತದೆ. ಇದು ಪ್ರಜಾಪ್ರಭುತ್ವವನ್ನು ಇನ್ನೂ ಶೋಚನೀಯ ಸ್ಥಿತಿಗೆ ತಳ್ಳುತ್ತದೆ.
ಚುನಾವಣೆಗಳಲ್ಲಿ ಅಭ್ಯರ್ಥಿ ಎಷ್ಟೇ ಹಣದ ಹೊಳೆ ಹರಿಸಿದರೂ ಸಹ ಅದಕ್ಕೆಲ್ಲಾ ಸೊಪ್ಪು ಹಾಕದೆ ತಮ್ಮ ಮತವನ್ನು ಮಾರಿಕೊಳ್ಳದೆ ಸ್ವಇಚ್ಛೆಯಿಂದ ಮತ ಹಾಕುವ ಮತದಾರರ ಸಂಖ್ಯೆ ಹೆಚ್ಚಾದರೆ ಸುಧಾರಣೆಗಳು ತಂತಾನೇ ಆಗುತ್ತವೆ. ಮತವನ್ನು ಮಾರಿಕೊಂಡು ಅಭ್ಯರ್ಥಿಯ ಋಣಕ್ಕೆ ಸಿಲುಕಿ ಭ್ರಷ್ಟ ವ್ಯವಸ್ಥೆಗೆ ಮಣೆ ಹಾಕಿದರೆ ಅಭ್ಯರ್ಥಿಗಿಂತ ಮತದಾರರೇ ಹೆಚ್ಚು ಭ್ರಷ್ಟರಾಗುತ್ತಾರೆ. ವ್ಯವಸ್ಥೆಯನ್ನು ಸುಧಾರಿಸುವ ಶಕ್ತಿ ಈಗಿನ ದಿನಗಳಲ್ಲಿ ಚುನಾವಣಾ ಆಯೋಗಕ್ಕೆ ಇಲ್ಲ. ಆದರೆ ಅಂತಹ ಶಕ್ತಿ ಮತದಾರನಿಗೆ ಇದೆ. ಒಬ್ಬೊಬ್ಬ ಮತದಾರನೂ ಎಚ್ಚೆತ್ತುಕೊಂಡರೆ ಮತ್ತೊಬ್ಬ ಟಿ.ಎನ್. ಶೇಷನ್ ತಾನಾಗಿಯೇ ಹುಟ್ಟಿ ಬಂದಂತೆ. ಪ್ರತಿಯೊಬ್ಬ ಮತದಾರನು ಮತ ಚಲಾಯಿಸುವ ಸಮಯದಲ್ಲಿ ಭ್ರಷ್ಟ ವ್ಯವಸ್ಥೆಗೆ ಸೆಡ್ಡು ಹೊಡೆದು ಮತ ಚಲಾಯಿಸಿದರೆ ಸಾಕು. ವ್ಯವಸ್ಥೆ ತಾನಾಗಿಯೇ ಸುಧಾರಣೆ ಆಗುತ್ತದೆ. ಇದೇ ಟಿ.ಎನ್. ಶೇಷನ್ ಅವರ ಕನಸಾಗಿತ್ತು. ಅದನ್ನು ನನಸು ಮಾಡಲು ನಾಗರೀಕ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ.
ಎಲ್ಲೆಲ್ಲಿ ಭ್ರಷ್ಟ ವ್ಯವಸ್ಥೆ ಇದೆಯೋ ಅಲ್ಲೆಲ್ಲಾ ಆ ವ್ಯವಸ್ಥೆಯಲ್ಲಿ ಬದುಕಿರುವ ಜನರೇ ಬದಲಾವಣೆಗೆ ನಾಂದಿ ಹಾಡಬೇಕು. ಅಂಜದೆ ಅಳುಕದೆ ನಿರ್ಭೀತವಾಗಿ ವ್ಯವಸ್ಥೆಗಳನ್ನು ಬದಲಿಸುವ ಮನಸ್ಸು ಮಾಡಬೇಕು. ನಾವು ಬದಲಾದರೆ ವ್ಯವಸ್ಥೆಗಳನ್ನು ಸುಲಭವಾಗಿ ಬದಲಾಯಿಸಬಹುದು. ಆದರೆ ಬೆಕ್ಕಿಗೆ ಗಂಟೆ ಕಟ್ಟಬೇಕಾದ ನಾವೇ ಗಂಟೆ ಕಟ್ಟುವವರು ಯಾರು ಎಂದು ಬುದ್ದಿವಂತಿಕೆಯಿಂದ ಪ್ರಶ್ನೆ ಮಾಡಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತೇವೆ. ಮೊದಲು ನಾವು ಬದಲಾಗಬೇಕಿದೆ. ನಾವು ಬದಲಾದರೆ ಟಿ.ಎನ್.ಶೇಷನ್ ಅವರು ಮತ್ತೆ ಹುಟ್ಟಿಬಂದಂತೆ.
ಹಣವನ್ನು ಕೊಟ್ಟು ಮತ ಕೊಂಡುಕೊಳ್ಳುವ ಅಭ್ಯರ್ಥಿ ಭ್ರಷ್ಟನಾದರೆ, ಹಣಕ್ಕಾಗಿ ಸೀರೆಗಾಗಿ ಕುಕ್ಕರ್ ಗಾಗಿ ವಾಚಿಗಾಗಿ ಮದ್ಯಕ್ಕಾಗಿ ಮತ ಮಾರಿಕೊಳ್ಳುವ ಜನರು ಕಡುಭ್ರಷ್ಟರು. ಇಬ್ಬರೂ ಪಾಪಿಗಳು. "ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ" ಎಂಬ ಸಾಂಸ್ಕೃತಿಕ ನಾಯಕ ಭಕ್ತಿ ಭಂಡಾರಿ ಬಸವಣ್ಣನವರ ಮಾತು ನೆನಪಾಗುತ್ತಿದೆ. ಮತವನ್ನು ಮಾರಿಕೊಂಡು ಹಣ ಪಡೆಯುವ ಮತದಾರರು ಆ ಹಣ ಯಾವುದಕ್ಕೆ ಸಲ್ಲುತ್ತದೆ ಎಂದು ಮೊದಲು ಯೋಚಿಸಬೇಕು.
2018 ರಲ್ಲಿ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದೆ. ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣದಲ್ಲಿ ಮಹಿಳೆಯರ ಪಾತ್ರ ಕುರಿತು ಆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುವಾಗ ಒಂದೆರಡು ತಿಂಗಳ ಹಿಂದೆ ನಡೆದಿದ್ದ ವಿಧಾನಸಭಾ ಚುನಾವಣೆ ಕುರಿತು ಉಲ್ಲೇಖಿಸಿದೆ. ಮೊನ್ನೆಯಷ್ಟೇ ಚುನಾವಣೆ ಮುಗಿದಿದೆ. ಹಣಕ್ಕಾಗಿ ಅನೇಕ ಜನರು ಮತಗಳನ್ನು ಮರೆಸಿಕೊಂಡಿದ್ದಾರೆ. ಹಣಕ್ಕಾಗಿ ಮತ ಹಾಕದೇ ಸಾಮಾಜಿಕ ಬದಲಾವಣೆ ತರಲು ಮಹಿಳೆಯರು ಮುಂದೆ ಬರಬೇಕು ಎಂದು ಹೇಳಿದೆ. ದಿಢೀರನೆ ಮೂರ್ನಾಲ್ಕು ಜನ ಮಹಿಳೆಯರು ಎದ್ದು ನಿಂತು "ಸರ್ ನಾವು ಚುನಾವಣೆಯ ಹಿಂದಿನ ರಾತ್ರಿ ಹಣ ಕೊಡಲು ಮನೆಗೆ ಬಂದವರಿಗೆ ಛೀಮಾರಿ ಹಾಕಿ ಓಡಿಸಿದ್ದೆವು. ಬೆಳಿಗ್ಗೆ ಎದ್ದು ನೋಡಿದರೆ 500 ರೂಪಾಯಿಯ ನೋಟುಗಳನ್ನು ಬಾಗಿಲುಗಳ ಸಂದಿಯಲ್ಲಿ ಸಿಕ್ಕಿಸಿ ಹೋಗಿದ್ದರು. ಅದನ್ನು ನೋಡಿ ಎತ್ತಿಕೊಂಡು ಹೋಗಿ ಎಲ್ಲರೂ ನಮ್ಮೂರಿನ ಆಂಜನೇಯ ದೇವಸ್ಥಾನದ ದೇವರ ಹುಂಡಿಗೆ ಹಾಕಿದೆವು. ನಾವು ಬದಲಾಗಿದ್ದೇವೆ ಸರ್ " ಎಂದು ಹೆಮ್ಮೆಯಿಂದ ಹೇಳಿಕೊಂಡರು. ನನ್ನ ಮೈಯಲ್ಲಿ ಮಿಂಚಿನ ಸಂಚಾರ ಆದಂತಾಯಿತು. ಇಂತಹ ತಾಯಂದಿರ ಸಂತತಿ ವೃದ್ಧಿಸಲಿ ಎಂದು ಮನಸಾರೆ ಆಶಿಸುತ್ತೇನೆ.
ಮನಸ್ಸನ್ನು ಜಾಗೃತಗೊಳಿಸಿ ಯೋಚನೆಗೆ ಹಚ್ಚುವ ಮತ್ತೊಂದು ಶಕ್ತಿಶಾಲಿ ಸಂದೇಶ ಇರುವ ಅಂಕಣವನ್ನು ಕರುಣಿಸಿದ ಜಗದ್ಗುರುಗಳಿಗೆ ಭಕ್ತಿಪೂರ್ವಕ ನಮಸ್ಕಾರಗಳು. ಅಂಕಣಕ್ಕೆ ಪ್ರತಿಕ್ರಿಯೆ ಬರೆಯಲು ಪ್ರೇರಣೆ ನೀಡಿ ಅದಕ್ಕಾಗಿ ವೇದಿಕೆ ಕಲ್ಪಿಸಿರುವ ನನ್ನ ವಿದ್ಯಾ ಗುರುಗಳಾದ ಶ್ರೀ ಆರ್. ವೆಂಕಟೇಶ್ ಶೆಟ್ಟಿ ಸರ್ ಅವರಿಗೂ ಶರಣಾರ್ಥಿಗಳು.
ಪ್ರಸನ್ನ ಯು.
ಸನ್ನದು ಆರ್ಥಿಕ ಗುರಿಯೋಜಕರು.
ಪ್ರಸನ್ನ ಯು, ಸನ್ನದು ಆರ್ಥಿಕ ಗುರಿಯೋಜಕರು
ಸಿರಿಗೆರೆ